ಸಂಧಿ: ೨೨

ರಾಮಯ್ಯನಿಗೆ ರಾಜಪಟ್ಟ ಕಟ್ಟಲು ನಿರ್ಧರಿಸಲಾಯಿತು. ಜೋಯಿಸರು, ಹಳಬರು, ಮಾನ್ಯರು, ಅರಸು ಮಕ್ಕಳು ನೆರೆದರು. ರಾಮನಿಗೆ ಪಟ್ಟಾಭಿಷೇಕವಾಯಿತು. ಪಟ್ಟಣ ಸಿಂಗರಿಸಿ, ಆನೆಯ ಮೇಳೆ ಸಕ್ಕರೆ ಹಂಚಿದರು. ಬ್ರಾಹ್ಮಣರಿಗೆ ದಕ್ಷಿಣೆ, ಮಿಕ್ಕವರಿಗೆ ಗಂಧವೀಳ್ಯ ಕೊಡಲಾಯಿತು. ರಾಮಯ್ಯ ಹರಿಯಲದೇವಿ ಪಾದಕ್ಕೆ ನಮಿಸಿದ. ಅವನಿಗೆ ಮುತ್ತಿನಾರತಿ ಎತ್ತಿದರು. ಮರುದಿನ ಮುಂಜಾನೆ ಚಾವಡಿಗೆ ಬಂದು ಸಿಂಹಾಸನದಲ್ಲಿ ರಾಮ ಕುಳಿತ. ಮನ್ನೆಯ ರಾಹುತರನ್ನು, ಕರಣಿಕ ಲಿಂಗನನ್ನು ಕರೆಸಿದ. ಮನ್ನೆಯರು ತಮ್ಮ ಸೈನ್ಯದೊಂದಿಗೆ ಬಂದರು. ನೂರಾರು ಮಂದಿಯೊಂದಿಗೆ ಬಂದ ಬೂಟಕ ಬೊಮ್ಮನಿಗೆ ಪಟುನೂಲ ಕೊರಳ ಪದಕ ಕೊಟ್ಟ. ಇನ್ನೂರು ಆಳುಗಳೊಂದಿಗೆ ಬಂದ ಮನ್ನಾಲ ಮಾಚಲಿಗೆ ಹೊನ್ನ ಸರಪಳಿಕೊಟ್ಟ. ನೂರಾಳು ಸಹಿತ ಬಂದ ಗಡಿಯಕೋಟೆಯ ದೇವನಿಗೆ ಕಡುಕು ಕಂಠಮಾಳೆಯನ್ನು ಕೊಟ್ಟ, ಬಂಟರೈವತ್ತು ಜನರೊಂದಿಗೆ ಬಂದ ಯನುಮಾಲ ಚಿತ್ತನಿಗೆ ಕನಕ ಮಣಿ ಕೊಟ್ಟ. ಅರುವತ್ತು ಬಿಲ್ಲ ಮಂದಿಯೊಂದಿಗೆ ಬಂದ ಮರುಳೆಯ ಪಾಪನಿಗೆ ಸರಮುತ್ತು ಚೌಕುಳಿಕೊಟ್ಟ. ಬರುಚಿಯ ನೂರು ಮಂದಿಯೊಂದಿಗೆ ಬಂದ ಎರಬೋತು ಕಾಮನಿಗೆ ಬಿರುದು ಬಾವಲಿ ಸರಪಳಿಕೊಟ್ಟು. ಇನ್ನೂರು ಜನ ಒಳಕಾವಲ ಮಂದಿಯನ್ನು ಕರೆದುಕೊಂಡು ಬಂದ ತುಳುವರ ಹಿರಿಯನಿಗೆ ಹಳದಿಯ ಬಿರುದು, ಮುತ್ತಿನೊಂಟಿ, ಕಡೆಗಳನ್ನು ಕೊಟ್ಟ. ಇನ್ನೂರು ಜನ ಹೊಣಕೆಯ ಮಂದಿಯನ್ನು ಕರೆದುತಂದ ನೆಲಗತ್ತಿ ತಿಮ್ಮನಿಗೆ ಹಳದಿಯ ಬಿರುದು, ಮತ್ತಿನೊಂಟಿ, ಕಡೆಗಳನ್ನು ಕೊಟ್ಟ. ಮೀಟಾದ ಮುನ್ನೂರು ಹರಿಗೆಯ ಜನರೊಂದಿಗೆ ಬಂದ ಕೊಟಗರ ದೇವನಿಗೆ ಕಟುಕು ಮುರುಡಿ ಸರಪಳಿ ಕೊಟ್ಟ. ನೂರು ಮುಕ್ಕಣ್ಣಬಲ್ಲೆ ಸಹಿತ ಬಂದ ಒಕ್ಕಲಿಗರ ಮುದ್ದನಿಗೆ ಹೊಕ್ಕುಳ ಗಮಟೆಯನ್ನು ಕೊಟ್ಟ. ಮಾದಿಗ ಹಂಪನಿಗೆ ಐದುನೂರು ಉಮ್ಮಳಿಕೊಟ್ಟ. ಇನ್ನೂರು ಹೊಸ ಕಟ್ಟಿನ ಈಟಿ ತಂದ ಅಸಗೋಡ ಬಸವನಿಗೆ ಜವಳಿ ಕೊಟ್ಟ. ಉಕ್ಕುವ ಬಾಣ ಮುನ್ನೂರು ಹಿಡಿದು ತಂದ ಅಕ್ಕಸಾಲಿಗ ಚಿಕ್ಕನಿಗೆ (ಉಡುಗೊರೆ ಕೊಟ್ಟ). ಮುನ್ನೂರು ಹಳೆಯ ಮಂದಿಯೊಂದಿಗೆ ಬಂದ ಮಲೆಯ ಕಾವ ಕಾಟಿನಾಯಕನಿಗೆ ಉಡುಗೊರೆ ಕೊಟ್ಟ. ನೂರು ಬಾಣದ ಮಂದಿಯೊಂದಿಗೆ ಬಂದ ಬಾಣದ ಬಸವನಿಗೆ ಹಿಡಿ ಹೊನ್ನಕೊಟ್ಟ. ಒಳಕಾವಲ ನೂರು ಮಂದಿಯೊಂದಿಗೆ ಬಂದ ದಳಧೂಳಿ ಮಾದನಿಗೆ ಬಳೆಯನ್ನು ಕೊಟ್ಟ. ಮುನ್ನೂರು ಮುಕ್ಕಣ್ಣ ಬರುಚಿ ಸಹಿತ ಬಂದ ಬುಕ್ಕನ ಪಾಲನಿಗೆ ಲೆಕ್ಕವಿಲ್ಲದಷ್ಟು ಹೊನ್ನ ಕೊಟ್ಟ. ನೂರಾರು ಹತ್ತಿಕಾರಿಕೆಯೊಂದಿಗೆ ಬಂದ ಗುತ್ತಿಯ ಚಾಮನಿಗೆ ಮುತ್ತಿನಾಭರಣವನ್ನು ಕೊಟ್ಟ. ಮುನ್ನೂರು ಗಾಜಿನ ಮಂದಿಯೊಂದಿಗೆ ಬಂದ ಗುಜ್ಜಲ ಓಬನಿಗೆ ಬಾಪುರಿಕೊಟ್ಟ. ಮುನ್ನೂರು  ಮುಕ್ಕಣ್ಣ ಬಲ್ಲೆಯದೊಂದಿಗೆ ಬಂದ ರಕ್ಕಸ ಮಾದನಿಗೆ ಪಚ್ಚೇದ ಕಡಗಕೊಟ್ಟ, ಮುನ್ನೂರು ಕಂಬಿಮರ ಬಿಲ್ಲಿನೊಂದಿಗೆ ಬಂದ ಕುಂಭಕೋಣೆಯ ವಿರನಿಗೆ ಜಾಳಿಗೆ ಹೊನ್ನು ಕೊಟ್ಟ. ನೂರು ಜನ ಬಿಲ್ಲುಗಾರರೊಂದಿಗೆ ಬಂದ ಹಗ್ಲಾದ ಮಾದನಿಗೆ ಹುಗ್ಗಿ ತುಪ್ಪಕ್ಕೆ ಊರಕೊಟ್ಟ. ನೂರು ಜನ ಬಿಲ್ಲ ಮನ್ನೆಯರನ್ನೊಳಗೊಂಡು ಬಂದ ನಲ್ಲೂರ ನಲ್ಲನಿಗೆ (ಕಾಣಿಕೆಕೊಟ್ಟ). ನೂರಾಳು ಮನ್ನೆಯರೊಂದಿಗೆ ಬಂದ ಕುಂದುರ್ಪಿಪ ಲನಿಗೆ ಚಂದ್ರಗಾವಿಯ ಬಿರುದ ಕೊಟ್ಟ. ಕಾಲ ಸರದ ನೂರು ಮಂದಿಯೊಂದಿಗೆ ಬಂದ ರಾಯದುರ್ಗದ ರಾಮನಿಗೆ ಹೊನ್ನು-ಜವಳಿ ಉನ್ನತ ವಸ್ತ್ರಾಭರಣ ಕೊಟ್ಟ. ಎಪ್ಪತ್ತು ಏಳು ಮಾನ್ಯರಿಗೆ ವೀಳ್ಯವ ಕೊಟ್ಟ.

ಕುದುರೆಯ ಫೌಜು, ಆನೆಯ ಫೌಜು ತರಬೇಕೆಂದು ರಾಮ ಆದೇಶ ನೀಡಿದ. ಆಗ ಆರೇರ ಚಾಮರಾಯನ ಮಕ್ಕಳು, ದೇವಿಶೆಟ್ಟಿಯ ಲಿಂಗ, ಭಾವ ಸಂಗಮದೇವ, ಜೀವರತ್ನದ ಮಲ್ಲಿದೇವ, ಅಣ್ಣ ಕಾಟಣ್ಣ ಕುದುರೆ ಪೌಜು ತಂದರು. ಇವರೆಲ್ಲರಿಗೆ ರಾಮಯ್ಯ ಉಡುಗೊರೆ-ವೀಳ್ಯ ಕೊಟ್ಟ. ಕರಣಿಕ ಲಿಂಗನ ಕರೆದು ಸೈನ್ಯದ ಲೆಕ್ಕ ಕೇಳಿದ. ಸೈನ್ಯ ಸಾಳುವುದಿಲ್ಲ, ಹೆಚ್ಚಿನ ಸೈನ್ಯ ಸಂಗ್ರಹಿಸಲು ಬೈಚಪ್ಪನಿಗೆ ಹೇಳಿದ.

ಅಂದು ಬೈಗಿನ ಸಮಯದಲ್ಲಿ ರಾಮಯ್ಯ ಮತ್ತೆ ಆಸ್ತಾನಕ್ಕೆ ಬಂದು ಆಸೀನನಾದ. ಶೆಟ್ಟಿ, ಮಾನ್ಯರು, ಗೌಡ, ಒಕ್ಕಲುಗಳು ಬಂದು ಪಟ್ಟದುಡುಗೊರೆ ಕೊಟ್ಟರು. ಪ್ರಜೆಗಳು ಬಂದು ಹೊನ್ನಡಿದಾರ ಕೊಟ್ಟರು. ರಾಮಯ್ಯ ಅವರಿಗೆ ವಂದಿಸಿ ‘ನಿಮ್ಮಿಂದ ನಮ್ಮ ದೊರೆತನವು’ ಎಂದು ನುಡಿದು, ಗಂಧವೀಳ್ಯ ನೀಡಿದ. ಬೈಚಪ್ಪನನ್ನು ಬರಮಾಡಿಕೊಂಡು ಸುತ್ತಣ ಗೌಡರ ಕರೆಸಲು ಸೂಚಿಸಿದ. ಓಲೆಗೆ ಮನ್ನಣೆಯಿತ್ತು, ಹುಕ್ಕೇರಿ ಸೀಮೆಯ ಗೌಡ ಕುಲಕರ್ಣಿಗಳು ಬಂದು ಒಕ್ಕುಳ ಹೊನ್ನು, ಉಡುಗೊರೆ, ಹಣ್ಣು, ಫಲ ಅರ್ಪಿಸಿದರು. ಇಕ್ಕೇರಿ ಸೀಮೆಯ ಗೌಡರು ಲಕ್ಷದ ಮೇಲೆ ಹನ್ನೊಂದು ಸಾವಿರ ಕಾಣಿಕೆ ನೀಡಿದರು. ಕಲ್ಯಾಣ ಕಲಬುರಗಿ ಮೊದಲಾದ ಸೀಮೆಗಳ ನಾಡಿಗರು ಐದು ಲಕ್ಷ ಹೊನ್ನು ನೀಡಿದರು. ಸಾಗರ ಸೀಮೆಯ ಶೆಟ್ಟಿ ಪ್ರಜೆ-ಗೌಡ-ಕುಲಕರ್ಣಿಗಳು ಐದು ಲಕ್ಷ ಹೊನ್ನ ಸಲ್ಲಿಸಿದರು. ತೊರಗಲ್ಲು ಬದಾಮಿ ಸೀಮೆಯ ಗೌಡರಾದ ಮರಿಗೌಡ, ಮುದಿಗೌಡರು ಎರಡು ಸಾವಿರ ಹೊನ್ನು ಉಡುಗೊರೆ ಸಲ್ಲಿಸಿದರು. ಬಸವಪಟ್ಟಣದ ಮುದ್ದನಗೌಡ ಐವತ್ತು ಸಾವಿರ ಹೊನ್ನು ನೀಡಿದನು. ಆದವನ್ನಿ ಸೀಮೆ ರೆಡ್ಡಿ ಕುಲಕರ್ಣಿಗಳು ಹದಿನೆಂಟು ಸಾವಿರ ಹೊನ್ನ ಸಲ್ಲಿಸಿದರು. ಉಮ್ಮಳಿದಾರರು, ಪುರವರ್ಗದವರು ಒಮ್ಮನ ಹೊನ್ನ ಸಲ್ಲಿಸಿದರು. ಬಂದವರಿಗೆ ಗೌರವಿಸಿ ರಾಮಯ್ಯ ತಂದೆಗೆ ವಂದಿಸಿದ. ಮಾವನಾದ ಗುತ್ತಿಯ ಜಗದಪ್ಪನು ಅಳಿಯ ರಾಮನಿಗೆ ಪಟ್ಟದ ಉಡುಗೊರೆ, ಪೆಟ್ಟಿಗೆ ಬಂಗಾರವನ್ನೂ ಕಂಪಿಲನಿಗೆ ಪಟ್ಟಾವಳಿ ಮುತ್ತಿನಾಭರಣವನ್ನೂ ಕಳಿಸಿದ. ಮಗಳು ರಾಮಕ್ಕಗೆ ಮುತ್ತಿನಾಭರಣ, ಐದೂರು ಜೀಬಿ ನಾಣ್ಯ ಕೊಟ್ಟನು.

ಸಂಧಿ:೨೩

ರಾಮಯ್ಯ ಮಂತ್ರಿಯನ್ನು ಕರೆಯಿಸಿ ಜಟ್ಟಂಗಿ ರಾಮೇಶ್ವನ ದರ್ಶನಕ್ಕೆ ಹೋಗುವ ಬಗ್ಗೆ ಹೇಳಿದ. ಅಕ್ಕಿ, ಬೇಳೆ, ಗೋದಿಹಿಟ್ಟು, ಸಂಬಾರ, ಸಕ್ಕರೆ, ಬೆಲ್ಲ, ಸಣ್ಣಕ್ಕಿ ಹೇರು ಸಿದ್ಧವಾದವು. ಅಡಕೆ, ಬಿಳೆ ಎಲೆ, ಕರ್ಪೂರ, ಮಾದಾಳ, ಖರ್ಜೂರ, ಹಾಲು, ಮೊಸರು, ಆಲೆ, ರಸದಾಳಿ, ಕ್ಷೀರಗಳು ನೈವೇದ್ಯಕ್ಕೆ; ಜವಳಿ, ರೊಕ್ಕ ಹೊನ್ನು ಪಾದಗಾಣಿಕೆಗೆ ಪಲ್ಲಕ್ಕಿ ಏರಿ ನಡೆದ. ಹಿರಿಯ ಸೊಸೆ ಕಂಚಲವ್ವ ಸಹಿತ ಎಲ್ಲ ಅರಸುವೆಣ್ಣುಗಳು ನಡೆದು ಹಂಪಿಯ ವಿರೂಪಾಕ್ಷನ ದರ್ಶನ ಪಡೆದರು. ಜಂಗಮಕೆ ಪರ್ವಮಾಡಿ, ಬ್ರಾಹ್ಮಣರಿಗೆ ಸಮಾರಾಧನೆ ಮಾಡಿ ಮುನ್ನಡೆದರು. ಕಂಪಲಿಯ ಸೋಮೇಶನಿಗೆ ಮಹಾಪರುವ ಮಾಡಿ ಮುಂದಕ್ಕೆ ಸಾಗಿ, ಜಟ್ಟಂಗಿ ರಾಮನ ಗುಡಿಗೆ ಬಂದರು. ಅಲ್ಲಿ ದೇವಸಮುದ್ರವೆಂಬ ಕೆರೆಯಿಂಟು, ಬಾವಿ ಪೋದೋಟ ವನವುಂಟು, ಕಾವಲ ಮಲೆಯುಂಟು, ಕಸ್ತೂರಿಮೃಗವುಂಟು. ಸ್ನಾನಮಾಡಿ ಎಲ್ಲರೂ ಮಲ್ಲಿಕಾರ್ಜುನನ, ಜಟ್ಟಂಗೇಶನ ಗುಡಿಗಳಿಗೆ ಬಂದರು. ರಾಮಯ್ಯ ಪೂಜೆಮಾಡಿ ಬ್ರಾಹ್ಮಣರಿಗೆ, ಜಂಗಮರಿಗೆ ದಕ್ಷಿಣೆ ನೀಡಿದನು. ದೊರೆ ಮಕ್ಕಳಿಗೆ ಕರಣಿಕ ಲಿಂಗನ ಮೂಲಕ ಉಲುಪೆಕೊಡಿಸಿದನು. ‘ನರಜನ್ಮದೊಳಗೆನ್ನನೇಕೆ ಪುಟ್ಟಿಸಿದಯ್ಯ, ಧರಿಸಿದ ಬಿರಿದ ದಕ್ಕಿಸಿ ರಣರಂಗದಿ ಕರೆದೊಯ್ಯಬೇಕೆನ್ನ ನೀನು’ ಎಂದು ಬೇಡಿಕೊಂಡ. ಎಂದಿದ್ದರೀ ಕಾಯ ಎನಗೆ ನಂಬಿಗೆಯಿಲ್ಲ, ಕಂದನ ಮೇಲೆ ದಯಮಾಡೋ’ ಎಂದು ಪ್ರಾರ್ಥಿಸಿದ. ಜಟ್ಟಂಗಿ ರಾಮೇಶ್ವರ ಮೆಚ್ಚಿ ಮಲ್ಲಿಗೆ ಪುಷ್ಪದ ವರವನ್ನಿತ್ತ. ರಾಮಯ್ಯ ಕುಮ್ಮಟಕ್ಕೆ ಮರಳಿ, ತಂದೆ ತಾಯಿಗಳಿಗೆ ನಮಸ್ಕರಿಸಿದ. ಸುರಿತಾಳನ ಮಗಳು, ತನ್ನನ್ನು ಹಿಡಿತರಿಸಿ ಮದುವೆಯಾಗ ಬಯಸಿದ ಸಂಗತಿಯನ್ನು ಅವರಿಗೆ ಹೇಳಿ, ಈ ವಿಷಯದಲ್ಲಿ ‘ಪರನಾರಿ ಸಹೋದರ’ನಾಗುವೆನೆಂದು ಸಾರಿದ.

ಮರುದಿನ ಬೈಚಪ್ಪನೊಡನೆ ಹೊಸಮಲೆದುರ್ಗಕ್ಕೆ ಹೋಗಿ, ಬಿದ್ದ ಕೋಟೆಗಳನಿಕ್ಕಿಸಿ, ಬೊಕ್ಕಸ ಪರೀಕ್ಷಿಸಿ, ಒಕ್ಕಲುಗಳಿಗೆ ಬುದ್ಧಿಯ ಹೇಳಿ, ಗಡಿಗಳನ್ನು ನೋಡಲು ಹೊರಟ. ಗಡಿಗಳನ್ನು ಭದ್ರಮಾಡಿ, ಕಣಜ ಬೊಕ್ಕಸ ಬಲಿಸಿ, ಕೆರೆ ಹೂದೋಟ ನಿರ್ಮಿಸಿ, ಸೆರೆಯಲ್ಲಿದ್ದವರನ್ನು ಬಿಡಿಸಿ, ಹಸಿದು ಬಂದವರಿಗೆ ಅನ್ನವ್ಯವಸ್ಥೆಮಾಡಿದ. ಎಲ್ಲ ಕಡೆ ಕೆರೆ, ಕಾಲುವೆ, ಬಾವಿ, ತೋಪು, ವನ, ಮಲ್ಲಿಗೆ ಶೃಂಗಾರ ತೋಟ, ಮಂಟಪಗಳನ್ನು ರಾಮಯ್ಯ ನಿರ್ಮಿಸಿದ. ಅನ್ನಛತ್ರ, ಅರವಟ್ಟಿಗೆ, ಮಠಮಾನ್ಯ, ಅಗ್ರಹಾರಗಳನ್ನು ರಚಿಸಿದ. ರಾಮನ ಕೀರ್ತಿ ದಿಳ್ಳಿಗೆ ತಲುಪಿತು. ನೇಮಿಯನ್ನು ಕಳಿಸಿ ರಾಮನನ್ನು ಬೇಗ ಹಿಡಿತರಿಸಲು ಮಗಳು ಸುರಿತಾಳನಿಗೆ ಹೇಳಿದಳು. ‘ಮುಪ್ಪಾಗಿ ಹೋದೆನಯ್ಯಯ್ಯೋ’ ಎಂದು ವ್ಯಥೆ ಪಟ್ಟಳು.

ಸಂಧಿ: ೨೪

ಮಂತ್ರಿ ನೇಮಿಖಾನ ಕುಮಾರರಾಮನ ಚಿತ್ರಪಟವನ್ನು ಸುರಿತಾಳನ ಮಗಳಿಗೆ ಕಳಿಸಿದ. ನೋಡುತ್ತಲೇ ಆಕೆ ಮೂರ್ಛೆಹೋದಳು. ಸುರಿತಾಳ ಕಾರಣ ಕೇಳುತ್ತಲೇ “ಹಿಂದಣ ಜನ್ಮದಲ್ಲಿ ನಾನು ದ್ರೌಪದಿಯಾಗಿದ್ದೆ, ಕುಮಾರರಾಮ ಅರ್ಜುನನಾಗಿದ್ದ” ಎಂದು ಹೇಳುವಷ್ಟರಲ್ಲಿ ‘ಎಲ್ಲಿಗಾದರೂ ನನ್ನನ್ನು ಯುದ್ದಕ್ಕೆ ಕಳುಹು. ಬಲ್ಲಿದ ರಾಮನ ಮೇಲೆ ಬೇಡ’ ಎಂದು ನೇಮಿ ನುಡಿದನು. ಕಳಹು ಗುಜರಾತಿಯ ಮೇಲೆ, ತೆಲುಗರ ಮೇಲೆ, ಕಳುಹು ಮಲೆಯಾಳದ ಮೇಲೆ, ಕಳುಹು ಮಗಧ ವಡ್ಡದೇಶದ ಮೇಲೆ, ಕಳಹಿಸಬೇಡ ಕುಮ್ಮಟದ ಮೇಲೆ. ಎಂದು ಮತ್ತೆ ನುಡಿದ. ಅಷ್ಟರಲ್ಲಿ ಮಾದಿಗಿತ್ತಿ ಬಂದು ‘ರಾಮನನ್ನು ನಾನು ಹಿಡಿತರುತ್ತೇನೆ’ ಎಂದು ವೀಳ್ಯ ಹಿಡಿದಳು. ನೇಮೀಖಾನನೂ ಒಳಗೊಂಡಂತೆ ಸೈನ್ಯ ಸಜ್ಜಾಯಿತು. ತೆಂಕಣದೇಶದ ಮಧ್ಯದಿ ಮಾತಂಗಿಯ ದಂಡು ಬೀಡು ಬಿಟ್ಟಿತು. ಮುನ್ನೂರು ಅರುವತ್ತು ಗಾವುದ ನಡೆದು ಬಂದ ದಂಡ ಕುಮ್ಮಟವನ್ನು ತಲುಪಿತು. ರಾಮಯ್ಯ ಕಡೆಯಕಲ್ಲನ್ನು ಹತ್ತಿ ವೈರಿಸೈನ್ಯ ನೋಡಿದ. ‘ದುರ್ಗಕ್ಕೆ ತನಗೆ ಮದುವೆ’ಯೆಂದು ನುಡಿದ. ಕಂಪಿಲರಾಯ ಹೊಸಮಲೆದುರ್ಗಕ್ಕೆ ಹೋದ. ಭಂಡಾರವನ್ನು ಅಲ್ಲಿಗೆ ಸಾಗಿಸಲಾಯಿತು. ರಾಮಯ್ಯ ವೈರಿಸೈನ್ಯದ ಮೇಲೆ ಎರಗಿ ಭೂತಗಳಿಗೆ ಹೆಣಗಳನ್ನು ಉಣಬಡಿಸಿದ. ಹರಿಯಲದೇವಿ ಎರಡು ಖಂಡುಗ ಹಣ ಕಳಿಸಿದಳು. ಕತ್ತಲಾಗುತ್ತಲೇ ಕುಮ್ಮಟದುರ್ಗದಲ್ಲಿ ಕೈದೀವಿಗೆ ಬೆಳಗಿದವು. ಮುಂಜಾನೆ ಮನ್ನೆಯರನ್ನು ಕರೆಸಿ ಆಭರಣ ಉಡುಗೊರೆ ಕೊಟ್ಟು, ದುರ್ಗವನ್ನಿಳಿದು ಹೋರಾಟ ಮಾಡಿದ. ವೈರಿಸೈನ್ಯ ಓಡಿಹೋಯಿತು. ‘ಕಲ್ಲೊಳು ಕಾದಬಹುದು, ರಾಮನ ಕೊರೆ ನಿಲ್ಲಬಾರದು’ ಎಂದು ತುರುಕ ಸೈನ್ಯ ತಮ್ಮತಮ್ಮಲ್ಲಿ ಮಾತನಾಡಿತು. ಮಾತಂಗಿ ಸೋತು ಒಂದು ಗಾವುದ ಹಿಂದೆ ಸರಿದಳು.

ಆಗ ರಾಮನ ಸೈನ್ಯದ ತೆಲುಗ ಮಾನ್ಯರೆಲ್ಲ ಸಭೆಸೇರಿ, ‘ನವಲಕ್ಷ ತೆಲುಗರ ಗಂಡ’ ಎಂಬ ರಾಮನ ಬಿರುದು ನಮಗೆ ಅಪಮಾನ. ಕಾರಣ ಇವನನ್ನು ಕೊಲ್ಲಿಸಬೇಕೆಂದು ತೀರ್ಮಾನಿಸಿ, ‘ಹಿಂದಿರುಗಿ ಬಂದರೆ ಬಾಗಿಲ ತೆಗೆದುಕೊಡುವೆ’ವೆಂದು ಮಾದಿಗಿತ್ತಿಗೆ ಪತ್ರ ಕಳಿಸಿದರು.

ಸಂಧಿ: ೨೫

ಓಡಿಹೋದ ಮಾತಂಗಿ ತಿರುಗಿ ಬಂದಳು. ‘ತೆಲುಗರ ಸಂಚಿನಿಂದಾಗಿ ಒಳಕೋಟೆ ಹೋಯಿತು. ಲೆತ್ತ ಬಿಟ್ಟು ಏಳು’ ಎಂದು ರಾಮನಿಗೆ ಕಾಟಣ್ಣ ಹೇಳಿದ. ರಾಮಯ್ಯ ಈ ಅನಿರೀಕ್ಷಿತ ಬೆಳವಣಿಗೆಗೆ ಬೆರಗಾಗಿ, ಅರಮನೆಗೆ ಹೋದ. ‘ಕಿಚ್ಚುಕೊಂಡು ಅಂಜಬೇಡಿರಿ. ನನ್ನೊಡನೆ ಸ್ವರ್ಗಕ್ಕೆ ಬನ್ನಿರಿ’ ಎಂದು ಹೆಂಡಿರಿಗೆ ಹೇಳಿ, ತಾಂಬೂಲಕೊಟ್ಟು, ಯುದ್ಧಕ್ಕೆ ನಡೆದ. ಹೆಂಡತಿ ಬಂಗಾರದ ಬಟ್ಟಲಲ್ಲಿ ತಂದ ಅನ್ನವನ್ನು ಕಾಟಣ್ಣನೊಡನೆ ಒಟ್ಟಿಗೆ ಉಂಡ. ಮನ್ನೆಯರಿಗೆ ವೀಳ್ಯಕೊಟ್ಟು, ಬಿಲ್ಲು ಹಿಡಿದು ದ್ವಾರವಾಟಕ್ಕೆ ನಡೆದ. ಅಷ್ಟರಲ್ಲಿ ನಲ್ಲನಾಗನು ಬಿದ್ದ, ಬಿಲ್ಲ ಪೆನ್ನನು ಬಿದ್ದ, ಮೀನಿಗೆ ಸಿಂಗ ಬಿದ್ದ, ಜಲ್ಲಿಬಿಲ್ಲಿಯ ಬುಕ್ಕಿನಾಯಕ ಬಿದ್ದ, ಕಲ್ಲಿಕೋಟೆಯ ಚಿಕ್ಕ ಬಿದ್ದ, ಅಕ್ಕಸಾಲೆರ ಚಿಕ್ಕ ಬಿದ್ದ, ರಕ್ಕಸ ಮುನಿಯ ಬಿದ್ದ, ಕೊಳ್ಳಿಯ ನಾಗ ಬಿದ್ದ, ಬೇವಿನ ಸಿಂಗ ಬಿದ್ದ, ಹೊಲೆಯರ ಹಳ್ಳುಗ ಬಿದ್ದನೆಂಬ ವಾರ್ತೆ ಕೇಳಿ ರಾಮಯ್ಯ ದುರ್ಗವನ್ನಿಳಿದ. ತುರುಕರು ಬೆದರಿದರು. ಬೊಲ್ಲನನ್ನೇರಿ ಬಂದ ರಾಮನನ್ನು ಆನೆಯನ್ನೇರಿ ಬರುತ್ತಲಿದ್ದ ಮಾತಂಗಿ ಎದುರಿಸಿದಳು. ವೈರಿ ಸೈನ್ಯವನ್ನು ಕತ್ತರಿಸಿ ಹಾಕಿದ ಕುಮಾರರಾಮ ಮಾದಿಗಿತ್ತಿಯ ವೀರಜಡೆ ಹಿಡಿದೆಳೆದ. ‘ಸಂಗ್ರಾಮದಲಿ ಹೆಂಗಸ ಕೊಂದರೆ ದುಸ್ಸಂಗ ತಪ್ಪದು ಸ್ವರ್ಗದಲಿ’ ಎನ್ನುತ ಅವಳ ಮುಂದರೆ ಬಿಡುವುದೇ ತಡ, ಆಕೆ ಸಿಂಗಾಡಿಯಿಂದ ಹೊಡೆದು, ಬಾಣದ ಮಳೆಸುಳಿದಳು. ರಾಮ ತನ್ನೆದೆಯ ಮಾಣಗಳನ್ನು ಕಿತ್ತುಹಾಕಿದನು. ಅಷ್ಟರಲ್ಲಿ ಬಾಣದ ಬಸವ ಸತ್ತ. ವೈರಿಗಳು ರಾಮನನ್ನು ಸುತ್ತಲೂ ಮುತ್ತಿದರು. ರಾಮಯ್ಯ ಗೊಗೆಗಲ್ಲಿನ ಮೇಲೆ ನಿಂತನು. ದೂರದಿಂದ ರಾಮನ ಸ್ಥಿತಿ ನೋಡಿದ ಕಾಟ ಕಾದುತ್ತ ಸಮೀಪ ಬಂದನು. ‘ನಮ್ಮ ಸೈನ್ಯ ಹಾಳಾಯಿತು, ನೀನು ಮನೆಗೆ ಹೋಗಿ ಹೆಂಡಂದಿರಿಗೆ ಕಿಚ್ಚುಕೊಟ್ಟು ಬಾ. ನನ್ನ ಗಾಯ ಹೆಚ್ಚಿತು. ತಾಯಿಗೆ ನನ್ನ ಕಡೆಯವನ್ನು ಒಪ್ಪಿಸಿ ಬಾ’ ಎಂದು ಕಾಟಣ್ಣನಿಗೆ ಹೇಳಿದ.

ಸುಣ್ಣ ಸಾಸಿವೆ ಒಡಲಲ್ಲಿ ಹೊಯ್ದಂತೆ, ಕಣ್ಹೋದ ಮರಿಯಂತೆ ಕಾಟಣ್ಣ ದುಃಖಿಸಿದ. ‘ನಿನ್ನೊಡನೆ ಸಾಯುವೆ ತಮ್ಮ’ ಎಂದು ಹಲುಬಿದ. ‘ಮನ್ನಿಸೋ ನಿನ್ನ ಪ್ರಾಣವನೊಂದುಗಳಿಗೆ. ನಾನು ನಿನ್ನೊಂದಿಗೆ ಅಳಿಯುತ್ತೇನೆ’ ಎಂದು ನುಡಿದ. ‘ನಾನು ಹೋಗಿ ಬರುವ ವರೆಗೆ ವೈರಿಗೆ ಅಂಗವ ಕೊಡಬೇಡ’ ಎಂದು ಹೇಳಿ, ಕಾಟಣ್ಣ ಉರಿಗೊಂಡ ಕರ್ಪೂರದಂತೆ ಹೊಸಮಲೆಗೆ ಓಡಿಬಂದು, ಕಂಪಿಲ ಹರಿಯಮ್ಮನಿಗೆ ಹೇಳಿದ. ತಿರುಗಿ ಕುಮ್ಮಟಕ್ಕೆ ಬಂದು ರಾಮನ ಮಡದಿಯರಿಗೆ ಶೃಂಗಾರ ಮಾಡಿಸಿದ. ದುಃಖಿಸಿದ ಅವರು ಆಡುತ್ತ ಪಾಡುತ್ತ ರಾಜಬೀದಿಯಲ್ಲಿ ಬಂದಡು. ಮಳಲಗೌರಿಯನ್ನು ಪೂಜಿಸಿ, ‘ಏಳೇಳು ಜನ್ಮದಲ್ಲಿ ನೀನೇ ಗಂಡನಾಗೆ’ದು ನುಡಿದು ಓಡಿಬಂದು, ಕೊಂಡದ ಕಟ್ಟೆಯನ್ನು ಹತ್ತಿ, ರಾಮಯ್ಯನನ್ನು ಪಾಡುತ್ತ ಕೊಂಡದಲ್ಲಿ ಧುಮಿಕಿದರು. ತನ್ನ ಮನೆಗೆ ಬಂದ ಕಾಟನಿಗೆ ‘ತಡಬೇಡ ಎನ್ನನು ಕಡಿ’ ಎಂದು ಹೆಂಡತಿ ಕೈಗೆ ಖಡ್ಗಕೊಟ್ಟಳು. ಕಡಿದ ಕಾಟ ಹೆಂಡತಿಯ ಬಾಯಲ್ಲಿ ಬಾಯಿ ಇಟ್ಟು, ಅವಳ ಹೆಣವನ್ನು ಭೂಮಿಯ ಮೇಲೆ ಒರಗಿಸಿ, ರಾಮಯ್ಯನಿದ್ದಲ್ಲಿಗೆ ಬಂದರು. ‘ಊರು ಹೋಯಿತು, ಒಳಹೊಕ್ಕರು ತುರುಕರು’ ಎಂದು ನಿಶ್ಚಯಿಸಿಕೊಂಡ. ಅಷ್ಟರಲ್ಲಿ ದೇವಿಶೆಟ್ಟಿಯ ಲಿಂಗ ಹೋರಾಡುತ್ತ ಸತ್ತ. ಏರಿಬಂದ ಬಾಣ ನಟ್ಟು, ಕುದುರೆಮೇಲಿಂದ ರಾಮ ಬೀಳುತ್ತಲೇ ನೇಜೆಯೂರಿ ಮೂರ್ಛೆಯಲ್ಲಿ ನಿಂತ. ಇದನ್ನು ನೋಡಿದ ಕಾಟ ಮಾದಿಗಿತ್ತಿಯನ್ನು ಕೊಲ್ಲಲು ಧಾವಿಸಿದ. ಅಷ್ಟರಲ್ಲಿ ಬಾಣ ತಾಗಿ ಉರುಳಿದ.

ಸಂಧಿ: ೨೬

ಮಾದಿಗಿತ್ತಿ ತಿರುಗಿಬಂದು ರಾಮನ ಮೇಲೆ ಬಾಣಗಳನ್ನು ಸುರಿದಳು. ಬೊಟ್ಟು ಊರಲು ಜಾಗವಿಲ್ಲದಂತೆ ಮೈತುಂಬ ನೆಟ್ಟವು. ಮಿಕ್ಕವರು ಮುತ್ತಿದರು. ರಾಮಯ್ಯ ಪ್ರಾಣಬಿಟ್ಟ. ಆತನ ಮೇಲೆ ಕಾಗೆ ಕುಳಿತುದನ್ನು ಕಂಡು, ಸತ್ತುದನ್ನು ಖಚಿತ ಮಾಡಿಕೊಂಡ ವೈರಿ ಸೈನಿಕರು ಸಮೀಪ ಬಂದರು. ಮಾತಂಗಿ ರಾಮನನ್ನು ಎಳೆದು ಹಾಕಿದಳು. ಅಷ್ಟರಲ್ಲಿ ಜೀವ ಮರುಕಳಿಸಲು ಎಲ್ಲರೂ ಅಂಜಿ ನಮಸ್ಕರಿಸಿದರು. ಸುರಲೋಕದ ಅಪ್ಸರೆಯರು ಎತ್ತಿಕೊಳ್ಳಲು ಬಂದರೆ ‘ಪರನಾರಿ’ಯರೆಂದು ರಾಮ ಹಿಂದೆ ಸರಿದನು. ಮತ್ತೆ ಮೇಲೆ ಕಾಗಿ ಕುಳಿತುಕೊಳ್ಳಲು ಸತ್ತುದನ್ನು ಖಚಿತಪಡಿಸಿಕೊಂಡು, ಅವನನ್ನು ಒತ್ತಿ ತಿವಿದು ನೂಕಿದರು. ಮಾತಂಗಿ ಹತ್ತಿರ ಬಂದು ತಲೆಗೊಯ್ದರು. ಬೊಲ್ಲನನ್ನು ಹಿಡಿಯಲು ತುರುಕರು ಸರಪಳಿ ತಂದರು. ಪಕ್ಷಿಯಂತೆ ಆಕಾಶಕ್ಕೆ ಹಾಕಿ ಭೂಮಿಗೆ ಬಿದ್ದಿತು. ರಾಮನ ಬಾಯಿಯನ್ನು ಮುತ್ತಿ ಮಾಣಿಕ ಚಿನ್ನ ತುಂಬಿ, ತಲೆಗೆ ದೇವಾಂಗ ಸುತ್ತಿದರು. ಗಂಧ ಕಸ್ತೂರಿ ಕುಂಕುಮ ಜಾಜಿ ಮಲ್ಲಿಗೆ ಸಂಪಗೆಗಳಿಂದ ಅಲಂಕರಿಸಿ, ಕೊಯ್ದ ತಲೆಯನ್ನು ಸುರಿತಾಳನೆಡೆಗೆ ಕಳಿಸಿದರು. ಸುರಿತಾಳ ಮಗಳೊಂದಿಗೆ ಬಂದು ತಲೆಯನ್ನು ನೋಡಿದ. ‘ರಾಮನನ್ನು ಜೀವಂತ ತರಲು ಹೇಳಿದೆ, ಹೀಗಾಯಿತೇ’ ಎಂದು ಮರುಗಿದ. ‘ಪ್ರಾಣಸಹಿತ ತರುವರೆಂದು ನಿರೀಕ್ಷಿಸಿದ್ದೆ’ ಎಂದು ಮಗಳು ಅತ್ತಳು. ‘ರಾಮನನ್ನು ಬಿಡಲಾರೆ’ನೆಂದು ಅವನ ಜಡೆಯ ಮುತ್ತಿನ ಗೊಂಡೆ ತೆಗೆದು ತನ್ನ ಮುಡಿಯಲ್ಲಿ ಇಟ್ಟುಕೊಂಡಳು. ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ನೋಡಿದಳು. ಉಡಿಯಲ್ಲಿ ಕಟ್ಟಿಕೊಂಡು ಕಿಚ್ಚಿನಲ್ಲಿ ಬೀಳಲು ಸಿದ್ಧಳಾದಳು. ಸುರಿತಾಳ, ಅಪಕೀರ್ತಿಗೆ ದಾರಿಮಾಡಿಕೊಡಬೇಡೆಂದು ಮಗಳಿಗೆ ಬುದ್ಧಿ ಹೇಳಿ ಬಿಡಿಸಿದ.

ಊಳಿಗದವರು ರುಂಡವನ್ನು ದಿಳ್ಳಿಯ ಸುರಹೊನ್ನೆ ಮರದ ರೆಂಬೆಗೆ ಕಟ್ಟಿದರು. ರಾತ್ರಿ ರಾಮನ ಬೊಬ್ಬೆಗೆ ನಡುಗಿ ಜನ ಭಯಭೀತರಾದರು. ಆಗ ಆ ತಲೆಯನ್ನು ಕೋಟೆಯ ಅಗುಳಿಗೆ ಹಾಕಿದರು. ಆಗಲೂ ರಾಮನ ಧ್ವನಿ ಕೇಳಿ ಜನ ಪ್ರಾನೀಗತೊಡಗಿದರು. ಆಗ ಸುರಿತಾಳನ ಆಜ್ಞೆಯಂತೆ ಒಬ್ಬ ಭಟ್ಟನು ಕಂಪಿಲನಲ್ಲಿಗೆ ಬಂದು, ರಾಮನ ತಲೆ ಒಯ್ಯಲು ಹೇಳಿದ. ಕಂಪಿಲ ಭಟ್ಟರ ರೂಪಿದೇವಯ್ಯನನ್ನು ಡಿಳ್ಳಿಗೆ ಕಳುಹಿಸಿದ. ಸುರಿತಾಳನನ್ನು ಕಂಡ. ರಾತ್ರಿ ಮಲಗಿದ ರೂಪಿದೇವಯ್ಯನ ಕನಸಿನಲ್ಲಿ ಬಂದು, ‘ದಿಳ್ಳಿ ಸುರಿತಾಳನ ಗಂಡ’ ಎಂದು ಬಿರುದು ಉಗ್ಘಡಿಸಿದರೆ ಮಾತ್ರ ಬರುವೆ- ಎಂದು ರಾಮಯ್ಯ ಹೇಳಿದ. ಮುಂಜಾನೆ ರುಂಡದ ಹತ್ತಿರ ಸುರಿತಾಳ, ಆರತಿ ಹಿಡಿದು ಅವನ ಮಗಳು ನಿಂತರು. ರೂಪಿದೇವಯ್ಯ ಬಿರುದು ಹೊಗಳಿದ. ಕೈಗೆ ಬಂದ ರುಂಡದೊಂದಿಗೆ ಕುಮ್ಮಟಕ್ಕೆ ಮರಳಿದ. ದಾರಿಯಲ್ಲಿ ರುಂಡ ನೆಲದ ಮೇಲಿಟ್ಟು ರೂಪದೇವಯ್ಯ ವಿಶ್ಯಾಲ್ಯ(?)ಕ್ಕೆ ಹೋದ. ಅಷ್ಟರಲ್ಲಿ ಅದು ಮರವನ್ನೇರಿತು. ‘ಅಡಗದೆ ನಿನ್ನ ಪರಾಕ್ರಮ ಕೀರ್ತಿ’ ಎನ್ನುತ್ತ ಹೋಗಿ ರುಂಡವನ್ನು ಹಿಡಿಯಲು, ಪ್ರಾಣ ಅಳಿಯಿತು. ರೂಪಿದೇವಯ್ಯ ರುಂಡದೊಂದಿಗೆ ಕುಮ್ಮಟಕ್ಕೆ ಬಂದ. ಕಂಪಿಲ, ಹಿರಿಯಮ್ಮ, ಒಡಹುಟ್ಟುದವರು, ಪ್ರಜಾ ಪರಿವಾರ ಗೋಳಿಟ್ಟಿತು. ಹರಿಯಮ್ಮ ಈ ರೀತಿ ಹಣೆಯ ಬರಹವನ್ನು ಬರೆದ ಬ್ರಹ್ಮನನ್ನು, ಮಿಕ್ಕ ದೇವರನ್ನು ಶಪಿಸಿದಳು. ಕಂಪಿಲನ ಆಜ್ಞೆಯಂತೆ ರಾಮನ ತಲೆಯನ್ನು ಕಾಶಿಗೆ ತೆಗೆದುಕೊಂಡು ಹೋದರು. ಇತ್ತ ಶಿವ, ರಾಮನ ಮುಂಡವನ್ನು ಕೈಲಾಸಕ್ಕೆ ತರಿಸಿದ. ಗಂಗಾನದಿಗೆ ರುಂಡವನ್ನು ಹಾಕುವಷ್ಟರಲ್ಲಿ ಗರುಡಬಂದು ಕೈಲಾಸಕ್ಕೆ ಒಯ್ದು ಬಿಟ್ಟಿತು. ರುಂಡ ಮುಂಡ ಕೂಡಿಸಿ ಶಿವ ದೇಹದಲ್ಲಿ ಪ್ರಾಣ ಪ್ರತಿಷ್ಠಾಪಿಸಿದ. ‘ನನ್ನ ಜೂಜ ಗೆಲಿಸಿದೆ’ಯೆಂದು ರಾಮಯ್ಯನನ್ನು ಶಿವ ಹೊಗಳಿದ. ನನ್ನ ರಂಭೆ ನಿನ್ನ ಅರ್ಜುನನನ್ನು ಗೆಲ್ಲಲಿಲ್ಲವೆಂದು ಪಾರ್ವತಿ ನುಡಿದಳು. ಆಗ ಶಿವನ ಆಜ್ಞೆಯಂತೆ ಅರ್ಜು ವಿಷ್ಣು ಗರುಡವನ್ನೇರಿ ವೈಕುಂಠಕ್ಕೆ ಹೋದರು.

ಆಕೃತಿ

ಕವಿಯೊಬ್ಬ, ಜೀವನವೆಂಬ ‘ಕೃತಿ’ಯನ್ನು ಒಂದು ‘ಆಕೃತಿ’ ವಿನ್ಯಾಸದಲ್ಲಿ ಕಟ್ಟಿಕೊಡುತ್ತಾನೆ. ಈ ಆಕೃತಿ ಪದ್ಯವಾಗಿದ್ದ ಪಕ್ಷದಲ್ಲಿ, ಅದು ಕಥಾವಿನ್ಯಾಸದ ಜೊತೆಗೆ ಛಂದೋವಿನ್ಯಾಸವನ್ನೂ ಒಳಗೊಳ್ಳುತ್ತದೆ, ಒಂದು ಕಲಾಕೃತಿಯಾಗಿ ನಿಲ್ಲುತ್ತದೆ.

ಕುಮಾರರಾಮ ರಾಜಕೀಯ ಕ್ಷೇತ್ರದ ವ್ಯಕ್ತಿ. ಈ ಹೊತ್ತಿಗೆ ಕರ್ನಾಟಕದ ಸಾರ್ವಭೌಮತ್ವ ಬಿರುಕುಬಿಟ್ಟು, ರಾಜರನ್ನು ಕುರಿತು ಮಹಾಕೃತಿ ನಿರ್ಮಾಣ ಮಾಡುವ ವಾತಾವರಣ ನಾಶವಾಗಿದ್ದಿತು. ಈ ಕಡೆ ಎತ್ತರ ಪ್ರತಿಭೆಯ  ಭಕ್ತಕವಿಗಳೂ ದೈವತ್ವಕ್ಕೆ ಮುಖಮಾಡಿ, ರಾಜತ್ವಕ್ಕೆ ಬೆನ್ನು ತಿರುಗಿಸಿದ್ದರು. ಇಂಥ ಪರಿಸ್ಥಿತಿಯಲ್ಲಿ ರಾಜರ ಮೇಲೆ ಸಾಮಾನ್ಯ ಕವಿಗಳ ಗಮನ ಮಾತ್ರ ಕೇಂದ್ರೀಕೃತವಾಯಿತು. ಇದಲ್ಲದೆ ಸಾಹಿತ್ಯಕ್ಕೆ ಸಾಮಾನ್ಯರೇ ಸಹೃದಯರಾಗಿದ್ದ ಮತ್ತು ಅವಸರದಿಂದ ವೀರಮೌಲ್ಯ ಪ್ರಸಾರ ಮಾಡಬೇಕಿದ್ದ ಕಾಲವದು. ಹೀಗಾಗಿ ಸಾಹಿತ್ಯದ ಶ್ರೇಷ್ಠತೆಯ ಮೇಲಿನ ಒತ್ತು ಕಡಿಮೆಯಾಗಿ, ಅದು ಮೌಲ್ಯ ಪ್ರಸಾರ ಮತ್ತು ಜನಪ್ರಿಯತೆಗಳ ಕಡೆಗೆ ಸರಿಯಿತು.

ಇಷ್ಟು ಹಿನ್ನೆಲೆಯಲ್ಲಿ ಕಥಾವಿನ್ಯಾಸವನ್ನು ಕುರಿತು ಹೇಳುವುದಾದರೆ, ಪ್ರಾಚೀನ ಕರ್ನಾಟಕದಲ್ಲಿ ಪುರಾಣ, ಚರಿತ್ರೆ, ಪುರಾಣದ ಚರಿತ್ರೀಕರಣ, ಚರಿತ್ರೆಯ ಪುರಾಣೀಕರಣ ಇತ್ಯಾದಿ ಸಾಹಿತ್ಯಕ ಪ್ರಯೋಗಗಳು ಉದ್ದಕ್ಕೂ ನಡೆದುಬಂದಿವೆ. ಆದಿಪುರಾಣವು ಪುರಾಣ, ವಿಕ್ರಮಾರ್ಜುನ ವಿಜಯವು ಪುರಾಣದ ಚರಿತ್ರೀಕರಣ, ಕಂಠೀರವ ನರಸರಾಜ ವಿಜಯವು ಚರಿತ್ರೆ, ಸಿದ್ಧರಾಮ ಚರಿತೆಯು ಚರಿತ್ರೆಯ ಪುರಾಣೀಕರಣ. ಈ ಅಂಶವನ್ನು ಗಮನಿಸಿ ಹೇಳುವುದಾದರೆ ಕುಮಾರರಾಮನ ಕಥೆಯು ಗಂಗ, ಅನಾಮಧೇಯ ಕವಿ-೧ ಇವರಲ್ಲಿ ಚರಿತ್ರೆಯಾಗಿ, ನಂಜುಂಡ, ಅನಾಮಧೇಯ ಕವಿ-೨, ಮಹಾಲಿಂಗಸ್ವಾಮಿಗಳಲ್ಲಿ ಚರಿತ್ರೆಯ ಪುರಾಣೀಕರಣವಾಗಿ ಹುಟ್ಟು ಪಡೆದಿದೆ. ಅಂದರೆ ಕುಮಾರರಾಮನನ್ನು ಮಹಾಲಿಂಗಸ್ವಾಮಿಯಲ್ಲಿ ಪರಶುರಾಮನೊಂದಿಗೆ, ನಂಜುಂಡನಂತೆ ಈ ಅನಾಮಧೇಯ ಕವಿ-‍೨ ರಲ್ಲಿ ಅರ್ಜುನನೊಂದಿಗೆ ಸಮೀಕರಿಸಲಾಗಿದೆ. ಇದರಿಂದ ಕನ್ನಡಿಗರ ಮನಸ್ಸಿನಲ್ಲಿ ಕುಮಾರರಾಮ ‘ಲೌಕಿಕ ವೀರನಾಗಿ’ ಹುಟ್ಟಿ, ‘ಪುರಾಣವೀರನಾಗಿ’ ಬೆಳೆದುದು ಸ್ಪಷ್ಟವಾಗುತ್ತದೆ. ಇಷ್ಟು ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿಯ ಕಥಾವಿನ್ಯಾಸವನ್ನು ಚರ್ಚಿಸಬಹುದು.

ಕುಮಾರರಾಮನನ್ನು ಕುರಿತ ೫ ಕಾವ್ಯಗಳಲ್ಲಿ ೨೬ ಸಂಧಿ ಪದ್ಯಗಳ ಈ ಕೃತಿ, ಗಾತ್ರ ದೃಷ್ಟಿಯಿಂದ ಈ ಕಡೆ ಹಳೆಯ ಕುಮಾರರಾಮನ ಸಾಂಗತ್ಯ, ಹೊಸ ಕುಮಾರರಾಮನ ಸಾಂಗತ್ಯ, ಆ ಕಡೆ ಬಾಲ ಕುಮಾರರಾಮನ ಸಾಂಗತ್ಯ, ರಾಮನಾಥ ಚರಿತೆಗಳ ಮಧ್ಯೆ ನಿಲ್ಲುತ್ತದೆ. ಕಥೆಯ ಕ್ರಮ ಸಾಮಾನ್ಯವಾಗಿ ಎಲ್ಲ ಕೃತಿಗಳಂತೆ ಮುಂದುವರಿದಿದ್ದರೂ ಸುರಿತಾಳ ಕಾಣಿಕೆ ಕೇಳಿ ಪಾದುಕೆ ಕಳಿಸಿದುದು, ಗುತ್ತಿಯ ಜಗದಪ್ಪನ ಅಧಿಕಾರಿಗಳು ಕಾಣಿಕೆ ಕೇಳಿ ಕಂಪಿಲನನ್ನು ನಡುದಾರಿಯಲ್ಲಿ ತಡೆದು ನಿಲ್ಲಿಸಿದುದು, ಕೊಮಾರ ರಾಮಯ್ಯನ ಮದುವೆ, ಕೊಮಾರರಾಮಯ್ಯನಿಗೆ ಪಟ್ಟಗಟ್ಟಿದುದು, ಜಟ್ಟಂಗಿ ರಾಮೇಶ್ವರನ ದರ್ಶನ-ಇವು ಈ ಕಾವ್ಯದ ಹೊಸ ಸೇರ್ಪಡೆಯಾಗಿವೆ.

ಜಗದಪ್ಪನ ಮಗಳು ರಾಮಕ್ಕ, ಮಂಚಣ್ಣನ ಮಗಳು ಕಾಮಕ್ಕ, ಚಾರಮರಾಯನ ಮೊಮ್ಮಕ್ಕಳಾದ ಸೋಮಾಯಿ, ಭೀಮಾಯಿ, ಬೈಚಪ್ಪನ ಮಗಳು ತಿಮ್ಮಾಯಿ-ಹೀಗೆ ೫ ಜನ ಕನ್ಯೆಯರೊಂದಿಗೆ ಕುಮಾರರಾಮನ ಮದುವೆ ಇಲ್ಲಿ ಜರುಗುತ್ತದೆ. ಚಾರಮರಾಯನಿಗೆ ಮಧುಸೂದನ, ವೆಂಕಟರಾಯ ಹೆಸರಿನ ಮಕ್ಕಳಿರುವುದು, ಹುಳಿಯಾರ ಮಾರಭೂಪಾಲನಿಗೆ ಕಲ್ಲರಸ ಹೆಸರಿನ ಮಂತ್ರಿ, ಹೊಯ್ಸಳ ಬಲ್ಲಾಳನಿಗೆ ನರಸಿಂಗರಾಯನೆಂಬ ಮಂತ್ರಿ ಇರುವುದು, ಜಗದಪ್ಪನ ಮಗ ಉತ್ತುಂಗರಾಯ, ಕಾಟಣ್ಣನ ಹೆಂಡತಿ ಕಂಚಲಮ್ಮ-ಇವೆಲ್ಲ ಹೊಸ ಸಂಗತಿಗಳು ಇಲ್ಲಿವೆ. ಕುಮಾರರಾಮನ ಮದುವೆ ಮಾಘ ಶುದ್ಧ ತದಿಗೆ ಗುರುವಾರ ಅಮೃತ ಸಿದ್ಧಿಯೋಗದಲ್ಲಿ, ಸೂರ್ಯೋದಯವಾದ ೧೦ ಗಳಿಗೆಯಲ್ಲಿ ಜರುಗಿದ ಸೂಚನೆ ಇಲ್ಲಿದೆ.

ಇವೆಲ್ಲವುಗಳಿಂದ ಅವಶ್ಯ ಗಮನಿಸಬೇಕಾದ ಸಂಗತಿಯೆಂದರೆ ರಾಮಯ್ಯನ ಚರಿತ್ರೆಯನ್ನು ಪುರಾಣ ಶಿಲ್ಪದಲ್ಲಿಅಳ ವಡಿಸುವ ಪ್ರಯತ್ನ ಮಾಡಿದುದು. ‘ಆಧಾರವಿಡಿದು ಪೇಳಿದನಾಗ ಗಂಗಯ್ಯ’ ಎಂಬ ಪದ್ಯದ ಮೂಲಕ ಈ ಧೋರಣೆಯನ್ನು ಸ್ಪಷ್ಟಪಡಿಸಿದ್ದಾನೆ. ಕೈಲಾಸದಲ್ಲಿ ಪಾವ್ವತಿಗೆ ಅಗೌರವ ತೋರಿದ ಅರ್ಜುನ ಗಣನಾಥನು ಕುಮಾರರಾಮನಾಗಿ, ರಂಭೆಯು ರತ್ನಾಜಿಯಾಗಿ ಜನಿಸಿದ ‘ಸಮಸ್ತೀಕರಣ’ ಪ್ರಯೋಗವಿಲ್ಲಿದೆ. ಪಂಪ ರನ್ನರ ಮಾದರಿ ಅನುಸರಿಸಿದ್ದರೂ, ಆ ಕೃತಿಗಳಲ್ಲಿಯಂತೆ ಈ ಪರಯೋಗ ಇಲ್ಲಿಯೂ, ಒಂದು ತೇಪೆಯಾಗಿ ನಿಂತಿದೆ. ಪಾರ್ವತಿಯ ಆದೇಶದ ಮೇರೆಗೆ, ರಂಭೆಯು ಕುಮಾರರಾಮನ ಪರನಾರಿ ಸೋದರವ್ರತ ನಾಶಪಡಿಸಲು ರತ್ನಾಜಿಯಾಗಿ ಹುಟ್ಟಿದಳೆಂಬ ಕಲ್ಪನೆಯು, ಪ್ರಭುಲಿಂಗ ಲೀಲೆಯ ಮಾಯಾದೇವಿಯ ಜನನದ ಅನುಕರಣೆಯಾಗಿದೆ. ಅದೇನೇ ಇದ್ದರೂ ಲೌಕಿಕ ವೀರನೊಬ್ಬನನ್ನು ಪುರಾಣವೀರನನ್ನಾಗಿಸುವ ಪ್ರಯತ್ನವಿಲ್ಲಿದೆ.

ಹಳೆಯ ಕುಮಾರರಾಮನ ಸಾಂಗತ್ಯ, ಹೊಸ ಕುಮಾರರಾಮನ ಸಾಂಗತ್ಯ ಮತ್ತು ಕೊಮಾರ ರಾಮಯ್ಯನ ಚರಿತ್ರೆಗಳಲ್ಲಿ ಸುಮಾರು ೩೦೦ ಪದ್ಯಗಳು ಸಮಾನವಾಗಿದೆ. ಇದಕ್ಕೆ ಕಾರಣ ಕರ್ತೃಗಳೇ? ಸಹೃದಯರೇ ಸ್ಪಷ್ಟವಾಗುವುದಿಲ್ಲ. ಅದೇನೇ ಇರಲಿ, ಈ ಮೂರು ಕೃತಿಗಳು ಶೂನ್ಯಸಂಪಾದನೆಯಂತೆ ಪರಿಷ್ಕಾರಗೊಂಡು ಸ್ವತಂತ್ರಕೃತಿ ರೂಪ ಪಡೆದಿವೆ.

ಛಂದೋವಿನ್ಯಾಸ ದೃಷ್ಟಿಯಿಂದ ಹೇಳುವುದಾದರೆ, ಸಾವಿರ ವರುಷಗಳ ಇತಿಹಾಸದಲ್ಲಿ ಕನ್ನಡ ಸಾಹಿತ್ಯ ವಿದ್ವಜ್ಜನಸಮುದಾಯದಿಂದ ಜನ ಸಮುದಾಯದತ್ತ ಸಾಗಿಬಂದಿದೆ. ಈ ಪ್ರಕ್ರಿಯೆ ಕಾರಣವಾಗಿ ಅದು ವಾಚನಪಾತಳಿಯಿಂದ ಶ್ರವಣ ಪಾತಳಿಗೆ ತಡೆಯುತ್ತ ಬಂದಿದೆ. ಈಗ ಸಹಜವಾಗಿಯೇ ಸಾರ್ವಜನಿಕರು ಕೇಳಲು ಯೋಗ್ಯವಾದ ಗೇಯಬಂಧಬಗಳನ್ನು ಹುಡುಕುತ್ತ ಬರಲಾಯಿತು. ಇದರ ಫಲವೆಂಬಂತೆ ವಾರ್ಧಕ, ಭಾಮಿನಿಗಳು ಬಿಚ್ಚಿಕೊಂಡವು. ಇನ್ನೂ ಗೇಯತೆಯಂತೆ ಬಯಸಿದಾಗ ಸಾಂಗತ್ಯ ಸಾಕಾರಗೊಂಡು, ನೂರಾರು ಕೃತಿಗಳು ಸೃಷ್ಟಿಯಾದವು. ಒಂದು ನಾಟಕ ಕೃತಿಯನ್ನು ಕಣ್ಣಿನಿಂದ ಓದುವುದು ಬೇರೆ, ರಂಗದ ಮೇಲೆ ನೋಡುವುದು ಬೇರೆ. ಹಾಗೆಯೇ ಒಂದು ಗೇಯ ಬಂಧವನ್ನು ಕಣ್ಣಿನಿಂದ ಓದುವುದು ಬೇರೆ, ಕಿವಿಯಿಂದ ಖೇಳುವುದು ಬೇರೆ. ಅಂದರೆ ಗೇಯ ಬಂಧಗಳನ್ನು ಓದುವುದಕ್ಕಿಂತ ಕೇಳುವುದೇ ಈ ಕೃತಿಗಳಿಗೆ ಒದಗಿಸುವ ಸರಿಯಾದ ನ್ಯಾಯವೆನಿಸುತ್ತದೆ. ಈ ಕೇಳುವ ಪರಂಪರೆಯಲ್ಲಿ ಸಿರುಮನನ್ನು ಕುರಿತು ೩ ಕೃತಿಗಳು, ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ, ಕಂಠಿರವ ನರಸರಾಜ ವಿಜಯಗಳಂತೆ, ಕುಮಾರರಾಮನನ್ನು ಕುರಿತು ೫ ಕೃತಿಗಳು ಕನ್ನಡದಲ್ಲಿ ಹುಟ್ಟಿಕೊಂಡವು.

ವೀರ, ಪ್ರಾಚೀನ ಕಾಲದಲ್ಲಿ ಬಹುಮುಖ್ಯ ಮೌಲ್ಯವಾಗಿದ್ದಿತು. ವೀರನೊಬ್ಬ ಯುದ್ಧದಲ್ಲಿ ಮಡಿಯುತ್ತಲೇ ಒಂದೆಡೆ ವೀರಗಲ್ಲ ಪೂಜೆ ನಡೆದರೆ, ಇನ್ನೊಂದೆಡೆ ಸಾಹಿತ್ಯ (ಶಿಷ್ಟ/ ಜಾನಪದ) ಮಾಧ್ಯಮದಲ್ಲಿ ಅವನ ಕೀರ್ತಿ ಪ್ರಸಾರಕಾರ್ಯ ನಡೆಯುತ್ತಿದ್ದಿತು. ಚಕ್ರವರ್ತಿಗಳಿಲ್ಲದ ಕರ್ನಾಟಕದಲ್ಲಿ ಸಂಭವಿಸಿದ ಚಿಕ್ಕಪುಟ್ಟ ಪಾಳೆಯಗಾರರ ಪರಸ್ಪರ ಘರ್ಷಣೆ ಮತ್ತು ಮುಸಲ್ಮಾನರ ಆಕ್ರಮಣಗಳಿಂದಾಗಿ ಈ ವೀರ ಮತ್ತು ಅದರ ಪ್ರಸಾರ ಇನ್ನೂ ಮಹತ್ವ ಪಡೆದವು. ಸಾಮಾನ್ಯವಾಗಿ ‘ವೀರನ ಸಾವು ಕತೆಯಾಗಿ ಪರಿದುದು’ ಎಂಬ ಶಾಸನ ಮಾತಿನಂತೆ ಸಾವನ್ನು ಸಾಹಿತ್ಯ ಮಾಡುವ ಮತ್ತು ಅದನ್ನು ಸಮಾಜದ ತುಂಬ ‘ಪರಿಚಯಿಸುವ’ ಸಲುವಾಗಿ ಚರಣ ಕವಿಗಳು, ಜಾನಪದ ನೀಲಗಾರರು (ಲೀಲೆಗಾರರು) ಹುಟ್ಟಿಕೊಂಡರು.

ಹೀಗಾಗಿ ಕುಮಾರರಾಮನನ್ನು ಕುರಿತ ಎಲ್ಲ ಕೃತಿಗಳು ಸಾಂಗತ್ಯದಲ್ಲಿಯೇ ಹೆಪ್ಪು ಗಟ್ಟಿದವು. ಇವುಗಳಲ್ಲಿ ನಂಜುಂಡನದು ವಿದ್ವತ್ತು ಕಾರಣವಾಗಿ ಭಾಷಾಲಯ ಒಂದು ಕಡೆ, ಛಂದೋಲಯ ಇನ್ನೊಂದು ಕಡೆ ನಡೆದು, ಬಹಳಷ್ಟು ಸಲ ಹಿತವಾದ ‘ಸಾಂಗತ್ಯಪಾಕ’ ಅಲ್ಲಿ ಸಿದ್ಧವಾಗಲಿಲ್ಲ. ಮಿಕ್ಕವರು ಜಾನಪದ ಪ್ರಜ್ಷೆಯ ಕವಿಗಳಾದ ಕಾರಣ, ಜಾನಪದ ನೆಲೆಯ ಸಾಂಗತ್ಯದಲ್ಲಿ ಭಾಷಾಲಯ-ಛಂದೋಲಯಗಳು ಬಹುಮಟ್ಟಿಗೆ ಕೈಹಿಡಿದು ನಡೆಯಲು ಸಾಧ್ಯವಾಯಿತು. ಈ ಮಾತು ಕೊಮಾರರಾಮಯ್ಯನ ಚರಿತ್ರೆಗಿಂತ ಹಳೆಯ, ಹೊಸ ಕುಮಾರರಾಮನ ಸಾಂಗತ್ಯಗಳಿಗೆ ಹೆಚ್ಚು ಅನ್ವಯಿಸುತ್ತದೆ. ಕೆಲವೊಮ್ಮೆ ಆಶುಕವಿತ್ವದಂತೆ ಸಾಂಗತ್ಯಪದ್ಯಗಳು ರೂಪುಗಳ್ಳುತ್ತ ಹೋಗುತ್ತಲಿರುವುದು ಇಲ್ಲಿಯ ವಿಶೇಷತೆಯಾಗಿದೆ.

ಸಾಮಾನ್ಯವಾಗಿ ಕಾವ್ಯರಚನೆ ಮಾರ್ಗದಿಂದ ದೇಶಿಗೆ ಹೊರಳುತ್ತ ಹೋದಷ್ಟು ಏನು ಹೇಳಬೇಕು ಎಂಬುದು ಮುಖ್ಯವಾಗಿ, ಹೇಗೆ ಹೇಳಬೇಕೆಂಬುದು ಅಮುಖ್ಯವಾಗುತ್ತದೆ.  ಆಗ ಅದರ ಕಲಾತ್ಮಕತೆ ಗೌಣಸ್ಥಾನಕ್ಕೆ ಸರಿಯಾಗುತ್ತದೆ. ಈ ಮಾತಿಗೆ ಪ್ರಸ್ತುತ ಕೃತಿಯನ್ನು ಉದಾಹರಣೆಯಾಗಿ ಹೇಳಬಹುದು. ಇಲ್ಲಿ ಕಥಾನಿರೂಪಣೆಯೇ ಪ್ರಧಾನವಾಗಿ, ಕೆಲವೊಮ್ಮೆ ಮಾತ್ರ ಸಂದರ್ಭ ಇಲ್ಲವೆ ಪದ್ಯಗಳು ಸುಂದರ ಘಟಕಗಳಾಗಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಈ ಕೃತಿಯಲ್ಲಿಯ ಕುಮಾರರಾಮಯ್ಯನ ಮದುವೆಯ ಸಂದರ್ಭ ನಿದರ್ಶನವೆನಿಸಿದೆ. ಆಡಂಬರ, ವೈಭವಗಳೇನೂ ಇಲ್ಲದೆ, ಸ್ವಭಾವೋಕ್ತಿರೂಪದಲ್ಲಿ ಬಿಡಿಸಿದ ಮದುವೆ ಮುಂತಾದ ಆಚರಣೆ, ಜಾನಪದ ಮನಸ್ಸು- ಸಂಸ್ಕೃತಿಗಳು ಇಲ್ಲಿ ತುಂಬ ಸೊಗಸಾಗಿವೆ. ಇಂಥದೇ ಪರಿಣಾಮಕಾರಿಯಾಗಿ ಚಿತ್ರಿಸಿದ ಉತ್ತಮ ಪದ್ಯಗಳು ಅಲ್ಲಲ್ಲಿ ಕಾಣಸಿಗುತ್ತವೆ. ರಾಮಯ್ಯನ ಮರಣಕ್ಕಾಗಿ, ತಾಯಿ-ಅಕ್ಕ-ತಂಗಿಯರು ವ್ಯಕ್ತಪಡಿಸಿದ ಶೋಕ ಪ್ರಸಂಗವೂ ಇಂಥ ಇನ್ನೊಂದು ಉದಾಹರಣೆಯಾಗಿದೆ.

ಈ ಸಂದರ್ಭದಲ್ಲಿ ಒಂದು ವಿಷಯವನ್ನು ಹೇಳಬಹುದಾಗಿದೆ. ಸಾಹಿತ್ಯಕೃತಿಯ ಆಸ್ವಾದನೆ, ವಿಮರ್ಶೆಗಳು ನಮ್ಮಲ್ಲಿ ಸತ್ಯದಿಂದ ಒಂದಿಷ್ಟು ದೂರ ಸರಿದಂತೆ ಕಾಣುತ್ತವೆ. ದೃಶ್ಯ, ಶ್ರವ್ಯ ಎರಡೂ ಸಾಹಿತ್ಯಗಳನ್ನು ಆಯಾ ಮಾಧ್ಯಮಗಳಲ್ಲಿಯೇ ಆಸ್ವಾದಿಸಿದಲ್ಲಿ, ವಿಮರ್ಶಿಸಿದಲ್ಲಿ ಅವುಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಇಂದು ಅವುಗಳನ್ನು ವಾಚನಪಾತಳಿಗೆ ತಂದು ಆಸ್ವಾದಿಸುವ-ವಿಮರ್ಶಿಸುವ ಸಂಪ್ರದಾಯ ಇತ್ತೀಚೆ ಹೆಚ್ಚು ಬೆಳೆದಿದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಸಾಂಗತ್ಯ ನಿಜ ಸ್ವರೂಪದಲ್ಲಿ ಕಾಣಿಸಿಕೊಳ್ಳುವುದು ಶ್ರವ್ಯ ಪಾತಳಿಯಲ್ಲಿವೇ. ಕೊಮಾರರಾಮಯ್ಯನ ಚರಿತ್ರೆಯ ಮೌಲ್ಯ ನಿರ್ಣಯಿಸುವಾಗ ಈ ಮಾತನ್ನ ಗಮನದಲ್ಲಿಡಬೇಕೆಂದು ಕಾಣುತ್ತದೆ.

ಸಂಸ್ಕೃತಿ

ಸಾಹಿತ್ಯವೆನ್ನುವುದು ಸಮಕಾಲೀನ ವಾಸ್ತವ, ಸಾರ್ವಕಾಲೀನ ಆದರ್ಶಗಳ ಪ್ರಸಾರಮಾಧ್ಯಮವಾಗಿದೆ. ಸಾಮಾನ್ಯವಾಗಿ ಎಲ್ಲ ಕೃತಿಗಳಲ್ಲಿ ಸಾರ್ವಕಾಲೀನ ಆದರ್ಶ ಚಿತ್ರಿತವಾಗಿದ್ದರೆ, ಕೆಲವು ಕೃತಿಗಳಲ್ಲಿ ಮಾತ್ರ ಸಮಕಾಲಿನ ವಾಸ್ತವ ದಾಖಲಾಗಿ, ಅವು ಸಾಂಸ್ಕೃತಿಕ ಮಹತ್ವ ಪಡೆಯುತ್ತವೆ. ಇಂಥ ಕೃತಿಗಳೆಂದರೆ ವಡ್ಡಾರಾಧನೆ, ಪಂಪಭಾರತ, ಬಸವಣ್ಣನವರ ವಚನ, ಹರಿಹರನ ರಗಳೆ, ಬ್ರಹ್ಮಶಿವನ ಸಮಯ ಪರೀಕ್ಷೆ ಇತ್ಯಾದಿ. ಈ ಮಾಲಿಕೆಯಲ್ಲಿ ಕೊಮಾರ ರಾಮಯ್ಯನ ಚರಿತ್ರೆ ತಪ್ಪದೇ ಸೇರಿಕೊಳ್ಳುತ್ತದೆ.

ಸಂಸ್ಕೃತಿಯೆನ್ನುವುದು ಸಮೂಹ ಸಮ್ಮತ ಜೀವನ ಪದ್ಧತಿಯಾಗಿದೆ. ಸಾಮಾನ್ಯವಾಗಿ ಇದು ಪ್ರಕ್ರಿಯಾತ್ಮಕವಾಗಿದ್ದು, ತನ್ನ ಕಾಲದ ಆದರ್ಶ-ವಾಸ್ತವಗಳ ನಿರಂತರ ಕ್ರಿಯೆಯಾಗಿದೆ. ಇದು ಈ ಕೃತಿಯಲ್ಲಿ ಧಾರ್ಮಿಕ, ಆಚರಣಾತ್ಮಕ, ಸಾಮಾಜಿಕ, ರಾಜಕೀಯ ಮೊದಲಾದ ಕ್ಷೇತ್ರಗಳನ್ನು ವ್ಯಾಪಿಸಿದೆ.

ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಕಂಪಿಲ ಸೋಮೇಶ್ವರ, ಜಟ್ಟಂಗಿ ರಾಮೇಶ್ವರ ಈ ಮನೆತನಕ್ಕೆ ಮುಖ್ಯ ದೇವತೆಗಳೆನಿಸಿದ್ದರು. ಹೀಗಾಗಿ ಈ ಕಾವ್ಯದ ತುಂಬ ಹೆಚ್ಚಾಗಿ ಶಿವಭಕ್ತಿವಾತಾವರಣವೇ ತುಂಬಿದೆ. ಕಂಪಿಲ ಸೋಮೇಶ್ವರನ ಪ್ರಸಾದದಿಂದ ಕಂಪಿಲರಾಯ, ಜಟ್ಟಂಗಿ ರಾಮೇಶ್ವರನ ಪ್ರಸಾದದಿಂದ ಕುಮಾರರಾಮ ಹುಟ್ಟಿದರೆಂಬುದು ಮಕ್ಕಳ ಜನನದ ಬಗೆಗೆ ಜನರಿಗಿದ್ದ ನಂಬಿಕೆಯನ್ನು ದ್ಯೋತಿಸುತ್ತದೆ. ಕ್ಷುದ್ರದೇವತೆಗಳಿಗೆ ಕುರಿ ಕೋಳಿ ಕೋಣಗಳನ್ನು ಬಲಿ ಕೊಡುವುದು ಇಲ್ಲಿ ಅನೇಕ ಬಾರಿ ಗೋಚರಿಸುತ್ತದೆ. ಇಷ್ಟಾರ್ಥ ಸಾಧನೆಗಾಗಿ ರತ್ನಾಜಿ ಹಲವು ದೈವಗಳನ್ನು ಹಲವು ಬಗೆಯಲ್ಲಿ ಬೇಡಿಕೊಳ್ಳುವುದು ಇಲ್ಲಿ ಕಂಡುಬರುತ್ತದೆ. ರಾಜಪರಿವಾರ ಜಟ್ಟಂಗಿ ರಾಮೇಶ್ವರ ದರ್ಶನಕ್ಕಾಗಿ ಹೋಗುವಾಗಿನ ವ್ಯವಸ್ಥೆ, ಆ ಕ್ಷೇತ್ರದಲ್ಲಿ ಜರುಗಿಸಿದ ವಿವಿಧ ಆಚರಣೆಗಳು, ಕುಮಾರರಾಮಯ್ಯನ ಮದುವೆಯಲ್ಲಿ ನಡೆದ ಮಂಗಲಕಾರ್ಯಗಳು ಆ ಕಾಲದ ಚಿತ್ರವನ್ನು ಢಾಳವಾಗಿ ತೋರಿಸುತ್ತವೆ.

ರಾಜಧರ್ಮಕ್ಕೆ ಬಂದರೆ ಅಂದಿನ ರಾಜಸತ್ತಾಯುಗದ ಚಿತ್ರ ಇಲ್ಲಿ ಸ್ಪಷ್ಟವಾಗಿ ಮೂಡಿದೆ. ‘ವೀರಭೋಜ್ಯಾ ಅಸುಂಧರಾ’ ಎಂಬಂತೆ ತೋಳ್ಬಲದ ಮೇಲೆ ಅಂದಿನ ರಾಜ್ಯಭಾರ ನಡೆದಿದ್ದಿತು. ಸಣ್ಣಪುಟ್ಟ ಪಾಳೆಯಗಾರರನ್ನು ಕಂಪಿಲ ಅರಸು ಸೋಲಿಸಿದುದು, ದಿಲ್ಲಿ ಸುರತಾಳ-ಕಂಪಿಲರಾಯ- ಕಾಕತೀಯ ಪ್ರತಾಪರುದ್ರ- ಹೊಯ್ಸಳ ವೀರಬಲ್ಲಾಳರು ತಮ್ಮ ಪ್ರಭುತ್ವಕ್ಕಾಗಿ ಮೇಲಾಟ ನಡೆಸಿದುದು, ಸಮಕಾಲೀನ ಪ್ರಭುಶಕ್ತಿ ಸ್ಪರ್ಧೆಗೆ ನಿದರ್ಶನವೆನಿಸಿವೆ. ‘ರಾಯರ ಗಭ್ಭದೊಳ್ ಜನಿಸಿದ ಬಳಿಕಿನ್ನು | ಕಾಯದಾಸೆಯ ಬಿಡಬೇಕು || ಆಯತವಾಗಿ ರಣಾಗ್ರದೊಳ್ ಕಡಿದಾಡಿ | ಸಾಯಬೇಕು ಯುಕ್ತಿಗಳುಂಟು’ ಎಂಬ ನೀತಿ ಅಂದು ಬೆಲೆ ಪಡೆದಿದ್ದ ಕಾರಣ, ಅನೇಕ ಯೋಧರ ವೀರಮರಣ ಇಲ್ಲಿ ಚಿತ್ರಿತವಾಗಿದೆ. ವೀರಪತ್ನಿಗೆ ನಿದರ್ಶನವೆಂಬಂತೆ ಸ್ತ್ರೀಯರು ‘ಮಾಸ್ತಿ’ಯಾಗುವ ವಿವರಗಳು ಇಲ್ಲಿ ದಟ್ಟವಾಗಿ ಮೂಡಿವೆ. ಇಲ್ಲಿ ಎರಡು ಸಲ ಇಂಥ ದೃಶ್ಯಗಳಿವೆ. ಕೈಯಲ್ಲಿ ಕನ್ನಡಿ, ಲಿಂಬೆಹಣ್ಣು, ಕಠಾರಿ, ಮಳಲ ಗೌರಿಯನ್ನು ಪೂಜಿಸುವುದು, ಗಂಡನ ಗುಣಗಾನ ಮಾಡುತ್ತ ಕಿಚ್ಚಿನ ಸುತ್ತ ಕುಣಿಯುವುದು, ಕಟ್ಟೆಯೇರಿ ಕಿಚ್ಚಿನಲ್ಲಿ ಧುಮುಕುವುದು ಇತ್ಯಾದಿ ಅಪೂರ್ವ ಚಿತ್ರಗಳು ಇಲ್ಲಿವೆ. ಸೋಲಿನ ಕೊನೆಯ ಹಂತದಲ್ಲಿ ಕಾಟಣ್ಣ ತನ್ನ ಹೆಂಡತಿಯನ್ನು ಕಠಾರಿಯಿಂದ ಇರಿಯುವುದೂ, ಸುರತಾಳನ ಮಗಳು ರಾಮಯ್ಯನ ರುಂಡವನ್ನು ಉಡಿಯಲ್ಲಿ ಇಟ್ಟುಕೊಂಡು ಚಿತಾಪ್ರವೇಶಕ್ಕೆ ಸಿದ್ಧಳಾಗುವುದು,  ಗಮನಿಸತಕ್ಕ ಸಂಗತಿಯಾಗಿವೆ. ಕಳ್ಳರಾಮನ ಪ್ರಸಂಗವಂತೂ ವೇಳಿವಾಳಿ ಸಂಪ್ರದಾಯವನ್ನು ನೆನಪಿಸುತ್ತದೆ. ಹೊಸ ರಾಜಧಾನಿಯ ನಿರ್ಮಾಣ ಸ್ವರೂಪ ಮತ್ತು ಅದರ ಬೇರೆ ಬೇರೆ ಭಾಗಗಳ ಚಿತ್ರ ಕುಮ್ಮಟ ದುರ್ಗ ಸಂಧಿಯಲ್ಲಿ ದಟ್ಟವಾಗಿ ಮೂಡಿ ನಿಂತಿವೆ.

ಯುದ್ಧಕ್ಕೆ ಸಂಬಂಧಪಟ್ಟ ಕೋಟೆ, ಕೊತ್ತಳ, ಅಗಳು, ಅನೇಕ ಬಗೆಯ ಆಯುಧಗಳು, ಪೆಟಲು ಹೆಸರಿನ ಮದ್ದು ಉಪಯೋಗಿಸುವ ಬಂದೂಕು, ಯುದ್ಧದ ಪೂರ್ವಸಿದ್ಧತೆ, ಯುದ್ಧರಂಗ, ಸೈನ್ಯಸಂಗ್ರಹ ರೀತಿ, ಸೈನಿಕರ ಪೋಷಣೆ ಇತ್ಯಾದಿಗಳು ಸಮಕಾಲೀನ ಯುದ್ಧ ಜೀವನದ ಚಿತ್ರವನ್ನೀಯುತ್ತವೆ. ದಾಳಿ ಸಂದರ್ಭದಲ್ಲಿ ಸಾಮಾನ್ಯ ಕುಟುಂಬಗಳು ಅನುಭವಿಸುತ್ತಲಿದ್ದ ಬವಣೆ, ಗುಣೆ ಹೋಗುತ್ತಲಿದ್ದ ರೀತಿ ದಟ್ಟವಾಗಿ ಮೂಡಿದೆ. ಕುಮಾರರಾಮನ ಪಟ್ಟಾಭಿಷೇಕ ಸಂಧಿಯಲ್ಲಿ ರಾಜ್ಯಾಡಳಿತ ವಿವರಗಳು, ಆಸ್ಥಾನದ ಶಿಷ್ಟಾಚಾರಗಳು ದಾಖಲಾಗಿವೆ.

ಮೊರೆ ಹೊಕ್ಕವರ ಕಾಯ್ವದು ರಾಜಸತ್ತಾಯುಗದ ಮುಖ್ಯ ಲಕ್ಷಣ. ಕುಮ್ಮಟದುರ್ಗದ ಯುದ್ಧಕ್ಕೆ ಮುಖ್ಯ ಕಾರಣ, ಮೊರೆ ಹೊಕ್ಕ ಬಹಾದ್ದೂರ (ಮಹಾವುದ್ದೀನ)ನಿಗೆ ಕುಮಾರರಾಮ ರಕ್ಷಣೆ ಕೊಟ್ಟುದು. ಈ ಒಂದು ವಿಷಯ ದಿಲ್ಲಿ ಸುಲ್ತಾನನ್ನು ಎದುರುಹಾಕಿಕೊಳ್ಳುವಂತೆ ಮಾಡಿತು. ಒಂದಲ್ಲ, ಎರಡಲ್ಲ, ಮೂರು ಸಲ ಯುದ್ಧವೇರ್ಪಟ್ಟು, ಅಭೇದ್ಯ ಕುಮ್ಮಟ ದುರ್ಗದ ನಾಶಕ್ಕೆ ಇದು ಕಾರಣವಾಯಿತು.

ರಾಜಸತ್ತಾಯುಗದ ಶೌರ್ಯಮೌಲ್ಯಕ್ಕೆ ಮೆರಗು ಬರುವುದು, ಪರಸ್ತ್ರೀ ವಿಷಯದ ಶುಚಿತ್ವದಿಂದ- ಎಂದು ನಂಬಿದ್ದ ಕಾಲವದು. ಹೀಗಾಗಿ ಈ ಪೂರ್ವದ ರಾಜರ ಶೌರ್ಯಘಟನೆಗಳಿಗಿಂತ ಶುಚಿಘಟನೆಯನ್ನೂ ಒಳಗೊಂಡ ಕುಮಾರರಾಮನ ಜೀವನ ಕವಿಗಳಿಗೆ ಹೆಚ್ಚು ಇಷ್ಟವಾಯಿತು, ಜನತೆಗೆ ಆದರ್ಶವಾಯಿತು. ಕುಮಾರರಾಮನ ಜೀವನದಲ್ಲಿ ಹೆಣ್ಣು ಮೂರು ರೂಪಗಳಲ್ಲಿ ಕಾಡಿದೆ. ಕಂಪಿಲನ ಕಿರಿಯ ರಾಣಿ ರತ್ನಾಜಿ ‘ಮುನಿದರೆ ಮಾರಿಯಾಗಿ’, ಸರಿತಾಳನ ಮಗಳು ಬಾಬಮ್ಮ ‘ವಿಫಲ ಪ್ರೇಮಿಯಾಗಿ’, ಏರಿಬಂದ ಮಾದಿಗಿತ್ತಿ ‘ಜೀವಹಂತಕಿಯಾಗಿ’ ಅವನ ಸುತ್ತ ಪಾತ್ರವಾಡಿದ್ದಾರೆ.* ಇವರಲ್ಲಿ ಮೊದಲಿನ ಇಬ್ಬರ ವಿಷಯದಲ್ಲಿ ಅವನು ಶುಷಿಮೌಲ್ಯವನ್ನು ಮೆರೆದು, ತನ್ನ ‘ಪರನಾರಿ ಸೋದರ’ ಬಿರುದಿಗೆ ಅರ್ಥ ತುಂಬಿದ್ದಾನೆ.

ಈತನ ಹೆಸರು ರಾಮ. ‘ಕುಮಾರ’ವೆನ್ನುವುದು ವಿಶೇಷಣ. ಇದು ಷಣ್ಮುಖನ ಹೆಸರು. ಬ್ರಹ್ಮಚಾರಿಯಾಗಿರುವ ಷಣ್ಮುಖ ಶುಚಿಯೂ ಹೌದು, ಶೂರನೂ ಹೌದು. ಹೀಗಾಗಿ ‘ಕುಮಾರ’ ವಿಶೇಷಣವನ್ನು ರಾಮನಿಗೆ ಅಂಟಿಸಲಾಯಿತು. ಕರ್ನಾಟಕದಲ್ಲಿ ಈ ಪರಂಪರೆಗೆ ಕುಮಾರರಾಮನೇ ಮೊದಲಿಗನಾದ. ಇದರ ಮುಂದುವರಿಕೆಯೆಂಬಂತೆ ಸಿರುಮನ ಸಾಂಗತ್ಯದಲ್ಲಿ ಕುಮಾರಮಲ್ಲ, ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯದಲ್ಲಿ ಕುಮಾರ ತೋಂಟದರಾಯ ಎಂಬ ಹೆಸರುಗಳು ಕಾಣಿಸಿಕೊಳ್ಳುವುದನ್ನು ಅವಶ್ಯ ಗಮನಿಸಬೇಕು.

ರಾಜರ ಇನ್ನೊಂದು ಲಕ್ಷಣ ‘ಶೃಂಗಾರ ಜೀವನ’. ಕುಮಾರರಾಮನ ಸಾಂಗತ್ಯದಲ್ಲಿ ಕಂಪಿಲರಾಯನು ಹರಿಯಲದೇವಿಯನ್ನು ಹೊರತುಪಡಿಸಿ, ಇನ್ನೂ ಹಲವರನ್ನು ಮದುವೆಯಾದುದು, ಹೆಚ್ಚಿನದಾಗಿ ತಾನು ವಯೋವೃದ್ಧನಾಗಿದ್ದರೂ ಯುವತಿ ರತ್ನಾಜಿಯನ್ನು ಮನದನ್ನೆಯಾಗಿ ಕರೆತಂದುದು, ಇಲ್ಲಿಯ ಮುಖ್ಯ ಅಂಶವೆನಿಸಿವೆ. ರತ್ನಾಝಿ ಕುಮಾರ ರಾಮನನ್ನು ಪ್ರೇಮಿಸಿದ ಪ್ರಸಂಗವಂತೂ ಈ ಕಾವ್ಯದ ಮುಖ್ಯ ಆಕರ್ಷಣೆಯೆನಿಸಿದೆ. ಇದಲ್ಲದೆ ಬೇಟೆ, ಜೂಜು, ಚೆಂಡಿನಾಟ ನೋಡಲು ಬಂದ ಸೂಳೆಯರ ವರ್ಣನೆಗಳು ಇಲ್ಲಿಯ ಶೃಂಗಾರ ವಿಲಾಸ ಜೀವನದ ಇನ್ನೊಂದು ಮುಖವೆನಿಸಿವೆ.

ಹೀಗೆ ಮಧ್ಯಕಾಲೀನ ಕರ್ನಾಟಕದ ವೀರಜೀವನವನ್ನು, ಅದಕ್ಕೆ ಪೂರಕವಾದ ಎಲ್ಲ ಮುಖಗಳನ್ನು ಚಿತ್ರಿಸುವ ಮಹತ್ವದ ಕೃತಿಯಾಗಿದೆ, ‘ಕೊಮಾರ ರಾಮಯ್ಯನ ಚರಿತ್ರೆ’.

ಪರಿಷ್ಕರಣ

ಕುಮಾರರಾಮನನ್ನು ಕುರಿತ ೫ ಕೃತಿಗಳಲ್ಲಿ ಹಳೆಯ ಕುಮಾರರಾಮನ ಸಾಂಗತ್ಯ, ಹೊಸ ಕುಮಾರರಾಮನ ಸಾಂಗತ್ಯ, ಕೊಮಾರರಾಮಯ್ಯನ ಚರಿತ್ರೆ- ಈ ಕೃತಿಗಳು ಪಾಠಾಂತರ ಸ್ವರೂಪದಿಂದ ರೂಪಾಂತರ ಸ್ವರೂಪಕ್ಕೆ ಹೊರಳುವ ಪ್ರಮಾಣದಲ್ಲಿ ಆಕಾರ ಪಡೆದುಕೊಂಡಿವೆ. ಸಾಲದುದಕ್ಕೆ ಹಾಡುವುದರಿಂದ ಉಂಟಾಗುವ ಹ್ರಸ್ವದೀರ್ಘ ವ್ಯತ್ಯಾಸಗಳೂ ಇಲ್ಲಿ ತಲೆಹಾಕಿವೆ. ಇಂಥ ಸಂದರ್ಭದಲ್ಲಿ ನಿಯತ ಭಿನ್ನಪಾಠಗಳಿಂದ ಕೂಡಿದ ಮಾರ್ಗ ಕಾವ್ಯಗಳ ಸಂಪಾದನೆಗೆ ಬಳಸುವ ನಿಯಮಗಳನ್ನೇ ಇಂಥ ದೇಶೀಕಾವ್ಯಗಳಿಗೆ ಬಳಸುವುದು ಸರಿಯಲ್ಲವೆಂದು ತೋರುತ್ತದೆ. ಹೀಗಾಗಿ ದೇಶೀಕಾವ್ಯ ಸಂಪಾದನೆಯನ್ನು ಕುರಿತು ಒಂದು ಮಾತು: ಮಾರ್ಗಕಾವ್ಯ ಸಂಪಾದನೆಗೆ ಹೆಚ್ಚು ಪ್ರತಿ ಬಳಸಿದಷ್ಟೂ ಪಾಠ ಹೆಚ್ಚು ಶುದ್ಧವಾಗುತ್ತದೆ. ದೇಶೀಕಾವ್ಯ ಸಂಪಾದನೆಗೆ ಹೆಚ್ಚು ಪ್ರತಿ ಬಳಸಿದ್ದಷ್ಟೂ ಪಾಠ ಹೆಚ್ಚು ಅಶುದ್ಧವಾಗುತ್ತದೆ. ಈ ಸತ್ಯವನ್ನು ಅರ್ಥಮಾಡಿಕೊಳ್ಳದೆ ಈವರೆಗೆ ಸಂಪಾದಿಸಿದ ನಂಬಿಯಣ್ಣನ ರಗಳೆ, ಸೋಮನಾಥ ಚಾರಿತ್ರ ಮೊದಲಾದ ದೇಶೀ ಕಾವ್ಯಗಳ ಸಂಪಾದನೆ ಮಿಶ್ರಪಾಠಕ್ಕೆ ಗುರಿಯಾಯಿತೆಂದೇ ಹೇಳಬೇಕು. ಆದುದರಿಂದ ಇನ್ನು ಮೇಲೆ ಈ ಹಾದಿಯನ್ನು ಬಿಟ್ಟು ಕಾಲದೃಷ್ಟಿಯಿಂದ ಪ್ರಾಚೀನ, ಭಾಷಾದೃಷ್ಟಿಯಿಂದ ಶುದ್ಧ, ಪ್ರತಿದೃಷ್ಟಿಯಿಂದ ಪೂರ್ಣ, ಕಥೆಯ ದೃಷ್ಟಿಯಿಂದ ಸಮಗ್ರವಾಗಿರುವ ಒಂದು ಪ್ರತಿಯನ್ನು ಮಾತ್ರ ಆಯ್ದುಕೊಂಡು, ಸಾಧ್ಯವಿದ್ದಲ್ಲಿ ಲಿಪಿಕಾರನ ಭಾಷಾದೋಷಗಳನ್ನು ನಿವಾರಿಸಿ, ಅವಶ್ಯವಿದ್ದಲ್ಲಿ ಮಾತ್ರ ಬೇರೆ ಒಂದೋ ಎರಡೋ ಉತ್ತಮ ಪ್ರತಿಗಳಿಂದ ಶುದ್ಧಪಾಠ ಸ್ವೀಕರಿಸಬಹುದು. ತೀರ ಅನಿವಾರ್ಯ ಪ್ರಸಂಗದಲ್ಲಿ ಊಹೆ ಮಾಡಬಹುದು. ಇದು ದೇಶೀಕಾವ್ಯ ಸಂಪಾದನೆಯ ಸರಿಯಾದ ಕ್ರಮ. ಇದರಿಂದ ಕೃತಿ ಮಿಶ್ರಪಾಠಕ್ಕೆ ಗುರಿಯಾಗುವುದನ್ನು ತಪ್ಪಿಸಿ, ಕೊನೆಯ ಪಕ್ಷ ಒಂದು ಪ್ರತಿಯನ್ನಾದರೂ ಶುದ್ಧವಾಗಿ ಉಳಿಸಿಕೊಟ್ಟಂತಾಗುತ್ತದೆ.

ಈ ದೃಷ್ಟಿಯಿಂದ ನಾವು ಚಿತ್ರದುಗ್ಗದ ಪ್ರೊ. ಬಿ. ರಾಜಶೇಖರಪ್ಪ ಅವರು ಪೂರೈಸಿದ ತಾಳೆಪ್ರತಿಯನ್ನು ಆಧಾರವಾಗಿಟ್ಟುಕೊಂಡು, ಅವಶ್ಯವೆನಿಸಿದಲ್ಲಿ ಅಂದರೆ ಪಾಠ ಅರ್ಥವಾಗದಲ್ಲಿ, ಮತ್ತು ತ್ರುಟಿತವಾಗಿದ್ದಲ್ಲಿ ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯ ಕಾಗದ ಪ್ರತಿಯ ನೆರವು ಪಡೆದಿದ್ದೇವೆ. ಹಳೆಯ ಕುಮಾರರಾಮನ ಸಾಂಗತ್ಯ, ಹೊಸ ಕುಮಾರರಾಮನ ಸಾಂಗತ್ಯಗಳ ಸುಮಾರು ೩೦೦ ಪದ್ಯಗಳು ಇಲ್ಲಿರುವುದರಿಂದ, ಆ ಕಾವ್ಯಗಳ ಪಾಠವನ್ನು ಗಮನಿಸಿದ್ದೇವೆ. ಹೀಗೆ ಪಡೆದ ಸಹಾಯದ ಸೂಚನೆಗಾಗಿ ಯಾವ ಚಿಹ್ನೆಯನ್ನೂ ಬಳಸಿಲ್ಲ. ಇಷ್ಟಾಗಿಯೂ ತೃಪ್ತಿ ಸಿಗದ ಪಕ್ಷದಲ್ಲಿ ಊಹೆಗೆ ಶರಣುಹೋಗಿ, ಚೌಕಕಂಸದಲ್ಲಿ ಅದನ್ನು  ನಮೂದಿಸಿದ್ದೇವೆ. ಇದನ್ನು ಮೀರಿಯೂ ಕೆಲವು ಪಾಠಸಮಸ್ಯೆಗಳು ಉಳಿದುಕೊಂಡಿವೆಯೆಂದು ತಿಳಿಸಬಯಸುತ್ತೇವೆ.

ಹಸ್ತಪ್ರತಿ ವಿವರ

ಪ್ರೊ. ಬಿ. ರಾಜಶೇಖರಪ್ಪ ಅವರ ಪ್ರತಿ: ಚಿತ್ರದುರ್ಗದ ಕನ್ನಡ ಪ್ರಾಧ್ಯಾಪಜರಾದ ಪ್ರೊ. ಬಿ. ರಾಜಶೇಖರಪ್ಪ ಅವರ ಹತ್ತಿರ ಇದ್ದ ತಾಳೆ ಪ್ರತಿ. ಈಗ ಇದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಾಂಡಾರದಲ್ಲಿದೆ. ಆಕಾರ ೧೮” x ೨”. ಪ್ರತಿಯ ಅಂಚು ಅಲ್ಲಲ್ಲಿ ಮುರಿದಿವೆ. ಲಿಪಿಕಾರ ಅವಸರದಲ್ಲಿ ಪದ್ಯಗಳನ್ನು ಅಪೂರ್ಣರೂಪದಲ್ಲಿ ಬರೆದಿದ್ದಾನೆ. ಕೆಲವೊಮ್ಮೆ ಸಾಲುಗಳು ಪುನರುಕ್ತವಾಗಿವೆ.

ಆದಿ: ಶ್ರೀ ಗುರುವೆ ಗತಿ. ಶ್ರೀ ವಿಜಯಭ್ಯುದಯ ಶಾಲಿವಾಹನ ಸಖಾಬ್ದ ೧೭೨೩ನೆ ವಿರೋಧಿ ಸಂವತ್ಸರದ ಚೈತ್ರ ಬಹಳ ೯ ಸೋಮವಾರ ದಿವ್ಸ ಪ್ರಥಮಾರಂಭವಂ ಮಾಡಿ ಕೊಮರ ರಾಂಯ್ಯನ ಚರಿತ್ರವ ಬರವುದಕ್ಕೆ ಶುಭಮಸ್ತು ಶೋಭನಮಸ್ತು ಆಯುರಾರೋಗ್ಯ ಐಶ್ವರ್ಯ ಮಸ್ತು. ನಿರ್ವಿಘ್ನಮಸ್ತು. ವಿನಾಯಕ ಮಂಗಳಂ ಬವತಂತುತೆ. ಬಿಳಿಚೋಡು ಮುಖ್ಯ ಪ್ರಾಣಯ ನಮಃ ಶ್ರೀ ಗಿರಿಜೇಶ್ವರಯ ನಮಃ. ರಾನ ತಮ್ಮಿಚ್ಛೆ. ಶ್ರೀ ಗಿರಿಜಾಶಂಬು ಜಗದೀಶನಾಯಕ ಭೋಗಿಭೂಷಣ ಭಾಳನೇತ್ರ.

ಅಂತ್ಯ: ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರುಷಂಗಳು ೧೭೨೩ನೆ ವಿರೋಧಿ ಸಂವತ್ಸರ ಜೇಷ್ಠಶು ೧೨ ಮಂದವಾರದ ಗಳಿಗೆ ೧೬ ರೊಳಗೆ ಪರನಾರಿ ಸೋದರನಾದಂತ ಕೊಮಾರ ರಾಮಯ್ಯನ ಚಾರಿತ್ರ ಸಂಪೂರ್ಣವಾಗಿ ಮುಗಿಯಿತು ಶ್ರೀ. ಈ ಪುಸ್ತಕವ ಬರದಾ x x x x ಈರಣ್ಣನ ಕುಮಾರನಾದಂತ ಸಣ್ಣಮಲ್ಲಪ್ಪ ತನ್ನ ಕುಮಾರನಾದಂತ ಸ್ತಿರಂಜೀವಿ ಮಲ್ಲಪ್ಪಗೆ ಧನಕನದ ವಸ್ತು ವಾಹನವಾಗಿ ಸಂತೋಷದಿಂದ ಓದಿಕೊಳ್ಳುವುದಕ್ಕೆ ಬರಕೊಟ್ಟಾತ ಬಿಳಿಚೋಡ ಓದಿಸುವ ಭೀಮಪ್ಪ ಬರದುಕೊಟ್ಟದು. ಬಿಳಿಚೋಡ ಮುಖ್ಯಃ ಪ್ರಾಣಾಯ ನಮಃ. ಕಣೆಕಲ್ಲ ಸಿದ್ದೇಶಾಯ ನಮಃ ಶ್ರೀ ಶ್ರೀ.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರತಿ: ಇದು ಹುಲ್ಲೂರು ಶ್ರೀನಿವಾಸ ಜೋಯಿಸರಿಗೆ ಸಿಕ್ಕಿದ್ದ ಕಾಗದ ಪ್ರತಿಯ ನಕಲು. ಮೂಲತಃ ಈ ನಕಲು ಡಾ. ಜಿ. ವರದರಾಜರಾವ್ ಅವರಿಗೆ ಸಂಬಂಧಿಸಿದುದು. ಇದರ ಝೆರಾಕ್ಸ್ ಪ್ರತಿಯನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ದುರ್ದೈವದ ಸಂಗತಿಯೆಂದರೆ ಈ ಝೆರಾಕ್ಸ್ ಪ್ರತಿಗೆ ಮೂಲವಾಗಿದ್ದ ಕನ್ನಡ ಅಧ್ಯಯನ ಸಂಸ್ಥೆಯ ಕಾಗದ ಪ್ರತಿಯೂ ಇಂದು ಅಲ್ಲಿ ಸಿಗುತ್ತಿಲ್ಲ. ಮತ್ತೂ ದುರ್ದೈವದ ಸಂಗತಿಯೆಂದರೆ ಈ ಕಾಗದ ಪ್ರತಿಗೆ ಮೂಲವಾಗಿದ್ದ ಹುಲ್ಲೂರ ಅವರು ದೊರಕಿಸಿಕೊಂಡಿದ್ದ ಕಾಗದ ಪ್ರತಿ ಎಂದೋ ಕಳೆದುಹೋಗಿದೆ. ಹೀಗಾಗಿ ಈಗ ಡಾ. ವರದರಾಜರಾವ್ ಅವರು ತಮ್ಮ ಪಿಎಚ್‌.ಡಿ. ಪ್ರಬಂಧದಲ್ಲಿ ಕೊಟ್ಟಿರುವ ಹುಲ್ಲೂರ ಅವರ ಪ್ರತಿಯ ಪರಿಚಯ ಕೊಡುವುದೇ ಇಲ್ಲಿ ನಮಗೆ ಅನಿವಾರ್ಯವಾಗಿದೆ. ‘ನಾಗಸಂಗಯ್ಯ ರಚಿತವೆಂದು ಸೂಚಿಸಿರುವ ಪ್ರತಿಯಲ್ಲಿ ೨೫ ಸಂಧಿಗಳು ಸಮಗ್ರವಾಗಿವೆ. ಈ ವೇಳೆಗಾಗಿಯೇ ಪದ್ಯಗಳ ಸಂಖ್ಯೆಯನ್ನು ೨೫೭೩ ಎಂದು ಸೂಚಿಸಲಾಗಿದೆ. ಇಲ್ಲಿಗೆ ಕಾಟಣ್ಣನ ಮರಣ ಪ್ರಸಂಗ ಪೂರ್ಣವಾಗುತ್ತದೆ. ೨೬ನೆಯ ಸಂಧಿಯ ಮಂಗಳ ಪದ್ಯವು ಮಾತ್ರ ಉಲ್ಲೇಖಿತವಾಗಿ ಪ್ರತಿ ಇಲ್ಲಿಗೇ ನಿಲ್ಲುತ್ತದೆ.’

ಕೃತಜ್ಞತೆ

ಕುಮಾರರಾಮನನ್ನು ಕುರಿತ ಅಪ್ರಕಟಿತ ನಾಲ್ಕು ಕೃತಿಗಳ ಪರಿಷ್ಕರಣ ಶ್ರೇಣಿಯ ಈ ಎರಡನೆಯ ಸಂಪುಟಕ್ಕೆ ಹಸ್ತಪ್ರತಿಯನ್ನು ಪೂರೈಸಿದ ಪ್ರೊ. ಬಿ. ರಾಜಶೇಖರಪ್ಪ (ಚಿತ್ರದುರ್ಗ), ಪ್ರೊ. ಸಿ.ಪಿ. ಸಿದ್ಧಾಶ್ರಮ (ನಿರ್ದೇಶಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು) ಅವರಿಗೆ, ಸೂಕ್ತ ನೆರವು ನೀಡಿದ ಶ್ರೀಮತಿ ವೈ.ಸಿ. ಭಾನುಮತಿ ಅವರಿಗೆ ಕೃತಜ್ಞತೆಗಳು.

ಈ ಕೃತಿ ಪ್ರಕಟಣೆಗೆ ಅವಕಾಶ ಮಾಡಿಕೊಟ್ಟ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್. ಜೆ. ಲಕ್ಕಪ್ಪಗೌಡ ಅವರಿಗೂ, ಪ್ರಸಾರಾಂಗದ ಮಾಜಿ ನಿರ್ದೇಶಕರಾದ ಪ್ರೊ. ಎ.ವಿ. ನಾವಡ ಅವರಿಗೂ ವಂದನೆಗಳು.

ಈ ಕೃತಿಯ ಮುದ್ರಣಕಾರ್ಯದಲ್ಲಿ ನೆರವಾದ ಶ್ರೀ ಕೆ.ಎಲ್. ರಾಜಶೇಖರ್, ಅಚ್ಚುಕಟ್ಟಾಗಿ ಮುದ್ರಿಸಿದ ಕೈಲಾಸ್ ಪ್ರಿಂಟರ್ಸ್‌ನ ಮಾಲೀಕರಾದ ಶ್ರೀ ಎಂ. ರಾಜಶೇಖರ್ ಮತ್ತು ಅವರ ಸಿಬ್ಬಂದಿ ವರ್ಗದವರಿಗೂ ನಮ್ಮ ನೆನೆಕೆಗಳು ಸಲ್ಲುತ್ತದೆ.

ಎಂ.ಎಂ. ಕಲಬುರ್ಗಿ* ಈ ಮಾದಿಗಿತ್ತಿಯು ಸಗರದಲ್ಲಿ ನೆಲೆ ನಿಂತಿದ್ದ ಶೇಖ ಸೂಫಿ ಸರಮಸ್ತ ಎಂಬುವನ ಮಗಳೆಂದು ಈಟನ್ ಅವರು ತನ್ನ ‘ಸೂಫೀಜ್ ಆಫ್ ಬಿಜಾಪುರ’ ಪಸುತದಲ್ಲಿ (ಪುಟ ೨೨-೨೭) ಹೇಳಿದ್ದಾರೆ.