ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧೃ ಭವರೋಗವೈದ್ಯನೆ
ನಾಗ [ಕುಂಡಲ]ಶರಣೆಂಬೆ || ೧ ||

ರಾಮನ ನೆನೆ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆ ಕಂಡ್ಯಾ ತನುವೆ |
ರಾಮರಾಮಾ ಎಂಬ ನಾಮವ ನೆನೆದರೆ
ಕಾಮಿತ ಫಲವೀವ ರಾಮ || ೨ ||

ಸಕ್ಕರೆ ಸವಿದಂತೆ ಮಧುರ ಮಾವಿನಹಣ್ಣು
ಉಕ್ಕುವ ತನಿಬೆಲ್ಲದಂತೆ |
ಮಕ್ಕಳ ಮಾಣಿಕದಂತೆ ರಾಮನ ಕೃತಿ
ಸತ್ಕವಿಗಳು ಲಾಲಿಪುದು || ೩ ||

ಮುಂದಕ್ಕೆ ಬೇಂಟೆಯ ಹೋಗದೆ ರಾಯನ ಕೂಡೆ
ಹಿಂದಕ್ಕೆ ತಿರುಗಿ ರಾಮಯ್ಯ |
ಬಂದನು ಊರುಳಗುಳ್ಳ ಹರುಗೋಲನು
ಒಂದುಳಿಯದೆ ತರಿಸಿದನು || ೪ ||

ಕಂಪಿಲರಾಯನ ಮಗನು ರಾಮಯ್ಯನು
ಹಂಪೆಯ ಹೊಳೆಗಾಗಿ ಬಂದ |
ಹಂಪರಾಜನು ಕಂಪರಾಜನ ಕೊಂಡೆಯರಾಜ
ಸಂಪಿಗೆರೆಯ ಸಿಂಗರಾಜ || ೫ ||

ಹಡಪದ ಬೊಲ್ಲುಗ ಕಡುಪ್ರಿಯ ಗಂಗಯ್ಯ
ಒಡಹುಟ್ಟಿದವನು ಕಾಟಣ್ಣ |
ತಡೆಯದೆ ಮಂತ್ರಿ ಬೈಚಪ್ಪನ ಮಕ್ಕಳು
ಒಡನೆ ನೀರಾಟಕೈದಿದರು || ೬ ||

ಮಾವ ಮಂಚಣ್ಣನ ಮಕ್ಕಳ ಕರೆಸಿದ
ಭಾವ ಸಂಗಮದೇವನವರ |
ಕಾವಲ ಕಾಟನಾಯಕನ ಮಕ್ಕಳ
ದೇವಿಸೆಟ್ಟಿಯ ಲಿಂಗಣ್ಣ || ೭ ||

ಚಾರಮರಾಯನ ಮಕ್ಕಳು ಬಂದರು
ಸಾರಂಗ ಗೊಲ್ಲರ ಗುಜ್ಜಯ್ಯ |
ಭೋರನೆ ಮನ್ನೆರೆಲ್ಲರ ಕೂಡಿಕೊಂಡಾಗ
ನೀರಾಟಕೆ ತೆರಳಿದರು || ೮ ||

ತಂದು ಹರುಗೋಲನು ಹಾಕಿದರು ಹೊಳೆಯೊಳು
ಬಂದು ಕುಳಿತ ಚೆನ್ನರಾಮ |
ಚೆಂದದಿ ಕಾಟಣ್ಣನ ಪರಿವಾರವು
ಒಂದೆಸೆಯಲಿ ಏರಿದರು || ೯ ||

ಎಲ್ಲರು ಒಂದೊಂದು ಹರುಗೋಲನೇರುತ
ನಿಲ್ಲದೆ ನೀರ ಚೆಲ್ಲುತಲಿ |
ಬಲ್ಲಿದ ರಾಮನ ಹರುಗೋಲಿನ ಮೇಲೆ
ಎಲ್ಲರು ತುಡುಕಿ ನೂಕಿದರು || ೧೦ ||

ಒತ್ತಿ ಬಂದರು ಕಾಟಣ್ಣನ ಪರಿವಾರ
ಮೊತ್ತದ ಹರುಗೋಲು ನೂರು |
ಸುತ್ತಗಟ್ಟಿಕೊಂಡು ರಾಮನಾಥನ ಮೇಲೆ
ಎತ್ತಿ ನೀರುಗಳ ಚೆಲ್ಲಿದರು || ೧೧ ||

ಚಿನ್ನದಂಡೆಯು ಬೆಳ್ಳಿಯಂತೆ ಜೀರ್ಕೊಳವಿಯು
ಉನ್ನತ ಮುತ್ತಿನಂಡೆಗಳು |
ಚೆನ್ನಿಗ ರಾಮಯ್ಯ ನೀರ ಮೊಗೆದು ತಂದು
ಮನ್ನೇರ ಮೇಲೆ ಚೆಲ್ಲಿದನು || ೧೨ ||

ಒತ್ತಿ ಬಂದನು ಭಾವಸಂಗಮದೇವನು
ಮುತ್ತಿನ ಬಿಳಿಕೋಲು ಪಿಡಿದು |
ಮತ್ತೆ ರಾಮಯ್ಯನ ಮುತ್ತಿಕೊಂಡೆಲ್ಲರು
ತಂತ್ರ ಭೀತಿಯನು ಮಾಡುತಲಿ || ೧೩ ||

ಭಾವನ ಮೇಲೆ ನೂಕಿದ ಹರುಗೋಲನು
ಸಾವಿರ ಬೆಳ್ಳಿ ಕೊಳವಿ ಸಹಿತ |
ಕೋವಿದ ರಾಮನ ನೀರಿಲಿ ಎಸೆವಂಥ
ಠೀವಿಯನೇನ ಬಣ್ಣಿಸುವೆ || ೧೪ ||

ತಪ್ಪನೆ ತೊಯ್ಸಿ ನೀರಿಲಿ ರಮಯ್ಯನ
ಇಪ್ಪತ್ತು ಹರುಗೋಲಿನಿಂದ |
ತಪ್ಪದೆ ಮಂತ್ರಿ ಬೈಚಪ್ಪನ ಮಕ್ಕಳು
ಎಪ್ಪತ್ತು ಹರುಗೋಲಿನಿಂದ || ೧೫ ||

ಎಲ್ಲರ ನೂಕಿ ಹೊಡೆವುತಲಿ ರಾಮಯ್ಯನು
ಚೆಲ್ಲಿದ ಮಳೆ ಬಂದ ತೆರದಿ |
ನಿಲ್ಲದೋಡಿದರು ಹಿಂದಕೆ ಹಿಮ್ಮೆಟ್ಟಲು
ಮೆಲ್ಲನೆ ಬಂದ ಕಾಟಣ್ಣ || ೧೬ ||

ಸುತ್ತಿಕೊಂಡನು ಬಂದು ಕಾಟಣ್ಣನೊಳಹೊಕ್ಕು
ಮೊತ್ತದಿ ಬೀಗರ ಮೇಲೆ |
ಎತ್ತ ನೋಡಲು [ಹುಬ್ಬಿ]ಮಳೆ ಬಂದ ತೆರನಂತೆ
ತೆರನಂತೆ ಕತ್ತಲಾಯಿತು ನೀರಾಟ || ೧೭ ||

ಆರೇರ ಚಾರಮರಾಯನ ಮಕ್ಕಳು
ನೂರಾರು ಹರುಗೋಲ ನೂಕಿ |
ಧೀರ ರಾಮಯ್ಯ ಕಾಟಣ್ಣನ ಮೇಲೆಸೆವುತ
ಏರಿ ಬಂದರು ಸುತ್ತಮುತ್ತ || ೧೮ ||

ಮಲೆನಾಡ ಸೋನೆ ಸುರಿವ ತೆರನಂದದಿ
ಮುಳುಗಿ ತೇಲುತಲಿ ಕಾಟಣ್ಣ |
ಬಳಲುವ ಅಣ್ಣನ ನೋಡಿ ರಾಮಯ್ಯನು
ಸಲೆ ತನ್ನ ಹರುಗೋಲ ನೂಕೆ || ೧೯ ||

ಒಂದೆ ವಾದ್ಯದಲಿ ಏರಿದ ರಾಮಯ್ಯನು
ಬಂದಡ್ಡಗಟ್ಟಿ ಎಲ್ಲರನು |
ಹಿಂದುಮುಂದನೆ ಮಾಡಿ ನೀರಿಲಿ ಎಲ್ಲರ
ಹಿಂದಕೆ ಹಾಕಿದ ನಗುತ || ೨೦ ||

ಮಂಚಣ್ಣನ ಮಕ್ಕಳೇರಿ ಬಂದರು ಬೇಗ
ಹೊಂಚುತ ರಾಮನ ಮೇಲೆ |
ಅಂಚೆಯ ಕಾದಿರ್ದ ಹಂಪರಾಜನು ಬಂದು
ಮುಂಚಡ್ಡಗಟ್ಟಿ ನೂಕಿದನು || ೨೧ ||

ತಣ್ಣನ ನೀರೊಳು ನೀರಾಟವನಾಡಿ
ದಣ್ಣನೆ ದಣಿಯಲಾಕ್ಷಣದಿ |
ಅಣ್ಣ ಕಾಟಣ್ಣನು ಮನ್ನೆಯರು ಸಹವಾಗಿ ಮು
ಕ್ಕ[ಣ್ಣ] ವಿರೂಪಾಕ್ಷನ ಗುಡಿಗೆ || ೨೨ ||

[ಬಂ]ದು ಕಾಣಿಕೆಯಿಕ್ಕಿ ವಿರೂಪಾಕ್ಷಲಿಂಗಗೆ
ಚೆಂದಚೆಂದದಲಿ ಮನ್ನೆಯರು |
ಗಂಧ ಪ್ರಸಾದವ ಕೈಕೊಂಡು ಬಂದರು
ಅಂದು ಹರುಷದಲಿ ಮನ್ನೆಯರು || ೨೩ ||

ಇಂದುಧರಗೆ ವಂದನೆ ಮಾಡಿ ರಾಮಯ್ಯ
ಬಂದನು ತನ್ನ ಮಂಟಪಕೆ |
ನಡೆದು ಬಂದನು ಅರಮನೆಗಾಗಿ ರಾಮಯ್ಯ
ಒಡನೆ ಪಾಠಕರು ಉಗ್ಗಡಿಸೆ || ೨೪ ||

ಬಂದ ಮಾನ್ಯರಿಗೆಲ್ಲ ಒಂದು ವೀಳ್ಯವ ಕೊಟ್ಟು
ನಿಂದು ಎಲ್ಲರ ಕಳುಹಿದನು |
ಚೆಂದದಿ ಕಾಟಣ್ಣನ ಹೋಗಹೇಳಿದ
ನಂದು ಹೊಕ್ಕನು ಅರಮನೆಯ || ೨೫ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಪದನು |
ಚದುರ ರಾಮಯ್ಯ ನೀರಾಟವಾಡಿದ
ಪದಗಳು ಮುಗಿಯೆ ಸಂಪೂರ್ಣ || ೨೬ |