ಸಾವಿರಾರು ವರ್ಷಗಳ ಸುಧೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗಯೇ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನು ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿದೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೂ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೋಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸತ್ವ ದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಡನೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯಾಗಿ ಬೆಳೆಯಲು ಸಾಧಕವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಾಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವ್ಯೆಶಿಷ್ಯ್ಟಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಕಮ್ಮಟದುರ್ಗದ ಮಹಾವೀರ ಕುಮಾರರಾಮನನ್ನು ಕುರಿತ ಸಾಹಿತ್ಯ ಕನ್ನಡದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಲಭ್ಯವಾಗಿದೆ. ಪ್ರಮಾಣದಲ್ಲಿ ಅಷ್ಟೇನೂ ದೊಡ್ಡದಲ್ಲದ ಕಂಪಿಲ ರಾಜ್ಯದ ಕುಮಾರರಾಮನ ಚರಿತ್ರೆ ಮಾತ್ರ ಅವನು ಹುಟ್ಟಿದ ಕಾಲದಿಂದ ಇಂದಿನವರೆಗೂ ಶಿಷ್ಟ ಮತ್ತು ಜನಪದ ಕವಿಗಳ ಸ್ಮೃತಿಯಲ್ಲಿ ಹಾಗೂ ಲೇಖನಿಯಲ್ಲಿ ಬೆಳೆಯುತ್ತಲೇ ಬಂದಿರುವುದು ವಿಚಾರಯೋಗ್ಯವಾಗಿದೆ. ಕುಮ್ಮಟದುರ್ಗದ ಆಸು ಪಾಸಿನಲ್ಲೇ ಬಾಳಿದ ವಿಜಯನಗರ ಅದರ ಹಿಂದಿನ ಶತಮಾನಗಳ ಕದಂಬ, ಹೊಯ್ಸಳ, ಚಾಲುಕ್ಯ ಚಕ್ರವರ್ತಿಗಳಿಗೆ ದೊರಕದ ಆದರ, ಗೌರವ ಮತ್ತು ಪ್ರೀತಿಗಳು ಜನಸಾಮಾನ್ಯರಿಂದ ಕುಮಾರರಾಮನಿಗೆ ದೊರೆತಿರುವುದು ಆತನ ಸಂಕ್ಷಿಪ್ತ ಜೀವನಾವಧಿಯಲ್ಲಿ ಅವನು ಸಾಧಿಸಿದ ಅಪಾರ ಹಿರಿಮೆಯ ದ್ಯೋತಕವಾಗಿರುವುದು ಮಾತ್ರವಲ್ಲದೆ ಅವನ ಪರನಾರಿ ಸೋದರತ್ವ ಅವನಿಗೆ ಗಳಿಸಿಕೊಟ್ಟ ನೈತಿಕ ಸ್ಥಾನ ಮಹಿಮೆ ಇದಕ್ಕೆ ಕಾರಣವಾಗಿರಬಹುದು.

ಕುಮಾರರಾಮನ ವೀರ ಸಾಹಸಗಳು ಶಿಷ್ಟ ಮತ್ತು ಗ್ರಾಮೀಣ ಮನಸ್ಸಿನ ಕವಿಗಳ ಅಂತರಂಗವನ್ನು ತೀವ್ರವಾಗಿ ಪ್ರಭಾವಿಸಿದ್ದು, ಅವನೊಬ್ಬ ದಂತಕಥೆಯ ಸೃಷ್ಟಿಯಂತೆ ಕನ್ನಡ ನಾಡಿನ ಪರಂಪರೆಯಲ್ಲಿ ಹಬ್ಬಿಕೊಂಡಿರುವುದು ವಿಶೇಷ ಅಧ್ಯಯನಕ್ಕೆ ಅರ್ಹವಾದ ಸಂಗತಿಯಾಗಿದೆ. ಪಾಂಚಾಳ ಗಂಗ, ಮಹಾಲಿಂಗ ಸ್ವಾಮಿ ಮತ್ತು ಇಬ್ಬರು ಅನಾಮದೇಯ ಕವಿಗಳಲ್ಲದೆ ಸಾಹಿತ್ಯ ಚರಿತ್ರೆಯಲ್ಲಿ ಪ್ರಸಿದ್ದವಾದ ನಂಜುಂಡ ಕವಿ ಕೂಡ ವೀರನ ಹೃದಯಸ್ಪರ್ಶಿಯಾದ ಜೀವನ ಕಥನವನ್ನು ತನ್ನ ಶ್ರೇಷ್ಟ ಕಾವ್ಯದ ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ. ಈ ಕಾವ್ಯಗಳಲ್ಲದೆ ಜನಪದರ ನಾಲಗೆಯಲ್ಲಿ ಹತ್ತಾರು ವಿಭಿನ್ನ ಮುಖಗಳ ನೀಳ ಹಾಡುಗಳು ಮೂಡಿಬಂದು ಕುಮಾರರಾಮ ಕನ್ನಡಿಗರ ಪಾಲಿಗೆ ಮರೆಯಲಾಗದ ಮಹಾಸಂಸ್ಕೃತಿಕ ವೀರನಾಗಿ ಪರಿಗಣಿತವಾಗಿದ್ದಾನೆ. ಪ್ರೊ.ಜಿ.ವರದರಾಜರಾವ್ ಅವರು ಕುಮಾರರಾಮನ ಸಾಂಗತ್ಯಗಳ ಮೇಲೆ ತಲಸ್ಪರ್ಶಿಯಾದ ಸಂಶೋಧನೆಯನ್ನು ನಡೆಸಿ ಒಂದು ಮಹಾಪ್ರಬಂಧವನ್ನೇ ಪ್ರಕಟಿಸಿದ್ದಾರೆ. ಮತ್ತೆ ಮತ್ತೆ ಕುಮಾರರಾಮನನ್ನು ಕುರಿತ ಹೊಸ ಹೊಸ ಆಕರ ಶೋಧ ಆಗುತ್ತಲೇ ಇದೆ. ಪ್ರಸ್ತುತ ಕೃತಿ “ಕೊಮಾರ ರಾಮಯ್ಯನ ಚರಿತ್ರೆ” ಈ ನೆಲೆಯಲ್ಲಿ ಮತ್ತೊಂದು ವಿಶಿಷ್ಟ ಕೃತಿಯಾಗಿ ಮೂಡಿಬಂದಿದೆ.

ನಮ್ಮ ಪ್ರಸಿದ್ದ ಸಂಶೋಧಕರಲ್ಲಿ ಒಬ್ಬರೂ, ಕನ್ನಡ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳೂ ಆದ ಡಾ.ಎಂ.ಎಂ.ಕಲಬುರ್ಗಿ ಅವರು ತಮಗೆ ದೊರೆತ ಹೊಸ ಹಸ್ತಪ್ರತಿಯ ಆಧಾರದ ಮೇಲೆ ಪ್ರಸ್ತುತ ಕೃತಿಯನ್ನು ಸಂಪಾದಿಸಿದ್ದಾರೆ. ೫೬ ಪುಟಗಳ ಸುದೀರ್ಘ ಪ್ರಸ್ತಾವನೆಯನ್ನು ಬರೆಯುವ ಮೂಲಕ ಈ ಕೃತಿಯ ಕಥಾ ವಿನ್ಯಾಸ, ಅದರ ರಾಜಕೀಯ, ಜಾನಪದೀಯ ಮತ್ತು ಸಾಂಸ್ಕೃತಿಕ ಮಗ್ಗುಲುಗಳ ವೈಶಿಷ್ಟ್ಯಗಳನ್ನು ತೆರೆದಿಟ್ಟಿದ್ದಾರೆ. ಈ ಹಿಂದೆ ಪ್ರಕಟವಾಗಿರುವ ಮತ್ತು ದೊರೆತ ಕುಮಾರರಾಮನನ್ನು ಕುರಿತ ಕೃತಿಗಳ ಸಮೀಕ್ಷೆಯೊಂದಿಗೆ ಈ ಹೊಸ ಸಂಪುಟ ತೆರೆದಿಡುವ ವಿನೂತನ ಅಂಶಗಳ ಬಗೆಗೆ ಬೆಳಕು ತೋರಿದ್ದಾರೆ. ಈ ಕೃತಿಯಲ್ಲಿ ಹಿಂದಿನ ಕೃತಿಗಳಲ್ಲಿ ದೊರೆಯದ ಎಷ್ಟೋ ಹೊಸ ಪ್ರಸಂಗಗಳು, ಪಾತ್ರಗಳು ವಿಶಿಷ್ಟವಾಗಿ ದೊರೆಯುವುದನ್ನು ಗುರುತಿಸಿದ್ದಾರೆ. ಯುದ್ಧ, ಕೌಟುಂಬಿಕ ಸಂಬಂಧ, ಆ ಕಾಲದ ಸಾಂಸ್ಕೃತಿಕ ಪರಿಸರ, ವ್ಯಕ್ತಿಗಳ ಮನೋಧರ್ಮ ಮತ್ತು ಕುಮಾರರಾಮನ ಜೀವನದಲ್ಲಿ ಕಾಡಿರುವ ಹೆಣ್ಣುಗಳ ಸೂಕ್ಷ್ಮ ಸ್ವರೂಪ ಮತ್ತು ಅದರಿಂದ ಎದ್ದು ನಿಲ್ಲುವ ಕುಮಾರರಾಮನ ವ್ಯಕ್ತಿಚಿತ್ರದ ಹಿರಿಮೆಯನ್ನು ತಮ್ಮ ಗಂಭೀರ ಪ್ರಸನ್ನ ಶೈಲಿಯಲ್ಲಿ ಇಲ್ಲಿ ಹಿಡಿದಿಟ್ಟಿದ್ದಾರೆ. ಈ ಕೃತಿಯ ಮೂಲಕ ಕುಮಾರರಾಮನ ಕಥೆಯ ಅಂತರ್ ದ್ರವ್ಯ, ಹರಹು ಮತ್ತು ಸಾಹಿತ್ಯ ಮೌಲ್ಯಗಳನ್ನು ತೌಲನಿಕವಾಗಿ ಅಧ್ಯಯನ ಮಾಡಲು ವಿದ್ವಾಂಸರಿಗೆ ಮತ್ತೊಂದು ಆಕರವನ್ನು ದೊರಕಿಸಿಕೊಟ್ಟಿದ್ದಾರೆ. ಡಾ.ಕಲಬುರ್ಗಿ ಅವರ ಈ ಕೃತಿಸಂಪಾದನೆ, ಹಳಗನ್ನಡ ನಡುಗನ್ನಡ ಕೃತಿಗಳನ್ನು ಸಂಪಾದನೆ ಮಾಡುವ ವಿದ್ವದ್ ಜನರಿಗೆ ಒಂದು ಮಾದರಿಯನ್ನು ಒದಗಿಸಿಕೊಟ್ಟಿದೆ. ಇಂತಹ ವಿದ್ವತ್ ಸಾಹಸಕ್ಕಾಗಿ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತೇನೆ.

ಡಾ. ಎಚ್.ಜೆ.ಲಕ್ಕಪ್ಪಗೌಡ
ಕುಲಪತಿಗಳು