ಶ್ರೀ ಗಿರಿಜಾ [ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯೆನೆ
ನಾಗ [ಕುಂಡಲ] ಶರಣೆಂಬೆ || ೧ ||

ರಾಮನ ನೆನೆ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆನೆ ಕಂಡ್ಯಾ ತನುವೆ |
ರಾಮರಾಮಾ ಎಂಬ ನಾಮವ ನೆನದರೆ
ಕಾಮಿತ ಫಲವೀವ ರಾಮ || ೨ ||

ಬೊಬ್ಬೆಯಬ್ಬರ [ವು] ಹಬ್ಬಿತು ಕುಮ್ಮಟದೊಳು
ನಿಬ್ಬೆರಗಾಯ್ತು ಪಟ್ಟಣವು |
ಗಬ್ಬಿ ರಾಮನ ಚಂಡಿನಾಟವು ಜನರಿಗೆ
ಹಬ್ಬವಾಯಿತು ಕಂಗಳಿಗೆ || ೩ ||

ಹೆಣ್ಣಿಂದಲಳಿವ ಕಂಟಕವುಂಟು ರಾಮಗೆ
ಹಣ್ಣಿತು ಚಂಡಿನಾಟಗಳು |
ಕಣ್ಣ ಮುಂದೆ ಲೆಗ್ಗೆ ಹುಯ್ಯಲು ನಡೆವುತ
ಬಣ್ಣಿಸಿ ಲೋಕಕೆ ಹರಿಯೆ || ೪ ||

ಭೂತಳದೊಳಗಿಲ್ಲ ಇವರ ಚಂಡಿನಾಟವು
ಮರ್ತ್ಯದಿ ದೇವ ದಾನವರು || ೫ ||

ಭೋರನೆ ಭೋರೈಸಿ ವೀರ ವಾದ್ಯಗಳಿಂದ
ಮೀರಿತು ಕಾಲಾಳ ಬೊಬ್ಬೆ |
ಊರ ಮುಂದಣ ಬೊಬ್ಬೆ ಕೇರಿಗೆ ನಿಲ್ಲಬಾರದು
ವೀರ ರಾಮನ ಚಂಡಿನಾಟ || ೬ ||

ಎತ್ತ ನೋಡಿದರತ್ತ ಹುಯ್ಯಲಬ್ಬರಗಳು
ಸುತ್ತಲು ಉಲಿವ ಬೊಬ್ಬೆಗಳು |
ಇತ್ತ ಕೇಳಿಯೆ ಹೊಸ ಸುದ್ದಿಯ ರತ್ನಾಜಿ
ಮತ್ತೆ ಹೇಳಿದಳು ಸಂಗಿಯೊಡನೆ || ೭ ||

ಎಲ್ಲಿಯ ಸುದ್ದಿಯು ಕೇಳಿ ಬಾ ಎನುತಲಿ
ನಲ್ಲೆ ಗಿಯ ಕಳುಹಿದಳು |
ಎಲ್ಲಿಯು ನೋಡಲು ನಿಲ್ಲದಬಲ್ಲರಗಳು
ಬಲ್ಲಿದ ರಾಮನಾಟಗಳು || ೮ ||

ಹೋಗು ಸಂಗಾಯಿ ನೀ ಕೇಳಿ ಬಾ ಸುದ್ದಿಯ
ಆಗ ರತ್ನಾಜಿ ಕಳುಹಿದಳು |
ಬೇಗ ಬಂದಳು ರಾಜಬೀದಿಯ ಮಧ್ಯದಿ
ಆಗ ಕಂಡಳು ರಾಮನಾಟಗಳ || ೯ ||

ರಾಮನಾಡುವ ಚೆಂಡು ಭೂಮಿಗ್ವಿಚಿತ್ರವು
ಕಾಮುಕನಾಟವ ಕಂಡು |
ಪ್ರೇಮದಿ ಸಂಗಿ ತಿರಿಗಿ ಅರಮನೆ ಹೊಕ್ಕು
ಕೋಮಲೆ ರತ್ನಿಯೊಳುಸುರೆ || ೧೦ ||

ಸುಮ್ಮಾನದಲಿ ರಾಮನಾಥನಾಡುವ ಚೆಂಡು
ಬ್ರಾಹ್ಮಾಂಡವನು ಮುಟ್ಟುತಿರಲು |
ಉಮ್ಮಯದಿಂದಲಿ ರತ್ನಿಗೆ ಸುದ್ದಿಯ
ಗಮ್ಮನೆ ಬಂದು ಪೇಳಿದಳು || ೧೧ ||

ಅತ್ತ ರಾಮಯ್ಯ ಚೆಂಡಾಡುವ ಸುದ್ದಿಯ
ಇತ್ತ ಕೇಳಿದಳು ರತ್ನಾಜಿ |
ಚಿತ್ತಜರೂಪನ ನೋಡಬೇಕೆನುತಲಿ
ಮತ್ತೆ ಶೃಂಗಾರವಾಗುತಹಳೆ || ೧೨ ||

ಚೆನ್ನಿಗ ರಾಮನ ನೋಡಬೇಕೆನುತಲಿ
ಕನ್ನೆ ಶೃಂಗಾರವಾಗುತಹಳೆ |
ಪನ್ನೀರ ಕೈಕೊಂಡು ಚೆನ್ನಾಗಿ [ತಳೆ]ಕೊಂಡು
ಚೆನ್ನೆ ಆಯತವಾಗುತಿರ್ದು || ೧೩ ||

ಕಾಲುಂಗುರ ಪಿಲ್ಲಿ ಮೇಲೆ ಹೊನ್ನುಡಿದಾರ
ತೋಳಬಾಪುರಿ ಭುಜಕೀರ್ತಿ |
ಸಾಲಮುತ್ತಿನ ಸರ ಕೊರಳ ಚಿಂತಾಕವು
ಬಾಲೆ ರತ್ನಿಗೆ ಅಳವಡಿಸಿ || ೧೪ ||

ಬೆರಳ ಹೊನ್ನುಂಗುರ ಕೊರಳ ಮುತ್ತಿನಹಾರ
ಹರಳು ತೆತ್ತಿಸಿದ ಸೂಡಂಗ || ೧೫ ||

ಚೆನ್ನನ ಸರ ಹೊನ್ನ ಹೂವು ಮುತ್ತಿನ ಕೊಪ್ಪು
ಚೆನ್ನಾಗಿ ಕರ್ಣಕಿಕ್ಕಿದಳು |
ಬಣ್ಣಿಸಿ ಬಾಚಿ ಬೈತಲೆ ತೆಗೆದು ರತ್ನಿ
ನುಣ್ಣಿಸಿ ತುರುಬನಿಕ್ಕಿದಳು || ೧೬ ||

ಕಣ್ಣ ಕಪ್ಪನೆ ಹಚ್ಚಿ ಕಸ್ತೂರಿ ತಿಲಕವು
ಚೆನ್ನಾಗಿ ನೊಸಲಿಗಿಕ್ಕಿದಳು || ೧೭ ||

ಉಟ್ಟ ಉಡಿಗೆ ಮೇಲೆ ಕಟ್ಟಿ ಸರಪಳಿ ಗೆಜ್ಜೆ
ತೊಟ್ಟು ಮುತ್ತಿನ ರವಿಕೆಗಳ |
ಇಟ್ಟ ಮೂಗುತಿಯು ಮುತ್ತಿನ ಬೊಟ್ಟು ನೊಸಲೊಳು
ದಿಟ್ಟ ರತ್ನಾಜಿಗಳವಡಿಸಿ || ೧೮ ||

ಇಟ್ಟಳು ಕಸ್ತೂರಿ ತಿಲಕವ ನೊಸಲೊಳು
ಉಟ್ಟಳು ಪಟ್ಟಾವಳಿಯನು |
ಇಟ್ಟು ತೊಟ್ಟು ಶೃಂಗಾರವಾಗಿ ನಿಂದಳು
ಕಟ್ಟಿದ ನಿಲುವುಗನ್ನಡಿಯ || ೧೯ ||

ದೃಷ್ಟಿಸಿ ನೋಡಿ ನಗುತಲಿ ರತ್ನಾಜಿ
ಕಟ್ಟಾಳು ರಾಮಗೆಣೆಯೆಂದು || ೨೦ ||

ಧುರಗಲಿ ರಾಮನ ನೋಡಬೇಕೆನುತಲಿ
ಗರುವೆ ಸಂಗಿಯನೊಡಗೊಂಡು |
ಇರದೆ ಉಪ್ಪರಿಗೆಯ ಬಳಿಗೆ ಬಂದಳು ಬೇಗ
ದೊರೆ ರಾಮುಗನ ನೋಡುವರೆ || ೨೧ ||

ಸಂಗಿಯ ನಾಗಿಯರೊಡಗೂಡಿ ಬಂದಳು
ತುಂಗ ಕುಚಗಳ ನಲುಗುತಲಿ |
ಅಂಗಜರೂಪ ರಾಮನ ನೋಡಬೇಕೆಂದು
ಮಂಗಳವಾಗಿ ರತ್ನಮ್ಮ || ೨೨ ||

ಚಿತ್ತಜ ಜಯತು ತ್ರಿಯಂಬಕ ಜಯತೆಂದು
ಹಸ್ತಿಗಮನೆ ಕೊಂಡಾಡಿದಳು |
ಇತ್ತ ನಮ್ಮಯ ಹರಕೆಯ ಪಾಲಿಸು ಎಂದು |
ಚಿತ್ತಜ ರಾಮನ ಬರಿಸೊ || ೨೩ ||

ಚೆನ್ನಿಗ ರಾಮನ ಚೆಂಡು ಎನ್ನ ಬಳಿಗೆ
ಭಿನ್ನವಿಲ್ಲದೆ ಬೀಳಲೊಡನೆ |
ಉನ್ನತ ಊರ ಮುಂದಣ ಮಾರ್ಯಮ್ಮಗೆ
ಮುನ್ನೂರು ಕೋಣ ಹೊಯ್ಸುವೆನು || ೨೪ ||

ಮಾನವ ರಾಮನಾಡುವ ಮುತ್ತಿನ ಚೆಂಡು
ಮೌನದಲೆನಗೆ ಸೇರಿದರೆ |
ಬೋನಗುರಿಯ ಹೊಯ್ಸುವೆನು ಮನದಣಿಯಲಿ
ಮನದಣಿಯಲಿ ಹಾರುಗೋಳಿಯ ಬಿಡಿಸುವೆನು || ೨೫ ||

ಹರಿದು ಹಬ್ಬವ ಮಾಡುವೆ ಗುತ್ತಿ ಎಲ್ಲಮ್ಮಗೆ
ಹರಿಯೆ ಹೊಯ್ಸುವೆನು ಕೋಣಗಳ |
ಮೂರು ಮಾಣಿಕದ ಆರತಿಯನು ಎತ್ತುವೆ
ಲೋಲ ರಾಮಯ್ಯ ಸಿಕ್ಕಿದರೆ || ೨೬ ||

ಹಿಡಿ ಹೊನ್ನ ಕಾಣಿಕೆ ಹುಲಿಗೆ ಹೊಸೂರಮ್ಮಗೆ
ಹಿಡಿವೆನೊಪ್ಪತ್ತಿನೂಟವನು |
ಮುಡುಪಿನ ಮುಂದಲೆಯನು ಕೊಡುವೆನು ಎ
ನ್ನೊಡೆಯ ಕಂಪಿಲಸ್ವಾಮಿ ನಿನಗೆ || ೨೭ ||

ಧರೆಯೊಳಗದೃಷ್ಟಮೂರುತಿ ತಿರುಮಲದೇವ
ಧುರಗಲಿ ರಾಮ ಸಿಕ್ಕಿದರೆ |
ಸುರತದೊಳಗೆ ಒಂದು ಶಿಶು ಹುಟ್ಟಿತಾದರೆ
ತಿರುಮುಡಿಯನು ಮಾಡಿಸುವೆನು || ೨೮ ||

ಸೋಮವಾರ ದಿನ ಉಪವಾಸ ಇರುವೆನು
ಪ್ರೇಮದಿ ಹುಲಿಗೆರೆಯಸರಸ |
ಸೋಮನಾಥನ ಕರುಣದಿ ರಾಮ ಸಿಕ್ಕಿದರೆ
ಹೇಮದ ಕಳಸ ಪರ್ವತಕೆ || ೨೯ ||

ಹೊಳೆವ ಮನ್ಮಥ ರಾಮನಿಟ್ಟ ಮುತ್ತಿನ ಚೆಂಡು
ಬಳಲಿ ಬೀಳಲಿ ಅರಮನೆಗೆ |
ತಳುವದುಪ್ಪುರಿಗೆಯ ಮುಂದೆ ಬೀಳಲಿ ಹೊನ್ನ
ಕಳಸವ ಕೊಡುವೆ ದೇವರಿಗೆ || ೩೦ ||

ಅಕ್ಕನ ಮಗ ರಾಮ ಸಿಕ್ಕಿದುಂಟಾದರೆ
ಉಪ್ಪುರಿಗೆಯ ಕಟ್ಟಿಸುವೆನು
ತಪ್ಪದೆ ಎಪ್ಪತ್ತೇಳು ಕಪಿಲೆಯನು
ಒಪ್ಪದಿಂದಲಿ ಬಿಡುವೆನು || ೩೧ ||

ಕಂಪಿಲರಾಯನ ಮಗನು ರಾಮಯ್ಯನು
ಸೊಂಪಿಂದಲೆನಗೆ ಸೇರಿದರೆ |
ಹಂಪೆಯಾಳ್ದಗೆ ಹಣ್ಣುಹಂಪಲಗಳಿಂದ
ಸಂಪತ್ತಿನಲೆ [ಸೇವಿಸುವೆ] || ೩೨ ||

ವಸುಧೆಯೊಳಗೆ ರಾಮನಾಡ್ವ ಮುತ್ತಿನ ಚೆಂಡು
ಪಸರಿಸಿಕೊಳಲೆನ್ನ ಮನೆಗೆ |
ಹೊಸಪೇಟೆಯ ಜಂಬುಲಿಂಗನಾಥಗೆ ನಾನು
ವಸಂತವನಾಡುವೆನು || ೩೩ ||

ಚಿಕ್ಕ ಪ್ರಾಯದ ರಾಮ ಸಿಕ್ಕಿದನಾದರೆ
ಹೊಕ್ಕುಳಗಂಟೆ ಸರಪಳಿಯು |
ಮುಕ್ಕಣ್ಣನ ಒಡನಾಡಿ ಬಸವೇಶಗೆ
ಅಕ್ಕರಿಂ ಕೊಟ್ಟು ಕೈಮುಗಿವೆ || ೩೪ ||

ಅಂಗಜರೂಪ ರಾಮಯ್ಯನಾಡುವ ಚೆಂಡು
ಹಿಂಗದೆ ಎನಗೆ ಸೇರಿದರೆ |
ತಿಂಗಳುಪವಾಸನಿರುವೆ ಗಂಗಾಧರಗೆ
ಮಂಗಳಾರತಿಯನೆತ್ತುವೆನು || ೩೫ ||

ಒಪ್ಪುವ ರಾಮನಾಥನಾಡುವ ಚೆಂಡು
ತಪ್ಪದೆ ಎನಗೆ ಸೇರಿದರೆ |
ಕಪಿನಿಪತಿ ನಂಜುಂಡಲಿಂಗಗೆ ನಾನು
ಕರ್ಪುರದಾರತಿಯನೆತ್ತುವೆನು || ೩೬ ||

ತೆತ್ತೀಸಕೋಟಿ ದೇವರ್ಕಳೆಲ್ಲರನು
ಚಿತ್ತದೊಳಗೆ ನೆನೆನೆದು |
ಪೃಥ್ವಿಯಪತಿ ಕಂಪಿಲರಾಯ ಕೇಳ್ದರೆ
ಮತ್ತೇನ ಪೇಳ್ವೆ ರತ್ನಾಜಿ || ೩೭ ||

ನೀನು ಬೇಂಟೆಯ ಪೋಗಿ ತಡೆಯಲೊಂದು ದಿನ
ನಾನು ದೇವರ ಬೇಡಿಕೊಂ[ಡೆ] || ೩೮ ||

ಶರಭ ಶಾರ್ದೂಲ ಸಿಂಹಗಳಟ್ಟಿ ನಿನ್ನನು
ಮುರಿದು [ಕೊಲದಿರಲೆಂ]ದೆನುತ |
ಪರವತ ಮಲ್ಲಿಕಾರ್ಜುನ ಗಂಗಾಧರನಿಗೆ
ಇರದೆ ಹರಕಯನಾಂತೆ ಭೂಪ || ೩೯ ||

ಇಂತು ಪರಿಯಲಿ ನಾನು ಉಪಾಯದಿಂದಲಿ ಪೇಳಿ
ಸಂತೋಷವನು ತೋರಿಸುವೆ || ೪೦ ||

ಪಾರ್ವತಿರಮಣನೆ ಉರ್ವಿಶರೊಡೆಯನೆ
ಗೀರ್ವಾಣಮುನಿಗಳೊಂದಿತನೆ |
ಸರ್ವಜೀವರ ಸಲಹುವ ಸೂತ್ರಧಾರನೆ
ಗರ್ವ ರಾಮನ ಪಾಲಿಸೆನಗೆ || ೪೧ ||

ಧುರಗಲಿ ರಾಮನ ನೋಡಬೇಕೆನುತಲಿ ಗರ್ವೆ
ಸಂಗಿಯನೊಡಗೊಂಡು |
ಇರದೆ ಉಪ್ಪರಿಗೆಯ ಬಳಿಗೆ ಬಂದಳು ಬೇಗ
ದೊರೆ ರಾಮನ ನೋಡುವರೆ || ೪೨ ||

ಆಡಬಹುದೆ ಚೆಂಡು ಹಸುಮಕ್ಕಳಂದದಿ
ನೋಡ ಬನ್ನಿ ಆಶ್ಚರ್ಯ |
ಗಾಡಿಕಾರಿಯು ಹಡಪದ ಸಂಗಿಯು
ಕೂಡೆ ಉಪ್ಪರಿಗೆಯನೇರಿದರು || ೪೩ ||

ಹತ್ತಿದಳೇಳು ನೆಲೆಯ ಉಪ್ಪರಿಗೆಯ
ಮತ್ತೆ ಸಂಗಿಯು ಸಹವಾಗಿ |
ಇತ್ತ ಕಂಡರು ರಾಜಬೀದಿಯ ಮಧ್ಯದಿ
ಅರ್ತಿಲಿ ಚೆಂಡನಾಡುವದ || ೪೪ ||

ಒಡೆಯನಾವನು ಬಂಟನಾರೆ ಎಂದೆನುತಲಿ
ಅಡರಿವೆ ಸತ್ತಿಗೆ ಬಳಸಿ |
ಕಡುಗಲಿಗಳು ಇವರಾರೆಂದು ಅರಿಯದೆ
ನುಡಿದು ಕೇಳಿದಳು ಸಂಗಿಯನು || ೪೫ ||

ಅಗಲನ ಸತ್ತಿಗೆ ಮುಗಿಲು ಮುಟ್ಟುವ ಜಲ್ಲಿ
ದಗಲೆ ಮೈಯ್ಯವನಾರೆ ಸಂಗಿ |
ತಗಿಲು ಬುಗಿಲು ಮಾಡಿ ಕಡಿವನು ರಣದೊಳಗೆ
ನೆಗಳೂರ ತಳವಾರ ಹರಿಯ || ೪೬ ||

ವಸವಂತ ಸತ್ತಿಗೆ ನೆಳಲಲ್ಲಿ ನಿಂದಿಹ
ಹಸುರುಗುಬ್ಬಸದವನ್ಯಾರೆ |
ದೆಸೆಗೆಡಿಸಿ ತುರುಕ ಮಾರ್ಬಲವನು ಕಡಿವನು
ಹೆಸರುರ್ಳಳ ಬಾದೂರಖಾನ || ೪೭ ||

ಸೂರೆಯ ಪುಟದ ಸತ್ತಿಗೆಯ ನೆಳಲಲ್ಲಿಹ
ಮಾರ ಸನ್ನಿಭನಾರೆ ಸಂಗಿ |
ಹೂರಲ ಹುಯ್ಯಲದೊಳು ಹೊಕ್ಕು ಕಡಿವನು
ಹಾವಳಿ ಲಿಂಗ ಕಾಣಮ್ಮ || ೪೮ ||

ಮಝ ಭಾಪುರೆ ಸಂಗಿ ಹಿಡಿ ಕರ್ಪೂರ ವೀಳ್ಯ
ಗುಜ್ಜಲನಾರೆ ಮನ್ನೆಯನು |
ನಿರ್ಜರದಲಿ ಡೊಳ್ಳು ಢಮ್ಮೆಂದಲಿರಿವನು
ಗುಜ್ಜಲ ಹರಿಯ ಕಾಣಮ್ಮ || ೪೯ ||

ಹೊಂಬಣ್ಣ ಸತ್ತಿಗೆ ನೆಳಲಲ್ಲಿ ನಿಂದಿಹ
ಗಂಭೀರ ಮನ್ನೆಯನಾರೆ |
ತುಂಬಿರ್ದ ದೊರೆಗಳ ನಡುವೆ ಹೊಕ್ಕಿರಿವನು
ಕುಂಬಾರ ಕಲ್ಲ ಕಾಣಮ್ಮ || ೫೦ ||

ಚಿಕ್ಕ ಪೀತಾಂಬರ ಸತ್ತಿಗೆ ನೆರಳಡಿಯ
ಅಕ್ಕರಿಂದಿಹನಾರೆ ಸಂಗಿ |
ಲಕ್ಷ ದಂಡಿಗೆ ಒಬ್ಬ ರಹುಡೆಯ ಸುರಿತಾಳ
ಒಕ್ಕಲಿಗರ ಮುದ್ದನಮ್ಮ || ೫೧ ||

ಗುಬ್ಬಿ ಸತ್ತಿಗೆ ಮೇಲೆ ಹಬ್ಬಿದ ಜಲ್ಲಿಯು
ಗಬ್ಬಿ ಮನ್ನೆಯನಾರೆ ಸಂಗಿ |
ಸಬ್ಬ ದಂಡಿನ ಮೇಲೆ ಒಬ್ಬನೆ ಕಡಿವನು
ಕಬ್ಬುಲಿಗರ ನಾಗನಮ್ಮ || ೫೨ ||

ನೆಗಳ ಸತ್ತಿಗೆ ಮೇಲೆ ಬಿರಿದ ಹೊಗಳಿಸಿಕೊಂಬ
ಹಗಲು ಪಂಜಿನ ಮಾನ್ಯನಾರೆ |
ಮಿಗೆ ಹಾಯ್ದು ತುರುಕರ ತಗರಾಗಿ ತಾಕುವ
ಅಗಣಿತ ಜಂಗಮರ ಬಸವ || ೫೩ ||

ಬಿಳಿಯ ಸತ್ತಿಗೆ ಮೇಲೆ ಬೀಗುವ ಚೌರವು
ಇಳೆಯೊಳಗಾವ ಮನ್ನೆಯನೆ |
ಹೊಳೆಯ ಕಾವಲ ಕಾವ ಮಡಿವಾಳ ಮಾಚಯ್ಯ
ಲಲನೆ ಕೇಳಮ್ಮ ರತ್ನಾಜಿ || ೫೪ ||

ಹಸುರು ಸತ್ತಿಗೆ ಮೇಲೆ ಹೊಸ ಹೊನ್ನ ಕಳಸವು
ದೆಸೆಯುಳ್ಳವನಾವ ಮನ್ನೆಯನೆ |
ವಸುಧೆಯೊಳಗೆ ಇವ ಕುಶಲನೆನಿಸಿಕೊಂಬ
ಅಸಗೋಡ ಬಸವ ಕಾಣಮ್ಮ || ೫೫ ||

ಕಂಚಿನ ಸತ್ತಿಗೆ ಮಿಂಚುಳ್ಳ ಜಲ್ಲಿಯು
ಗೊಂಚಲ ಕಟುಕಿನವನಾರೆ |
ಮುಂಚಿನ ಹುಯ್ಯಲೊಳಗೆ ಏರಿ ಕಡಿವನು
ಕಂಚುಗಾರ ಕಾಳನಮ್ಮ || ೫೬ ||

ಚಂಡಿಕುಮಾರರ ಗಂಡನೆನಿಕೊಂಬ ಭೂ
ಮಂಡಲಪತಿ ಅವನಾರೆ |
ಲೆಂಡ ಖಾನರ ಮೇಲೆ ಎದ್ದು ಕಡಿವನವ
ಗಂಡಿಕೋಟೆಯ ಗಂಗರಾಜ || ೫೭ ||

ಮಂಡಲದೊಳಗೆ ಉದ್ದಂಡನೆನಿಸಿಕೊಂಬ
ಚಂಡವಿಕ್ರಮನಾರೆ ಸಂಗಿ |
ಪಾಂಡುರಂಗ ದೇಶದ ರಾಯನಿವನಮ್ಮ
ಮಂಡಲವದನೆ ರತ್ನಾಜಿ || ೫೮ ||

ಹಳದಿ ಸತ್ತಿಗೆ ಮೇಲೆ ಹೊಳೆವ ಹೊಂಗಳಸವು
ನಳಿನಾಕ್ಷನವನಾರೆ ಸಂಗಿ |
ಇಳೊಯೊಳಧಿಕವಾಗಿ ಕಳಸ ಭಾಂಡವನಾಳ್ವ
ತುಳವರ ಗಿರಿಯ ಕಾಣಮ್ಮ || ೫೯ ||

ಪಚ್ಚೆದ ಸತ್ತಿಗೆ ನೆರಳಡಿಯ ನಿಂದಿಹ
ಹೆಚ್ಚುಳ್ಳ ಮನ್ನೆಯನಾರೆ |
ಹುಚ್ಚುಗೆಡಿಸಿ ತುರುಕುವ ದಂಡ ಕಡಿವನು
ಮುಚ್ಚಾಲ ಹನುಮ ಕಾಣಮ್ಮ || ೬೦ ||

ಅಲಗನ ಸತ್ತಿಗೆ ನೆರಳಲ್ಲಿ ನಿಂದಿಹ
ಜಗುಲಿ ಮೈಯ್ಯವನಾರೆ ಸಂಗಿ |
ತೊರಗಲ್ಲ ಬಾದಾಮಿ ನಾಡಿನ ಅರಸನು
ಹಳದಿ ಕೇಳಮ್ಮ ರತ್ನಾಜಿ || ೬೧ ||

ಚಿಕ್ಕ ಸತ್ತಿಗೆ ಕಾಲಿಕ್ಕಿದ ಕಡೆಯವು
ರಕ್ಕಸ ಮನ್ನೆಯನಾರೆ |
ಕಕ್ಕಸ ಕುಚದ ರತ್ನಿಯೆ ಕೇಳು ಪೇಳುವೆ
ಒಕ್ಕಲ ಮಿಡಿಗೇಸಿ ನಾಗ || ೬೨ ||

ಹಳದಿಯ ಬಿರಿದು ಮಾದಳಗಾವಿ ಸತ್ತಿಗೆ
ಸೆಳೆ ನಡುವಿನ ಜಾಣನಾರೆ |
ತುಳುಹದೆ ಹುಯ್ಯಲ ಕಂಡೇರಿ ಕಡಿವನು
ಹೊಳಲಕೆರೆಯ ಸಂಗನಮ್ಮ || ೬೩ ||

ಇಂದ್ರನ ತೋಪಿನ ಸತ್ತಿಗೆ ನೆರಳಡಿ ದೇ
ವೇಂದ್ರನಂತಿಹನ್ಯಾರೆ ಸಂಗಿ |
ಬಂದ ದಂಡನು ಹಿಂದುಮುಂದಾಗಿ ಕಡಿವನು
ಚಂದ್ರಗಿರಿಯ ಸಿದ್ಧನಮ್ಮ || ೬೪ ||

ಪಂಚವರ್ಣದ ಸತ್ತಿಗೆ ನೆರಳಡಿಯಲ್ಲಿ
ಹೊಂಚಿ ನಿಂದಿಹನಾರೆ ಸಂಗಿ |
ಮುಂಚಿನ ಚೂಣಿಯ ಮುರಿಯಲಿರಿವನಿವ
ಪಂಚಮರ ಬಸವ ಕಾಣಮ್ಮ || ೬೫ ||

ಉದ್ದನ ಸತ್ತಿಗೆ ನೆರಳಡಿ ನಿಂದಿಹ
ಮುದ್ದುಮುಖದವನಾರೆ ಸಂಗಿ |
ಉದ್ದಗಿರಿಯ ಸಿದ್ದರಾಜನ ಮಗನಮ್ಮ
ಮುದ್ದು ಕೋಮಲೆ ರತ್ನಿ ಕೇಳು || ೬೬ ||

ಗೊಂಡೇದ ಸತ್ತಿಗೆ ನೆಳಲಡಿಯ ನಿಂದಿಹ
ಚಂಡವಿಕ್ರಮನಾರೆ ಸಂಗಿ |
ದಂಡೆತ್ತಿ ಬಹ ತುರುಕರ ಗಂಡನೆಂದೆಂಬ ಪೆನ
ಗುಂಡೆಯ ಸೋಮ ಕಾಣಮ್ಮ || ೬೭ ||

ಎಕಲಂಜಿ ಸತ್ತಿಗೆ ನೆರಳಡಿಯ ನಿಂದಿಹ
ಲೋಕನಾಯಕನಾರೆ ಸಂಗಿ |
ನೂಕಿ ದಂಡೆತ್ತಿ ಬಾಹರಗಂಡನೆಂದೆಂಬ
ಏಕಾಂಗಿ ವೀರ ಕಾಣಮ್ಮ || ೬೮ ||

ಹಸುರು ಕಾವಿನ ಛತ್ರಿ ಬಸವನ ಮುದ್ರೆಯು
ಮಿಸುನಿಯ ಬಾಯವನಾರೆ |
ಅಸಮ ದಳದ ಮೇಲೆ ಎದ್ದು ಕಡಿವನಿವ
ಬಸವರಾಹುತ ಸಿದ್ಧನಮ್ಮ || ೬೯ ||

ಸಕಲಾತಿ ಸತ್ತಿಗೆ ನೆರಳಡಿಯ ನಿಂದಿಯ
ಮಕರಂಕನವನಾರೆ ಸಂಗಿ |
ಸಕಲ ದಂಡಿನ ಮೇಲೆ ಸಮರದಿ ಕಡಿವನು
ಅಕಳಂಕ ಸಿದ್ಧನೆಂಬವನು || ೭೦ ||

ಕೊಡೆಯ ಸತ್ತಿಗೆ ಮೇಲೆ ಗಿಡುಗನ ಬಿರಿದಿಕ್ಕಿ
ಸಡಗರದಲ್ಲಿಹನಾರೆ |
ಬಿಡದೆ ಬೆನ್ಹತ್ತಿ ಕಡಿವನು ರಾಣದೊಳು
ಮಿಡಿಗೇಸಿ ನಾಗ ಕಾಣಮ್ಮ || ೭೧ ||

ಎಡಬಲದಲ್ಲಿ ಚೌರ ಢಾಳಿಸಿಕೊಂಬ
ಬೆಡಗಿನ ಮಾನ್ಯನವನಾರೆ |
ಕೊಡುವೆಡೆಯೊಳು ಕರ್ಣನೆಂದೆನಿಸುವ
ನಿಡಿಗಲ್ಲ ಕಾಮ ನಿಸ್ಸಿಮ || ೭೨ ||

ಚಂದ್ರಗಾವಿಯ ಸತ್ತಿಗೆ ನೆರಳಡಿಯ
ಚೆಂದದಿಂದಿಹನಾರೆ ಸಂಗಿ |
ಕಂದರ್ಪ ಸಮರೂಪ ಕದನ ಪ್ರಚಂಡನು
ಕುಂದುರ್ಪೆ ತಮ್ಮ ಕಾಣಮ್ಮ || ೭೩ ||

ಹೊಳೆವ ಮನ್ಮಥರೂಪ ಥಳಥಳಿಸುತಲಿಪ್ಪ
ಕಳೆಯುಳ್ಳವನಾದ ಮನ್ನೆಯನೆ |
ಇಳೆಯೊಳಗಿವ ರಾಯದುರ್ಗದ ವೀರನು
ಕೆಳದಿ ಕೇಳಮ್ಮ ರತ್ನಾಜಿ || ೭೪ ||

ಕಾಗಿನ ಸತ್ತಿಗೆ ತೂಗುವ ಜಲ್ಲಿಯು
ಭೋಗದೊಳಿಹನಾರೆ ಸಂಗಿ |
ಕೂಗಿದ [ರಣಕಿವ] ಮೊಳ ಹೆಚಚುವನು ಕೇಳು
ಬೋಗಾರ ಮಲ್ಲ ಕಾಣಮ್ಮ || ೭೫ ||

ಬೊಂಬೆಯ ಸತ್ತಿಗೆ ನೆರಳಡಿಯ ನಿಂದಿಹ
ತುಂಬಿದ ಮೈಯವನಾರೆ |
ಹಂಬಲ ಹರಿದು ತುರುಕರ ದಂಡ ಕಡಿವನು
ಕುಂಭಕೋಣೆಯ ಕಲ್ಲನಮ್ಮ || ೭೬ ||

ಎತ್ತಿದ ನ್ಯಾಜ್ಯವು ಪಪ್ಪಾಳಿ ಸತ್ತಿಗೆ
ಎತ್ತಳ ನಾಡ ಮನ್ನೆಯನೆ |
ಉಗ್ಸಂಗಿದುರ್ಗದ ಪಡುವಲದೇಶದ
ಮತ್ತ ಕೋಕಿಲನು ಕಾಣಮ್ಮ || ೭೭ ||

ಕೊಡೆನೆಂಬ ಲೋಭಿಯ ಗಂಡನೆಂದೆನಿಸುವ
ಗಡಿಯಂಕ ಭೀಮನವನಾರೆ |
ಪೊಡವಿಯೊಳಗೆ ಎಣೆಗಾಣೆನು ಇವನಿಗೆ ಗಡಿಯಕೋಟೆಯ ದೇವನಮ್ಮ || ೭೮ ||

ಸುಲಿಪಲ್ಲ ಸತ್ತಿಗೆ ನೆರಳಡಿಯ ನಿಂದಿಹ
ಒಲವುಳ್ಳ ಮನ್ನೆಯನಾರೆ |
ಛಲದಂಕ ಸಾರಂಗಿ ಗೊಲ್ಲರ ಗುಜ್ಜಯ್ಯ
ಲಲನೆ ಕೇಳೆಲೆ ರತ್ನಾಜಿ || ೭೯ ||

ಸಕಲಾತಿ ಸತ್ತಿಗೆಯ ನೆರಳಲ್ಲಿ ನಿಂದಿಹ
ಮುಖ ದೊಡ್ಡನಾವ ಮನ್ನೆಯನೆ |
ಸಕಲ ವೈರಿಗಳೆದೆಗಂಕುಶವಾಗಿಹ
ಮಕರಂಕ ಮಾದಿಗ ಹಂಪ || ೮೦ ||

ಸುಳಿವಾಳೆ ಪಟ್ಟೆ ಸತ್ತಿಗೆ ನೆರಳಲಿ ನಿಂದಿಹ
ಮೇಳದ ಮನ್ನೆಯನಾರೆ |
ದಾಳಿಯ ಬಂದ ಖಾನರನೆಲ್ಲ ಕೊಲ್ಲುವ
ದಳಧೂಳಿ ಮಾದ ಕಾಣಮ್ಮ || ೮೧ ||

ಚಿನ್ನದ ಸತ್ತಿಗೆ ರನ್ನದ ಕಳಸವು
ಮನ್ನೆಯನ್ಯಾರೆಲೆ ಸಂಗಿ |
ಕನ್ನೋಜಿ ಖಾನರ ಗಂಡನೆನಿಸುವ ಕೇಳು
ಮನ್ನೂಲ ಮಾಚನೆಂಬವನು || ೮೨ ||

ಕುರುಹಿನ ಟೆಕ್ಕೆಯು ಅರಿಬಿರಿದಿನ ಜಲ್ಲಿ
ಮೆರೆವ ಮನ್ನೆಯನಾರೆ ಸಂಗಿ |
ಧರೆಯೊಳು ಕುರುಗೋಡ ಸಂಗಮ ಇವನೊಳು
ಬೆರಸಿ ಕಾದುವರಿಲ್ಲವಮ್ಮ || ೮೩ ||

ಜಗಜಂಪಿನ ಸತ್ತಿಗೆ ನೆರಳಲ್ಲಿ ನಿಂದಿಹ
ನಗೆಮುಖದವನಾರೆ ಸಂಗಿ |
ಜಗದೊಳು ಚಿನ್ಮೂಲಗಿರಿದುರ್ಗದ ದೊಡ್ಡ
ಅಗಣಿತ ಸಿಂಗ ಕಾಣಮ್ಮ || ೮೪ ||

ಕನಕದ ಸತ್ತಿಗೆ ನೆರಳಡಿಯ ನಿಂದಿಹ
ಜನವಶ್ಯ ತಿಲಕದವನಾರೆ |
ಆನೆಯ ದಂಡನೆಲ್ಲವ ಕಡಿವನು ಇವ
ಮೀನಿಗರ ಲಕ್ಕ ಕಾಣಮ್ಮ || ೮೫ ||

ಪಚ್ಚೆ ಕಾವಿನ ಸತ್ತಿಗೆ ನೆರಳಲಿ ನಿಂದಿಹ
ಹೆಚ್ಚಳ್ಳನಾವ ಮನ್ನೆಯನೆ |
ಮೆಚ್ಚ ನುಂಗುವ ಲೋಭಿಯ ಗಂಡನೆನಿಸುವ
ಉಚ್ಚಂಗಿದುರ್ಗದ ಪಾಲ || ೮೬ ||

ಎಸೆವ ಸತ್ತಿಗೆ ಮೇಲೆ ಹೊಸ ಹೊನ್ನ ಕಳಸವು
ದೆಸೆಯುಳ್ಳನಾವ ಮನ್ನೆಯನೆ |
ಅಸಮದಳಕಿದಿರಾದ ಅಸುರರ ತಲೆ ರನ್ನ
ವಸದಾರಿ ಬಸವ ಕಾಣಮ್ಮ || ೮೭ ||

ಸತ್ತಿಗೆ ಎಲ್ಲಕೆ ಸುತ್ತಳ ಗೊಂಡೆವು
ಎತ್ತಳ ನಾಡ ಮನ್ನೆಯನೆ |
ಉತ್ತಮ ತೊರಗಲ್ಲ ಜಾಯಿಶೆಟ್ಟಿ ಬಸವಯ್ಯ
ಮತ್ತೆ ಕೇಳಮ್ಮ ರತ್ನಾಜಿ || ೮೮ ||

ಬೆಳ್ಳಿಯ ಕಾವಿನ ಸತ್ತಿಗೆ ನೆರಳಡಿಯ
ಒಳ್ಳೆವನಾವ ಮನ್ನೆಯನೆ |
ಡಿಳ್ಳಿಯ ಖಾನರ ಗಂಡನೆನಿಸಿಕೊಂಬ
ಬಳ್ಳಾರಿ ಹನುಮ ಕಾಣಮ್ಮ || ೮೯ ||

ಬಾವನ್ನ ಸತ್ತಿಗೆ ನೆರಳಡಿಯ ನಿಂದಿರ್ದ
ಕೋವಿದನಾವ ಮನ್ನೆಯನೆ |
ಜೀವದೊಳರ್ಧನೆನಿಸುವನು ರಾಮಗೆ
ದೇವಿಸೆಟ್ಟಿಯ ಲಿಂಗನಮ್ಮ || ೯೦ ||

ನೀಲಿಯ ಸತ್ತಿಗೆ ಮೇಲೆ ಹಬ್ಬಿದ ಬಿರಿದು
ಲೋಲ ಮನ್ನೆಯನಾರೆ ಸಂಗಿ |
ಬಾಲಕುಮಾರರ ಗಂಡನೆನಿಸಿಕೊಂಬ
[ಸ]ಲ್ಗುಂದಿ ಚೆನ್ನ ನಿನ ತಮ್ಮ || ೯೧ ||

ಮುಕ್ಕಣ್ಣ ನೇಜೆವು ಇತ್ತರದಲಿ ಜಲ್ಲಿ
ಕಂಕಣರುದ್ರನವನಾರೆ |
ಕೊಂಕಿ ಉರುಲ ಹಾಕಿ ಸೆಳೆವನು ರಣದೊಳು ನಿ
ಶ್ಶಂಕ ಕಂಪಿಲನಳಿಯನಮ್ಮ || ೯೨ ||

ಏಕಾಂಬ್ರ ಸತ್ತಿಗೆ ಹಾಕುವ ಚವುರವು
ಪಾಕಶಾನು ಇವನಾರೆ |
ಕಾಟಣ್ಣ ನಿಮ್ಮ ಹಿರಿಯ ಕುಮಾರನು
ಮೀಟು ಜವ್ವನೆ ಕೇಳು ರತ್ನಿ || ೯೩ ||

ನೇತ್ರಾವಳಿಯ ಸತ್ತಿಗೆ ನೆಳಲಲ್ಲಿ ನಿಂದಿಹ
ಗಾತ್ರ ಮನ್ನೆಯನಾರೆ ಸಂಗಿ |
ಯಂತ್ರವಾಹಕ ನಮ್ಮ ಅರಸಿನ ಕುಮಾರ
ಮಂತ್ರಿ ಬೈಚಪ್ಪನ ಮಗನು || ೯೪ ||

ಜಲ್ಲಿಯ ಸತ್ತಿಗೆ ನೆರಳಡಿಯ ನಿಂದಿಹ
ನಲ್ಲನಾಯಕನಾರೆ ಸಂಗಿ |
ಎಲ್ಲ ದಳಕಿಂದಲಿ ಬಿಲ್ಲಲಿ ಬಲ್ಲಿದ
ಕಲ್ಲಕೋಟೆಯ ಚಿತ್ತನಮ್ಮ || ೯೫ ||

ಛಪ್ಪನ್ನ ದೇಶದ ಮನ್ನೆಯರೊಳಗೊಬ್ಬ
ಪುಷ್ಪಚಾಪಿನ  ರೂಪನಾರೆ |
ಎಪ್ಪ[ತ್ತೆರಡು]ಮಾನ್ಯಯರಿಗೆ ವೆಗ್ಗಳ
ಕೊಪ್ಪಳದ ತಿಮ್ಮ ಕಾಣಮ್ಮ || ೯೬ ||

ಎಪ್ಪತ್ತು [ಎರಡು] ಮನ್ನೆಯರ ಸತ್ತಿಗೆಗಳು
ತಪ್ಪದೆ ಉರಿಯಲೆ ಸಂಗಿ |
ಒಪ್ಪುವ ಚೆಲುವ ರಾಮನ ತೋರುತೋರೆಂದು
ಕರ್ಪೂರಗಂಧಿ ಆಡಿದಳು || ೯೭ ||

ಉನ್ನಂತ ರಾಮನ ತೋರೆಂದರೆ ನಾಡ
ಮನ್ನೆಯರ ಎನಗೆ ತೋರುವರೆ |
ಎನ್ನ ತನುವ ಸೂರೆಗೊಂಬ ರಾಮನ ತೋರೆ
ಹೊನ್ನ ಹೊಯ್ಸಿವೆ ಬಾಯಿತುಂಬ || ೯೮ ||

ನಾಲ್ಕು ಸತ್ತಿಗೆ ಮೇಲೆ ಚೌರ ಢಾಳಿಸಿಕೊಂಬ
ಲೋಕ ಮನ್ನೆಯನಾರೆ ಸಂಗಿ |
ಭೂಲೋಕಕತಿ ರೂಪ ಕಾಲನೇಮಿಯ ಗಂಡ
ಬಾಲಕುಮಾರ ರಾಮಯ್ಯ || ೯೯ ||

ಎಡಬಲದಲಿ ನಾಲ್ಕು ಮುತ್ತಿನ ಸತ್ತಿಗೆ
ನಡುವೆ ನಿಂದಿಹನಾರೆ ಸಂಗಿ |
ಪೊಡವಿಯೊಳುಳ್ಳ ದಿಕ್ಕಿನ ರಾಯರಗಂಡ
ಕಡುಗಲಿ ಚೆನ್ನಿಗರಾಮ || ೧೦೦ ||

ರಾಮನ ತೋರುತೋರೆಂದರೆ ಸಂಗಾಯಿ ನಾ
ಡ ಮನ್ನೆಯರ ತೋರಿಸಿದೆ |
ಕಾಮನ ಸಮರೂಪ ಕನ್ನಡಿ ಕುಖಧರ
ರಾಮನ ತೋರದೆ ನೀನು || ೧೦೧ ||

ರಾಮನೆಂಬಾ ಮಾತ ಕೇಳಿ ಸಂತೋಷದಿ ನಿ
ಸ್ಸೀಮನ ದೃಷ್ಟಿಸಿ ನೋಡಿ |
ಕ್ಷೇಮದಿ ತಲ್ಲಣಿಸುತ ತರಹರಿಸುತ
ಕಾಮ ಹುಟ್ಟಿತು ಮನದೊಳಗೆ || ೧೦೨ ||

ದೃಷ್ಟಿಸಿ ನೋಡಿ ರಾಮನ ಕಂಡು ಮನದೊಳು
ಹುಟ್ಟಿತು ತಾಪ ವೆಗ್ಗಳಿಸಿ |
ಕಟ್ಟಾಳು ರಾಮನ ಸಂಗವ ಹೊಕ್ಕು ಸವಿವೆನು
ದಿಟ್ಟೆಯಾಡಿದಳು ಸಂಗಿಯೊಡನೆ || ೧೦೩ ||

ಧರೆಯೊಳಾಡುವುದು ಬರಿ ಮಾತು ಮನ್ಮಥನ
ಉರುಹಿ ಸುಟ್ಟುದು ಸಟೆಯೆನುತ |
ಗರುವ ರಾಮನು ಸ್ತ್ರೀಯರ ತನುದುರ್ಗವ
ಇರದೆ ಮುತ್ತಿಗೆ ಮಾಡ ಬಂದ || ೧೦೪ ||

ಕಟ್ಟಾಳು ರಾಮಯ್ಯ ಹುಟ್ಟುವಾಗಲು ಶಿವ
ಕೊಟ್ಟಾನು ರೂಪನಿವನಿಗೆ |
ಸೃಷ್ಟಿಯೊಳಗೆ ರಾಮ ಸ್ತ್ರೀಯರ ಅಂಗವ
ಮುಟ್ಟಿ ಸೂರೆಯ ಮಾಡಬಂದ || ೧೦೫ ||

ಹೊನ್ನ ಪುತ್ಥಳಿಯಂತೆ ಹೊಳೆವ ಕನ್ನಡಿಯಂತೆ
ಮನ್ಮಥನ ಮರೆಸುವಂದದಲಿ |
ಕನ್ನಡಜಾಣ ರಾಮನ ಕಂಡು ಮನಸೋತು
ತನ್ನ ಮನದಣಿಯ ನೋಡಿದಳು || ೧೦೬ ||

ನೋಡಿದಾಕ್ಷಣದಲ್ಲಿ ಮೂಡಿತು ಮೊನೆ ಮೊಳೆ
ಕೂಡಿತು ರತ್ನಿಗೆ ತಾಪ |
ರೂಢಿಯೊಳ್‌ ಮನ್ಮಥ ತನ್ನೈದು ಬಾಣವ
ಹೂಡಿಬಿಟ್ಟನು ಇವಳೆದೆಗೆ || ೧೦೭ ||

ಮದನೈದು ಬಾಣವು ಎದೆಯ ತಟ್ಟುಗಿಯಲು
ಕದುಬಿ ಕಾತರಿಸಿ ಕಂಗೆಟ್ಟು |
ಹೃದಯ ತಲ್ಲಣಿಸಿ ಮೈಮರೆದ ವಿರಹದಲ್ಲಿ
ಬೆದರಿ ಬಿದ್ದಳು ರತ್ನಾಜಿ || ೧೦೮ ||

ಬಿದ್ದ ಭರಕೆ ರತ್ನಿ ಮುದ್ದುಮುಖವು ಬಾಡಿ
ಹೊದ್ದಿ ಬಳಸಿ ಕುಂತಳವಳು |
ನಿದ್ರೆಯಂದದಿ ಮೈಮರೆದಳು ವಿರಹದಿ
ಹೊದ್ದಿ ಹೊರಳಿದಳು ರತ್ನಾಜಿ || ೧೦೯ ||

ಹೊರಳಿದಳು ಬುಡುಬುಡುನುರುಳಿದಳು ಭೂಮಿಯಲಿ
ಸೊರಗಿದಳು ಮೋಹನಮೂರ್ಛೆಯಲಿ || ೧೧೦ ||

ಹವಣರಿಯದೆ ಇವಳು ಬಿದ್ದಿಹ ಸಮಯದಿ
ಭುವನೇಶ ಕಂಡರೆ ಇವಳ |
ಕಿವಿ ಮೂಗು ಮುಂದಲೆ ಕೊಯ್ಸದೆ ಬಿಡನೆಂದು
ಹವಣಿಸಿದಳು ಒಂದು ನೋವ || ೧೧೧ ||

ತವಕದಿ ಕಂಪಿಲರಾಯ ಬಂದರೆ ಇವಳ
ಜೀವಕ್ಕೆ ಮುನಿಯದೆ ಬಿಡನು |
ಇವಳು ಮೈಮರೆದು ಬಿದ್ದಳು ವಿರಹ ತಾಪದಲಿ
ಹವಣ ಕಾಣೆಲೆ ಸಂಗಾಯಿ || ೧೧೨ ||

ಅಂದು ಕಂಗೆಟ್ಟು ಸಂಗಾಯಿ ತನ್ನ ಮನದಲ್ಲಿ
ಮತ್ತೊಂದು ಬುದ್ದಿಯನೆಣಿಸುತ |
ಪನ್ನೀರ್ಗಳನು ತಂದು ಕಣ್ಣಿಗೆ ಒತ್ತಲು
ತನ್ನ ಮರವೆ ತಿಳಿದೆದ್ದು || ೧೧೩ ||

ಇನ್ನು ಸಂಗಿಯ ಕೂಡ ನುಡಿದಳು ರತ್ನಾಜಿ
ಚೆನ್ನರಾಮನ ತೋರಿಸೆನುತ |
ಕನ್ನೆ ನಿನ್ನಯ ಬುದ್ಧಿ, ಸಣ್ಣವರಂದದಿ
ಚೆನ್ನಿಗಗೆ ನೀನು ಸೋಲುವರೆ || ೧೧೪ ||

ಆಡಲು ಚೆಂಡು ಇಲ್ಲಿಗೆ ಓಡಿ ಬರುವುದು
ಬೇಡಲು ಬರುವ ರಾಮಯ್ಯ |
ರೂಢಿಯೊಳಗೆ ಮನ್ಮಥನ ಕೈವಶವ
ಮಾಡಿಕೊಳ್ಳಮ್ಮ ರತ್ನಾಜಿ || ೧೧೫ ||

ಮಂದಗಮನೆ ಕೇಳು ಮನ್ಮಥರೂಪನು
ಬಂದಾನು ನಿನ್ನರಮನೆಗೆ |
ಸಂದೇಹಬೇಡವೆಂದೆನುತ ರತ್ನಾಜಿಗೆ
ಬಂದು ಬುದ್ಧಿಯನು ಹೇಳಿದಳು || ೧೧೬ ||

ಗಾದೆಯ ಮಾತ ಸಾವಿರವ ಹೇಳಿದರೇನು
ಬೋಧಿಸುವೆನೆ ಬುದ್ಧಿಯನು |
ನಿಧಾನವ ಕಂಡರೆ ಬಿಡುವರುಂಟೆ ಸಂಗಾಯಿ
ಉದಾರ ರಾಮನ ತೋರಿಸೆನಗೆ || ೧೧೭ ||

ತೋರೇನು ಏಳೆಂದು ನೀರೆಯ ಪಿಡಿದೆತ್ತಿ
ಮೇರುವೆಯನು ಹತ್ತಿ ನಿಂದು |
ಧಾರುಣಿಯೊಳು ಚೆಲ್ವರಗಂಡ ರಾಮ ತಾ
ನೀರೆ ರತ್ನಾಜಿ ನೀ [ನೋಡೆ] || ೧೧೮ ||

ಕಪ್ಪಹತ್ತಿದ ಮೀಸೆ ಕಸ್ತೂರಿ ತಿಲಕವು
ಬಲ್ಪಿನ ಚಿಮ್ಮುರಿ ಸುತ್ತಿ |
ಮಾರಸನ್ನಿಭನಿಸ ಅರಸು ನೇಮಿಯಗಂಡ
ಹರುಸಾದೆ ನೋಡೆ ರಾಮುಗನ || ೧೧೯ ||

ಒತ್ತಿ ಬರುವ ಮೀಸೆ ಕೆನ್ನೆ ಕಮರಗಡ್ಡ
ಉತ್ತಮ ಧೀರನಿವನೀಗ |
ಇತ್ತ ನೋಡೆಲೆ ರತ್ನಾಜಿ ರಾಮಯ್ಯನು
ಅರ್ತಿಲಿ ಚೆಂಡನಾಡುವದ || ೧೨೦ ||

ಚೆಂಡನಾಡುವ ರಾಮನ ಕಂಡು ಮನದಲ್ಲಿ
ಕೊಂಡಾಡಿದಳು ಹರುಷದಲಿ |
ಇಂದ್ರನೊ ಚಂದ್ರನೊ ಶೂದ್ರಿಕ ವೀರನೊದೇ
ವೇಂದ್ರನೆನುತ ಕೊಂಡಾಡಿದಳು || ೧೨೧ ||

ಇನ್ನೊಂದು ಬಾರಿ ರಾಮನ ತೋರು ತೋರಿಸೆ
ಮನ್ನಿಸಿ ಉಡುಗೊರೆನೀವೆ |
ರಾಮನಾಥನ ಕಂಡು ನೀರೆ ಮನಸೋತಳು
ಪ್ರೇಮ ಹುಟ್ಟಿತು ಮನದೊಳಗೆ || ೧೨೨ ||

ಸೃಷ್ಟಿಗಧಿಕ ಕಾಟಣ್ಣ ಮುತ್ತಿನ ಚೆಂಡ
ನೆಟ್ಟನೆ ಪಿಡಿದಿರೆ ಕಂಡು |
ಪಟ್ಟದಾನೆಯ ಕಾಟಣ್ಣ ಚೆಂಡನು ತಾರೊ
ಇಟ್ಟು ನೋಡುವೆನೊಂದು ಬಾರಿ || ೧೨೩ ||

ಚೆಂಡಾಟ ನೀನರಿಯೆ ಚೆನ್ನಿಗ ರಾಮಯ್ಯ
ಚೆಂಡನಾಡುವ ಪಾಯ ನೋಡು |
ರೂಢಿಯೊಳಧಿಕ ಕಾಟಣ್ಣನು ಬೊಬ್ಬಿರಿದು
ಈಡಾಡಿ ಇಟ್ಟ ಲೆಗ್ಗೆಯನು || ೧೨೪ ||

ಸರಗೋಲು ಮುರಿದು ಲೆಗ್ಗೆಯ ಹಲ್ಲೆ ನುಗ್ಗೆದ್ದು
ಉರುಳಿತು ಲೆಗ್ಗೆ ಭೋರ್ಮೊರೆದು |
ಹಿರಿಯಣ್ಣನಿಟ್ಟರೆ ತಡೆಯಬಾರದು ಎಂದು
ಕರವ ಮುಗಿದು ಬಲಿಗೊಟ್ಟ || ೧೨೫ ||

ಇತ್ತ ಕಾಟಣ್ಣನಾಡಿದ ಮುತ್ತಿನ ಚೆಂಡು ರಾಮ
ನೊತ್ತಿನ ಮನ್ನೆರುಗಳು |
ಚಿತ್ತದೊಳಗೆ ಹಿಗ್ಗುತ ಗುಜ್ಜಲ ಹರಿಯ
ನೆತ್ತಿ ಪಿಡಿದನಾ ಚೆಂಡ || ೧೨೬ ||

ಹಿಡಿದ ಚೆಂಡನು ಕಂಡು ರಾಮನ ಮನ್ನೆಯರು
ಗಿಡಿಬಿಡಿ ಕೊಳಲು ತಪ್ಪಟೆಯು |
ಬಿಡದೆ ಬಿದಿರಿನ ಕಹಳೆ ಹಿಡಿಯೆ ಬ್ರಹ್ಮಾಂಡವು
ಒಡೆವಂತೆ ಬೊಬ್ಬಿಡುತಿಹುದು || ೧೨೭ ||

ಹೂಡಿರೊ ಲೆಗ್ಗೆಯ ನೀಡಿರೊ ಚೆಂಡನು
ಓಡಿರೊ ನಾಲ್ಕು ದಿಕ್ಕಿನಲ್ಲಿ |
ಈಡಾಡಿ ದೇವಿಸೆಟ್ಟಿ ಲಿಂಗಣ್ಣಿಟ್ಟರೆ
ಬೇಡನಾಯಕರು ಬೆದರಿದರು || ೧೨೮ ||

ಬೂಟಕ ಬೊಮ್ಮನ ಮೊಳಕಾಲು ಮುರಿಯಿತು
ದಿಟ್ಟ ಗಾಣಿಯ ಬುಳ್ಳನವರು || ೧೨೯ ||

ದೇವಿಸೆಟ್ಟಿಯ ಲಿಂಗನಿಟ್ಟ ಮುತ್ತಿನ ಚೆಂಡ
ಭಾವ ಸಂಗಮನಾಥ ಪಿಡಿದ |
ಕೋವಿದ ಕಾಟಣ್ಣನ ಪರಿವಾರವು
ಆವಿಜ ಭೇರಿ ಮದ್ದಳೆಯು || ೧೩೦ ||

ಬುರುಗು ಜಾಗಟೆ ಚಿನ್ನಗಹಳೆ ತುತೂರಿ ಕೊಂಬು
ಬಿರುದಿನ ರಹುಡೆಯ ಹೊಯ್ಸಿ || ೧೩೧ ||

ಹರಿದು ಬಂದೆಲ್ಲ ಕಾಟಣ್ಣನ ಮನ್ನೆಯರು
ಬಿರಿದಿನೆಕ್ಕಟ್ಟಿಗರು ಸಹಿತ |
ಬಿರಿದಿನ ಕಹಳೆಯ ಹಿಡಿಸಿ ಲೆಗ್ಗೆಯ ಮಾಡಿ
ಉರುಳಲಿಟ್ಟರು ಲೆಗ್ಗೆಯನು || ೧೩೨ ||

ಹಲ್ಲೆಯ ನೋಡಿ ಇಟ್ಟರೆ ಚೆಂಡು ಭೋರೆಂದು
ನಿಲ್ಲದೆ ಬೊಬ್ಬಿರಿವುತಲಿ |
ಬಲ್ಲಿದ ರಾಮನ ಮನ್ನೆಯರೆಲ್ಲೆರ
ಕೊಲ್ಲದ ಬಿಡನೆಂದು ಚೆಂಡು || ೧೩೩ ||

ಭಾವ ಸಂಗಮನಾಥನಿಟ್ಟ ಮುತ್ತಿನ ಚೆಂಡು
ಕೋವಿದ ಕೋಟಿಗರ ದ್ಯಾವ |
ತೀವಿ ತಂದನು ರಾಮನ ಮನ್ನೆಯರೆಲ್ಲ
ತಾ ಒಡಗೂಡಿ ಬೊಬ್ಬಿರಿದು || ೧೩೪ ||

ಹಿಡಿವಂಥ ಚೆಂಡನು ತಂದು ರಾಮನ ಕೈಲಿ
ಕೊಡಲಿ ಕಾಟಣ್ಣನವರುಗಳು |
ಕಡುಗಲಿ ಇಟ್ಟರೆ ನಿಲ್ಲರು ಮನ್ನೆಯರು
ಬಿಡದೆ ಓಡಿತು ದೆಸೆದೆಸೆಗೆ || ೧೩೫ ||

ರಾಮನಿಡಲು ಚೆಂಡು ಭೂಮಿಯಾಕಾಶಕ್ಕೆ
ತಾಮಸವಿಲ್ಲದೆ ನೆಗೆಯ || ೧೩೬ ||

ನೆಗೆವ ಚೆಂಡನು ಕಂಡು ಜಗಲೂರು ಕಾಮಯ್ಯ
ಬಿಗಿದು ಹಿಡಿದನು ಕೈಯೊಳಗೆ || ೧೩೭ ||

ಹಾರೋರ ಲಿಂಗನ ಹರಣವು ಹತ್ತಿತು
ದೊರೆ ದೇವನ ಕನ್ನೆ ಒಡೆದು |
ಮರೆಳೆಯ ಪಾಪನ ಹಲ್ಲು ಹೋಯಿತು ನಾನಾ
ಕರುಳ ಬಿದ್ದವರು ಬಿದ್ದಿಹರು || ೧೩೮ ||

ಕೋವಿದ ರಾಮಯ್ಯನಿಟ್ಟ ಮುತ್ತಿನ ಚೆಂಡ
ಭಾವ ಸಂಗಮನಾಥ ತಡೆದ |
ಭಾವ ಸಂಗಮನಾಥನಿಟ್ಟ ಮುತ್ತನ ಚೆಂಡ
ಬಾದೂರಖಾನ ಬಂದ್ಹಿಡಿದ || ೧೩೯ ||

ಕಂಡು ಬಾದೂರಖಾನ ಲೆಗ್ಗೆ ನೀಡಲು ಮುನ್ನ
ಮಂಡಲದುರಿತಾರಾಕ್ಷಣದಿ || ೧೪೦ ||

ಗುದ್ದುಗುದ್ದನು ಹೊಕ್ಕು ಕಾಟಣ್ಣನ ಮಂದಿಯು
ಬಿದ್ದರು ತಲೆಕೆಳಗಾಗಿ |
ಎದ್ದೆದ್ದು ನೋಡಲು ಉಬ್ಬಿ ಮನ್ನೆಯರೆಲ್ಲ
ಸದ್ದು ಮಾಡುತ ಚೆಂಡು ಬರಲು || ೧೪೧ ||

ಆ ಸಮಯದಿ ದೇವಿಸೆಟ್ಟ ಲಿಂಗಣ್ಣನು
ಕೇಸರಿ ಕೆರಳಿದಂದದಲಿ |
ಸಾಸಿರ ತುಡುಮು ಹೊಯ್ಸುತ ಲೆಗ್ಗೆ ಮಾಡುತ
ರೋಷದಿ ಚೆಂಡ ಬಂದ್ಹಿಡಿದ || ೧೪೨ ||

ಕಡುಗೋಪದಲಿ ಬಂದು ದೇವಿಸೆಟ್ಟಿಯ ಲಿಂಗ
ಪಿಡಿದನು ಮುತ್ತಿನ ಚೆಂಡ |
ತಡೆಯದೆ ಲೆಗ್ಗೆಯ ನೋಡಿ ಇಟ್ಟರೆ ಮುನ್ನ
ಕೆಡಹಿತೈವರು ಮನ್ನೆಯರ || ೧೪೩ ||

ಮನ್ನೂಲ ಮಾಚನ ಮೂಗು ಬಿಚ್ಚಿತು ಆಗ
ಚಿನ್ನ ಕಂಪನ ಕಾಲೊಡೆದು |
ಚಿನ್ನದ ಕಾಸೆಯ ವಿರೂಪಯ್ಯತಾತನ
ಕೆನ್ನೆ ಹಾರಿತು ಆಕ್ಷಣದಿ || ೧೪೪ ||

ಇತ್ತ ಮನ್ನೆಯರು ನೊಂದುದ ಕಂಡು ರಾಮಯ್ಯ
ಮತ್ತೆ ಕೋಪವನು ತಾಳಿದನು |
ತೆತ್ತಿಸಿದವು ರೋಮ ಸರಳು ತೆತ್ತಿಸಿದಂತೆ
ಮತ್ತೆ ರಾಮನ ಮೈಗಳಲಿ || ೧೪೫ ||

ಭರದಿಂದ ಬಂದನು ಧುರಗಲಿ ರಾಮನು
ಬರುವ ಮುತ್ತಿನ ಚೆಂಡಿಗಾಗಿ |
ಧುರಧೀರ ಮುತ್ತಿನ ಚೆಂಡ ಪಿಡಿದಿರುವದ ಕಂಡು
ಪರಿದು ಭೂತಗಳು ಹತವಾಗೆ || ೧೪೬ ||

ಇತ್ತ ರಾಮನು ಲೆಗ್ಗೆಯನಿಡುವ ಸಂಭ್ರಮವನು
ಬಿತ್ತರಿಸುವರಳವಲ್ಲ |
ಮೃತ್ಯು ಬಂದಿತು ರಾಮಯ್ಯನ ಕೊರಳಿಗೆ
ಸತ್ಯಸಾ[ಧಕರು] ಲಾಲಿಪುದು || ೧೪೭ ||

ಹೂಡಿದ ಲೆಗ್ಗೆಯ ನೋಡಿ ಇಡಲು ಮುನ್ನ
ಓಡಿತು ನಾಲ್ಕು ದಿಕ್ಕಿನಲಿ |
ಉರವಣಿಸುತ ಬಂದು ದಿಕ್ಕಿದಿಕ್ಕಿಲಿ ಹೊಕ್ಕು
ಕರ ಬೇಗ ಲೆಗ್ಗೆ ಮಾಡಿದರು || ೧೪೮ ||

ಬಲ್ಲಿದ ಕಾಟಣ್ಣನಿಟ್ಟ ಮುತ್ತಿನ ಚೆಂಡು
ಚೆಲ್ಲೆಗಂಗಳ ರಾಮ ಪಿಡಿದ || ೧೪೯ ||

ಹಿಡಿ ಬೇಗ ಲೆಗ್ಗೆಯ ಕೆಡಹುವೆ ಕಾಲಾಳ
ಹೊಡೆವ ಕಾಟಣ್ಣನ ಎದೆಯ |
ಮೃಡನು ಬಲ್ಲಂತೆ ಭೋರ್ಮೊರೆವನು ರಾಮಯ್ಯ
ಬಿಡು ಕೈಯಿಂದಲಿ ತನ್ನ || ೧೫೦ ||

ಪ್ರೇಮದಿ ಕಾಟಣ್ಣ ಕೊಳ್ಳಿಯ ನಾಗಣ್ಣ
ಸೋಮಿದೇವನು ಚಿನುಮಾದ |
ಕಾಮಗೇತಿಯ ಚಿತ್ತನೈವರು ಮಾನ್ಯರು ಹೊ
ಕ್ಕು ಮುರಿಯದೆ ಬಿಡವೆಂದರವರು || ೧೫೧ ||

ಚೆಂಡ ಬಿನ್ನಹವ ಮಾ[ಡಿತು] ರಾಮಯ್ಯ
ಮಂದಿಯ ನೋಯಿಸಬೇಡ |
ಹಿಂದುಮುಂದಣ ಪೌಜು ಒದಗಿತು ನಾನೀಗ
ಚೆಂದಗೆಡಿಸುವೆ ಮನ್ನೆಯರ || ೧೫೨ ||

ನೆಗೆವೆನಾಕಾಶಕೆ ಬಗೆವೆನು ಭೂಮಿಯ
ತೆಗೆವೆ ಕಾಟಣ್ಣನಾಯಕನ |
ಉಗಿದು ಬೀಳುವೆನು ಮನ್ನಯರ ಕೈಯಿಂದ
[ಖ]ಗರಾಜಪತಿ ಬಿಡೊ ನಿನ್ನ || ೧೫೩ ||

ಮುತ್ತಿನ ಚೆಂಡನಿಡಲು ರಾಮಯ್ಯನು
ಅತ್ತ ತಾನೊಯ್ಯುವ ಪರಿಯ |
ಚಿತ್ತ ಒಲಿದು ಕೋವಿದರೆಲ್ಲ ಕೇಳಿರೊ
ಕೃತಕ[ದ ಚಂಡ] ಲೆಗ್ಗೆಯನು || ೧೫೪ ||

ಕೇಳಿರೊ ಚೆಂಡು ರತ್ನಗೆ ಸಿಕ್ಕುವಂದಾಗ
ಕೇಳಿರೊ ಒಯ್ವೋದ ಪರಿಯ |
ಭೋರು ಭುಗಿಭುಗಿಲೆನುತಲಿ ಬಂದುದು
ಏರಿ ಬೆಟ್ಟದಲಿಂದಲಿಳಿದು || ೧೫೫ ||

ಸೇರಿದನಾಗಳೆ ರಾಮನ ಚೆಂಡಿಗೆ
ಸಾರ್ವ ಹೆಗ್ಗಾಳೆಯಂದದಲಿ || ೧೫೬ ||

ಮುಂದಾಣಿಯಲಿ ಸರ್ವ ಮೊಳಗುತಲಿರುತಿರೆ
ಬಂದನು ರಾಮ ಬೊಬ್ಬಿರಿದು |
ಚೆಂದದಿಂದಲಿ ಲೆಗ್ಗೆಯ ನೋಡಿ ಇಟ್ಟರೆ
ಕೆಂಧೂಳು ಕವಿಯಿತಂಬರಕೆ || ೧೫೭ ||

ಸಿಡಿಲು ಪರ್ವತದ ಚೆನ್ನ ಕಳಸವ ಹೊಡೆವಂತೆ
ಹಿಡಿದು ಒಯ್ದನು ವಾಯುದೇವ |
ತಡೆಯದೆ ರತ್ನಿಯ ಅಂಗಳದೊಳು ಹೋಗಿ
ಕೆಡಹಿದ ಮುತ್ತಿನ ಚೆಂಡ || ೧೫೮ ||

ದಿಟ್ಟ ರಾಮನ ಚೆಂಡ ಸೆಳಕೊಂಡು ರತ್ನಾಜಿ
ಪಟ್ಟಸಾಲೆಯ ಮುಂದೆ ಹಾಕಿ |
ಉಟ್ಟ ಉಡಿಗೆಯ ಕಳೆಯಲರಿಯದೆ ರತ್ನಿ
ದಿಟ್ಟೆ ಚೆಂಡಿನ ಮೇಲೆ ಬಿದ್ದು || ೧೫೯ ||

ಘಳಿಲನೆ ಅರಮನೆ ಒಳಯಕೆ ತೆಕ್ಕೊಂಡು
ಹೊಳೆವ ಕಂಗಳಿಗೊತ್ತಿಕೊಂಡು || ೧೬೦ ||

ತರಿಸಿದಳುದಕ ಪನ್ನೀರು ಚಳಯವಗೊಟ್ಟು
ವರವ ಬೇಡಿದಳು ಚೆಂಡನಗೆ |
ದುರಧೀರ ರಾಮನ ಸಮವೆಂದು ಚೆಂಡನು
ಉರದಲ್ಲಿ ತೆಗೆದಪ್ಪಿಕೊಂಡು || ೧೬೧ ||

ಭರವಾಸದಲ್ಲಿ ರತ್ನಾಜಿ ಚೆಂಡಿನ ಮೇಲೆ
ಕರ ತವಕದಿ ಬಿದ್ದು ಹೊರಳೆ || ೧೬೨ ||

ಮುದ್ದು ರಾಮನ ಸಮವೆನುತ ಮುತ್ತಿನ ಚಂಡ
ನಿರ್ಧಾರದಲಿ ತೆಗೆದಪ್ಪಿ |
ಸಧ್ಯಾಫಲದಿ ರಾಮ ಸಿಕ್ಕಿದನೆನುತಲಿ
ಬಿದ್ದಳು ಚೆಂಡಿನ ಮೇಲೆ || ೧೬೩ ||

ಮುತ್ತಿನ ಚೆಂಡನು ಪಿಡಿಕೊಂಡು ರತ್ನಾಜಿ
ಮತ್ತೆ ರಾಮನ ಸಮವೆಂದು |
ಒತ್ತಿದಳೋ ನಖರೇಖೆಯ ಚೆಂಡಿಗೆ
ಚಿತ್ತಿನಿಜಾತಿ ರತ್ನಾಜಿ || ೧೬೪ ||

ಕುಶಲ ರಾಮನ ಸಮವೆನುತ ಚೆಂಡಿನ ಮೇಲೆ
ದಶ ವಸ್ತ್ರಗಳನು ಹಾಕಿದಳು |
ವಸುಧೆಯೊಳಗೆ ಎನ್ನ ಭಾಗ್ಯ ಬಂದಿತು ಎಂದು
ಕುಶಲೆ ರತ್ನಾಜಿ ಹೆಚ್ಚಿದಳು || ೧೬೫ ||

ಅಳಿಪಾದವು ಸೋಂಕಿದಂತೆ [ಕಮಲ]ಮುಖ
ಕಳೆಯು ಏರಿತು ಚೆಂಡು ಬರಲು || ೧೬೬ ||

ಎದಿಗೊತ್ತಿ ಬದಿಗೊತ್ತಿಕೊಂಡಳು ಆ ಚೆಂಡ
ಮುದದಿ ಮುದ್ದಿಸಿ ಮುಂಡಾಸಿದಳು |
ಚದುರ ರಾಮನ ಸಮವೆನುತ ಮುತ್ತಿನ ಚೆಂಡ
ಮದನಗೃಹಕೆ ವೊಂದಿಸಿದಳು || ೧೬೭ ||

ಹರಸಿದ ಹರಕೆಯು ಕೈಗೂಡಿತೆನುತಲಿ
ಪುರುಷ ಬಂದೆನುತ ರತ್ನಾಜಿ |
ತರಿಸಿ ಪುಣುಗು ಜ್ವ್‌ಆದಿ ಕಸ್ತೂರಿಯನು
ಸರಸಿಜಮುಖಿ ಲೇಪಿಸಿದಳು || ೧೬೮ ||

ಪಟ್ಟೆ ದೇವಾಂಗವನು ಸುತ್ತಿನ್ನು ಚೆಂಡಿಗೆ
ಇಟ್ಟಳು ಗಂಧ ಕಸ್ತೂರಿಯ |
ತರತರದಲಿ ಮುತ್ತಿನಾರತಿ ಸಹಿತಲಿ
ತೆರಳಿ ಒಸಗೆ ಪಾಡುತಲಿ || ೧೬೯ ||

ಬಂದು ರಾಮಯ್ಯನ ಚೆಂಡಿಗೆ ಇದಿರಾಗಿ
ನಿಂದು ಆರತಿಯನೆತ್ತಿದಳು |
ಚೆಂದದಿಂದಲಿ ರತ್ನಾಯಿ ತಿರಿಗಿಬಂದು
ತಂದು ಇಟ್ಟಳು ಮಂಚದ ಮೇಲೆ || ೧೭೦ ||

ಇತ್ತ ಚಿನ್ನದ ಗದ್ದುಗೆ ಮಾಡಿ ಚೆಂಡಿಗೆ
ಅಂದದಿ ಪೂಜೆ ಮಾಡಿದಳು |
ಸುತ್ತ ಮಂಚಕ್ಕೆ ಕಾವಲನಿಟ್ಟು ಮನವನು
ಇತ್ತ ಹರುಷದಲಿ ರತ್ನಾಜಿ || ೧೭೧ ||

ಮುತ್ತಿನ ಚೆಂಡಿಗೆ ರಾಮಯ್ಯ ಬಂದಂತೆ
ಕಿತ್ತು ಬಲುವೇಷ ಮಾಡಿದಳು |
ಹರುಷದಿ ರತ್ನಾಜಿ ಇರದೆ ಏಕಾಂತದಿ
ತರುಣಿಗೃಶ್ವರೈ ಬಂದಂತೆ || ೧೭೨ ||

ತರುಣಿ ಬೇಗದದಾಗ ಸಂಗಿಯ ಕರೆದಳು
ಹೊರಗೆ ಕಾವಲ ಇರು ಎನುತ |
ಗರುವೆ ಮುತ್ತಿನ ಕಾಲುಮಣಿಯ ಮಂಚದ ಮೇಲೆ
ಅರಸಿ ರತ್ನಾಜಿ ಚೆಂದದಲಿ || ೧೭೩ ||

ತಂದೆ ಇಲ್ಲದ ಅರಮನೆಗೆ ತಾ ಹೋದರೆ
ಕುಂದು ಬರುವದೆಂದು ರಾಮ |
ಎಂದು ಬಾಹನೊ ಬಾರದಿರುವನೋ ರಾ ತಾ
ಸಂದೆಹಿಸುತಲಿ ರತ್ನಾಜಿ || ೧೭೪ ||

ಅನುಮಾನವಾಗಿ ತಾ ಮೂಗಿನೊಳ್‌ ಬೆರಳಿಟ್ಟು
ನೆನೆದಳು ಕುಟಿಲ ದೇವಿಯರ |
ಕೊನರಿಸಿ ಮೂಗಿಗೆ ಬೆರಳಿಟ್ಟು ರತ್ನಾಜಿ
ನಿಂತು ಬಾಗಿಲನು ನೋಡಿದಳು || ೧೭೫ ||

ಅತ್ತ ರಾಮಯ್ಯನ ಚಿಂತಿಲಿ ರತ್ನಾಜಿ
ಯಾತಕೆ ಬಾರನೊ ರಾಮ |
ಚಿಂತೆ ವೆಗ್ಗಳವಾಗಿ ಇರುವಳು ರತ್ನಿಯು
ಮತ್ತೆ ರಾಮುಗನ ನೆನೆನೆನೆದು || ೧೭೬ ||

ಇತ್ತಲಿ ಮನ್ನೆಯರು ಚೆಂಡು ಹೋಯಿತು ಎಂದು
ಮತ್ತೆ ಸೈವೆರಗಾಗಿ ನಿಂದು |
ಮೃತ್ಯು ಬಂದಿತು ಎಂದು ಚಿಂತಿಸಿ ಕಾಟಣ್ಣ
ನಿಂತ ಬಳಿಗೆ ಸಂಧಿ ಮುಗಿಯೆ || ೧೭೭ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ವಿದಿತ ಪಾಶದಿ ಚೆಂಡನಾಡಿದನೆಂದೆಂಬ
ವಿದಿತ ಪಾಶದಿ ಚೆಂಡನಾಡಿದನೆಂದೆಂಬ
ಅಧಿಕ ಸಂಧಿಯು ಸಂಪೂರ್ಣ || ೧೭೮ ||

ಅಂತು ಸಂಧಿ ೧೬ಕ್ಕಂ ಪದನು ೧೬೫೮ಕ್ಕಂ ಮಂಗಳ ಮಹಾಶ್ರೀ