ಸಂಧಿ: ೧

ಶಿವ, ಪಾರ್ವತಿ, ವೀರಭದ್ರ, ಕೃಷ್ಣ – ಇವರಿಗೆ ಶರಣು ಸಮರ್ಪಿಸಿ, ಈ ಕಥೆಯನ್ನು ಆರಂಭಿಸುತ್ತೇವೆ.

ಅರ್ಜುನನು ಕರ್ನಾಟಕದಲ್ಲಿ ಹುಟ್ಟಿ, ಪರನಾರೀ ಸಹೋದರನಾಗಿ ಮೆರೆದ ಕಥೆಯನ್ನು ವಿವರಿಸುತ್ತೇನೆ. ಈ ಹಿಂದೆ (ಐತಿಹಾಸಿಕ) ಆಧಾರಗಳನ್ನು ಆಧರಿಸಿ ಗಂಗಯ್ಯನೆಂಬುವನು ಈ ಕಥೆಯನ್ನು ಹೇಳಿದನು. ಆತನಿಗೆ ವಿನೀತನಾಗಿ, ಕುಮಾರರಾಮನನ್ನು ಅರ್ಜುನನೊಂದಿಗೆ ಸಮೀಕರಿಸಿ, ನಾನು ಮತ್ತೆ ಆ ಕಥೆಯನ್ನು ಈಗ ವಿವರಿಸುತ್ತೇನೆ.

ಪೂವಲಿ ಮನೆತನದ ಮುಮ್ಮಡಿ ಸಿಂಗನು ಕಂಪಣವೊಂದಕ್ಕೆ ಅರಸನಾಗಿದ್ದನು. ಇವನ ಹೆಂಡತಿ ಮಂಚಕ್ಕ. ಈಕೆ ಮನೆದೈವ ಕಂಪಿಲದೇವರಿಗೆ ಪುತ್ರಭಿಕ್ಷೆ ಬೇಡಿದಳು. ಬಿಲ್ಲ ಮೇಲಿನ ಪುಷ್ಪವನ್ನು ವರವಾಗಿ ಪಡೆದು, ಮಗನನ್ನು ಹಡೆದು, ಕಂಪಿಲರಾಯನೆಂದು ಹೆಸರಿಟ್ಟಳು.

ಮುಮ್ಮಡಿಸಿಂಗ ವೃದ್ಧಾಪ್ಯ ಕಾರಣವಾಗಿ ಮಡಿದನು. ಬರಗಾಲ ಬಂದಿತು. ಆಗ ವಿಧವೆ ಮಂಚಕ್ಕ ನಾಲ್ಕಾರು ಬೇಡ ಕುಟುಂಬ ಸಹಿತ ಮಗನೊಂದಿಗೆ ಜಟ್ಟಂಗಿ ರಾಮೇಶ್ವರ ಬೆಟ್ಟಕ್ಕೆ ವಲಸೆ ಬಂದಳು. ಕಾಲ ಗತಿಸಿತು. ಈ ಬೇಢಡ ಕುಟುಂಬಗಳು ಬೇಟೆಯಾಡುತ್ತ ಲೋಹಾರಿ ಗಿರಿಗೆ ಬಂದವು. ಅಲ್ಲಿಯ ಕೋಟೇಶ್ವರ (ಷಣ್ಮುಖ)ನಿಗೆ ನಮಸ್ಕರಿಸಿ, ಮುಮದೆ ಸಾಗಿ, ಹೊಸಮಲೆಗೆ ಬಂದು, ಶಾಶ್ವತ ನೆಲೆಯೂರಿದವು.

ಸಂಧಿ:೨

ಜಗತ್ತಿನಲ್ಲಿಯೇ ಶ್ರೇಷ್ಠವಾದುದು ಕರ್ನಾಟಕ. ಅಲ್ಲಿಯ ವಿದ್ಯಾನಗರದ ದಕ್ಷಿಣಕ್ಕೆ ಹೊಸಮಲೆಯಿದೆ. ಇಲ್ಲಿ ವಾಸವಾಗಿದ್ದ ಕಿರಾತನಾದ ಕಂಪಿಲರಾಯನು ದಾರಿ ಸುಲಿದು, ಗುತ್ತಿಯ ಜಗದಪ್ಪನಿಗೆ ಕಪ್ಪನಿತ್ತು, ಹತ್ತೆಂಟು ಗ್ರಾಮಗಳನ್ನಾಳುತ್ತಿದ್ದನು. ಕಂಪಿಲರಾಯ ಹೊಸಲಮಲೆಯಲ್ಲಿ ದುರ್ಗ ಕಟ್ಟಿಸಿದ. ಅಗಳು, ಆಳ್ವೇರಿ, ಜಿಡ್ಡಿ, ಕೊತ್ತಳ, ಹುಲಿಮುಖ, ಕೋಟೆಯ ತೆನೆಗಳಿಂದ; ಸೋಮವಿಧಿ, ಸರ್ಯವೀಧಿ, ಉಪ್ಪರಗುಡಿ, ನವಿಲುಯ್ಯಲೆ, ಅಂಗಡಿ, ರಂಗಮಂಟಪ, ಕೆಂಡದೋಕುಳಿಗಳಿಂದ ಅದು ಶೋಭಿಸುತ್ತಿದ್ದಿತು.

ಹೀಗಿರಲು ಗುಜ್ಜಾರಿಯನ್ನಾಳುತ್ತಿದ್ದ ಅರೆಯ ಚಾರಮರಾಯ ರಾಜ್ಯಭ್ರಷ್ಟನಾಗಿ ವರುಣನ ನದಿಯೆಂಬ ಕೃಷ್ಪಯನ್ನು ದಾಟಿ ಕಂಪಿಲನ ಹತ್ತಿರ ಬಂದನು. ಮಗಳು ಹರಿಯಲದೇವಿಯನ್ನು ಕಂಪಿಲನಿಗೆ ಧಾರೆಯೆರೆದು, ಅವನಿಂದ ಪಡುವಣರಾಜ್ಯ ಪಡೆದು, ಅಲ್ಲಿಯೇ ಉಳಿದನು.

ಕಂಪಿಲರಾಯ, ಹರಿಯಲದೇವಿ ಸುಖದಲ್ಲಿದ್ದರು. ಆಗ ಕೈಲಾಸದಲ್ಲಿ ಒಂದು ಘಟನೆ ಜರುಗಿತು: ಶಿವನ ಒಡ್ಡೋಲಗದಲ್ಲಿ, ಅರ್ಜುನ ಗಣನಾಥ ಕುಳಿತಿದ್ದನು. ಆಗ ಪರಿವಾರದೊಂದಿಗೆ ಬಂದ ಪಾರ್ವತಿಯನ್ನು ಅವನು ಕಣ್ಣೆತ್ತಿಯೂ ನೋಡಲಿಲ್ಲ. ಇದನ್ನು ಗಮನಿಸಿದ ಆಕೆ, ಅರ್ಜುನನಿಗೆ ಅಹಂಕಾರವನ್ನು ಆರೋಪಿಸದಳು. ಆಗ ಶಿವ ‘ಇದು ಅಹಂಕಾರವಲ್ಲ, ಪರನಾರೀ ಸಹೋದರ ಭಾವನೆಯವನಾಗಿರುವುದರಿಂದ ಹೀಗೆ ವರ್ತಿಸಿದ’ ಎಂದು ಹೇಳುತ್ತಲೇ, ಪಾರ್ವತಿ ‘ಹಾಗಿದ್ದರೆ ರಂಭೆಯ ಮೂಲಕ ಇವನ ವ್ರತ ಪರೀಕ್ಸಿಸುತ್ತೇನೆ’ ಎಂದಳು. ‘ಈ ನನ್ನ ಅರ್ಜುನ ಮತ್ತು ಆ ನಿನ್ನ ರಂಭೆ ಭೂಲೋಕದಲ್ಲಿ ಜನಿಸಲಿ’ ಎಂದು ನುಡಿದ ಶಿವನ ಆದೇಶದಂತೆ, ಅವರು ಮರ್ತ್ಯದಲ್ಲಿ ಹುಟ್ಟಬೇಕಾಯಿತು.

ಹರಿಯಲದೇವಿ ಪುತ್ರನನ್ನು ಬಯಸಿ ಜಟ್ಟಂಗಿ ರಾಮೇಶ್ವರನನ್ನು ಪ್ರಾರ್ಥಿಸಿದಳು. ದೇವರಿಗೆ ಮೀಸಲು ಹಾಲು, ತುಪ್ಪ, ಬಾಳೆಹಣ್ಣು, ಸಣ್ಣಕ್ಕಿ, ಬೇಳೆ ಕಳಿಸಿದಳು. ಸ್ವೀಕರಿಸಿದ ಪೂಜಾರಿ ದೇವರ ವರವೆಂದು ಬಾಳೆಹಣ್ಣು, ಹೂವು ಕೊಟ್ಟು ಕಳಿಸಿದ, ಹರಿಯಲದೇವಿ ಅಂದು ನಿದ್ರೆಯಲ್ಲಿ ದೇವರು ಹೂವು ಕೊಟ್ಟ ಸ್ವಪ್ನ ಕಂಡಳು. ಅರ್ಜುನ ಮಗನಾಗಿ ಹುಟ್ಟುವನೆಂದು ಹೇಳಿದಂತಾಯಿತು. ಒಂಬತ್ತು ತಿಂಗಳು ತುಂಬಿ ಗಂಡುಮಗನಿಗೆ ಜನ್ಮನೀಡಿದಳು. ಇದೇ ಕಾಲಕ್ಕೆ ರಾಣಿ ತಿಂದು ಎಸೆದ ಹಣ್ಣಿನ ಸಿಪ್ಪೆ ಸೇವಿಸಿದ ದಾಸಿ, ಕಳ್ಳರಾಮನಿಗೆ ಜನ್ಮನೀಡಿದಳು. ಹರಿಯಲದೇ ಮಗನಿಗೆ ರಾಮ ಎಂದು ಹೆಸರಿಟ್ಟಳು. ಅರಳೆಲೆ, ಮಾಗಾಯಿ, ಬೆರಳಹೊನ್ನುಂಗುರ, ಕೊರಳ ಮುತ್ತಿನ ಹಾರ, ಸರಪಳಿ ಗೆಜ್ಜೆ, ಹೊನ್ನುಡಿದಾರದಿಂದ ಮಗುವನ್ನು ಅಲಂಕರಿಸಿದರು. ಓದು, ಸಾಧನೆ, ಕಾದಾಡುವ ರೀತಿ, ಗಜ-ತುರಗ ಹೋರಾಟ, ವಾದಗಳಲ್ಲಿ ಪರಿಣತನಾಗಿ ಮಗ ಬೆಳೆದನು.

ಸಂಧಿ: ೩

ಇತ್ತ ಸಾಲ್ಗುಂದಿ ಗ್ರಾಮದ ದೇವಿರೆಡ್ಡಿ – ಎಲ್ಲಮ್ಮ ದಂಪತಿಗಳ ಗರ್ಭದಿಂದ ರಂಭೆ ರತ್ನಾಜಿಯಾಗಿ ಹುಟ್ಟಿದಳು. ಅರಳೆಲೆ, ಮಾಗಾಯಿ, ಮೂರುಡಿಯ ಸರಪಳಿ, ಕೊರಳ ರತ್ನಹಾರ, ಹರಳುಂಗುರ, ಕಾಲಕಡೆ, ಪೆಂಡೆಯದಿಂದ ಮಗುವನ್ನು ಅಲಂಕರಿಸಿದರು. ಮಗಳು ಯುವತಿಯಾಗಿ ಬೆಳೆದಳು.

ಬೇಟೆಗೆ ಬಂದ ಕಂಪಿಲರಾಯ, ಈ ಯುವತಿಯ ರೂಪಕ್ಕೆ ಮರುಳಾದ. ಕನ್ಯೆಯನ್ನು ಕೇಳಿ ಅವಳ ತಂದೆ ತಾಯಿಯಲ್ಲಿಗೆ ಚರನನ್ನು ಕಳಿಸಿದ. ಕಿರಾತನಿಗೆ ಕನ್ಯೆ ಕೊಡಲು ಅವರು ನಿರಾಕರಿಸಿದರು. ಕೊನೆಗೆ ಕನ್ನೆಯನ್ನೇ ಕೇಳಿ, ಒಪ್ಪಿಗೆ ಪಡೆದು, ಸಾಲಗುಂಡಿ ಅರಮನೆ, ಎರಡು ಗ್ರಾಮ ನೀಡಿ ಅವಳನ್ನು ಕರೆದುಕೊಂಡು ಬಂದನು.

ಈ ಸುದ್ದಿ ಕೇಳಿ ಹರಿಯಲದೇವಿ ದುಃಖಿತಳಾದಳು. ಮಗ ರಾಮನೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿ ‘ಮಾಗಿಯ ಕೋಗಿಲೆ’ ಯಂತೆ ಮೌನತಾಳಿದಳು.

ಸಂಧಿ :

ರಾಮಯ್ಯ ‘ಕೋಮಲೆಯರ ಕಣ್ಣ ಬೇಟಕ್ಕೆ ಸಿಲುಕಿದ’ ವ್ರತ ಹಿಡಿದ. ಮೇಘವಾಹನಾಚಾರಿಯನ್ನು ಕರೆಯಿಸಿ, ‘ಪರನಾರಿ ಸಹೋಸರ’ ಹೆಸರಿನ ನವರತ್ನ ಖಚಿತ ಬಿರುದ ಮಾಡಿಸಿ, ಎಡಗಾಲಿನಲ್ಲಿ ಧರಿಸಿದ. ಬೇಟೆಗಾಗಿ ಹಂಪಿಯ ಮಾರ್ಗದಲ್ಲಿ ನಡೆದ ರಾಮಯ್ಯ ಕಾಟಣ್ಣ ಮೊದಲಾದವರು ದುರ್ಗವೊಂದನ್ನು ಕಂಡರು. ‘ರಾಮಯ್ಯ ಕುಮ್ಮಟ’ ವೆಂದು ಅದಕ್ಕೆ ಹೆಸರಿಟ್ಟು, ಹೊಸಮಲೆಗೆ ಬಂದರು. ‘ರಾಯರ ಗರ್ಭದೊಳ್ ಜನಿಸಿದ ಬಳಕಿನ್ನು ಕಾಯದಾಸೆಯ ಬಿಡಬೇಕು’ ಎಂಬ ಧ್ಯೇಯದ ರಾಮಯ್ಯ, ಕುಮ್ಮಟದುರ್ಗ ನಿರ್ಮಿಸುವ ವಿಚಾರವನ್ನು ತಂದೆಗೆ ಹೇಳಿದನು. ದುರ್ಗ ನಿರ್ಮಾಣ ಆರಂಭವಾಯಿತು. ಕೋಟೆ, ತೋಟ, ವನ, ಕೆರೆ, ಬಾವಿ, ರಾಜಬೀದಿ, ಪೇಟೆಸಾಲು, ಒಪ್ಪರಿಗೆ ಮನೆ, ಕಾಟಣ್ಣನ ಅರಮನೆ, ಆನೆಸಾಲು ಬೀದಿ, ಜಿಡ್ಡಿ, ಬಾಗಿಲು, ಹೊರಕೋಟೆ, ಶೃಂಗಾರ ತೋಟ, ರತ್ನಿಯ ಅರಮನೆ, ನಾಟಕ ಶಾಲೆ, ಕುದುರೆಲಾಯ, ಆಟ-ಪಾಟ ನೋಡುವ ಚಾವಡಿ, ಮಹಾರ್ನೌಮಿ ಮಂದಿರ, ರಾಮಯ್ಯನ ಅರಮನೆ, ಬೈಚಪ್ಪನ ಅರಮನೆ, ಮನ್ನೆಯರ ಕೇರಿ, ಕಾರಾಗೃಹ, ಐದಾಯಿಗಳ ಬಾಜಾರ, ಹಾರೋರ ಕೇರಿ, ಹರದರ ಕೇರಿ, ಚಾರಮರಾಯನ ಅರಮನೆ, ಮಾರೆಮ್ಮ – ಸಿಂಗಮ್ಮಗಳ ಅರಮನೆ, ಹೊಸಬರ – ಹಳಬರ – ಅಗಸರ ಕೇರಿ, ಮೊಸರು ಮಾರುವ ಬಾಜಾರ, ಶಿಶುವಿಗೆ ಹಾಲ್ಬೆಣ್ಣೆ ಮನೆ, ಛತ್ತದ ಮನೆ ನಿರ್ಮಾಣವಾದವು.

ದುರ್ಗಕ್ಕೆ ಕುರಿ ಕೋಣಗಳ ಬಲಿಶಾಂತಿ, ಬ್ರಾಹ್ಮಣರಿಗೆ ಅನ್ನಶಾಂತಿ ಜರುಗಿತು. ಮಲ್ಲೇಶನ ಗುಡಿಯ ಮುಂದೆ ಪಟ್ಟಣ ಬೆಳೆದು ನಿಂತಿತು, ಹೊಸಮಲೆದುರ್ಗವನ್ನು ಬಿಟ್ಟು ಎಲ್ಲರೂ ಕುಮ್ಮಟದುರ್ಗಕ್ಕೆ ಬಂದರು. ‘ಅನ್ನುಂಟು ಆಳಿಲ್ಲ, ಹೊನ್ನುಂಟು ಕುದುರಿಲ್ಲ’. ಈ ಕೊರತೆಯನ್ನು ತುಂಬಿಕೊಳ್ಳುವುದಕ್ಕಾಗಿ ಬಾಬೋಜಿ ಮಲ್ಲನನ್ನು ಅತ್ತಿತ್ತ ಕಳಿಸಿ, ಸೈನ್ಯ ಸಂಗ್ರಹಿಸಲಾಯಿತು. ಕುಮ್ಮಟದಲ್ಲಿ ಬೇಡರ ಪಡೆ ನಿರ್ಮಾನವಾಯಿತು. ಎಪ್ಪತ್ತು ಮಂದಿ ಮನ್ನೆಯರನ್ನು ಆಮಂತ್ರಿಸಿ, ಹೊನ್ನ ಹಂಚಲಾಯಿತು. ಮೇಚ(ಬೇಡ)ರಿಗೆ ಹೊನ್ನು ಜವಳಿ ಉಡುಗೊರೆ ನೀಡಲಾಯಿತು. ಚಾಮರಾಯನ ಮಕ್ಕಳ ಆರುನೂರು ಕುದುರೆ, ತನ್ನ ಲಾಯದ ಮುನ್ನೂರು ಕುದುರೆ, ಕಾಟಣ್ಣನ ಹನ್ನೂಂದು ಸಾವಿರ ಕುದುರೆ ನೆರೆದವು. ಸುತ್ತಲಿನ ರಾಜ್ಯಗೆದೆಯಲು ರಾಮಯ್ಯ ಸಿದ್ಧನಾದ. ಹಾನ್ಗಲ್ಲ ಸೀಮೆ ಮತ್ತು ನಾನಾ ರಾಜ್ಯಗಳನ್ನು ಸುಲಿಯಲಾಯಿತು. ನೀಲನನ್ನೇರಿ ರಾಮ ಬಾದಾಮಿ ತನಕ ನಡೆದ. ಕರಿಯ ಹೊಳೆದಾಟಿ ಮುನ್ನಡೆದು, ಕುಮ್ಮಟಕ್ಕೆ ಮರಳಿ ಬಂದ.

ಸುತ್ತಲಿನ ಪಾಳೆಗಾರರು ಒಂದೆಡೆ ಸೇರಿ, ತಮ್ಮ ಅರಸು ಹೊಯ್ಸಳ ಬಲ್ಲಾಳನಿಗೆ ರಾಮಯ್ಯನ ಬಗ್ಗೆ ದೂರು ಹೇಳಿದರು: ‘ಕುಮಾರರಾಮ ನೇಮಿಯ ಎದುರು ದಂಡು ಸಿದ್ಧಪಡಿಸಿದ, ಹಳ್ಳಿ ಓರು ಸೀಮೆ ಸುಟ್ಟ, ದೊಡ್ಡ ದೊಡ್ಡ ಗ್ರಾಮಗಳನ್ನು ಕಟ್ಟಿಸಿದ. ಈತನ ಖಡ್ಗಕ್ಕೆ ಎದುರಾಗಿ ನಿಲ್ಲುವವರು ಇಲ್ಲ’ ವೆಂದು ದೂರಿದರು. ಬಲ್ಲಾಳ ಇವರೆಲ್ಲರಿಗೆ ಅಭಯ ನೀಡಿದನು.

ಈ ಪಾಳೆಗಾರರು ಗುತ್ತಿಯ ಜಗದಪ್ಪನಲ್ಲಿಗೂ ಹೋಗಿ, ‘ಕಂಪಿಲನು ರಾಮನ ಮೂಲಕ ನೆರೆಯ ರಾಜ್ಯಗಳನ್ನು ಮತ್ತು ಕೋಟೆಗಳನ್ನು ವಶಪಡಿಸಿಕೊಳ್ಳುತ್ತಲಿದ್ದಾನೆ’ ಎಂದು ನಿವೇದಿಸಿದರು. ಅವರಿಗೆ ಜಗದಪ್ಪ ಸಮಾಧಾನ ಹೇಳಿದನು. ರಾಮನ ಈ ಎಲ್ಲ ಚಟುವಟಿಕೆ ದಿಲ್ಲಿ ಸಿರಿತಾಳನ ಕಿವಿಗೆ ಮುಟ್ಟಿತು. ಸುರಿತಾಳನ ಮಗಳು ಪರಾಕ್ರಮಿಯೂ ಚೆಲುವನೂ ಆಗಿದ್ದ ರಾಮನನ್ನು ಮದುವೆಯಾಗ ಬಯಸಿದಳು.

 

ಸಂಧಿ :

ಸುರಿತಾಳನು ಮಗಳು ಬಾಬಮ್ಮನ ಮದುವೆ ಬಗ್ಗೆ ಯೋಚಿಸಿದ. ದೇಶದೇಶದ ಖಾನ ವಜೀರರನ್ನು ಕರೆಸಿದ. ಬಾಬಮ್ಮ ಒಪ್ಪಲಿಲ್ಲ. ಅಷ್ಟರಲ್ಲಿ ಕಾಶಿ-ರಾಮೇಶ್ವರ ಯಾತ್ರೆ ಮುಗಿಸಿಕೊಂಡು ಬ್ರಾಹ್ಮಣರು ದಿಲ್ಲಿಗೆ ಬಂದರು. ಸೇನಾಪತಿ ನೇಮಿಖಾನ ಅವರಿಗೆ ಸ್ವಯಂಪಾಕಕ್ಕಾಗಿ ತುಪ್ಪ, ಅಕ್ಕಿ, ಬೇಳೆ, ಸಕ್ಕರಿ, ಗೋದಿಹಿಟ್ಟು ವ್ಯವಸ್ಥೆಮಾಡಿದ. ‘ಬಾದಶಹನ ಮಗಳಿಗೆ ಯೋಗ್ಯವಾದ ವರವನ್ನು ನೀವು ಎಲ್ಲಿಯಾದರೂ ಕಂಡಿರಾ?, ಎಂದು ಕೇಳಿದ.ಮುನ್ನೂರ ಅರವತ್ತು ಗಾವುದ ದೂರದಲ್ಲಿ ಕುಮ್ಮಟದುರ್ಗವಿದೆ. ಅಲ್ಲಿಯ ‘ಚೆನ್ನಿಗ ರಾಮ ಕಾಮನ ರೂಪಿಗತಿ ಚೆಲ್ವ’ ಎಂದು ಹೇಳಿದರು. ಸುರಿತಾಳನೂ ಬ್ರಾಹ್ಮಣರನ್ನು ಕರೆಸಿ ಕೇಳಿದ, ‘ನಳನೋ, ಜಯಪ್ರದನೋ, ನಳಿನನಾಭನೋ, ಮನ್ಮಥನೋ ಎಂಬಂಥ ರೂಪ. ಖಡ್ಗದಲ್ಲಿ ಸಮರ್ಥ’ ಎಂದೆಲ್ಲ ಹೇಳಿದರು. ಇದನ್ನು ಕೇಳಿ ‘ರಾಮನಲ್ಲದೆ ಬೇರೆಲ್ಲರು ನನಗೆ ತಂದೆ ಸಮಾನ’ ಎಂದು ಬಾಬಮ್ಮ ಹಟಹಿಡಿದಳು. ಅವನಿಗೆ ಸೂನಿತ ಮಾಡಿ ಅಳಿಯನನ್ನಾಗಿಸಿಕೊಳ್ಳಲು ಸುರಿತಾಳ ಯೋಚಿಸಿದ. ನೇಮಿಯ ಸೈಚನೆಯಂತೆ, ದೇಶ ದೇಶದ ರಾಜರಿಂದ ಕಪ್ಪಕಾಣಿಕೆ ತರಲು, ರಾಮನನ್ನು ವಶಪಡಿಸಿಕೊಂಡು ಬರಲು ಪಗುದಿಯಖಾನ, ಆಕಾಶಖಾನ, ಅಬ್ದುಲಖಾನ, ಖಂಡೆಯಖಾನರು ಸಜ್ಜಾದರು. “ಐವತ್ತಾರು ದೇಶ ಸುತ್ತಿರಿ. ಮೈಲಾಪುರಿ, ಮಲೆಯಾಳ, ಕೊಂಕಣ, ಐಗಾರರೆಡ್ಡಿ ಇತ್ಯಾದಿ ಪಾಳ್ಯಗಳಿವೆ. ಕರ್ನಾಟಕದಲ್ಲಿ ಚಿಕ್ಕ ಪಾಳ್ಯಗಳಿವೆ. ಮಿಕ್ಕ ಪಾಳೆಗಾರರು ಜಗದಪ್ಪನ ವಶದಲ್ಲಿದ್ದಾರೆ. ಐಗಾರ ರೆಡ್ಡಿಯನ್ನು ಸುಲಿಯಿರಿ. ಇವರೆಲ್ಲರಿಂದ ಸಂಗ್ರಹಿಸಿದ ಕಪ್ಪ ಕಾಣಿಕೆಯನ್ನು ದಿಲ್ಲಿಗೆ, ಕುಮ್ಮಟದುರ್ಗಕ್ಕೆ ಹೋಗಿರಿ. ಒಮ್ಮನ ಹೊನ್ನ ಕೇಳಿರಿ, ಕೊನೆಗೆ ಕೊಟ್ಟಷ್ಟು ಪಡೆದು, ಕುಮಾರರಾಮನ ರೂಪ ಸಾಮರ್ಥ್ಯಗಳ ವಿವರ ತಿಳಿಯಿರಿ.ಅವನನ್ನು ಇಲ್ಲಿಗೆ ಕರೆದು ತನ್ನಿರಿ. ಬರದಿದ್ದರೆ ಆಮೇಲೆ ನಾನು ಹಿಡಿತರಿಸುತ್ತೇನೆ” ಎಂದು ಹೇಳಿ ಖಾನರನ್ನು ಕಳುಹಿಸಲಾಯಿತು. ಸುರಿತಾಳನ ಪಾದುಕೆ ಇಟ್ಟ ಪಲ್ಲಕಿಯನ್ನು ಹೊತ್ತು ಪಾರಸಿ, ಪರಮಾನೆ, ಮುದ್ರೆಗಳೊಂದಿಗೆ ಅವರು ಪ್ರಯಾಣ ಬೆಳೆಸಿದರು. ದಕ್ಷಿಣಕ್ಕೆ ಸಾಗಿ ಚಿಕ್ಕಡಿಳ್ಳಿ (ದೇವಗಿರಿ)ಗೆ ಬಂದರು. ಅಂಗ, ಕಳಿಂಗ, ಕಾಶ್ಮೀರ, ಕಾಮಬೋಜ, ಕೊಂಗಾಳ, ಸೌರಾಷ್ಟ್ರ, ಬಂಗಾಳ, ಕೇರಳ, ಸಿಂಹಳ, ಕರಾಡ, ವಂಗದೇಶಗಳಿಂದ ಕಪ್ಪ ಕಾಣಿಕೆ ಪಡೆದು, ಗುತ್ತಿ ಜಗದಪ್ಪನಲ್ಲಿಗೆ ಬಂದರು.

ಜಗದಪ್ಪ ಎದುರು ಬಂದು ಹಿಡಿ ಹೊನ್ನ ಕಾಣಿಕೆ ನೀಡಿ, ಪಲ್ಲಕ್ಕಿಯಲ್ಲಿಯ ಪಾದುಕೆಗೆ ಅಡ್ಡಬಿದ್ದು, ಬಂದವರಿಗೆ ವಸತಿ ವ್ಯವಸ್ಥೆಮಾಡಿದ. ಈ ವರೆಗೆ ಸಂಗ್ರಹಿಸಲಾಗಿದ್ದ ಹೊನ್ನ ಜಾಳಿಗೆಗಳನ್ನು ವಜೀರರು ದಿಲ್ಲಿಗೆ ಕಳುಹಿಸಿದರು. ಪಾದುಕೆಯನ್ನೊಳಗೊಂಡ ಪಲ್ಲಕ್ಕಿ ಕುಮ್ಮಟದುಗರಗಕ್ಕೆ ನಡೆಯಿತು. ಚರರು ಈ ಸುದ್ಧಿಯನ್ನು ಕಂಪಿಲನಿಗೆ ಹೇಳಿದರು. ಬೈಚಪ್ಪ ಅವರನ್ನು ಒಂದು ಮನೆಯಲ್ಲಿ ಇಳಿಸಿ, ಉಲುಪೆ ಉಡುಗೊರೆ ಕೊಟ್ಟು, ಅವರೊಂದಿಗೆ ಸಮಾಲೋಚಿಸಿ, ಕಂಪಿಲನಲ್ಲಿಗೆ ಬಂದನು. ಬಂದ ವಜೀರರು ಬಳ್ಳದ ತುಂಬ ಹೊನ್ನ ಬಯಸುವುದನ್ನು ಕೇಳಿ ಕಂಪಿಲ ಚಿಂತಾಕ್ರಾಂತನಾದ.

ಮರುದಿನ ಮುಂಜಾನೆ ಕಂಪಿಲ, ಬೈಚಪ್ಪ, ರಾಮ, ವಜೀರರ ಹತ್ತಿರ ಹೋದರು. ‘ಬಳ್ಳದ ತುಂಬ ಹಣ ಕೊಡುವ ಶಕ್ತಿ ನನಗಿಲ್ಲ. ಅಡವಿಯ ಸೀಮೆಗೆ ತಕ್ಕಂತೆ ಹೊನ್ನ ಕೊಡುವೆ’ನೆಂದು ಕಂಪಿಲ ಹೇಳಿದ. ವಜೀರರು ರಾಮನ ರೂಪಕ್ಕೆ ಮಾರುಹೋದರು. ‘ಹೊನ್ನ ಕೊಡಲು ಸಾಧ್ಯವಿಲ್ಲದಿದ್ದರೆ ಮಗನಾದ ರಾಮನನ್ನು ನಮ್ಮೊಂದಿಗೆ ಕಳಿಸು, ಸುರಿತಾಳನ ದರ್ಶನಮಾಡಿಸಿ ಹಿಂದಿರುಗಿಸುತ್ತೇವೆ’- ಎಂದರು. ಕಂಪಿಲ ಇದಕ್ಕೆ ಒಪ್ಪಲಿಲ್ಲ. ಹೊನ್ನಕೊಡುವಂತೆ ನಟಿಸಿ, ರಾಮ ಒಪ್ಪಿದ. ವಂದನೆ ಆಡಿ ಕಾಣಿಕೆ ಸಲ್ಲಿಸುವುದಕ್ಕೋಸುಗ ಪಲ್ಲಕ್ಕಿಯಲ್ಲಿರುವ ಪಾದುಕೆ ತೋರಿಸಲು ಹೇಳಿದ. ಖಾನರು ಅವುಗಳನ್ನು ಹೊರ ತೆಗೆಯುವುದೇ ತಡ, ಅವುಗಳನ್ನು ಮೆಟ್ಟಿ ‘ಇವು ನನ್ನ ಪಾದಕೆ ಸರಿಯಾಗಿ ಹೊಂದಿಕೊಳ್ಳುತ್ತವೆ. ನನ್ನ ಅಣ್ಣನ ಪಾದುಕೆ ಹೊಂದಿಕೆಯಾಗುವ ಇನ್ನೊಂದು ಜೋಡು ತರಿಸಿಕೊಟ್ಟರೆ, ಇನ್ನೂ ಹೆಚ್ಚು ಹೊನ್ನು ಕೊಡುವೆ’ ಎಂದು ನುಡಿದ. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟರು, ಮುಂಗೈ ಕಚ್ಚಿಕೊಂಡರು. ಬೊಬ್ಬೆಯಿಟ್ಟು ಬೆರಗಾರು. ‘ನಿನ್ನ ಕುಮ್ಮಟ ಹಾಳಾಯಿತು. ನಿನ್ನ ತಲೆಗೆ ವ್ಯಾಳ್ಯೆಬಂತು’ ಎಂದು ಅರಚಿದರು. ‘ಮಕ್ಕಳಾಟಿಕೆ ಮಾಡಿದೆ ರಾಮಯ್ಯ, ಸಿಕ್ಕಿದೆ ತುರುಕರ ಸೆರೆಗೆ’ ಎಂದು ಕಂಪಿಲ ನುಡಿದ. ಪಾದುಕೆ ಬಿಟ್ಟು ದೂರ ಸರಿಯಲು ಒತ್ತಾಯಿಸಿದ.‘ಎಂದಿದ್ದರೀ ಕಾಯ ಉಳಿವುದೆ ಜಗದೊಳೂ?’ ಎನ್ನುತ್ತ, ‘ಸುರಿತಾಳನ ಸೈನ್ಯಕ್ಕೆ ನಾನಂಜಲಾರೆ’ ಎಂದು ಮಾರ್ನುಡಿದ. ‘ಮಂಜು ಮುಸುಕೀತೆ ತರುಗಿರಿಯ? ಕುಂಜರದಾನೆಗೆ ಜಂಬುಕ ಬಲ್ಲುದೆ?’ ಎಂದು ವಾದಿಸಿದ. ‘ಹನ್ನೊಂದನೆಯ ವರ್ಷಕ್ಕೆ ಕನ್ನೆ ಹುಯ್ಯುಲು ಕೈಗೊಳ್ಳಲು ಯೋಚಿಸುತ್ತಿದ್ದೆ, ಕೈಗೂಡಿತು’ ಎಂದು ನುಡಿದ. ಮಂತ್ರಿ ಬೈಚಪ್ಪ ಬಂದವರಿಗೆ ಒಂದಿಷ್ಟು ಕಾಣಿಕೆ ನೀಡಿ ಕಳಿಸಿದ. ಅವರು ಗುತ್ತಿಗೆ ಹೋಗಿ, ಸುರಿತಾಳನ ಪರವಾಗಿ ರಾಮನ ಮೇಲೆ ಯುದ್ಧ ಮಾಡಲು ಜಗದಪ್ಪನಿಗೆ ಹೇಳಿದರು. ಆರೇಳು ತಿಂಗಳು ಪ್ರಯಾಣಿಸಿ, ಸುರಿತಾಳನಿಗೆ ಎಲ್ಲ ವಿವರ ನೀಡಿದರು. ರಾಮನ ರೂಪವನ್ನು ಕೊಂಡಾಡಿದರು. ‘ಕತ್ತಿಗೆ ಅಳುಕುವನಲ್ಲ, ಕರ್ನಾಟದೊಳ್ ಉತ್ತಮ ಪುರುಷ ಪುಟ್ಟಿಹನು’ ಎಂದು ಹೇಳುತ್ತಲೇ, ಸುರಿತಾಳ ನೇಮಿಯನ್ನು ಕರೆಸಿದನು. ಸಿಟ್ಟಿಗೆದ್ದು, ರಾಮನ ಮೇಲೆ ದಂಡೆತ್ತಿ ಹೋಗಲು ಆಜ್ಞಾಪಿಸಿದನು. ಅದನ್ನು ಕೇಳಿ ಮಗಳು ಬಾಬಮ್ಮ ‘ನನ್ನ ಮುತ್ತೈದೆತನ ಉಳುಹು’ ಎಂದು ಬೇಡಿಕೊಂಡಳಲ್ಲದೆ, ‘ನಿನ್ನ ಅಳಿಯನಿಗೆ ಪಾದಕೆ ಕೊಟ್ಟೆನೆಂದು ಭಾವಿಸು’ ಎಂದು ಹೇಳಿದಳು.

ಸಂಧಿ:

ಹರಿಯಲದೇವಿ ಬೈಚಪ್ಪನನ್ನು ಕರೆಸಿದಳು. ‘ರಾಮ ಮಾಡಿದ ಕಥೆ ಬರೆದೋದಿ ಕೇಳಿದರೆ ತೀರದು’ ಎಂದು ಮರುಗಿದಳು. ‘ರಾಮ ಸಾಮಾನ್ಯನಲ್ಲ, ಶ್ರೀ ಕೃಷ್ಣ ನಿನ್ನ ಗರ್ಭದಲ್ಲಿ ಜನಿಸಿರುವ’ನೆಂದು ಇತ್ತ ಬೈಚಪ್ಪ ಸಮಾಧಾನ ಪಡಿಸುವಷ್ಟರಲ್ಲಿ, ಅತ್ತ ಗುತ್ತಿಯ ಜಗದಪ್ಪನ ಸೇವಕರು ಕುಮ್ಮಟಕ್ಕೆ ಬಂದು ಕಪ್ಪಕಾಣಿಕೆ ಕೇಳೀ, ಬೀದಿಯಲ್ಲಿಯೇ ಕಂಪಿಲನನ್ನು ತಡೆದು ನಿಲ್ಲಿಸಿದರು. ಅಷ್ಟರಲ್ಲಿ ತನ್ನ ಐದು ಜನ ವಿಶ್ವಾಸಿಕರೊಂದಿಗೆ ಬಂದ ರಾಮಯ್ಯ, ಅಲ್ಲಿ ತಾನು ನಿಂತುಕೊಂಡು, ಕಂಪಿಲನನ್ನು ಮನೆಗೆ ಕಳಿಸಿದನು. ಆಮೇಲೆ ಗುತ್ತಿಯವರನ್ನು ಕತ್ತು ಹಿಡಿದು ನೂಕಿಸಿ, ಮನೆಗೆ ಬಂದನು.

ಇದನ್ನು ಕೇಳಿದ ಜಗದಪ್ಪ ಸಿಟ್ಟಿಗೆದ್ದು, ಸುತ್ತಲಿನ ಪಾಳೆಯಗಾರರಿಗೆ ಓಲೆ ಬರೆದು ‘ಲಾಳ, ಕೊಂಕಣ, ಮಲೆಯಾಳ, ಸಿಂಗ, ಬಂಗಾಳ ದೇಶಗಳ ಸೈನಿಕರೆಲ್ಲ ಒಟ್ಟಾಗಿರಿ, ಕುಮ್ಮಟದ ಮೇಲೆ ದೊಡ್ಡ ದಾಳಿ ಮಾಡೋಣ’ ಎಂದು ತಿಳಿಸಿದ. ವೀರ ಕನ್ನೋಜಿ, ಕರಾಳ, ಸಿಂಧು, ಮಹಾರಾಷ್ಟ್ರದ ಬಲ ಒಂದುಗೂಡಿತು. ಜಗದಪ್ಪ ಕಮ್ಮಟದುರ್ಗ ಮುತ್ತಿದ. ‘ಧರೆಯ ರಾಯರ ಗಂಡ’ ಎಂಬ ಬಿರುದು ಧರಿಸಿ, ಕುದುರೆ ಏರಿ, ರಾಮಯ್ಯ ರಣರಂಗವನ್ನು ಪ್ರವೇಶಿಸಿದ. ಮನ್ನೂಲ ಮಾಚ, ಬೂಟಲ ಬೊಮ್ಮ, ಮನ್ನುಲ ಚಿನುಮಾದ, ಬುಕ್ಕನ ಪಾಲ, ಮುದುಗೊಂಡ್ಲ ಮೂಗ, ರಾಹುತ ಮಲ್ಲಣ್ಣ ಜೊತೆಗೂಡಿ ಹೋರಾಟ ಮುಂದುವರಿಸಿದರು. ‘ಸ್ವಾನೆಯ ಮಳೆಯಂತೆ ಸುರಿದವಂಬಿನ ಮಳೆ’. ಆಗ ಕಾಮಗೇತಿಯ ತಿಮ್ಮ ಬೋನಗುರಿಯಂತೆ ಆನೆಗಳನ್ನು ಸೆರೆ ಹಿಡಿದು, ರಾಮನಿಗೆ ಒಪ್ಪಿಸಿದ. ಬೆಟ್ಟದ ಸಿಂಹ ಸಮಾನರಾದ ಕೊಟ್ಟದ ಬೇಡರು, ಮರಳೆ ಪಾಪನವರು, ಚಾಮರಾಯನ ಮಕ್ಕಳು, ಕಾಟಣ್ಣ ಸೇರಿ ಮಾಳವ, ಮಗಧ, ಪಾಂಚಾಲ ನಾಯಕರನ್ನು ಕೊಂದರು. ಗಡಿಯಂಕ ಚಿನ್ನನು ಯುದ್ಧವಿಜಯದ ಸುದ್ದಿ ಹೇಳಿ ‘ಧರ್ಮಗಾಳೆಯ’ ನುಡಿಸಲು ಸೂಚಿಸಿದನು. ಜಯಶಾಲಿಗಳಾಗಿ ಎಲ್ಲರೂ ಅರಮನೆಗೆ ಮರಳಿದರು.

ಜಗದಪ್ಪ, ಸೋಲಿನ ಸುದ್ದಿ ಕೇಳಿದ. ರಾಮನ ಸಾಹಸಕ್ಕೆ ಬೆರಗಾದ. ಐದು ಕುದುರೆ ಮತ್ತು ಮಗಳನ್ನು ನೀಡುವುದಾಗಿ ತಿಳಿಸಿ, ಒಪ್ಪಂದ ಮಾಡಿಕೊಂಡ. ಕಂಪಿಲರಾಯ ಮಗಳ ಪರಾಕ್ರಮಕ್ಕೆ ಮೆಚ್ಚಿ, ಮುತ್ತಿನ ತುರಾಯಿ ಕೊಟ್ಟ. ಹರಿಯಲದೇವಿ ಆರತಿ ಬೆಳಗಿ, ನಿವಾಳಿ ತೆಗೆದಳು. ಎಲ್ಲರೂ ಸೇರಿ ಸಕ್ಕರೆ, ಚಿನಿಪಾಲು, ತುಪ್ಪ, ಮೃಷ್ಟಾನ್ನ, ಕಡಬು, ಕಜ್ಜಾಯ ಊಟ ಮಾಡಿದರು.

ಮರುದಿನ ಮುಂದಾನೆ ಕಂಪಿಲ ಆಸ್ಥಾನವನ್ನಲಂಕರಿಸಿ, ಗುತ್ತಿ ಯುದ್ಧದಲ್ಲಿ ಹೋರಾಡಿದ ಯೋಧರನ್ನು ಕರೆಸಲು ರಾಮಯ್ಯನಿಗೆ ಹೇಳಿದ. ಬಣವೆಯ ಹುಲ್ಲು ಬಸವಗೆ ಕೊಟ್ಟಂತೆ ರಾಮಯ್ಯ ಯೋಧರಿಗೆ ಊಟ ಮಾಡಿಸಿದ. ಬಳಿಕ ಕಾಲಗಗ್ಗರಿ, ತೋಳಬಾಪುರಿ ಮೋಹನ್ಮಾಲೆ, ಚೌಕುಳಿ, ತಿಸರ, ಕಾಲಸರ, ಹೊನ್ನಗಂಟೆ, ಪುಲಿಚರ್ಮ, ಚೌರಿ, ತೊಡರು,  ಬಾಪುರಿಗಳನ್ನು ಕೊಟ್ಟನು. ಊರು ಉಂಬಳಿ, ಉಡಾಸ, ನಾರಂಜಿ, ತೋಪಿ, ಹಗಲು ದೀವಟಿಗೆ, ಜಲ್ಲಿ, ಜಗಜಂಪಿ, ಸತ್ತಿಗೆ ವಸ್ತ್ರ, ಮುತ್ತಿನೊಂಟಿ, ಆಯುಧ, ಆನೆ, ಕುದುರೆ, ಸೇನೆ, ಭಂಡಾರ ಕೊಟ್ಟನು. ಅವರ ಮದುವೆಗೆ ಬೋನಕ್ಕೆ ಗದ್ದೆ-ಹೊಲ ಮಾನ್ಯ ನೀಡಿದನು.

ತೊಡರು, ಬಾಪುರಿ, ನಡುವಿನೊಡ್ಯಾಣ, ಉಡಿದಾರ, ವಂಕುಡಿ ಕೊಟ್ಟನು. ಬಡವರಿಗೆ ಹಣಹೊನ್ನು ನೀಡಿದನು. ಸತ್ತವರ ಮಕ್ಕಳನ್ನು ಕರೆಸಿ, ಮುತ್ತು ಬಂಗಾರ ಕೊಟ್ಟು, ಹೆತ್ತ ತಂದೆಯ ಮರೆಯದಂತೆ ನಡೆದುಕೊಳ್ಳಲು ಹೇಳಿದನು.

ಮಗನ ಶ್ರೇಯಸ್ಸನ್ನು ನೋಡಿ ಕಂಪಿಲ ಹರ್ಷಿತನಾದ. ‘ಕನ್ನೆ ಹುಯ್ಯಲ ಕಡಿದು ಬಂದ ರಾಮಯ್ಯಗೆ ಕನ್ನೆವೆಣ್ಣುಗಳೈದು’ ತಂದು ಮದುವೆಮಾಡಲು ಬೈಚಪ್ಪನೊಡನೆ ಆಲೋಚಿಸಿದ. ಭಾವ ಮಂಚಣ್ಣನ ಮಗಳು (ಕಾಮಕ್ಕ), (ಜಗದಪ್ಪನ ಮಗಳು) ರಾಮಲದೇವಿ, ಮಾವ ಚಾರಮರಾಯನ ಇಬ್ಬರು ಮೊಮ್ಮಕ್ಕಳು (ಸೋಮಾಯಿ, ಭೀಮಾಯಿ), ಬೈಚಪ್ಪನ ಮಗಳು (ತಿಮ್ಮಾಯಿ)- ಹೀಗೆ ಐದು ಜನರನ್ನು ನಿಶ್ಚಯಿಸಿದರು. ‘ಕನ್ಯೆ ಹುಯ್ಯಲ ಕಡಿದು, ಹೆಣ್ಣುಗಳ ಮದಿವ್ಯಾದ ಚೆನ್ನಿಗ ರಾಮಯ್ಯ’ ಎಂಬ ಕೀರ್ತಿ ಪಸರಿಸಿತು.

ಸಂಧಿ:

ಉದಯಕಾಲದಲ್ಲಿ ಕಂಪಿಲರಾಯ ಆಸ್ಥಾನವನ್ನಲಂಕರಿಸಿದ. ಸುರಿತಾಳನ ಮನಸ್ಸನ್ನು ತಿಳಿದುಕೊಳ್ಳಲು ರಹಸ್ಯಭೇದಕರಾದ ‘ಕಳಭಂಟ’ರನ್ನು ಕಳುಹಿಸಿದ. ಅಷ್ಟರಲ್ಲಿ ಗುತ್ತಿಯ ಚರರು ಬಂದು, ಕೊಟ್ಟ ಮಾತಿನಂತೆ ಜಗದಪ್ಪನು ಮಗಳನ್ನು ಕಳಿಸಿಕೊಡಲು ಸಿದ್ಧನಾಗಿರುವ ವಿಷಯ ತಿಳಿಸಿದರು. ಕಂಪಿಲ ಸಮ್ಮತಿಸಿದ. ಚರರು ನುಡಿದ ಸಕ್ಕರೆ ಸವಿಯಂಥ ಸುದ್ಧಿಯಿಂದ ಜಗದಪ್ಪ ಸಂತುಷ್ಟನಾಗಿ, ಮಂತ್ರಿ ತಿಮ್ಮರಸ ಮತ್ತು ಮಗ ಉತ್ತುಂಗರಾಯನೊಂದಿಗೆ ಮಗಳನ್ನು ಕಳಿಸಿದ. ಮಗಳಿಗೆ ಮುತ್ತು, ಬಂಗಾರ, ಬಗೆಬಗೆಯ ಆಭರಣ, ಉಂಬಳಿಯಾಗಿ ಐದೂರು ನೀಡಿದ. ಅಳಿಯನಿಗೆ ಐದು ಕುದುರೆ, ಬಳುವಳಿಯಾಗಿ ಆಕಳ ಹಿಂಡು, ಸೆಳೆಮಂಚ, ಕರೆವ ಎಮ್ಮೆಹಿಂಡು ಕೊಟ್ಟ. ಶೋಭನ ಹಾಡಿನೊಂದಿಗೆ ಸೊಗಸಾದ ದಿಬ್ಬಣ ಹೊರಟಿತು. ನಲವತ್ತು ಜನ ಊಳಿಗದ ಹೆಣ್ಣು ಮಕ್ಕಳ, ಕಳಸ-ಚವರಿ-ಕನ್ನಡಿಯೊಂದಿಗೆ ಹಡಪದ ಸ್ತ್ರೀಯರು ನಡೆದರು. ಮಂತ್ರಿಮನ್ನೆಯರು, ಅರಸು ಮಕ್ಕಳು, ವೇದಪಾಠಕರು, ಜೋಯಿಸರು, ವಿದ್ವಾಂಸರು, ಹಿರಿಯರು, ಸಾವಿರ ಕುದುರೆ ಸವಾರರು ಜೊತೆಗೂಡಿದರು.

ಬೀಗರು ಬರುವ ಸುದ್ದಿ ಕುಮ್ಮಟಕ್ಕೆ ತಲುಪಿತು. ಕಾಟಣ್ಣನು ಹಂಪರಾಜ, ಕಂಪರಾಜ, ಸಂಗಮದೇವ ಮೊದಲಾದ ದೊರೆ ಮಕ್ಕಳೊಂದಿಗೆ ಬೀಗರನ್ನು ಎದುರುಗೊಳ್ಳಲು ಹೋದನು. ಉತ್ತುಂಗರಾಯ ಆನೆಯ ಮೇಲೆ, ಮುತ್ತಿನ ಸತ್ತಿಗೆ ಕೆಳಗೆ, ಶೊಭಿಸುತ್ತ ಬಂದನು. ಕನ್ನೆ ನಗಾರಿ, ಚಿನ್ನಗಾಳೆ, ಪಲ್ಲಕ್ಕಿ ಸಾಲುಗಳಲ್ಲಿ ರಾಮಲದೇವಿ ಬಂದಳು.

ಶೃಂಗಾರವನಕ್ಕೆ ರಾಮನನ್ನು ಕರೆದುಕೊಂಡು ಬಂದರು. ಕಂಪಿಲನೂ ಅಲ್ಲಿಗೆ ಬಂದ. ಅಲ್ಲಿ ಉತ್ತುಂಗರಾಯ ಮೊದಲಾದ ಬೀಗರನ್ನು ಸ್ವಾಗತಿಸಿ, ಬಿಡದಿಯ ಮನೆಗೆ ಅವರೆಲ್ಲರನ್ನು ಕರೆತಂದರು. ಬಾಗಿಲಲ್ಲಿ ಎರಡು ಕುರಿ ಕಡಿದು ನಿವಾಳಿ ತೆಗೆದರು. ರಾಮಯ್ಯನಿಗಾಗಿ ತಂದ ಉಡುಗೊರೆಯನ್ನು ಕಂಪಿಲನಿಗೆ ವಿವರಿಸಿದರು. ರಾಮಕ್ಕ ಮಾವನಿಗೆ ವಂದಿಸಿದಳು. ಮಾಘ ಶುದ್ಧ ತದಿಗೆಯ ಗುರುವಾರ ಅಮೃತಸಿದ್ಧಿಯೋಗ, ಸೂರ್ಯೋದಯ ಹತ್ತುಗಳಿಗೆಗೆ ಜೋಯಿಸರು ಮುಹೂರ್ತ ತೆಗೆದುಕೊಟ್ಟರು. ಅಂದಿನಿಂದ ಐದು ದಿನ ಪ್ರಶಸ್ತವೆಂದು ಹೇಳಿದರು. ರಾಮಕ್ಕ ಮದಲಗಿತ್ತಿಯಾಗಿ, ರಾಂಯ್ಯ ಮದಲಿಂಗನಾಗಿ ಶೋಭಿಸಿದರು.

ಕಂಪಿಲರಾಯ ಬೈಚಪ್ಪರು ಮಂಚಣ್ಣನ ಮನೆಗೆ ಬಂದು, ಮಗಳು ಕಾಮಕ್ಕನನ್ನು ವಧುವಾಗಿ ಕೊಡಲು ಕೇಳಿದರು. “ಬಡವರ ಮಗಳು ರಾಜರಿಗೆ ಉಚಿತವೇ?” ಎಂದು ಮಂಚಣ್ಣ ನುಡಿದು, ಒಪ್ಪಿಕೊಂಡರು. ಅಲ್ಲಿಂದ ಆರೆಯ ಚಾರಮರಾಯನ ಮನೆಗೆ ಹೋದರು. ‘ನೀವು ನಮಗೆಲ್ಲ ಹಿರಿಯರು. ನಿಮ್ಮ ಇಬ್ಬರು ಮೊಮ್ಮಕ್ಕಳನ್ನು ರಾಮನಿಗೆ ಕೊಡಬೇಕು’ ಎಂದು ಬೈಚಪ್ಪ ಬಿನ್ನವಿಸಿದ. ‘ಜಾತಿ ಬೇಧಗಳುಂಟು ನಮಗೂ ನಿಮಗೂ’ ಎಂದು ಚಾರಮರಾಯ ನುಡಿದ. ‘ರಾಮ, ನಿಮ್ಮ ಮಗಳು ಹರಿಯಲದೇವಿಯ ಮಗನಲ್ಲವೆ?’ ಎಂದು ಬೈಚಪ್ಪ ನುಡಿಯುತ್ತಲೇ, ಚಾಮರಾಯ ತನ್ನ ಮಕ್ಕಳಾದ ವೆಂಕಟರಾಯ, ಮಧೂಸೂದನರಾಯರ ಅಭಿಪ್ರಾಯ ಕೇಳಿದ. ಅವರೂ ಒಪ್ಪಿದರು.

ಕನ್ಯೆಗಳನ್ನು ಕರೆತರಲು ಕಂಪಿಲ ಪಲ್ಲಕ್ಕಿ ಕಳಿಸಿದ. ಅಕ್ಕ ಮಾರಮ್ಮ-ಸಿಂಗಮ್ಮ ರಾಮಯ್ಯನಲ್ಲಿಗೆ ಬಂದರು. ಅರಿಷಿಣ-ಎಣ್ಣೆ-ಶ್ರೀಗಂಧ ಲೇಪಿಸಿ, ಜಾಜಿಯ ಪೂಮಾಲೆ ತೊಡಿಸಿದರು. ಬಳಿಕ ಎಣ್ಣೆ ಮಜ್ಜನ ಮಾಡಿಸಿ, ಉಡುಗೊರೆ ಕೊಟ್ಟು ಅರಿಷಿಣ ಕಾರ್ಯ ಪೂರೈಸಿದರು. ಹರಿಯಮ್ಮ ಕರ್ಪೂರದಾರತಿ ಬೆಳಗಿಸಿ, ಶಾಶೆಯಿಡಿಸಿ, ಪಲ್ಲಕ್ಕಿ ಏರಿ, ಮಂತ್ರಿ ಬೈಚಪ್ಪನ ಮನೆಗೆ ನಡೆದಳು. ಅವನ ಮಗಳು ತಿಮ್ಮಾಯಿಯನ್ನು ಮಗನಿಗೆ ಬೇಡಿ ಪಡೆದಳು. ಮಂಚಣ್ಣನ ಮನೆಗೆ ಹೋಗಿ, ಕನ್ನೆಗೆ ಎಣ್ಣೆ ಅರಿಷಿಣ ನೀಡಿ, ತಂದೆ ಚಾರಮರಾಯನ ಮನೆಗೆ ಬಂದಳು. ಅವನ ಮೊಮ್ಮಕ್ಕಳು ಸೋಮಾಯಿ ಭೀಮಾಯಿಗಳನ್ನು ಪ್ರೀತಿಯಿಂದ ಮಾತನಾಡಿಸಿ, ರಾಮಕ್ಕನಲ್ಲಿಗೆ ಬಂದು, ಉಡುಗೊರೆ ನೀಡಿ, ಅರಮನೆಗೆ ಮರಳಿದಳು.

ಹಂದರ ಹಾಲಗಂಬ ಹಾಕಿದರು. ಜೋಯಿಸರು, ಬ್ರಾಹ್ಮಣರು, ಅವಧಾನಿಗಳು ಆಗಮಿಸಿದರು. ಅಮೃತಸಿದ್ಧಿಯೋಗ ಸಮೀಪ ಬರುತ್ತಲೇ ಊರೊಳಗಿನ ಮಂತ್ರಿ, ಅರಸುಮಕ್ಕಳು, ಮನ್ನೆಯ ಮಾಂಡಲಿಕರನ್ನು ಕರೆಸಿದರು. ಶೆಟ್ಟಿ ವರ್ತಕರು ಪಟ್ಟಣವನ್ನು ಶೃಂಗರಿಸಿದರು. ಹಟ್ಟಿಕಾರರು, ಹಳ್ಳಿಕಾರರು, ಕರಣಿಕರು ಬಂದರು. ನೌಬತ್ತು, ನಗಾರಿ, ಸಾನಾಯಿ, ಮೃದಂಗ, ಡಿಂಡಿಮ, ಚಿನ್ಗಾಳೆ ಧ್ವನಿ ಮೊಳಗಿತು. ರಾವುತ ರಾಣೆಯರು, ಗುರಿಕಾರರು, ಎಕ್ಕಟಿಗರು ಆಗಮಿಸಿದರು.

ನಮ್ಮೆಲ್ಲರಿಗೆ ಹಿರಿಯ ಚಾರಮರಾಯ. ಅವನನ್ನು ಕರೆತರಬೇಕೆಂದು ಕಂಪಿಲರಾಯ ಕಾಟನಿಗೆ ಹೇಳಿದ. ಪಲ್ಲಕ್ಕಿ, ಕುದುರೆಯೊಂದಿಗೆ ಕರೆಯಲು ಹೋದನು. ಚಾರಮರಾಯ ಮೊಮ್ಮಕ್ಕಳೊಡನೆ ಬಂದನು. ಮಂಚಣ್ಣ, ಬೈಚಪ್ಪರ ಮನೆಗೂ ಕಾಟಣ್ಣನನ್ನು ಕಳಿಸಿದನು. ಅವರೂ ವಧುಗಳೊಂದಿಗೆ ಬಂದರು. ಕಾಟಣ್ಣ ರಾಮಕ್ಕನನ್ನು ಕರೆಯಲು ಮುತ್ತಿನ ಅಂದಣ, ಪಲ್ಲಕ್ಕಿ, ಕರಿಯ ಕುದುರೆ, ಸತ್ತಿಗೆ, ಸಕಲ ವಾದ್ಯಗಳೊಂದಿಗೆ ಹೋದನು. ರಾಮಕ್ಕ ಅಂದಣವನ್ನೇರಿದಳು. ಮಂದಗಮನೆಯವರು ಶೋಭನ ಹಾಡುತ್ತ ಹಿಂಬಾಲಿಸಿದರು. ಜೊತೆಗೆ ಉತ್ತುಂಗರಾಯನೂ ಬಂದನು. ಹರಿಯಲದೇವಿ ಮದುವೆಗೆ ಬಂದ ಎಲ್ಲ ಮಹಿಳೆಯರನ್ನು ಮನ್ನಿಸಿ ಕುಳ್ಳಿರಿಸಿದಳು, ಐದು ಜನ ಕನ್ಯೆಯರ ಕೈಯಲ್ಲಿ, ಅಕ್ಷತೆ ಕೊಟ್ಟರು. ಐವರೂ ರಾಮಯ್ಯನ ಮಂಡೆಯ ಮೇಲೆ, ರಾಮಯ್ಯ ಐವರ ಮಂಡೆಯ ಮೇಲೆ ಪರಸ್ಪರ ಅಕ್ಷತೆ ಹಾಕಿದರು. ಐವರೂ ಹೂಮಾಲೆ ಹಾಕಿ ರಾಮಯ್ಯನಿಗೆ ಆರತಿ ಎತ್ತಿದರು. ಕಂಪಿಲ ಸೊಸೆಯಂದಿರಿಗೆ ಆಭರಣವನ್ನಿತ್ತನು. ಮಗನಿಗೆ ಒಂದೊಂದು ಬಿರುದಿಗೂ ಒಂದೊಂದು ಆಭರಣ ಕೊಟ್ಟನು. ಬಂದ ಬೀಗರಿಗೆ ಉಡುಗೊರೆ, ವೀಳ್ಯ ಕೊಡಲಾಯಿತು. ಮನೆತುಂಬಿಸುವ ಕಾಯ್ಯ ನೆರವೇರಿಸಿದರು. ಮನ್ನೆಯರು ಖಾನ ವಜೀರರು ಶೆಟ್ಟಿ ಮಹಾನಾಡುಗಳು ರಾಮಯ್ಯನಿಗೆ ಉಡುಗೊರೆ ನೀಡಿದರು.

ರಾಮಯ್ಯನಿಗೆ ಗುತ್ತಿಯ ಉತ್ತುಂಗರಾಯ ಮುತ್ತಿನ ತುರಾಯಿಯನ್ನು, ಚಾರಮರಾಯ ಆರು ರತ್ನ ಹಾರವನ್ನು ನೀಡಿದರು. ಬೈಚಪ್ಪ ಮಗಳಿಗೆ ಸಂಚಿಯ ತುಂಬ ಹೊನ್ನ, ಪಂಚವಣ್ಣಿಗೆ ಐಸಾಲೆ ಉಡುಗೊರೆ, ಕೈಬಳೆ, ಮುರುಡಿ ಸರಪಳಿ ಕೊಟ್ಟನು. ಮಂಚಣ್ಣ ಮಗಳಿಗೆ, ಅಳಿಯನಿಗೆ ಪಂಚವಣ್ಣಿಗೆ ಉಡುಗೊರೆ ನೀಡಿದನು.

ಸಣ್ಣ ಗಂಬಳಿಹಾಸಿ ಮುತ್ತಿನ ಹಸೆ ಬರೆದರು. ಮಾರಮ್ಮ ಸಿಂಗಮ್ಮ ಅಣ್ಣನನ್ನು ಕರೆದುಕೊಂಡು ಬಂದು, ಅರಿಷಿಣ ಎಣ್ಣೆ ಹಚ್ಚಿದರು. ಊಟಕ್ಕಾಗಿ ಎಲ್ಲರೂ ಸಾಲು ಸಾಲಾಗಿ ಕುಳಿತರು.

ಬಾಲೆ ವೆಣ್ಣುಗಳು ಕಾಯಿ ಸೊಪ್ಪು ಬಡಿಸಿದರು. ಹಾಲಗುಂಬಳಕಾಯಿ, ಸಕ್ಕರೆಗುಂಬಳಕಾಯಿ, ಚಿಣಿಯ ಕಾಯಿ, ಹಾಗಲ, ಹೀರೆಕಾಯಿ, ಕೋಗುಲೆ ಸೆಂಬೆಯಕಾಯಿ, ಪಡುವಲಕಾಯಿ, ಬದನೆಕಾಯಿ, ಬಿಳಿಯ ಚೆಳ್ಳವರೆಕಾಯಿ, ಬಾಳೆಕಾಯಿ, ಹಲಸಿನಕಾಯಿ, ಗೆಣಸು, ಹರಲೆಸೊಪ್ಪು, ಬಸಲೆಸೊಪ್ಪು, ಮೆಂತೆಸೊಪ್ಪು, ಪರಮಾನ್ನ, ಮಾಲದಿ, ಶಾವಿಗೆ, ಬಟ್ಟುವೆ, ಪರಡಿ, ತಾಲಿ, ಹಾಲಿನ ಪರಮಾನ್ನ, ಹೂರಿಗೆ, ಗಾರಿಗೆ, ಹೋಳಿಗೆ, ಒಡೆ, ಬೀಸುಹೂರಿಗೆ, ಎಣ್ಣೆ ಮಂಡಲಿ, ಚಕ್ಕುಲಿ, ಸೂಸಲ, ಮಂಡಿಗೆ, ಕಡಬು, ದೋಸೆ, ಸಕ್ಕರೆ ಮಂಡಿಗೆ, ತೊಗರಿತೋವೆ, ಅಲಸಂದಿ ತೋವೆ, ಕಡಲೆಯ ತೋವೆ, ಸಣ್ಣಗೆಂಬತ್ತಿಗೆ, ಸರಮುತ್ತಿನಕ್ಕಿಯ ಚಿನ್ನದಾರಿ, ಚೊಕ್ಕಟಿ, ಅರಸರದಾನಿ, ರಾಜಾನ್ನ, ತೊಗರಿ ಕಟ್ಟು, ಕಡಲೆಯ ಕಟ್ಟು, ಹುರುಳಿ ಕಟ್ಟಿನಾಂಬ್ರ, ಮಜ್ಜಿಗೆಸಾರು, ಹುಳಿಸಾರು, ಆಕಳತುಪ್ಪ, ಎಮ್ಮೆಯ ತುಪ್ಪ, ಕುರಿಯ ತುಪ್ಪ, ಮೇಕೆಯ ತುಪ್ಪ, ಜೇನತುಪ್ಪ, ಕಚ್ಚಡಿ, ಹಿಂಡಿ, ಹುಳಿಗಾಳು, ಉಪ್ಪಿನಕಾಯಿ, ಮಾವಿನಹಿಂಡಿ, ನೆಲ್ಲಿಯ ಚಟ್ಟು, ಹಲಸಿನ ಹಣ್ಣು, ಮಾವಿನ ಹಣ್ಣು, ರಸದಾಳಿ, ಬಾಳೆಯಹಣ್ಣು ಬಡಿಸಿದರು. ಎಲ್ಲರೂ ಉಂಟು ಕೈತೊಳೆದರು. ಕಾಟಣ್ಣ ಎಲ್ಲರಿಗೂ ವೀಳ್ಯ ನೀಡಿದರು.

ಮದುಮಕ್ಕಳಿಗೆ ಹಸೆಯ ಮೇಲೆ ಕುಳ್ಳರಿಸಿ, ಮಲ್ಲಿಗೆ ಮುಡಿಸಿ, ಅರಿಷಿನೆಣ್ಣೆಯ ನೆರವೇರಿಸಿ ಕೊನೆಯ ದಿನ ನಾಗೋಲೆ ಮಾಡಿದರು. ಓಕುಳಿಯಾಡಿದರು. ಕಾಟಣ್ಣ ಬೀಗರನ್ನು ಗ್ರಾಮದ ವರೆಗೆ ಬೀಳ್ಕೊಟ್ಟು ಬಂದನು.

 

ಸಂಧಿ:

ಕುಮಾರರಾಮ ಗೆದ್ದು ತಂದ ಕುದುರೆಗಳನ್ನು, ಕಂಪಿಲರಾಯ ತನ್ನ ಐದು ಜನ ಮಕ್ಕಳಿಗೆ ಕೊಟ್ಟನು. ಸಿಟ್ಟಿಗೆದ್ದ ರಾಮ ಐವರನ್ನೂ ಗಾಸಿಗೊಳಿಸಿದ. ಅವರು ತಂದೆಗೆ ಚಾಡಿ ಹೇಳಿದರು. ಕಂಪಿಲ ರಾಮಯ್ಯನನ್ನು ಕರೆಯಿಸಿ ‘ನಿನ್ನಲ್ಲಿ ಸಾಮರ್ಥ್ಯವಿದ್ದರೆ ಓರುಗಲ್ಲ ರುದ್ರನ ಮಗ ಎಪ್ಪತ್ತಿರಾಜನ ಕುದುರೆ ಬೊಲ್ಲನನ್ನು ಗೆದ್ದು ತಾ’ ಎಂದು ಮೊದಲಿಸಿದ, ಭೇರಿ, ಮೃದಂಗ, ಕೈತಾಳ, ಕಾಳೆ, ಕೊಂಬು, ಢಮಾಮಿ ವಾದ್ಯಗಳೊಂದಿಗೆ ರಾಮ ಓರಗಲ್ಲಿಗೆ ಸನ್ನದ್ಧನಾದ. ತಾಯಿ ಹರಿಯಲದೇವಿ ಆರತಿ ಎತ್ತಿದಳು. ಮನ್ನೆಯರೊಂದಿಗೆ ರಾಮಯ್ಯ ಪ್ರಯಾಣ ಬೆಳೆಸಿದ.

ಎಕ್ಕಟಿಗ ಸಿಂಗ, ಮೀನಿಗರ ಲಕ್ಕ, ಚಿಕ್ಕ ತಮ್ಮುಗ, ಗುಜ್ಜಲೋಬ, ರಕ್ಕಸ ಮಾದ, ಕರವೂರ ತಿಪ್ಪ, ಬೊಕ್ಕ ಬೋಳುಗ, ಓಬುಗ-ಹೀಗೆ ೭೨ ಮನ್ನೆಯರು ಶಿವದೇವಾಲಯದ ಎದುರು ಸೇರಿದರು. ಕುಮ್ಮಟದಿಂದ ಪ್ರಯಾಣ ಬೆಳೆಸಿ, ಕಂಪಲಿಗೆ ಬಂದು ಸೋಮಯ್ಯನಿಗೆ ವಂದಿಸಿ, ಎಮ್ಮಿಗನೂರು ದಾಟಿದರು. ಬಳಿಕ ಹೊಸಮಲೆಯಿಂದ ದೊಡ್ಡ ಬಸವನ ಕುರುಗೋಡು ಮಾರ್ಗವಾಗಿ ಕರಡಿಕಲ್ಲು ಹತ್ತಿರ ಹೊಳೆದಾಟಿ, ಯಾದವಗಿರಿಗೆ ಬಂದರು. ಮಜ್ಜನ, ಊಟ, ನಿದ್ರೆ ಮುಗಿಸಿ ಆದವನ್ನಿ, ರೊಳ್ಳಿ, ಗೊನಗೆಂದಿ ಮೂಲಕ ಕಲ್ಲೂರಿಗೆ ಬಂದರು. ತುಂಗಭದ್ರೆಯನ್ನು ದಾಟಿ ಉದ್ಯಾವಾರಣ್ಯಕ್ಕೆ, ಅಲ್ಲಿಂದ ಸಿದ್ಧವಟ್ಟಕ್ಕೆ, ಅಲ್ಲಿಂದ ಉದ್ದಗಿರಿಗೆ ಆಗಮಿಸಿದರು. ಇನಗೊಂಡೆ, ಶರಣಪುರ, ಇಂದ್ರಕೀಲ ದಾಟಿ, ಆಂಧ್ರಪ್ರದೇಶ ಸೀಮೆಗೆ ಬಂದು, ಅಲ್ಲಿಂದ ಲಾಳದೇಶ ಪ್ರವೇಶಿಸಿದರು.

ಒಳ್ಳೆಯ ದಿನ ಶುಭಲಗ್ನದಲ್ಲಿ ಹಗಲು ಹುಟ್ಟಿದ್ದ ಕುದುರೆ ಬೊಲ್ಲನನ್ನು ಮುಂಗುಲಿರಾಯನಿಂದ ಲಕ್ಷ ಹಣಕೊಟ್ಟು ಎಪ್ಪತ್ತಿರಾಜ ಖರೀದಿಸಿದ್ದ. ನೆಲಮಾಳಿಗೆಯಲ್ಲಿಟ್ಟು ಉಕ್ಕಿನ ಕಡಲೆ ಮೇಯಿಸುತ್ತಿದ್ದ. ಈ ಕುದುರೆ ತರಲು ಹೊರಟಿದ್ದ ಕುಮಾರರಾಮ ಇಂದ್ರಕೀಲದಿಂದ ರಹುದ್ರೇಕಪುರಕ್ಕೆ, ಆಮೇಲೆ ಕಂದರ, ಮಾಳ, ಕರಾಳ ದೇಶಗಳಿಗೆ, ಮಾದ್ರಿಗಿರಿಗೆ ಬಂದನು. ಅಲ್ಲಿಂದ ರುದ್ರನಗಿರಿ, ಮೈಲಾಪುರ, ಧರ್ಮಾವತಿ ಮಾರ್ಗವಾಗಿ ನಲ್ಲೂರಪುರ, ಉದ್ದುರಪುರಗಳಿಗೆ ಬಂದು, ಅಲ್ಲಿಯ ಶರಣರ ಮಠ ಸೇರಿ, ‘ಬೊಲ್ಲ ಕೈ ಸೇರಿದರೆ ಶೂಲದ ಹಬ್ಬ ಮಾಡಿಸುವೆ’ ಎಂದು ಅಲ್ಲಿಯ ಗುಂಡ ಬ್ರಹ್ಮಯ್ಯದೇವರಿಗೆ ಹರಕೆ ಹೊತ್ತನು. ಅಲ್ಲಿಂದ ಮುಂದೆ ಬರುವಷ್ಟರಲ್ಲಿ ಓರುಗಲ್ಲ ಪಟ್ಟಣಶೆಟ್ಟಿ ದೇವಿಶೆಟ್ಟಿಲಿಂಗನ ಭೇಟಿಯಾಯಿತು, ಇಬ್ಬರೂ ಸ್ನೇಹಿತರಾದರು. ರಾಮ ತನ್ನ ಆಗಮನದ ಉದ್ದೇಶ ಹೇಳಿದ. ಸಹಕರಿಸುವುದಾಗಿ ಲಿಂಗ ಸಮ್ಮತಿಸಿದ. ತಂದೆಯೊಡನೆ ಮುನಿದು ಕುಮಾರರಾಮ ಬಂದುದನ್ನು ಕೇಳಿ, ಪ್ರತಾಪರುದ್ರ ಓಲಗಕ್ಕೂ ಬರಲು ತಿಳಿಸಿದ. ರಾಮನು ಲಿಂಗನೊಡನೆ ಪ್ರತಾಪರುದ್ರನ ಓಲಗಕ್ಕೆ ಹೊರಟ. ಓರುಗಲ್ಲ ಸ್ತ್ರೀಯರು ಇವರ ರೂಪಕ್ಕೆ ಸೋತು ಹೋದರು. ಎತ್ತಿದ ಮಕ್ಕಳ ಕೆಳೆಯಕೆ ಬಿಟ್ಟರು. ನೆತ್ತಿಯ ಕೊಡಗಳ ಬಿಟ್ಟು ಕೈಮರೆದರು. ಹಡೆದ ತಾಯಂದಿರು ಮಗನನ್ನು ನೋಡುತ್ತಲಿರುವರೆಂದು ಭಾವಿಸುತ್ತ, ರಾಂಯ್ಯ ಮುನ್ನಡೆದ. ಹುಳಿಯೇರ (ಗಳಿಯಾರ?) ಬಾಗಿಲ ದಾಟಿ ಆಸ್ಥಾನ ಪ್ರವೇಶಿಸಿದ. ಎಡ ಬಲದಲ್ಲಿ ರಾಜರು, ರಾಜಕುಮಾರರು, ಮಂತ್ರಿ, ರಾಹುತರು ತುಂಬಿದ್ದರು. ಕುಮಾರರಾಮ ರುದ್ರರಾಜನಿಗೆ ಕಾಣಿಗೆ ಸಲ್ಲಿಸಿ, ನಮಸ್ಕರಿಸಿದ. ಅವನೂ ಉಡುಗೊರೆ ನೀಡಿದ. ಸಭೆಯಿಂದ ರಾಮ ನಿರ್ಗಮಿಸುತ್ತಲೇ ಅವನ ಭಟ್ಟರು ‘ಮಣಿವ ರಾಯರ ಗಂಡ, ಮಲೆವ ರಾಯರ ಗಂಡ, ನರಪತಿ-ಗಜಪತಿ-ಅಶ್ವಪತಿಗಳೆಂಬ ಅರಸುಗಳಿಗೆ ಗಂಡ’ ಎಂದು ಬಿರುದು ಘೋಷಿಸಿದರು. ಇದನ್ನು ಕೇಳಿ ರುದ್ರ ರಾಲರುದ್ರನಾದ. ಲಿಂಗನನ್ನು ಆಸ್ಥಾನಕ್ಕೆ ಕರೆಸಿ, ‘ಇಂಥವನನ್ನು ಕರೆದುಕೊಂಡು ಬಂದುದು ಸರಿಯಲ್ಲ’ ವೆಂದು ಅಬ್ಬರಿಸಿದ. ಲಿಂಗ ರಾಮನಿಗೆ ವಿವರ ಹೇಳಿದ. ರುದ್ರನನ್ನು ಎದುರಿಸಲು ಇಬ್ಬರೂ ಒಟ್ಟಾದರು. ರಾಜಧಾನಿಯಲ್ಲಿ ಇರಲು ತನಗೆ ಇನ್ನು ಸಾಧ್ಯವಿಲ್ಲವೆನಿಸಿ, ಲಿಂಗ ತನ್ನ ಮೇಲುಪ್ಪರಿಗೆ, ಚಾವಡಿ, ಪಟ್ಟಾವಳಿ, ಬತ್ತದ ಕಣಜ, ಸುಡಿಸಿದ. ಹೆಣ್ಣು ಮಕ್ಕಳಿಗೆ ಕಾಲ ಕುಪ್ಪಸಕೊಟ್ಟು ಕರೆದುಕೊಂಡು ರಾಮನೊಂದಿಗೆ ಹೊರಹೊರಟ.

ಇದನ್ನು ಕೇಳಿ ರುದ್ರ ಸೈನ್ಯ ಕಳಿಸಿದ. ಯುದ್ಧ ಏರ್ಪಟ್ಟಿತು. ರಾಮಯ್ಯ, ಲಿಂಗ, ಕಾಟಣ್ಣರನ್ನು ಎದುರಿಸದೆ ರುದ್ರನ ದಂಡ ಸೋತಿತು. ರುದ್ರನ ಮಗ ಎಪ್ಪತಿರಾಜ ಯುದ್ಧಕ್ಕೆ ಸಿದ್ಧನಾದ. ಮಲ್ಲಯ್ಯ ಸಾಹಣಿ ತಂದು ನಿಲ್ಲಿಸಿದ ಬೊಲ್ಲನನ್ನು ಹೂವು ಗಂಧಗಳಿಂದ ಪೂಜಿಸಿದರು. ಹಕ್ಕರಿಗೆ ಜೋಡು, ಹೊಕ್ಕುಳ ಗಂಟೆ, ಎಡಬಲದಲ್ಲಿ ಬಿಲ್ಲು, ಅಂಬು, ಸಿಂಗಾಡಿ, ಪಕ್ಕದಲ್ಲಿ ರಂಚಿಕೆ, ಕಡಿವಾಣ, ಉಕ್ಕಿನ ಜಲ್ಲೆಯ, ವಂಕಿ, ಕೈಯಂಬು, ಬಿರುದುಗಳಿಂದ ಬೊಲ್ಲನನ್ನು ಸಜ್ಜುಗೊಳಿಸಿದರು. ಎಪ್ಪತ್ತಿರಾಜ ಮೈಜೋಡು ತೊಟ್ಟು, ತಲೆಗೆ ಠೌಳಿ ಧರಿಸಿದ, ವೀರಜಡೆ ಹೆಣಸಿ ಕುದುರೆ ಏರಿದ, ತುಡುಮು, ತಮ್ಮಟೆ, ಭೇಡಿ, ಗಿಡಿಬಿಡಿ, ನಿಸ್ಸಾಳ, ಚಿನ್ನಗಹಳೆ, ಬುರುಗು, ನೌಬತ್ತು ಮೊಳಗಿದವು. ರಾಮ ನೀಲನನ್ನೇರಿ ಎದುರಿಸಿದನು. ನಿಕರ ಕಾಳಗ ಏರ್ಪಟ್ಟಿತು. ತಪ್ಪತ್ತಿರಾಜ ಕೆಳಗೆ ಬೀಳುತ್ತಲೇ ಬೊಲ್ಲ ಕುಮಾರರಾಮನಿಗೆ ಬೆನ್ನುಕೊಟ್ಟಿತು. ಅವನು ಕುದುರೆಯನ್ನು ಕೋಟೆ ಗೋಡೆಯಿಂದ ನೆಗೆಸಿದ ಭರದಲ್ಲಿ, ಅದರ ಎದೆಯ ಚರ್ಮದ ಬಾರ ಹರಿದು ಹೋಯಿತು. ತಕ್ಷಣ ಮಾದಿಗ ಹಂಪ ತನ್ನ ಒಳದೊಡೆ ಚರ್ಮ ತೆಗೆದು, ಎದೆ ಬಾರವನ್ನು ಹೊಂದಿಸಿದ. ಬಳಿಕ ಏರಿಬಂದ ಪ್ರತಾಪರುದ್ರನೂ ಸೋತು ಹೋದ. ನೀಲನನ್ನೇರಿ ರಾಮಯ್ಯ ಕುಮ್ಮಟಕ್ಕೆ ಹಿಂದಿರುಗಿದ. ದಾರಿಯಲ್ಲಿ ನೆಲ್ಲೂರಿಗೆ ಬಂದು, ವೀರಶರಣರ ದ್ವಾರವಾಟಕ್ಕೆ ಆಗಮಿಸಿದ. ಮಧ್ಯದಲ್ಲಿ ಬೊಲ್ಲನನ್ನು ಬಿಡಿಸಿಕೊಳ್ಳಲು ಬಾಬಾಜಿ ಏರಿಬಂದು, ಸೋತು ಹಿಂದಿರುಗಿದ. ಕೊಳ್ಳಿಯ ನಾಗಣ್ಣ, ಗುಜ್ಜಲ ಓಬ, ಚಿಗತಮ್ಮ, ಚುನುಮಾದ, ಕೋಟಿಗರ ದ್ಯಾವ, ಮರುಳೆ ಪಾಪಯ್ಯ, ಬೂಟಕ ಬೊಮ್ಮ ರಾಮನಿಗೆ ಈ ಯುದ್ಧದಲ್ಲಿ ನೆರವಾದರು. ದಾರಿಯಲ್ಲಿ ಕಾಶ್ಮೀರರಾಜ ಬೊಲ್ಲನನ್ನು ಬಿಡಿಸಿಕೊಳ್ಳಲು ಹೋರಾಡಿ ಸೋತುಹೋದನು. ರಾಮನ ಪರಿವಾರ ಸಿದ್ಧವಟದಲ್ಲಿ ತಂಗಿ, ರಟ್ಟಿನ ಹೊಳೆ ದಾಟಿ, ಯಾದವಗಿರಿ ದುಗ್ಗ, ಆದವನ್ನಿ, ಕುರುಗೋಡು ಮಾರ್ಗವಾಗಿ ಕಂಪಲಿಗೆ ಬಂದು ಸೋಮೇಶ್ವರನಿಗೆ ಪೂಜೆ ಸಲ್ಲಿಸಿತು. ಅಲ್ಲಿಗೆ ಬಂದ ಕಂಪಿಲರಾಯನಿಗೆ ವಂದಿಸಿ, ಲಿಂಗ, ಮಾದಿಗರ ಹಂಪ ನೀಡಿದ ನೆರವನ್ನು ರಾಮಯ್ಯ ವಿವರಿಸಿದ. ಇವರಿಬ್ಬರನ್ನೂ ಉಡುಗೊರೆಯಿಂದ ಸನ್ಮಾನಿಸಿದ. ಬಳಿಕ ಹೊಸಮಲೆಗೆ ಬರಲು, ಹರಿಯಲದೇವಿ ಆರತಿ ಎತ್ತಿದಳು. ಮಿಕ್ಕ ಪರಿವಾರದವರೂ ಎದುರುಗೊಂಡರು. ರಾಮಯ್ಯ ಅರಮನೆಗೆ ನಡೆದ.

ಸಂಧಿ:

ಹೊಯ್ಸಳ ಪಾಳೆಗಾರನಾದ ಹುಳಿಯಾರ ಮಾರಭೂಪಾಲನು ರಾಮನೊಡನೆ ಕಾಳಗ ಮಾಡಲು ಹವಣಿಸಿದನು. ಇದನ್ನು ಕೇಳಿದ ರಾಮಯ್ಯ ‘ಹುಳಿಯಾರ ಮಾಡಿಗೊಂಡನ ಗಂಡ’ ಎಂಬ ಪದಕ ಧರಿಸಿ ಹೊರಟು, ಗಂಡಿಬಾಗಿಲ ಮುಂದೆ ದಂಡು ಸಂಗ್ರಹಿಸಿ, ಉಜ್ಜುಣಿ ಬಯಲಿಗೆ ಬಂದನು. ಬಳಿಕ ಕೊಡಲಿಗೆ, ಕಣಜದ ಹಳ್ಳಿ, ಮರಿವುಂಟ್ಲ, ಬೂದಿಹಾಳ ಬಾಗೂರ ಕಟ್ಟೆಯ ನಾಯ್ಕ, ಗೋವಿಂದ, ಸಣ್ಣಕ್ಕಿ ಬಾಗೂರನಾಳುವ ನಾಯಕರನ್ನು ಒಳಗು ಮಾಡಿಕೊಂಡು ಯುದ್ಧಕ್ಕೆ ಸಿದ್ಧನಾದನು. ಅಸಗೋಡ ನಾಯಕ, ಬಾಗೂರ ಓಬಯ್ಯ, ಬಾಗೂರ ತಿಪ್ಪ, ಹುಳಿಯೇರ ನಂದರಾಯನಪಾಲ, ರಾಯಿಪಾಲ, ಮನ್ನೂಲ ಮಾರ, ಕಂಪಿಲಿಯ ಸೋಮುಗ, ಹೊನ್ನೂರ ಇರುಪಯ್ಯ, ಸೋಮುಗ, ನಡಗೂರ ಬಸವ, ಬಸವಾಪುರ ಬೊಮ್ಮಲಿಂಗ, ಕಾದಲೆ ಗಿರಿಯ, ಮುರುಡಿಯ ಚೆನ್ನಸೋಮ, ಮನ್ನೂಲ ಮಾಚ, ಕನ್ನ, ಬೂಟಕ ಚಿನ್ನ, ಮರುಳೆಯ ಪಾಪಯ್ಯ, ಮೀನಿಗರ ಲಕ್ಕ, ಮುದ್ದು ಬಸವಯ್ಯ ಸ್ಪರ್ಧೆಯಿಂದ ವೀಳ್ಯ ಹಿಡಿದರು. ಯುದ್ಧ ಆರಂಭವಾಯಿತು. ಮಾರಭೂಪಾಲನ ಸೈನ್ಯ ಮುರಿಯಿತು. ಅವನು ಮತ್ತೆ ಕಟ್ಟಿ ನಿಲ್ಲಿಸಿಯೂ ಸೋತುಹೋದ. ಮಂತ್ರಿ ಕಲ್ಲರಸನ ಮುಖಾಂತರ ಬಿಂದಿಗೆ ಹೊನ್ನ, ಐದೂರು, ಅರಗಿಳಿ ಕೊಟ್ಟು ಸಂಧಿ ಮಾಡಿಕೊಂಡ. ರಾಮಯ್ಯ ಕಣಗಿನಹಳ್ಳಿ ಮಾರ್ಗವಾಗಿ ಮರಳಿದ. ಮಗನನ್ನು ಮಧ್ಯ ಮಾರ್ಗದಲ್ಲಿಯೇ ಕಂಪಿಲ ಎದುರಗೊಂಡ. ಹರಿಯಮ್ಮ, ಮಾರಮ್ಮ, ಸಿಂಗಮ್ಮ ರಾಮನನ್ನು ಆರತಿ ಎತ್ತಿ ಸ್ವಾಗತಿಸಿದರು. ರಾಮಯ್ಯ ಪರಿವಾರವನ್ನು ಮನೆಗೆ ಕಳುಹಿಸಿದ.