ಶ್ರೀ ಗಿರಿಜಾ[ಸ್ಯಾಂಬುಜ ದಿನ] ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ||

ತಂದೆ ಮಕ್ಕಳು ಕೂಡವೊಂದಿಲಿ ಕಾಟಣ್ಣ
ಬಂದು ಕುಳಿತರು ಬೇಗದೊಳು |
ಚಂದದೊಳುಂಡು ಕರ್ಪುರ ವೀಳ್ಯವ ಕೊಂಡು
ವಂದಿಸಿ ಹೊರಟರಾಕ್ಷಣದಿ || ೨ ||

ತಂದೆ ಮಕ್ಕಳು ಕೂಡ ಬಂದು ಹಜಾರಕ್ಕೆ
ಒಂದೇ ಸದರಿನಲ್ಲಿ ಕುಳಿತು |
[ಹಿಂ]ದುವ ರಾಮ ನಿನ ಮುಂದೆ ಕಡಿದಾಡಿದ
ಮಂದಿಯ ಸಮಜಾಯಿಸಿಕೊಳ್ಳೊ || ೩ ||

ಎಂದ ಮಾತನು ಕೇಳಿ ಪೇಳಿದ ಚರರಿಗೆ
ಮಂದಿಯನೆಲ್ಲ ಕರೆತನ್ನಿ || ೪ ||

ಚರರೋಡಿ ಹೋಗಿ ಸಮಸ್ತರ ಕರೆದರು
ದೊರೆಯ ಮಕ್ಕಳನು ರಾಹುತರ |
ಇರದೆ ನೀವ್ ಬನ್ನಿ ಮಾನ್ಯರಿಗೆಲ್ಲ ಸಾರುತ
ಕರೆದರು ಕೇರಿಕೇರಿಯೊಳು || ೫ ||

ಎಲ್ಲರು ಬಂದು ಕೈಮುಗಿಲು ಕಂಪಿಲ
ನಿಲ್ಲದೆ ಕುಳ್ಳಿರೆಂದೆನುತ |
ಉಲ್ಲಾಸದಲಿ ಮಂತ್ರಿ ಬೈಚಪ್ಪ[ಗೆ] ಹೇಳಿದ
ಎಲ್ಲ ವಸ್ತ್ರಂಗಳ ತರಿಸೊ || ೬ ||

ರಾಮಯ್ಯನೆಡೆಗೆ ತಂದಿರಿಸಯ್ಯ ಬೇಡಿದುದ
ಕ್ಷೇಮದೊಳೆನುತ ಕಂಪಿಲನು || ೭ ||

ದೊರೆಯ ಮಕ್ಕಳಿಗೆ ಕರೆದು ಕೊಟ್ಟನು ರಾಮ
ಮುರುಡಿ ಸರಪಳಿಯ ಪದಕಗಳ |
ನೆರೆ ಬಂದಂಥ ರಾಹಯತರಿಗೆಲ್ಲವ ಕೊಟ್ಟು
ಪರಿಪರಿ ಒಡವೆ ವಸ್ತ್ರಗಳ || ೮ ||

ಬಿರಿದು ಬಾವುಲಿ ಕೊಟ್ಟು ಮಂದಿ ಮಕ್ಕಳಿಗೆಲ್ಲ
ಕರೆದು ಕೊಟ್ಟನು ಹೊನ್ನುಗಳ |
ಪರಿಪರಿ ಬಣ್ಣ ಉಡುಗೊರೆ ಕೊಟ್ಟು ಮನ್ನಿಸಿ
ಕರೆದು ಕೊಟ್ಟನು ವೀಳ್ಯಗಳನು || ೯ ||

ಗಾಯದವರಿಗೆ ಕೊಟ್ಟ ಜಾಳಿಗೆ ಹೊನ್ನನು
ನಾಯಕವಾಡಿಗಳಿಗೆಲ್ಲ |
ಆಯತವಾಗಿ ಕೊಟ್ಟನು ಉಡುಗೊರೆಯ
ಬಾಯೆಂದು ಕೊಟ್ಟ ವೀಳ್ಯವನು || ೧೦ ||

ಸಕಲ ಬಲವನೆಲ್ಲ ಸಮಜಾಯಿಸಿಕೊಂಡನು
ಯುಕುತಿಲಿ ರಾಮಯ್ಯ ನಗುತ || ೧೧ ||

ಇಂತು ಸಂತೋಷದೊಳು ರಾಮ ತಾನಿರುತಿರೆ
ಪಂಥದೊಳ್ ಬಲ್ಲಾಳರಾಯ |
ಇಂತಪ್ಪ ರಾಮನ ಸುದ್ದಿಯ ಕೇಳಿತ
ಚಿಂತೆಮಾಡುತಲಿರ್ದನಲ್ಲಿ || ೧೨ ||

ಸುರಿತಾಳ ನೇಮಿಯು ಬರೆದಂಥ ಕಾಗದ
ಚರರೋಡಿ ತಾ ಬಂದು ಕೊಡಲು |
ಅತ್ತವರನು ಕಳುಹಿ ತನ್ನ ಮಂತ್ರಿಯೊಳ್
ಇತ್ತ ಆಲೋಚಿಸುತಿರಲು || ೧೩ ||

ಮೀರಿದ ರಾಮನು ಸುರಿತಾಳನ ಗೆದ್ದ
ದಾರಿಗಂಜುವನವನೆಂದ || ೧೪ ||

ದಾರಿಯ ಸುದ್ದಿಯ ನೆಚ್ಚಿಗೆ ನಮಗಿಲ್ಲ
ಆರನಾದರು ನಾವು ಕಳುಹಿ |
ಓರುಗಲ್ಲಿಗೆ ಹೋಗಿ ಸುದ್ದಿಯ ತರುವಂತೆ
ಸಾರ ಅಪ್ಪಣೆ ಕೊಡಬೇಕು || ೧೫ ||

ಕಳುಹಯ್ಯ ಮಂತ್ರಿ ನರಸಿಂಗರಾಯನ ಬೇಗ
ಒಳಪಾಡಿನೊಳಿಗದವರ |
ಒಳಹೊಕ್ಕು ಪಟ್ಟಣದೊಳಗೆಲ್ಲ ಅಲ್ಲಲ್ಲಿ
ತಿಳಿಕೊಂಡು ಬರಲಿ ಸುದ್ದಿಯ || ೧೬ ||

ಧರೆಯೊಳು ರಾಮ ಬಲ್ಲಿದನಾಗಿ ರಾಜ್ಯದ
ದೊರೆದೊರೆಗಳ ಬಿರಿದುಗಳ |
ಧರಿಸಿದೆನೆಂಬ ಗರ್ವದಿ ತಮ್ಮ ತಂದೆಯೊಳ್
[ವಿ]ರಸಾಗಿ ಓರ್ಗಲ್ಲ ಸೇರಿ || ೧೭ ||

ತಂದೆಯ ಕೂಡಿನ್ನು ಮನ ಮುನಿಸಿ ನಾನಿನ್ನು
ಬಂದೆನು ನಿಮ್ಮನೋಲೈಸ |
ಲೆಂದು೭ ಅವರೊಳು ಒಳಹೊಕ್ಕು ತಾ ಹೋಗಿ
ನಿಂದ ಅವರ ಮುಖದೊಳು || ೧೮ ||

ಇಲ್ಲದ ತಳ್ಳಿಯ ಮಾಡಿ ಅವರ ಮಂದಿ
ನೆಲ್ಲರ ಕೊಂದು ಮೋಸದಲಿ |
ನಿಲ್ಲದೆ ಕಳ್ಳ ಬೇಡನು ಬೊಲ್ಲನ ತಂದ
ಬಲ್ಲಾಳರಾಯ ಕೇಳೊಡೆಯ || ೧೯ ||

ಬೊಲ್ಲನ ತಂದಂಥ ಗರ್ವದೊಳ್ ಹುಳಿಯೇರ
ನಿಲ್ಲದೆ ಮುತ್ತಿಗೆ ಮಾಡಿ |
ಪಲ್ಲವಿಸಿ ಪಂಜರಗಿಳಿಯನು ಆಕ್ಷಣ
ಕಲ್ಲರಸ ಕೊಟ್ಟ ಒಂದಾದ || ೨೦ ||

ಮತ್ತೆ ಮೇಲಾಗಿ ಕರಿಯ ಪಚ್ಚೆಯ ಕಲ್ಲ
ಕೊಟ್ಟನು ಹುಳಿಯಾರ ಮಾರ |
ಗುತ್ತಿಯ ಜಗದಪ್ಪ ಅಂಜಿ ಕೊಟ್ಟನು ಹೆಣ್ಣ
ಒತ್ತಿದ ರಾಮ ರಾಜ್ಯವನು || ೨೧ ||

ಸುತ್ತ[ಣ] ಸೀಮೆಯ ಕಟ್ಟಿ ಬಲ್ಲಿದನಾದ
ಕುತ್ತಿಗುಬ್ಬಸ ನಿಮಗೆಂದ || ೨೨ ||

ಪಗುಡಿಗೆ ಪಚ್ಛಾವ ಕಳುಹಿದ ಪಾವುಗೆಯ
ಜಗದೊಳಗವನು ಮೆಟ್ಟಿದನು ||
ಜಗಳಕ್ಕೆ ಡಿಲ್ಲಿಗೆ ಡಾವೆದಾರು ಆದ
ಹಗರಂವೇನು ಪೇಳುವೆನು || ೨೩ ||

ಅವನೊಳು ಸೆಣಸುವ ರಾಯರ ಕಾಣಿನ್ನು
ಭುವನದೊಳಗೆ ಆಶ್ಚರ್ಯ |
ಹವಣಿಲ್ಲ ಅವನ ಕೊಡೆಯು ಕಾನಝಂಗೆಯು
ಶಿವನ ಒಲುಮೆಯ ಕುಮಾರ || ೨೪ ||

ಇಂತಪ್ಪ ಸುದ್ದಿಯ ಕೇಳುತ ಬಲ್ಲಾಳ
ಚಿಂತೆ ಯಾತಕೆ ನೇಮಿಗೆನುತ |
ಪಂಥವ ತಾಳಿ ಮನದೊಳಗೆ ಕ್ರೋಧವನಿಟ್ಟು
ಇಂತು ಬಿಡಬಲ್ಲೆನೆ ಅವನ || ೨೫ ||

ಗರ್ವವ ಮುರಿದು ಕುಮ್ಮಟವ ಕೈಸೆರೆಯನು
ಉರ್ವಿಯೊಳ್ ಪಿಡಿತಹೆನೆನುತ || ೨೬ ||

ಸುತ್ತಣ ರಾಜರಿಗೋಲೆ ಉಡುಗೊಡೆಗಳ
ಒತ್ತಿ ಬರೆಸಿ ಕಳುಹಿದನು |
ಇತ್ತ ಚರರೋಡಿ ಬಂದು ಎಲ್ಲರು ಕಂಡು
ಇತ್ತರು ವಾಲೆ ಉಡುಗೊರೆಯ || ೨೭ ||

ಓದಿಸಿಕೊಂಡು ಕೇಳಿದರಾಗ ಸುದ್ದಿಯ
ಕಾದುವರುಂಟೆ ರಾಮನೊಳು |
ಭೂದೇವಿ ಬಲ್ಲಳು ಎನುತಲವರು ಬಲ ಎಲ್ಲ
ಆದಂಥ ಕುದುರೆ ಮಂದಿಯನು || ೨೮ ||

ಚಿಪ್ಪಗಿರಿಯಲಿಂದ ಮೊಗಲ ತಾ ಬಂದನು
ಎಪ್ಪತ್ತು ಸಾವಿರ ಕುದುರೆ |
ತಪ್ಪದೆ ಏಳ್ನೂರ ಆನೆ ಸಹಿತವಾಗಿ
ಒಪ್ಪದಿ ಬಲ್ಲಾಳನೆಡೆಗೆ || ೨೯ ||

ಲಾಳ ಮಾಳವ ರಾಯರು ಕೂಡಿ ಮಾತಾಡಿ
ಆಳೊಂದು ಹತ್ತು ಸಾವಿರವು |
ಏಳ್ನೂರು ವಾಜಿ ಎಪ್ಪತ್ತು ಕರಿಗಳು ಸಹ
ಪಾಳೆಯಗಾರರು ಕಳುಹಿದರು || ೩೦ ||

ಮಲೆಯಾಳ ಕೊಂಕಣದೇಶದ ರಾಯರು
ಒಲಿದು ಬಲ್ಲಾಳನ ಮೇಲೆ |
ಸಲೆ ಹತ್ತು ಸಾವಿರ ಬಲವು ಸಾವಿರ ವಾಜಿ
ಬಲವಂತದವರ ಕಳುಹಿದರು || ೩೧ ||

ಅತ್ತ ಓರ್ಗಲ್ಲ ಪ್ರತಾಪರುದ್ರನ ಬಳಿಗೆ
ಮತ್ತೆ ಬಲ್ಲಾಳ ಮುತ್ತಿಗೆಯನು |
ಮಾಡಬೇಕು ಕುಮ್ಮಟಕೆಂದು ಉತ್ರ
ಉಡುಗೊರೆಯ ಕಳುಹಿದನು || ೩೨ ||

ಸಾರಿಹೋದರು ಮಂತ್ರಿಗಳೋರುಗಲ್ಲಿಗೆ
ವೀರ ಪ್ರತಾಪನ ಕಂಡು |
ಬೇಡೆ ಏಕಾಂತವ ಮಾಡಿ ಮಾತಾಡಿದರು
ಧೀರ ಮುಂಗುಲಿರಾಯನ ಬಳಿಗೆ || ೩೩ ||

ಸಾರಿ ಕರೆಸಿದನು ಗುರಿಕಾರ ಎಕ್ಕಟಿಗರ
ಓರುಗಲ್ಲಿಗೆ ಪಯಾಣವೆನುತ |
ಅರುವತ್ತು ಸಾವಿರ ಕುದುರೆಯ [ತಳುವದೆ]
ದೊರೆಯ ಮಕ್ಕಳ ಕಳುಹಿದನು || ೩೪ ||

ಬಿರಿದಿನೆಕ್ಕಟಿಗರು ಮೂವತ್ತು ಸಾವಿರ
ಹರುಷದಿ ಮುಂಗುಲಿರಾಯ |
ಮಗ ಸಿಂಗರಾಯನ ಕೂಡಿಸಿ ಕಳುಹಿದ
ಅಗಣಿತವಾದಂಥ ಪೌಜ || ೩೫ ||

ನಾಳಿನ ದಿನ ದಂಡ ಕೂಚೆಗಳನು ಮಾಡಿ
ಯಾಳಬೇಕೆಂದು ಕುಮ್ಮಟಕೆ |
ದಾಳಿಯ ಮಾಡಿನ್ನು ರಾಮನ ರಾಜ್ಯವ
ಕೋಳ ಹಿಡಿಯಲಿ ಬೇಕು ನಾವು || ೩೬ ||

ಮೊಗಲ ವಜೀರನ ಮಾತುಗಳನು ಕೇಳಿ
ಮಿಗೆ ರುದ್ರರಾಯ ತಾ ನುಡಿದ |
ಜಗಳಕೆ ಪಾಚ್ಛಾನೇಮಿಯು ಮುತ್ತಿ ಕಲ್ಲೊಳು
ನಗುಪಾಟಲಾಗಿ ತಾ ಹೋದ || ೩೭ ||

ಎಂದ ಮಾತನು ಕೇಳಿ ಸಿಂಗಯ್ಯನಾಡಿದ
ಮುಂದೊಂದು ದೊಡ್ಡ ಕೋಟೆಯನು |
ಬಂಧಿಸಿ ಮುತ್ತಿಕೊಂಡರೆ ರಾಮ ಬರುವನು
ಬಂದರೆ ನಾವ್ ಸುತ್ತಿಕೊಂಡು || ೩೮ ||

ಕಡಿಕಡಿದು ರಾಮನ ಕೈಸೆರೆಯನು
ಹಿಡಿದು ಡಿಲ್ಲಿಗೆ ಕಳುಹುವೆನು |
ಬಿಡದೆ ಕುಮ್ಮಟವ ಮುತ್ತಿಗೆಯನು ಮಾಡಿ
ಹಡೆಮುರಿಯನು ಕಟ್ಟಿಕೊಂಡು || ೩೯ ||

ಬೆಳಗೆದ್ದು ಊಟವ ಮಾಡಿನ್ನು ಹೊರಟರು
ಘಳಿಲನೆ ದಂಡು ಕೂಚಾಗಿ |
ಇಳಿಯಿತು ಬಂದು ಗಡಿದುರ್ಗಕ್ಕೆ ಮುತ್ತಿಗೆ
ತಳಿಗಳ ಹಾಕಿದರಾಗ || ೪೦ ||

ಸುತ್ತ ಮುತ್ತಿಗೆ ಮಾಡಿಕೊಂಡು ಬಂದಿಳಿದರು
ಎತ್ತ ನೋಡಲು ಅತ್ತ ಪೌಜು |
ಹತ್ತಿತು ಜಗಳವು ಕೋಟೆಯೊಳಗಳ ಮಂದಿ
ತತ್ತಾರದಲಿ ಹೊರಟು ಕಡಿದು || ೪೧ ||

ನಾಲ್ಕು ಕಡೆಗೆ ದಂಡು ನಾಲ್ಕು ಪೌಜನು ಮಾಡಿ
ನೂಕಿ ಇಳಿಯಿತು ಸುತ್ತಮುತ್ತ |
ಜೋಕೆ ಎಚ್ಚರ ರಾಮನು ಬರುವ ದಾರಿ
ಯೊಳು ಆಕಡೆ ಮೊಗಲ ತಾನಿಳಿದ || ೪೨ ||

ರಾಮನ ಸೀಮೆಗೆ ದಾಳಿಯನಿಕ್ಕುತ
ಗ್ರಾಮಗಳೆಲ್ಲವ ಸುಡುತ |
ಸೀಮೆಯನೆಲ್ಲವ ಸುಡುತ |
ಸೀಮೆಯನೆಲ್ಲವ ಕೈಸೆರೆಯ ಹಿಡಿವುತ
ಧಾಮಧೂಮ ಮಾಡಿ ಸುಡುತ || ೪೩ ||

ಗಡಿದುರ್ಗದೊಳಗಿರ್ದ ಕಾಟನಾಯಕ ತನ್ನ
ಕಡೆಯ ತಳವಾರರ ಕರೆಸಿ |
ಬಿಡದೋಡಿಹೋಗಿ ರಾಮಗೆ ಸುದ್ದಿಯನು ಪೇಳಿ
ತಡೆಯದೆ ಬನ್ನಿ ನೀವೆನಲು || ೪೪ ||

ಎಂದ ಮಾತನು ಕೇಳಿ ಬಂದರು ಚರರೋಡಿ
ನಿಂದರು ರಾಮಯ್ಯನಿದಿರ |
ಅಂದಡ್ಡಬಿದ್ದ ಕೈಮುಗಿದು ವಂದನೆ ಮಾಡಿ
ಬಂದಿತು ಮುತ್ತಿಗೆ ಎನಲು || ೪೫ ||

ಲೆಕ್ಕವಿಲ್ಲದ ದಂಡು ಕೂಡಿ ಬಲ್ಲಾಳನ
ರಕ್ಕಸ ಮೊಗಲ ತಾ ಸಹಿತ |
ಮಿಕ್ಕ ಮಾತಿನ್ನೇನು ಸುತ್ತಣ ರಾಯರು ಕೂಡಿ
ಹೊಕ್ಕರು ನಮ್ಮ ಸೀಮೆಯನು || ೪೮ ||

ಕೇಳಿದ ಸುದ್ದಿಗಳನೆಲ್ಲ ರಾಮಯ್ಯನು
ಹೇಳುವುದೇನು ನೀವು ಹೋಗಿ |
ನಾಳೆ ಹೊರಡುವೆ ಪ್ರಯಾಣವ ಮಾಡಿ
ಕಾಹಳೆಯ ಹಿಡಿಯೆಂದ ಭೂಪ || ೪೯ ||

ಬಂದಂಥ ಚರರಿಗನ್ನವನುಂಡು ಹೋಗೆಂದು
ಒಂದು ನಗಾರಿ ಮಾಡಿಸಿದ |
ನಿಲ್ಲದೆ ತಾನು ಮನ್ನೆಯರ ಬರ
ಹೇಳೆಂದು ಬಂದನು ತನ್ನ[ರ] ಮನೆಗೆ || ೫೦ ||

ಹಿರಿಯ ಹೆಂಡತಿ ರಾಮಲದೇವಿಯ ಕರೆದನು
ಬೆರಸು ಕೊಪ್ಪರಿ ಬಿಸಿನೀರ |
ಭರದಿಂದೆ ಹಾನಗಲ್ಲಿಗೆ ಪ್ರಯಾಣವೆನುತಲಿ
ತರಿಸು ಕಮ್ಮೆಣ್ಣೆ ಕಸ್ತೂರಿಯ || ೫೧ ||

ರಾಯನ ಮಾತ ಕೇಳುತ ರಾಮಲದೇವಿ
ಆಯತವಾಗಿ ತಾ ಬಂದು |
ಬಾಯೆಂದು ಕರೆದು ಕಮ್ಮೆಣ್ಣೆ ಮಂಡೆಗೆ ಊಡಿ
ಪ್ರಿಯದಿಂ ಮಜ್ಜನಗೈದು || ೫೨ ||

ಧೂಳುತವಿಟ್ಟು ನಾಮವನಿಟ್ಟು ರಾಮಯ್ಯ
ಹೋಳಿಗೆ ಮೃಷ್ಟಾನ್ನವುಂಡು |
ಪಾಳೆಗಾರರ ಗಂಡನೆಂಬಂಥ ಬಿರಿದನು
ತೋಳ ಬಾಪುರಿ ಇಟ್ಟ ರಾಮ || ೫೩ ||

ವೀರಜಡೆಯನು ಹೆಣಿಸಿದನು ರಾಮಯ್ಯನು
ಭಾರಿ ನಿಗಳವ ಧರಿಸಿದನು |
ಹಾರ ಮುತ್ತಿನ ಸರ ಕೊರಳ ಪದಕವನಿಟ್ಟ
ಧೀರ ಬಲ್ಲಾಳನಗಂಡ || ೫೪ ||

ಮುಂಗೈಯ್ಯ ಮುರುಡಿ ಸರಪಳಿ ಚವುಕಳಿನಿಟ್ಟು
ಶೃಂಗಾರವಾದ ರಾಮಯ್ಯ |
ಮಂಗಳ ಶುಭವೆಂದು ಗಂಧ ಪರಿಮಳವನು
ಅಂಗನೆಯರು ತಂದು ಪೂಜಿ || ೫೫ ||

ಗಂಧದೆಣ್ಣೆಯ ಕಸ್ತೂರಿ ಜವ್ವಾದಿಯ
ಚಂದದಿ ಧರಸಿ ರಾಮಯ್ಯ |
ಬಂದನು ತಾಯರಮನೆಗಾಗಿ ರಾಮಯ್ಯ
ನಿಂದಡ್ಡಬಿದ್ದ ಕೈ ಮುಗಿದ || ೫೬ ||

ಎಲ್ಲೆಗೆ ಪಯಾಣ ಎತ್ತಲ ರಾಜಕಾರ್ಯವು
ಸೊಲ್ಲಿಸೊ ರಾಮ ಎನ್ನೊಡನೆ |
ಬಲ್ಲಿದ ವೀರಬಲ್ಲಾಳ ಗಡಿದುರ್ಗವ
ನಿಲ್ಲದೆ ಮುತ್ತಿದನಂತೆ || ೫೭ ||

ರಾಮಯ್ಯನಿತ್ತ ಮಾತಾಡುತಲಿರಲಾಗ
ಕೋಮಲೆ ರತುನಿಯ ಬಿಟ್ಟು |
ಭೂಪ ಕಂಪಿಲರಾಯ ಹೊರಟ ಚಿಕ್ಕರಮನೆಯ
ಪ್ರೇಮದೊಳ್ ಹರಿಯಮ್ಮನೆಡೆಗೆ || ೫೮ ||

ಬಂದ ತಂದೆಯ ಪಾದಕೆರಗಿ ರಾಮಯ್ಯನು
ನಿಂದನು ಮು[ಕುಲ] ಹಸ್ತದೊಳು |
ಕಂದಯ್ಯ ವೀರ ಅರಸುಗಳೇನೊ ಅವರು
ಎಂದನು ಕಂಪಿಲಭೂಪ || ೫೯ ||

ಬಲ್ಲಾಳ ಮೊಗಲ ಮುಂಗುಲಿರಾಯನ ಮಗ
ಬಲ್ಲಿದ ಓರುಗಲ್ಲರಸು |
ಎಲ್ಲ ರಾಯರು ಕೂಡಿ ಮಾತಾಡಿ ಗಡಿದುರ್ಗವ
ನಿಲ್ಲದೆ ಮುತ್ತಿದರಂತೆ || ೬೦ ||

ಕರೆಸಿದನಾಕ್ಷಣ ಮಂತ್ರಿ ಬೈಚಪ್ಪನ
ಕರೆಸಿದ ಮಂಚಣ್ಣನವರ |
ಕರೆಸಿದ ಚೇರಮರಾಯನ ಮಕ್ಕಳ
ಕರೆಸಿದ ಅರಸುಮಕ್ಕಳನು || ೬೧ ||

ದೊರೆಯ ಮಕ್ಕಳು ಹಂಪರಾಜ ಕಂಪರಾಜನು
ಹಿಡಿಯ ಕುಮಾರ ಕಾಟಣ್ಣ |
ಕರೆದರಾಕ್ಷಣದೊಳು ಬಂದು ಕೈಮುಗಿಯಲು
ದೊರೆ ಕಂಪಿಲ ಕುಳ್ಳಿರೆಂದ || ೬೨ ||

ವೀರ ಬಲ್ಲಾಳನ ಗಂಡನೆಂಬುವುದೊಂದು
ಭಾರಿ ಪೆಂಡೆಯನಿಟ್ಟು ರಾಮ |
ಸಾರಿ ಮಾನ್ಯರನೆಲ್ಲ ಕರೆಸಿಕೊಂಡನು ಮುಂದೆ
ದೂರಣ ಪಯಣ ಬೈಚಪ್ಪ || ೬೩ ||

ಬಲ್ಲಾಳರಾಯನ ಬಲ್ಲವಲ್ಲದೆ ಮೊಗಲ
ರೆಲ್ಲ ರಾಯರ ಬಲ ಕೂಡಿ |
ಬಲ್ಲಿದ ಮುಂಗುಲಿರಾಯನ ಮಗ ಸಿಂಗ
ನಲ್ಲದೆ ಓರ್ಗಲ್ಲ ಅರಸು || ೬೪ ||

ನೇಮಿಯಪ್ಪಣೆಯಿಂದ ನಾಡದೊರೆಗಳು ಎಲ್ಲ
ಆ ಮಹಾ ಮೊಗಲರು ಸಹಿತ |
ಭೂಮಿ ಈದಂತೆ ಕೂಡಿಬಂದರೆಲ್ಲರು
ರಾಮನ ಮೇಲೆ ದಂಡೆತ್ತಿ || ೬೫ ||

ಊಟವ ಮಾಡಿಸಿ ಎಲ್ಲರನೊಡಗೊಂಡು
ದೂಟಿಸಿ ಬಂದ ಚಾವಡಿಗೆ || ೬೬ ||

ಹರಿಯಲದೇವಿ ಪಾದಕ್ಕೆರಗಿ ರಾಮಯ್ಯ
ಹರಕೆಯ ಕೈಕೊಂಡು ಹೊರಟ |
ತರಹೇಳೊ ಬೊಲ್ಲನ ಪೂಜೆಯ ಮಾಡಿ
ಬರಹೇಳೋ ಮನ್ನೆಯರನೆಲ್ಲ || ೬೭ ||

ಮುತ್ತಿನಂದಣವೇರಿ ಹೊರಟನು ರಾಮಯ್ಯ
ಹತ್ತಿದ ಸದರು ಚಾವಡಿಯ || ೬೮ ||

ಎರಡನೆಯ ಕೂಚೆಯಾಯಿತು ರಾಮ ಹೊರಟನು
ಮುರಹರ ರಾಮೇಶನೆಡೆಗೆ |
ವರಗಳ ಬೇಡಿ ಹೊನ್ನ ಕಾಣಿಕೆನಿಟ್ಟು
ಹೊರ ದಂಡನಿಳಿದ ರಾಮಯ್ಯ || ೬೯ ||

ಕುದುರೆ ಮಂದಿಯಗಣಿತ ಮಾಡಿಕೊಂಡನು
ಮದಗಜ ಹಿಂಡ ಮನ್ನೆಯರ |
ಪದುಳದಿ ಕೂಡಿತು ಇಪ್ಪತ್ತು ಸಾವಿರ
ಕುದುರೆ ಎಪ್ಪತ್ತು ಸಾವಿರವು || ೭೦ ||

ಮೂರು ಕೂಚೆಯ ಮಾಡಿ ಹೊರಟ ರಾಮಯ್ಯನು
ಏರಿದ ಬೊಲ್ಲನ ಬೇಗ |
ಎಡಬಲದಲಿ ಮನ್ನೆಯರು ಕುದುರೆಯ ಪೌಜು
ನಡೆದನು ತಿರುಪಳ್ಳಿಗಾಗಿ || ೭೧ ||

ಕಾಟಣ್ಣಗೊಂದು ಪೌಜನು ಮಾಡಿಕೊಟ್ಟನು
ಮೀಟಾದ ವಾಜಿಯನೆಲ್ಲ |
ಈಟಿ ಬರ್ಚಿಯ ಮಂದಿಯನೆಲ್ಲ ಕೊಟ್ಟನು
ಮೀಟಾದ ಮನ್ನೆಯರನೆಲ್ಲ || ೭೨ ||

ನಾಲ್ಕು ಪೌಜನು ಮಾಡಿ ನಡೆಯೆಂದು ಗುಜ್ಜಲೋಬ
ನಾಲ್ಕು ಬಗೆಯ ರಾಯರುಂಟು |
ನಿಲ್ಲದೆ [ನಡೆಯಿರೋ] ಸೂರ್ಯ ಉದಯಕೆ ನೀವು
ಬಲ್ಲಿದ ಮೊಗಲನ ಮೇಲೆ || ೭೩ ||

ಏರಿ ಬೊಲ್ಲ ರಾಮಯ್ಯ ಬಂದಿಳಿದನು
ನರಗುಂದದ ಹೊಳೆಗಾಗಿ |
ಕರೆಸಿದ ಕಳ್ಳಬಂಟರನೆಲ್ಲ ರಾಮಯ್ಯ
ಬರಹೇಳೋ ನಿನ್ನ ಮನ್ನೆಯರ || ೭೫ ||

ಇರದೋಡಿ ಹೋಗಿ ಗಡಿ ದುರ್ಗದ ಸುದ್ದಿಯ
ತರಹೇಳೊ ಸುದ್ದಿಗಳೆನುತ || ೭೬ ||

ಅಲ್ಲಿಂದ ನಾಲ್ಕೂರು ಪ್ರಯಾಣಕ್ಕೆ ರಾಮಯ್ಯ
ನಿಲ್ಲದೆ ಮುನವಳ್ಳಿಯೊಳಗೆ |
ಬಲ್ಲಿದ ಮನ್ನೆಯರ ಗುಜ್ಜಲೋಬಯ್ಯನ
ಎಲ್ಲರ ಕರೆಸಿ ಬೇಗದೊಳು || ೭೭ ||

ಏಕಾಂತವನಾಡಿ ಎಲ್ಲರು ಕೂಡಿನ್ನು
ಸಾಕಾರವಾದಂಥ ಮಾತ |
ನೂಕಿ ಹೊರಟು ನಾಳೆ ಮುತ್ತಿಗೆ ಎಬ್ಬಿಸಿ
ಹಾಕಿಸೊ ಝಂಡೆಯವೆನುತ || ೭೮ ||

ಉದಯದೊಳೆದ್ದು ಊಟವ ಮಾಡಿ ರಾಮಯ್ಯ
ಸದರ ಡೇಡೆದೊಳು ಕುಳಿತ |
ಚದುರರು ನಾಲ್ಕು ಪೌಜನು ಮಾಡಿ ನ
ಡೆದರು ಚತುರಂಗ ಬಲ ಸಹವಾಗಿ || ೭೯ ||

ಬಿಡದೇರಿ ಬಂದ ಬಾದೂರನಖಾನು ಬಲದಿ
ಎಡವಂಕದಲಿ ಕಾಟಣ್ಣ |
ಕಡೆಯಲ್ಲಿ ಚಾರಮರಾಯನ ಮಕ್ಕಳು
ಮುಂದೆ ದೇಮಯ್ಯನ ಪೌಜು || ೮೦ ||

ಭೇರಿ ನಗಾರಿ ಹೊಯ್ಸುತ ರಾಮಯ್ಯ
ವಾರುವನೇರಿ ನಡೆದನು |
ವೀರ ಬಲ್ಲಾಳನ ಮುಂಜೂಣಿ ಕುದುರೆಯು
ಏರಿತು ರಾಮನ ಮೇಲೆ || ೮೧ ||

ಮುರಿಯಲಿರಿದನು ಮುಂಜೂಣಿಯ ಕಾಟಣ್ಣ
ಬೆರಸಿ ಹೊಯ್ದನು ತಿವಿತಿವಿದು || ೮೨ ||

ಬಂದು ಬಿದ್ದನು ರಾಮನೆನುತ ಬಲ್ಲಾಳ
ಮಂದಿಯನೆಲ್ಲವ ಕರೆದು |
[ಹಿಂದು]ವ ರಾಮನ ಕೈಸೆರೆ ಹಿಡಿಸುವೆ
ನೆಂದನು ರುದ್ರನ ಮುಂದೆ || ೮೩ ||

ಸುತ್ತಳ ಮಂದಿ ಪಾಳೆಗಾರರು ಕೂಡಿತು
ಎತ್ತ ನೋಡಲು ಅತ್ತ ಪೌಜು |
ಕತ್ತಲು ಮುಸುಗಿದಂತಾಯ್ತು ರಾಮನ ಮಂದಿ
ತತ್ತರಗೊ[ಳೆ] ತಮ್ಮೊಳಗೆ || ೮೪ ||

ಆರೆಯ ಚಾರಮರಾಯನ ಮಕ್ಕಳು
ಏರಿದರೆಡ ಬಲದಲ್ಲಿ |
ತೂರುತ ತಲೆಗಳ ತೆಗೆದಿಟ್ಟ ಗಗನಕ್ಕೆ
ತೋರಿಸಿದರು ಸಾಹಸವನು || ೮೫ ||

ಕೋಟೆಯ ಒಳಗಣ ಕಾಟನಾಯಕನ ಮಂದಿ
ಕೋಟಿ ದಂಡಿನ ಮೇಲೆ ಹೊರಟು |
ಲೂಟಿಯ ಮಾಡಿ ತಳಿಗಳ ಕಿತ್ತು ಈಡಾಡಿ
ದಾಟಿ ಮುಂದಕೆ ಒತ್ತಿ ಕಡಿದು || ೮೬ ||

ಇತ್ತ ರಾಮಯ್ಯ ತಾನೊತ್ತಿ ಬಂದನು ಮುಂದೆ
ಒತ್ತರಿಸುತ ಮನ್ನೆಯರ |
ಸುತ್ತಲಿ ಬಲವ ಸವರುತ ಕುಡಿವುತ
ಒತ್ತರವೇನ ಪೇಳುವೆನು || ೮೭ ||

ಮುತ್ತಿಗೆ ತೆಗೆದು ಮುಂದಕೆ ಹೋಗಿ ಬಲವೆಲ್ಲ
ಒತ್ತರದಲಿ ತಾವು ಕೂಡಿ |
ಸುತ್ತಲು ಕವಿದು ಮುತ್ತಿತು ರಾಮನ ದಂಡು
ಎತ್ತ ನೋಡಲು ತೆರಹಿಲ್ಲ || ೮೮ ||

ಬರುವ ಬಲವನು ಕಂಡು ನೋಡಿದ ರಾಮಯ್ಯ
ನಡೆಸಿದ ಬೊಲ್ಲನ ಮೀಟಿ |
ತುಡುಕಿ ಹೊಕ್ಕನು ಪರಬಲದ ಗುಂಪುಗಳು
ಒಡೆಯಲಿರಿದು ಪಡೆ ಸಹಿತ || ೮೯ ||

ಗಾಯವಾದವು ಬಾದೂರಖಾನನಂಬಿನ
ಮಾಯದ ಮಳೆಯಿಂದ ತೊಯ್ದು |
ಪಾಯದಳ ಮುರಿದು ಬರುವದ ಕಂಡು ರಾ
ಮಯ್ಯ ಝೇಯೆಂದು ಬೊಲ್ಲನ ಮೀಟಿ || ೯೦ ||

ಒಂದೆ ವಾದ್ಯದಲಿ ಏರಿದ ರಾಮಯ್ಯನು
ಬಂದನು ಬಾದೂರನಿದಿರ |
ಸಂದೇಹ ಬಡುವಂಥ ಮಂದಿಯ ಸಮಜಾಯಿಸಿ
ಮುಂದಕ್ಕೆ ನೂಕಿದ ಬಲವ || ೯೧ ||

ಹೊಕ್ಕನು ಮಿಸಿಮಿಲ್ಲಖಾನನ ಹೊಡೆದನು
ರಕ್ಕಸ ಮಾದ ಕೂಡಿದನು || ೯೨ ||

ಮಿಸಿಮಿಲ್ಲಖಾನ ಹೊಕ್ಕನು ರಾಮನ ಮೇಲೆ
ಹೆಸರಾದ ದೊರೆಯೆ ನೋಡೆನುತ |
ಮಸೆದಲಗಿನ ಕತ್ತಿಯಲಿ ಬಂದು ಹೊಯ್ದನು
ದೆಸೆಗೆ ಮಾನ್ಯರ ಗಂಡನ ಮೇಲೆ || ೯೩ ||

ಹೊಡೆದ ಪೆಟ್ಟನು ತಪ್ಪಿಸಿಕೊಂಡು ರಾಮಯ್ಯ
ಜಡಿದು ನೆತ್ತಿಯ ಠೌಳಿ ಮೇಲೆ |
ಕಡಿದ ಗಾಯಕೆ ಬೀಳಲು ಆನೆ ಮಲಗಲು
ಹೊಡೆದರು ಶಬರರು ತಲೆಯ || ೯೪ ||

ಸತ್ತನೆ ಶಿವಶಿವ ಮಿಸಿಮಿಲ್ಲಖಾನನು
ಮುತ್ತಿದ ತುರಕರನೆಲ್ಲ |
ಒತ್ತಿ ಕಡಿದು ಹಿಂದಕೆ ಹಾಕಿ ರಾಮಯ್ಯ
ಮತ್ತೆ ತಿರುಗಿದನೆಡಬಲಕೆ || ೯೫ ||

ಬಿದ್ದನು ಮೊಗಲ ವಜೀರನೆನುತಲಿ ರುದ್ರ
ಗದ್ದರಿಸುತ ಹೋಗಲೇರಿ |
ಬಿದ್ದರು ರಾಮನ ಶಬರರು ರುದ್ರರಸು
ಗೆದ್ದೆವೆನುತ ಹೋಗಲೇರಿ || ೯೬ ||

ಒತ್ತಿದ ಚಾರಮರಾಯನ ಮಕ್ಕಳ
ಮುತ್ತಿಕೊಂಡನು ಹಿಂದು ಮುಂದು |
ನೆತ್ತರ ಕಾಲುವೆ ಹರಿಯಿತು ರಣದೊಳು
ಸತ್ತಿತು ರಾಮನ ಬಲವು || ೯೭ ||

ಎಡವಂಕದಲಿ ಬರುತ ಕಂಡ ಕಾಟಣ್ಣನು
ಬಿಡದೆ ಹೊಕ್ಕನು ಅವರ ಮೇಲೆ |
ಕಡಿಯೆ ರುದ್ರರಸು ಗಾಯದೊಳು ಹಿಮ್ಮೆಟ್ಟಿದ
ಒಡನೆ ಸಿಂಗನ ಕಡಿಕೊಂಡ || ೯೮ ||

ಮುರಿದೋಡಿ ಹೋಯಿತು ಮೂಡಣ ದೊರೆಗಳು
ನಡೆದರು ತಮ್ಮ ಪಟ್ಟಣಕೆ |
ತಡೆಯಿಲ್ಲದೆ ಮಂದಿ ಹತ್ತು ಸಾವಿರ ಬಿತ್ತು
ಒಡೆದು ಹೋಯಿತು ಮೊಗಲ ಪೌಜು || ೯೯ ||

ಇತ್ತ ಬಲ್ಲಾಳನು ಒತ್ತಿ ಬರಲು ರಾಮ
ಇತ್ತರದಲಿ ಮನ್ನೆಯರು |
ನೆತ್ತರ ಕಾಲುವೆ ಹರಿವಂತೆ ಕಡಿದಾಡೆ
ಸತ್ತ ಮೊಗಲನ ಸುದ್ದಿ ಕೇಳಿ || ೧೦೦ ||

ಪಡೆಯೆಲ್ಲ ಮುಳುಗಿತು ತಡೆಯದೆ ಬಲ್ಲಾಳ
ನಡೆದಲು ತನ್ನಯ ಪುರಕೆ |
ಬಿಡದೆ ಬೆನ್ಹತ್ತಿ ರಾಮನ ಮನ್ನೆಯರೆಲ್ಲ
ಕಡಿದು ಗದುಮಿತು ಬೇಡಪಡೆಯು || ೧೦೧ ||

ಬಾದೂರಖಾನನು ಕಾಟಣ್ಣನ ಮನ್ನೆಯರು
ಕಾದಿ ಬಂದರು ರಾಮನೆಡೆಗೆ || ೧೦೨ ||

ಒಡೆಯನ ಕಳಕೊಂಡು ಮೊಗಲರು ಹೋದರು
ತಡೆಯದೆ ತಮ್ಮ ಪುರಕಾಗಿ |
ಜಡದೇಹಿ ಗಾಯದಿ ರುದ್ರರಸು [ಸಿಂ]ಗಯ್ಯ
ಕೆಡೆ ಮುರಿದೋಡಿದರವರು || ೧೦೩ ||

ಸುತ್ತ ಮೂರ್ಹರುದಾರಿ ಹೆಣಗಳು ಬಿದ್ದಿತು
ಒತ್ತು ಕೂಗುತ ಬೊಬ್ಬೆಯಿಡುತ |
ಕಾತರತನದಿಂದ ಉಂಡು ದಣಿವು ರಾಮ
ನಾಥನು ಕೊಂಡಾಡುತಿರಲು || ೧೦೪ ||

ಮರುಳು ಭೂತ ಹಿಂಡು ಮರೆಯದೆ ರಾಮನ
ಧರಣೀಶನಹುದೊ ರಾಮಯ್ಯ |
ಸ್ಥಿರವಾಗಿ ಬಾಳು ಅರಿಗಳ ಕೊಂದು ನಮಗಿನ್ನು
ಧರೆಯೊಳು ತೃಪ್ತಿಯ ಮಾಡಿ || ೧೦೫ ||

ಹಿಡಿಸಿದ ಧರ್ಮಗಹಳೆ ರಾಮಯ್ಯನು
ನಡೆಯೆಂದು ಮುಂದಕ್ಕೆ ದಂಡ |
ಬಿಡದೆ ಬೆನ್ಹತ್ತಿ ಹಾನ್ಗಲ್ಲ ಸುತ್ತಮುತ್ತಲಿ
ಬಿಡಿಸಿ ಇಳಿದಾನಲ್ಲಿ ದಂಡ || ೧೦೬ ||

ಬೆದರಿ ಬಂದೂರ ಹೊಹೊಕ್ಕನು ಬಲ್ಲಾಳರಾಯ
ರಾಮನ ಕತ್ತಿಗೆ ಅಂಜಿ |
ಬೆದರಿತು ಪಡೆಯೆಲ್ಲ ಮುಳುಗಿಹೋಯಿತು ಕೆಲವು
ಹದನೇನೊ ನರಸಿಂಗ ಮಂತ್ರಿ || ೧೦೭ ||

ಇಂತಪ್ಪ ರಣಮಯ ನೋಡಲಾರದೆ ಸೂ[ರ್ಯ]
ಅಂತ್ಯವಾದನು ಪಡುಗಡಲ || ೧೦೮ ||

ಬಂದನು ನಮ್ಮ ಪಟ್ಟಣಕೆ ಮುತ್ತಿಗೆ ರಾಮ
ಮಂದೆಲ್ಲ ಸತ್ತು ರಣದೊಳಗೆ |
ಹಿಂದಾದೆವವನೊಳು ಓಡಿಬಂದೆವು ನಾವು
ಕುಂದ ಹೊತ್ತೆವು ಮಂತ್ರೀಶ || ೧೦೯ ||

ಮುಂದಣ ಆಲೋಚನೆ ಹೇಳಿ ಮಂತ್ರೀಶ
ಎಂದು ವೀರಬಲ್ಲಾಳ |
ಇಂದಿಗೆ ಅವನೊಳು ಒಂದಾಗುವುದು ಲೇಸು
ಹಿಂದೆ ನೋಡುವ ರಾಯಕಾರ್ಯ || ೧೧೦ ||

ನರಸಿಂಗರಾಯ ಮಂತ್ರಿ ಹೊರಟುಬಂದನು
ಕರೆಸಿದನವರ ಮನ್ನೆಯರ |
ಬರಮಾಡಿಕೊಂಡು ಕೇಳಿದರವನ ಸುದ್ದಿಯ
ತೆರನೇನು ಮುಂದೆ ಕಾದುವರೆ || ೧೧೧ ||

ಕಡೆಯಲಿ ಮುರಿದೋಡಿ ಬಂದೆವು ಮಂತ್ರೀಶ
ಪಡೆಯೆಲ್ಲ ಸುತ್ತು ಗಾಯಗಳು || ೧೧೨ ||

[ಮಂ]ದೆಲ್ಲ ಅಂದ ಮಾತನು ಕೇಳಿ ಮಂತ್ರೀಶ
ನೊಂದಾಗುವುದು ಲೇಸೆಂದ |
ಮುಂದೆ ನೋಡಿಕೊಂಬ ರಾಜಕಾರ್ಯವನೆಂದು
ಮಂದಿಯ ಸಮಜಾಯ್ಸಿಕೊಂಡ || ೧೧೩ ||

ಬಲ್ಲಾಳರಾಯ ಕಾಗದ ಬರೆಸಿ ಕಳುಹಿದ
ಕಳುಹಿದ ಕೊಡುವೆವು ನಾವು ಕಪ್ಪವನು |
ಕಾದಾಕೆ ಶಕ್ತಿಯು ನಮಗಿಲ್ಲ ರಾಮಯ್ಯ
ಮಂದಿ ಮಾರ್ಬಲವೆಲ್ಲ ಹೋಯ್ತು || ೧೧೪ ||

ಎಂದು ಕಾಗದವ ಕಳುಹಿದನು ಬಲ್ಲಾಳರಾಯ
ನೊಂದು ಚರರು ತಂದುಕೊಡಲು |
ತಂದಂಥ ಕಾಗದವ ನೋಡಿಕೊಂಡು ರಾಮಯ್ಯ
ಹುಸಿನಗೆಗಳ ನಗುತಿರ್ದ || ೧೧೫ ||

ಒಂದು ಬಿಂದಿಗೆ ಹೊನ್ನ ಪಚ್ಚೆವರ್ಣದ ಶ್ಯಾಲೆ
ತಂದುಕೊಂಡ ಹೇಳೊ ಗುಜ್ಜಲೋಬ |
ಮುಂದೆರಡು ಹಿಡಿದೇಜಿ ತಂದುಕೊಟ್ಟಲ್ಲದೆ
ಒಂದಾಗುವುದು ಇಲ್ಲವೆಂದ || ೧೧೬ ||

ಎಂದ ಮಾತನು ಕೇಳಿ ಮುಂದಾಲ ಬೊಮ್ಮಯ್ಯ
ಹಿಂದಕೆ ಬಂದು ಹೇಳಿದನು || ೧೧೭ ||

ಕೇಳಿದ [ನರ]ಸಿಂಗರಾಯನು ಬಂದು
ಹೇಳಿದ ರಾಯನ ಕೂಡೆ |
ಹೇಳುವುದೇನು ಕೇಳಿದುದ ಕೊಟ್ಟು ಕಳುಹೊ
ಕೋಳುಹೋಯಿತು ದೊರೆತನವು || ೧೧೮ ||

ಪಚ್ಚೆದ ಸೀರೆಯು [ಬಿಂದಿ]ಗೆ ಹೊನ್ನು ಹಿಡಿದೇಜಿ
ರಚ್ಚೆ ಗಿಕ್ಕದೆ ತಂದುಕೊಟ್ಟ |
ಮೆಚ್ಚಿಸಿ ರಾಂಗೆ ಮುತ್ತಿನ ತುರಾಯವ
ಎಚ್ಚತ್ತು ಕಳುಹಿದ ಅರಸ || ೧೧೯ ||

ಆ ಮಹಾ ಮೊಗಲ ವಜೀರರ ಕೆಡಹಿದ
ನೇಮದಿ ಕೊಂದ ಖಾನರನು || ೧೨೦ ||

ಓರುಗಲ್ಲರಸಗೆ ಬರುಗಾಯವಾಯಿತು
ಜಾರಿಹೋದನು ಸಿಂಗನೊಡನೆ |
ಧಾರುಣಿಯೆಲ್ಲ ರಕ್ತದ ಮಳೆಯಾಯಿತು
ಸೂರೆಯಾಯಿತು ರಣರಂಗ || ೧೨೧ ||

ಬಾದೂರಖಾನಗೆ ಬಲು ಗಾಯವಾಯಿತು
ಜಾರಿಹೋದನು ಸಿಂಗನೊಡನೆ |
ಧಾರಿಣಿಯಲ್ಲಿ ಅಬ್ದೂಲಖಾನನು ಬಿದ್ದ ಹೊಳಕೆಯ
ಬಂಟರು ಮುಳುಗಿಹೋಯಿತು ರಾಯ
ಎಣಿಕೆಯನೇನ ಪೇಳುವೆನು || ೧೨೨ ||

ಭಾವ ಸಂಗಮದೇವ ದೇವಿಸೆಟ್ಟಿಯ ಲಿಂಗ
ಕೋವಿದ ಕೊಟಗರ ದ್ಯಾವ |
ಜೀವಕೆ ಭಯವಿಲ್ಲ ಹುಸಿಗಾಯವಾದವು
ದೇವರ ದಯವುಂಟು ನಮಗೆ || ೧೨೩ ||

ಪಟ್ಟಣವನು ಶೃಂಗರಿಸು ಗುಡಿ ತೋರಣ
ಕಟ್ಟಿಸೊ ಸಾಲು [ಬು]ರುಜಗಳ |
ಪಟ್ಟದರಸು ರಾಮ ಬರುವಂಥ ದಾರಿಗೆ
ದೃಷ್ಟಿ ನಿವಾಳಿಯ ತರಿಸೊ || ೧೨೪ ||

ಪೊಡವೀಶ ಕಂಪಿಲ ಹೊರಟುಬಂದನು ಬೇಗ
ಹಿಡಿದವು ಜೋಡು ಕರ್ಣೆಗಳು |
ತಂದೆದ್ದು ಬರುವ ರಭಸವ ಕೇಳಿ ರಾಮಯ್ಯ
ನಿಂದನು ತಾನೆದ್ದು ಬೇಗ || ೧೨೫ ||

ಇರದೆದ್ದು ಪೋಗಿ ತಂದೆಯ ಪಾದಕೆರಗಿದ
ಒದಗಿ ಕೈಪಿಡಿದೆತ್ತಿ ಮಗನ || ೧೨೬ ||

ರಾಮ ಕಂಪಿಲ[ರೆ]ದ್ದು ಬಂದರು ಹಂಪೆಯ
ಸ್ವಾಮಿ ಪೊಂಪಾಪತಿಯೆಡೆಗೆ |
ಆ ಮಹಾ ವಿರೂಪಾಕ್ಷಗಡ್ಡಬಿದ್ದರು ಆಗ
ಕ್ಷೇಮವ ಕೇಳುತಲವರು || ೧೨೭ ||

ಹಿಡಿಹೊನ್ನ ಕಾಣಿಕೆಗಳನಿಟ್ಟು ಸ್ವಾಮಿಗೆ
ಪೊಡವೀಶರಡ್ಡಬಿದ್ದರಾಗ |
ಒಡನೆದ್ದು ಗಂಧ ಪ್ರಸಾದವ ಕೈಕೊಂಡು
ನಡೆದರು ಕುಮ್ಮಟಕಾಗಿ || ೧೨೮ ||

ತಂದೆ ಮಕ್ಕಳು ಕೂಡಿ ಒಂದಾಗಿ ಬಂದರು
ಮಂದಿ ಮಕ್ಕಳ ಕೂಡಿಕೊಂಡು || ೧೨೯ ||

ಒಡನೆ ಬೈಚಪ್ಪನ ಕೂಡೆ ಮಾತಾಡುತ
ನಡೆದರು ರಾಮೇಶನೆಡೆಗೆ |
ಹಿಡಿಹೊನ್ನ ಕಾಣೀಕೆನಿಕ್ಕಿ ರಾಮೇಶಗೆ
ಪೊಡವೀಶ ತಾನಡ್ಡಬಿದ್ದ || ೧೩೦ ||

ಗಂಧ ಪ್ರಸಾದವ ಕೈಕೊಂಡು ರಾಮಯ್ಯ
ಬಂದನು ಊರ ಬಾಗಿಲಿಗೆ |
ನಿಂದಲ್ಲಿ ಕುರಿಗಳ ಹೊಯ್ಸಿ ನಿವಾಳಿಯ
ಮುಂದಕ್ಕೆ ನಡೆದ ರಾಮಯ್ಯ || ೧೩೧ ||

ಮಂಗಳ ನೀಲನ ಏರಿದ ರಾಮಯ್ಯ
ಶೃಂಗಾರ ಬಾಜಾರದೊಳಗೆ |
ಮಗ ಬರುವದ ಕಂಡು ಹರಿಯಲದೇವಿಯು
ಅಗಣಿತ ಹೆಮ್ಮಕ್ಕಳೊಡನೆ || ೧೩೨ ||

ಮಿಗೆ ಹರುಷದೊಳೊಂದು ಮುತ್ತಿನಾರತಿ ಎತ್ತಿ
ಬಿಗಿಯಪ್ಪಿ ಮಗನ ಮುಂಡಾಡೆ |
ಎರಡು ಪಾದಕ್ಕೆ ಎರಗಲು ಹರಿಯಮ್ಮ
ಹರಸುತ ಕರವಿಡಿದೆತ್ತಿ || ೧೩೩ ||

ತಂದೆ ಮಕ್ಕಳು ಕೂಡಿ ಬಂದರು ಸದರಿಗೆ
ಮಂದಿಮಕ್ಕಳ ಕೂಡಿಕೊಂಡು |
ನಿಲ್ಲದೆಲ್ಲರನು ಮನ್ನಿಸಿ ಅಪ್ಪಣೆಕೊಟ್ಟು
ಬಂದನು ತನ್ನರಮನೆಗೆ || ೧೩೪ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಸದೆದು ಬಲ್ಲಾಳನ ಕೂಡೆ ಕಪ್ಪವ ತಂದು
ಒದಗಿ ಮಂತ್ರಿಯೊಳು ತಾ ಕೊಟ್ಟ || ೧೩೫ ||

ತಂದೆಗೊಪ್ಪಿಸು ಎಂದು [ಹಿಂ]ದುವ ರಾಮಯ್ಯ
ಮಂದಿರದೊಳು ಸುಖವಿರಲು |
ತಂದು ಕಂಪಿಲನ ಮುಂದಿಟ್ಟ ಬೈಚಪ್ಪನು
ಸಂಧಿ ಅಲ್ಲಿಗೆ ಪೂರಾಯ್ತು || ೧೩೬ ||

ಅಂತು ಸಂಧಿ ೧೩ಕ್ಕಂ ಪದನು ೧೩೫೫ಕ್ಕಂ ಮಂಗಳ ಮಹಾಶ್ರೀ