ಶ್ರೀ ಗಿರಿಜಾ [ಸ್ಯಾಂಜುಜ ದಿನ] ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ರಾಮ ಜಟ್ಟಂಗಿದೇವರ ಪಿಂಡ ರಾಮಯ್ಯ
ರಾಮನ ಕೃತಿಯ ಪೇಳುವೆನು |
ರಾಮರಾಮಾ ಎಂಬ ನಾಮವ ನೆನೆದರೆ
ಕಾಮಿತ ಫಲವೀವ ರಾಮ || ೨ ||

ಬಂದ ನೇಮಿಯಖಾನನ ದಂಡನೆಲ್ಲವ
ಹಿಂದು ಮುಂದನೆ ಮಾಡಿ ಕಡಿದು |
ಕೊಂದು ರಣದೊಳು ಸೂರೆಮಾಡಿದ ರಾಮಯ್ಯ
ಮುಂದಣ ಕಥೆಯ ಪೇಳುವೆನು || ೩ ||

ಅಷ್ಟದಿಕ್ಕಿನಲಿ ಇಳಿದುದು ಸುತ್ತಮುತ್ತಲು
ಮುತ್ತಿಗೆ ಕುಮ್ಮಟಕಾಯ್ತು |
ಎತ್ತ ನೋಡಲು ದುರ್ಗ ಕಣಿವೆ ಮಲೆಗಳೊಳು
ಬಿತ್ತರಿಸುತ ಖಾನರೆಲ್ಲ || ೪ ||

ಅಷ್ಟದಿಕ್ಕಿಲಿ ದಂಡು ಬಂದು ಇಳಿಯಿತೆಂದು
ಸುತ್ತಣ ಹಳ್ಳಿಪಳ್ಳಿಗಳು |
ಮತ್ತೊಡೆದು ಬಂದು ಕುಮ್ಮಟ ಹೊಕ್ಕು ಕಂಪಿಲಗೆ
ಒತ್ತಿ ಸುದ್ದಿಯನು ಪೇಳಿದರು || ೫ ||

ದಂಡು ಬಂತೆಂಬ ಸುದ್ದಿಯ ಕೇಳಿ ರಾಮಯ್ಯ
ಉಂಡು ಹೊರ ಚಾವಡಿಯೊಳಗೆ |
ಢಂಢಾಮ ಢಮ ಎಂದು ಹೊಯ್ಸಿ ನಗಾರಿಯ
ಮಂಡಲಪತಿ ಹೊರಹೊಂಟ || ೬ ||

ಕರೆಸಿ ತನ್ನಯ ಮಂದಿ ಮಕ್ಕಳೆಕ್ಕಟಿಗರ
ಬಿರಿದಂಕ ಮನ್ನೆಯರನೆಲ್ಲ |
ಹರುಷದಿ ಗಂಧ ಪರಿಮಳವನು ಕೊಟ್ಟಿನ್ನು
ತುರುಕರ ದಂಡಿನ ಮೇಲೆ || ೭ ||

ಬೊಬ್ಬೆಯಬ್ಬರಗಳು ಹತ್ತಿ ಕುಮ್ಮಟದೊಳು
ಇಬ್ಬಾಗವಾಯ್ತು ಪಟ್ಟಣವು |
ಗಬ್ಬಿ ರಾಮನ ಮನ್ನೆಯರೆಲ್ಲ ಕೂಡಿದರು
ಉಬ್ಬಿ ಹಿಡಿದರು ವೀಳ್ಯಯವ || ೮ ||

ಮರ ಬಿಲ್ಲು ಕತ್ತಿ ಈಟಿಯ ಬಾಣ ಪೆಟ್ಟಲು
ಬರುಚಿ ಕಠಾರಿ ಕೈಯಂಬು |
ಸರಸದಿ ಆನೆ ಕುದುರೆ ಕಾಲ್ಬಲ ಮಂದಿ
ಅರುವತ್ತು ಸಾವಿರ ಕೂಡಿ || ೯ ||

ಧರೆಯೊಳು ಕುಮ್ಮಟದರಸಿನ ಕಾರ್ಯಕ್ಕೆ
ಹರುಷವ ತಾಳಿ ಮನದೊಳಗೆ |
ಚಾರಮರಾಯನ ಮಕ್ಕಳ ಕರೆಸಿದ |
ಆರು ಸಾವಿರ ಕುದುರೆ ಪೌಜ || ೧೦ ||

ಧೀರರು ಹೋಗಿ ದಂಡಿಗೆ ನೀವು ಇದಿರೇರಿ
ಸ್ವಾರಿಯ ಮಾಡಬೇಕೆಂದ || ೧೧ ||

ಕೊಟ್ಟನು ರಾಮಯ್ಯ ತಬಕಿಲಿ ವೀಳ್ಯವ
ಬಿಟ್ಟನು ದಂಡಿಗೆ ಇದಿರ |
ಬೆಟ್ಟವ ಸುತ್ತಿ ಹೋಯಿತು ಕುದುರೆಯ ಪೌಜು
ನೆಟ್ಟನೆ ನೇಮಿ ಎಲ್ಲೆನುತ || ೧೨ ||

ಚಾರಮರಾಯನ ಮಕ್ಕಳಿಬ್ಬರು ಕೂಡಿ
ಆರು ಸಾವಿರ ಕುದುರೆಯಲಿ |
ದಾರಿಯ ಪಿಡಿದು ಬರುವಂಥ ಗುನುಗನು
ಸೂರೆಯ ಮಾಡಿನ್ನು ಸುಲಿದು || ೧೩ ||

ಮುನ್ನೂರು ಪೌಜಿಯ ಕೈಸೆರೆ ಹಿಡಿದರು
ಹನ್ನೊಂದು ಆನೆಯ ತೆಗೆದು |
ಚೆನ್ನರಾಮಯ್ಯನ ಬಳಿಗೆ ಬಂದು ಒಪ್ಪಿಸಿ
ಉನ್ನತ ಹರುಷದೊಳವರು || ೧೪ ||

ಗಡಿಯ ಕಾಲವ ಕಾವ ಕಾಟನಾಯಕ ಹೋಗಿ
ಕಡೆಯಕಲ್ಲನು ನೀನು [ಸೂ]ರೆ |
ಬಿಡಬೇಡ ಬರುವಂಥ ಖಾನರನವ
ಕಡಿದು ಹಿಂದಕೆ ಹಾಕೊ ನೀನು || ೧೫ ||

ಒಡೆಯನ ಮಾತ ಕೇಳುತ ಕಾಟನಾಯಕ
ತಡೆಯದೆ ವೀಳ್ಯವ ಹಿಡಿದು |
ಒಡನೊಂದು ಸಾವಿರ ಮಂದಿಯ ಕರಕೊಂಡು
ಬಿಡದೆ ಹತ್ತಿದ ಕಡೆಯಕಲ್ಲ || ೧೬ ||

ಕಣಿವೆಯ ಕಟ್ಟಿ ಬರುವಂಥ ಖಾನರನೆಲ್ಲ
ಭಿನ್ನವಿಲ್ಲದೆ ಕೊಂದನವರ || ೧೭ ||

ಐವತ್ತು ನೂರು ಕುದುರೆಯ ಹಿಡಿದುಕೊಂಡರು
ಬೈಗಿನ ಹೊತ್ತಿಗೆ ಬಂದು |
ಸೈಮಾಡಿ ಒಪ್ಪಿಸಿ ಒಡೆಯ ರಾಮಯ್ಯಗೆ
ಕೈಯ ಮುಗಿದರು ಮನ್ನೆಯರು || ೧೮ ||

ಮಲೆಯ ಕಾವಲ ಕಾವ ಹೊಲೆಯರ ಹೊನ್ನುಗ
ಸಲೆ ಕೋಡ್ಗಲ್ಲ ನೀನೇರೊ |
ಒಳಹೊಕ್ಕು ಬಾಹಂಥ ಖಾನ ವಜೀರರ
ಬಲಿಯನಿಕ್ಕಿಸೊ ಕಣಿವೆಯೊಳಗೆ || ೧೯ ||

ಪಟ್ಟಿ ವೀಳ್ಯವ ಕೊಟ್ಟು ಅಟ್ಟಿದನಲ್ಲಿಗೆ
ಬಿಟ್ಟು ಸೂಟಿಯನವರು ಹೋಗಿ |
ನೆಟ್ಟನೆ ಕೋಡ್ಗಲ್ಲನೇರಿ ನೋಡಿದರಾಗ
ಬಿಟ್ಟಿಹ ದಂಡಿನ ಸೊಬಗ || ೨೦ ||

ಒಳಹೊಕ್ಕು ಬರುವಂಥ ಕುದುರೆ ಖಾನರನೆಲ್ಲ
ಒಳಿತಾಗಿ ಹೊಗಬಿಟ್ಟುಕೊಂಡು |
ಇಳಿದರು ಕಲ್ಲಿನ ಸುತ್ತಡ್ಡಗಟ್ಟಿಕೊಂಡು
ಬಳೆಯ ಹೇರನು ಒಡೆವಂತೆ || ೨೧ ||

ಕಡಿದು ಕಡಿದು ಒಟ್ಟಿ ತಲೆಗಳ ಮಲೆಯೊಳು
ಅಟ್ಟಿ ಹಿಂದಕೆ ಹಾಕಿದರು |
ಕೊಟ್ಟದ ಬೇಡರು ಕೂಡಿ ಕುದುರೆಗಳ ಹೊಯ್
ದೊಟ್ಟಿ ಕೆಡಹಿದರು ರಾವುತರ || ೨೨ |

ನೂರೊಂದು ಕುದುರೆಯ ಆರಿಸಿ ಹಿಡಿದರು
ಸೂರೆ ಮಾಡಿದರು ಅರಿಬಲವ |
ಕಾರಣಿಕದ ರಾಮಯ್ಯಗೊಪ್ಪಿಸಿದರು
ಧೀರರು ಕೈಮುಗಿದರಾಗ || ೨೩ ||

ಬೆಟ್ಟದ ಸಿಂಗನಾಯಕಗೊಂದು ವೀಳ್ಯವ
ಕೊಟ್ಟನು ನಗುತ ರಾಮಯ್ಯ |
ಹಟ್ಟಿಕಾರರು ಹಳ್ಳಿಕಾರರ ಕೂಡಿಸಿ
ನೆಟ್ಟನೆ ಹಿರಿಯ ಕಣಿವೆಗೆ || ೨೪ ||

ಜಡಿದೇರಿ ಬರುವಂಥ ದೊಡ್ಡ ಪೌಜನು ಕಂಡು
ಕಡೆಯ ಕಣಿವೆಯ ಕಟ್ಟಿದರು |
ಸುತ್ತಡ್ಡಗಟ್ಟಿಕೊಂಡರು ದೊಡ್ಡ ಪೌಜನು
ಮುತ್ತಿಕೊಂಡರು ಅಡವಿಯೊಳಗೆ || ೨೫ ||

ಎತ್ತ ನೋಡಲು ಅಂಬಿನ ಮಳೆ ಗಾಯದಿ
ಸತ್ತ ಖಾನರು ಲೆಕ್ಕವಿಲ್ಲ || ೨೬ ||

ಸಾವಿರದೇಳ್ನೂರು ಮಂದಿಯ ಕೊಂದರು
ಗಾಯಾದ ಮಂದಿ ಕಡೆಯಿಲ್ಲ |
ಆವಿನ ಹಿಂಡು ಬೆದರಿದಂತೆ ತುರುಕರ ದಂಡು
ನೋವಿಂದ ಹಿಂದಕ್ಕೋಡಿದರು || ೨೭ ||

ಅರವತ್ತು ಕುದುರೆಯ ಹಿಡಿಕೊಂಡರಾಕ್ಷಣ
ಧರ್ಮಗಾಳೆಯ ಹಿಡಿಸುತಲಿ |
ಭರದಿಂದ ಬಂದು ರಾಮಯ್ಯಗೆ ಒಪ್ಪಿಸಿ
ಕರಗಳ ಮುಗಿದು ಮನ್ನೆಯರು || ೨೮ ||

ಹೊಳೆಯ ದಂಡೆಯ ಹಿಡಿದು ಬರುವಂಥ ದಂಡನು
ಇಳಿಯ ಹೊಡೆದು ಹಿಂದಕಟ್ಟಿ || ೨೯ ||

ಗೊಂದಿಯ ಕಣಿವೆಯ ಸುತ್ತಡ್ಡಗಟ್ಟಿದ
ಬಂಧೀಸಿ ತನ್ನ ಮಂದಿಯನು |
ಬಂದಂಥ ಖಾನರ ಕಟ್ಟಿದೊಟ್ಟಿದ ಮಾಚ
ಸಂಧಿನೊಳ್ ಹಿಡಿದ ವಾಜಿಗಳ || ೩೦ ||

ಇನ್ನೂರು ಕುದುರೆಯ ಕೈಸೆರೆಯ ಹಿಡಿದನು
ಚೆನ್ನಿಗ ರಾಮನ ಬಳಿಗೆ || ೩೧ ||

ಮಂದಿಯನೊಯ್ಯಗೊಡದೆ ಗುಜ್ಜಲ ಓಬ
ತಂದೆಯ ಕಾಲದ ಹಳಬ |
ಇಂದಿನ ಕಾರ್ಯವೆಷ್ಟುಂಬು ಅಷ್ಟನೆ ಮಾಡಿ
ಹಿಂದಕ್ಕೆ ತಿರಿಗಿ ಬಾಯೆಂದ || ೩೨ ||

ಎಲ್ಲರಿಗೊಂದೊಂದು ಪಟ್ಟಿ ವೀಳ್ಯವ ಕೊಟ್ಟು
ನಿಲ್ಲದೆ ಹೋಗಿ ನೀವೆನುತ |
ಬಲ್ಲಿದ ರಾಮಯ್ಯ ಕಳುಹಲು ಮಾನ್ಯರು
ಎಲ್ಲರು ತೆರಳಿ ಸಾಗಿದರು || ೩೩ ||

ಎಮ್ಮೆಯಗುಟ್ಟಕ್ಕೆ ಹತ್ತಿ ತೋವರನಿಟ್ಟು
ಹೆಮ್ಮೆಯ ತುರುಕರು ಬರುವಾಗ |
ಗಮ್ಮನೆ ದಾರಿಯ ಕಟ್ಟಿ ಅವರನಟ್ಟಿ
ದಮ್ಮನೆ ದಣಿಸಿ ಕೊಲ್ಲುತಲಿ || ೩೪ ||

ಆರುಸಾವಿರ ಬಲ ಕೂಡಿತು ಅಲ್ಲಿಗೆ
ದಾರಿದಾರಿಯ ಕಟ್ಟಿಕೊಂಡು |
ದೂರಕರು ಘೋರಡವಿಯನೆ ಬಿದ್ದು
ದಾರಿಯರಿಯದೆ ಅಡೆಯೆದ್ದು || ೩೫ ||

ಮನ್ನಾಲ ಮಾಚನು ತನ್ನ ಮಂದಿಯ ಕೂಡಿ
ಮುನ್ನೂರು ಬಿಲ್ಲು ಈಟಿಗಳು |
ಚೆನ್ನಾಗಿ ಇರಿದಿರಿದು ನೂಕುತ ಕುದುರೆಯ
ಚೆನ್ನಾಗಿ ರಾಮಗೊಪ್ಪಿಸುತ || ೩೬ ||

ಒಕ್ಕಲಿಗರ ಮುದ್ದ ಹೊಕ್ಕನು ರಣದೊಳು
ಸೊಕ್ಕಾನೆ ಹಿಂಡನು ಕಂಡು |
ಗಕ್ಕನೆ ನಿಂತು ಮುಂದನೆ ಬರಲೀಸದೆ
ಸಿಕ್ಕಿದವೆಲ್ಲವ ಕಡಿದ || ೩೭ ||

ಖಾನಖಾನರನೆಲ್ಲ ಕಡಿದು ಹಿಂದಕೆ ಹಾಕಿ
ತಾನೊಂದು ನೂರು ವಾಜಿಯನು |
ಮಾನದಿ ತಂದು ರಾಮಯ್ಯಗೆ ಒಪ್ಪಿಸಿ
ಖಾನರ ಗಂಡನೆಂದೆನುತ || ೩೮ ||

ಆನೆಯಕಲ್ಲಿಗಾತುಕೊಂಡರು ಶರಬರು
ಮೌನದೊಳಡಗಿಕೊಂಡಿಹರು |
ಜಾಣ ಖಾನನು ಒಪ್ಪಿ ಬರುವ ದಾರಿಯ ಕಟ್ಟಿ
ಮೀನಿಗರ ಲಕ್ಕ ಹೊಕ್ಕಿರಿದ || ೩೯ ||

ರಕ್ಕಸ ಮಾದನು ಬುಕ್ಕನ ಪಾಲನು
ಹೊಕ್ಕು ಖಾನರ ಮೇಲೆ ಇರಿದ || ೪೦ ||

ಮಾದಿಗ ಹಂಪನು ಕೋಟಿಗರ ದ್ಯಾವನು
ಆದವನ್ನಿಯ ಗಿರಿಯನವ[ನು] |
ಸಂಧಿಸಿ ಹೊಕ್ಕು ತಲೆಗಳನು ಚಂಡಾಡಿದ ವಿ
ನೋದವನೇನ ಬಣ್ಣಿಸುವೆ || ೪೧ ||

ಎಲ್ಲ ಮಾನ್ಯರು ಕೂಡಿ ಕಣಿವೆಗಳನು ಕಟ್ಟಿ
ಬಲ್ಲಂತೆ ಕಾರ್ಯಮಾಡಿದರು |
ಮೆಲ್ಲನೆ ಹತ್ತುಸಾವಿರ ತುರುಕರ ಕೊಂದು
ಉಲ್ಲಾಸದಲಿ ತಿರುಗಿದರು || ೪೨ ||

ಮುನ್ನೂರು ಕುದುರೆ ಮುವತ್ತಾನೆ ಕೈಸೆರೆ
ಹನ್ನೊಂದು ಮಂದಿ ಖಾನರನು |
ಚೆನ್ನಾಗಿ ರಾಮಗೊಪ್ಪಿಸಿ ಕೈಮುಗಿದರು
ಮನ್ನೆಯರೆಲ್ಲ ಒಂದಾಗಿ || ೪೩ ||

ಹೊತ್ತು ಹೋಯಿತು ಕತ್ತಲಾಯಿತು ಅಲ್ಲಿಗೆ
ಸುತ್ತ ಹೋಗಿರ್ದವರೆಲ್ಲ |
ಮೊತ್ತದಿ ಬಂದು ರಾಮಯ್ಯಗೆ ಕೈಮುಗಿದು
ಒತ್ತಿ ನಿಂದರು ಎಡಬಲದಿ || ೪೪ ||

ಮಂದಿಯ ಹಾವಳಿ ಘನವಾಗಿ ತೋರಿತು |
ನೊಂದುಹೋದರು ತುರುಕರೆಲ್ಲ || ೪೫ ||

ಹತ್ತೆಂಟು ಸಾವಿರ ಲಕ್ಷ ವಾಜಿಯ ಬಲವು
ಹೊತ್ತು ಮುಳುಗಿತ್ತು ಒಂದಿನಕೆ |
ಚಿತ್ತೈಸು ನೇಮಿ ಬೇಡರ ಪಡೆ ಹೆಚ್ಚಿತ್ತು
ಎತ್ತ ನೋಡಲು ಕಲ್ಲು ಮುಳ್ಳು || ೪೬ ||

ಹಿಂದೆ ಬಾಹಂತ ಗುನುಗನೆಲ್ಲ ಸವರಿದರು
ಮಂದಿ ಮಕ್ಕಳನೆಲ್ಲ ಕಡಿದ |
ಹೊಂದಿ ಬಾಹಂತ ಖಾನರನೆಲ್ಲ ಕಡಿದರು
ಒಂದು ದಿನದ ಕಾಳಗಕೆ || ೪೭ ||

ನೊಂದುಕೊಂಡನು ನೇಮಿ ಮನದೊಳು ಚಿಂತಿಸಿ
ಮುಂದೆ ಹೋಗುವ ತೆರ ಹೇಗೆ |
ಬಂಧಿಸಿ ರಾಮನ ಹಿಡಿವೊರೆ ಆಶ್ಚರ್ಯ
ವೆಂದನು ತನ್ನ ಮನದೊಳಗೆ || ೪೮ ||

ಇಂದಿನ ದಿನ ನಮ್ಮ ಬಲವೆಲ್ಲ ನೊಂದಿತು
ಮುಂದೆ ರಾಮನ ಬಲ ಕೂಡಿ |
ಸಂದುಸಂದುಗಳ ಗೊಂದಿ ಕಣಿವೆಯ ಕಟ್ಟಿ
ಹೊಂದಲೀಸರು ಕುಮ್ಮಟಕೆ || ೪೯ ||

ನಾಳಿನ ದಿನದಲ್ಲಿ ಏಳಬೇಕೆಲೊ ದಂಡು
ಧೂಳಿಗೋಟೆಯ ಮಾಡಬೇಕು |
ಕೋಳ ಹಿಡಿದು ಕುಮ್ಮಟವ ಮುತ್ತಲಿ ಬೇಕು
ಪಾಳೆವ ನಾವಿಳಿಯಬೇಕು || ೫೦ ||

ಬೆಳಗಾದರೆ ಕೂಚೆಯ ಮಾಡಿಸಿ ದಂಡ
ಮೇಳೈಸಿ ಮುತ್ತ ಕಳುಹಿದನು |
ಕಾಳಗವನು ಮಾಡಿ ಹೊಕ್ಕು ಕುಮ್ಮಟವನು
ಮೇಳೈಸಿ ಮುತ್ತಲು ಬೇಕು || ೫೧ ||

ಬಂದ ಖಾನರಿಗೆಲ್ಲ ಒಂದು ವೀಳ್ಯವ ಕೊಟ್ಟು
ಅಂದದೊಳವರ ಕಳುಹಿದನು |
ಮುಂದೆ ಮಾಡುವ ಕಾರ್ಯದ ಆಲೋಚನೆಯಿಂದ
ಹೊಂದಿ ಮಲಗಿದ ನೇಮಿಖಾನ || ೫೨ ||

ಇತ್ತ ರಾಮನು ತನ್ನ ಮಂದಿ ಮಕ್ಕಳ ಕರೆಸಿ
ಮುತ್ತಿಗೆ ಬರುವುದು ನಾಳೆ |
ಒತ್ತರಿಸಿ ತುರುಕರು ಬರುವರು ನಿಲ್ಲದೆ
ಒತ್ತಿ ಹಿಡಿಯಲಿಬೇಕು ನಾವು || ೫೩ ||

ಬರುವಂಥ ದಾರಿ ಕಣಿವೆಗಳ ಕಟ್ಟಿರಿ ನೀವು
ದೊರೆ ಮಕ್ಕಳೆಲ್ಲರು ಸಹಿತ |
ಇರದೆ ನೀವು ಹೋಗಿ ಹನ್ನೆರಡು ಸಾವಿರ ಬಲ
ನೆರೆದಂಥ ಮನ್ನೆಯರೆಲ್ಲ || ೫೪ ||

ಸಂಜೆಯ ಊಟವನುಂಡು ನೀವ್ಹೋಗಿರೋ
ಗಂಡಿ ಕಣಿವೆಗಳೊಳು ಇಳಿದು |
ದಂಡು ಬರುವುದ ನೋಡಿ ಕಂಡು [ಹೇ]ಳಿರೋ ಎಂದು
ಗಂಡುಗಲಿಗಳಿಗೆ ಪೇಳಿದನು || ೫೫ ||

ಅಂದಿನ ವಾಲಗ ಹರಿಯಿತು ರಾಮಯ್ಯ
ತಂದೆಯ ಬಳಿಗೆದ್ದು ಬಂದ |
ವಂದಿಸಿ ಕರಗಳ ಮುಗಿದು ಬಿನ್ನೈಸಿದ
ಅಂದಿನ ರಾಜ್ಯಕಾರ್ಯವನು || ೫೬ ||

ಕೊಂದರು ನಮ್ಮ ಮನ್ನೆಯರು ಕಣಿವೆಯ ಕಟ್ಟಿ
ನೊಂದಿತು ನೇಮಿಯ ಬಲವು |
ಸಂದು ಹೋಯಿತು ಹತ್ತು ಸಾವಿರ ಖಾನರು
ತಂದರು ಕುದುರೆ ಸಾವಿರವ || ೫೭ ||

ನಾಳಿನ ದಿನದಲ್ಲಿ ಕಾಳಗ ಬಂತೆಮಗೆ
ಹೇಳುವುದೇನು ಬೈಚಪ್ಪ |
ಮಂದಿ ಮಕ್ಕಳನೆಲ್ಲ ಕಳುಹಿಸಿ ಮನೆಗಳಿಗೆ
ಬಂದನು ತನ್ನರಮನೆಗೆ || ೫೮ ||

ಅರಸು ರಾಮಯ್ಯನು ಕರೆದು ಕಾಟಣ್ಣನ
ಹೊರ ಚಾವಡಿಯಲ್ಲಿ ನೀನು |
ಇರುವಂಥ ಮಂದಿ ಮಕ್ಕಳನೆಲ್ಲ ಕೂಡಿಕೊಂ
ಡಿರು ಹೋಗೊ ಬೇಗದೊಳುಂಡು || ೫೯ ||

ಕಾಟಣ್ಣಗಪ್ಪಣೆ ಕೊಟ್ಟು ರಾಮಯ್ಯನು
ಕೋಟಲೆಯೊಳು ಉಂಡು ಮಲಗಿ |
ಮೇಳೈಸಿ ದುರ್ಗದ ಕಾವಲ ಮಂದಿಯ ಬ
ಹಳ ಎಚ್ಚರವೆನುತೆದ್ದ || ೬೦ ||

ತಂದೆಯ ಪಾದಕ್ಕೆ ಬಿದ್ದು ರಾಮಯ್ಯನು
ವಂದಿಲಿ ಕಾಟಣ್ಣ ಸಹಿತ || ೬೧ ||

ಕುಕ್ಕಟ ಕೂಗಿದ ಮೇಲೆ ರಾಮಯ್ಯನು
ಚೊಕ್ಕ ಭೋಜನ ಮಾಡಿಕೊಂಡು |
ಗಕ್ಕನೆ ಹೊರಟನು ಒಳಲಾಯವ ಪೊಕ್ಕು
ರಕ್ಕಸ ಬೊಲ್ಲನ ನೋಡಿ || ೬೨ ||

ಬೊಲ್ಲನ ಹಲ್ಲಣಿಸಿ ಪೂಜೆಯ ಮಾಡಿರೊ
ಮೆಲ್ಲನೆ ತೆಕ್ಕೊಂಡು ಬನ್ನಿ |
ಎಲ್ಲ ವಾಜಿಗಳನು ಶೃಂಗರಿಸಿರೊ ಶೀಘ್ರ
ನಿಲ್ಲದೆ ಕಾಟಣ್ಣನೆಡೆಗೆ || ೬೩ ||

ಹೊನ್ನಂದಣವೇರಿ ಹೊರಟನು ರಾಮಯ್ಯ
ತನ್ನ ಮಾನ್ಯರ ಕೂಡಿಕೊಂಡು |
ಚೆನ್ನಾಗಿ ಹೊರ ಚಾವಡಿಯಲ್ಲಿ ಕುಳಿತನು
ಉನ್ನಿಸಿದನು ಮನದೊಳಗೆ || ೬೪ ||

ಬೇಗ ಬೈಚಪ್ಪನ ಮಕ್ಕಳ ಕರೆಸಿದ
ಸೋಗೆಗಣ್ಣರಸು ರಾಮಯ್ಯ |
ದೇವಿಸೆಟ್ಟಿಯಲಿಂಗ ಬೇವಿನ ಸಿಂಗಯ್ಯ
ಕೋವಿದ ಕಾಟಿಗರ ದ್ಯಾವ |
ಮಾವ ಮಂಚಣ್ಣನ ಮಕ್ಕಳು ಸಹವಾಗಿ
ಭೋಗರನೇ ಕರೆಸಿದೆಲ್ಲರನು || ೬೫ ||

ಬಾದೂರಖಾನನು ಮಹಿಮೆಯ ಖಾನನು
ಕಾದುವ ಬಾಣವ ಬಸವ |
ಆದವನ್ನಿಯ ಅರಸುಮಕ್ಕಳ ಕರೆಸಿದ
ಬಾದಾವಿ ಬಸವ ರಾವುತನ || ೬೬ ||

ಹೊರ ಚಾವಡಿಯಿಂದ ಹೊರಟನು ರಾಮಯ್ಯ
ತೊರೆ ಮಾವಿನಮರಕಾಗಿ |
ಬಿರಿದನುಗ್ಗಡಿಸುವ ಭಟರೊಡಗೂಡಿನ್ನು
ಅರಿರಾಯರಗಂಡನೆನುತ || ೬೭ ||

ಎಲ್ಲರಿಗೊಂದೊಂದು ಒಳ್ಳೆ ತೇಜಿಯ ಕೊಟ್ಟು
ಬೊಲ್ಲನ ತರಿಸಿ ಬೇಗದೊಳು |
ನಿಲ್ಲದೆ ಅದನೇರಿ ದುವ್ವಾಳಿಸುತ ರಾಮ
ಎಲ್ಲ ಮಾನ್ಯರ ಕೂಡಿಕೊಂಡು || ೬೮ ||

ಇತ್ತ ರಾಮಯ್ಯನು ಕತ್ತಿ ಝಾಮಿನೊಳಿರೆ
ಅತ್ತ ಸುರಿತಾಳ ತಾನೆದ್ದು |
ಒತ್ತಿ ಕುಮ್ಮಟಕೆ ಮುತ್ತಿಗೆ ಮಾಡಬೇಕೆಂದು
ಉತ್ತಮಖಾನರ ಕರೆಸಿ || ೬೯ ||

ಮೊದಲು ಪೈಜೆಯನು ಮಾಡಿಸಿರೊ ನೀವ್ ಬೇಗದಿ
ಸದರಿಗೆ ಬಂದ ಸುರಿತಾಳ || ೭೦ ||

ಮೊದಲ ಕೂಚಿಗೆ ದಂಡೆಲ್ಲ ಎತ್ತರ ಹುಟ್ಟಿ
ಬೆದರಿ ಎದ್ದರು ತಮತಮಗೆ |
ಮುದದಿಂದ ಅನ್ನಪನ್ನಗಳ ಮಾಡಿಸಿಕೊಂಡು
ಹದಮಾಡಿ ರೊಟ್ಟಿಯ ಸುಟ್ಟು || ೭೧ ||

ಎರಡನೆ ಕೂಚಿಗೆ ಹೊರಟರು ಉಂಡುಟ್ಟು
ಬಿರಿದಂಕ ಖಾನರು ಎಲ್ಲ |
ಮರೆಯದೆ ಬಗಲಿಗೊಂದು ರೊಟ್ಟಿಯ ಕಟ್ಟಿ
ತೆರಳಿ ಮುಂದಕ್ಕೆ ಸಾಗಿದರು || ೭೨ ||

ಮೂರನೆ ಕೂಚೆಗೆ ತೆರಳಿತು ದಂಡೆಲ್ಲ
ದಾರಿಕಾರರ ಕರಕೊಂಡು |
ವಾರುವ ಲಕ್ಷ ಮಂದಿಯು ಹತ್ತು ಲಕ್ಷವು
ಧೀರರು ನಡೆದರರ್ತಿಯಲಿ || ೭೩ ||

ಅಲ್ಲಲ್ಲಿ ಕುದುರೆಯ ಪೌಜುಗಳೆದ್ದು ನಡೆದವು
ಝಲ್ಲುಝಲ್ಲೆನುತ ಖಾನರರು |
ನಿಲ್ಲದೆ ಆನೆಯ ಪೌಜು ಹೊರಟವು ಬೇಗ
ಬಿಲ್ಲಿನ ಮಂದಿ ಕಡೆಯಿಲ್ಲ || ೭೪ ||

ಎದ್ದನು ನೇಮಿ ಆನೆಯ ಹತ್ತಿ ನಡೆದನು
ಮುದ್ದುಖಾನರ ಕೂಡಿಕೊಂಡು
ಉದ್ದುರುಟಿದ ರಾಹುತರೆಲ್ಲ ಮುಂದಾಗಿ
ಎದ್ದರು ಕುಮ್ಮಟಕಾಗಿ || ೭೫ ||

ಖಾನ ನೇಮಿಯ ಕೂಡ ನಾಲ್ಕು ಲಕ್ಷ ವಾಜಿಯು
ಆನೆಯ ಹಿಂಡೊಂದು ಲಕ್ಷ |
ಮಾನಾವತಿಗಳು ಕಾಲ್ಬಲ ಹತ್ತು ಲಕ್ಷವು
ಮೌನವಿಲ್ಲದೆ ನಡೆದ ಖಾನ || ೭೬ ||

ಪಾಳೆಗಾರರ ಮಂದಿ ಮುಂಜೂಣಿ ನಡೆಯಿತು ಕ
ಹಳೆ ಢಮಾಮಿ ಹೊಯ್ಸುತಲಿ || ೭೭ ||

ಕೆಂಧೂಳು ಮುಗಿಲು ಆಕಾಶಕೆ ಮುಸುಗಿತು
ಬಂದಿತು ಮುಂದಕ್ಕೆ ದಂಡು |
ಢಂ ಢಮಢಮ ಎಂದು ಭೇರಿಯ ಹೊಯ್ಸುತ
ಗಂಡಿಯ ಒಳಹೊಕ್ಕರಾಗ || ೭೮ ||

ಕೆಂಡದ ಮೇಲೆ ನೊರಜು ಮುತ್ತವಂದದಿ
ದಂಡೆಲ್ಲ ಒಂದೆ ವಾದ್ಯದೊಳು |
ಹಿಂಡಾನೆ ಪೌಜು ಮುಂದಕೆ ಸಾಗಿ ಬಂದಿತು
ಕಂಡರು ರಾಮನ ಭಟರು || ೭೯ ||

ಮುಂಜೂಣಿ ಕುದುರೆ ಬಂದವು ಕುಮ್ಮಟಕಾಗಿ
ಅಂಜದೆ ಕುದುರೆಯ ಪೌಜು |
ಮಂಜು ಗುಡ್ಡಕೆ ಮುಸುಕುವಂತೆ ತೆರಳಿತು
ಸಂಜೆ ಮಬ್ಬಾಯಿತು ಕಮ್ಮಟವು || ೮೦ ||

ಸುತ್ತಣ ಕಣಿವೆಯ ಕಾದಿರ್ದ ರಾಮನ ಬಲ
ಮೊತ್ತದೊಳೊಂದುಂಡೆಯಾಗಿ |
ಕತ್ತಿಯ ಕಿತ್ತು ಕಹಳೆಯ ಹಿಡಿಸಿ ನಡೆದರು
ಮುತ್ತಿಕೊಂಡರು ಮಂಜೂಣಿಯಲಿ || ೮೧ ||

ನಡು ಬೆನ್ನು ತೊಡೆ ತೋಳು ಕುಡಿಯಳ್ಳೆ ಕೈ ಕಾಲು
ಒಡನೆ ಉರುಳಿ ಬಿದ್ದ ಹೆಣನು |
ಜಡಿದು ಭರ್ಜಿಯಲಿಂದ ಇರಿವುತ ಶಬರರು
ಕಡಿದರು ಚೂಣಿಯನೆಲ್ಲ || ೮೨ ||

ತಲೆಗಳು ಉದುರಿ ತೋಳ್ಗಳ ಕತ್ತರಿಸುತ
ಮೊಲೆಕಟ್ಟು ಎದೆಯ ತಟ್ಟುಗಿದು |
ಜಾಲರೆ ಒಡೆದು ಕರುಳು ಕುಪ್ಪೆ ಬಿದ್ದವು
ಗಲಭೆಯಾಯಿತು ರಣರಂಗ || ೮೩ ||

ಬಿಲ್ಲಿನ ಮಂದಿ ಹೊಕ್ಕಿರಿದರು ಖಾನರ
ನೆಲ್ಲ ಮುಸುಕಿ ಕೊಲ್ಲುತಿಹರು |
ಕಲ್ಲಕೋಟೆಯ ಚಿಕ್ಕ ಕಾಮಗೇತಿಯ ತಿಮ್ಮ
ಜಲ್ಲಿ ಬಿಲ್ಲಿನ ಬುಕ್ಕಿನಾಯ್ಕ || ೮೪ ||

ಎಲ್ಲ ಖಾನರ ಕೂಡ ರಹುಡೆಖಾನನ ಮೇಲೆ
ಬಿಲ್ಲಿಂದಲಿಟ್ಟು ಕೆಡಹಿದರು |
ಬಲ್ಲಿದ ಖಾನ ವಜೀರ ಬಿದ್ದನು ಎಂದು
ಎಲ್ಲ ಖಾನರು ಮರುಗಿದರು || ೮೫ ||

ಇಪ್ಪತ್ತು ಸಾವಿರ ವಜೀರರೆಲ್ಲರು
ತೊಪ್ಪನೆ ತೊಯ್ದು ರಕ್ತದಲಿ || ೮೬ ||

ಕೋಪದಿ ನೇಮಿ ಆನೆಯ ಮೀಟಿ ನಡೆದನು
ಧೂಪಿಸಿ ವಜೀರರೆಲ್ಲ |
ಆಪತ್ತು ಬಂದಿತು ತುರುಕರಿಗೆನುತಲಿ
ರೂಪರೋರಿದ ರಣದೊಳಗೆ || ೮೭ ||

ಎಂಬತ್ತು ಸಾವಿರ ವಾಜಿಯು ಏರಿತು
ದೊಂಬಿಯ ತುಂಬೂರಖಾನ |
ಕುಂಭಿನಿಪತಿ ರಾಮನ ಮಂದಿಯ ಮೇಲೆ
ಮುಂಬಾಗಿನಲಿ ಏರಿ ಬಂದ || ೮೮ ||

ಜೋಡು ಸಿಂಗಾಡಿ ಪೆಟಲುಗಳಿಂದ ಶಬರರು
ಕೂಡಿ ಬಂದೊದಗಿ ಮುತ್ತಿದರು |
ಕಾಡ ಬೇಡರ ಪಡೆ ಹಿಂದುಮುಂದಾಗಲು
ನೋಡಿದ ರಾಮಯ್ಯ ನಗುತ || ೮೯ ||

ಪಡೆ ಮುರಿದೋಡಿ ಬರುವದ ಕಂಡು ರಾಮಯ್ಯ
ಒಡನೆ ಬೊಲ್ಲನ ಮೀಟಿದನು |
ನಡೆಯಿತು ರಾಮನ ಹಿಂದೆ ಮನ್ನೆಯರೆಲ್ಲ
ಒಡೆಯನ ಎಡಬಲದಲ್ಲಿ || ೯೦ ||

ಹೊಕ್ಕು ರಾಮಯ್ಯ ರಣರಂಗದೊಳ್ ತುರುಕರ
ರಕ್ಕಸ ಪಡೆಯನೆಲ್ಲವನು |
ಸೊಕ್ಕಾನೆ ಕದಳಿಯ ವನದೊಳು ಹೊಡೆದಂತೆ
ಹೊಕ್ಕಿರಿದನು ರಣಕೊಬ್ಬ || ೯೧ ||

ಉರುಳಿತು ತುರುಕರ ಪಡೆ ಲೆಕ್ಕವಿಲ್ಲದೆ
ತಿರುಗಿದ ರಾಮಯ್ಯನೊಡನೆ || ೯೨ ||

ಹಿಂದುಮುಂದೆಲ್ಲರ ಕೂಡಿಸಿ ರಾಮಯ್ಯ
ಮುಂದಿಯ ಸಂದಣಿಯಿಂದ |
ಬಂದನು ಕುಮ್ಮಟಕಾಗಿ ಮಾನ್ಯರ ಕೂಡಿ
ನಿಂದನು ದುರ್ಗದ ಮುಂದೆ || ೯೩ ||

ರಣಮಯವಾಯಿತು ಹೆಣಮಯವಾಯಿತು
ಎಣಿಕೆಯ ಮಾಡಿತ ನೇಮಿ |
ಕೆಣಕಿ ಹೊಕ್ಕೆವು ರಾಮನ ಕೂಡೆ ಜಗಳವು
ಅಣಕವು ಅಲ್ಲ ಬಲ್ಲಿದನು || ೯೪ ||

ಭಾಪುರೆ ಭಾಪು ರಣರಂಗದೊಳ್‌ ರಾಮನು
ರೂಪುರೋರಿಸಿ ಹೊಕ್ಕು ಹೊರಟ |
ಈ ಪರಿ ರಾಯರಾವುತರ ಕಾಣೆನು ಎಂದು
ಭೂಪ ನೇಮಿಯು ಹೊಗಳಿದನು || ೯೫ ||

ಸಿಡಿಲೆರಗಿದಂತೆ ಹೊಕ್ಕನು ತನ್ನ ಮಂದಿಯ
ಕಡೆಹಾಯಿಸಿಕೊಂಡು ತಾ ಹೊರಟ |
ಒಡೆಯನಹುದು ರಾಜ್ಯದೊಳಗಿಲ್ಲ ಇವನಂಥ
ಪೊಡವಿಪತಿಗಳ ಕಾಣೆನೆಂದ || ೯೬ ||

ಒತ್ತಿ ಮುಂದಕೆ ಪೌಜ ನಡೆಸಿ ನೇಮಿಯಖಾನ
ಸುತ್ತ ಮುತ್ತಿಗೆಯ ಮಾಡಿದನು |
ಎತ್ತ ನೋಡಲು ಅತ್ತ ಕಡೆಯಿಲ್ಲ ದಂಡಿನ
ಮೊತ್ತವನೇನ ಬಣ್ಣಿಸುವೆ || ೯೭ ||

ಲಕ್ಕದ ಮೇಲೆ ತೊಂಬತ್ತಾರು ಸಾವಿರ
ಲೆಕ್ಕವಿಲ್ಲದ ಗುಡಿ ಹೊಯ್ದು |
ಅಕ್ಕರಾಣಿಯ ಗುಡಿಯೊಳು ನೇಮಿ ಇಳಿದನು
ಲಕ್ಷಾಧಿಪತಿ ಆನೆ ಇಳಿದ || ೯೮ ||

ಡೋಳು ಢಮಾಮಿ ವಾದ್ಯಗಳು ನಗಾರಿಯು
ಏಳೈಸುತ ನೇಮಿ ನಡೆದ |
ಪಾಳ್ಯಪಾಳೆಗಳು ಹಾಕಿತು ಅಲ್ಲಿಗಲ್ಲಿಗೆ
ಕೋಳು ಹೋಯಿತು ನೇಮಿ ದಂಡು || ೯೯ ||

ಕೋಟೆಯ ಸುತ್ತ ಮುತ್ತಲು ಇಳಿದರು ನೇಮಿ
ಪಾಟಿಸಿ ಪೌಜು ಅಲ್ಲಲ್ಲಿ || ೧೦೦ ||

ಕಡಿದರೆ ತೀರದು ಕಡೆಯಿಲ್ಲದ ದಂಡು
ಒಡನೆದ್ದು ನೋಡಿ ಕಂಪಿಲನು |
ಬಡವರು ನೋಡಿ ಕೆಣಕಿ ರಾಮ [ಕೊಂ]ದನು
ಕಡೆಹಾಯ್ದ ತೆರನಿಲ್ಲ ನಮಗೆ || ೧೦೧ ||

ಕರೆಸಿದನು ತನ್ನ ಮಂತ್ರಿ ಬೈಚಪ್ಪನ
ತೆರನೇನು ಮುಂದೆ ನಮಗಿನ್ನು |
ಧರೆಯೆಲ್ಲ [ಈದಂತೆ] ದಂಡು ಬಂದಿಳಿಯಿತು
ಕರೆಸಯ್ಯ ರಾಮನ ಬಲವ  || ೧೦೨ ||

ಬಂದು ರಾಮಯ್ಯ ತಂದೆಯ ಪಾದಕೆರಗಿದ
ವಂದಿಸಿ ಕರಗಳ ಮುಗಿದು |
ಅಂದಿನ ರಾಜ್ಯಕಾರ್ಯಂಗಳೆಲ್ಲವ ಪೇಳಿ
ಇಂದ್ಯಾಕೆ ನಮ್ಮ ಕರೆಸಿದಿರಿ || ೧೦೩ ||

ಧರೆಯೆಲ್ಲ [ಈದಂತೆ] ದಂಡು ಬಂದಿಳಿಯಿತು
ಸುರಿತಾಳನ ನೇಮು ಬಂದು |
ದೊರೆತನ ಉಳಿವ ದಾರಿಲ್ಲವೊ ರಾಮಯ್ಯ
ಕರೆಕರೆಯಾಯಿತು ನಮಗಿನ್ನು || ೧೦೪ ||

ಸಾಕಿನ್ನು ಬಿಡು ಚಿಂತೆ ಯಾಕೆ ನಿಮಗಾಯಿತು
ನಾಕಜಪತಿಯ ಜರಿವರೆ |
ನೂಕಿ ಹೆದ್ದೊರೆಯತನಕಲಿ ಮುರಿಯಲಿಸುವೆ
ಜೋಕೆ ಮಾಡುವೆನು ಕುಮ್ಮಟವ || ೧೦೫ ||

ಬಂದರೆ ಬರಲಿನ್ನು ನೇಮಿಖಾನರ ದಂಡ
ಸಂದೇಹವ್ಯಾಕಿನ್ನು ನಮಗೆ |
ಒಂದಿನದಾಹುತಿ ಇಲ್ಲವೊ ಕತ್ತಿಗೆ
ಚಂದದಿ ಕೇಳು ಬೈಚಪ್ಪ || ೧೦೬ ||

ಇಂದಿನ ರಾತ್ರಿಯೊಳು ಕಗ್ಗೊಲೆಯನು ಬಿದ್ದು
ಬಂಧೀಸಬೇಕು ತುರುಕರನು |
ಇರುಳ ಕಗ್ಗೊಲೆ ನೋಡಬಾರದೆಂದೆನುತಲಿ
ಭರದಿಂದ ಭಾಸ್ಕರನೋಡಿ || ೧೦೭ ||

ಇರಬಾರದೆಂದು ಪಡುವಣಾದ್ರಿಗೆ ಇಳಿದನು
ಮರೆಗೊಂಡ ದೊಡ್ಡ ಪರ್ವತವ |
ಸಂಜೆಯ ಮಹಲಕ್ಷ್ಮಿ ಬಂದಳು ಸದರಿಗೆ
ದರಿಗೆ ಮಂದೆದ್ದು ಕೈಮುಗಿದರೆಲ್ಲ || ೧೦೮ ||

ಕಾದ ಹೋಗಲಿಬೇಕು ರಾತ್ರಿ ಕಗ್ಗೊಲೆಗೆಂದು
ಮೇದುನಿಪತಿ ರಾಮ ಪೇಳೆ |
ಅಪ್ಪಣೆ ಕೊಡು ನಮಗೆ ನಿಮ್ಮಯ ಪಾದಕ್ಕೆ
ಒಪ್ಪಿಸುವೆನು ಊಳಿಗವ || ೧೦೯ ||

ರೊಪ್ಪದ ಆನೆ ಹಿಂಡಿಗೆ ಸಿಂಹ ಬಿದ್ದಂತೆ
ತಪ್ಪದೆ ಹೊಡೆವೆ ನೇಮಿಯನು |
ವೀಳ್ಯ ಉಡುಗೊರೆ ಕೊಟ್ಟು ಬಾದೂರಖಾನಗೆ
ಒಳ್ಳೆಯ ಮಂದಿಯನಾಯ್ದುಕೊಟ್ಟ || ೧೧೦ ||

ಚೋರಗಂಡಿಯಲಿ ಇಳಿದ ಬಾದೂರಖಾನ
ಕಾರೆಂಬ ಕತ್ತಲೆಯೊಳಗೆ |
ಧೀರ ಮನ್ನೆಯರೆಲ್ಲ ಒಳಹೊಕ್ಕು ನೇಮಿಯ
ಡೇರೆ ಹೊಗಬಿದ್ದರಾಗ || ೧೧೧ ||

ಕೊಲಲೊ ಕೊಲಿಲೊ ಎಂದು ಕೂಗಿ ಅಬ್ಬರಿಸುತ
ಹಲಿವು ಖಾನರನು ಕಡಿದೊಟ್ಟಿ |
ಗಲಿಬಿಲಿ ಆಯಿತು ದಂಡಿನೊಳಗೆಲ್ಲ
ಗಲಭೆ ಹತ್ತಿತ್ತು ತಮ್ಮೊಡನೆ || ೧೧೨ ||

ಹಗಲೆ ಬಂದಿತು ದಂಡು ರಾಮಯ್ಯ ಇರುಳಿಗೆ ಬಂದ
ಹೊಗುವರೆ ಠಾವಾವುದೆಮಗೆ |
ಹಗರಣವಾಯಿತು ದಂಡು ಗಜೆಬಜೆ ಎದ್ದು
ಜಗಳವಾಯಿತು ತಮತಮಗೆ || ೧೧೩ ||

ಎತ್ತಲೆಂದರಿಯದೆ ಕತ್ತಲೊಳಗೆ ತಾವು ಒತ್ತರವೆದ್ದು ಓಡಿದರು |
ಮುತ್ತಿತು ರಾಮನಾಥನ ಬಲ ಡೇರೇದ
ಸುತ್ತ ತಲೆಗಳ ಹೊಡೆದರಾಗ || ೧೧೪ ||

ಓಡಿದ ನೇಮಿ ಹಿಂದಕ್ಕೆ ಹರುದಾರಿಯ
ಕೂಡಿಕೊಂಡಿಲ್ಲ ಖಾನರನು |
ಕಾಡಬೇಡರ ಉಪಟಳದಿಂದ ದಂಡೆಲ್ಲ
ಕಾಡೆದ್ದು ಮುತ್ತಿಗೆ ತೆಗೆದು || ೧೧೫ ||

ಹತ್ತು ಸಾವಿರ ತಲೆಯನು ಹೊಯ್ದು ಕುದುರೆಯ
ಒತ್ತಿ ಹಿಡಿದರು ಕೈಸೆರೆಯ |
ಅರ್ತಿಯೊಳ್ ಹಿಂದಕ್ಕೆ ತಿರುಗಿಬಂದನು ಬೇಗ
ಮತ್ತೆ ಕುಮ್ಮಟ ಹೊಕ್ಕರವರು || ೧೧೬ ||

ಕೋಳಿ ಕೂಗಿತು ಬೆಳಗಾಯಿತು ಭಾಸ್ಕರ
ಧೂಳಿಗೋಟೆಯ ನೋಡುವರೆ
ಬಹಳ ಸಂತೋಷದಿ ಮೂಡಿ ಬಂದನು ತಾನು
ಕಾಳಗತ್ತಲೆ ಬೆಳಗಾಯಿತು || ೧೧೭ ||

ಓಡಿಹೋದಂಥ ನೇಮಿಯು ತಾನು ತಿರುಗಿದ
ಜೋಡು ಸಿಂಗಾಡಿಯಪ್ಪಾಜಿ |
ಕೋಟಿ ಕಾಲ್ಬಲ ಮುತ್ತಿತು ಕುಮ್ಮಟವನು
ಲೂಟಿಯಾಯಿತು ಹೊರ ಪ್ಯಾಟೆ || ೧೧೮ ||

ಕೋಟೆಯ ಸುತ್ತಮುತ್ತಲ ಬಂದು ಮುತ್ತಿತು
ಮೀಟದ ಖಾನ ಒಂದಾಗಿ |
ಜೂಟಿಸಿ ಬಂದು ಒಳ ಬೀದಿಯ ಹಿಡಿಯಿತು
ನೋಟಕೊಂದಾಶ್ವರ್ಯವಾಯಿತು || ೧೧೯ ||

ಅಲ್ಲಲ್ಲಿ ಗಜವ ಹಾಕಿದರು ಸುರಿತಾಳನ
ಬಲ್ಲಿದ ವಾಜಿ ಜನರೆಲ್ಲ |
ನಿಲ್ಲಲಾರದೆ ರಾಮನ ಬಲದುರ್ಗುವ
ಎಲ್ಲರು ಒಳಹೊಕ್ಕರಾಗ || ೧೨೦ ||

ಜೇರು ಮುತ್ತಿಗೆ ಮಾಡಿ ಶಬರರ ಪಡೆಯನೆಲ್ಲ
ಗಾರುಗತ್ತಲೆಯ ಮಾಡಿದರು |
ನೂರಾರು ಮಂದಿಯ ಕೊಂದರು ಖಾನರು
ಊರು ಹೊಗಿಸಿದರು ಶಬರರ || ೧೨೧ ||

ಒಳಹೊಕ್ಕು ಶಬರರು ಒಳ ಕೋಟೆಯ ಹೊಕ್ಕು
ಉಳಿಯದೆ ಬೇಡಪಡೆಯೆಲ್ಲ |
ಘಳಿಲನೆ ಅಟ್ಟಳೆಗಳನೇರಿ ಎಸೆದರು
ಸೆಳೆಗೋಲು ಬಿಲ್ಲು ಪೆಟಲುಗಳ || ೧೨೨ ||

ಸುಳಿದಾಡದ ಕೋಟೆಯ ಸುತ್ತ ಖಾನರ
ಸೆಳೆಸರಳುಗಳಿಂದ ಕೊಲ್ಲುತಲಿ |
ಹೊಳಕೆಯ ಮಂದಿ ಹೊರಟು ಹೊಕ್ಕು ಕಡಿದರು
ಅಳಿದಿತು ಖಾನರ ಪಡೆಯು || ೧೨೩ ||

ಮರೆಹೊಕ್ಕ ಖಾನರ ಕೊಡೆನೆಂಬ ಕಹಳೆಯು
ಒರಲು ತಿರ್ದವು ದುರ್ಗದೊಳಗೆ |
ಹೊರಡೆಂದು ಕರ್ಣೆಗಳುದರುತಲಿರಲು || ೧೨೪ ||

ಬಿಟ್ಟು ಹೋಗುವನಲ್ಲ ಬಾದೂರಖಾನನ
ಕೊಟ್ಟು ಒಂದಾಗುವುದು ಲೇಸು |
ಈ ಮೇಲೆ ಕುಮ್ಮಟ ಕಳಕೊಂಡು ಕೆಟ್ಟರು ಮುಟ್ಟಿ
ಪೇಳಿರೊ ಚರರ್ಪೋಗಿ || ೧೨೫ ||

ಬಂದು ಭಟರು ಪೇಳೆ ಕೇಳಿ ರಾಮಯ್ಯನು
ತಂದೆ ಅಪ್ಪಣೆಯಿಲ್ಲ ನಮಗೆ |
ಕೊಂದು ರಣಭೂತಕೆ ಹಬ್ಬವ ಮಾಡುವೆ
ಒಂದೆರಡಿನ ದಿನದೊಳಗೆ || ೧೨೬ ||

ಮಾಗಿದ ಹಣ್ಣಿಗೆ ಕೋಲು ಸೆಳೆಗಳೇಕೆ
ಈಗ ಲೆಗ್ಗೆಯ ಮಾಡ ಹೇಳೊ || ೧೨೭ ||

ಎಂದು ಮಾತನು ಕೇಳಿ ಬಂದರು ಭಟರೋಡಿ
ತಂದರು ಆದ ಸುದ್ದಿಯನು |
ಮುಂದಣ ರಾಜಕಾರ್ಯಗಳನು ಮಾಡುವ
ಅಂದವ ಪೇಳಿ ನೀವೆನಲು || ೧೨೮ ||

ಬಿಡು ಎಮ್ಮನೀಗ ಕುಮ್ಮಟಕೆ ಲಗ್ಗೆಯ ಮಾಡಿ
ಕಡಿದು ರಾಮುಗನ ಕೈಸೆರೆಯ |
ಹಿಡಿದು ತಂದು ನಿನ್ನ ಕೈಯಲಿ ಕೊಟ್ಟು ನಾವಿನ್ನು
ನಡೆವೆವು ಸುಳಿತಾಳ ನೆಡೆಗೆ || ೧೨೯ ||

ಇತ್ತ ನೇಮಿಯು ತನ್ನ ಖಾನವೀರಗೊಂ
ದರ್ತಿಯಲಿ ಮಾತನಾಡಿದನು |
ಅತ್ತ ರಾಮಯ್ಯ ಮಂತ್ರಿಯ ಕೂಡೆ ಹೇಳಿದ
ಕತ್ತಿಗೆ ನಡೆಯಬೇಕೆನುತ || ೧೩೦ ||

ಅಪ್ಪಣೆ[ಯನು] ಹೇಳೊ ಬೈಚಪ್ಪ ಬೇಗದಿಂ
ದೊಪ್ಪನೆ ಮಂದಿಮಕ್ಕಳಿಗೆ |
ತುಪ್ಪದೂಟವನುಣಿಸಿಕೊಂಡು ನಮ್ಮೆಲ್ಲರ
ಅಪ್ಪಣೆ ಕೊಡ ಹೇಳೊ ಅರಸ || ೧೩೧ ||

ಎಂದ ಮಾತನು ಕೇಳಿ ಬಂದನು ಬೈಚಪ್ಪ
ನಿಂದನು ಕಂಪಿಲನೆಡೆಗೆ |
ಕಂದಯ್ಯ ರಾಮ ಕಳುಹಿದ ನಿಮ್ಮ ಬಳಿಗೆಮ್ಮ
ಮಂದಿಯನುಣಿಸಬೇಕೆಂದ || ೧೩೨ ||

ನಾಳೆ ಪಯಣವಂತೆ ರಣರಂಗ [ಆ]ಜಿಗೆ ಕ
ಹಳೆಯ ಹಿಡಿಸಿ ರಾಮಯ್ಯ |
ಕೇಳಿ ಬಾರೆಂದ ಬಿಂದಿಗೆ ಹೊನ್ನ ನಿಮ್ಮನು
ಹೇಳಿದ ವೀರನೆಂದೆನುತ || ೧೩೩ ||

ಹರಿಯಲದೇವಿಗೆ ಅಡಿಗೆ ಮಾಡಿಸ ಹೇಳೊ
ಬಿರಿದಿನ ಬಂಟರಿಗೆಲ್ಲ |
ಕರೆತಂದು ಊಟವ ಮಾಡಿ ರಾಮಯ್ಯನ
ಹೊರಡ್ಹೇಳೊ ಮುಂಗಾಳಗಕೆ || ೧೩೪ ||

ಅಪ್ಪಣೆಯನು ಕೈಕೊಂಡು ಮಂತ್ರೀಶನು
ತಪ್ಪದೆ ರಾಮಯ್ಯನೆಡೆಗೆ |
ಒಪ್ಪವಾಯಿತು ನೀವು ಪೇಳಿದ ಮಾತಿನ್ನು ಕಂ
ದರ್ಪ ರೂಪನೆ ರಾಮಯ್ಯ || ೧೩೫ ||

ಅಂದಿನ ದಿನ ತನ್ನ ಅರಮನೆಯೊಳು ರಾಮ
ಚಂದ್ರಮುಖಿಯರ ಮೇಳದಲಿ |
ಚಂದದಿಂದುಂಡು ಸುಖನಿದ್ರೆಗೈದೆದ್ದು
ಒಂದು ಹೊತ್ತಿಲಿ ಎದ್ದ ರಾಮ || ೧೩೬ ||

ವಂದಿಸಿ ಜಟ್ಟಂಗಿಲಿಂಗ ರಾಮೇಶಗೆ
ಚೆಂದದಿಂ ಕೈ ಮುಗಿದನು |
ಇಂದಿನ ಭವಹರ ಚಂದ್ರಮೌಳೀಶ್ವರ
ತಂದೆ ನೀ ಗತಿಯೆನುತೆದ್ದ || ೧೩೭ ||

ಪನ್ನೀರ ಜಳಕದಿಂದಾಹಾರ ಭೋಜನ ಮಾಡಿ
ತನ್ನ ವಲ್ಲಭೆಯರನೆಲ್ಲ |
ಮನ್ನಿಸಿ ಕರೆದು ಮೈಜೋಡು ಒಡವೆಗಳನು
ತನ್ನಿರೆಂದನು ರಾಮ ನಗುವ || ೧೩೮ ||

ಒಡವೆ ವಸ್ತಂಗಳ ಪೆಟ್ಟಿಗೆಗಳ ತಂದು
ಒಡನೆ ರಾಮಯ್ಯನ ಮುಂದೆ |
ಪೆಟ್ಟಿಗೆಯ ಬಿಚ್ಚಿ ಒಂದೊಂದು ವಸನಂಗಳ
ಕೊಡುತಿರ್ದರೆಲ್ಲ ಬಾಲೆಯರು || ೧೩೯ ||

ಸುರಿತಾಳ ನೇಮಿಯಗಂಡನೆಂಬುವದೊಂದು
ಕೊರಳಪದಕವನಿಟ್ಟ ರಾಮ |
ಧರೆಯೊಳಗುಳ್ಳ ರಾಯರಗಂಡನೆಂಬಂಥ
ಬೆರಳ ಹೊನ್ನುಂಗುರವನಿಟ್ಟು || ೧೪೦ ||

ಉತ್ತುಂಗರಾಯನ ಗಂಡನೆಂಬುವ ಜೋಡ
ಮುತ್ತಿನ ಚವುಕುಳಿ ಇಟ್ಟ |
ಮುಂಗುಲಿರಾಯನ ಗಂಡನೆಂಬುವದೊಂದು
ಉಂಗುರ ಪಚ್ಚೆಯ ಕಡಗ || ೧೪೧ ||

ಹುಳಿಯೇರ ಮಾರಿಗೊಂಡನಗಂಡನೆಂಬಂಥ
ಲುಳಿಯ ಸರಪಳಿಯ ಇಳಿಬಿಟ್ಟು |
ಮಿಕ್ಕ ಒಡವೆಯನೆಲ್ಲ ಲೆಕ್ಕವಿಲ್ಲದೆ ಇಟ್ಟು
ಅಕ್ಕರಾಣಿಯ ಮುತ್ತನಿಟ್ಟ || ೧೪೨ ||

ಬಂದರೈವರು ಸೇಸೆಯನಿಟ್ಟು ರಾಮಯ್ಯಗೆ
ವಂದಿಸಿ ವೀಳ್ಯವ ಕೊಟ್ಟು |
ಬಂದನು ತಾಯರಮನೆಗಾಗಿ ರಾಮಯ್ಯ
ವಂದಿಸಿ ಪಾದಕೆರಗಿದನು || ೧೪೩ ||

ಇಂದೊಂದು ದಿವಸ ನಾಳಿನ ದಿನ ರಣರಂಗ
ಬಂದಂಥ ನೇಮಿಯ ಮೇಲೆ |
ಎಂದ ಮಾತನು ಕೇಳಿ ಹರಿಯಲದೇವಿ ತಾ
ಕಂದನ ಪಿಡಿದಪ್ಪಿಕೊಂಡು || ೧೪೪ ||

ಉಂಡುಟ್ಟು ಬಂಟೆನುಣಿಸಿಕೊಂಡು ನೀನು
ಚಂದದಿ ಹೊರಡೊ ರಾಮಯ್ಯ |
ಎಂದು ಪೇಳಲು ಹರಿಯಮ್ಮನ ಮಾತಿಗೆ
ಮಂದಿಯ ಕರೆಸಿದ ಬೇಗ || ೧೪೫ ||

ರಾಣ್ಯ ರಾಹುತರು ಗುರಿಕಾರರು ಮನ್ನೆಯರು
ಠಾಣ್ಯದ ಗಡಿವಾಡದವರು |
ಅಣ್ಣ ಕಾಟಣ್ಣ ಅರಸುಮಕ್ಕಳೆಲ್ಲರು
ಉಣ್ಣ ಹೇಳೆಂದ ರಾಮಯ್ಯ || ೧೪೬ ||

ಚೊಕ್ಕ ಭೋಜನವನಿಕ್ಕಿಸಿ ಹರಿಯಮ್ಮನು
ಚೊಕ್ಕ ಬಿಳಿಯೆಲೆ ವೀಳ್ಯ ಕೊಡಿಸಿ |
ಮಕ್ಕಳು ನಿಮ್ಮ ಪಾಲಿಸಬಂದರೆನುತಲಿ
ಎಕ್ಕಟಿಗರಿಗೆ ಪೇಳಿದಳು || ೧೪೭ ||

ಅಡ್ಡಬಿದ್ದರು ಹರಿಯಮ್ಮನ ಪಾದಕ್ಕೆ
ದೊಡ್ಡರಮ್ಮ ರಾಮುಗನು |
ಮಂದಿಯನುಣ್ಣಿಸಿಕೊಂಡು ತಾ ಉಂಡುಟ್ಟು
ತಂದೆಯ ಪಾದಕ್ಕೆ ಬಿದ್ದ || ೧೪೮ ||

ಅಪ್ಪನ ಪಾದಕೊಂಡೊಪ್ಪದಿಂದಲಿ ಬಿದ್ದು
ಉಪ್ಪರಿಗೆಯನೇರಿ ನೋಡೊ |
ಒಪ್ಪಿಸುವೆನು ನಿಮ್ಮ ಊಳಿಗವ ನೇಮಿಯ
ಒಪ್ಪದಿ ಕಳುಹಿಸಿ ಕೊಡುವೆ || ೧೪೯ ||

ತಂದೆ ತಾಯಿ ಪಾದಕೆ ಬಿದ್ದು ರಾಮಯ್ಯನು
ಬಂದನು ಹೊರಚಾವಡಿಗೆ |
ಅಂದು ತನ್ನಯ ಮಂದಿ ಮಕ್ಕಳ ಕೂಡಿ ಕುಳಿತನು
ಒಂದರಗಳಿಗೆ ರಾಮಯ್ಯ || ೧೫೦ ||

ಕರೆಸಿದ ಮಂತ್ರಿ ಬೈಚಪ್ಪನ ಮಕ್ಕಳ
ಕರೆಸಿದನಾಗ ಬೊಲ್ಲುಗನ |
ಕರೆಸಿದ ಹಂಪರಾಜನ ಕಂಪರಾಜನ
ಕರೆಸಿದ ದೊರೆಮಕ್ಕಳನೆಲ್ಲ || ೧೫೧ ||

ಬಾದೂರಖಾನನು ಮಹಿಮೆಯಖಾನನ
ಸಾಧನೆ ಬಸವರಾಜಯ್ಯ |
ಆದಂಥ ಹಳೆಯ ರಾಹುತರನೆಲ್ಲರ ರಾಮ
ಕಾದಲಿ ಕರೆಸಿದನಾಗ || ೧೫೨ ||

ದೇವಿಸೆಟ್ಟಿಯಲಿಂಗ ಬೇವಿನ ಸಿಂಗಯ್ಯ
ಜೀವರತ್ನವು ಕೊಳ್ಳಿನಾಗ |
ಮಾವಗಳಾದ ಚಾರಮನ ಮಕ್ಕಳ ಬೇಗ
ಕೋವಿದ ರಾಮಯ್ಯ ಕರೆಸಿ || ೧೫೩ ||

ಹೊಳಕೆಯ ಬಂಟರ ಕರೆಸಿಕೊಂಡನು ರಾಮ ಎಣಿ
ಕೆಲಿ ನೂರು ಸಾವಿರವ |
ಎಣಿಕೆಯಿಲ್ಲದೆ ಕೊಟ್ಟ ಹಿಡಿಹೊನ್ನ ರಾಮಯ್ಯ
ಬಣಗಾರಗಂಡನೆಂದುನುತ || ೧೫೪ ||

ಸನ್ನೆಗಾಳೆಯ ಹಿಡಿಸಿದ ದುರ್ಗದೊಳಗೆಲ್ಲ
ಚಿನ್ನಗಾಳೆಯು ನೌಬತ್ತು |
ಉನ್ನತ ವಾದ್ಯ ಗಿಡಿಬಿಡಿ ನಾಗಸರ ಕೊಂಬು
ಸನ್ನೆ ನಗಾರಿ ಸಾರಿದವು || ೧೫೫ ||

ಅರವತ್ತು ಸಾವಿರ ಕುದುರೆ ಮಂದಿಯು ಕೂಡಿ
ಭರದಿಂದ ದುರ್ಗವನಿಳಿದು |
ಹೊರಬಾಗಿಲ ದಾಂಟಿ ಮುಂದಣ ಬಯಲಿಗ
ಬರುವಂಥ ರಾಮನ ನೋಡಿ || ೧೫೬ ||

ಇತ್ತ ರಾಮಯ್ಯ ದುರ್ಗವನಿಳಿದು ಬರುತಿರೆ
ಅತ್ತ ಸುರಿತಾಳನ ಚರರು |
ಅರ್ತಿಲಿ ಕುಳಿತಿರೆ ಮಾತನಾಡುವ ನೇಮಿ
ಒತ್ತರ ಸುದ್ದಿಯ ಪೇಳೆ || ೧೫೭ ||

ಎದ್ದು ನೇಮಿಯಖಾನನು ಕೂಚೆ ನಗಾರಿ
ಸದ್ದು ಮಾಡಿಸಿ ದಂಡಿನೊಳಗೆ |
ಮುದ್ದು ಖಾನರು ಕೂಡಿ ಏಳಿರೊ ಜಗಳಕ್ಕೆ
ಇದ್ದಲ್ಲಿಗೆ ರಾಮ ಬಂದ || ೧೫೮ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಪದನ |
ಕದನದಿ ನೇಮಿ ಕುಮ್ಮಟವ ಮುತ್ತಿದನಂತೆ
ಪದಗಳು ಮುಗಿಯೆ ಸಂಪೂರ್ಣ || ೧೫೯ ||

ಅಂತು ಸಂದಿ ೧೧ಕ್ಕಂ ಪದನು ೧೧೩೧ಕ್ಕಂ ಮಂಗಳ ಮಹಾಶ್ರೀ