ಶ್ರೀ ಗಿರಿಜಾ[ಸ್ಯಾಂಬುಜ ದಿನ] ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ಬಂದನು ಹೊನ್ನಂದಣನೇರಿ ರಾಮಯ್ಯ
ಮುಂದಣ ರಾಮೇಶ ಗುಡಿಗೆ |
ವಂದಿಸಿ ಕರಗಳ ಮುಗಿದಡ್ಡಬಿದ್ದನು
ಚಂದ್ರಶೇಖರ ಗರಿಯೆನುತ || ೨ ||

ಒಂದು ಹಿಡಿಯೊನ್ನ ಕಾಣಿಕೆನಿಟ್ಟು ರಾಮನು
ಗಂಧ ಪ್ರಸಾದ ಕೈಗೊಂಡು |
ಮುಂದಕ್ಕೆ ನಡೆದನು ರಣರಂಗ ವಾಜಿಗೆ
ಮಂದಿಯ ಮುಂದಿಟ್ಟು ಕೊಂಡು || ೩ ||

ಬೊಲ್ಲನ ಏರಿ ದುವ್ವಾಳಿಸುತಲಿ ರಾಮ
ನಿಲ್ಲದೆ ಪೇರಿ ಮಾಡುತಲಿ |
ಎಲ್ಲರು ಕುದುರೆಯನೇರಿ ನಡೆದರಾಗ
ಬಲ್ಲಿದ ರಾಮಯ್ಯನೊಡನೆ || ೪ ||

ಬಿಲ್ಲಿನ ಪೌಜೆಲ್ಲ ಮುಂಜೂಣಿ ನಡೆಯಿತು
ಭಲ್ಲೆದ ಈಟಿಯ ಪೌಜ |
ಎಲ್ಲರು ಎಡವಂಕ ಬಲವಂಕದೊಳು ಮುಂದೆ
ಕಲ್ಲಕೋಟೆಯ ಚಿಕ್ಕನವರು || ೫ ||

ಕುದುರೆಯ ಪೌಜು ಬೆನ್ನಮೇಲೆ ಇರಲೆಂದು
ಒದಗಿದ ಮನ್ನೆಯರೆಲ್ಲ |
ಇದಿರೇರಿ ಬರುವ ಖಾನರ ಮೇಲೆ ನಡೆಯೆಂದ
ಚೆದುರ ಚೆನ್ನಿಗ ರಾಮ ನಗುತ || ೬ ||

ಬೇರೊಂದು ಪೌಜ ಮಾಡಿದ ಕಾಟಣ್ಣಗೆ
ಆರಿಸಿ ಮಾನ್ಯರನೆಲ್ಲ |
ಚಾರಮರಾಯನ ಮಕ್ಕಳ ಕೂಡಿಸಿ
ಆರು ಸಾವಿರ ಕುದುರೆಯನು || ೭ ||

ಹೊಸಮಲೆದುರ್ಗದ ಹಳೆಯ ಮಂದಿಯ ಕೊಟ್ಟ
ದೆಸೆಯುಳ್ಳ ಮನ್ನೆಮನ್ನೆಯರ |
ಕುಸುರಿದರಿವ ಗಡಿವಾಡದ ಮಂದಿಯ
ಹೆಸರಾದ ಗುರಿಕಾರರನು || ೮ ||

ಎಡಬಲದಲಿ ಏರಿ ಬರುವಂಥ ಪೌಜಿಗೆ
ನಡೆಯೊ ಕಾಟಣ್ಣ ನೀ ಮುಂದೆ |
ಬಿಡಬೇಡ ಅತ್ತಿತ್ತ ಚದರಿದ ಕುದುರೆಯ
ಇಡಿಸಯ್ಯ ಬಿಲ್ಲಿನ ಕೂಡ || ೯ ||

ಹೊಣಕೆಯ ಭಟರೆಲ್ಲ ಬೇರೊಂದು ಗುಂಪಾಗಿ
ಕುಣಿವುತ ರಾಮನ ಮುಂದೆ |
ಕೆಣಕುತ ಎಡಬಲ ಬಾಹಂತ ಖಾನರ
ರಣಕೆ ಕಾಲ್ಗೆದರುತಲವರು || ೧೦ ||

ಒತ್ತರಿಸಿ ಬರುವ ರಾಮನ ಬಲವನು ಕಂಡು
ಮುತ್ತಿಗೆ ತೆಗೆದು ಓಡಿದರು |
ಹತ್ತಿತು ಗಲಿಬಿಲಿ ದಂಡಿನ ಒಳಗೆಲ್ಲ
ಸುತ್ತಲು ಗಲಭೆ ಗುಲ್ಲುಗಳ || ೧೧ ||

ಕೇಳಿದ ನೇಮಿಯು ಗಲಭೆಗಳನು ಎದ್ದು
ಊಳಿಗದವರನು ಕಳುಹಿ |
ಸಾಳುವ ರಾಮ ದುರ್ಗವನಿಳಿದು ಬಂದ
ಕಾಳಗಕಿದಿರಾಗಿ ನಮಗೆ || ೧೨ ||

ಸುದ್ದಿಯ ಕೇಳುತ ಎದ್ದನು ಸುರಿತಾಳ
ಗದ್ದಲಿಸುತ ಖಾನರನು |
ಮುದ್ದುಖಾನರ ಕೂಡಿ ಆನೆಯನೇರಿದ
ತಿದ್ದಿದ ಮುಖದ ಮೀಸೆಯನು || ೧೩ ||

ಎಡಬಲದಲಿ ಗಜವಿಂಡು ನಡೆದವಾಗ
ಅಡವಿಯ [ಮೊರ]ಡಿಯಿಂದದಲಿ |
ಪಡೆಯೆಲ್ಲ [ನೊರೆಯ] ಸಾಗರದಂತೆ ಮುಂದಕ್ಕೆ
ನಡೆಯಿತು ನೇಮಿಯ ಪೌಜು || ೧೪ ||

ಹಿಂದೆ ಬರುವ ವಾಜಿ ಎಂಬತ್ತು ಸಾವಿರ
ಮುಂದಣ ಪೌಜೊಂದು ಲಕ್ಷ |
ಬಂದಿತು ಎಡಬಲ ಐವತ್ತು ಸಾವಿರ ವಾಜಿ
ಸಂದಣಿಯೇನ ಬಣ್ಣಿಸುವೆ || ೧೫ ||

ಡೊಳ್ಳು ಢಮಾಮಿ ಗಿಡಿಬಿಡಿ ಕೊಂಬು ನಿಸ್ಸಾಳೆ
ಸ್ಸಾಳೆ ಕಹಳೆ ನಗಾರಿ ನೌಬತ್ತು |
ಪಾಳೆಗಾರರ ಪೌಜು ಅರುವತ್ತು ಸಾವಿರ
ಕ್ಷೋಣಿಪ ನೇಮಿ ನಡೆದನು || ೧೬ ||

ಮುಂದಕ್ಕೆ ಸಾಗಿ ಬಂದಿತು ಕುದುರೆಯ ಪೌಜು
ಒಂದೊಂದು ಗುಡ್ಡಗಳಂತೆ |
ಸಂಧಿಸಿ ಉಭಯ ಬಲವು ಕೂಡಿ ಕಡಿದಾಡೆ
ಅಂದವನೇನ ಬಣ್ಣಿಸುವೆ || ೧೭ ||

ಕೋಲು ಖಂಡ್ರಿಸಿ ಬೀಳೆ ಕರುಳಿನ ಮಲೆಯೊಳು
ಬಾಳೆಯಂದದಿ ತೊಡಕಿದವು || ೧೮ ||

ಉರುಳಿ ಬೀಳುವ ತಮ್ಮ ತಲೆಗಳ ತಿರುಹಿಟ್ಟು
ಶಿರವನರಿಯದೆ ಮುಂದೆ ನಡೆಯೆ |
ಈ ರೀತಿಯಲ್ಲಿ ಕಾಲ್ಬಲವು ಹೊಯ್ದಾಡಿತು
ಮೀರಿತು ರಣರಂಗದೊಳಗೆ || ೧೯ ||

ಎತ್ತ ನೋಡಿದರತ್ತ ವಾಜಿಗಳ ಪೌಜುಗಳು
ಒತ್ತಿ ಬಂದವು ರಾಮನೆಡೆಗೆ |
ಸುತ್ತಮುತ್ತಲು ತನ್ನ ಕುದುರೆಯ ಪೌಜನು
ಒತ್ತಿ ನಡೆಸಿ ಅವರ ಮೇಲೆ || ೨೦ ||

ವಿಭವದೊಳ್‌ ರಾಮನು ಅರಸುಮಕ್ಕಳ ಕೂಡಿ
ನಬಿಯಖಾನನ ಕೆಡಹಿದರು || ೨೧ ||

ರಾಮನ ಬಲವ ಒಡೆ ತುಳಿಸುತ ನೇಮಿಯ
ನೇಮಿಯ ಖಾನರು ಬೆನ್ನತ್ತಿ ಬರಲು |
ಭೂಮಿಯಾಕಾಶಕೆ ಕೆಂಧೂಳು ಮುಸುಕಲು
ಮಾಮನೆಯಾಯ್ತು ಶಬರರಿಗೆ || ೨೨ ||

ಇಕ್ಕೆಲದಲಿ ಏರಿ ಬರುವಂಥ ಪೌಜನು
ಗಕ್ಕನೆ ಕಂಡು ರಾಮಯ್ಯ |
ಹೊಕ್ಕನು ಬೊಲ್ಲನ ಝಾಡಿಸಿ ಮುಂದಕ್ಕೆ
ಒಕ್ಕಲಿಕ್ಕುತ ತುಳಿಸಿದನು || ೨೩ ||

ಎಡಬಲದಲಿರ್ದ ಮನ್ನೆಯರೆಲ್ಲರು
ಒಡನೊಂದು ಸಾವಿರ ಬಲವು |
ದೃಢಗಲಿ  ರಾಮ ಹೊಕ್ಕಿರಿಯಲು ತುರುಕರ
ಪಡೆ ಮುಳುಗಿತು ನಿವಹದೊಳಗೆ || ೨೪ ||

ಒಂದು ಬಾರಿಗೆ ಎತ್ತಿ ಕಡಿಯಲು ರಾಮಯ್ಯ
ಕೊಂದುದು ಬೊಲ್ಲ ನಾಲ್ವರನು |
ಮುಂದೆ ಸುಳಿವ ಖಾನನ ಕಚ್ಚಿ ಎಳೆಕೊಂಡು
ಬಂಧಿಸಿ ಕಾಲೊಳು ತುಳಿದು || ೨೫ ||

ಮನ್ನೂಲ ಮಾಚನು ತಲೆಯ ತಂದೊಪ್ಪಿಸೆ
ಮಾನ್ಯರೆಲ್ಲರು ಕೈಯ್ಯ ಮುಗಿದು |
ಚೆನ್ನ ಬಾಣದ ಬಸವಯ್ಯ ಬಾಣಕೆ ನಾಲ್ಕು
ಮುನ್ನೂರು ಕುದುರೆಯ ಕೊಂದ || ೨೬ ||

ಬೂಟಕ ಬೊಮ್ಮಯ್ಯ ಎಕ್ಕಟಿಗರು ಕೂಡಿ
ಬಿಟ್ಟರು ಸರಳಂಬುಗಳನು |
ನೆಟ್ಟವು ವಾಜಿಯ ಬೆನ್ನ ತಟ್ಟುಗುಚಿನ್ನು
ಬಿಟ್ಟು ಓಡುತ ತುರುಕರ ಪಡೆಯು || ೨೭ ||

ಗುತ್ತಿಯಖಾನನು ಹತ್ತಿ ಬರುವವರ ಮೇಲೆ
ಹತ್ತಿದ ತನ್ನ ಮಂದಿಯೊಳು |
ಕುತ್ತಿಗೆಗಳ ಕೊಯ್ಸುತ ತುರುಕರ ಪಡೆಯ
ಮುತ್ತಿಕೊಂಡನು ಸಾವಿರವ || ೨೮ ||

ಯನುಮಾಲ ಚಿತ್ತನು ಯರಬೋತು ಗಂಗನು
ಚಿನುಮದ ಚಿಕ್ಕ ತಮ್ಮುಗನು |
ಪೆನಗುಂಡೆ ಪಾಪನಾಯಕರು ಇವರೆಲ್ಲರು
ರಣಧೂಲಖಾನನ ಮುತ್ತಿ || ೨೯ ||

ಕೊಂದರು ಇವನೊಳು ಸಾವಿರ ಕುದುರೆಯ
ಮಂದಿಯೆಂಬುದು ಲೆಕ್ಕವಿಲ್ಲ |
ಮುಂದುವರಿದು ಬಂದು ಖಾನ ವಜೀರರ
ಕೊಂದರು ರಣಧೂಲ ಬಿದ್ದ || ೩೦ ||

ಕಬ್ಬುಲಿ ನಾಗ ಹೆಬ್ಬುಲಿ ಚಿಕ್ಕ ಬೈಯಣ್ಣ
ಅಬ್ಬಯ್ಯನಾಯಕನವರು |
ತಬ್ಬಿಬ್ಬಗೊಳಿಸುತ ತುರುಕರ ಪಡೆಯನು
ಅಬ್ದೂಲಖಾನನ ಹೊಯ್ದು || ೩೧ ||

ಅಸಗೋಡ ಬಸವನು ಅಕ್ಕಸಾಲೆರ ಚಿಕ್ಕ
ಹೊಸಮಂದಿಯನು ಕೂಡಿಕೊಂಡು || ೩೨ ||

ಕುಕ್ಕಲಿರಿದು ತಲೆಗಳ ಹೊಯ್ದು ಮುಂದಕ್ಕೆ
ಹೊಕ್ಕರು ನೇಮಿಯ ಮೇಲೆ |
ಹೊಕ್ಕರು ನೇಮಿಯಖಾನನ ಪೌಜಿಗೆ
ಇಕ್ಕೆಲದಲಿ ಮಂದಿ ಕೂಡಿ || ೩೩ ||

ಬುಕ್ಕನ ಪಾಲನು ಹೊಕ್ಕನು ರಣದೊಳು
ಕಕ್ಕುತ ಇಟ್ಟಿಹ ಪೌಜ || ೩೪ ||

ಅಗಣಿತ ಸಿಂಗನು ಬೆಂಗಳೂರ ಚಿಕ್ಕನು
ಬಗೆದು ಹೊಕ್ಕನು ರಣದೊಳಗೆ |
ಸುಗುಣ ಗಾಣೀಗ ಬೊಮ್ಮಕಾಮಗೇತಿಯ ತಿಮ್ಮ
ಜಗಳವೆಂದರೆ ಕಡೆಯಿಲ್ಲ || ೩೫ ||

ಒಕ್ಕಲಿಗರ ಮುದ್ದ ಹೊಕ್ಕನು ರಣದೊಳು
ರಕ್ಕಸ ಮಾದನು ಕೂಡಿ |
ಸೊಕ್ಕಿದ ನೇಮಿಖಾನರ ಮೇಲೆ ಇರಿದರು
ಹೊಕ್ಕು ಹೊಡೆದು ಭಾಷೆನುತ || ೩೬ ||

ನಲ್ಲೂರ ನಲ್ಲನು ನಿಡಿಗಲ್ಲ ಕಾಮನು
ಬಿಲ್ಲ ಪೆನ್ನನು ದ್ಯಾವನರು |
ಬಲ್ಲಿದ ಖಾನರ ಇರಿದು ಹಿಂದಕ್ಕೆ ಮೆಟ್ಟಿ
ನಿಲ್ಲದೆ ನೇಮಿಯ ಮೇಲೆ || ೩೭ ||

ಮಾದಿಗ ಹಂಪನು ಹೊಕ್ಕು ಬಂದನು ಬೇಗ
ಸಾಧಿಸಿ ಕೊಲುತ ತುರುಕರನು |
ಭೇದಿಸಿ ಕೊಂದು ಹಿಡಿಯಾಳ ಹಿಡಿದು ರಾಮ
ಗಾದ ಮಾನ್ಯರು ಒಕ್ಕಹೊಕ್ಕು || ೩೮ ||

ಹೊಲೆಯರು ಹೊನ್ನುಗ ಅಲಗಿನ ಭರ್ಚಿಯೊಳ್
ಹಲವು ಮಂದಿಯ ಕೂಡಿಕೊಂಡು |
ಬಲದಲ್ಲಿ ಬರುವಂಥ ಖಾನರ ಕೊಂದರು
ಛಲದಂಕ ರಾಮನ ಹುಜರ || ೨೯ ||

ಒಡಗೊಂಡು ಸಾವಿರ ಕುದುರೆಯ ಕೊಂದರು
ಹಿಡಿಯಾಳು ಲೆಕ್ಕ ಕಡೆಯಿಲ್ಲ |
ನೇಮಿಖಾನನ ಸುತ್ತಮುತ್ತ ಎಡಬಲದೊಳು
ಭೂಮಿಯೊಳಗೆ ರಕ್ತ ಹರಿದು || ೪೦ ||

ಬೊಲ್ಲನ ಜೂಟಿಸಿ ಬಿಟ್ಟನು ರಾಮಯ್ಯ
ನಿಲ್ಲದೆ ನೇಮಿಯ ಮೇಲೆ |
ಬಿಲ್ಲಿಂದ ಹೊಡೆದು ನ್ಯಾಜ್ಯದೊಳು ಹೊಕ್ಕಿರಿದನು
ಎಲ್ಲ ಖಾನರ ಮುತ್ತಿಕೊಂಡು || ೪೧ ||

ಲಕ್ಷ ಸಿಂಗಾಡಿ ಮುತ್ತಿತು ರಾಮನ ಮೇಲೆ
ಲಕ್ಷ ದಳವ ನೋಡೆ ತುಳಿದು |
ಪಕ್ಷಿಯಂದದಿ ಹಾರಿ ಬೊಲ್ಲ ಈ ಕಡಿಗಿನ್ನು
ದಕ್ಷಿಣ ಭಾಗದ ಪೌಜ || ೪೨ ||

ನೋಡಲು ನೇಮಿಯು ಓಡಿದ ಸಿಕ್ಕದೆ
ಕೂಡಿದ ಕುದುರೆಯ ಪೌಜ |
ಝಾಡಿಸಿ ಬೊಲ್ಲನ ಹಾಕಿ ಹಿಂದಕೆ ರಾಮ
ನೋಡಿರೆ ನೇಮಿಯನೆನುತ || ೪೩ ||

ಕಾಲಬಲದ ಮೇಲೆ ಬಿದ್ದರು ರಾಮಯ್ಯ
ಸಾಲುದಲೆಗಳ ಹೊಯ್ಸುತಲಿ |
ಸಾಲಾಗಿ ನಿಂತಿರ್ದ ಪೌಜಿಗೆ ಹೊಗಲೇರಿ
ಬಾಳೆಯೊಳು ಕರಿ ಹೊಕ ತೆರದಿ || ೪೪ ||

ಮುರಿಯಿತು ಕಾಲ್ಬಲ ಮೂರು ಸಾವಿರ ಮಂದಿ
ಒರಗಿತು ಗಾಯ ಕಡೆಯಿಲ್ಲ |
ಬಿರಿದಿನ ಬಂಟರು ಹೊಕ್ಕಿರಿಯಲು ಬಹು
ಅರುವತ್ತು ಸಾವಿರ ಬಲವು || ೪೫ ||

ಕಾಲಬಲದ ಮೇಲೆ ಬಿದ್ದ ರಾಮನು ಎಂದು
ಬಾಲದ ಬಣ್ಣದ ವಾಜಿ |
ಸಾಲಿಟ್ಟು ಐವತ್ತು ಸಾವಿರ ಕುದುರೆಯು
ಮೇಲೆ ಬಿದ್ದಿತು ರಾಮಯ್ಗೆ  || ೪೬ ||

ಸಿಂಗಾಡಿ ಸೋನಯ ಮಳೆಯಂತೆ ಸುರಿವುತ
ಕಂಗೆಡಿಸುತ ಅರಿಬಲವ |
ಮಗಳ ಬೊಲ್ಲನನೇರಿ ರಾಮನ ಮೇಲೆ
ಮುಂಗುಲಿಖಾನ ತಾ ಹೊಡೆದ || ೪೭ ||

ಹೊಡೆದ ಪೆಟ್ಟನು ತಪ್ಪಿಸಿಕೊಂಡು ರಾಮಯ್ಯ
ಅಡ್ಡಹಾಯ್ದು ಬೊಲ್ಲನ ಮೀಟಿ |
ದೊಡ್ಡಖಾನನು ನೀನು ಅಹುದೆಂದು ಮಂಗುಲಿಯ
ಅಡ್ಡ ಹೊಯ್ದನು ಎರಡು ತುಂಡ || ೪೮ ||

ಬಿದ್ದ ಮುಂಗುಲಿಖಾನನೆಂದು ವಜೀರರು
ಎದ್ದು ರಾಮಯ್ಯನ ಮೇಲೆ |
ಇದ್ದಂಥ ಖಾನರೆಲ್ಲರು ಕೂಡಿ ಒಂದಾಗಿ
ಬಿದ್ದರು ರಾಮನ ಮೇಲೆ || ೪೯ ||

ಸುತ್ತಮುತ್ತಲು ವಾಜಿ ಸಿಂಗಾಡಿ ಪೆಟಲಿಗೆ
ತತ್ತಳಗೊಳುತ ಶಬರರು |
ಒತ್ತಿ ರಾಮಯ್ಯ ಖಾನರ ಮೇಲೆ ಹೊಯ್ದನು
ಮುತ್ತಿದ ತುರುಕರನೆಲ್ಲ || ೫೦ ||

ಕರುಳು ಹರಿದು ಕಾಲು ಖಂಡ್ರಿಸಿ ತೋಳ್ತೊಡೆ
ಉರುಳಿ ಬಿದ್ದರು ವಾಜಿಯಿಂದ |
ಕೊರಳ ಕತ್ತರಿಸಿ ಬೆರಳ ಗಾಯ ಘನವಾಗಿ
ತೆರಳಿ ಹೋದರು ತಮತಮಗೆ || ೫೧ ||

ಮೂಡಣ ಪೌಜಿಗೆ ಬೊಲ್ಲನ ಹಾಕಿದ
ಕೋಡುಗಲ್ಲಿನ ತನಕ ಗದುಮಿ |
ಕೂಡಿದ ತುರುಕರನೆಲ್ಲ ಸವರುತ ಪೋಗೆ
ಹೇಡಿಗೊಂಡಿತು ನೇಮಿ ಪೌಜು || ೫೨ ||

ಪಡುವಣ ಪೌಜಿಗೆ ಹಾಕಿದ ಬೊಲ್ಲನ
ಕಡಿದನು ರಣದೊಳು ಪೊಕ್ಕು |
ಒಡನೆ ಮನ್ನೆಯರೇರಿ ತಲೆಗಳನು ಕುಟ್ಟಲು
ಅಡೆಯೆ ತುರುಕ ರಾಹುತರು || ೫೩ ||

ಉತ್ತರ ದಿಕ್ಕಿನ ಪೌಜಿಗೆ ಬೊಲ್ಲನ
ಒತ್ತಿ ಮೀಟಿದ ರಾಮನಾಗ |
ಸುತ್ತಿ ತುರುಕರ ಪಡೆಯನೆಲ್ಲವ ಸವರಿ
ಒತ್ತಿದ ಕಡೆಕಲ್ಲ ತನಕ || ೫೪ ||

ಹಿಂದಕ್ಕೆ ಕುದುರೆಯ ಮೀಟಿ ರಾಮಯ್ಯನು
ಬಂದನು ಡೇರೆದ ಬಳಿಗೆ |
ಮುಂದುಳಿದಂಥ ತುರುಕರನೆಲ್ಲ ಕೊಲ್ಲುತ
ಹೊಂದಿ ಸವರುತ ಮುನ್ನೆಯರ || ೫೫ ||

ಜೋಳದ ಸೊಪ್ಪೆಯು ಹೊಲದೊಳು ಬಿದ್ದಂತೆ
ಹಾಳಾಯಿತು ನೇಮಿ ದಂಡು || ೫೬ ||

ಒಡೆದು ಓಡುವ ದಂಡನೆಲ್ಲ ಕೂಡಿಸಿ ನೇಮಿ
ಬಿಡದೆ ಪೌಜನು ಮಾಡಿಕೊಂಡು |
ಒಡನೊಂದು ಲಕ್ಷ ಮಂದಿಯು ವಾಜಿ ಕಡೆಯಿಲ್ಲ
ತಡೆಯದೆ ರಾಮನ ಮೇಲೆ || ೫೭ ||

ಇದಿರೇರಿ ಬರುವ ನೇಮಿಯ ಕಂಡು ರಾಮಯ್ಯ
ಅದ ಕೋ ಉಳಿದನೆಂದು ನೋಡಿ |
ಹದಲಿಲ್ಲ ಮನ್ನೇರ ಕೂಡಿ ಹೊಕ್ಕನು ರಾಯ
ಬೆದರಿತು ಕುದುರೆಯ ಪೌಜು || ೫೮ ||

ಸುತ್ತಲಿ ಕಡಿದಾಡಿ ಬರುತ ಕಾಟಣ್ಣನು
ಒತ್ತಿ ನೋಡಿದ ದೊಡ್ಡ ಪೌಜ |
ಮುತ್ತಿಕೊಂಡರು ರಾಮಯ್ಯನನೆನುತಲಿ
ಮತ್ತೋಡಿಬಂದು ಕೂಡಿದನು || ೫೯ ||

ಕಾಟನ ಒಡನಿದ್ದ ಮಾನ್ಯರು ರಾಹುತರು
ದೂಟಿಸಿ ಹೊಕ್ಕು ನೇಮಿಯನು || ೬೦ ||

ರಾಮನ ಮೇಲೆ ನಿಲ್ಲುವುದಿಲ್ಲ ದಂಡೆಂದು
ನೇಮಿ ಚಿಂತಿಸಿ ಮನದೊಳಗೆ |
ಕಾಮುಖಖಾನರ ಕೂಡಿ ಬಿದ್ದನು ಮೇಲೆ
ಭೂಮಿ ತಲ್ಲಣಿಸಿ ಭೋರಿಡುತ || ೬೧ ||

ಹೆಣಗಳು ಬಿದ್ದು ಮುಂಡಗಳು ಕುಣಿವುತ ಬರೆ
ರಮಣಮಯವಾಯ್ತು ಭೂಮಿಯಲಿ |
ರಮಣಮಯ ಹೆಣಮಯವಾಯ್ತು ರಣರಂಗ
ರಣರಂಗ ಬಿಟ್ಟು ಓಡಿದ ನೇಮಿಖಾನ || ೬೨ ||

ಕುಣಿದಾಡಿದವು ಶಾಕಿನಿ ಭೂತ
ಕುಣಿದಾಡಿ [ತಿಂದು]ತೇಗಿದವು |
ದಣಿಯಲೆ ತಿಂದು ರಾಮನ ಕೊಂಡಾಡಿದವು
ಅಣಕವಾಯಿತು ರಣದೊಳಗೆ || ೬೩ ||

ಹಬ್ಬವ ಮಾಡಿ ಉಣಿಸಿದ ರಾಮುಗನೆಂದು
ಉಬ್ಬಿ ಕೊಂಡಾಡುತ ಕುಣಿದು |
ಬೊಬ್ಬಯನಿಡುತ ರಣದೊಳು ಭೂತಗಳು ಕೂಗೆ
ಗಬ್ಬಿ ರಾಮಯ್ಯ ನೋಡಿದನು || ೬೪ ||

ಓಡಿಹೋದರು ತುರುಕರು ಎಲ್ಲ ಅಲ್ಲಲ್ಲಿ
ಕೂಡಿ ಮಾತಾಡಿಕೊಂಡವರು |
ನಾಡಿನೊಳ್ ರಾಮಗೆ ಇದಿರಿಲ್ಲವೆನುತಲಿ
ಜೋಡಿಸಿಕೊಂಡು ಗಂಟುಗಳ || ೬೫ ||

ಹೋಗುವ ನೇಮಿಯ ಬೆನ್ಹತ್ತೆ ರಾಮಯ್ಯ
ಬೇಗ ತೊರೆಯ ದಾಂಟಿ ನೇಮಿ |
ಸಾಗಿದ ಮುಂದಕೆ ಬಾದಾಮಿತನಕಲಿ
ಜಾಗ್ರತೆಯೊಳು ಹಗಲಿರುಳು || ೬೬ ||

ಹಿಡಿಸಿದ ಧರ್ಮಗಹಳೆಯನು ರಾಮಯ್ಯ
ಕಡಿವಂಥ ಮನ್ನೆಯರೆಲ್ಲ |
ಒಡನೆ ತಿರುಗಿ ಹಿಂದಕೆ ನಿಂತರೆಲ್ಲರು
ತಡೆದರು ಅಲ್ಲೊಂದು ದಿನವು || ೬೭ ||

ಒಡನೆದ್ದು ಹಿಂದಕ್ಕೆ ತಿರುಗಿ ರಾಮಯ್ಯನು
ಬಿಡಿಸಿದ ಸಿಕ್ಕಿದವರನು |
ಕಡೆಯಾಯಿತು ಕಾಟಣ್ಣ ಹೋಗುವ
ನಡೆಯೆಂದ ರಾಮಯ್ಯನೊಡನೆ || ೬೮ ||

ಹುಲ್ಲ ಕಚ್ಚಿದರ ಹುತ್ತವನೇರಿ ಜಲದೊಳು
ನಿಲ್ಲದೆ ನಿಂತವರ ನೋಡಿ |
ಎಲ್ಲರ ನೋಡಿಬಿಡು ಎನುತ ರಾಮಯ್ಯನು
ಉಲ್ಲಾಸದಿಂದ ಕುಮ್ಮಟಕೆ || ೬೯ ||

ಮಗ ಗೆದ್ದು ಬರುವ ಸುದ್ದಿಯ ಕೇಳಿ ಕಂಪಿಲ
ಸೊಗಸಿಂದ ತನ್ನ ಪಟ್ಟಣವ |
ಮಿಗೆ ಶೃಂಗರಿಸಿ ತಳಿರು ತೋರಣದಿಂದ
ಹೊಗಲಿ ಅರ್ತಿಯಲಿ ರಾಮಯ್ಯ || ೭೦ ||

ಬಂದನು ಐದಾರು ಗಳಿಗೆಗೆ ರಾಮಯ್ಯ
ನಿಂದನು ಕುಮ್ಮಟದ ಮುಂದೆ |
ಅಂದು ರಾಮೇಶಗೆ ಶರಣೆಂದು ಹೊಕ್ಕನು
ತಂದೆಯ ಕಾಣಬೇಕೆಂದು || ೭೧ ||

ಸೊಕ್ಕ ಸಾರಂಗನ ಏರಿ ರಾಮಯ್ಯನು
ಉಕ್ಕುಡವನು ಹೊಗುವಾಗ |
ತಕ್ಕಂತೆ ಕುರಿಯ ಕಡಿಸಿ ನಿವಾಳಿ ಹಾಕಿ
ಹೊಕ್ಕನು ರಾಜಬೀದಿಯಲಿ || ೭೨ ||

ಊರೊಳಗುಳ್ಳ ಹೆಮ್ಮಕ್ಕಳು ಶೃಂಗರಿಸಿ
ಆರಳಿಗಳ ತಂದರಾಗ |
ವೀರ ರಾಮಯ್ಯಗೆ ಎತ್ತಿ ಹರಸಲಾಗ
ಆರತಿಯೊಳಗೆ ಹೊನ್ನುಗಳ || ೭೩ ||

ಹರಿವಾಣದಾರತಿಗಳ ತಂದು ಹರಿಯಮ್ಮ
ಭರದಿಂದ ಮಗಗೆ ಎತ್ತಿದಳು |
ಧುರದೊಳು ಗೆದ್ದು ಬಂದಂಥ ರಾಮಯ್ಯಗೆ
ಹರಸಿ ಎತ್ತಿದರು ಆರತಿಯ || ೭೪ ||

ಅಕ್ಕ ಮಾರಮ್ಮ ಸಿಂಗಮ್ಮನವರ ರಾಮ
ತೆಕ್ಕಿಸಿಕೊಂಡು ಹರುಷದಲಿ |
ಮುಕ್ಕಣ್ಣ ಶಿವನ ದಯದಿಂದ ಬಂದನು ರಾಮ
ಅಕ್ಕತಂಗಿಯರು ಹರುಷದಲಿ || ೭೫ ||

ಮುತ್ತಿನಾರತಿಯನೆತ್ತಿದರು ರಾಮಯ್ಯಗೆ
ಅರ್ತಿಯಿಂದಲಿ ಹರಸಿದರು || ೭೬ ||

ಎಲ್ಲರ ಕಳುಹಿಸಿ ನಿಲ್ಲದೆ ತಾನೆದ್ದು
ಉಲ್ಲಾಸದಲಿ ಅರಮನೆಗೆ |
ಇತ್ತ ರಾಮನು ತನ್ನ ಅರಮನೆಯನು ಹೊಕ್ಕ
ಅತ್ತ ನೇಮಿಯಖಾನ ಪೋಗಿ || ೭೭ ||

ಬರೆಸಿದ ರಾಮನ ಮೇಲಿನ್ನು ಕಾರ್ಯವ
ಇರದೆ ಎಲ್ಲರು ಕೂಡಿಕೊಂಡು |
ಬರುತೇವೆ ನಾವಿನ್ನು ಬಿಡುವುದಿಲ್ಲ ರಾಮನ
ಸೆರೆಯಕೊಂಡೊಯ್ವೆವು ನಾವು || ೭೮ ||

ವೀರಬಲ್ಲಾಳಗೆ ಮಾಡಿಗೊಂಡಗೆ ದೊಡ್ಡ
ಓರುಗಲ್ಲರಸು ಮುಂಗುಲಿಗೆ |
ಬೇರೊಂದು ಗುತ್ತಿಯ ಜಗದಪ್ಪಗೆ ನೇಮಿಯು
ಸಾರಿ ಬರೆಸಿದನು ವಾಲೆಯನು || ೭೯ ||

ಎಲ್ಲ ದೊರೆಗಳಿಗೆಲ್ಲ ಹ್ಯಾವ ಪಂಥವನಿಕ್ಕಿ
ಮೆಲ್ಲಗೆ ಕೂಚ ಮಾಡಿಸಿ |
ಅಲ್ಲಿಂದ ಡಿಳ್ಳಿಗೆ ಸಾಗಿ ತಾ ಹೋದನು
ಬಲ್ಲಿದ ಆರು ತಿಂಗಳಿಗೆ || ೮೦ ||

ಎಲ್ಲ ದಂಡೆಲ್ಲ ಚಿಕ್ಕ ಡಿಳ್ಳಿಗೆ ಇಳಿದರು
ಅಲ್ಲಿಂದ ಉಂಡುಟ್ಟು ಹೊರಟು |
ನಿಲ್ಲದೆ ರಾತ್ರಿ[ಯ] ಹೊತ್ತಿಗೆ ಮನೆಗಳಿಗೆ
ಬಲ್ಲಂತೆ ಹೋದರು ತಮಗೆ || ೮೧ ||

ಮುರಿದೋಡಿ ಬಂದ ಸುದ್ದಿಯ ಕೇಳಿ ಸುರಿತಾಳ
ಸುರಿತಾಳ ಕರೆಸಿದ ನೇಮಿಖಾನರನು |
ಭರದಿಂದ ಬಂದಡ್ಡಬಿದ್ದು ಮುಜುರೆ ಮಾಡಿ
ಸರನದ್ದು ನಿಂದು ಕೈಮುಗಿಯೆ || ೮೨ ||

ಕೊಟ್ಟದ ಬೇಡ ರಾಮನ ಹಿಡಿತರುವರೆ
ಬಿಟ್ಟುಬರುವರೆ ನೇಮಿಖಾನ |
ಇಷ್ಟು ಮಾತ್ರಕೆ ಕೊಂದೆ ಕಾನ ವಜೀರರ
ಬೆಟ್ಟದ ರಾಮಗೆ ಅಂಜಿ || ೮೩ ||

ಭಾಪುರೆ ಪಾಚ್ಛಾ ಕೇಳ್ ಕೋಪವ ಮಾಡದೆ
ಮಾಡದೆ ಈ ಪರಿ ಕಾಳಗವಿಲ್ಲ |
[ಅಪಾ]ರಮಹಿಮ ಛಲದಂಕನಹುದು ರಾಮ
ಭೂಪರೊಳು ಹುಟ್ಟಲರಿದು || ೮೪ ||

ದುರ್ಗವೆಂಬುದು ತರುಗಿರಿಬೆಟ್ಟ ಕುಮ್ಮಟ
ಗರ್ವ ರಾಮಯ್ಯ ತಾ ಹೊರಟ |
ನುಗ್ಗುಮಾಡಿ ಖಾನಖಾನರನೆಲ್ಲರ ಹೊಂದನು
ಸ್ವರ್ಗದ ಪತಿ ಶಿವ ಬಲ್ಲ || ೮೫ ||

ರಾಮನ ಕತ್ತಿಗೆ ಇದಿರಿಲ್ಲ ರಾಜ್ಯದೊಳ್
ಕಾಮನ ರೂಪು ಚೆನ್ನಿಗನು |
ಭೂಮಿಯೊಳಗೆ ಅವ ಕೈಸೆರೆ ಸಿಕ್ಕುವನಲ್ಲ
ಸೋಮಶೇಖರ ಶಿವ ಬಲ್ಲ || ೮೬ ||

ಎಂದ ಮಾತನು ಕೇಳಿ ಸುರಿತಾಳ ಪಾಚಾವ ಇ
ನ್ನೊಂದು ಬಾರಿಗೆ ನೋಡಿಕೊಂಬ |
ಬಂದಂಥ ಖಾನರ ಸಮಜಾಯಿಸಿ ಸುರಿತಾಳ
ನಂದು ಮನೆಗೆ ಕಳುಹಿದನು || ೮೭ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಕದನದೊಳ್ ನೇಮಿಯ ಗೆದ್ದನು ರಾಮಯ್ಯ
ಪದಗಳು ಮುಗಿಯೆ ಸಂಪೂರ್ಣ || ೮೮ ||

ಅಂತು ಸಂಧಿ ೧೨ಕ್ಕಂ ಪದನು ೧೨೧೯ಕ್ಕಂ ಮಂಗಳ ಮಹಾಶ್ರೀ