ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ರಾಮನ ನೆನ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆನೆ ಕಂಡ್ಯಾ ತನುವೆ |
ರಾಮಾರಾಮಾ ಎಂಬ ನಾಮವ ನೆನೆದರೆ
ಕಾಮಿತ ಫಲವೀವ ರಾಮ || ೨ ||

ದೊರೆಯು ಕಂಪಿಲರಾಯ ಕೊಲಿಸಿದ ಸುದ್ದಿಯು
ಹರಿಯಿತು ಭೂಲೋಕದೊಳಗೆ |
ಕುಮಾರರಾಮನ ಕೊಲಿಸಿದ ಸುದ್ದಿಯ
ಸೀಮೆಯ ರಾಯರು ಕೇಳಿ || ೩ ||

ನೆಟ್ಟನೆ ಕುಮಾರರಾಮನಳಿದ ಸುದ್ದಿ
ಕೊಟ್ಟದ ಬೇಡರು ಕೇಳಿ |
ಕಟ್ಟಿದೋಲೆಯು ವಸುಧೆಗೆ ದಿಕ್ಕುದಿಕ್ಕಿಗೆ
ಹುಟ್ಟತು ಸುದ್ದಿ ಡಿಳ್ಳಿಯಲಿ || ೪ ||

ರಾಮನಳಿದ ಸುದ್ದಿ ಆಗ ಸುರಿತಾಳ ಕೇಳಿ
ಕೋಮಲೆಯರ ಮಾತಿಗಾಗಿ |
ಈ ಮಹಿಯೊಳು ಹೊಡೆಸಿದನಂತೆ ಕಂಪಿಲ
ಪ್ರೇಮದಿ ಸುದ್ದಿ ಕೇಳಿದನು || ೫ ||

ಚಿನ್ನದ ಒರಗು ಮುಡೆಯ ನೆಮ್ಮಿ ಸುರಿತಾಳ
ತನ್ನ ಮಂತ್ರಿಯ ಕರೆಸಿದನು |
ಚೆನ್ನರಾಮನ ಕಂಪಿಲ ಕೊಲಿಸಿದ ಸುದ್ದಿ
ನಿನ್ನೆ ಹುಟ್ಟಿತು ಪುರದೊಳಗೆ || ೬ ||

ಹಮ್ಮಿನ ಮಾತನಾಡಿದನು ಸುರಿತಾಳನು
ನಿರ್ಮಿಸು ನೇಮಿ ಕಾಳಗವ || ೭ ||

ಯಾಕೆ ಈ ಮಾತ ನುಡಿಯಬಪ್ಪುದೆ ನೀನು
ಭೂಕಾಂತಗೆ [ಮರಣ]ಹುದೆ |
ಯಾಕೆಂದು ನೇಮಿ ಮುಖವ ತಿರುಹಿದನಂದು
ಲೋಕಕ್ಕೆ ಇದು ಸಟೆ ಮಾತು || ೮ ||

ಸಟೆಯೆಂದು ಮಾತ ಕೇಳುತ ಸುರಿತಾಳನು
ಘಟ್ಟಿಸಿ ನುಡಿದ ಮಂತ್ರಿಯನು |
ಪಟುತರವಾದ ಖಾನರ ಹೋಗಹೇಳಿದ
ದಿಟದಿ ಕುಮ್ಮಟದುರ್ಗಕಾಗಿ || ೯ ||

ಹಣವ ಗಳಿಸಿಕೊಂಡು ವಿನಯದಿ ಎನ್ನಯ
ಮನೆಯ ಒಡವೆಯ ಹಾಳುಮಾಡಿ || ೧೦ ||

ಕದನವೆಂದರೆ ಹೋಗಲಮ್ಮೆಯೊ ನಿನ್ನಯ
ಹದನನು ನಾವ್‌ ಬಲ್ಲೆವೆನುತ |
ಒದಗಿದ ಹುಯ್ಯಲೊಳಟ್ಟಿ ಹೊಯ್ಸಿಕೊಂಡು
ಬೆದರುಂಟು ನಿನಗೆಂದು ನೇಮಿಯನು || ೧೧ ||

ಹಲವು ಮಾತುಗಳಾಡಿ ಒಡವೆಯ ನೀ ತಿಂದು
ಬಲುಜೀವನ ಬುದ್ಧಿ ನಿನಗೆ |
ಕಲಹವೆಂದರೆ ಹೋಹಲಮ್ಮೆಯೊ ಬಿಡು ನಿನ್ನ
ದಳ ಹೇಡಿತನದ ಮಾತುಗಳ || ೧೨ ||

ಭೂಪತಿ ಭೂಪಾಲ ಕೋಪವ್ಯಾತಕ ದೇವ
ಕಾಪಾಲಿ ಕೃಪೆಯುಳ್ಳವನು |
ಭೂಪ ಕಂಪಿಲನ ಕುಮಾರರಾಮನಳಿದರೆ
ಆ ಪ್ರಜ್ಞೆ ಪರಿವಾರನೆಲ್ಲ || ೧೩ ||

ಕರೆಸು ಚರರ ಕಳುಹಿಸು ಕುಮ್ಮಟಕತ್ತ
ಬೆರಸಿ ಸುದ್ದಿಯ ಪತಿಕರಿಸು |
ನೆರೆಸು ವಾರುವವನು ಮನ್ನೆಯರುಗಳನು
ಬರಿಸೊ ದೇಶಾಧಿಪತಿಗಳನು || ೧೪ ||

ಅಚ್ಚಾಳು ಕುದುರೆಯ ಪಯಣವ ಮಾಡಿಸೊ
ಒಳ್ಳೆಯ ಸುರುತಾಳನೆನಲು || ೧೫ ||

ಡಿಳ್ಳಿಯ ಅರಸು ಸುರಿತಾಳ ಕುಮ್ಮಟಕತ್ತ
ಒಳ್ಳೆಯ ಬೇಹಿನ ಚರರ |
ನಿಲ್ಲದೆ ಕಳುಹಲವರು ಬಂದು ಪಯಣವ
ಮೆಲ್ಲನಿಳಿದರು ಗಂಗಾ ತಡಿಯ || ೧೬ ||

ಬಿಟ್ಟಲ್ಲಿ ಬಿಡದೆ ಬಂದರು ಬೇಹಿನ ಚರರು
ತಟ್ಟನೆ ಕುಮ್ಮಟಕ್ಕಾಗಿ |
ಪಟ್ಟಣಗಳ ಹೊಕ್ಕು ಸುದ್ದಿ ವಾರ್ತೆಗಳನು
ಮುಟ್ಟಿ ಕೇಳಿದರು ಅಲ್ಲಲ್ಲಿ || ೧೭ ||

ಮನೆಮನೆ ಅಂಗಡಿ ಬೀದಿಬೀದಿಗಳಲ್ಲಿ
ಜನ ಬಹುಜನರು ಇದ್ದಲ್ಲಿ |
ತನುಜ ರಾಮುಗ ಸತ್ತನೆಂಬ ವಾರ್ತೆಗಳನು
ಮನಮುಟ್ಟಿ ಕೇಳಿದರಾಗ || ೧೮ ||

ಯಾತಕೆ ರಾಮಯ್ಯ ಸತ್ತನೆಂದೆನುತಲಿ
ಭೀತಿಗೊಳುತಲಿ ಕೇಳಿದರು |
ಆತು ಇಡಲು ಚೆಂಡು ಅರಮನೆಯೊಳು ಬೀಳೆ
ಭೀತಿಗೊಳ್ಳುತ ಕೇಳಹೋದ || ೧೯ ||

ನಿಂದು ರಾಮಯ್ಯನು ಚೆಂಡು ಕೇಳಲು
ಹೋದ ಕಂದರ್ಪನ ವಿರಹದಲಿ |
ಚಂದಿರವದನೆಗೆ ಒಳಗಾಗದೆ ತಾನು
ಬಂದನು ಹೊರಯಾಕೆ ಹೊರಟು || ೨೦ ||

ಚೆಂದದಿ ರಾಮ ಹೋಗಲು ಕಂಡು ರತ್ನಾಜಿ
ನಿಂದಳು ವಿರಹತಾಪದಲಿ |
ಬಂದ ಕಂಪಿಲನೊಳು ಇಲ್ಲದೊಂದನು ಹೇಳೆ
ತಂದೆಯು ಮಗನ ಕೊಲಿಸಿದನು || ೨೧ ||

ಕೇಳಿಯೆ ಸುದ್ದಿಯನಾಗ ಊರೊಳಗೆ ಅಲ್ಲಲ್ಲಿ
ಪಾಳ್ಯಪಾಳ್ಯಗಳನು ತಿರುಗಿ |
ಕುಮ್ಮಟವನು ಬಿಟ್ಟು ತೆರಳಿದರು ಬೇಗದಿ ಚಿಕ್ಕ
ಡಿಳ್ಳಿಗೆ ಬಂದರಾಗ || ೨೨ ||

ಅಲ್ಲಿಂದ ಮುಂದಕೆ ತೆರಳಿಬಂದರು ಜೀಯ
ಡಿಳ್ಳಿಯ ಶೃಂಗಾರವನಕೆ |
ಬಲ್ಲಿದ ಚರರೋಡಿ ಬಂದರು ಆ ಕ್ಷಣ
ವಲ್ಲಭ ಸುರಿತಾಳನೆಡೆಗೆ || ೨೩ ||

…………………………………..
……….ದಿಟವಹುದೆಣದು ನುಡಿದರು |
ರಾಯ ಸುರಿತಾಳ ಕರೆಸಿದ ನೇಮಿಯನಾಗ
ದಾಯಾದಿ ಬಂದಿತು ನಮಗೆಲ್ಲವು || ೨೪ ||

ಸ್ತ್ರೀಯಳ ಮಾತಿಗೆ ಕೋಪಿಸಿದ ಕಂಪಿಲ
ಬಯಲಾಯಿತು ಕುಮ್ಮಟವು || ೨೫ ||

ಇದು ನಿಶ್ಚಯವಹುದೆನುತ ಸುರಿತಾಳನು
ಹದನ ಹೇಳಿದ ಮಂತ್ರಿಯೊಡನೆ |
ಚೆದುರ ಕುಮ್ಮಟಕೆ ನಿನ್ನ ಕುದುರೆ ಮಂದಿಯು ಸಹ
ಸದಳ ಸಹಿತ ತೆರಳೆಂದ || ೨೬ ||

ಎಂದ ಮಾತನು ಕೇಳುತ ನೇಮಿಖಾನನು
ವಂದನೆಯನು ಮಾಡಿಕೊಂಡ |
ಬಂಧಿಸಿ ನಾಡ ಸೆರೆಯ ಪಿಡಿತಹೆನೆಂದು
ನಿಂದು ಪಾಚ್ಛಾವುಗಡ್ಡಬಿದ್ದ || ೨೭ ||

ಅಡ್ಡಬಿದ್ದ ನೇಮಿಯ ಕಂಡು ಸುರಿತಾಳನು
ದೊಡ್ಡ ತೇಜಿಯ ತರಿಸಿದನು || ೨೮ ||

ಮೂರು ತಿಂಗಳ ಮೇಲೆ ಅರ್ಧ ದಿವಸದೊಳು
ಧಾರುಣಿಪತಿ ಸುರಿತಾಳ |
ಭೋರನೆ ಕೂಚೆ ಮಾಡಿಸಿದ ಕುಮ್ಮಟಕೆಂದು
ವೀರ ನೇಮಿಯ ಕಳುಹಿದನು || ೨೯ ||

ಕಳುಹಲೊಡನೆ ಹದಿನೆಂಟು ಸಾವಿರ ಗಜ
ದಳಪತಿ ನೇಮಿಯ ಕಂಡ |
ಹೊಳೆವ ನ್ಯಾಜದ ಖಾನಖಾನರೆಲ್ಲರು ಎದ್ದು ನಡೆವುದು
ದಳ ಲಕ್ಷ ಮೊದಲಾಗಿ || ೩೦ ||

ಭೇರಿ ತಮ್ಮಟೆ ಗಿಡಿಬಿಡಿ ನಿಸಾಳ ಕೊಂಬು
ವೀರ ವಾದ್ಯದ ರಭಸದಲಿ |
ಭೂರಿ ಕಾಲಾಳು ಒಂಬತ್ತು ಲಕ್ಷವು ಸಹ
ಭೋರನೆ ಬೇಗ ತೆರಳಿದರು || ೩೧ ||

ಕರೆಕರೆ ಖಾಮಮಲುಕ ಗುಜ್ಜ ರಾಹುತರ
ಕರೆಕರೆ ಆರೆಯ ದೊರೆಯ |
ಕರೆಕರೆ ಗೌಳುಗುಜ್ಜರ ರಾಹುತರನ್ನು
ಬರೆದು ವಾಲೆಯ ಕಳುಹಿದನು || ೩೨ ||

ಲಾಳವದೇಶದ ಮರಾಳಖಾನರಿಗೆಲ್ಲ ಹೇಳಿ
ವಾಲೆಯ ಕಳುಹಿದನು ಬ |
ಹಳ ಪಂಥದ ಕುಮ್ಮಟದ ರಾಮುಗ ಸತ್ತ
ವೀಳ್ಯ ಬಂತಿತು ನಮಗೀಗ || ೩೩ ||

ಬರಹೇಳಿದೈವತ್ತುಆರು ದೇಶದರೆಲ್ಲ
ಬರಹೇಳೆ ಕನ್ನೋಜಿಯವರ |
ನೆರೆದಿತು ಸುರಿತಾಳನ ವಾಲಗಕಾಗ
ತೆರಳಿತು ಕುಮ್ಮಟಕಾಗಿ || ೩೪ ||

ಕರೆಸಿದ ಸಿಂಧುಮರಾಳದೇಶದವರ
ಕರೆಸಿದ ಮಗಧರಾಯರನು |
ಕರೆಸಿದ ಮಾಳವ ಮನ್ನೆಯರನು ಬೇಗ
ಕರೆಸಿ ವೀಳ್ಯವನಿತ್ತನಾಗ || ೩೫ ||

ದುರ್ಜಟಿಖಾನ ಬಬ್ಬಿರಖಾನ ಸೈದ್ರಲ್ಲಿ
ಜಿಜ್ಜಾಟಿ ಹರಟೆಯಖಾನ |
ಹೆಜ್ಜೆಹೆಜ್ಜೆಗೆ ಗೆಲ್ವ ಜಂಬಾರಖಾನನು
ಲುಬ್ಧಖಾನನು ಒದಗಿದರು || ೩೬ ||

ರಾರಾಜಿಖಾನನು ರಾಜೆಯಖಾನನು
ಮಾಮುದ್ದುಸಾಹೇಬಖಾನ || ೩೭ ||

ಎಂಬತ್ತುಸಾವಿರ ಕುದುರೆ ಕಟ್ಟಿಹನೊಬ್ಬ
ಡೊಂಬಿ ತುಂಬೂರನೆಂಬವನು |
ತುಂಬಿದ ಜೋಡು ಸಿಂಗಾಡಿಯ ತುರುಕ
ರು ಬಂದರು ಸುರಿತಾಳನೆಡೆಗೆ || ೩೮ ||

ಎಕಲಾಸಖಾನ ಎದ್ದೂಲಖಾನರು
ಮತ್ತೊಬ್ಬ ಮಖರಂಕಖಾನ |
ಸಕಲ ವೈರಿಗಳಿಗೆ ಶೂಲವೆಂದನಿಸುವ
ರುಕುಮಸಖಾನ ಸಹವಾಗಿ || ೩೯ ||

ಬಬಾಜಿಖಾನನುಮಬ್ದೂಲಖಾನನು
ಬಾಬಖಾನ ಮುಸಲಖಾನ ಸಾ |
ಹೇಬಖಾನನು ಸಕಲಲಿಖಾನನು
ಹೈದರಖಾನ ಮೊದಲಾಗಿ || ೪೦ ||

ನೆರೆದು ಸುರಿತಾಳರಾಯನೋಲಗದೊಳು
ಬರಹದೊಂಬತ್ತು ಲಕ್ಷ ವಾಜಿ |
ಸಾರಿಹೇಳಲು ಕೇಳುತ ಖಾನಖಾನರು
ಹೇರುಗಳ ಬಂಡಿಯ ತುಂಬಿ || ೪೧ ||

ಭೋರೆಂದು ತಿತ್ತಿಯ ಸವರಿಸಿಕೊಂಡಾಗ
ಸಾರಾಯಗಳನು ತುಂಬಿದರು |
ಸಾರಿಸಿದನು ನೇಮಿ ಪಾಳೆಯವೆಲ್ಲಕ್ಕೆ
ಭೇರಿಸನ್ನೆಯ ಮಾಡಿಸುತಲಿ || ೪೨ ||

ಕಹಳೆಗಳೊದರೆ ಪಾಳೆಯಕೆಲ್ಲ ಸಾರುತ
ನಾಳೆ ಪಯಣಗಳು ನಿಜವೆನುತ |
ವೀಳ್ಯಗಳನು ಕೊಟ್ಟು ಬೆಳಗಾಗೊ ಹೊತ್ತಿಗೆ
ಪಾಳೆವ ತೆರಳಬೇಕೆಂದ || ೪೩ ||

ಗಂಗ ಸಾಗರದ ಕೋಟಿಗೆ ಒಂದು ಸಾವಿರ
ಸಡಗನೇನ ಬಣ್ಣಿಸುವೆ || ೪೪ ||

ಆಯತವನು ಮಾಡಿ ಆಹಾರವೆಲ್ಲವ
ಜಾಜಿಕಾಯಿ ಜಾಪತ್ರೆಗಳ |
ಬೇಯಿಸಿ ರೊಟ್ಟಿ ತಿತ್ತಿಗಳನೆ ತುಂಬಿಸಿ
ಆಯತವಾಗಿ ನಿಂದಿಹರು || ೪೫ ||

ಗಕ್ಕನೆ ತುರುಕರ ದಂಡೆದ್ದು ನಡೆಯಿತು
ಚಿಕ್ಕಡಿಳ್ಳಿಯ ಪಟ್ಟಣ[ದಿ] |
ಉಕ್ಕಿತು ಕೆಂಧೂಳ ಸೂರ್ಯಮಂಡಲಕಾಗಿ
ದೊಕ್ಕನೆ ತಾಕಿ ಮುಸುಕಿತು || ೪೬ ||

ತೆಗೆದು ತೆರಳಿತು ಕುದುರೆಗಳ ಫೌಜುಗಳಲ್ಲಿ
ಒಗಮಿಗಿಲಾಗಿ ನಡೆದರು |
ಅಗಣಿತ ಹರುಷದಿ ಭಾಗೀರಥೀಯ ದಾಂಟಿ
ಸೊಗಸಿಂಸ ತೆರಳಿತು ದಂಡು || ೪೭ ||

ಹತ್ತುಸಾವಿರ ವಾಜಿ ಇತ್ತರದಲಿ ನಡೆಯೆ
ಮೊತ್ತದ ಕಾಲಾಳು ಸಹಿತ || ೪೮ ||

ಉರವಣಿಸುತ ದಂಡಿನ ಚೂಣಿ ನಡೆಯಿತು
ಮಿರುಜೆಯ ಪಟ್ಟಣಕಾಗಿ |
ಮಿರುಜೆಯ ಪಟ್ಟಣದಿಂದ ನೇಮಿಯ ದಂಡು
ಇರದೆ ಅರುಣಾವತಿಗಿಳಿದು || ೪೯ ||

ಎಂಟು ಪಯಣವನು ನಾಲ್ಕು ಪಯಣವ ಮಾಡಿ
ಒಂಟೆಯ ಹಿಂಡ ನಡೆಸಿದರು || ೫೦ ||

ಹತ್ತು ಪಯಣವನು ಐದು ಪಯಣ ಮಾಡಿ
ಒತ್ತಿ ಮುಂದಕೆ ನಡೆವಾಗ |
ಸುತ್ತಣ ಲೋಕದೊಳಗೆ ಇಹರು ಎಲ್ಲ
ಎತ್ತಣ ಮಾರಿ ಬಂತೆನುತ || ೫೧ ||

ವಿಪರೀತದ ದಂಡು ನಡೆಯಿತು ಮುಂದಕ್ಕೆ
ಅಪರಿಮಿಯದಿಂದ ತೆರಳಿತು |
ಕುಪಿತ ಮಂತ್ರಿಯ ಕರೆಸಿದ ನೇಮಿಖಾನನು
ಉಪಮಿಸೊ ಒಂದು ಶಕುನವ || ೫೨ ||

ಸಾಕು ಪಂಥವು ಮುಂದಕೆ ಇಲ್ಲಿಂದಲಿ
ಶಕುನವಿಲ್ಲದೆ ಹೋಗಬ್ಯಾಡ |
ಮಕರಂಕರೂಪ ಸುರಿತಾಳನ ಮಂತ್ರಿಯು
ಶಕುನವ ನೋಡ ಹೇಳಿದನು || ೫೩ ||

ನೂರೊಂದು ಶಾಸ್ತ್ರಿಗಳನು ಕರೆಸಿದನಾಗ
ಕಾರಣಿಕವನು ಪೇಳೆಂದ || ೫೪ ||

ಗಂಭೀರವುಳ್ಳಂಥ ಟಗರ ತರಿಸಿ ನೇಮಿ
ಸಂಭ್ರಮದಲಿ ತನ್ನ ಪೆಸರ |
ಹೆಂಬೇಡಿಯಾದ ಟಗರ ತರಸಿ ನೇಮಿ
ತುಂಬಿ ರಾಮನ ಹೆಸರಿಡಿಸಿ || ೫೫ ||

ತನ್ನಯ ಪೆಸರಿನ ಟಗರಿಗೆ ಬಂದಿತು
ಉನ್ನತ ಮುತ್ತಿನ ದಂಡೆ |
ಮನ್ನೆಯ ರಾಮನ ಪೆಸರಿನ ಟಗರಿಗೆ
ಬಣ್ಣದ ಹೂವಿನ ದಂಡೆ || ೫೬ ||

ಕಡುಗಲಿ ನೇಮಿಯ ಪೆಸರಿನ ಟಗರಿಗೆ
ಹಿಡಿಯೆ ಮುತ್ತಿನ ಸತ್ತಿಗೆಯು |
ಬಡವನು ಎಂದು ರಾಮಯ್ಯನ ಟಗರಿಗೆ
ಕೊಡೆಯ ಸತ್ತಿಗೆ ಪಿಡಿಸಿದನು || ೫೭ ||

ಬೊಬ್ಬಿಡುತಲಿ ಟಗರಿನ ಕಿವಿಯೊಳಗಾಗ
ಅಬ್ಬರಿಸುತ ಹೋಗಬಿಡಲು |
ನಿಬ್ಬರದಲಿ ಸನ್ನೆದೆಗದವು ಹಿಂದಕ್ಕೆ
ಹಬ್ಬಿಗೆಯಲ್ಲಿ ತಾಕಿದವು || ೫೮ ||

ನಾಲ್ಕು ಸನ್ನೆಗೆ ನೇಮಿಯ ಟಗರೋಡಿತು
ತಾಕಿತು ತಲೆಮುರಿವಂತೆ |
ನೂಕಿ ತಿವಿಯೆ ಗುಂಡಿಗೆಯನು ಒಡೆಹಾಯೆ
ಸಾಕೆಂದು ನೇನಿ ನಿಲ್ಲಿಸಿದ || ೫೯ ||

ಕೋಳಿಯ ಹುಂಜನ ತರಹೇಳಿ ನೇಮಿಯು
ಆಳ ಹರಿಯಬಿಡಲಾಗ |
ಊಳಿಗದವರು ತಂದಿರಿಸಲು ನಿಮಿಷಕೆ
ಕಾಳಗ ಮಾಡಹೇಳಿದನು || ೬೦ ||

ಬಲ್ಲೆಹ ಹುಂಜನ ತರಿಸಿ ನೇಮಿಯಖಾನ
ನಿಲ್ಲದೆ ಕವಳ ಹಾಕಿಸಿದ |
ಹೆಂಬೇಡಿ ಹುಂಜನ ತರಿಸಿ ನೇಮಿಯಖಾನ
ಅಲ್ಲಿ ರಾಮನ ಪೆಸರಿಡಿಸಿ || ೬೧ ||

ಹೊಸ ಸಾಣೆಉ ಹಿಡಿಸಿದ ಕತ್ತಿಯ ತನ್ನ
ಹೆಸರ ಹುಂಜಕೆ ಕಟ್ಟಿಸಿದನು |
ಮಸೆಯದ ಮೊಂಡಗತ್ತಿಯ ತಂದು ರಾಮನ
ಹೆಸರ ಹುಂಜಕೆ ಕಟ್ಟಿಸಿದನು || ೬೨ ||

ಎರಡು ಹುಂಜನ ಕಾಣದಟ್ಟಿಸಿ ಮುಖದೊಳು
ಉರವಣಿಸಿಯೆ ಹೋಗಬಿಡಲು |
ಹೊರಳಿ ತಪ್ಪಿಸಿಕೊಂಡು ರಾಮನಾಥನ ಹುಂಜ
ಕೊರಳ ಕಚ್ಚಿಯೆ ಒದೆವಾಗ || ೬೩ ||

ಒಂದುಬಾರಿಗೆ ನೇಮಿಯ ಹುಂಜನೊಳಪೊಕ್ಕು
ಸಂದು ಹರಿಯಲೊದೆವಾಗ |
ನಿಂದಿರ್ದ ಖಾನರು ನೋಡಿ ಬೆರಗಾದರು
ನೊಂದು ಮೂಗಿಗೆ ಬೆರಳಿಟ್ಟು || ೬೪ ||

ನಮ್ಮ ಹುಂಜನು ಟಗರೋಡಿತು ಜಯವಿಲ್ಲ
ನಿಮ್ಮ ಚಿತ್ತದಲಿ ಇದ್ದಂತೆ |
ಬ್ರಹ್ಮದೇವರ ಕೃಪೆ ರಾಮಗೆ ಉಂಟೆಂದು
ನಮ್ಮ ಶಾಸ್ತ್ರಕೆ ಅಳವಲ್ಲ || ೬೫ ||

ಹಿಂದಕ್ಕೆ ತಿರುಗಿಹೋದರೆ ಸುರಿತಾಳನು
ಸಂದು ಹರಿಯೆ ಹೊಯ್ಸುವನು |
ಮುಂದೇನು ಬಂದುದ ಕಾಬೆನೆನುತ ನೇಮಿ
ಬಂದನು ಮುಂದಕ್ಕೆ ತೆರಳಿ || ೬೬ ||

ತೆರಳಿತು ದಂಡು ಚತುರಂಗಬಲ ಸಹವಾಗಿ
ತೊರಗಲ್ಲು ಬಾದಾಮಿ ಬಳಿಗೆ |
ಹರಿದು ದಾಳಿಯ ಮಾಡಿ ನಾಡನೆಲ್ಲವ ಸುಟ್ಟು
ಭರದಿಂದ ದಂಡು ನಡೆಯಿತು || ೬೭ ||

ತೊರಗಲ್ಲು ಬಾದಾಮಿ ಮುಂದೆ ನೇಮಿಯ ದಂಡು
ಕರೆಸಿದ ಮನ್ನೆಯರನೆಲ್ಲ |
ಪರಿಪರಿ ವಸ್ತ್ರ ವೀಳ್ಯಗಳನೆಲ್ಲರಿಗಿತ್ತು
ಸರ್ವ ದಂಡೆಲ್ಲ ಬರುವಾಗ || ೬೮ ||

ಗಲ[ಗಲಿ] ವಿಜಯಪುರದ ನಡುವೆ ಬಂದು
ಚೆಲುವ ನೇಮಿಯು ದಂಡು ಬಿಡಿಸೆ |
ನೆಲ ಬೆಸಲಾದಂತೆ ತುರುಕ ನೇಮಿಯ ದಂಡು
ಇಳಿಯಿತು ಮೂಗಾವುದದಿ || ೬೯ ||

ನೇಮಿಯ ದಂಡಿನ ರಭಸಕ್ಕೆ ರಾಮನ
ಸೀಮೆಯೆಲ್ಲವು ಹೊಲಸೆದ್ದು || ೭೦ ||

ಕಾಡಮೊಲ್ಲೆಯ ಸೊಪ್ಪ ಓಡಿಲಿ [ಹು]ರಿತಿಂಬ
ಬೇಡನಾಯಕ ಮಕ್ಕಳೆಲ್ಲ |
ಕೂಡೆ ಕೈಯ್ಯಲಿ ನಾಯಿ ಬಡಿಕೋಲು ಸಹವಾಗಿ
ಬೇಡರು ಗೂಳೆಯ ನಡೆಯೆ || ೭೧ ||

ನೆತ್ತಿಮೇಲಣ ಮೊಟ್ಟೆಗಂಟು ಬೇಡರಿಗೆಲ್ಲ
ಹಸ್ತದ ಮೇಲಣ ಗಿಡುಗ |
ಇತ್ತರದಲಿ ಹಕ್ಕಿಯ ಗೂಡು ಬೇಡರು
ಹೊಕ್ಕು ಗೂಳೆಯದೊಳು ನಡೆಯೆ || ೭೨ ||

ಹೆಬ್ಬಲೆ ಕಿರುವಲೆ ಮೊಲವಲೆ ಕಾಲ್ವಲೆ
ಗುಬ್ಬಿಯ ಹಕ್ಕಿಯ ಬಲೆಯು |
ಸರ್ಬಮೃಗವ ಕೊಂದು ಬೇಂಟೆಯನಾಡುವ
ಕಬ್ಯಾರ ಹೂಳೆಯ ನಡೆಯೆ || ೭೩ ||

ಕುರಿಯ ಹಿಂಡುಗಳನ್ನು ತೆರಳಿಸಿಕೊಂಡಾಗ
ಮರಿಗಳಹೆಗಲಿಗೆ ಹೊತ್ತು |
ಮರುಗುವ ಹೆಂಡಿರ ಕೈಯ್ಯ ಪಿಡಿದುಕೊಂಡು ಗೊ
ಲ್ಲರ ಗೂಳೆಯ ನಡೆಯರ || ೭೪ ||

ದೆಸೆಯುಳ್ಳ ಗಟ್ಟಣಿಗೆ ಕೊಡತಿ ಹೆಗಲ ಮೇಲೆ
ಅಗಸರ ಗೂಳೆವು ನಡೆಯೆ || ೭೫ ||

ಓದುವ ಹಲಗೆ ಕಡತ ಬಳಹವುಗಳು
ವೇದದ ಪೆಟ್ಟಿಗೆ ಮುಂದೆ |
ಓದಿಸುವಣ್ಣಗಳೊಡನೆ ಹೆಮ್ಮಕ್ಕಳು
ಸಾಧಿಸಿ ಗೂಳೆವು ನಡೆಯೆ || ೭೬ ||

ಪಟ್ಟಣಸ್ವಾಮಿಯ ಕೂಡಿಕೊಂಡಾಗಲು
ಸೆಟ್ಟರ ಗೂಳೆಯ ನಡೆಯೆ || ೭೭ ||

ಅಡಿಗಲ್ಲು ತಿದಿಮುಟ್ಟು ಪಿಡಿವ ಇಕ್ಕಳ ಕೈಯ್ಯ
ಬಿಡದೆ ಕೆತ್ತುವ ಉಳಿ ಬಾಚಿಗಳು |
ಎಡದೆಕೈಲಿ ಉಳಿ ಕೊಡತಿಯು ಸಹವಾಗಿ
ಬಡಗಿ ಕುಂಬಾರು ತಾ ನಡೆಯೆ || ೭೮ ||

ಅಚ್ಚ  ಕುಂಚಿಗೆಗಳು ನಿಚ್ಚಲುಂಕೆಯ ಮಾಳ್ಪ
ಹಚ್ಚಡ ಕುಂಚಿಗೆಗಳನು |
ರಚ್ಚುಹೊರುವ ಮಕ್ಕಳನೆತ್ತಿಕೊಳುತ
ಲಿ ಜಾಡರ ಗೂಳೆವು ನಡೆಯೆ || ೭೯ ||

ಮಿಕ್ಕ ನಾನಾ ಜಾತಿಗಳು ಎಲ್ಲರು ಕೂಡಿ
ಗಕ್ಕನೆ ಗೂಳೆವು ನಡೆಯೆ |
ಮುಪ್ಪಿನ ಮುದುಕರು ಚಿಪ್ಪಿಗರೆಲ್ಲರು
ಉಪ್ಪಾರು ಗೂಳೆವು ನಡೆಯೆ || ೮೦ ||

ಕುಂಬಾರು ಬಲು ರಂಬೆ ಡೊಂಬರ ಗೂಳೆವು
ಸಂಭ್ರಮದಿಂದಲಿ ನಡೆಯೆ ಬ್ರಾಹ್ಮ |
ರು ಬಾಲ ಉಪಾಧ್ಯರು ಜೋತಿಷ್ಯರು
ನಾಯಿಂದ್ರ ಗೂಳೆವು ನಡೆಯೆ || ೮೧ ||

ಎರಳೆ ಕುಪ್ಪಳೆಯ ಕುಪ್ಪಳಿಸುತ ಬೇಡರು
ಬರುವಂಥ ಕುದುರೆಯನಿಡುತ || ೮೨ ||

ಎಡದಲಿ ಬರುವಂಥ ಕುದುರೆಯನೆಚ್ಚರೆ
ಮಡಿದು ಬಿದ್ದವು ಧರೆಯೊಳಗೆ |
ಬಿಡದೆ ರಾಹುತರನು ಬಿಚ್ಚಿ ಹಾಕುತಲಾಗ
ಅಡಿಬಿದ್ದೋಡಿದವು ವಾಜಿಗಳು || ೮೩ ||

ಬಲದಲ್ಲಿ ಬಾಹಂತ ಕುದುರೆಯನೆಚ್ಚರೆ
ಬಳೆಯ ಹೇರನು ನೆಗ್ಗಿದಂತೆ |
ಮಲ್ಲರಾವುತರನು ಮಲಗಿಸಿದರು ಮುಂದೆ
ಕಲಿ ರಾಮನ [ಗ]ಡಿಯರು || ೮೪ ||

ಎಳೆವಾಸಿ ಬಾಹಂತ ಕುದುರೆಯನೆಚ್ಚರೆ
ನೊಂದವು ಬಿಲ್ಲುಗಾಯದಲಿ |
ಮುಂದರಿಯದೆ ಬಾಹ ಕುದುರೆಯನೆಚ್ಚರೆ
ಡೊಂಬ ಲಾಗವನು ಹೊಡೆದಂತೆ || ೮೬ ||

ತಂಡತಂಡದಿ ಬಾಹ ಕುದುರೆಯನೆಚ್ಚರೆ
ದಿಂಡುರುಳಿದವು ಭಾಮಿಯಲಿ |
ಕಂಡ ನೇಮಿಯು ತನ್ನವರ ಸಂತೈಸುತ ಮು
ಕ್ಕೊಂಡು ಹೊಕ್ಕನು ರಣದೊಳಗೆ || ೮೭ ||

ತೊರಗಲ್ಲು ಬಾದಾಮಿ ಮುಂದೆದ್ದು ಹುಯ್ಯಲು
ಉರುಬಿ ಕಾಳಗವ ಮಾಡುತಲಿ |
ತರಹರಿಸದೆ ಖಾನರ ಮಡುಹುತಲಿ
ಹರಿದು ಹೊಕ್ಕನು ಕುಮ್ಮಟವ || ೮೮ ||

ನಡೆದ ಗೂಳೆಯ ನೋಯಲೀಸದೆ ಬೇಡರು
ಹೇಡಿಗೊಳ್ಳದೆ ಖಾನರು |
ಹತ್ತುಸಾವಿರ ಆಳು ಕುದುರೆಯ ಕೊಂದರು
ಉತ್ತುಮ ಕರಿಗಳೈನೂರು || ೮೯ ||

ಏಳು ತಿಂಗಳಿಗೆ ಬಂದಿತು ತುರುಕರ ದಂಡು
ದಾಳಿಮಾಡಿಯೆ ನಡೆಸುತಲಿ |
ಕೋಳಾಹಳವ ಮಾಡುತ ಬಂದು ಹೊಕ್ಕರು
ಧೂಳುಗೋಟೆಯ ಕೊಂಬೆವೆನುತ || ೯೦ ||

ಬಿಡದೆ ಬೆನ್ನಟ್ಟಿ ಕೊಲ್ಲುವ ರಾಮ ಹೋದನು
ಹುಡೆಯಗಳನು ಕಡೆಹೆನುತ |
ನಾಡೊಳು ನಗೆಗೇಡಮಾಡಿ ಕೊಲ್ಲುವೆನೆಂದು
ಆಡಿದ ನೇಮಿ ಕೋಪದಲಿ || ೯೧ ||

ಹರುಷವೇರಿಯೆ ನೇಮಿಯಖಾನ ಬೇಗದಿ
ಕೆರೆಸಿ ಭಟ್ಟರ ಕಳುಹಿದನು |
ಸರಸವು ಬೇಡ ನೇಮಿಯ ಕೂಡೆ ಕಂಪಿಲ
ಇರಿಸದೆ ಕೊಡು ಬಾದುರನ || ೯೨ ||

ಬಿಟ್ಟ ಸೂಟಿಯಲೇರಿದವೈದು ಕುದುರೆಯು
ಬಿಟ್ಟರು ಕೈವಾರಿಸುತಲಿ |
ಅಟ್ಟಳೆಗಳನೇರಿ ಕೋಟೆಯ ಪಾರುತ
ಇಟ್ಟರು ಕಾಗದಗಳನು || ೯೩ ||

ಬೆಟ್ಟವ ನಂಬಿ ಕೆಡಬೇಡ ಬಾದೂರನ
ಕೊಟ್ಟು ಸುಖ ಬಾಳೋದು ಲೇಸು |
ಹುಟ್ಟುಗೆಡಿಸಿ ಕೊಲ್ಲುವೆ ಕೊಡದಿರ್ದಡೆ
ಬೆಟ್ಟದ ಒಡೆಯ ಕಂಪಿಲನೆ || ೯೪ ||

ಇಷ್ಟು ದಿನದ ಹಾಗೆ ನೋಡಬೇಡವೊ ನೀನು
ಕೊಟ್ಟದ ರಾಮುಗನಿಲ್ಲ |
ನೆಟ್ಟನೆ ಬಾದೂರನ ಕೊಟ್ಟು ಕಪ್ಪವ ನೀನು
ನೆಟ್ಟನೆ ಕಳುಹೊ ನೇಮಿಯಗೆ || ೯೫ ||

ಮೊರೆಹೊಕ್ಕು ಖಾನನ ಕೊಡನೆಂಬ ಬಿರುದನು
ಒರಲುತಿರಲು ಕಹಳೆ ದುರ್ಗದೊಳು |
ಬರಲಿ ಅಲ್ಲಿಂದ ಪ್ರಾಣವನೊಲ್ಲದಿರ್ದರೆ
ಇರಿವೆನು ಹೆದ್ದೊರೆ ತನಕ || ೯೬ ||

ವಿಷದ ಹುಟ್ಟಿಗೆ ಮುತ್ತಿದ ನೊಣ ಬಾಳ್ಪುದೆ
ಅಸವೇನೊ [ನೀನು] ಎಮ್ಮೊಡನೆ |
ಅಸುರ ನೇಮಿಯ ಕೂಡೆ ಕಷ್ಟಬೇಡವೊ ಎಂದು
ಬೆಸಸಿ ಭಟರ ಕಳುಹಿದನು || ೯೭

ಮಂಜು ಮುಸುಕಿದರೆ ಅಂಜುವದೆ ಬೆಟ್ಟವು
ರಣಜಿಸುವುದು ಲೇಸಾಗಿ |
ಕುಂಜರದಾನೆಗೆ ಜಂಬುಕ ತಾ ಬಲ್ಲುದೆ
ಅಂಜುವುದೇಕೆ ಬರಹೇಳೊ || ೯೮ ||

ಬಂದ ಭಟರಿಗೆ ಉಡುಗೊರೆ ಕೊಟ್ಟು ಕಂಪಿಲ
ಚೆಂದಚೆಂದದ ಮನದಣಿಸಿ |
ಹಿಂದಿಟ್ಟುಕೊಂಡ ಖಾನನ ಕೊಡೆ ಹೋಗೆಂದು
ಬಂದ ಭಟರ ಕಳುಹಿದನು || ೯೯ ||

ನಿಬ್ಬರದಲ್ಲಿ ತಿರುಗಿದವೈದು ಕುದುರೆಯು
ಅಬ್ಬರ ಸುದ್ದಿಯ ಕೊಂಡು |
ಬಗ್ಗನೆ ಬಂದು ಹೇಳಿದರು ಒಡೆಯನ ಕೂಡೆ
ದಿಗ್ಗನೆ ಹೊರಟ ಕಂಪಿಲನು || ೧೦೦ ||

ತಲ್ಲಣಿಸುತ ತಳ ಕೆಳಗಾಗಿ ಪಟ್ಟಣ
ನಿಲ್ಲಲಾರದೆ ದ್ರವಗುಂದಿ |
ಅಲ್ಲಿಗಲ್ಲಿಗೆ ಮಂದಿ ನೆರೆದು ಗುಜುಗುಟ್ಟುತ
ಹಲ್ಗಿರಿದು ಬಾಯ್ಬಿಡುತಿಹರು || ೧೦೧ ||

ಬಂದ ದಂಡನು ಕಂಡು ಕಂಪಿಲರಾಯನು
ಕಂದನ ನೆನೆದು ಚಿಂತಿಸಿದ |
ಬಂದ ದುರಿತವನು ಕಾಯ್ವರಾರಿಲ್ಲವೆಂದು
ನೊಂದು ಕಂಪಿಲ ಮನದೊಳಗೆ || ೧೦೨ ||

ನೊಂದ ನೋವನು ಸಂತೈಸಿ ಆ ಕ್ಷಣದೊಳು
ಬಂದು ಕುಳಿತ ಚಾವಡಿಯೊಳಗೆ |
ಸಂದೇಹದಿಂದ ಕರೆಸಿದ ಕಂಪಿಲರಾಯ
ಚೆಂದದಿ ಮಂತ್ರಿ ಬೈಚಪನ || ೧೦೩ ||

ಚಾವಡಿಗೈದು ಕಂಪಿಲಭೂಪ ಮಂತ್ರಿಯ
ಕೋವಿದರನು ಕರೆಸಿದನು |
ಕೆಟ್ಟೆನು ನಾನು ಬಾಯಿಬಿಟ್ಟರೆ ಬರುವುದೆ
ಪಟ್ಟಣವನು ಶೃಂಗರಿಸೊ || ೧೦೪ ||

ಹೂಡೆಯು ಹುಲಿಮುಖಗಳ ನೋಡಿ ಕಂಪಿಲ
ರೂಢೀಶ ಕೊತ್ತಳಕೆಲ್ಲ |
ಹೂಡಿಸೊ ಪೆಟಲು ಬಾಣಗಳಲ್ಲಿಗಲ್ಲಿಗೆ
ನೋಡಬೇಕೆಲೊ ಅಂಜಬೇಡ || ೧೦೫

ರಕ್ಕಸ ರಣಗಲಿಯೆಂಬ ಕೊತ್ತಳಕಾಗ
ಇಕ್ಕಿಸೊ ರಣಬಲಿಗಳನು |
ದಿಕ್ಕನೆ ಹೆಬ್ಬಾಗಿಲ ಚೋರಗಂಡಿಗೆ
ಇಕ್ಕಿಸೊ ರಣಭೂತ ದಣಿಯೆ || ೧೦೬ ||

ಭಾರ್ಗವ ರಾಮನ ಕೊಲಿಸಿದೊ ಕಂಪಿಲ
ದುರ್ಗಕ್ಕೆ ಮುತ್ತಿಗೆಯ ತಂದ್ಯೊ |
ದುರ್ಗಾಧಿಪತಿ ಕಂಪಿಲ ನಿನ್ನ ಅರಸಿಯ
ಅಗ್ಗಳೆ ರತ್ನಿಯ ಕರಸೊ || ೧೦೭ ||

ಕೂಗುಮಾಡಿ ರಾಮನ ಕೊಲ್ಲ ಹೇಳಿಂದು
ಈಗ ಚಿಂತಿಸಿದರೇನಹುದು |
ನೀಗಿದೆ ಮಗನ ಕರೆಸು ರತ್ನಾಜಿಯ
ಬೇಗ ಮುತ್ತಿಗೆಯ ತೆಗೆಸೆಂದು || ೧೦೮ ||

ಒಂದೊಂದನಂದು ಭಂಗಿಸುವರೆ ಬೈಚಪ್ಪ
ತಂದೆಯ ಕಾಲದ ಹಳಬ |
ಬಂದಿತು ದುರ್ಗಕ್ಕೆ ಮುತ್ತಿಗೆ ಎಲೆ ಮಂತ್ರಿ
ಚಂದವೇನಿದಕೆ ಹೇಳೆಂದ || ೧೦೯ ||

ಧುರಧೀರ ವೀರಕಂಪಿಲ ನಿನ್ನ ಸೇನೆಯ
ಕರೆಸು ಕಗ್ಗೊಲೆಗೆಂದ ಮಂತ್ರಿ |
ಬೆರೆಸಿ ಕಾದಿಸೊ ನಿನ್ನ ಕಿರಿಯ ಹೆಂಡತಿಯನು
ಕರೆಸಿ ನೇಮಿಯ ದಂಡ ತೆಗೆಸೊ || ೧೧೦ ||

ಎಂದ ಮಾತನು ಕೇಳಿ ಕಂಪಿಲರಾಯನು
ನೊಂದನು ತನ್ನ ಮನದೊಳಗೆ ಕೊ |
ಲ್ಲೆಂದ ಮಾತಿಗೆ ಕೊಲ್ಲುವರೆ ಬೈಚಪ್ಪ
ನಿಲ್ಲಬಾರದೆ ಅರಗಳಿಗೆ || ೧೧೧ ||

ಅರಸಗೆ ಆರು ಬಾಯೆನುತಲಿ ಬೈಚಪ್ಪ
ಬೆರೆಸಿ ಹೇಳಿದನು ಕಂಪಿಲಗೆ |
ಸಲೆ ವೀಳ್ಯವನು ಕೊಟ್ಟು ಕೊಲ್ಲೆಂದು ಕಳುಹಿದೆ
ಒಲವಿಂದ ಹೇಳಿದೆಯಾಗ || ೧೧೨ ||

ಕರೆಸಿದ ಕಂಪಿಲ ತನ್ನ ಎಕ್ಕಟಿಗರ
ತರಿಸಿದ ಗಂಧ ವೀಳ್ಯವನು |
ಹರುಷದಿ ವೀಳ್ಯವ ಎಲ್ಲರು ಪಿಡಿದರು
ತೆರಹುಗೊಡದೆ ತಮತಮಗೆ || ೧೧೩ ||

ಬಂದು ವೀಳ್ಯವ ಎಲ್ಲರು ಪಿಡಿದರು ಮನ್ನೆಯರೆಲ್ಲ
ನಿಂದರು ವಾಲಗದೊಳಗೆ || ೧೧೪ ||

ಕರೆಸಿದ ಬಾದೂರಖಾನನ ಕಂಪಿಲ
ಹರುಷದಿ ವೀಳ್ಯವಿತ್ತವರ್ಗೆ |
ನೆರಹಿದ ಕಗ್ಗೊಲೆಗೆಂದು ಕಂಪಿಲರಾಯ
ಕರೆಸಿದ ತನ್ನ ಮನ್ನೆಯರ || ೧೧೫ ||

ಇಂದು ಓಡಿಸುವೆವು ತುರುಕರ ದಂಡನು
ಎಂದು ಬುದ್ದಿಯನೆಣಿಸಿದರು |
ಇಂದಿನಿರುಳೆ ಕಗ್ಗೊಲೆ ಬೀಳಬೇಕೆಂದು
ಮಂದಿಯ ಕರೆದು ಹೇಳಿದರು || ೧೧೬ ||

ಹೊಳೆವ ಖಂಡವ ಪಿಡಿದು ಬಾದೂರಖಾನನು
ಘಳಿಲನೆ ವೀಳ್ಯವ ಪಿಡಿದ |
ವೀಳ್ಯವ ಪಿಡಿದು ಬಾದೂರಖಾನ ತನ್ನೊಳು
ಏಳ್ನೂರು ಕುದುರೆ ಮಂದಿಯನು || ೧೧೭ ||

ಪಾಳೆಯದೊಳು ಪಿಡಿತಹೆನೆಂದು ಬಿರುದಿನ
ಕಾಳೆಯ ಹಿಡಿಸಿ ನಡೆದನು |
ಪಡುವಣಾದ್ರಿಯೊಳು ಇಳಿದನು ದಿವಕರ
ಉಡುಪತಿ ಉದಯದೋರಿದನು || ೧೧೮ ||

ಇಳಿದರು ಚೋರಗಂಡಿಯೊಳೆಂಟು ಸಾವಿರ
ಘಳಿಲನೆ ಬೇಡನಾಯಕರು |
ಇಳಿದಿಹ ನೇಮಿಯ ದಂಡ ಕಡಿವೆನೆಂದು
ಕಲಿಭಟರುಗಳೊದಗಿದರು || ೧೧೯ ||

ಚೋರಗಂಡಿಯೊಳಿದ್ದರು ಹೊಳಕೆ ಬಂಟರು
ಕಾಳಗತ್ತಲೆ ನಡುವಿರುಳೆ |
ವ್ಯಾಳ್ಯವಾಯಿತು ನಾವು ಕಡಿಯಬೇಕೆನುತಲಿ
ಪಾಳ್ಯಯವನು ಹೊಕ್ಕರಾಗ || ೧೨೦ ||

ಸೇರಿದರಾಗಲೆ ತುರುಕರ ಪಾಳೆವ
ವೀರರು ಕೈಯ್ಯ ಮಾಡಿದರು |
ವೀರಗಳೈವರು ಒದಗುತ ಪಾಳೆಯದೊಳು
ಸೂರೆಮಾಡಿದರರಿಬಲವ || ೧೨೧ ||

ಹಿಡಿದರು ಸಾವಿರ ಕುದುರೆ ಕಾಲಾಳನು
ಗುಡಿಯ ಬಿಟ್ಟೋಡಿ ಕಂಗೆಟ್ಟು |
ನಡೆದರು ಆನೆಯ ಕುದುರೆಯ ಕಾಣದೆ
ಕಡಿದರು [ತಮ್ಮ] ತಮ್ಮೊಳಗೆ || ೧೨೨ ||

ಕಗ್ಗೊಲೆಯನು ಬಿದ್ದು ಕಡಿದರು ತುರುಕರ
ವೆಗ್ಗಳ ವೀರ ಪರಿವಾರ |
ನುಗ್ಗೇಳ ಹೊಯ್ದು ಭೂತಗಳು ಮರಳೆ
ಸುಗ್ಗಿಯಾಯಿತು ರಣದೊಳಗೆ || ೧೨೩ ||

ಕತ್ತಲೆಯೊಳು ನೀನು ತಾನೆಂದರಿಯದೆ
ಮೊತ್ತವಾಯಿತು ಪರಿವಾರ |
ಅತ್ತಲಾ ಪರಿಯಾಯಿತು ನೇಮಿಯ ದಂಡು
ಇತ್ತ ಕಂಪಿಲನ ಮನ್ನೆಯರು || ೧೨೪ ||

ಒತ್ತಿ ಪಾಳೆದ ಮೇಲೆ ಬಿದ್ದು ಕಡಿಯೆ ರಣ
ಗತ್ತಲಾಯಿತು ಖಾನರಿಗೆ || ೧೨೫ ||

ಏಳಲೀಸದೆ ಮುಂದಲೆಗಳ ಪಿಡಿದುಕೊಂಡ
ಬೀಳಲಿರಿದು ಕೆಡಹುತಲಿ |
ತೋಳು ತೊಡೆಯ ಮೆಟ್ಟಿ ಕೊರಳನರಿದು ಬಲು
ಕೋಳಾಹಳವ ಮಾಡಿದರು || ೧೨೬ ||

ಕತ್ತಲೆಯೊಳು ಮುಂದುಗಾಣದೆ ಮಲಗಿರೆ
ಎತ್ತಿ ಶಿರಗಳನು ಚೆಂಡಾಡಿ |
ಹುತ್ತವನೇರಿ ಹುಲ್ಲನೆ ಕಚ್ಚಿ ಕಂಗೆಟ್ಟು
ಬತ್ತಲೆ ಹರಿದೋಡಿದರು || ೧೨೭ ||

ಧಾರುಣಿಪತಿಗಳೊಂದಾಗಿ ಮಾತಾಡಿ
ತಿರುಗು ಹೊಕ್ಕರು ತಮ್ಮ ಪುರವ || ೧೨೮ |

ಪಿಡಿದು ಸಾವಿರ ವಾಜಿ ಕರಿಘಟೆ ನೂರಾರು
ಪಿಡಿದರು ಕೈಸೆರೆಗಳನು |
ಪಡೆ ಸಹಿತಲಿ ಬಂದು ಹೊಕ್ಕರು ಕಂಪಿಲನವರು
ತಡೆಯದೆ ತಮ್ಮ ಪಟ್ಟಣವ || ೧೨೯ ||

ಗಿಡಿಬಿಡಿ ಕೊಳಲು ತಪ್ಪಟೆ ಕೊಂಬು ನಿಸ್ಸಾಳ
ಬಿಡದೊದರುವ ಚಿನ್ನಗಾಳೆ |
ಗಡಣದಿಂದಲಿ ಬಂದು ಕಂಪಿಲಭೂಪಗೆ
ಸಡಗರದಲಿ ಕೈಮುಗಿದು || ೧೩೦ ||

ಪಿಡಿದಾಳು ಕುದುರೆ  ಕೈಸೆರೆಯ ಕಾಲಾಳನು
ತಡೆಯದೆ ತಂದು ಒಪ್ಪಿಸಲು |
ಪೊಡವಿಪ ಕಂಪಿಲನ ಪರಿವಾರಕೆ ಕೊಟ್ಟು
ಹಿಡಿಹೊನ್ನು ಜಲ್ಲಿ ಪಟ್ಟೆಯವ || ೧೩೧ ||

ಕಗ್ಗೊಲೆಯಲ್ಲಿ ಸಿಕ್ಕಿತು ನೂರಾನೆಯು
ಒಗ್ಗಲಿ ಸಾವಿರ ಕುದುರೆ |
ಅಗ್ಗಳೆ ಬಾದೂರಖಾನ ತಂದೊಪ್ಪಿಸಲು
ದುರ್ಗಾಧಿಪತಿ ಕಂಪಿಲಗೆ || ೧೩೨ ||

ಧರೆಯ ಮಧ್ಯದಲಾಗ ಹಿರಿದು ಪಾಳೆಯಗಳು
ಪುರದ ನಾಲ್ಕು ಬಾಗಿಲಲ್ಲಿ || ೧೩೩ ||

ಲಕ್ಷ ಸಂಖ್ಯೆಯ ಮಂದಿ ಎತ್ತಿ ದುಮ್ಮಾನವ
ಲಕ್ಷದ ವರೆ[ಗೆ] ಗುಡಿಹೊಯ್ದು |
[ದಿಕ್ಕು] ದಿಕ್ಕಿಗೆ ಪಸರಿಸಿ ಪಾಳೆಯ ಮಾಡಿಬಿಡೆ
ರಕ್ಕಸ ರಾಯ[ನ] ದಂಡ || ೧೩೪ ||

ಮುತ್ತಿನ ಗುಡಿಯು ಪಚ್ಚೆದ ಗುಡಿ ಹೊಯ್ದವು
ಸುತ್ತ ಕೆಂಪಿನ ಗುಡಿ ಹೊಯ್ದು |
ಮತ್ತೆ ರತ್ನದ ಕೆಲಸ ಕಳಸಗ[ಳು] ಮರೆದವು
ಅರ್ತಿಲಿ ನೇಮಿಖಾನನಿಗೆ || ೧೩೫ ||

ಚೊಕ್ಕ ಚಿನ್ನದ ಕಳಸಗಳಿಕ್ಕಿ ಮೆರೆದವು
ದಿಕ್ಕುದಿಕ್ಕಿಗೆ ಕಣ್ಣುಗೆಡವು || ೧೩೬ ||

ಮಂದಿ ಕುದುರೆ ಕಂಡು ನೊಂದ ಕಂಪಿಲರಾಯ
ಚಿಂತಿಸಿದನು ಮನದೊಳಗೆ |
ಕಂದನಳಿದ ಕಾರಣದಿಂದ ಬಯಲಾಯ್ತು
ತಂದುಕೊಂಡೆನು ಮಾರಿಯನು || ೧೩೭ ||

ಮಗ ಸತ್ತ ಸುದ್ದಿಯು ಮಿಗಿಲಾಯಿತು ಎಂದು
ಹೊಗಲಾಯಿತು ನೇಮಿ ಬಂದು |
ನಗೆಗೇಡಾಯಿತು ಪರರಾಜರಿಗೆ ನಾವು
ದುಗುಡವಾದನು ಕಂಪಿಲನು || ೧೩೮ ||

ತುತ್ತಾದೆವು ನಾವು ತುರುಕರ ಬಾಯಿಗೆ
ಮಿತ್ತಾದಳು ನಮ್ಮ ರತ್ನಿ |
ಬಿಗಿಯಿಂದಸುತ್ತಲು ಹತ್ತಿ ಮುತ್ತಿಗೆಮಾಡಿ
ತೆಗೆವು ಬಿಟ್ಟಂತೆ ಕುಮ್ಮಟವು || ೧೩೯ ||

ದಾಳಿಯು ಮುತ್ತಿಗೆಯಾದುದ ಕಂಡು ಬೈಚಪ್ಪ
ಹೇಳಿದ ಕಂಪಿಲನೊಡನೆ |
ಹಾಳಾಯಿತು ಹೊಸಮಲೆಯು ಕುಮ್ಮಟವೆಂದು
ಹೇಳಿದ ನಿಮ್ಮೊಡನಂದೇ || ೧೪೦ ||

ಕೇಳದೆ ಹೋದೆ ಮಂತ್ರೀಶ ನಿನ್ನಯ ಮಾತ
ಹೇಳಿದೆ ನಮ್ಮೊಡನಂದೇ |
ಕಾಳಗವನು ಮಾಡಹೇಳೊ ನೀ ಬೈಚಪ್ಪ
ದಾಳಿ ಬಂದಿದೆ ದುರ್ಗಕೆಂದ || ೧೪೧ ||

ಕೃತಯುಗದಲ್ಲಿ ರೇಣುಕೆ ಪುಟ್ಟಿ ಕಾರ್ತಿಕರ
ಹತಮಾಡಿದಳು ನಿಮಿಷದಲಿ |
ಸತಿಯಾಗಿ ಪುಟ್ಟಿ ದ್ರೌಪತಿ ಪಾಂಡವರನು
ಅತಿಶಯದಿಂ ತಿರಿಗಿಸಿದಳು || ೧೪೨ ||

ಚೆನ್ನರಾಮನ ನೋಡಿ ಕನ್ನೆ ತಾ ಮನಸೋತು
ತನ್ನ ಊಳಿಗರನು ಕಳುಹಿ |
ಅನ್ಯಾಯವನು ಮಾಡಿ ಕೇಳದಿರ್ದರೆಯು
ನಿನ್ನ ಮಗನ ಕೊಲ್ಲಿಸಿದಳು || ೧೪೩ ||

ಪಾಪಿಯ ನುಡಿಗೇಳಿ ಭೂಪನ ಕೊಲ್ಲಿಸಿ
ಪಾಪನಿಂದ್ಯಕೆ ಒಳಗಾದೆ |
ಆಪತ್ತು ಬಂದಿದೆ ಕಾಯ್ವರೊಬ್ಬರ ಕಾಣೆ
ಭೂಪ ಪ್ರಾಣಕೆ ಬಂದಿತೀಗ || ೧೪೪ ||

ಕರೆಸು ನಿನ್ನರಸಿಯ ತರಿಸು ವಾಹನವೀಗ
ತೆರೆಸು ದುರ್ಗದ ಬಾಗಿಲನು || ೧೪೫ ||

ಜೋಡು ತೊಡಿಸು ಕುದುರೆಯ ಕೊಟ್ಟು ಭಲ್ಲೆವ
ನೀಡಯ್ಯ ರತ್ನಿಯ ಕೈಗೆ |
ರೂಢೀಶ ನೇಮಿಯ ಮುರಿಯಲಿರಿಸು ಎಂದು
ಆಡಿದ ಮಂತ್ರಿ ಬೈಚಪ್ಪ || ೧೪೬ ||

ಯಾಕೆ ಬೈಚಪ್ಪ ನೀ ಕಾಕು ಮಾಡಲಿಬೇಡ
ಸಾಕು ಮೂಗಿನ ಮೇಲೆ ಸುಣ್ಣ |
ಪೋಕನಾದೆನು ನಿನ್ನ ಮಾತು ಕೇಳದೆ ನಾನು
ಲೋಕಾಧಿಪತಿಯ ಕೊಲಿಸಿದೆ || ೧೪೭ ||

ಅರಗಿನ ಮೇಲೆ ಕೆಂಡಮಳೆ ಸುರಿದಂತೆ
ಕರ ನೊಂದು ನುಡಿದ ಕಂಪಿಲನು || ೧೪೮ ||

ಹಿತವೆ ಹೆಂಡತಿಯೆಂದು ಸತಿಗೆ ನೀನೊಲಿದರೆ
ಕಥೆಯ ಮಾಡಿದಳು ಕುಹಕದಲಿ |
ಸುತನು ರಾಮಯ್ಯನ ಹತವ ಮಾಡಿದರಿಂದ
ಕಥೆಯಾದೆ ಮೂರು ಲೋಕದಲಿ || ೧೪೯ ||

ರಾಮನಿಲ್ಲದೆ ನೇಮಿ ಭೂಮಿಯ ಹೊಕ್ಕನು
ಭೂಮಿಯೊಳಪ್ರತಿವೀರ |
ತಾಮಸ ಮಾಳ್ಪನೆ ದಳವ ಕಂಡರೆ ಅಂಥ
ರಾಮನೆಂದಿಗೆ ಪುಟ್ಟುವನು || ೧೫೦ ||

ಸತ್ತವರೆದ್ದು ಬಹರೇನು ಕಂಪಿಲ
ಮೃತ್ಯು ನುಂಗಿದ ತುತ್ತು ಬಹುದೆ |
ಹೆತ್ತಂಥ ಮಗನ ಕೊಲ್ಲಿಸಿದ ಅಪಕೀರ್ತಿ
ಆದೀತು ಚಂದ್ರನುಳ್ಳನಕ || ೧೫೧ ||

ಸಕ್ಕರೆ ಇದ್ದಂತೆ ಮುಕ್ಕಿದೆ ಮಣ್ಣನು
ರಕ್ಕಸಿಯಳ ಮಾತಕೇಳಿ |
ದುಃಖಿಸಿ ಅತ್ತರೆ ರಾಮನು ಬರುವನೆ
ಎತ್ತಳ ಮಾತು ಎಂದೆನುತ || ೧೫೧ ||

ಅರಸು ರಕ್ಕಸನಾದರೆ ಮಂತ್ರಿ ಹೆಬ್ಬುಲಿ
ಬೆರಸಿ ಮುರಿದು ತಿಂಬಂತೆ
ಅರಸಿ ಒಂದು ಮಾತನಾಡಲು ಮುನ್ನಂದು
ತರಿಸಿದೆ ಕೊರಳನಾಕ್ಷಣದಿ || ೧೫೩ ||

ನಾನೊಂದು ಮಾತನಾಡಿದರೆ ಕಂಪಿಲರಾಯ
ನೀನವಳಿಗೆ ಒಳಗಾದೆ |
ನಾನಾ ಅಪಕೀರ್ತಿಯ ತಾಳಲಾರದೆ ರಾಯ
ಜ್ಞಾನಿ ರಾಮಯ್ಯನ ಕೊಲ್ಲಿಸಿದೆ || ೧೫೪ ||

ಮಗನಹ ಬಲ ಬಿಡು ಬಗೆದು ಬಂಗಾರವ
ಮಿಗೆ ವೆಚ್ಚಮಾಡು ಉಡುಗೊರೆಯ |
ಬಗೆಬಗೆಯಿಂದ ರಾಹುತರ ಪರಿವಾರಕ್ಕೆ
ಸೊಗಸಿಂದ ಹಿಡಿಹೊನ್ನ ಕೊಡಿಸೊ || ೧೫೫ ||

ಅರ್ಥದಾಸೆಯ ಬಿಟ್ಟು ಕೊಟ್ಟೆಯಾದರೆ ನಿನ್ನ
ಪುತ್ರರಿಂದಲಿ ಬಂಟರುಂಟು |
ಚಿತ್ತೈಸು ಕಾದಿಸುವೆನು ರಾಯನೆನುತಲಿ
ಹತ್ತು [ಕಣ್ಣಿನೆ] ದಣಿವಂತೆ || ೧೫೬ ||

ಬೇಡ ಬೈಚಪ್ಪ ನೀ ಕಾಡದಿರೆನ್ನನು
ಆಡೆದ್ದು ಹುಲಿಯ ಮುರಿವುದೆ |
ರೂಢಿಗೊಡೆಯ ಸುರಿತಾಳನ ದಂಡಿಗೆ
ನಾಡವ[ರೆದು]ರು ಆಗುವರೆ || ೧೫೭ ||

ವಾರುಧಿ ಮೇರೆದಪ್ಪಿದ ಹಾಗೆ ದಂಡಿದೆ
ಬಾರೊ ಬೈಚಪ್ಪ ನೀ ಹೇಳೊ || ೧೫೮ ||

ಬೇಗ ಬಂಟರು ಬಂದು ಕಾಳಗಕೇಳೆಂದು
ಆಗ ಕಂಪಿಲನ ಕರೆದರು |
ಈಗ ಬಾದೂರನ ಕೊಡದಿದ್ದರೆ ನೀನು
ಬೇಗ ಕಾಳಗಕೆ ಏಳೆಂದು || ೧೫೯ ||

ಮುಂದೆ ರಾಮಯ್ಯನ ತೋರುವಲ್ಲಿಗೆ ಈಗ
ಸಂದಿತು ಪದ ಮುಂದೆ ನೋಡು || ೧೬೦ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಕದನದಿಂದಲಿ ನೇಮಿ ಕುಮ್ಮಟವ ಮುತ್ತಿದ
ಪದಗಳು ಮುಗಿಯೆ ಸಂಪೂರ್ಣ || ೧೬೧ ||

ಅಂತು ಸಂಧಿ ೨೦ಕ್ಕಂ ಪದನು ೨೧೯೬ಕ್ಕಂ ಮಂಗಳ ಮಹಾಶ್ರೀ