ಶ್ರೀ ಗಿರಿಜಾ [ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ [ಕುಂಡಲ]ಶರಣೆಂಬೆ || ೧ ||

ರಾಮನ ನೆನೆ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆನೆ ಕಂಡ್ಯಾ ತನುವೆ |
ರಾಮರಾಮಾ ಎಂಬ ನಾಮವ ನೆನೆದರೆ
ಕಾಮಿತ ಫಲವೀವ ರಾಮ || ೨ ||

ಕಂಪಿಲರಾಯ ಕೇಳಿದರೆ ಏನೆಂಬನೊ
[ಹಂ]ಪಿ ಲಿಂಗಯ್ಯ ಕಂಗೆಡುತ |
ಬೇಡವೆಂದರೆ ಕೇಳೆ ರಾಮ ಚೆಂಡಾಟವ
ಆಡಬಂದೆಯೊ ನಿಲ್ಲಗೊಡದೆ || ೩ ||

ಚೆಂಡನೇತಕೆ ಕೊಂಡಳು ತಾಯಿ ಚಿಕ್ಕಮ್ಮ
ಬಂಡಾಟದ ಮಾತು ಬೇಡ |
ಕಂಡು ಚಿಕ್ಕಮ್ಮನ ಪಾದಕ್ಕೆ ಶರಣೆಂದು
ಕೊಂಡು ನೀ ಬಾರೊ ಕಾಟಣ್ಣ || ೪ ||

ಭೀತಿಯಿಲ್ಲದೆ ಹೋಗಿ ಚಿಕ್ಕಮ್ಮನಲ್ಲಿಗೆ
ಮಾತೆ ಅಮ್ಮನ ಪಾದಕೆರಗಿ |
ಮಾತೆಯ ಕೈಯಲ್ಲಿ ಚೆಂಡನು ತಂದು ಬೇಗದಿ
ಭೀತಿಯೆಲ್ಲವ ಬಿಡಿಸುವೆನು || ೫ ||

ಒಂದು ಬಾರಿಗೆ ಹೋಗಿ ಬೇಡು ನೀ ಚೆಂಡನು
ಕೊಂಡು ಬಾ ಕಾಟಣ್ಣ ನೀನು |
ಕಂದನು ನಿಮ್ಮ ಚೆನ್ನಿಗ ರಾಮನಿಟ್ಟರೆ
ಬಂದಿತು ಕೈತಪ್ಪಿಯೆಂದು || ೬ ||

ನಿಂದು ಅಂಗಳದಲ್ಲಿ ಚೆಂಡ ನೀ ಬೇಡಣ್ಣ
ಕಂದಿದ ಮುಖ ದುಗುಡದಲಿ |
ಎಂದ ಮಾತನು ಕೇಳಿ ಮೆಲ್ಲನೆ ಕಾಟಣ್ಣ
ಬಂದನು ಚೆಂಡ ಬೇಡುವರೆ || ೭ ||

ಗಮ್ಮನೆ ಹೋಗಿ ಹೊಕ್ಕನು ಕಾಟಣ್ಣನು
ನೆಮ್ಮಿದ ಸಂಗಿಯ ಕಂಡು |
ಚಿಮ್ಮಿದ ಹಾಗೆ ಚೆಂಡಿಲ್ಲಿಗೆ ಬಂದಿತು
ಗಮ್ಮನೆ ಕೊಡು ಚೆಂಡ ಬೇಗ || ೮ ||

ನಿಮ್ಮಾಣೆ ನಮ್ಮ ಕಣ್ಣಿಗೆ ಸಂಧಿಸಲಿಲ್ಲ
ಅಮ್ಮಾಜಿ ನೋಡೆ ಕಾಟಣ್ಣನ |
ತಮ್ಮ ಮುತ್ತಿನ ಚೆಂಡು ನಮ್ಮಲ್ಲಿ ಇದೆಯೆಂದು
ನಿಮ್ಮ ಕುಮಾರ ಬಂದಿಹನೆ || ೯ ||

ಚೆಂಡು ಇಲ್ಲಿದೆಯೆಂದು ಬಂದವನಾರೆಲೊ
ಗಂಡಸಿಲ್ಲದ ಅರಮನೆಗೆ |
ಗಂಡಾಳು ನಿಮ್ಮ ಹಿರಿಯಮಗನು ಕಾಟ
ಚೆಂಡ ಬೇಡರೆ ಬಂದೆ ನಾನು || ೧೦ ||

ಯಾಕೆ ಬಂದೆಲೊ ಕಾಟ ಅರಸಿಲ್ಲದರಮನೆಗೆ
ಜೋಕೆಯೆ ನಿನಗಿದು ಗುಣವೆ |
ನೂಕೆಂದು ನೂಕಿಸೆ ಮುಖ ಖಿನ್ನನಾಗಲು
ಆಕೆ ಮಗನ ದಬ್ಬಿಸಿದಳು || ೧೧ ||

ಆಡಬಂದರೆ ನಮ್ಮ ಸತಿಯರು ನಿಮ್ಮೊಳು
ನೋಡಿರೆ ಇವನೊಡಲುರಿಯ |
ಕಾಡಬೇಡವೊ ಹೋಗು ಚೆಂಡಿಲ್ಲಿಗೆ ಬಂದಿಲ್ಲ
ನೋಡಿಕೊ ಹೋಗೊ ಇದ್ದಲ್ಲಿ || ೧೨ ||

ಪದ್ಮದವನೆ ಕೇಳು ಬಂತು ಮುತ್ತಿನ ಚೆಂಡು
ಮುಂದೆ ನೀ ತರಿಸಿ ಕೊಡಮ್ಮ |
ಕೊಂಡುಹೋದೆನು ಚೆಂಡ ನೀ ಬೇಗ ಕೊಡಿಸು ಭೂ
ಮಂಡಲದೊಡತಿ ಚಿಕ್ಕಮ್ಮ || ೧೩ ||

ಚೆಲ್ಲೆಗಂಗಳ ರಾಮನಿಟ್ಟ ಚೆಂಡು
ಎದ್ದು ನಿಮ್ಮಂಗಳಕೆ ಬಂತು || ೧೪ ||

ಶೃಂಗಾರದೋಟದೊಳಗೆ ನೋಡುವೆನೆಂದು
ಅಂಗನೆ ತೆರಳ್ದು ಅರ್ತಿಯಲಿ |
ರತ್ನಾಜಿ ಕಾಟಣ್ಣ ಸಂಗಿಯನೊಡಗೊಂಡು
ತೋಟಕೆ ಬಂದರು ಬೇಗ || ೧೫ ||

ಪಾಟಿಸಿ ಬೆಳೆದ ಪುಷ್ಪದ ಗಿಡದೊಳಗೆಲ್ಲ
ನೋಟದಿ ನೋಡಿದರಾಗ || ೧೬ ||

ಬಲ್ಲಿದ ರಾಮಯ್ಯನಿಟ್ಟ ಮುತ್ತಿನ ಚೆಂಡು
ಮಲ್ಲಿಗೆ ಗಿಡಗಳಡಿಯಲ್ಲಿ |
ಅಲ್ಲಲ್ಲಿ ಅರಸಿ ಕಾಣದೆ ಆಗ ರತ್ನಾಜಿ
ಎಲ್ಲಿ ಹೋಯಿತೋ ಚೆಂಡು ಮಗನೆ || ೧೭ ||

ಒಚ್ಚರೆಗಂಗಳ ರಾಮನಿಟ್ಟ ಚೆಂಡು
ಪಚ್ಚೆದ ಗಿಡಗಳಡಿಯಲ್ಲಿ |
ಕಂಫಿಲರಾಯನ ಮಗನಿಟ್ಟ ಮುತ್ತಿನ ಚೆಂಡು
ಸಂಪಿಗೆ ಗಿಡಗಳಡಿಯಲ್ಲಿ || ೧೮ ||

ಕೋವಿದ ರಾಮಯ್ಯನಿಟ್ಟ ಮುತ್ತಿನ ಚೆಂಡು
ಭಾವಿಯ ತಡಿಯಲ್ಲಿ ನೋಡಿ |
ಆವ ಕಡೆಗೆ ಹೋಯಿತು ಚೆಂಡು ಕಾಟಣ್ಣ
ಆವ ಬಳಿಯಲಿ ಮಾಜಿದರೊ || ೧೯ ||

ಗಂಭೀರ ರಾಮಯ್ಯನಿಟ್ಟ ಮುತ್ತಿನ ಚೆಂಡು
ನಿಂಬೆಯ ಗಿಡದ ಅಡಿಯಲ್ಲಿ || ೨೦ ||

ತಿರಿಗಿ ಬಂದಳು ಅರಮನೆಗಾಗಿ ರತ್ನಾಜಿ
ದೊರೆಯು ಕಾಟರ್ಣಣನೆಡೆಗೆ |
ಧುರಗಲಿ ರಾಮಯ್ಯನಿಟ್ಟ ಚಂಡರಸಿಯೆ
ತಿರಿಗಿ ರತ್ನಾಜಿ ಬೇಗದಲಿ || ೨೧ ||

ಬಂದ ಕಾಟರ್ಣಣಗೆ ಗಂಧ ವೀಳ್ಯವನಿತ್ತು
ಕುಂದದೆ ನುಡಿದವನೊಡನೆ |
ಕಂದ ರಾಮನ ನೋಡಬೇಕೆಂದು ರತ್ನಮ್ಮ
ಮುಂದುವರಿದು ಹೇಳಿದಳು || ೨೨ ||

ಇಮ್ಮಡಿ ರಾಮನ ಸಮನಲ್ಲವೆಲೆ ತಾಯೆ
ನಿಮ್ಮಯ ಹಿರಿಯ ಕುಮಾರ |
ತಮ್ಮ ರಾಮುಗ ಬರಲರಿಯ ಮುತ್ತಿನ ಚೆಂಡ
ಗಮ್ಮನೆ ಕೊಡಿಸು ಚಿಕ್ಕಮ್ಮ || ೨೩ ||

ಕಂದನ ನೋಡುವೆ ಬೇಗ ನೀ ಬರಹೇಳೊ
ಎಂದು ಹೇಳಿದಳು ಕಾಟನಿಗೆ |
ಚೆಂಡಿನ ನೆವದಲಾದರು ಮಗನನು ಕಂಡು
ತಂದುಕೊಡುವೆ ಸಂತೋಷದಲಿ || ೨೪ ||

ಕೊಂಡೊಯ್ಯಲಿ ತನ್ನ ಮನಬಂದ ವಸ್ತುವ
ಗಂಡುರಾಮನ ಬರಹೇಳೊ |
ತಮ್ಮ ರಾಮನು ಬರಲರಿಯ ಬುದ್ಧಿ ಸಾಲದು
ಗಮ್ಮನೆ ಚೆಂಡು ತಾರಮ್ಮ || ೨೫ ||

ಮಗ ಬಂದರಲ್ಲದೆ ಕೊಡೆಹೋಗು ಚೆಂಡನು
ನಗೆಮೊಗದವನೆ ಕಾಟಣ್ಣ |
ಜಗದೊಳು ತಾಯಿ ಮಕ್ಕಳಿಗೆ ನಾಚಿಕೆಯುಂಟೆ
ಹಗೆಯ ರಾಮನಿಗೆ ಎನ್ನ ಮನೆಯು || ೨೬ ||

ತಲೆಯು ಇದ್ದಂತೆ ಮುಂಡಕೆ ಶಾಸೆಯಿಡುವರೆ
ಲಲನೆ ಕೇಳಮ್ಮ ಚಿಕ್ಕಮ್ಮ || ೨೭ ||

ಎನ್ನಯ ಮೋಹದ ಮಗ ಬಂದರಲ್ಲದೆ
ನಿನ್ನಾಣೆ ಕೊಡೆನೊ ಕಾಟಣ್ಣ |
ರನ್ನದ ತೂಗುಮಂಚದಿ ಪೂಜೆ ಮಾಡೈತೆ
ತನ್ನನೊಯ್ಯಲಿ ಬರಹೇಳೊ || ೨೮ ||

ಸರಸವ್ಯಾತಕೆ ಮಕ್ಕಳ ಕೂಡೆ ಚಿಕ್ಕಮ್ಮ
ತರಿಸಿ ಕೊಟ್ಟೆನ್ನ ನೀ ಕಳುಹು |
ಹಿರಿಹರಿಗಿದು ಗುಣವೆ ಎಂದು ಕೇಳಲು
ತರಳೆ ನುಡಿದಳೊಂದು ಮಾತ || ೨೯ ||

ಅಕ್ಕನ ಮಗನು ಕುಮಾರ ರಾಮಯ್ಯನ
ಚಿಕ್ಕಂದು ಮೊದಲು ನಾನರಿಯೆ |
ಚಿಕ್ಕ ಕುಮಾರ ರಾಮಯ್ಯನು ಬಂದರೆ
ಮುತ್ತಿನ ಚೆಂಡ ಕೊಡುವೆನು || ೩೦ ||

ಆರ ಚೆಂಡನು ನಾನಾರಿಗೆ ಕೊಡಲಪ್ಪ
[ಸೇರದು]ದಾಯಾದ್ಯ ಜಲ್ಮ |
ತೋರ ಮುತ್ತಿನ ಚೆಂಡ ನಿನಗಿತ್ತೆನಾದರೆ
ಹೋರಾಟ ಬಹುದು ಇಬ್ಬರಿಗೆ || ೩೧ ||

ರಾಮುಗಗೇನು ನಾಯಕತನ ಬಂದುದೊ
ಪ್ರೇಮದಿ ಚೆಂಡ ಬೇಡುವರೆ |
ತಾಮಸಗಣ್ಣ ಯೌವನದ ಮದವೊ ಎಂದು
ಕೋಮಲೆ ರತ್ನಿ ಆಡಿದಳು || ೩೨ ||

ಆ [ಧೀರ] ನೇಮಿಯೊಡನೆ ರಾವನಾಥನು
ಕಾದಿ ಗೆಲಿದೆನೆಂಬ ಗರ್ವ |
ಮೇದುನಿಯೊಳು ತಾಯಿಮನೆಗೆ ಮಕ್ಕಳು ಬಂದು
ಭೇದವಿಲ್ಲದೆ ಬೇಡುವರೆ || ೩೩ ||

ಚಿಕ್ಕಂದು ಮೊದಲು ಎನ್ನೊಳು ನೀವು ಕೂಡುಂಡು
ಸೊಕ್ಕಲಿ ಬಹುದೆ ನೀವೀಗ |
ಚಿಕ್ಕಮ್ಮನಲ್ಲವೆ ನಿಮಗೆ ನಾ ಕಾಟಣ್ಣ
ಮಕ್ಕಳಲ್ಲವೆ ನೀವು ಎನಗೆ || ೩೪ ||

ಠಕ್ಕುತನದ ನೋವನಿಕ್ಕಿ ರತ್ನಮ್ಮನು
ಒಕ್ಕಳು ಹುಸಿಯ ಕಂಬನಿಯ |
ಚಿಕ್ಕಮ್ಮ ನಿನಗೀ ದುಃಖವೇತಕೆಯೆಂದು
ಗಕ್ಕನೆ ಪಾದಕೆರಗಿದನು || ೩೫ ||

ಎಲೆ ತಾಯೆ ನಿನ್ನ ಕಂಬನಿ ಬೀಳುವಾಗಲಿ
ತಲೆ ಬೀಳಬೇಕು ರಾಮುಗನ || ೩೬ ||

ಚೆಂಡು ಬೇಕಾದರೆ ರಾಮನ ಬರಹೇಳೊ
ಚೆಂಡ ಕೊಡುವೆನೆಂದಳವಳು |
ಎಂದ ಮಾತನು ಕೇಳಿ ಮೆಲ್ಲನೆ ಕಾಟಣ್ಣ
ಬಂದು ರಾಮಗೆ ಹೇಳಿದನು || ೩೭ ||

ಹಳೆಯ ಬಲ್ಲುಗನ ಕರೆಯಲು ಬಂದು ಬಿನೈಸಲು
ಧುರಗಲಿ ರಾನಿಂತೆಂದ |
ಮರುಳ ರತ್ನಿಯ ಮನೆಗೆ ನೀ ಹೋಗು ಬಲ್ಲುಗ
ಧುರಧೀರ ಚೆಂಡು ಬೇಡುವರೆ || ೩೮ ||

ಒಡೆಯ ರಾಮಯ್ಯ ಕಳುಹಲು ಆಗ ಬಲ್ಲುಗ
ನಡೆದನು ಚಂಡ ಬೇಡುವರೆ || ೩೯ ||

ಭರದಿಂದ ಬಂದು ಬಿನ್ನೈಸಿದ ಬಲ್ಲುಗ
ಗರುವೆ ರತ್ನಾಜಿಗಿಂತೆಂದ |
ಪರನಾರಿಸೋದರ ರಾಮನ ಚೆಂಡನು
ಸರಸಿಜಮುಖಿಯೆ ತಾರಮ್ಮ || ೪೦ ||

ರಾಮನ ಬಿರಿದ ಕೊಂಡಾಡಿದೆ ಬಲ್ಲುಗ
ಕಾಮುಕನಹುದೊ ಊಳಿಗವು |
ಸೀಮೆಯೊಳಗೆ ಆರನೊಲಿಸಿದೊ ಬಲ್ಲುಗ
ಕಾಮುಕವಿಟ್ಟವ ನುಡಿಯೆ || ೪೧ ||

ತಾಯಿಮನೆಗೆ ಬಂದು ಮಗ ಚೆಂಡ ಬೇಡಲು
ನ್ಯಾಯವೇತಕೆ ಬರಹೇಳೊ |
ಆಯುತಾಕ್ಷಿಯ ಮಾತನು ಕೇಳಿ ಬಲ್ಲುಗ
ರಾಯನಲ್ಲಿಗೆ ಬಿಜಗೈದ || ೪೨ ||

ಭಾವದಿಂದಲಿ ಹೋಗಿ ಚೆಂಡನು ಬೇಡಿದೆ
ಕೋವಿದ ಚೆನ್ನಿಗ ರಾಮ |
ನೀವು ಬಂದಲ್ಲದೆ ಕೊಡಳಂತೆ ಚೆಂಡನು
ಆವ ಹದನೊ ನಾನರಿಯೆ || ೪೩ ||

ರಾಮಯ್ಯ ಎಂದನು ವಿಧಿ ಬೆನ್ನ ಬಿಡುವುದೆ
ಮುನ್ನಿನ ಸುಕೃತದ ಫಲವ |
ಸಂಗಡವಿಲ್ಲದೆ ಅರಮನೆಗೆ ಹೋಗುವರೆ
ಶೃಂಗಾರವನು ತೆಗಿ ತಮ್ಮ || ೪೪ ||

ಎಂದ ಕಾಟಣ್ಣನ ನುಡಿಗೇಳಿ ರಾಮಯ್ಯ
ನಿಂದು ಹಾರವ ತೆಗೆದುಕೊಟ್ಟ |
ಹೆಸರುಳ್ಳ ರಾಯರಗಂಡೆನು ಎಂಬ ಬಿರುದಿನ
ಕುಸುರಿ ಪೆಂಡೆಯವನು ತೆಗೆದ || ೪೫ ||

ಭೂಮಿಯೊಳುಳ್ಳ ರಾಯರಗಂಡ
ರಾಮಯ್ಯ ತೆಗೆದನು ಕೊರಳ ಪದಕವ || ೪೬ ||

ಅಷ್ಟದಿಕ್ಕಿನ ರಾಯರಗಂಡನೆಂಬಂಥ
ಇಟ್ಟ ಬಾಪುರಿಯನು ತೆಗೆದ |
ಸುತ್ತಣ ರಾಯರಗಂಡನೆಂಬುವದೊಂದು
ಸುತ್ತಿದೆ ಚಿಮ್ಮುರಿಯನಳಿದ || ೪೭ ||

ಕನ್ನೋಜಿ ರಾಯರಗಂಡನೆಂಬುವದೊಂದು
ಹೊನ್ನುಂಗುರವ ತೆಗೆದುಕೊಟ್ಟ |
ಮನ್ನೆಯ ಮಗಧ ರಾಯರಗಂಡನೆಂಬಂಥ
ರನ್ನದ ಪದಕವ ತೆಗೆದ || ೪೮ ||

ದಂಡೆತ್ತಿ ಬರುವ ರಾಯರಗಂಡನೆಂಬುವ ಕಾಲ
ಪೆಂಡೆವ ತೆಗೆದುಕೊಟ್ಟ |
ಗಂಡುಗಲಿಯು ರಾಮ ಬಲು ಕಂಠಮಾಲೆಯ
ದಂಡೆ ಹಾರವ ತೆಗೆದುಕೊಟ್ಟ || ೪೯ ||

ರನ್ನದ ಕಡಗ ಚಿನ್ನದ ಸರಗಳ ರಾಮ
ಉನ್ನತ ನಡುವಿನುಡುದಾರ |
ಭಿನ್ನವಿಲ್ಲದೆ ರಾಮಯ್ಯ ತೆಗೆದುಕೊಟ್ಟ
ಅಣ್ಣ ಕಾಟಣ್ಣನ ಕೈಗೆ || ೫೦ ||

ಪಡುವಣ ರಾಯರಗಂಡನೆಂಬವದೊಂದು
ತೊಡರು ಪೆಂಡೆಯವನು ತೆಗೆದ |
ಗಡಿಯಂಕ ಮನ್ನೆಯರ ಗಂಡನೆಂಬುವದೊಂದು
ಕಡುಕು ಚೌಕುಳಿಯನು ತೆಗೆದ || ೫೧ ||

ಬಂಗಾಳ ರಾಯರ ಗಂಡನೆಂಬುವುದೊಂದು ಬೆರ
ಳುಂಗುರವನು ತೆಗೆದುಕೊಟ್ಟ |
ಪಿಂಗಾಳ ರಾಯರ ಗಂಡನೆಂಬುವದೊಂದು
ಅಂಗದಾಭರಣವ ಕೊಟ್ಟ  || ೫೨ ||

ಕಡೆಯವು ಕಾಲೊಳುಲಿವ ಸರಪಳಿಗಳನು
ಲೋಲ ರಾಮನು ಮಡಗಕೊಟ್ಟ |
ಚಿತ್ತಜ ಸಮರೂಪ ರಾಮಯ್ಯ ಮಂಡೆಯ
ನೊತ್ತಿ ಬಿಗಿದ ಎಣ್ಣೆಗಂಟ || ೫೩ ||

ಹೊನ್ನ ನಾಮವನು ತೆಗೆವುತ ರಾಮಯ್ಯ
ರನ್ನದ ಕಡಗವ ಕಳೆದ |
ಭಿನ್ನವಿಲ್ಲದೆ ಕಾಟಣ್ಣಗೆ ಶರಣೆಂದು
ಚಿನ್ನ ರಾಮುಗನೆಡೆಗೊಂಡ || ೪೫ ||

ಸಾಗರಗಂಭೀರ ಸಲಹೊ ಜಟ್ಟಂಗಿಯ
ನಾಗಭೂಷಣ ನಂದಿಕೇಶ || ೫೫ ||

ಪರನಾರಿಯ  ಸಹೋದರನೆಂಬ ಕಡೆಯವ
ಧರಿಸಿದ ಎಡದ ಕಾಲೊಳಗೆ |
ದೊರೆ ರಾಮಯ್ಯ ಬರುವ ಸಂಭ್ರಮವನು ಕಂಡು
ಧರ್ಮದೇವತೆ ಬೆನ್ನಬಿಡಳು || ೫೬ ||

ಬಲ್ಲಿದ ರಾಮಯ್ಯ ಬರುವಾಗ ಬಾಗಿಲ
ಗೊಲ್ಲರು ಎದ್ದು ಕೈ ಮುಗಿಯೆ |
ನಿಲ್ಲಿ ಕುರ್ಳಳಿರಿ ಎಂಬ ಸನ್ಮಾನದಲಿ ರಾಮ
ಅಲ್ಲಿ ಹೊಕ್ಕನು ಅರಮನೆಯ || ೫೭ ||

ಬಾಗಿಲೊಳಗೆ ಅಲ್ಲಿರ್ದಂತೆಕ್ಕಟಿಗರು
ಬಾಗಿ ತಾವ್‌ ಕರಗಳ ಮುಗಿಯೆ |
ನಿಲ್ಲಿರಿ ಕುಳ್ಳಿರಿ ಎನುತಲಿ ರಾಮಯ್ಯ
ಮೆಲ್ಲನೆ ಒಳೆಯಾಕೆ ಪೊಕ್ಕ || ೫೮ ||

ಚಿನ್ನಿಗ ರಾಮಯ್ಯ ಒಳಬಾಗಿಲ ಪೊಕ್ಕು
ಚಿನ್ನದುಪ್ಪರಿಗೆಗೆ ಬರಲು |
ಕನ್ನೆವೆಣ್ಣಿಗೆ ಸನ್ನೆ ಮಾಡುತ ರತ್ನಿಯು
ರನ್ನದ ಹುಡೆಯ ಸೇರಿದಳು || ೫೯ ||

ಚಿನ್ನದ ಪಂಜರದೊಳಗಿರ್ದ ಅರಗಿಳಿ
ತನ್ನ ಜಾಳಿಂದ್ರದಿ ನೋಡಿ |
ಇನ್ನಿವನಾವ ದೇಶದ ರಾಯನೆನುತಲಿ
ಚಿನ್ನ ರಾಮನ ಕೇಳಿತಾಗ || ೬೦ ||

ಬಂದ ರಾಮನ ನೋಡಿ ನುಡಿಯಿತು ಅರಗಿಳಿ
ಚಂದ್ರಲೋಕದ ಚೆನ್ನಿಗನೊ |
ಇಂದು ಕಂಪಿಲರಾಯನಿಲ್ಲದ ಅರಮನೆಗೆ
ಬಂದವನಾರೆಲೊ ಪಾಪಿ || ೬೧ ||

ಅರಸಿಲ್ಲದರಮನೆಯನು ಹೊಕ್ಕವರಾರು
ಸರಸವೆ ಕಂಪಿಲಸನೊಡನೆ |
ಅರಸಿ ನಮ್ಮಕ್ಕಗ ಕಂಡು ಹೇಳುವೆ ನಾನು
ಬೆರಸಿ ಕಟ್ಟುವೆ ಹೆಡತಲೆಯ || ೬೨ ||

ಎಂದ ಅರಗಿಳಿಯ ಮಾತನು ಕೇಳಿ ರಾಮಯ್ಯ
ನಿಂದಾಗ ಮಾತನಾಡಿದನು || ೬೩ ||

ಏನೆಲೊ ಗಿಳಿರಾಮ ಎನ್ನ ನೀ ಮರೆದೆಯಾ
ನಾನು ರಾಮನು ಎಂಬುದರಿಯಾ |
ಕಾನನದೊಳು ಕಣ್ಣುದಪ್ಪಿದಂತಾಗಿದೆ
ನೀನು ವಿಸ್ತವಾಗಿ ಹೇಳೊ || ೬೪ ||

ಹುಳಿಯೇರ ಮಾರಗೊಂಡನ ಮೇಲೆ ದಾಳಿಯ
ಗಳಿಲನೆ ನಾ ಹೋಗಿ ಅಂದು |
ಗಳುಹದೆ ನಿನ್ನ ಕಪ್ಪವ ಕೊಂಡುಬಂದವ
ಚೆಲುವ ರಾಮಯ್ಯನೆಂದರಿಯಾ || ೬೫ ||

ನಾನು ಕಂಪಿಲರಾಯನ ಕುಮಾರನು
ನಾನು ಮಾನ್ಯರ ಕೂಡಿಕೊಂಡು |
ಆನಂದ ಅರ್ತಿಲಿ ಚೆಂಡನಾಡಿದೆ ಕೇಳು
ನಾನೀಗ ಚೆನ್ನಿಗ ರಾಮ || ೬೬ ||

ಏನು ಕಾರಣ ಚೆನ್ನಿಗ ರಾಮಯ್ಯ
ನೀನು ಇಲ್ಲಿಗೆ ಬರಬಹುದೆ |
ಮಾನವಮದದಾನೆ ಮನ್ಮಥರೂಪನೆ
ಏನು ಹದನು ಹೇಳನಗೆ || ೬೭ ||

ಒತ್ತಿ ಬಲಿದು ನಾನು ಲೆಗ್ಗೆಯಿಡಲು ಮುನ್ನ
ಮತ್ತೆ ಉಪ್ಪುರಿಗೆಯ ದಾಂಟಿ |
ಇತ್ತ ಚಿಕ್ಕಮ್ಮನರಮನೆಯೊಳು ಬೀಳಲು
ಹೆತ್ತ ತಾಯನು ಕೇಳಬಂದೆ || ೬೮ ||

ನಿನ್ನ ಚೆಂಡಿನ ಮನೆ ಮಂಟೆಯಾಯಿತು ರಾಮ
ನಿನ್ನ ಜೀವಕೆ ಮೂಲಬಂತು |
ಉನ್ನತದಿಂದಲಿ ಹಿಂದಕೆ ತಿರುಗೆಂದು
ಚೆನ್ನ ರಾಮಗೆ ಹೇಳಿತಾಗ || ೬೯ ||

ಅಯ್ಯಯ್ಯೋ [ಗಿಳಿರಾಮ]ನೊಂದೆಯಾತಕೆ ಕೇಳು
ಅಯ್ಯನ ರಾಣಿ ಚಿಕ್ಕಮ್ಮ |
ಕೈಯಲ್ಲಿ ಚೆಂಡದೆ ಕೈಮುಗಿವೆನು ನಾನು
ಒಯ್ಯನೆ ಬಿನ್ನೈಸುವೆನು || ೭೦ ||

ಚೆಂಡು ಬೇಕಾದರೆ ಸಾವಿರ ಬಂದಾವು
ಗಂಡು ನಿನ್ನನು ಪೋಲ್ವರಿಲ್ಲ |
ಬಂಡು ಆಗದೆ ನೀನು ತಿರುಗು ಹಿಂದಕೆ ಎಂದು ಪ್ರ
ಚಂಡ ರಾಮಗೆ ಹೇಳಿತಾಗ || ೭೧ ||

ರತ್ನಜಿಯು ನಿನ್ನ ಮೇಲೆ ವಿರಹಂಗಳ
ಯತ್ನವ ಮಾಡಿಕೊಂಡಿಹಳೆ |
ಜತ್ನವಾಗಿದ್ದಂತೆ ಹೋಗು ನೀ ರಾಮಯ್ಯ
ಯತ್ನಕ್ಕೆ ಒಳಗಾಗಬೇಡ || ೭೨ ||

ಬಿಡು ನಿನ್ನ ಚೆಂಡನು ಪಾಪಿ ನಾ ಸಾರಿದೆ
ಕೆಡಬೇಡ ತಿರುಗೊ ರಾಮಯ್ಯ || ೭೩ ||

ಮೊನೆಗಾರನೆಂಬ ಸತ್ವದಿ ನೀನಾ ರತ್ನಿಯ
ಮನೆಯನು ಹೋಗಬೇಡ ರಾಮ |
ನಿನಗೀಗ ಪ್ರಾಣದ ನೆಲೆಗೆ ಬರುವುದಿನ್ನು
ಚಿನುಮಯನಾಣೆ ಸಾರಿದೆನೊ || ೭೪ ||

ಎಂದು ನಾ ನಿನ್ನ ಮುಖವನು ನೋಡಲಿಲ್ಲವೊ
ಇಂದು ಕಂಡೆನು ನಿನ್ನ ಮುಖವ |
ಕಂದರ್ಪರೂಪ ಅಪಕೀರ್ತಿಯು ಬರುತ್ತದೆ
ಹಿಂದಕ್ಕೆ ತಿರುಗೆಂದು ಗಿಳಿಯು || ೭೫ ||

ಎಂದ ಗಿಳಿಯ ಮಾತನು ಕೇಳಿ ರಾಮಯ್ಯ
ನೊಂದುಕೊಂಡನು ಮನದೊಳಗೆ |
ಇಂದುಧರನೆ ಜಟ್ಟಿಂಗಿ ರಾಮೇಶನೆ
ಇಂದು ಕಂಟಕವ ಪರಿಹರಿಸೊ || ೭೬ ||

ಎನ್ನ ಪಣೆಯಲಿ ಬರೆದ ಕಲ್ಪನೆಯನ್ನು
ಇನ್ನು ಮೀರುವರಳವಲ್ಲ |
ಚೆನ್ನಿಗ ರಾಮಯ್ಯ ಗಿಳಿಯ ಮಾತನು ಕೇಳಿ
ಪನ್ನಗಧರ ಗತಿಯೆನುತ || ೭೭ ||

ಬಂದುದು ಬರಲಿ ಕಂಡುದ ಕಾಂಬೆನೆನುತಲಿ
ಮುಂದಕೆ ತಾನಡಿಯಿಟ್ಟ |
ನಂದಿವಾಹನ ಗತಿಯೆನುತಲಿ ಅಲ್ಲಿಂದ
ಬಂದ ಸಂಗಾಯಿ ಇದ್ದಡೆಗೆ || ೭೮ ||

ಚಿಂತೆಮಾಡುತ ರಾಮ ಎಂತಹುದೆನುತಲಿ
ಅಂತರಿಸುತ ಬರುತಿರಲು |
ಕಾಂತೆ ರತ್ನಮ್ಮ ಹಡಪದ ಸಂಗಿಯು
ನಿಂತಿರುವದ ಕಂಡ ರಾಮ || ೭೯ ||

ಕಂಡಳಾಗಳೆ ರಾಮಯ್ಯನ ಬರವನು
ದಂಡ[ಪ್ರಣಾಮ] ತಾನು ಮಾಡಿ |
ಗಂಡುಗಲಿಯು ರಾಮ ಬಂದೆಯಾತಕೆ ಎಂದು
ದಿಂಡೆಯು ಸಂಗಿ ಕೇಳಿದಳು || ೮೦ ||

ಬಂದ ಕಾರಣವೇನೊ ಧರೆಯ ರಾಯರಗಂಡ
ಎಂದು ಕೇಳಿದಳು ಸಂಗಾಯಿ |
ಚೆಂದದಿ ಮನ್ನೆಯರು ಸಹಿತ ಚೆಂಡಾಡಿದೆ
ಬಂದಿತು ನಿಮ್ಮರಮನೆಗೆ || ೮೧ ||

ಕಳುಹಿದೆ ಚೆಂಡು ಬೇಡುವರೆ ಕಾಟಣ್ಣನ
ಕಳುಹಿದೆ ಹಳೆಯ ಬಲ್ಲುಗನ |
ಕಳುಹಿದವರ ಕೂಡೆ ಚೆಂಡು ಕೊಡದೆ ನೀವು
ಬಳಲಿಸುವದು ಗುಣವಹುದೆ || ೮೨ ||

ಅರಮನೆಯೊಳು ಚೆಂಡು ಮುಟ್ಟಲಮ್ಮೆವು ನಾವು
ಸರಸವ ನಿಮ್ಮೊಳು ನಮಗೆ |
ಗರುವೆ ರತ್ನಮ್ಮನ ಬಳಿಯಲಿ ಚೆಂಡಿದೆ
ದೊರೆಗಳ ದೇವ ನೀ ಬೇಡು || ೮೩ ||

ಎಂದ ಸಂಗಿಯ ಮಾತನು ಕೇಳಿ ರಾಮಯ್ಯ
ನೊಂದುಕೊಂಡನು ಮನದೊಳಗೆ |
ಚಂದ್ರಶೇಖರ ಜಟ್ಟಂಗಿ ರಾಮೇಶನೆ
ಬಂದ ಕಂಟಕವ ಪರಿಹರಿಸೊ || ೮೪ ||

ಬಂದಿದೆ ಕಂಟಕ ಮುಂದಕ್ಕೆ ನಡೆದರೆ
ಇಂದುಧರನೆ ಗತಿಯೆನುತ |
ಮುಂದೇನು ಬಾಹುದೊ ಕಾಬೆನೆನುತ ರಾಮ
ಬಂದನು ಚೆಂಡ ಬೇಡುವರೆ || ೮೫ ||

ಭರದಿಂದ ಬಂದು ರತ್ನಾಜಿಗೆ ರಾಮಯ್ಯ
ಕರವ ಮುಗಿದು ನಮಿಸಿದನು |
ಹರಿಯಲದೇವಿಯವೋಪಾದಿ ಚಿಕ್ಕಮ್ಮ
ಹರುಷದಿ ಚೆಂಡ ಕೊಡಮ್ಮ || ೮೬ ||

ಬಂದು ನಿಂದುದನು ಕಂಡಳು ರತ್ನಾಜಿಯು
ಚಂದ್ರನ ಪೋಲ್ವ ರಾಮುಗನ |
ಕಂದ ನೀ ಬಾರೊ ಚೆಂಡಾಡಿ ದಣಿದೆಯೊ ಎಂದು
ಮಂದಿರಕವನ ಕೆರದಳು || ೮೭ ||

ಮಾಣಿಕದಂತೆ ಹೊಳೆವ ಗದ್ದುಗೆ ಹಾಸಿ
ಪ್ರಾಣ ಬಂದಂತೆ ಹಿಗ್ಗಿದಳು |
ಜಾಣ ರಾಮುಗ ಕುಳ್ಳಿರು ಬಾರೆಂದರೆ
ಏಣಲೋಚನೆ ಒಲ್ಲೆನೆಂದ || ೮೮ ||

ಇಂದು ಚೆಂಡಿಲ್ಲದೆ ನಿಂತಿದೆ ಆಟವು
ತಂದು ಕೊಡಮ್ಮ ಚಿಕ್ಕಮ್ಮ |
ಎಂದ ಮಾತನು ಕೇಳಿ ಒಂದಾರು ಭುಜವಾಗಿ
ನಿಂದು ಮಾರ್ನುಡಿದಳು ರತ್ನಾಜಿ || ೮೯ ||

ಇತ್ತ ಕೇಳೆಲೊ ನಿಮ್ಮ ಹೆತ್ತ ತಂದೆ ಮಂಚದಿ
ಮುತ್ತಿನ ಚೆಂಡು ಮಡಗಿದೆ |
ಅದೆ ಹೋಗು ಮುತ್ತಿನ ಚೆಂಡು ಮಂಚದ ಮೇಲೆ
ಮದನಸನ್ನಿಭನೆ ರಾಮಯ್ಯ || ೯೦ ||

ಸೆಜ್ಜೆಯ ಗೃಹಕ್ಹೋಗಿ ಹೆಜ್ಜೆಯನಿಡುವಾಗ
ಹುಜ್ಜಾರಿ ಮಂಚದೊಳಿರುವ |
ವೆಜ್ಜವಿಲ್ಲದ ಮುತ್ತು ಬಿಗಿದಿಹ ಚಂಡಿಗೆ
ಸಜ್ಜನ ರಾಮ ಕೈ ತುಡುಕೆ || ೯೧ ||

ಉರವಣೆಯಲಿ ಹೋಗಲೀಸದೆ ರಾಮನ
ತರಳೆ ಹಿಡಿದಳು ಮುಂದೆಲೆಯ |
ಗರುವ ರಾಮುಗ ನಿನ್ನ ರೂಪಿಗೆ ಮನಸೋತೆ
ನೆರೆದುಳುಹೊ ಎನ್ನ ಬೇಗದಲಿ || ೯೨ ||

ಹೊಕ್ಕು ಸಮಯದೊಳು ಒಳಪೊಕ್ಕು ರಾಮನ
ಅಕ್ಕರಿಂದಲಿ ತಬ್ಬಿಕೊಂಡಳು |
ಚಿಕ್ಕಮ್ಮ ಎನ್ನ ಪಡೆದ ತಾಯೆ ನೀನು
ಇಕ್ಕಲಿ ಬಹುದೆ ಈ ಮನಸ || ೯೩ ||

ಹರಿಯಲದೇವಿಯೋಪಾದಿ ಎನುತಿರ್ದೆ
ಪರಿಹರಿಸೆನ್ನ ಪಾತಕವ |
ಸಿಕ್ಕಿದೆ ಎನ್ನಯ ಭಾಗ್ಯದ ನಿಧಿಯೆಂದು
ಅಕ್ಕರದಿಂದ ಆಡಿದಳು || ೯೪

ಅಮ್ಮಾಜಿ ನೀ ನನ್ನ ಹಿಡಿಯ ಸಲ್ಲದು ತಾಯೆ
ನಿರ್ಮಳವಾಗಿ ಪೇಳೆನಗೆ |
ಹೆಮ್ಮೆ ಬೇಡವೊ ರಾಮ ಸಿಕ್ಕಿದೆ ಬಿಡಲಾರೆ
ಕಮ್ಮಗೋಲನ ಬಾಧೆ ಘನವು || ೯೫ ||

ಹರಹರಾ ಎನುತೆರಡು ಕಿವಿ ಮುಚ್ಚಿ
ರಾಮಯ್ಯ ಪರಿಹರಿಸೆನ್ನ ಪಾತಕವ || ೯೬ ||

ಕನಸಿನೊಳಗೆ ಬಂದು ಕಾಡುತಲಿರೆ ರಾಮ
ಮನಸಿಲ್ಯಾತಕೆ ಸುಮ್ಮನಿರ್ದೆ |
ಮುನಿಸು ಸಲ್ಲದು ಮುಂದುಗೆಟ್ಟನು ವಿರಹದಿ
ಮನಸಿಜರೂಪ ನೀ ಕಾಯೋ || ೯೭ ||

ಅತಿಮಾತು ಬೇಡ ಚಿಕ್ಕಮ್ಮ ಮುಂದಲೆ ಬಿಡು
ಸುತನಲ್ಲವೆ ನಾನು ನಿನಗೆ |
ಸತಿಯಲ್ಲವೆ ನಮ್ಮ ಕಂಪಿಲರಾಯಗೆ
ಮತಿಗೆಡುವರೆ ಚಿಕ್ಕಮ್ಮ || ೯೮ ||

ಶೂಲದ ಹಬ್ಬದಿ ನಿನ್ನ ಕಂಡೆನೊ ರಾಮ
ಬಾಳುವ ಕಾಲವ ಮರೆದೆ |
ಭೂಲೋಕದೊಳಗಿಂಥ ಚೆಲುವನ ಶಿವ ತಾನು
ಲೋಲನ ಪುಟ್ಟಿಸಬಹುದೆ || ೯೯ ||

ಬಾಲೆ ಹೆಣ್ಣು ಬಯಸಿ ಬಂದು ಹಿಡಿದರೆ
ಒಲ್ಲೆನೆಂಬುವದು ಗುಣವೇನೊ |
ಚಿನ್ನವು ಕೈಸೇರಿದರೆ ಬಿಡುವವರುಂಟೆ
ಹೆಣ್ಣು ಮೇಲಿಕ್ಕಿ ಮೋಹಿಸಿದರೆ || ೧೦೦ ||

ಹೆಣ್ಣಿನಳಲು ಹೊಲ್ಲೆವೆಂಬ ರಾಮನ ಮೇಲೆ
ಮಣ್ಣ ತೂರಿದಳು ರತ್ನಾಜಿ |
ಕಣ್ಣನೀರಿಲಿ ಕೈಯ್ಯ ತೊಳೆದು ಉಂಗು[ಟ ಕಚ್ಚಿ]
ಬಣ್ಣಗುಂದಿದಳು ರತ್ನಜಿ || ೧೦೧ ||

ಚಿತ್ತ ಒಲಿದು ಒಪ್ಪತ್ತಿನ ಭೋಗವ
ನಿತ್ತು ಮನ್ನಿಸಿ ಮಾತನಾಡೊ |
ಮುತ್ತು ಮಾಣಿಕ ನವರತ್ನ ಬಂಗಾರವ
ನಿತ್ತಪೆ ಬೇಗ ಕೂಡೆನ್ನ || ೧೦೨ ||

ದೃಷ್ಟಿಸಿ ನೋಡಿ ಮಾತಿಗೆ ಮಾತನಾಡುತ
ನೆಟ್ಟಗೆ ಮುನಿಸಿದಂತಿಹಳು |
ಬಟ್ಟ ಕುಚವ ತೋರುವಳು ಎದೆಗೆಡಹೇಳಿ
ದಿಟ್ಟ ಕುಮಾರ ರಾಮಯ್ಗೆ || ೧೦೩ ||

ಹೊಸಮಲೆದುರ್ಗವ ನಿನ್ನೊಶಮಾಡುವೆ
ದೆಸೆಯ ಮನ್ನೆಯರ ಕಾಣಿಸುವೆ |
ವಿಷಮದ್ದನಿಕ್ಕಿ ಕೊಲುವೆ ಮುದಿ ಕಂಪಿಲನ
ಹೊಸಪಟ್ಟ ನಿನಗೆ [ಮಾಡಿಸುವೆ] || ೧೦೪ ||

ಭೂತದೊಳು ತಾಯಿ ಮಕ್ಕಳ ಬಯಸಿದರೆ
ಪಾತಕಕೊಳಗಾಗಬಹುದೆ |
ಮಾತಲ್ಲ ಬಿಡು ನಿನ್ನ ಮನಸಿಲಿ ನೋಡಿಕೋ
ನೀತಿಯೆ ನಿನಗಿದು ಗುಣವೆ || ೧೦೫ ||

ಕೊಂದು ಹೋಗಲೊ ರಾಮ ನಿಂದು ಸೈರಿಸಲಾರೆ
ಮುಂದುಗೆಟ್ಟೇನೊ ವಿರಹದಲಿ |
ಒಂದು ಗಳಿಗೆ ಭೋಗವನಿತ್ತು ಸೈರಿಸು
ಕಂದರ್ಪ ಸಮರೂಪ ರಾಮ || ೧೦೬ ||

ಯಾತಕೆ ಚಿಕ್ಕಮ್ಮ ಬಯಲ ಕಾತರವದು
ಕಾಕು ಆಗುವರೆ ಬಲ್ಲವರು |
ಲೋಕ ನಿಂದಿಸುವುದು ಕೇಳಿದವರು ಬೇಗ
ವಾಕರಿಸುವರು ಚಿಕ್ಕಮ್ಮ || ೧೦೭ ||

ಮರೆ ಯಾಕೆ ರಾಮ ರತ್ನಾಜಿಯ ಮಗನೆಂದು
ನೆರೆ ಹೊಯ್ಸುವೆನು ಡಂಗುರವ || ೧೦೮ ||

ಸಾಕಿದಾಕೆಯು ಹರಿಯಮ್ಮನು ತಾನೆಂದು
ಹೆತ್ತಾಕೆ ರತ್ನಮ್ಮನೆಂದು |
ಲೋಕಕರಿಕೆಯನು ಮಾಡುವೆನು ಕಂಪಿಲರಾಯ
ಭೂಕಾಂತ ಮೆಚ್ಚುವಂದದಲಿ || ೧೦೯ ||

ಬೇಡ ಬೇಡಪಕೀರ್ತಿ ನಾಡೊಳು ಮಕ್ಕಳ
ಕೂಡುವೆನೆಂದು ಬಯಸುವರೆ |
ಬೇಡ ಚೆಂಡನು ಕೊಡು ಹೋಹೆ ಮನ್ನೆಯರೆಲ್ಲ
ನೊಡುವರೆನ್ನ ದಾರಿಯನು || ೧೧೦ ||

ಚೆಂ[ಡೇನೊ ಪಾವನ] ಚೆಲುವ ರಾಮುಗ ನೀನು
ಭಂಡಾರ [ಸಿರಿ]ಯ ಭಾಗ್ಯವನು |
ಕೊಂಡೊಯ್ಯೊ ಆಶೆಯ ಬಿಡಿಸೊ ನೀ ಎನ್ನಯ
ಹೆಂಡತಿಯನು ಮಾಡಿಕೊಳ್ಳೊ || ೧೧೧ ||

ಪಾಪವ ಕೇಳಿದೆ ಜಟ್ಟಂಗಿ ರಾಮೇಶ
ಆಪತ್ತು ತರುವರೆ ಎನಗೆ |
ಈ ಪರಿ ಅಲ್ಪಬುದ್ಧಿಯನೆಣಿಸುವರೆ ತಾಯಿ
ಭೂಪಾಲ ಕಂಪಿಲನರಸಿ || ೧೧೨ ||

ಹಲವು ಮಾತೇನಮ್ಮ ಕೇಳು ಮದುವೆಯಾದ
ಲಲನೆರಲ್ಲದೆ ಪರಸತಿಯ |
ಒಲಿದು ಮೋಹಿಸಿದವನವನು ಸತ್ಪುರಷನೆ
ಹೊಲೆಯನಲ್ಲವೆ ಭೂಮಿಯೊಳಗೆ || ೧೧೩ ||

ನೀತಿಶಾಸ್ತ್ರವ ಕೇಳಬ[ದೆನೊ] ನಿನ್ನೊಳು
ಯಾತರ ಧರ್ಮದ ನಡತೆ |
ಸೋತವಳೊಡನೆ ಮನ್ನಿಸೊ ಸನ್ನಿಭಭೂಪ
ಕಾತರಿಸುತ ಹಲುಬಿದಳು || ೧೧೪ ||

ಕಥೆಯನೋದುವರೆಲ್ಲ ವ್ರತಗೆಟ್ಟು ಹೋದರು
ಪೃಥ್ವಿಯೊಳಗೆ ಬ್ರಹ್ಮ ತನ್ನ |
ಸುತೆಯ ಮದುವೆಯಾದ ಕೇಳರಿಯ ರಾಮ ನೀ
ಸತಿಗೊಳಗಾಗದವರ್ಯಾರೊ || ೧೧೫ ||

ಮಳೆಗಾಲದೊಳು ಮಲ್ಲಿಗೆ ಕಾತ ತೆರನಂತೆ
ಅಳಿವೆನೊ ಮುದಿಕಂಪಲಿಗೆ |
ಹೊಳೆವ ಮನ್ಮಥರಾಮ ಒಲಿದೆನ್ನ ಕೂಡೆಂದು
ನಳಿನಾಕ್ಷಿ ರತ್ನಿಯಾಡಿದಳು || ೧೧೬ ||

ಚಿಕ್ಕಮ್ಮ ನೀ ನನ್ನ ಪಿಡಿಯ ಸಲ್ಲದು ನಿನ್ನ
ಚಿಕ್ಕಂದು ಹುಟ್ಟಿದ ಮಗನು |
ತರ್ಕೈಸಿಕೊಂಡ ಮುಂದಲೆಯನು ಬಿಡುಯೆಂದು
ಅಕ್ಕರಿಂದಲಿ ಆಡಿದನು || ೧೧೭ ||

ಆಡಿದ ಮಾತನು ಕೇಳಿ ರತ್ನಮ್ಮನು
ತೋಡಿದಳಾಕೆ ಮಾರ್ನುಡಿಯ |
ಬೇಡ ರಾಮಯ್ಯ ಎನ್ನೊಳು ಪಂಥವ್ಯಾತಕೆ
ರೂಢಿಯೊಳಗೆ ಹೊಸಮಾತು || ೧೧೮ ||

ಇನ್ನು ನಿನ್ನನು ನಾನು ಬಿಡುವೆನೆ ರಾಮಯ್ಯ
ನನ್ನ ಹರಕೆ ಕೈಸೇರಿತು || ೧೧೯ ||

ಹರಕೆಯ ಕಳೆವೆನೊ ಮನಸಿಜ ತಾಪವ
ಹರಿವೆ ನಿನ್ನಾಣೆ ಸಟೆಯಲ್ಲ |
ನೆರೆಗಲಿ ರಾಮಯ್ಯ ಅಂಜಬೇಡವೊ ಇಂದು
ನೆರೆದೆನ್ನ ಒಲಿದು ಕೂಡುವುದು || ೧೨೦ ||

ಬೇಡುವೆ ಚಿಕ್ಕಮ್ಮ ಆಡಬಾರದು ಮಾತ
ಕೇಡುಬಹುದು ಇದರಿಂದ |
ಬೇಡ ಕೇಳ್‌ ಧರೆಯೊಳು ಮಾಡಬಾರದ ಪಾಪ
ಬೇಡವೆ ಇನ್ನು ನಾನರಿಯೆ || ೧೨೧ ||

ಬೇಡವೊ ಚೆನ್ನಿಗ ರಾಮಯ್ಯನೆನುತಲಿ
ಕಾಡಿ ಬಿಡದೆ ಮರುಗಿದಳು |
ಕೆಡಬೇಡವೆಲೆ ರಾಮ ಸತಿಯರ ಶಾಪವು
ಬಿಡದೆನ್ನ ಹೆಣ್ಣುತನದನುವ || ೧೨೨ ||

ಪಿಡಿದು ಸರಳಿಂದ ನಿನ್ನ ನಾ ಹೊಡೆದಿನ್ನು
ಬಿಡುವೆನು ರಾಮಯ್ಯ ಕೇಳು || ೧೨೩ ||

ರೂಪ ನೋಡಲಿ ಬೇಡ ಚಿಕ್ಕಮ್ಮ ನೀ ನನ್ನ
ರೂಪಾದರೇನು ನಿನ್ನ ಮಗನು |
ರೂಪ ನೋಡಿ ಎನ್ನ ಪಾಕಕ್ಕೆ ಗುರಿ [ಯಾದೆ]
ಕೋಪವ ಬಿಡು ಎನ್ನ ತಾಯೆ || ೧೨೪ ||

ಶೂಲದ ಹಬ್ಬದಿ ನಿನ್ನ ಕಂಡೆ ಮೊದಲು
ಬಾಳುವ ಕಾಲವ ಮರೆದೆ |
ಲೀಲೆಯೊಳಿಂತಪ್ಪ ಚೆಲುವನ ಬಿಡಲಾರೆ
ಪಾಲಿಸಿ ಪ್ರಾಣವನುಳುಹೊ || ೧೨೫ ||

ಏಕಾಂತದಲ್ಲಿ ಕಂಪಿಲರಾಯನಿಗೆ ಹೇಳಿ
ಅನೇಕ ರಾಜ್ಯದ ಬಿಡಸುವೆನು |
ಹೊಸಮಲೆದುರ್ಗವ ನಿನ್ನೊಶ ಮಾಡುವೆ ರಾಮ
ಹೊಸಪಟ್ಟ ನಿನಗೆ ಚೆನ್ನಿಗನೆ || ೧೨೬ ||

ನರರಿಗಿನ್ನೆಲ್ಲಿಯ ಪಾಪವು ಧರೆಯೊಳು
ಹರುಷದಿ ಎನ್ನ ಕೂಡೊಲಿದು |
ಭುವನದೊಳಗೆ ನಾ ಹೆಂಡತಿ ನೀ ಗಂಡ
ರಾಜಪಟ್ಟವನು ಕಟ್ಟಿಸುಎ || ೧೨೭ ||

ಚಿಕ್ಕಂದು ನಿನಗೆ ತೆಗೆದ ಹೆಣ್ಣು ರಾಮಯ್ಯ
ಇತ್ತ ಕಂಪಿಲ ತಂದ ತನಗೆ |
ಹೆತ್ತ ತಾಯಲ್ಲವೊ ನಿನಗೆ ನಾ ಸೋದರ
ಅತ್ತೆಯ ಮಗಳೊ ರಾಮಯ್ಯ || ೧೨೮ ||

ಅಲ್ಲವೆ ಚಿಕ್ಕಮ್ಮ ಹೆತ್ತಿಹ ತಾಯನು
ಎಲ್ಲಾದರೆ ಕೂಡೋದುಂಟೆ |
ತಂದೆ ಏರುವ ಪಲ್ಲಕ್ಕಿಯ ರಾಮಯ್ಯ
ಕಂದರು ಏರುವುದಿಲ್ಲವೆ || ೧೨೯ ||

ಕಲ್ಯಾಣದೊಳು ರಾಮನಾಯಕನ ಹೆಂಡತಿ
ಅಲ್ಲಿ ಚಿಕ್ಕಯ್ಯನ ಭ್ರಮಿಸೆ |
ಒಲ್ಲದೆ ಹೋದರೆ ತಲೆಯು ಹೋಯಿತು ರಾಮ
ಮೆಲ್ಲನೆ [ಮುಂದಣೆಚ್ಚರಿಕೆ] || ೧೩೦ ||

ಕೊಂದು ಹೋಗೆಲೊ ರಾಮ ನಿಂದು ಸೈರಿಸಲಾರೆ
ಮುಂದುಗೆಟ್ಟೆನು ವಿರಹದಲಿ |
ತಂದೆ ಬಾಸಿಗಗಟ್ಟಿ ಮದುವೆಯಾದವಳಲ್ಲ
ಕಂದನಲ್ಲವೊ ನೀನು ಎನಗೆ || ೧೩೧ ||

ಆರಿಗೆ ತಾಯಿ [ನಾ] ನೀನಾರಿಗೆ ಮಗನೆಂದು
ಕೋಮಲೆ ರತ್ನಿ ಆಡಿದಳು |
ನಾರಿ ಹರಿಯಮ್ಮನು ಪೆತ್ತಳು ನಿನ್ನನು
ಗರುವ ರಾಮುಗ ಕೇಳುವ ನೀನು || ೧೩೨ ||

ಹರಿಯಮ್ಮನೊಬ್ಬಳೆ ಪಟ್ಟದ ರಾಣಿಯು
ಗರುವ ರಾಮನೆ ನೀ ಕೇಳೊ |
ಕರೆದು ವಿಚಾರಿಸು ಸಂಗಾಯ ನೀನೆಲ್ಲ
ದೊರೆ ಇಟ್ಟ ಊಳಿಗದವಳು || ೧೩೩ ||

ಪೊಂಬಣ್ಣವನುಟ್ಟು ತಂದೆತಾಯೊಡಗೂಡಿ
ತಂದವಳಲ್ಲವೊ ನಾನು |
ಅಂದು ಕಂಪಿಲರಾಯ ಸೋಲಗೊ[ಳಿ]ಸಿ ತಂದ
ಸಂದೇಹವ್ಯಾಕೆ ರಾಮುಗನೆ || ೧೩೪ ||

ಕಡು ಪಾಪಿ ಹೋಗೆಂದು ಒದರಿ ಕಾಲಲಿ ನೂಕೆ
ಮುರಿದು ಮರಳಿ ತೊಡರುವಳು |
ಮುಡಿ ಮುಸುಗನು ಇಟ್ಟು ಕುಳಿತಳು ನೆಲದಲ್ಲಿ
ಬಿಡಿಮುತ್ತು ಹರಿದೋಲೆ ಸಡಿಲೆ || ೧೩೫ ||

ಮುಂದಲೆಯನು ಪಿಡಿದು ಬಿಡದೆ ತಾ ತೊಡರುತ
ಮುಂದೆ ಬಾಗಿಲನು ಹಾಕೆನುತ |
ನೊಂದ ರಾಮಯ್ಯನ ಶಿಖಿಯನು ಪಿಡಿದಳು
ನೊಂದು ಕೋಪದಲೊದೆವುತಲಿ || ೧೩೬ ||

ಒದವಿದ ಬಿರುಸಿಗೆ ಹದಿನಾರು ತುಂಡಾಗಿ
ಕೆದರಿತು ರತ್ನದ ಹಾರ |
ಹೆದರಿ ಹೆಮ್ಮೈಸಿ ಕಂಗಳ ಮುಚ್ಚಿ ರತ್ನಾಜಿ
ಮದನಬಾಣದ ತಾಪದಲಿ || ೧೩೭ ||

ಒಡೆದವು ಬಳೆಗಳು ಸಿಡಿದವು ಮಾಣಿಕ
ತೊಡಿಗೆ ಬೆಸುಗೆ ಬಿಚ್ಚಿದವು |
ಪುಡಿಯಾಯಿತು ರಸದಾಂಬೂಲ ಬಾಯೊಳು
ಹಿಡಿದಲೆ ತರಗಾದವಾಗ || ೧೩೮ ||

ಮುದ್ದುಮುಖದ ರಾಮಯ್ಯ ಚೆಂಡು ಸಿಗದೆಂದು
ಸದ್ದುಮಾಡದೆ ಪೋದನಾಗ |
ಗದ್ದುಗೆಯನು ತಾ ಇಳಿದು ಬಂದನು ಬೇಗ
ಸಿದ್ಧಲಿಂಗನು ಬಲ್ಲನೆನುತ || ೧೩೯ ||

ಹೊರಳಿದಳು ಬುಡುಬುಡು ಮರಳಿದಳು ರತ್ನಿಯು
ತರಹರಗೊಂಡು ಮರುಗಿದಳು |
ನೆರೆಗಲಿ ರಾಮಯ್ಯ ಬಂದನು [ಹೊ]ರಮನೆಗೆ
ತರಹರಿಸದಲೆ ಕಾತರದಿ || ೧೪೦ ||

ಇತ್ತ ಬಂದನು ಹೊರಬಾಗಿಲೈದನು ದಾಂಟಿ
ಸುತ್ತ ನೋಡಿದರಾರುಯಿಲ್ಲ |
ಚಿತ್ತಜಹರ ಬಲ್ಲನೆನುತ ರಾಮಯ್ಯನು
ಪೃಥ್ವಿಗಧಿಕ ನಡೆತಂದ || ೧೪೧ ||

ಆಟದ ಮನ್ನೆಯರನು ಕಳುಹಿದನಾಗ
ಪಾಟಕರನು ಕಳುಹಿದನು |
ಕಾಟಣ್ಣನಾಗಲೆ ಕಳುಹಿದ ರಾಮಯ್ಯ
ಕೋಟಲೆಯಲಿ ಹೊಕ್ಕನರಮನೆಯ || ೧೪೨ ||

ಪರನಾರಿಯರ ಸೋದರನೆಂಬ ಭಾಷೆಯ
ಒರೆದು ನೋಡಿದ ಉಮೆಯರಸ |
ಹಿರಿಯ ಮಗನು ರಾಮ ರಾಜ್ಯವನಾಳಲಿ
ಪರಿಹರಿಸುವೆವು ಪಾತಕವ || ೧೪೩ ||

ಕೇಳು ಪಾರ್ವತಿ ಹಿಂದಣ ಕಾಲದೊಳರ್ಜುನನ
ಮೇಲೆ ಕೋಪವ ತಾಳಿ ನೀನು |
ಹೇಳಿ ರಂಭೆಯನಟ್ಟಿ ಒಳಗುಮಾಡೆಂದವನ
ಲೀಲೆಯಿಂ ಕಳುಹಿದೆ ಛಲದಿ || ೧೪೪ ||

ಬಾಲೆ ರತ್ನಾಜಿ ರಾಮನ ಸೋಲಿಸಲಿಲ್ಲ
ಮೇಲಾದುದೆನ್ನಯ ಛಲವು |
ನೀಲಲೋಚನೆ ರಾಮ ಬಲ್ಲಿದನಹುದಯ್ಯ
ಗೆಲಿದನು ಛಲ ಬಿರಿದುಗಳ || ೧೪೫ ||

ಪರನಾರಿಯರ ಸೋದರನೆಂಬ ಬಿರಿದೀಗ
ಇರದೆ ಸಲ್ಲುವುದು ಇವಗೆನುತ |
ಒರೆದು ನೋಡಿದಳು ಪಾರ್ವತಿ ಭಲಭಲರೆಂದು
ಕರುಣ ದೃಷ್ಟಿಯಲಿ [ಒಲಿ]ದಳು || ೧೪೬ ||

ಮಕ್ಕಳಾಟಿಕೆಯಾಯ್ತು ನಮ್ಮಯ ಭಾಗ್ಯವು
ದುಃಖವಾಯಿತು ರಾಮನಿಗೆ |
ಅಕ್ಕರಿಂದಲಿ ತನ್ನ ಅರಮನೆಯನು
ಹೊಕ್ಕು ಎಕ್ಕಟಿಗರ ಕಳುಹಿದನು || ೧೪೭ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ವಿಧಿ ರತ್ನಿ ಚೆಂಡ ಮಡಗಿಕೊಂಡಿರ್ದಳು
ಪದಗಳು ಮುಗಿಯೆ ಸಂಪೂರ್ಣ || ೧೪೮ ||

ಅಂತು ಸಂಧಿ ೧೭ಕ್ಕಂ ಪದನು ೧೮೨೯ ಕ್ಕಂ ಮಂಗಳ ಮಹಾಶ್ರೀ