ಸಂಧಿ:೧೦

ರಾಮಯ್ಯ ಸುತ್ತಲಿನ ರಾಜ್ಯಗಳನ್ನು ಒತ್ತಿ ಆಳುತ್ತಲಿರುವ ಸಂದರ್ಭದಲ್ಲಿ ದಿಳ್ಳಿ ಸುರಿತಾಳನಿಗೂ ಅವನ ಸರದಾರ ಬಹದ್ದೂರನಿಗೂ ವಿರಸ ಹುಟ್ಟಿತು. ಬಹದ್ದೂರ ಅಲ್ಲಿಂದ ತಪ್ಪಿಸಿಕೊಂಡು ಮುಂಗುಲಿರಾಯನ ಹತ್ತಿರ ಆಶ್ರಯ ಹೇಳಿದನು. ನೇಮಿಗೆ ಅಂಜಿ ಅವನು ಆಶ್ರಯ ನಿರಾಕರಿಸಲು, ಬಹದ್ದೂರ ಓರುಗಲ್ಲಿಗೆ, ಅಲ್ಲಿಂದಲೂ ನಿರಾಕೃತನಾಗಿ ಗುತ್ತಿ ಜಗದಪ್ಪನಲ್ಲಿಗೆ, ಅಲ್ಲಿಂದಲೂ ನಿರಾಕೃತನಾಗಿ ‘ಬೆದರಿದ ಹುಲ್ಲೆ’ಯಂತೆ ಕುಮ್ಮಟಕ್ಕೆ ಬಂದನು. ರಾಮಯ್ಯ ‘ಮೊರೆಹೊಕ್ಕ ಖಾನರ ಕೊಡೆ’ನೆಂಬ ಬಿರುದು ಧರಿಸಿ, ಅವನಿಗೆ ಆಶ್ರಯ ನೀಡಿದನು. ಉಂಬಳಿಯಾಗಿ ಒಂದು ಗ್ರಾಮವನ್ನೂ ಮುನ್ನೂರು ವರಹಗಳನ್ನೂ ಕೊಟ್ಟನು.

ಬಹದ್ದೂರ ತಲೆಮರೆಸಿಕೊಂಡು ಹೋದುದನ್ನು ಕೇಳಿದ ಸುರಿತಾಳ ಸಿಟ್ಟಿಗೆದ್ದು, ಚರರನ್ನು ಕಳಿಸಿದ. ಅವರು ಅಂಗ, ಕಳಿಂಗ, ಕಾಶ್ಮೀರ, ಬರ್ಬರ, ಬಂಗಾಳ, ತೆಲುಗು, ಕಾಂಬೋಜ ದೇಶಗಳನ್ನು ಸುತ್ತಿ, ಕರ್ನಾಟಕದ ಗುತ್ತಿಗೆ ಬಂದು, ಅವನು ಕುಮ್ಮಟದಲ್ಲಿರುವುದನ್ನು ಜಗದಪ್ಪನಿಂದ ತಿಳಿದುಕೊಂಡರು. ಸುದ್ದಿ ತಿಳಿದ ಸುರಿತಾಳ, ಅವನನ್ನು ಹಿಡಿತರಲು ನೇಮಿಖಾನನನ್ನು ದಂಡಿನೊಂದಿಗೆ ಕಳಿಸಿದನು. ರಾಮನನ್ನು ಜೀವ ಸಹಿತ ತರಲು ಬಾಬಮ್ಮ ಹೇಳಿದಳು. ಆಗ ಅಂಬರಖಾನ, ತುಂಬರಖಾನ, ಅಬ್ದುಲ್, ಶಂಬರಖಾನ್, ಶೇರ್ಖಾನ, ಡೊಂಬಿಸಾಹೇಬ ಖಾನ, ಅಲ್ಲಿಯಖಾನ, ಶಂಭಾರಿಖಾನ, ಜಲ್ಲಿಖಾನ, ಯಕಲಾಸಖಾನ, ಯಕ್ಕಟಿಖಾನ, ಸೈದ್ರಲ್ಲಿ, ಬಕರಿಯ ಖಾನ, ಬಲೆಖಾನ, ಮಕರಂಕಖಾನ, ಮಾಮುದ್ದು ಬಕರಿಯಖಾನ, ಶಕುನಾದಖಾನ, ಬಿಬ್ಬಖಾನ, ಬಿಜ್ಜಾರಿಖಾನ, ಗುಜ್ಜಾರಿಖಾನ, ಮೀರಲ್ಲಿ, ರಾಜಖಾನ, ತುಂಬರಝಾನ, ಲುಹ್ಹಖಾನರೆಲ್ಲ ಒಂದಾದರು. ಎಪ್ಪತ್ತು ಸಾವಿರ ಕುದುರೆ ವಜೀರನಾದ ಎಪ್ಪತ್ತಿಖಾನ, ಕುಪ್ಪಳಿಸುತ ಅರಿಬಲದೊಳು ತೋರುವ ಅಪ್ಪಾಜಿಖಾನ, ಮೂವತ್ತು ಸಾವಿರ ಕುದುರೆ ವಜೀರನಾದ ಮೀರ ಅಬ್ದುಲ್‌ಖಾನ, ಸುರಿತಾಳನ ಹುಜರಿನಲ್ಲಿರುವ ಮಾವೀ ಹಳದಿಖಾನ, ಐವತ್ತು ಸಾವಿರ ಕುದುರೆ ಮಾಜೀರನಾದ ಸೈದಾಲಖಾನ, ಮೈಜೋಡು, ಸಿಂಗಾಡಿ, ತರ್ಕಾಸ, ಕೈಯಂಬುಗಳ ಸೈದಲಖಾನ, ಅರುವತ್ತು ಸಾವಿರ ಕುದುರೆ ವಜೀರನಾದ ತರುವೋಲಿಖಾನ, ಬರುದಲೆ ಬಾಬಾಜಿಖಾನ, ಎಪ್ಪತ್ತು ಸಾವಿರ ಕುದುರೆ ವಜೀರನಾದ ಮಜರಲ್ಲಿ ಖಾನ ಬಂದು ಸೇರಿದರು. ಎಲ್ಲರೂ ಹೊರಟು ಗಂಗಾಸಾಗರಕ್ಕೆ ಬಂದರು. ಭಂಗಿಯ ಹೇರು, ಕಡಲೆ, ಮಿಠಾಯಿ, ಜಾಜಿಕಾಯಿ, ಜಾಪತ್ರೆ, ಬೇಯಿಸಿದ ರೊಟ್ಟಿ, ಅಕ್ಕಿ, ಬೇಳೆ, ಸಕ್ಕರೆ, ಗೋದಿಹಿಟ್ಟು, ತುಪ್ಪದ ಹೇರು ಸಾಗಿದವು. ಹಸಿರು ಕೆಂಪಿನ ಗುಡಿ, ಸಾಳುಪಟ್ಟೆದ ಗುಡಿ, ಹಸುರಂಜಿ ಬಿಳಿದಿನ ಗುಡಿ, ಬಿಸಿಲು ಗುಡಾರ ಸಹಿತ ಹೊರಟು, ಚಿಕ್ಕಡಿಳ್ಳಿ (ದೇವಗಿರಿ) ಮಾರ್ಗವಾಗಿ ಮುನ್ನಡೆದರು. ಭಾಗೀರಥಿ ದಾಟಿ ಸುರಿತಾಳಪುಡ, ಧನಂಜಯ ಪಟ್ಟಣ, ವಾರಣಾಸಿ, ಚಿತ್ರಕೂಡ ಮಾರ್ಗವಾಗಿ ಯಮುನೆಯ ತೀರಕ್ಕೆ ಬಂದರು. ಸೊಲ್ಲಾಪುರದಿಂದ ವಿಜಾಪುರಕ್ಕೆ ಬಂದುನಿಂತರು. ಪುಗುದಿಯಖಾನನನ್ನು ಐದು ಜನ ಕುದುರೆ ಚರರೊಂದಿಗೆ ಕುಮ್ಮಟಕ್ಕೆ ನೇಮಿ ಕಳಿಸಿದನು. “ದುಂಡು ಮಿರಜಿ ವರೆಗೆ ಬಂದಿದೆ, ಒಪ್ಪಂದ ಮಾಡಿಕೊಳ್ಳಬೇಕೆಂದು” ಕಂಪಿಲನಿಗೆ ಚರರು ಹೇಳಿದರು. ‘ಕುರಿಯಟ್ಟಿಯ ಹೊಕ್ಕರೆ ಕುರುಬ ಕೊಡನು ತನ್ನ ಮೊರೆ ಹೊಕ್ಕ ಪೋರನ’. ಹೀಗಿರುವಾಗ ನಾನು ಬಾಹದೂರರನ್ನು ಬಿಟ್ಟುಕೊಡಲಾರೆ, ಎಂದು ರಾಮಯ್ಯ ಹೇಳಿ ಚರರನ್ನು ಮರಳಿಸಿದ.

ತಂದೆಯಿಂದ ಒಂದು ಬಿಂದಿಗೆ ಹೊನ್ನಪಡೆದು ಎಲ್ಲರಿಗೂ ಹಂಚಿ, ರಾಮಯ್ಯ ಯುದ್ಧಕ್ಕೆ ಸಿದ್ಧನಾದ. ರಾಮನ ಸಿಮೆ ಗಡಿವಾಡಕ್ಕೆ ನೇಮಿಯ ದಂಡು ಬಂದಿತು. ಅಲ್ಲಿಂದ ಯುದ್ಧವಾಡುತ್ತಲೇ ಕುಮ್ಮಟವನ್ನು ಸಾರಿತು. ಮುಖ್ಯ ದಂಡು ಮಿರಜೆ, ತೊರಗಲ್ಲು, ಬದಾಮಿ, ನರಗುಂದ ನದಿಮಾರ್ಗವಾಗಿ ಕುಮ್ಮಟವನ್ನು ತಲುಪಿತು. ಮಾವ ಗುತ್ತಿ ಜಗದಪ್ಪ ಸೈನ್ಯ ಸಹಾಯ ಕಳಿಸುವುದಾಗಿ ರಾಮನಿಗೆ ಹೇಳಿದ. ಸುರಿತಾಳನೊಂದಿಗೆ ಬಳಕೆಯಾಡುವ ನಿಮ್ಮ ನೆರವು ನ್ಯಾಯ ಸಮ್ಮತವಲ್ಲವೆಂದು ರಾಮ ಉತ್ತರ ಕಳಿಸಿದ.

ಸಂಧಿ:೧೧

ನೇಮಿಯ ದಂಡು ಕಮ್ಮಟವನ್ನು ಮುತ್ತಿತು. ಮರಬಿಲ್ಲು, ಕತ್ತಿ, ಈಟಿ, ಬಾಣ, ಪೆಟ್ಟಿಲು, ಬರುಚಿ, ಕಠಾರಿ, ಕೈಯಂಬು, ಆನೆ, ಕುದುರೆ, ಕಾಲ್ಬಲದೊಂದಿಗೆ ರಾಮ ಯುದ್ಧಕ್ಕೆ ಸಿದ್ಧನಾದ. ಚಾಮರಾಯನ ಇಬ್ಬರು ಮಕ್ಕಳು ವೈರಿಯ ದಾರಿಕಟ್ಟಿದರು. ಗುನುಗುನು ಮುನ್ನೂರು ಸೈನಿಕರು, ಹನ್ನೊಂದು ಆನೆಗಳನ್ನು ಸೆರೆಹಿಡಿದು, ರಾಮನಿಗೆ ಒಪ್ಪಿಸಿದ. ಗಡಿಯ ಕಾವಲ ಕಾಯುವ ಕಾಟನಾಯಕ ಕಡೆಯಕಲ್ಲ ಹತ್ತಿರ ವೈರಿಗಳನ್ನು ಎದುರಿಸಿ, ಕುದುರೆಗಳನ್ನು ಸೆರೆಹಿಡಿದು, ರಾಮನಿಗೆ ಒಪ್ಪಿಸಿದ. ಮಲೆಯ ಕಾವಲ ಕಾಯುವ ಹೊಲೆಯರ ಹೊನ್ನುಗ ಕೋಡುಗಲ್ಲನ್ನೇರಿ ವೈರಿಗಳನ್ನು ಕೊಂದು, ಆನೆಯ ಕುದುರೆ ಸೆರೆಹಿಡಿದು, ರಾಮಯ್ಯನಿಗೆ ತುರುಕರನ್ನು ಬೆದರಿಸಿ, ಓಡಿದಿರ. ೯೦ ಕುದುರೆ ಹಿಡಿತಂದು ರಾಮಯ್ಯನಿಗೆ ಒಪ್ಪಿಸಿದ. ಮಾಚನು ಗೊಂದಿಯ ಕಣಿವೆಯಲ್ಲಿ ವೈರಿಗಳನ್ನು ಕೊಂದು, ಇನ್ನೂರು ಕುದುರೆಗಳನ್ನು ಸೆರೆಹಿಡಿದು ತಂದು, ಒಪ್ಪಿಸಿದ. ಗುಜ್ಜಲ ಓಬನೂ ಇಲ್ಲಿ ನೆರವಾದ. ಎಮ್ಮೆಗುಡ್ಡಕ್ಕೆ ಬಂದ ವೈರಿಗಳನ್ನು ಕೊಲ್ಲಲಾಯಿತು. ಮನ್ನಾಲ ಮಾಚ, ಒಕ್ಕಲಿಗರ ಮುದ್ದ ಹೋರಾಡಿದರು. ಆನೆಯಕಲ್ಲಿನ ಹತ್ತಿರ ಅಡಗಿ, ಮೀನಿಗರ ಲಕ್ಕ ತುರುಕರನ್ನು ತುಂಡರಿಸಿದ. ರಕ್ಕಸಮಾದ, ಬುಕ್ಕನ ಪಾಲ, ಮಾದಿಗರ ಹಂಪ, ಕೋಟಿಗರ ದ್ಯಾವ, ಆದವನ್ನಿಯ ಗಿರಿಯ ಸೇರಿ ಅಸಂಖ್ಯಾತ ವೈರಿಗಳನ್ನು ಕೊಂದರು. ೩೦೦ ಕುದುರೆ, ೩೦ ಆನೆ, ೧೧ ಜನ ರಾವುತರು ಸೆರೆಸಿಕ್ಕರು. ಗೋದಿಕಣಿವೆ ಕಟ್ಟಿ, ತಮ್ಮ ಸೈನ್ಯವನ್ನು ವೈರಿಗಳು ನಾಶಗೊಳಿಸಿದ್ದಕ್ಕಾಗಿ ನೇಮಿ ಚಿಂತಿಸಿದ.

ಮುಂಜಾನೆ ರಾಮ ಬೊಲ್ಲನಲ್ಲಿಗೆ ಬಂದು, ಪೂಜಿಸಿ, ಸಜ್ಜುಗೊಳಿಸಿದ, ಬೈಚಪ್ಪನ ಮಕ್ಕಳನ್ನು ಕರೆಸಿದ. ದೇವಿಶೆಟ್ಟಿಯಲಿಂದ, ಬೇವಿನ ಸಿಂಗ, ಕೋಟಿಗರ ದ್ಯಾವ, ಮಾವ ಮಂಚಣ್ಣ, ಬಾದುರಖಾನ, ಮಹಿಮೆಯಖಾನ, ಬಾಣದ ಬಸವ, ಆದವನ್ನಿಯ ಅರಸು ಮಕ್ಕಳು, ಬಾದಾಮಿ ಬಸವರಾವುತರನ್ನು ನೆರೆಸಿ, ರಾಮಯ್ಯ ಸೈನ್ಯದೊಂದಿಗೆ ಮಾವಿನ ಮರದ ಹತ್ತಿರ ಹೋದ. ಅತ್ತ ಸುರಿತಾಳನೂ ದಂಡು ಸಿದ್ಧಪಡಿಸಿದ. ಎಲ್ಲರೂ ಬಗಲಿಗೆ ರೊಟ್ಟಿಕಟ್ಟಿ ಹೊರಟರು. ಗುಡ್ಡಕ್ಕೆ ಮಂಜು ಮುಸುಕುವಂತೆ ಸೈನ್ಯವನ್ನು ಮುಸುಕಿದರು. ಕಲ್ಲುಕೋಟೆಯ ಚಿಕ್ಕ. ಕಾಮಗೇತಿಯ ತಿಮ್ಮ, ಜಿಲ್ಲಿಬಿಲ್ಲಿನ ಬುಕ್ಕಿನಾಯ್ಕ ಸೇರಿ ರಹುಡೆಖಾನನನ್ನು ಕೆಡವಿದರು. ಸಂಜೆಯಾಯಿತು. ಬಾದುರಖಾನ ಸೈನ್ಯದೊಂದಿಗೆ ಚೋರಗಂಡಿ ಇಳಿದು, ನೇಮಿಖಾನನ ಡೇರಿ ಮುತ್ತಿ, ನಾಶಮಾಡಿದ. ಮುಂಜಾನೆ ಮತ್ತೆ ನೇಮಿಖಾನನ ಸೈನ್ಯ ಕುಮ್ಮಟವನ್ನು ಮುತ್ತಿ ಹೊರಪೇಟೆ ಲೂಟಿ ಮಾಡಿತು. ಬಳಿಕ ಒಳ ಬೀದಿಗೆ ಇಳಿದು, ಬೇಡ ಪಡೆಯನ್ನು ನಾಶಪಾಡಿತು. ಆಗ ಸ್ವತಃ ರಾಮನೇ ‘ಮಾಗಿದ ಹಣ್ಣಿಗೆ ಕೋಲು ಸೆಳೆಗಳೇಕೆ’ ಎನ್ನುತ್ತ, ತನ್ನ ಮಂದಿಗೆ ಹರಿಯಲದೇವಿ ಕೈಯಿಂದ ಊಟ ಮಾಡಿಸಿದ. ‘ಸುರಿತಾಳ ನೇಮಿಯ ಗಂಡ’ನೆಂಬ ಕೊರಳ ಪದಕ, ‘ಧರೆಯೊಳಗುಳ್ಳ ರಾಯರಗಂಡ’ ನೆಂಬ ಬೆರಳ ಹೊನ್ನುಂಗುರ, ‘ಉತ್ತುಂಗರಾಯನ ಗಂಡ’ನೆಂಬ ಮುತ್ತಿನ ಚೌಕುಳಿ, ‘ಮುಂಗುಲಿರಾಯನ ಗಂಡ’ನೆಂಬ ಉಂಗುರ-ಪಚ್ಚೆಕಡಗ, ‘ಹುಳಿಯೇರ ಮಾಡಿಗೊಂಡನ ಗಂಡ’ನೆಂಬ ಲುಳಿಯ ಸರಪಳಿ ಧರಿಸಿ, ತಾಯಿಗೆ ತಂದೆಗೆ ನಮಿಸಿ, ಬೈಚಪ್ಪನ ಮಕ್ಕಳನ್ನು ಕರೆಯಿಸಿದ, ಬೊಲ್ಲನನ್ನು ತರಿಸಿದ. ಬಾದೂರಖಾನ, ಮಹಿಮೆಖಾನ, ಸಾಧನೆ ಬಸವರಾಜಯ್ಯ, ದೇವಿಶೆಟ್ಟಿಯ ಲಿಂಗ, ಬೇವಿನ ಸಿಂಗಯ್ಯ, ಕೊಳ್ಳಿನಾಗ, ಚಾರಮನ ಮಕ್ಕಳನ್ನು ಕರೆಸಿ, ಸನ್ನೆಗಾಳೆ ಹಿಡಿಸಿದ. ಸೈನ್ಯ ದುರ್ಗವನ್ನಿಳಿದು, ಹೊರಬಾಗಿಲ ದಾಟಿ, ಮುಂದಣ ಬಯಲಿಗೆ ಬಂದಿತು. ಇದನ್ನು ನೋಡಿ ಸುರಿತಾಳನ ಸೈನ್ಯವೂ ಸಜ್ಜಾಯಿತು.

ಸಂಧಿ: ೧೨

ರಾಮಯ್ಯ ಗುಡಿಗೆ ಬಂದು ರಾಮೇಶನಿಗೆ ವಂದಿಸಿದ. ಕಾಟಣ್ಣನಿಗೆ ಬೇರೊಂದು ಪೌಜು ಮಾಡಿ, ಅವನನ್ನು ಚಾರಮರಾಜನ ಮಕ್ಕಳು; ಹೊಸಮಲೆದುರ್ಗದ ಹಳೆಯ ಮಂದಿ, ಗಡಿವಾಡದ ಮಂದಿಯೊಂದಿಗೆ ಕಳಿಸಿದ. ತಾನೂ ಒಂದು ಪೌಜ ಮಾಡಿಕೊಂಡು ನಡೆದ. ನಬಿಯಖಾನ ರಣರಂಗದಲ್ಲಿ ಮಡಿದ. ಬೊಲ್ಲ ಎಲ್ಲರನ್ನೂ ತುಳಿದುಹಾಕಿತು. ಮನ್ನೂಲ ಮಾಚ ತಲೆ ತಂದೊಪ್ಪಿಸಿದ. ಬಾಣದ ಬಸವಯ್ಯ ಮನ್ನೂರು ಕುದುರೆ ಕೊಂದ. ಬೂಟಕ ಬೊಮ್ಮಯ್ಯ, ಗುತ್ತಿಯಖಾನ, ಯನುಮಾಲ ಚಿತ್ತ, ಯರಬೇತು ಗಂಗ, ಚುನುಮದ ಚಿಕ್ಕ ತಮ್ಮುಗ, ಪೆನುಗೊಂಡೆ ಪಾಪನಾಯಕರೆಲ್ಲ ಸೇರಿ, ರಣಧೂಲಖಾನನನ್ನು ಕೊಂದರು.

ಕಬ್ಬಿಲ ನಾಗ, ಹೆಬ್ಬುಲಿ ಚಿಕ್ಕ ಬೈಯಣ್ಣ, ಅಬ್ಬಯ್ಯನಾಯಕರು ಅಬ್ದುಲಖಾನನನ್ನು ಕೊಂದರು. ಅಸಗೊಡ ಬಸವ, ಅಕ್ಕಸಾಲೆರ ಚಿಕ್ಕ, ಬುಕ್ಕನ ಪಾಲ, ಸಿಂಗ, ಬೆಂಗಳೂರು ಚಿಕ್ಕ, ಗಾಣಿಗ ಬೊಮ್ಮ, ಕಾಮಗೇತಿಯ ತಿಮ್ಮ, ಒಕ್ಕಲಿಗರ ಮುದ್ದ, ರಕ್ಕಸ ಮಾದ, ನಲ್ಲೂರ ನಲ್ಲ, ನಿಡಿಗಲ್ಲ ಕಾಮ, ಬಿಲ್ಲ ಪೆನ್ನ ದ್ಯಾವ, ಮಾದಿಗ ಹಂಪ, ಹೊಲೆಯರ ಹೊನ್ನುಗರು ನೇಮಿಯ ಸೈನ್ಯವನ್ನು ಮುತ್ತಿದರು. ರಾಮನ ಏಟಿನಿಂದ ಮುಂಗುಲಿಖಾನ ಎರಡು ತುಂಡಾದ. ನೇಮಿಯ ದಂಡು ಜೋಳದ ಸೊಪ್ಪೆ ಹೊಲದೊಳು ಬಿದ್ದಂತೆ ಹಾಳಾಯಿತು. ಭೂತಗಳು ಹೆಣವನ್ನುಂಡು ಕುಣಿದವು. ರಾಮಯ್ಯ ವೈರಿಗಳನ್ನು ತೊರೆಯ ಹತ್ತಿರದ ಬಾದಾಮಿ ತನಕ ಓಡಿಸಿ, ಧರ್ಮಗಹಳೆ ಹಿಡಿಸಿದ. ಮಗನ ವಿಜಯವಾರ್ತೆ ಕೇಳಿ ಕಂಪಿಲ ಹರ್ಷಿತನಾದ. ಹರಿಯಮ್ಮ ಆರತಿ ಬೆಳಗಿದಳು. ಅಕ್ಕ ಮಾರಮ್ಮ ಸಿಂಗಮ್ಮ ಹರಸಿದರು. ಸೋತ ನೇಮಿಖಾನನು ವೀರ ಬಲ್ಲಾಳ, ಮಾರಿಗೊಂಡ, ಓರುಗಲ್ಲರಸು, ಮುಂಗಲಿರಾಯ, ಗುತ್ತಿ ಜಗದಪ್ಪ ಇವರಿಗೆ, ಇನ್ನೊಮ್ಮೆ ನಾವೆಲ್ಲ ಸೇರಿ ರಾಮನನ್ನು ಮುತ್ತುವ ಬಗ್ಗೆ ಪತ್ರ ಬರೆದು, ಚಿಕ್ಕದಿಲ್ಲಿ ಮಾರ್ಗವಾಗಿ ದಿಲ್ಲಿಗೆ ಹೋದ.

ಸಂಧಿ:೧೩

ಕಂಪಿಲರಾಯ ಮತ್ತು ರಾಮಯ್ಯ ಹಜಾರದಲ್ಲಿ ಬಂದು ಕುಳಿತು, ಯುದ್ಧದಲ್ಲಿ ಹೋರಾಡಿದವರನ್ನೆಲ್ಲ ಕರೆಸಿದರು. ದೊರೆಮಕ್ಕಳಿಗೆ ಮುರುಡಿಯ ಸರಪಳಿ, ಪದಕ, ರಾವುತರಿಗೆ ಪರಿಪರಿಯ ವಸ್ತ್ರ, ಬಿರುದು ಬಾವಲಿ, ತಂದೆ ಮಕ್ಕಳಿಗೆ ಹೊನ್ನು, ಬಣ್ಣದ ಉಡುಗೊರೆ, ಗಾಯದವರಿಗೆ ಜಾಳಿಗೆ ಹೊನ್ನ, ನಾಯಕವಾಡಿಗಳಿಗೆ ಉಡುಗೊರೆ ನೀಡಿದರು.

ಈ ಸಂದರ್ಭದಲ್ಲಿ ರಾಮನ ಕೀರ್ತಿವಾರ್ತೆ ಕೇಳಿ ಅಸೂಯೆಗೊಂಡ ಹೊಯ್ಸಳ ಬಲ್ಲಾಳರಾಯನು ನೇಮಿಖಾನನ ಪತ್ರದಿಂದ ಪ್ರಚೋದಿತನಾಗಿ, ಯುದ್ಧದ ಯೋಚನೆ ಮಾಡಿದ. ಓರುಗಲ್ಲಿಗೆ ಹೋಗಿ ವಿವರ ತಿಳಿದುಕೊಂಡು ಬರಲು ಮಂತ್ರಿ ನರಸಿಂಗರಾಯನನ್ನು ಕಳಿಸಿದ. ಸುದ್ದಿ ತಿಳಿದುಕೊಂಡು ಬಂದು ಬಲ್ಲಾಳನಿಗೆ ವಿವರ ಒಪ್ಪಿಸಿದರು. ಬಲ್ಲಾಳ ಮಲೆಯಾಳ-ಕೊಂಕಣ ರಾಯರು, ಓರಗಲ್ಲ ಪ್ರತಾಪರುದ್ರ ಸೈನ್ಯಸಮೇತ ಬಂದರು. ಮುಂಗುಲಿರಾಯನ ಮಗ ಸಿಂಗಯ್ಯನೂ ಇವರನ್ನು ಕೂಡಿದ. ರಾಮನ ಸೀಮೆಯನ್ನು ಸುಡುತ್ತ ಮುಂದುವರಿದು, ಗಡಿಯನ್ನು ಮುತ್ತಿದರು.  ಗಡಿದುರ್ಗದಲ್ಲಿದ್ದ ಕಾಟ ರಾಮನಿಗೆ ವಂದಿಸಿದ. ಬೈಚಪ್ಪ, ಮಂಚಣ್ಣ, ಚೇರಮರಾಯನ ಮಕ್ಕಳು, ಹಂಪರಾಜ, ಕಂಪರಾಯ, ಕಾಟಣ್ಣ ಬಂದು ಸೇರಿದರು. ಪೂಜೆ ಮಾಡಿ ಬೊಲ್ಲನನೇರಿ ಪ್ರಯಾಣ ಬೆಳಗಿಸಿದರು. ಕಾಟಣ್ಣನಿಗೆ ಒಂದು ಪೌಜನ್ನು ರೂಪಿಸಿಕೊಡಲಾಯಿತು. ನಾಲ್ಕು ಬಗೆಯ ವೈರಿಗಳಿದ್ದ ನರಗುಂದ ಹೊಳೆಯ ಹತ್ತಿರ ಬಂದನು. ಕಳ್ಳಬಂಟ (ಗುಪ್ತಚಾರ) ರನ್ನು ಸುದ್ದಿ ಸಂಗ್ರಹಕ್ಕಾಗಿ ಕಳಿಸಲಾಯಿತು. ಮುನವಳ್ಳಿಯಲ್ಲಿ ಗುಜ್ಜಲೋಬ ಮೊದಲಾದವರನ್ನು ಕರೆಯಿಸಿ. ಅಲ್ಲಿಂದ ದಂಡು ಮುಂದೆ ಸಾಗಿತು. ಬಲಕ್ಕೆ ಬಹದ್ದೂರ, ಎಡಕ್ಕೆ ಕಾಟಣ್ಣ, ಕಡೆಯಲ್ಲಿ ಚಾರಮರಾಜನ ಮಕ್ಕಳು, ಮುಂದೆ ದೇಮಯ್ಯ ನಡೆದರು. ಯುದ್ಧ ಆರಂಭವಾಯಿತು. ರಾಮನನ್ನು ಸೆರೆ ಹಿಡಿಯುವ ಬಗ್ಗೆ ಬಲ್ಲಾಳ-ರುದ್ರದೇವ ಮಾತನಾಡಿಕೊಂಡರು. ಅಷ್ಟರಲ್ಲಿ ರಾಮಯ್ಯ ಮಿಸಮಿಲ್ಲಖಾನನನ್ನು ಕೊಂದನು. ರುದ್ರರಾಯರಿಗೆ ಗಾಯವಾಯಿತು. ಸಿಂಗ ಹಿಮ್ಮೆಟ್ಟಿದ, ವೈರಿಗಳು ಸೋತುಹೋದರು. ರಾಮಯ್ಯ ಧರ್ಮಗಹಳೆ ಹಿಡಿಸಿದ. ಹಾನಗಲ್ಲ ಹತ್ತಿರ ಅವನ ದಂಡು ಬೀಡುಬಿಟ್ಟಿತು. ಅಂಜಿದ ಬಲ್ಲಾಳನು ಮಂತ್ರಿ ನರಸಿಂಗನನ್ನು ಮುಂದಿಟ್ಟುಕೊಂಡು, ಒಂದು ಬಿಂದಿಗೆ ಹೊನ್ನು, ಪಚ್ಚೆವರ್ಣದ ಶಾಲು, ಎರಡು ಹಿಡಿತೇಜಿ ಕೊಟ್ಟು ಒಪ್ಪಂದ ಮಾಡಿಕೊಂಡ. ಬಾದೂರಖಾನ, ಭಾವಸಂಗಮ, ದೇವಿಶೆಟ್ಟಿಲಿಂಗ, ಕೊಟಗರ ದ್ಯಾವ ಇವರಿಗೆ ಹುಸಿಗಾಯಗಳಾದವು. ಕಂಪಿಲ ಮಗನನ್ನು ಎದುರುಗೊಂಡ. ಪಂಪಾವಿರೂಪಾಕ್ಷನಿಗೆ ವಂದಿಸಿ, ಕುಮ್ಮಟಕ್ಕೆ ಬಂದರು. ರಾಮೇಶನಿಗೆ ನಮಸ್ಕರಿಸಿದನು. ಹರಿಯಲದೇವಿ ಆರತಿ ಎತ್ತಿದಳು.

ಸಂಧಿ: ೧೪

ಕಂಪಿಲರಾಯನೊಂದಿಗೆ ಬೇಟೆಗೆ ಹೋಗದೆ ರಾಮ ಅರಮನೆಯಲ್ಲಿಯೇ ಉಳಿದ. ನೀರಾಟವಾಡಲು ಬಯಸಿ ಹಂಪಿಯ ಹೊಳೆಗೆ ಹಂಪರಾಜ, ಕಂಪರಾಜ, ಸಂಪಿಗೆರೆಯ ಸಿಂಗರಾಜ, ಹಡಪದ ಬೊಲ್ಲಗ, ಗಂಗಯ್ಯ, ಕಾಟಣ್ಣ, ಬೈಚಪ್ಪನ ಮಕ್ಕಳು, ಮಂಚಣ್ಣನ ಮಕ್ಕಳು, ಭಾವಸಂಗಮದೇವ, ಕಾಟನಾಯಕನ ಮಕ್ಕಳು, ದೇವಿಶೆಟ್ಟಿಲಿಂಗ, ಚಾರಮರಾಯನ ಮಕ್ಕಳು, ಸಾರಂಗ, ಗೊಲ್ಲರ ಗುಜ್ಜಯ್ಯರೊಂದಿಗೆ ಬಂದನು. ಎಲ್ಲರೂ ಹರಿಗೊಲನ್ನೇರಿದರು. ಕಾಟಣ್ಣನ ಪರಿವಾರ ಮತ್ತು ರಾಮನ ಪರಿವಾರ ಅಂಡೆ, ಜೀರ್ಕೊಳವಿ ಹಿಡಿದು ಪರಸ್ಪರರ ಮೇಲೆ ನೀರು ತೂರಿ ನಲಿದರು. ಮಲೆನಾಡ ಸೋನೆ ಸುರಿವಂತೆ ನೀರಾಟ ಜರುಗಿತು. ನಂತರ ವಿರೂಪಾಕ್ಷನ ಗುಡಿಗೆ ಬಂದು ಮನಸ್ಕರಿಸಿ, ಅರಮನೆಗೆ ಮರಳಿದರು.

ಸಂಧಿ:೧೫

ಹರಿಯಲದೇವಿಯ ವಶದಲ್ಲಿರುವ ಚೆಂಡನ್ನು ತರಬೇಕೆಂದೂ, ನಾವೆಲ್ಲ ಆಡೋಣವೆಂದೂ ಕಾಟಣ್ಣ ರಾಮನಿಗೆ ಹೇಳಿದ. ರಾಮ ಸಿಂಗರಿಸಿಕೊಂಡು ತಾಯಿಯ ಮನೆಗೆ ಬಂದ. ಮಗನ ಆಗಮನ ನೋಡಿ ಹರಿಯಲದೇವಿ ಹಿಗ್ಗಿದಳು. “ನೆತ್ತ, ಪಗಡೆ, ಜೂಜು ಆಡಿದೆವು. ಹೊತ್ತು ಹೋಗುತ್ತಿಲ್ಲ, ಆಡವಾಡಲು ಮುತ್ತಿನ ಚೆಂಡು ಕೊಡು” ಎಂದು ತಾಯಿಯನ್ನು ಕೇಳಿದ. ತಾಯಿಗೆ ಅಸಮಾಧಾನವಾಯಿತು. “ಇದು ಸಾಮಾನ್ಯ ಚೆಂಡಲ್ಲ, ಕೃಷ್ಣ, ಅಭಿಮನ್ಯು, ಮುಮ್ಮಡಿಸಿಂಗ ಇದನ್ನು ಆಡಿ ಕೆಟ್ಟರು. ಆಟ ಸಂದರ್ಭದಲ್ಲಿ ಯುವತಿಯರ ಮನೆಯಲ್ಲಿ ಬಿದ್ದರೆ, ನಿನ್ನ ನಾಶಕ್ಕೆ ಕಾರಣವಾಗುತ್ತದೆ” ಎಂದು ಹೇಳಿದಳು. “ಪರಸ್ತ್ರೀಯರು ನಿನ್ನ ಸಮಾನ, ಸೋದರಿ ಮಾರಮ್ಮ ಸಿಂಗಮ್ಮರ ಸಮಾನ” ಎಂದು ರಾಮಯ್ಯ ಉತ್ತರಿಸಿದ.

‘ಬೇಡ, ರಾಮುಗ ನಿನ್ನ ನೋಡಿದ ಸತಿಯರು ಮಾಡರು ಮನೆಗೆಲಸಗಳ, ಊಡೆಉ ತಮ್ಮ ಕಂದಗೆ ಮೊಲೆಹಾಲನು, ಕೊಡರು ತಮ್ಮ ಪುರುಷರ’ ಎಂದು ಹೇಳಿದಳು. ಕೃತಯುಗದಲ್ಲಿ ಇದು ಕಾರ್ಯವೀರ್ಯನನ್ನು, ದ್ವಾಪರದಲ್ಲಿ ದ್ರೌಪದಿಯನ್ನು ಅಡವಿಗೆ ಅಟ್ಟಿತು. ಕೀಚಕನನ್ನು ಕೊಲ್ಲಿಸಿತು. ಹರಿಶ್ಚಂದ್ರನನ್ನು ರಾಜ್ಯ ಬಿಡಿಸಿತು- ಏನೆಲ್ಲ ಹೇಳಿದರೂ ಕೇಳದೆ ಕಾಡಿದ. ಬೇಸತ್ತ ಹರಿಯಲದೇವಿ, ಪ್ರಾಣಿಬಲಿಕೊಟ್ಟು ತೆಗೆದುಕೊಂಡು ಹೋಗೆಂದಳು. ಬಲಿ ಕೊಟ್ಟು ಒಯ್ಯುವಾಗ ಮಗನಿಂದ ‘ಪರನಾರಿ ಸೋದರ’ ಪ್ರತಿಜ್ಞೆ ಮಾಡಿಸಿದಳು.

ಸ್ನೇಹಿತರೆಲ್ಲ ಸೇರಿ ಆಟಕ್ಕೆ ಆಳು ಹಂಚಿದರು. ಗಾಣಿಗ ಬೆಮ್ಮ, ಕುಂಬಾರ ಸೋಮ, ಇರುಪ, ನೆಲಗತ್ತಿಕಾಮ, ಭಟ್ಟರ ಭೀಮ, ಚಿಕ್ಕಯ್ಯ, ಒಕ್ಕಲಿಗರ ಮುದ್ದ, ಅಕ್ಕಸಾಲೆಯ ಚಿಕ್ಕ, ಮೀನಿಗ ಬೊಮ್ಮ, ಕೊಳ್ಳಿಯ ನಾಗ, ಯನುಮಲ ಚಿತ್ತ, ಯರಬೇತು ಗಂಗ, ಮನ್ನೂಲ ಚಿನ್ನ, ಬೂಟಕ ಬೊಮ್ಮ, ಮಿಡಿಗೇಸಿ ನಲ್ಲ, ರವಳಿಯ ಹನುಮ, ಅರಸು ಮಕ್ಕಳಾದ ಹಂಪರಾಜ, ಕಂಪರಾಜ, ಮನ್ನಾಲ ಮಾಚ, ಮುದಕೊಂಡ ಲೋಬ, ಕೊಟಿಗರ ದೇವ, ಬುಕ್ಕನಪಾಲ, ಹೊಳಕೆಯ ಕೆಂಚ, ರಕ್ಕಸ ಚಿನುಮಾದ, ಬಾದೂರಖಾನ, ಮಹಿಮೆಯ ಖಾನ, ಸಾಧನೆ ಬಸವಯ್ಯ, ಮಣಿಹದ ಮಲ್ಲ, ಕರಿಸಿದ್ದ, ಹಳದಿಯ ತಿಪ್ಪ, ಬಾನಿಯ ಮಲ್ಲ, ರಕ್ಕಸ ಮಾದ, ಇವರೆಲ್ಲ ಸೇರಿದರು. ರತ್ನಾಜಿ ಅರಮನೆಯ ಬಯಲಿಗೆ ಹೋದರು. ಚಿನ್ನದ ಏಳು ಲೆಗ್ಗೆ, ಬೆಳ್ಳಿಯ ಏಳು ಲೆಗ್ಗೆ ಹೂಡಿದರು.

ಚಂಡಿನಾಟ ನೋಡಲು ಸೂಳೆ ಹಂಪಾಜಿ, ಹೊಳೆಹೊನ್ನೂರ ರಾಮಾಜಿ, ಗುರುಮುಕುಂಡದ ಸೋಮಿ, ಇಕ್ಕೇರಿ ದುರ್ಗಾಯಿ, ಪಾಳೇದ ಪಾಪಾಜಿ, ಹಳೆಯ ಬೀಡಿದ ಹಂಪಾಜಿ, ಬಾಣವಾರದ ಭದ್ರಿ, ಕೊಟ್ಟೂರ ಕಾಮಾಜಿ, ಬಾದಾಮಿ ಬಸವಿ, ಕುಂದುರ್ಪೆ ಕೊಂಡಾಜಿ, ಬೇಲೂರ ಬೆನಕಾಜಿ, ಆದವನ್ನಿಯ ನಾಗಾಜಿ, ಕುಂಭಕೋಣದ ಮೀರಾಜಿ, ಚೆನ್ನಪಟ್ಟಣದ ಚೆನ್ನಾಗಿ, ಚಂದ್ರಗಿರಿಯ ಚೆನ್ನೆ, ಹೊಸಪ್ಯಾಟಿ ಜಂಬುಲಿಂಗಿ, ವಸವಂತಪುರದ ಮಲ್ಲಾಜಿ-ಈ ಸೂಳೆಯರೆಲ್ಲ ಅಲ್ಲಿ ನೆರೆದರು.

ಸಂಧಿ: ೧೬

ಚಂಡಿನಾಟದ ಗದ್ದಲ, ಕೂಗು ರಾಜಧಾನಿಯಲ್ಲಿ ಪ್ರತಿಧ್ವನಿಸಿತು. ರತ್ನಾಜಿಯ ಸೂಚನೆಯಂತೆ ಸಂಗಿ ಹೊರ ಬಂದು ನೋಡಿ, ಒಡತಿಗೆ ರಾಮನ ಆಟದ ಸುದ್ದಿ ಹೇಳಿದಳು. ಹೊರ ಬಂದು ಅವನನ್ನು ನೋಡಬೇಕೆಂದು ರತ್ನಾಜಿ ಸಿಂಗಾರವಾಗತೊಡಗಿದಳು. ಕಾಲುಂಗುರ, ಪಿಲ್ಲೆ, ಹೊನ್ನುಡಿದಾರ, ತೋಳ ಬಾಪುರಿ, ಭುಜಕೀರ್ತಿ, ಸಾಲ ಮುತ್ತಿನ ಸರ, ಕೊರಳ ಚಿಂತಾಕ, ಬೆರಳ ಹೊನ್ನುಂಗುರ, ಕೊರಳ ಮುತ್ತಿನ ಹಾರ, ಹರಳ ತೆತ್ತಿಸಿದ ಸೂಡಂಗ, ಚಿನ್ನದ ಸರ, ಹೊನ್ನ ಹೂವು, ಮುತ್ತಿನ ಕೊಪ್ಪ ಧರಿಸಿದಳು.

ಬಾಚಿ ಬೈತಿಲ ತೆಗೆದು, ನುಣ್ಣನೆ ತಿರುಬನಿಕ್ಕಿದಳು. ಕಣ್ಣ ಕಪ್ಪನೆ ಹಚ್ಚಿ, ಕಸ್ತೂರಿ ತಿಲಕವನ್ನು ಹಣೆಗೆ ಹಚ್ಚಿಕೊಂಡಳು, ಉಟ್ಟ ಉಡುಗೆ, ಕಟ್ಟಿದ ಸರಪಳಿ ಗೆಜ್ಜೆ, ತೊಟ್ಟ ಮುತ್ತಿನ ರವಿಕೆ, ಇಟ್ಟ ಮೂಗುತಿಗಳಿಂದ ಚೆಂದವಾದಳು. ಹಣೆಯಲ್ಲಿ ಮುತ್ತಿನ ಬೊಟ್ಟು ಇಟ್ಟುಕೊಂಡಳು. ಕಸ್ತೂರಿ ತಿಲಕ ಹಣೆಗೆ ಹಚ್ಚಿಕೊಂಡು, ಪಟ್ಟಾವಳಿ ಉಟ್ಟಳು. ಕಟ್ಟಿದ ನಿಲುಗನ್ನಡಿಯ ಮುಂದೆ ನಿಂತು ಕಟ್ಟಾಳು ರಾಮನಿಗೆ ತಾನು ತಕ್ಕವಳು-ಎಂದು ನಕ್ಕಳು. ಹೀಗೆ ಸಿಂಗರವಾಗಿ ನಾಗಿ, ಸಂಗಿರೊಡನೆ ಉಪ್ಪರಿಗೆ ಏರಿದಳು. ರಾಮನನ್ನು ವಶಮಾಡಿಕೊಳ್ಳುವುದರ ಸಲುವಾಗಿ ಚಿತ್ತಜ ಜಯತು, ತ್ರಿಯಂಬುಕ ಜಯತು-ಎಂದು ಪ್ರಾರ್ಥಿಸಿದಳು. ರಾಮ ವಶವಾದರೆ ಊರ ಮುಂದಣ ಮಾರಮ್ಮಗೆ ಮುನ್ನೂರು ಕೋಣ ಬಲಿಕೊಡುವೆ, ಬೋನಗುರಿಯ ಹೊಯ್ಸುವೆ, ಹಾರುಗೋಳಿಯ ಬಿಡುವೆ, ಗುತ್ತಿಯ ಎಲ್ಲಮ್ಮಗೆ ಹಬ್ಬವ ಮಾಡಿ ಕೋಣ ಬಲಿಕೊಟ್ಟು ಮೂರು ಮಾಣಿಕದ ಆರತಿ ಎತ್ತುವೆ. ಹುಲಿಗೆ ಹೊಸೂರಮ್ಮನಿಗೆ ಹಿಡಿಹೊನ್ನ ಕಾಣಿಕೆ ನೋಡುವೆ, ಒಪ್ಪತ್ತಿನೂಟ ಹಿಡಿಯುವೆ. ಕಂಪಲಿಸ್ವಾಮಿಗೆ ಮುಡುಪಿನ ಮುಂದಲೆ ಕೊಡುವೆ. ರಾಮನ ಸಂಭೋಗದಿಂದ ಒಂದು ಕೂಸು ಹುಟ್ಟಿದರೆ ತಿರುಮಲದೇವನಿಗೆ ತಿರುಮುಡಿ ಮಾಡಿಸುವೆ. ಹುಲಿಗೆರೆಯರಸ್ಥ ಸೋಮನಾಥನಿಗೆ ಸೋಮವಾರ ಉಪವಾಸವಿರುವೆ. ಶ್ರೀಶೈಲಕ್ಕೆ ಬಂಗಾರದ ಕಳಸ ಕೊಡುವೆ, ಹೊನ್ನ ಕಳಸ ಅರ್ಪಿಸುವುದಲ್ಲದೆ ಉಪ್ಪರಿಗೆ ಕಟ್ಟಿಸುವೆ, ಎಪ್ಪತ್ತೇಳು ಕಪಿಲೆಗಳನ್ನು ಬಿಡುವೆ. ಜಂಪೆಯಾಳ್ದನಿಗೆ ಹಣ್ಣುಹಂಪಲ ಸೇವೆ ಮಾಡುವೆ. ಹೊಸಪೇಟೆಯ ಜಂಬುಲಿಂಗಗೆ ವಸಂತವನ್ನಾಡುವೆ. ನಂದಿಗೆ ಹೊಕ್ಕಳುಗಂಟೆ- ಸರಪಳಿ ಸಲ್ಲಿಸುವೆ. ಗಂಗಾಧರನಿಗೆ ತಿಂಳ ಉಪವಾಸವಿದ್ದು ಮಂಗಳಾರತಿ, ಕಪಿನಿಪತಿ ನಂಜುಂಡಗೆ ಕರ್ಪೂರದಾರತಿ ಎತ್ತುವೆ- ಎಂದು ಹರಕೆ ಹೊತ್ತು. ‘ಕಂಪಿಲರಾಯ, ಈ ಹರಕೆಗಳಿಗೆ ಕಾರಣ ಕೇಳಿದರೆ ಏನೆಂದು ಉತ್ತರ ಕೊಡುವೆ?’ ಎಂದು ಸಂಗಿ ಪ್ರಶ್ನಿಸಿದಳು. ‘ನೀನು ಬೇಟೆಯಿಂದ ಮರಳಿ ಬರಲು ತಡಮಾಡಿದ ಕಾರಣ, ಹಿಂಸ್ರ ಪ್ರಾಣಿಗಳು ನಿನಗೆ ಅಪಾಯ ಮಾಡದಿರಲೆಂದು ಹರಕೆ ಹೊತ್ತನೆಂದು ಉತ್ತರಿಸುತ್ತೇನೆ’ ಎಂದಳು ರತ್ನಾಜಿ.

ಹಡಪದ ಸಂಗಿಯೊಡನೆ ರತ್ನಾಜಿ ಏಳುನೆಲೆಯ ಉಪ್ಪರಿಗೆ ಹತ್ತಿದಳು. ಒಡೆಯರಾರು, ಬಂಟರಾರು ಎಂಬುದು ಗೊತ್ತಾಗದಷ್ಟು ಆಟಗಾರರ ದಟ್ಟಣೆ ಇದ್ದಿತು. ಈಗ ರತ್ನಾಜಿ ಅವನಾರು? ಇವನಾರು? ಎಂದು ಕೇಳುತ್ತ ಹೋದಳು. ಇದಕ್ಕೆ ಉತ್ತರವಾಗಿ ಸಂಗಿ ತಳವಾರ ಹರಿಯ, ಬಾದೂರಖಾನ, ಕಾವಳಿ ಲಿಂಗ, ಗುಜ್ಜಲ ಹರಿಯ, ಕುಂಬಾರ ಕಲ್ಲ, ಒಕ್ಕಲಿಗರ ಮುದ್ದ, ಕಬ್ಬಲಿಗರ ನಾಗ, ಜಂಗಮರ ಬಸವ, ಮಡಿವಾಳ ಮಾಚ, ಅಸಗೋಡ ಬಸವ, ಕಂಚಗಾರ ಕಾಳ, ಗಂಡಿಕೋಟೆ ಗಂಗರಾಜ, ಪಾಂಡುರಂಗದೇಶದ ರಾಯ, ತುಳುವರ ಗಿರಿಯ, ಮುಚ್ಚಾಲ ಹನುಮ, ತೊರಗಲ್ಲ ಬಾದಾಮಿ-ಅರಸು, ಮಿಡಿಗೇಸಿ ನಾಗ, ಹೊಳಲಕೆರೆಯ ಸಂಗ, ಚಂದ್ರಗಿರಿಯ ಸಿದ್ಧ, ಪಂಚಮರ ಬಸವ, ಉದ್ದಗಿರಿಯ ಸಿದ್ಧರಾಜನ ಮಗ, ಪೆನಗುಂಡೆಯ ಸೋಮ, ಏಕಾಂಗಿ ವೀರ ಬಸವ, ರಾವುತ ಸಿದ್ಧ, ಅಕಳಂಕ ಸಿದ್ಧ, ಮಿಡಿಗೇಸಿ ನಾಗ, ನಿಡುಗಲ್ಲ ಕಾಮ, ಕುಂದುರ್ಪೆ ತಮ್ಮ, ರಾಯದುರ್ಗದ ವೀರ, ಬೋಗಾರ ಮಲ್ಲ, ಕುಂಭಕೋಣೆಯ ಕಲ್ಲ, ಉತ್ಸಂಗಿದುರ್ಗದ ಪಡುವಲದೇಶದ ಮತ್ತ ಕೋಕಿಲ, ಗಡಿಕೋಟೆಯ ದೇವ, ಗೊಲ್ಲರ ಗುಜ್ಜಯ್ಯ, ಮಾದಿಗ ಹಂಪ, ದಳಧೂಳಿ ಮಾದ, ಮನ್ನೂಲ ಮಾಚ, ಕುರುಗೋಡ ಸಂಗಮ, ಚಿನ್ಮೂಲಗಿರಿ ದೊಡ್ಡ, ಮೀನಿಗರ ಲಕ್ಕ, ಉಚ್ಚಂಗಿದುರ್ಗದ ಪಾಲ, ವಸದಾರಿ ಬಸವ, ತೊರಗಲ್ಲ ಜಾಯಿಶೆಟ್ಟಿ ಬಸವ, ಬಳ್ಳಾರಿ ಹನುಮ, ದೇವಿಶೆಟ್ಟಿ ಲಿಂಗ, ಸಾಲ್ಗುಂದಿ ಚೆನ್ನ, ಕಂಪಿಲನ ಅಳಿಯ, ಕಾಟಣ್ಣ, ಮಂತ್ರಿ ಬೈಚಪ್ಪನ ಮಗ, ಕಲ್ಲಕೋಟೆಯ ಚಿತ್ತ, ಕೊಪ್ಪಳದ ತಿಮ್ಮ –ಎಂದು ಪರಿಚಯಿಸಿದಳು. ಇದರಿಂದ ಬೇಸತ್ತ ರತ್ನಾಜಿ ‘ಬೇರೆಯವರನ್ನು ತೋರಬೇಡ, ಸಾಕು, ನನ್ನ ಸೊರೆಗೊಂಬ ರಾಮನನ್ನು ತೋರು, ನಿನ್ನ ಬಾಯಿತುಂಬ ಬಂಗಾರ ಕೊಡುವೆ’ ಎಂದಳು. ಸಂಗಿ, ರಾಮನನ್ನು ತೋರಿಸುತ್ತಲೇ ರತ್ನಿಯಲ್ಲಿ ಕಾಮ ಕೆರಳಿತು. ‘ರಾಮನು ಸ್ತ್ರೀಯರ ತನುದುರ್ಗವ ಇರದೆ ಮುತ್ತಿಗೆ ಮಾಡಬಂದ’ ಎಂದು ಮನಸ್ಸಿನಲ್ಲಿ ನುಡಿದಳು. ಕನ್ನಡ ಜಾಣ ರಾಮನ ಕಂಡು ಮನಸೋತಳು, ವಿರಹದಲ್ಲಿ ಬುಡಬುಡನೆ ಹೊರಳಿದಳು, ಭೂಮಿಯಲ್ಲಿ ಉರುಳಿದಳು. ಆಗ ಸಂಗಿ ನೀರು ಸಿಂಪಡಿಸಿ ರತ್ನಿಗೆ ಎಚ್ಚರ ಹುಟ್ಟುವಂತೆ ಮಾಡಿದಳು. ಎದ್ದು ನಿಲ್ಲಿಸಿ ರಾಮನನ್ನು ಮತ್ತೆ ತೋರಿಸಿದಳು. ‘ಕಪ್ಪು ಹತ್ತಿದ ಮೀಸೆ, ಕಸ್ತೂರಿ ತಿಲಕ, ಬಲ್ವಿನ ಚಿಮ್ಮುರಿ ಸುತ್ತಿ’ದ್ದ ರಾಮನನ್ನು ನೋಡಿದಳು. ‘ಒತ್ತಿ ಬರುವ ಮೀಸೆ, ಕನ್ನೆ ಕುಮರ ಗಡ್ಡ’ದ ರಾಮನನ್ನು ಬಯಸಿದಳು.

ಕಾಟಣ್ಣ ಚೆಂಡು ಎಸೆಯಲಾಗಿ ಸರಗೋಲು ಮುರಿದು, ಲೆಗ್ಗೆಯ ಹಲ್ಲೆ ನುಗ್ಗೆದ್ದು ಹೋಯಿತು. ‘ಹೊಡಿರೋ ಲೆಗ್ಗೆಯ, ನೀಡಿರೋ ಚೆಂಡನು. ಓಡಿರೋ ನಾಲ್ಕು ದಿಕ್ಕಿನಲಿ’ ಎಂಬ ಧ್ವನಿ ಎಲ್ಲೆಡೆ ತುಂಬಿಕೊಂಡಿತು. ‘ರಾಮನಿಡಲು ಚೆಂಡು ಭೂಮಿಯಾಕಾಶಕ್ಕೆ ನೆಗೆಯಿತು’. ವಾಯುದೇವ ಅದನ್ನು ರತ್ನಾಜಿ ಅಂಗಳಕ್ಕೆ ಹಾಕಿದ. ರತ್ನಾಜಿ ಉಟ್ಟ ಉಡುಗೆಯೊಂದಿಗೆ ಚೆಂಡಿನ ಮೇಲೆ ಬಿದ್ದು, ಅರಮನೆಯ ಒಳಗೆ ಒಯ್ದು, ಪನ್ನೀರ ಚಿಮುಕಿಸಿ, ಆ ಚೆಂಡು ರಾಮನ ಸಮವೆಂದು ಎದೆಗೆ ಒತ್ತಿಕೊಂಡಳು. ಅದರ ಮೇಲೆ ಬಿದ್ದು ಹೊರಳಾಡಿದಳು, ನಖರೇಖೆ ಒತ್ತಿದಳು, ದಶವಸ್ತ್ರ ಹಾಕಿದಳು. ಎದಿಗೊತ್ತಿ ಬದಿಗೊತ್ತಿಕೊಂಡಳು. ಮುದದಿ ಮುದ್ದಿಸಿ ಮುಂಡಾಡಿದಳು. ಪುನುಗು ಜವಾದಿ ಕಸ್ತೂರಿ ಲೇಪಿಸಿದಳು. ಪಟ್ಟೆ ದೇವಾಂಗ ಸುತ್ತಿ, ಗಂಧ ಕಸ್ತೂರಿ ತಿಲಕವಿಟ್ಟಳು. ಮುತ್ತಿನಾರತಿ ಎತ್ತಿದಳು. ಒಸಗೆ ಪಾಡಿದಳು. ಚಿನ್ನದ ಗದ್ದುಗೆ ಮಾಡಿ, ಮಂಚದ ಮೇಲಿಟ್ಟು ಪೂಜಿಸತೊಡಗಿದಳು. ಹೊರಗೆ ಕಾವಲಿರುವಂತೆ ಸಂಗಿಗೆ ಹೇಳಿದಳು.

ಸಂಧಿ: ೧೭

ಚೆಂದು ತರಲು ಕಾಟಣ್ಣನನ್ನು ಕಳಿಸಿದರು. ಅವನು ಹೋಗಿ, ಚೆಂಡನ್ನು ಕೊಡಲು ಸಂಗಿಯನ್ನು ಕೇಳಿದನು. ‘ನಾನು ನೋಡಿಯೇ ಇಲ್ಲ’ ಎಂದು ಉತ್ತರಿಸಿದಳು. ‘ಗಂಡನಿಲ್ಲದ ಅರಮನೆಗೆ ಬಂದವರಾರು?’ ಎಂದು ರತ್ನಾಜಿ ನುಡಿದು, ಅವನನ್ನು ನೂಕಿಸಿದಳು. ನಿಮ್ಮೊಂದಿಗೆ ನನ್ನ ಸಖಿಯರು ಆಡಲು ಬಂದಿದ್ದರೆ? ಎಂದು ಪ್ರಶ್ನಿಸಿದಳು. ‘ರಾಮನಿಟ್ಟ ಚೆಂಡು’ ನೆಗೆದು ಇಲ್ಲಿಗೆ ಬಂದಿತು ಎನ್ನಲು, ರತ್ನಾಜಿ ಶೃಂಗಾರ ತೋಟದಲ್ಲಿ ಹುಡುಕಿದಂತೆ ನಟಿಸಿದಳು. ಮಲ್ಲಿಗೆ, ಪಚ್ಚೆ, ಸಂಪಿಗೆ, ನಿಂಬೆಗಳ ಅಡಿಯಲ್ಲಿ ಸುತ್ತಾಡಿ ಬಂದು ಕಾಟಣ್ಣನಿಗೆ ಉಪಚಾರದ ಮಾತುಗಳನ್ನಾಡಿ, ‘ಕಂದನಾದ ರಾಮನನ್ನು ನೋಡುವ ಬಯಕೆಯಾಗಿದೆ. ಕಳಿಸಿಕೊಡು, ಬಂದು ಚೆಂಡನ್ನೊಯ್ಯಲಿ. ಅವನ ಚೆಂಡನ್ನು ನಿನಗೆ ಕೊಟ್ಟರೆ ಇಬ್ಬರಲ್ಲಿ ದ್ವೇಷ ಹುಟ್ಟೀತು’ ಎಂದು ತಿಳಿ ಹೇಳಿ, ಕಾಟನನ್ನು ಮರಳಿಸಿದಳು. ಈಗ ಹಳಬನಾದ ಬಲ್ಲುಗನನ್ನು ಕಳುಹಿಸಿದರು. ಅವನಿಗೂ ಅದೇ ಉತ್ತರ ಹೇಳಿದಳು. ಚೆಂಡಲು ತರಲು ರಾಮನೇ ಹೊರಟ. ‘ಶೃಂಗಾರವನ್ನು ತೆಗಿ ತಮ್ಮ’ ಎಂದು ಕಾಟ ಕೇಳಿದ. ರಾಮ ಹಾರವನ್ನು ತೆಗೆದ, ಹೆಸರುಳ್ಳವರಾಯರಗಂಡ ಬಿರುದಿನ ಕುಸುರಿನ ಪೆಂಡೆಯ ತೆಗೆದ, ‘ಭೂಮಿಯೊಳುಳ್ಳ ರಾಯನ ಗಂಡ’ ಎಂಬ ಕೊರಳಪದಕ ತೆಗೆದ, ‘ಅಷ್ಟದಿಕ್ಕಿನ ರಾಯರ ಗಂಡ’ ಎಂಬ ಬಾಪುರಿಯನ್ನು ತೆಗೆದ, ‘ಸುತ್ತಣ ರಾಯರ ಗಂಡ’ನೆಂಬ ಸುತ್ತಿದ ಚಿಮ್ಮುರಿ ತೆಗೆದ, ‘ಕನ್ನೋಜಿ ರಾಯರಗಂಡ’ನೆಂಬ ಹೊನ್ನುಂಗುರವನ್ನು ತೆಗೆದ, ‘ಮನ್ನೆಯ ಮಗಧರಾಯರ ಗಂಡ’ನೆಂಬ ರನ್ನದ ಪದಕವ ತೆಗೆದ, ‘ದಂಡೆತ್ತಿಬರುವ ರಾಯರ ಗಂಡ, ಎಂಬ ಕಾಲ ಪೆಂಡೆಯನ್ನು ತೆಗೆದ, ಕಂಠಮಾಲೆ, ದಂಡೆ ಹಾರ, ರನ್ನದ ಕಡಗ, ಚಿನ್ನದ ಸರ, ನಡುವಿನುಡುದಾರ ತೆಗೆದ, ‘ಪಡುವಣ ರಾಯರ ಗಂಡ’ನೆಂಬ ತೊಡರು ಪೆಂಡೆಯವನ್ನು ತೆಗೆದ, ‘ಗಡಿಯಂಕ ಮನ್ನೆಯರ ಗಂಡ’ನೆಂಬ ಕುಡುಕು ಚೌಕಳಿಯನ್ನು ತೆಗೆದ, ‘ಬಂಗಾಳ ರಾಯರ ಗಂಡ’ನೆಂಬ ಬೆರಳುಂಗುರವನ್ನು ತೆಗೆದ, ‘ಪಿಂಗಾಳ ರಾಯರ ಗಂಡ’ನೆಂಬ ಅಂಗದಾಭರಣವ ತೆಗೆದ. ಕಾಲೊಳುಲಿವ ಸರಪಳಿಗಳನ್ನೂ ತೆಗೆದುಕೊಟ್ಟು, ಮಂಡೆ ಒತ್ತಿ ಎಣ್ಣೆಗಂಟು ಬಿಗಿದ. ಹೊನ್ನ ನಾಮವನ್ನು ತೆಗೆಯುತ್ತ, ರನ್ನದ ಕಡೆಯವನ್ನು ಕಳಚಿದ. ಪರನಾರಿ ಸೋದರನೆಂಬ ಕಡೆಯವನ್ನು ಎಡದ ಕಾಲೊಳಗೆ ಧರಿಸಿ, ರತ್ನಾಜಿಯ ಬಾಗಿಲಿಗೆ ಬಂದ. ಬಾಗಿಲ ಗೊಲ್ಲರು, ಎಕ್ಕಟಿಗರು ಎದ್ದು ಕೈಮುಗಿದರು.

ಪಂಜರದೊಳಗಿದ್ದ ಗಿಳಿ ‘ಕಂಪಿಲರಾಯನಿಲ್ಲದ ಅರಮನೆಗೆ ಬಂದವನಾರೆಲೆ ಪಾಪಿ’ ಎಂದು ಕೇಳಿತು. ‘ಹುಳಿಯೇರ ಮಾರಿಗೊಂಡನನ್ನು ಸೋಲಿಸಿ, ನಿನ್ನನ್ನು ತಂದ ರಾಮನು ನಾನೆಂಬುದನ್ನು ಮರೆತೆಯೊ’ ಎಂದು ನೆನಪಿಸಿದ. ತಾನು ಬಂದ ಕಾರಣ ಹೇಳಿದ. ಹಿಂದಿರುಗಲು ಗಿಳಿ ಬಿನ್ನವಿಸಿದರೂ ಕೇಳದೆ ರಾಮ ಒಳಗೆ ಬಂದ. ಸಂಗಿ ದಂಡಪ್ರಣಾಮ ಮಾಡಿದಳು. ‘ಚೆಂಡು ರತ್ನಾಜಿಯ ಹತ್ತಿರ ಇದೆ’ ಎಂದು ಹೇಳಿದಳು. ರಾಮ ರತ್ನಾಜಿಗೆ ನಮಸ್ಕರಿಸಿ, ಚೆಂಡು ಕೇಳಿದನು.‘ಆಟವಾಡಿ ದಣಿದಿರುವೆ, ಬಾ ಕುಳ್ಳಿರು’-ಎಂದಳು. ರಾಮ ನಿರಾಕರಿಸಿದ. ‘ಚೆಂಡು ಒಳಗೆ ಮಂಚದ ಮೇಲಿದೆ, ತೆಗೆದುಕೋ’ ಎಂದು ಹೇಳುತ್ತಲೇ ರಾಮಯ್ಯ ಒಳಗೆ ಹೋದ. ಬೆನ್ನು ಹಿಂದೆಯೇ ಬಂದ ರತ್ನಾಜಿ ಅವನ ಮುಂದಲೆ ಹಿಡಿದು ‘ಮನಸೋತೆ, ನೆರೆದುಳುಹು’ ಎಂದಳು, ತಬ್ಬಿಕೊಂಡಳು. ‘ನೀನು ಹರಿಯಮ್ಮನ ಸಮಾನ’ ಎಂದು ನುಡಿದು ಬಿಡಿಸಿಕೊಳ್ಳಲು ಪ್ರಯತ್ನಿಸಿದ. ‘ಬಾಲೆ ಹೆಣ್ಣು ಬಯಸಿ ಬಂದು ಹಿಡಿದರೆ ಒಲ್ಲೆನೆಂಬುದು ಗುಣವೇನೋ’ ಎಂದು ಕೇಳಿದಳು. ‘ನಿನಗೆ ಮುತ್ತು ಮಾಣಿಕ ನವರತ್ನ ಬಂಗಾರ ಕೊಡುವೆ’ ಎನ್ನುತ್ತ ಗಟ್ಟಿಮೊಲೆಗಳನ್ನು ತೋರಿಸಿದಳು. ‘ಹೊಸಮಲೆದುರ್ಗವನ್ನು ನಿನ್ನ ವಶಮಾಡುವೆ. ವಿಷವಿಕ್ಕಿ ಮುದಿ ಕಂಪಿಲನನ್ನು ಕೊಂದು, ನಿನಗೆ ಪಟ್ಟ ಕಟ್ಟುವೆ’ನೆಂದು ನುಡಿದಳು. ರಾಮ ಒಪ್ಪಲಿಲ್ಲ. ‘ಕೊಂದು ಹೋಗೆಲೋ ರಾಮ ನಿಂದು ಸೈರಿಸಲಾರೆ, ಮುಂದುಗೆಟ್ಟೆನೊ ವಿರಹದಲಿ, ಒಂದು ಗಳಿಗೆ ಭೋಗವನಿತ್ತು ಸೈರಿಸು’ ಎಂದು ಬೇಡಿಕೊಂಡಳು. ‘ನನ್ನನ್ನು ಹೆಂಡತಿಯಾಗಿ ಮಾಡಿಕೊಳ್ಳು’ ಎಂದಳು. ‘ಪರಸತಿಗೆ ಮೋಹಿಸಿದವನು ಹೊಲೆಯನೇ ಸರಿ’ ಎಂದು ರಾಮ ಬುದ್ದಿ ಹೇಳಿದ. ‘ಕಥೆಯನೋದವರೆಲ್ಲ ವ್ರತಗೆಟ್ಟು ಹೋದರೋ’, ‘ಸರಿಗೊಳಗಾಗದವರಾರೋ’ ಎಂದು ಹಲುಬಿದಳು. ‘ನಿನಗಾಗಿ ಕಂಪಿಲ ನನ್ನನ್ನು ತಂದು, ತಾನೇ ಮದುವೆಯಾದ. ನಾನು ನಿನಗೆ ಹೆತ್ತತಾಯಿಯಲ್ಲ, ಸೋದರತ್ತೆಯ ಮಗಳೋ ರಾಮಯ್ಯ’ ಎಂದಳು. ‘ತಂದೆಯ ಹೆಂಡತಿಯೊಂದಿಗೆ ಕೂಡುವುದು ನ್ಯಾಯವೇ?’ ಎಂದರೆ ‘ತಂದೆ ಏರುವ ಪಲ್ಲಕ್ಕಿಯ ಕಂದ ಏರುವುದಿಲ್ಲವೇ?’ ಎಂದು ವಾದಿಸಿದಳು. ‘ಕಲ್ಯಾಣದಲ್ಲಿ ರಾಮನಾಯಕನ ಹೆಂಡತಿ ಚಿಕ್ಕಯ್ಯನನ್ನು ಪ್ರೀತಿಸಿದಳು. ಅವನು ನಿರಾಕರಿಸಿ ತಲೆ ಕಳೆದುಕೊಂಡ. ಹಾಗಾದೀತು ಎಚ್ಚರಿಕೆ’ ಎಂದಳು. ‘ನಾನು ಬಾಸಿಂಗ ಕಟ್ಟಿಕೊಂಡು ಮದುವೆಯಾದವಳಲ್ಲ. ದೊರೆಯ ಊಳಿಗದವಳು’ ಎಂದು ಏನೇನೋ ಆಲಾಪಿಸುತ್ತಲೇ, ರಾಮ ಅವಳನ್ನು ನೂಕಿದರೆ, ಮುರಿಮುರಿದು, ಮತ್ತೆ ಮತ್ತೆ ತೊಡರಿದಳು. ಈ ಸೆಣಸಾಟದಲ್ಲಿ ಓಲೆ ಸಡಿಲಿತು, ಮುತ್ತು ಹರಿದು ಬಿದ್ದವು, ರತ್ನದ ಹಾರ ಹದಿನಾರು ತುಂಡಾಯಿತು, ಬಳೆಗಳು ಒಡೆದವು, ಮಾಣಿಕ ಸಿಡಿದವು, ತೊಡಿಗೆಗಳು ಬೆಸುಗೆ ಬಿಚ್ಚಿದವು, ಬಾಯ ತಾಂಬೂಲ ಪುಡಿ ಪುಡಿಯಾಯಿತು, ಕೂದಲು ಕಿತ್ತು ತಲೆ ತರಗಾಯಿತು. ರಾಮಯ್ಯ ಬಿಡಿಸಿಕೊಂಡು ಹೊರಗೆ ಬಂದು, ಆಟದ ಮನ್ನೆಯರನ್ನು ಮನೆಗೆ ಕಳಿಸಿದ. ಇದನ್ನು ಶಿವ ಮೆಚ್ಚಿದ. ‘ಅರ್ಜುನನ ಅವತಾರವಾದ ರಾಮನನ್ನು ರಂಭೆಯ ಅವತಾರವಾದ ರತ್ನಾಜಿಯು ಸೋಲಿಸಲಿಲ್ಲ’ ಎಂಬ ಶಿವನ ಮಾತಿಗೆ ಪಾರ್ವತಿ ಸಮ್ಮತಿಸಿದಳು.

ಸಂಧಿ: ೧೮

ರತ್ನಾಜಿ ಗಾಯಗೊಂಡ ಹುಲಿಯಂತಾಗಿ ‘ರಾಮನ ಕೊರಳ ಕೊಯಿಸದೆ ಊಟಮಾಡಲಾರೆ, ಹಾಗೆ ಮಾಡದಿದ್ದರೆ ನಾನು ಹೊತ್ತುವ ಮೊಲೆಗಳೇ ಅಲ್ಲ’ ಎಂದು ಪ್ರತಿಜ್ಞೆ ಮಾಡಿದಳು, ರತ್ನಾಜಿ. ಹಾರ ಹರಿದು, ಸೀರೆ ಸೀಳಿ, ತೋಳು ತೊಡೆಗಳಿಗೆ ಚೂರುಗಾಯ ಮಾಡಿಕೊಂಡು, ಅಗ್ಗಷ್ಟಿಗೆ ಮಗ್ಗುಲಿಟ್ಟುಕೊಂಡು ವದನಗೃಹದಲ್ಲಿ ಮಲಗಿದಲೂ. ಕಂಪಿಲರಾಯ ಬೇಟೆಯಿಂದ ಮರಳಿದ. ಅರಮನೆಯ ಸ್ತ್ರೀಯರು ಆರತಿ ಎತ್ತಿದರು. ಈ ಸಮಯದಲ್ಲಿ ರತ್ನಾಜಿ ಇಲ್ಲದುದನ್ನು ಗಮನಿಸಿದ ಕಂಪಿಲ, ಅವಸರದಿಂದ ಅವಳ ಮಂದಿರಕ್ಕೆ ಬಂದ. ‘ಮುತ್ತಿನ ಹಾರ ಹರಿದಿದೆ, ಕೂದಲು ಅಸ್ತವ್ಯಸ್ತವಾಗಿವೆ, ಕೈಬಳೆ ಒಡೆದಿವೆ, ಮೂಮೇಲೆ ನಖರೇಖೆ ಮೂಡಿವೆ, ಇದಕ್ಕೆ ಕಾರಣವೇನು?’ ಎಂದು ಕೇಳಿದ. ‘ನಿನ್ನ ಮಗ ರಾಮ ಆಟದ ಚೆಂಡು ಕೇಳುವ ನೆವದಿಂದ ಒಳಗೆ ಬಂದು, ಬಂಡು ಮಾಡಿದನು ಮೈಗೆಡಿಸಿ. ತಂದೆ ಮಗನಿಗೆ ಒಬ್ಬಳಾದೆ. ನಿನಗೆ ಹೆಂಡತಿ, ನಿನ್ನ ಮಗನಿಗೂ ಹೆಂಡತಿಯಾದೆ. ನನ್ನನ್ನು ನಿನ್ನ ಮಗನಿಗೆ ಒಪ್ಪಿಸು, ಇಲ್ಲವೆ ಅವನ ತಲೆ ಹಾರಿಸು. ಇಲ್ಲದಿದ್ದರೆ ವಿಷ ತೆಗೆದುಕೊಳ್ಳುತ್ತೇನೆ’ ಎಂದೆಲ್ಲ ಹೇಳಿ ಅವನ ಮನಸ್ಸನ್ನು ಕೆಡಿಸಿದಳು. ಕಂಪಿಲರಾಯ ಭಂಡಾರಿ ಬುಕ್ಕನನ್ನು ಕರೆಸಿ ವಿವರ ಹೇಳಿ, ಬೈಚಪ್ಪನನ್ನು ಕರೆತರಲು ತಿಳಿಸಿದ. ಬಂದ ಬೈಚಪ್ಪನಿಗೆ ಕಂಪಿಲರಾಯ ಎಲ್ಲ ವಿವರಿಸಿ, ‘ಕೊಂದು ರಾಮನ ಅಂಗವ ತಾರದಿದ್ದರೆ ನಿಂದೆಯ ನೀನೆ ಮಾಡಿಸಿದೆ’ ಎಂದು ಭಾವಿಸುತ್ತೇನೆ- ಹೀಗೆ ನಿಷ್ಠುರ ನುಡಿದ. ಆಣೆಯನ್ನು ಇಟ್ಟ. ಅರಸನ ಅಪ್ಪಣೆ ಪಡೆದು ಮನೆಗೆ ಬಂದು ಬೈಚಪ್ಪ ‘ಹುಲಿಯಡಗಿದ ಮಳೆಯಂತಿರ್ದ ರಾಮನ ಕೊಲುವರೆ ಕೈಯೆಳದು ಎಂದು’ ಚಿಂತಿಸಿದ. ರಾಮ ಸತ್ತರೆ ಏರಿ ಬರುವ ದಿಳ್ಳಿಯ ದಂಡನ್ನು ಎದುರಿಸುವರಾರು’ ಎಂದೂ ಚಿಂತಿಸಿದ. ರಾಮನನ್ನು ಮುಚ್ಚಿಡುವ ಯೋಚನೆ ಮಾಡಿದ.

ಸಂಧಿ: ೧೯

‘ಹೆಣ್ಣಿನಿಂದ ವಾಲಿ-ಸುಗ್ರೀವರು ಕೆಟ್ಟರು, ಹೆಣ್ಣಿನಿಂದ ಕೀಚಕ ಕೆಟ್ಟ’ ಎಂದು ಬೈಚಪ್ಪ ಕಂಪಿಲನಿಗೆ ತಿಳಿಹೇಳಿದ. ‘ರಾಮನನ್ನು ಕೊಲ್ಲದಿದ್ದರೆ ನಿನ್ನನ್ನೇ ಕೊಲ್ಲಿಸುವೆ, ಕಲ್ಲಗಾಣಕ್ಕೆ ಹಾಕಿಸುವೆ’ ಎಂದು ಗರ್ಜಿಸಿದ. ನಿರುಪಾಯನಾಗಿ ಬೈಚಪ್ಪ ರಾಮನ ಹತ್ತಿರ ಬಂದು, ಎಲ್ಲ ವಿವರ ಹೇಳಿದ. ಕೇಳುತ್ತಲೇ ಅಪವಾದದಿಂದ ಕುಗ್ಗಿಹೋದ ರಾಮಯ್ಯ ‘ಕೊಲ್ಲು ಪ್ರಧಾನಿಗಳರಸ’ ಎಂದು ನುಡಿದ. ಪ್ರಧಾನಿ ಇದಕ್ಕೆ ಒಪ್ಪದೆ, ಉಪ್ಪಲಿಕರ ಸಿಂಗಯ್ಯನನ್ನು ಕರೆದು, ಜಟ್ಟಂಗಿರಾಮೇಶ್ವರ ಗುಡಿಯ ಹತ್ತಿರ ನೆಲಮಾಳಿಗೆ ಮಾಡಿಸಿದ. ಏಳು ತಿಂಗಳ ವರೆಗೆ ಸಾಲುವಷ್ಟು ಅಕ್ಕಿ, ಕಡಲೆ, ಗೋದಿ, ಬೇಳೆ, ಬೆಲ್ಲ, ದೀಪದ ಎಣ್ಣೆ, ತೂಗುಮಂಚ, ಉಪ್ಪು, ಮೆಣಸು, ಅಡಕೆ, ಬಿಳಿಯಲೆ, ಸುಣ್ಣ ಸಂಗ್ರಹಿಸಿ ನೆಲಮಾಳಿಗೆಯಲ್ಲಿಟ್ಟ. ರಾಮನ ಜೊತೆಗೆ ದೇವಿಶೆಟ್ಟಿಯ ಲಿಂಗ, ಕೊಳ್ಳಿಯ ನಾಗ, ಭಾವ ಸಂಗಮ, ಗುಜ್ಜಲೋಬ, ಕೋಟಿಗರ ದ್ಯಾವ, ಮಾದಿಗರ ಹಂಪ, ಹಾವಳಿಕಾರ ಹನುಮ, ಲಿಂಗ, ಕಾಟಣ್ಣ, ನಲ್ಲನಾಯಕ, ಮುಮ್ಮುಡಿ, ಸಿಂಗಯ್ಯ-ಹೀಗೆ ಹನ್ನೆರಡು ಜನರನ್ನೂ ಆ ನೆಲಮಾಳಿಗೆಯಲ್ಲಿ ಇರಿಸಿದ.

ಸೆರೆಮನೆಯಲ್ಲಿದ್ದ, ರಾಮಯ್ಯನ ಪ್ರತಿರೂಪವೆನಿಸಿದ್ದ, ಕಳ್ಳರಾಮನ ಹತ್ತಿರ ಬಂದು, ಎಲ್ಲ ವಿವರಿಸಿ, ರಾಮಯ್ಯನಿಗೆ ಪ್ರತಿಯಾಗಿ ನಿನ್ನ ತಲೆ ಕೊಡುವುದೆಂದು ಒಪ್ಪಿಸಿದ. ಮೀಸೆ ಒತ್ತಿಸಿ, ಬವರಿ ತಿದ್ದು, ಕಸ್ತೂರಿ ತಿಲಕವನ್ನಿಟ್ಟು ಮುತ್ತಿನ ಕಡುಕ ಇಕ್ಕಿ, ವೀರಜಡೆ ಹೆಣಿಸಿ, ರಾಮಯ್ಯನ ಹಾಗೆ ರೂಪಗೊಳಿಸಿ, ಬೈಚಪ್ಪ ಕಳ್ಳರಾಮನ ತಲೆ ಕತ್ತರಿಸಿದ. ಜೊತೆಗೆ ಸೆರೆಯಲ್ಲಿದ್ದ ಬೇರೆ ಹನ್ನೆರಡು ಜನರ ತಲೆಯನ್ನು ಕತ್ತರಿಸಿ, ಕಂಪಿಲನೆದುರಿಗೆ ತಂದ. ರಾಮನ ತಲೆ ಕತ್ತರಿಸಲು ಅವಕಾಶ ಕೊಡದ ಕಾರಣ, ಈ ಮಿಕ್ಕ ಹನ್ನೆರಡು ಜನರ ತಲೆ ಕತ್ತರಿಸಿದೆನೆಂದು ಸುಳ್ಳು ಹೇಳಿ ನಂಬಿಸಿದ. ರತ್ನಾಜಿ ನಗುತ್ತ ಬಂದು ರಾಮನ ತಲೆಯನ್ನು ದಿಟ್ಟಿಸಿನೋಡಿದಳು. ಈ ಕೊಲೆಗೆ ಕಂಪಿಲ ಮರುಗಿದ. ‘ಏಳೇಳು ಜನ್ಮಕ್ಕೆ ಕಂಪಿಲ ತಂದೆಯಾಗಲಿ, ರತ್ನಾಜಿ ತಾಯಿಯಾಗಲಿ’ ಎಂದು ರಾಮಯ್ಯ ಹಾರೈಸಿದನೆಂದು ಮಂತ್ರಿ ಹೇಳಿದ. ಹರಿವಾಣದಲ್ಲಿಟ್ಟ ತಲೆಯನ್ನು ರತ್ನಾಜಿ ಮೆಟ್ಟಿನಿಂತಳು. ಹರಿಯಲದೇವಿ ದುಃಖಿಸಿದಳು. ಬಲಗೈಯ ಕಂಕಣ ಮುರಿವ, ಬೊಲ್ಲ ನೆಲದ ಮೇಲೆ ಬಿದ್ದ ದುಃಸ್ವಪ್ನ ತಾನು ಕಂಡುದಾಗಿ ಗೋಳಿಟ್ಟಳು. ‘ಶೂಲದ ಹಬ್ಬಕ್ಕೆ ನಮ್ಮನ್ನು ಯಾರು ಕರೆಸುವರು?’ ಎಂದು ಸಿಂಗಮ್ಮ ಮಾರಮ್ಮ ದುಃಖಿಸಿದರು. ಸಿಂಗಮ್ಮ ನೆಲದಲ್ಲಿ ಹೊರಳಿದಳು. ವಾಲೆ ಹರಿದವು, ಕೀವು ಕಂಕಣ ಸಡಿಲಿಸಿದವು, ಸಾಲು ಮುತ್ತಿನ ಸರ ಹರಿದವು. ಸುಡು ಸಂಸಾರ, ಎಂದು ಹರಿಯಮ್ಮ ಹಲುಬಿದಳು.

ಅರಮನೆಯಲ್ಲಿ ರಾಮನ ಪತ್ನಿಯರು ತಾವು ಕಂಡ ದುಃಸ್ವಪ್ನವನ್ನು ಪರಸ್ಪರ ಹೇಳಿಕೊಂಡು ಹೌಹಾರಿದರು. ನಮ್ಮ ಅರಮನೆ ಹೆಗ್ಗಂಬ ಮುರಿದು, ನಮ್ಮ ತಾಯಿ ಕಳಿಸಿದ್ದ ಕರಬಾನ ಕೆಡೆದು ಬಿದ್ದ ಕನಸ ಕಂಡೆನೆಂದು ರಾಮಲದೇವಿ ಹೇಳಿದಳು. ನನ್ನ ತುರುಬಿಗೆ ಬೆಂಕಿ ಹತ್ತಿದ ಕನಸು ಕಂಡುದಾಗಿ ಕಿರಿಯಾಕೆ ಹೇಳಿದಳು. ನನ್ನ  ಕೊರಳ ಮುತ್ತಿನಹಾರ ಕತ್ತರಿಸಿ ಬಿದ್ದ ಕನಸು ಕಂಡುದಾಗಿ ತಿಮ್ಮಾಜಿ, ರಾಮನ ಸತ್ತಿಗೆ ಮುರಿದ ಮತ್ತು ನಾನಿಟ್ಟ ವಾಲೆ ಭೂಮಿಗೆ ಬಿದ್ದ ಕನಸು ಕಂಡದನ್ನು ಕಾಮಾಯಿ ಹೇಳಿದಳು. ರಾಮನೇರುವ ಬೊಲ್ಲ ಸತ್ತ ಕನಸು ಕಂಡುದಾಗಿ ಭೀಮಾಯಿ ಹೇಳಿದಳು. ಅಷ್ಟರಲ್ಲಿ ಅಲ್ಲಿಗೆ ಬಂದ ಅತ್ತೆ ಹರಿಯಮ್ಮನಿಂದ ನಿಜ ಸಂಗತಿ ತಿಳಿದ ಸೊಸೆಯಂದಿರು ಹೌಹಾರಿ, ಮಾವನ ಹತ್ತಿರ ಕಿಚ್ಚು ಕೇಳಲು ನಡೆದರು.

ದುಕೂಲವ ಸಣ್ಣ ನಡುವಿಗಿಟ್ಟು, ನವರತ್ನಖಚಿತದಾಭರಣವಿಟ್ಟು, ಬಲಗೈಯಲ್ಲಿ ಕಠಾರಿ ಹಿಡಿದು, ಎಡಗೈಯಲ್ಲಿ ಕನ್ನಡಿ ಲಿಂಬೆ ಹಿಡಿದು, ಕಂಪಿಲರಾಯನ ಓಲಗಕ್ಕೆ ಹೊರಟರು. ಕನ್ನಡಿ ನೋಡುತ್ತ, ನಲಿದಾಡುತ್ತ, ರಾಮನ ಸದ್ಗುಣ ಪಾಡುತ್ತ ಬಂದರು. ಎಳೆಮೀಸೆ ಕೊನೆಮೀಸೆ ಬರುವಂಥ ಭೂಮಿಯ ದಳಪತಿ ರಾಯರ ಗಮಡ, ಕಳೆಯುಳ್ಳ ಚೆಲುವ ಚೆನ್ನಿಗರಾಮ, ಭೀಮ ಪರಾಕ್ರಮ ರಾಮ, ಬಿಟ್ಟಗಲುವರೆ ನಿಸ್ಸೀಮ, ಖಾನವಜೀರರ ಮೇಲೆ ದಂಡೆತ್ತಿ ಹೋಗದೆ ನಮ್ಮನ್ನು ಅಗಲಿದರೆ ನಾವು ನಿನ್ನ ಬೆನ್ನಬಿಡೆವು-ಎಂದು ದುಃಖಿಸಿದರು. ಆವ ಠಾಣ್ಯಕ್ಕೆ ರಾಮನ ಕಳುಹಿದೆ ಮಾವ, ಬಲ್ಲಾಳನ ಮೇಲೆ ಕಳುಹಿದೆಯಾ, ಪ್ರತಾಪರುದ್ರನ ಮೇಲೆ ಕಳುಹಿದೆಯಾ, ಜಗದಪ್ಪರಾಯನ ಠಾಣ್ಯಕ್ಕೆ ಮುತ್ತಿಗೆ ಹಾಕಲು ಕಳುಹಿದೆಯಾ, ಹುಳಿಯಾರ ಮಾರಿಗೊಂಡನ ಮೇಲೆ ಕಳುಹಿದೆಯಾ- ಎಂದು ಅತ್ತರು. ಅಂಬಲಿಗಾಗಿ ಅಮೃತಾನ್ನ ಚೆಲ್ಲಿದೆ, ಕಂಬಳಿಗಾಗಿ ದೇವಾಂಗ ಬಿಸುಟೆ- ಎಂದು ಅಳಲಿದರು. ರಾಮನನ್ನು ಕೊಲ್ಲಲು ಕೈಗಳಾದರೂ ಹೇಗೆ ಎದ್ದವು, ಕಿಚ್ಚು ದಯಪಾಲಿಸು- ಎಂದು ಮೊರೆ ಇಟ್ಟರು. ನಾಡ ಹಂಚಿಕೊಡುವೆ, ನಿಮ್ಮ ಅತ್ತೆಯ ಜೊತೆ ಇದ್ದು ಬಿಡಿರಿ- ಎಂದು ಕಂಪಿಲ ಹೇಳಿದ. ರಾಜ್ಯ ಪಡೆದು ರಂಡೆಯಾಗಿ ಬಾಳಲಾರೆವು- ಎಂದು ಹಟ ಹಿಡಿದರು. ಇದಕ್ಕೊಂದು ಉಪಾಯ ಮಾಡಲು ಮಂತ್ರಿಗೆ ರಾಜ ಹೇಳಿದ. ಮಂತ್ರಿ ಅವರನ್ನು ಕರೆದುಕೊಂಡು ಬಂದು” ನೀವು ಸತಿ ಹೋದರೆ ರಾಮನು ಸತ್ತ ಸುದ್ದಿ ಇನ್ನೂ ಖಚಿತವಾಗಿ, ಸುರಿತಾಳ ದಂಡೆತ್ತಿ ಬರುತ್ತಾನೆ. ಆರು ತಿಂಗಳು ತಡೆಯಿರಿ” ಎಂದು ತಿಳಿ ಹೇಳಿದನು.

ಸಂಧಿ೨೦

ಕುಮಾರ ರಾಮ ಸತ್ತ ಸುದ್ದಿ ದಿಳ್ಳಿಗೆ ತಲುಪಿತು. ಕಾಳಗ ಕೈಕೊಳ್ಳಲು ನೇಮಿಗೆ ಸುರಿತಾಳ ಆಜ್ಞೆ ನೀಡಿದ. ನೇಮಿ ಈ ಸುದ್ದಿ ನಂಬಲಿಲ್ಲ. ಗುಪ್ತಚಾರರನ್ನು ಕಳಿಸಿ, ಸತ್ತ ಸುದ್ದಿ ಖಚಿತಪಡಿಸಿಕೊಂಡನು. ನೇಮಿಯ ನೇತೃತ್ವದಲ್ಲಿ ಸೈನ್ಯ ಕುಮ್ಮಟಕ್ಕೆ ತೆರಳಿತು. ಭೇಡಿ, ತಮ್ಮಟೆ, ಗಿಡಿಬಿಡಿ, ನಿಸ್ಸಾಳ, ಕೊಂಬು, ವೀರವಾದ್ಯ ಮೊಳಗಿದವು. ಖಾನ ಮಲುಕ, ಗುಜ್ಜರಾಹುತ, ಆರೆಯ ದೊರೆ, ಗೌಳಗುಜ್ಜರ ರಾವುತ, ಲಾಳದೇಶದ ಮರಾಳ ಖಾನರೆಲ್ಲ ಸೇರಿದರು. ಕನ್ನೋಜಿ ಕೂಡಿಕೊಂಡನು. ಸಿಂಧುಮರಾಳ, ಮಗಧ, ಮಾಳವರಾಜರು ಸೇರಿದರು. ದುರ್ಜಟಿಖಾನ, ಬಬ್ಬಿರಖಾನ, ಸೈದ್ರಲ್ಲಿ, ಬಿಜ್ಜಾಟಿ ಹರಟೆಖಾನ, ಜಂಬಾರಕಾನ, ಲುಬ್ದಖಾನ, ರಾರಾಜಿಖಾನ, ರಾಜೆಯಖಾನ, ಮಾಮುದ್ದು ಸಾಹೇಬಖಾನ, ಎಕಲಾಸಖಾನ, ಎದ್ದೂಲಖಾನ, ಮಖರಂಕಖಾನ, ರುಕುಮಸಖಾನ, ಬಾಬಾಜಿಖಾನ, ಮುಸಲಖಾನ, ಸಾಹೇಬಖಾನ, ಸಕಲಾತಿಖಾನ, ಹೈದರಖಾನ ಮೊದಲಾದವರು ಸೈನ್ಯದೊಂದಿಗೆ ನಡೆದರು.

ತಿತ್ತಿ ಸಜ್ಜುಮಾಡಿಕೊಂಡರು, ಸಾರಾಯಿ ತುಂಬಿಸಿದರು. ಭೇರಿಯ ಸನ್ನೆಯ ಮೇರೆಗೆ ಸೈನ್ಯ ಮುನ್ನಡೆಯಿತು. ಜಾಯಿಕಾಯಿ, ಜಾಪತ್ರಿ, ಬೇಯಿಸಿದ ರೊಟ್ಟಿ ಮೊದಲಾದ ಆಹಾರ ಸಂಗ್ರಹಿಸಿ ಗಂಗಾಸಾಗರಕ್ಕೆ, ಅಲ್ಲಿಂದ ಚಿಕ್ಕಡಿಲ್ಲಿಗೆ (ದೇವಗಿರಿ) ಬಂದರು. ಭಾಗೀರಥಿ ದಾಟಿ, ಮಿರುಜೆ, ಅರುಣಾವತಿಗೆ ಬಂದರು. ದಾರಿಯಲ್ಲಿ ಶಕುನ ನೋಡಲು ಶಾಸ್ತ್ರಿಗಳನ್ನು ಕರೆಸಿದರು. ಟಗರು, ಕೋಳಿ ಕಾಳಗ ಏರ್ಪಡಿಸಿದರು. ರಾಮನ ಹೆಸರಿಟ್ಟುವು ಗೆದ್ದು, ನೇಮಿ ಹೆಸರಿಟ್ಟುವು ಸೋತವು. ನೇಮಿ ಅಧೀರನಾದ. ಹಿಂದಿರುಗಿದರೆ ಸುರಿತಾಳ ಕೊಂದುಹಾಕುವನೆಂಬ ಭೀತಿಯಿಂದ ಮುಂದೆ ನಡೆದ. ತೋರಗಲ್ಲು, ಬಾದಾಮಿ, ಗಲಗಲಿ, ವಿಜಯಪುರಕ್ಕೆ ಸೈನ್ಯ ಬಂದಿತು.

ಕಾಡಮೊಲ್ಲೆಯ ಸೊಪ್ಪನ್ನು ಓಡಿಲಿ ಹುರಿದು ತಿನ್ನುವ ಬೇಡರು, ಕೈಯಲ್ಲಿ ನಾಯಿ, ಬಡಿಕೋಲು, ನೆತ್ತಿಯ ಮೇಲೆ ಮೊಟ್ಟೆಗಂಟು, ಹಸ್ತದ ಮೇಲೆ ಗಿಡುಗ, ಹೆಗಲಿನ ಎರಡೂ ಕಡೆಗೆ ಹತ್ತಿಯ ಗೂಡು ಸಹಿತ ಗೂಳೆ ನಡೆದರು.

ಹೆಬ್ಬಲೆ, ಕುರುವಲೆ, ಮೊಲವಲೆ, ಕಾಲ್ವಲೆ, ಗುಬ್ಬಯ ಬಲೆ, ಹಕ್ಕಿಯ ಬಲೆಗಳೊಂದಿಗೆ ಮೃಗದ ಬೇಟೆಯಾಡುತ್ತ ಕಬ್ಬೇರು ಗೂಳೆಯ ನಡೆದರು. ಕುರಿಯ ಹಿಂಡುಗಳನ್ನು ಹೊಡೆದುಕೊಂಡು, ಮರಿಗಳನ್ನು ಹೊತ್ತುಕೊಂಡು, ಮರುಗುವ ಹೆಂಡಿರ ಕೈಹಿಡಿದುಕೊಂಡು, ಗೊಲ್ಲರು ಗೂಳೆ ನಡೆದರು. ಗಟ್ಟಣಿಗೆ, ಕೊಡತಿ ಹೆಗಲಮೇಲಿಟ್ಟುಕೊಂಡು ಅಗಸರು ಗೂಳೆ ನಡೆದರು. ಓದುಗ ಹಲಗೆ, ಕಡತ, ಬಳಪ, ವೇದದ ಪೆಟ್ಟಿಗೆಯೊಡನೆ ಓದಿಸುವಣ್ಣಗಳೂ, ಅವರ ಹೆಂಗಸರೂ ಗೂಳೆ ನಡೆದರು. ಪಟ್ಟಸ್ವಾಮಿಗಳೊಂದಿಗೆ ಸೆಟ್ಟರು ಗೂಳೆಯ ನಡೆದರು. ಅಡಿಗಲ್ಲು, ತಿದಿಮುಟ್ಟು, ಇಕ್ಕಳ, ಕೆತ್ತುವ ಉಳಿ, ಬಾಚಿ, ಕೊಡತಿಗಳೊಂದಿಗೆ ಬಡಗಿ ಕುಂಬಾರರು ಗೂಳೆ ನಡೆದರು. ಅಚ್ಚ ಕುಂಚಿಗೆ, ಹಚ್ಚಡ ಕುಂಚಿಗೆ, ರಚ್ಚು ಹೊರುವ ಮಕ್ಕಳನೆತ್ತಿಕೊಳ್ಳುವ ಜಾಡೆಉ ಗೂಳೆಯ ನಡೆದರು. ಚಿಪ್ಪಿಗ, ಉಪ್ಪಾರ, ಕುಂಬಾರ, ಡೊಂಬ, ಬ್ರಾಹ್ಮಣ, ಉಪಾಧ್ಯೆ, ಜೋಯಿಸ, ನಾಯಿದ ಮೊದಲಾದ ಜಾತಿಗಳ ಜನರು ಗೂಳೆಯ ನಡೆದರು.

ತೊರಗಲ್ಲು ಬಾದಾಯಿ ಮುಂದೆ ಕದನ ಏರ್ಪಟ್ಟು, ಏಳು ತಿಂಗಳಿಗೆ ದಂಡು ಕಮ್ಮುಟಕ್ಕೆ ಬಂದಿತು. ಐದು ಜನ ಕುದುರೆ ಏರಿ ಕುಮ್ಮಟಕ್ಕೆ ಬಂದು ಅಟ್ಟಳೆಯ ಮೇಲೆ ಕಾಗದ ಇಟ್ಟು, ತಾವು ಬಂದ ಸುದ್ದಿ ಕಂಪಿಲನಿಗೆ ತಿಳಿಸಿದರು. ಬೆಟ್ಟವ ನಂಬಿ ಕೆಡಬೇಡ, ಈಗ ಕೊಟ್ಟದ ರಾಮುಗನಿಲ್ಲ. ಬಾದೂರನನ್ನು ಒಪ್ಪಿಸು ಎಂದು-ಕಂಪಿಲನಿಗೆ ಕೇಳಿದರು. ಮೊರೆಹೊಕ್ಕ ಖಾನರ ಕೊಡೆನೆಂಬ ಬಿರುದು ಸಾರ್ಥಕವಾಗುವಂತೆ ವೈರಿಗಳನ್ನು ಹೆದ್ದೂರೆಯ ತನಕ ಓಡಿಸುವೆ- ಎಂದು ಕಂಪಿಲ ಉತ್ತರಿಸಿದ. ಮಗನ ಅಗಲಿಕೆಗೆ ಮರುಗಿದನಾದರೂ ಹುಡೆಯ, ಹುಲಿಮುಖ, ಕೊತ್ತಳಗಳಿಗೆ ಪೆಟಲು ಬಾಣ ಸಜ್ಜುಗೊಳಿಸಿದ. ಹೆಬ್ಬಾಗಿಲು, ಚೋರಗಂಡಿಗಳಿಗೆ ರಣಬಲಿ ಇಕ್ಕಿಸಿದ. ‘ಪತ್ನಿಯನ್ನು ಕರೆಯಿಸು, ಕಾದಲಿ’ ಎಂದು ಬೈಚಪ್ಪ ಹಂಗಿಸಿದ. ಬಹಾದ್ದೂರ ಮೊದಲಾದವರು ವೀಳ್ಯೆ ಹಿಡಿದು ಸಜ್ಜಾದರು. ಚೋರಗಂಡಿ ಇಳಿದು, ರಾತ್ರಿ ವೈರಿಪಾಳೆಯದಲ್ಲಿ ಕಗ್ಗೊಲೆ ನಡೆಸಿದರು. ಕುದುರೆ, ಆನೆ ಸೆಡೆ ಹಿಡಿದು ಕಂಪಿಲನ ಜನ ಕುಮ್ಮಟಕ್ಕೆ ಮರಳಿದರು.

ಮರುದಿನ ತುರುಕರ ಸೈನ್ಯ ಕುಮ್ಮಟವನ್ನು ಸುತ್ತುವರಿಯಿತು. ಮಗನಿಗಾಗಿ ಕಂಪಿಲ ಹಳಹಳಿಸಿದ. ಮೃತ್ಯು ನುಂಗಿದ ತುತ್ತು ಬಹುದೇ? ಎಂದು ಬೈಚಪ್ಪ ಸಮಾಧಾನಪಡಿಸಿದ. ಮಗನ ಹಂಬಲ ಬಿಟ್ಟು ಸೈನ್ಯಕ್ಕೆ ಸಂಪತ್ತು ಹಂಚು- ಎಂದು ಹೇಳಿದ.

ಸಂಧಿ೨೧

ಕುಮ್ಮಟ ಕಮಲಪತ್ರದ ಜಲಬಿಂದುವಿನಂತೆ ತಲ್ಲಣಿಸಿತು. ಒಂದು ಸುತ್ತಿನ ಕೋಟೆಯನ್ನು ವೈರಿಗಳು ವಶಪಡಿಸಿಕೊಂಡರು. ಬೈಚಪ್ಪ ಕಂಪಿಲನಿಗೆ ಧೈರ್ಯ ಹೇಳಿ, ‘ಈಗ ಹೆದ್ದೊರೆತನಕ ವೈರಿಗಳನ್ನು ಓಡಿಸುತ್ತೇನೆ, ನೋಡು’ ಎಂದು ಅವನನ್ನು ಉಪ್ಪರಿಗೆ ಏರಿಸಿದ. ರಾಮೇಶನ ಗುಡಿಗೆ ಬಂದು ನಮಸ್ಕರಿಸಿ, ಬಲಿ ನೀಡಿದ. ನೆಲ ಮಾಳಿಗೆ ಹತ್ತಿರ ಬಂದು ‘ತಳಮಳಗೊಂಡು ದುರ್ಗ ಕಣುಗೆಡುತಿದೆ, ಏಳು’ ಎಂದು ಕೂಗಿ ರಾಮನನ್ನು ಕರೆದ. ಚದುರಂಗ ಪಗಡೆಯಾಟದಲ್ಲಿ ತೊಡಗಿದ್ದ ರಾಮ ‘ಅಂದೇ ಕಂಪಿಲ ನನ್ನನ್ನು ಕೊಂದಿದ್ದಾನೆ. ಇಂದೇಕೆ ನಿಮಗೆ ನಮ್ಮಾಸೆ. ಸಾಕು ಬೈಚಪ್ಪ ಸಂಸಾರದ ಸುಖ ದುಃಖ, ಬೇಕಿಲ್ಲ ದೊರೆತನ ನಮಗೆ’ ಎಂದು ನೊಂದು ನುಡಿದ. ‘ತುರುಕರು ನಿಮ್ಮ ತಂದೆಯ ಜೀವ ಕಳೆವೆವೆನ್ನುತ ನಿಂದಿಹರು, ಏಳು’ ಎಂದು ಬೈಚಪ್ಪ ಒತ್ತಾಯಿಸಿದ. ‘ತಂದೆ-ತಾಯಿಗಳಿಲ್ಲ. ಬಂಧು-ಬಳಗವಿಲ್ಲ, ಹಿಂದು ಮುಂದಾರು ಎನಗಿಲ್ಲ. ಕಂದರ್ಪಹರ ಜಟ್ಟಿಂಗ ಲಿಂಗನ ಪಾದ ಹೊಂದುವುದು ಲೇಸು’ ಎಂದು ರಾಮ ನೊಂದು ನುಡಿದ. ‘ಕಾಳಮೇಘದ ಹಾಗೆ ಕವಿದು ತುರುಕರ ದಂಡ ಹಾಳುಮಾಡುವ ಧೀರ ಏಳೋ’ ಎಂದು ಬೈಚಪ್ಪ ಒತ್ತಾಯಿಸಿದ. ‘ಏಳದಿದ್ದರೆ ಕಂಪಿಲನಾಣೆ, ಕುಲಗುರುವಿನ ಆಣೆ, ತಾಯಿ ಹರಿಯಮ್ಮನ ಆಣೆ’ ಎಂದು ಒತ್ತಾಯಿಸಿದ. ರಾಮ ತನ್ನ ಜನರೊಂದಿಗೆ ಹೊರಬಂದ. ಸ್ತ್ರೀಯರು ಆರತಿ ಎತ್ತಿದರು. ಬೊಲ್ಲನನ್ನು ಕಾಲ ಗಗ್ಗರ, ಕೊರಳಗೆಜ್ಜೆ, ಮಾಣಿಕದ ಹಲ್ಲಣ, ತಳಪು, ರನ್ನದ ಪಟ್ಟೆ, ಮುತ್ತಿನ ಬಾಸಿಂಗ, ಹಕ್ಕರಿಕೆಯ ಮೇಲೆ ಇತ್ತರದಲಿ ಝಲ್ಲಿ, ಕಕ್ಕಸ ಭಲ್ಲೆಗಳಿಂದ ಸಜ್ಜುಗೊಳಿಸಿದರು. ರಾಮಯ್ಯನಿಗೆ ಜೋಡು ವಜ್ರಾಂಗಿ, ರಾಗವಳಿಯ ಠೌಳಿ ತೊಡಸಿದರು.ರಾಯರಾಹುತ ಎಂದು ಬೂಚಪ್ಪ ಹೊಸ ಹೆಸರಿಟ್ಟು, ‘ಈತ ಕಲ್ಯಾಣದಿಂದ ಬಂದವ’ನೆಂದು ಪ್ರಚಾರ ಮಾಡಿದ. ದೇವಿಶೆಟ್ಟಿ ಲಿಂಗ, ಬೇವಿನ ಸಿಂಗಯ್ಯ, ಭಾವ ಸಂಗಮ, ಹಾರೋ ಲಿಂಗ, ಕೊಟಗರ ದ್ಯಾವ, ಇರುವ, ಹಾವಳಿಕಾರ ಹಂಪಯ್ಯ, ಮಾದಿಗ ಹಂಪ, ಮುದಗೊಂಡ ಲೋಬ, ಸಾಧನೆ ಬಸವಯ್ಯ, ಬಾದೂರಖಾನ, ಎನುಮಾಲ ಚಿತ್ತ, ಎರಬೊತು ಗಂಗ, ಬೆಟ್ಟದ ಸಂಗ, ಮರುಳೆಯ ಪಾಪ, ಬೂಟಕ ಬೊಮ್ಮ, ಕೊಳ್ಳಿಯ ನಾಗ ಇವರೆಲ್ಲ ಸೇರಿದರು. ಅಬ್ದುಲ್‌ಖಾನ ಮುಂದಾಗಿ ನಡೆದ. ಬಾದೂರಖಾನ ವೈರಿಗಳ ಮೇಲೆ ಎರಗಿದ. ರಾಮನಾಥ ಸೈನ್ಯ ಸವರುತ್ತ ನಡೆದ. ಈ ರಭಸ ನೋಡಿ, ಇವನು ರಾಮಯ್ಯನೇ ಇರಬಹುದೆಂದು ಕೆಲವರು ಅನುಮಾನಿಸಿದರು. ನೇಮಿ ಸೈನ್ಯದಲ್ಲಿ ತುಂಬುರಖಾನ ಅಳಿದ. ಭೂತಗಳಿಗೆ ಹಬ್ಬವಾಯಿತು. ತುರುಕರ ಸೈನ್ಯ ಹೆದ್ದೊರೆ ತನಕ ಓಡಿಹೋಯಿತು. ಬಾದೂರಖಾನ ಬಾದಾಮಿ ತೊರಗಲ್ಲ ತನಕ ಸೈನ್ಯ ಓಡಿಸಿದ. ಉಪ್ಪರಿಗೆ ಮೇಲಿನಿಂದ ಇದನ್ನೆಲ್ಲ ನೋಡಿದ ಕಂಪಿಲ, ಬೈಚಪ್ಪನ ಮೂಲಕ ಹೊಸ ರಾಯರಾಹುತನನ್ನು ಕರೆಸಿದ. ರಾಮ ಕಂಪಿಲನಿಗೆ ನಮಸ್ಕರಿಸಿ ತಲೆಯ ಠೌಳಿ, ವಜ್ರಾಂಗಿ ತೆಗೆಯುತ್ತಲೇ ಅವನು ಮಗನನ್ನು ಗುರುತಿಸಿ ಅಪ್ಪಿಕೊಂಡನು. ರಕ್ತಕಾಯವನ್ನು ತೊಳೆಸಿ, ಉತ್ತಮ ವಜ್ರಾಂಗಿ ತೊಡಿಸಿ, ದಾನಧರ್ಮಮಾಡಿ, ಮುತ್ತು ನಿವಾಳಿ ಚೆಲ್ಲಿಸಿದನು. ಹರಿಯಮ್ಮ ಹರಿದು ಬಂದಳು. ಅಕ್ಕ ಮಾರಮ್ಮ, ತಂಗಿ ಸಿಂಗಮ್ಮ ಓಡಿಬಂದರು. ರಾಮಲದೇವಿ ಸವತಿಯರೊಂದಿಗೆ ಬಂದು ರಾಮನಿಗೆ ನಮಸ್ಕರಿಸಿದಳೂ. ಈ ಸಡಗರದ ಗದ್ದಲ ಕೇಳಿ, ತಿಳಿದುಕೊಂಡು ಬರಲು ರತ್ನಾಜಿ ಸಂಗಿಯನ್ನು ಕಳಿಸಿದಳು. ಸಂಗಿ ಹೇಳಿದ ಸಂಗತಿ ಕೇಳಿ ಬೆರಗಾಗಿ, ಉರುಲುಹಾಕಿಕೊಂಡು ಸತ್ತಳು. ಸಂಗಿ ಕಠಾರಿಯಿಂದ ಇರಿದುಕೊಂಡು ಸತ್ತಳು. ಈ ಸುದ್ದಿ ಕೇಳಿದ ಕಂಪಿಲ ‘ಹೆಣವನ್ನು ಆನೆಕಾಲಿಗೆ ಕಟ್ಟಿ ಎಳೆಸಿರಿ’ ಎಂದು ಆಜ್ಞಾಪಿಸಿದ. ಮಂತ್ರಿ ಎಳೆದು ಅಗುಳಿಗೆ ಹಾಕಿಸಿದ.