ಶ್ರೀ ಗಿರಿಜಾ[ಸ್ಯಾಂಬುಜ ದಿನ] ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ||

ರಾಮನ ನೆನೆ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆನೆ ಕಂಡ್ಯಾ ತನುವೆ |
ರಾಮರಾಮಾ ಎಂಬ ನಾಮವ ನೆನೆದರೆ
ಕಾಮಿತ ಫಲವೀವ ರಾಮ || ೨ ||

ಸಕ್ಕರೆ ಸವಿದಂತೆ ಮಧುರ ಮಾವಿನಹಣ್ಣು
ಉಕ್ಕುವ ತನಿರಸದಂತೆ |
ಮಕ್ಕಳ ಮಾಣಿಕದಂತೆ ರಾಮನ ಕೃತಿ
ಸತ್ಕವಿಗಳು ಲಾಲಿಪುದು || ೩ ||

ಇತ್ತ ರಾಮಯ್ಯ ತಾ ಒತ್ತಿ ರಾಜ್ಯವನಾಳೆ
ಸುತ್ತಣ ರಾಯರ ಹೊಡೆದು |
ಅತ್ತ ಡಿಳ್ಳಿಯೊಳು ಬಾದೂರಖಾನಗೆ
ಮೃತ್ಯುಬಂಧವಗೆಡಿಸಿದರು || ೪ ||

ಮಾಡಬಾರದ ತಪ್ಪ ಮಾಡಿ ಬಾದೂರಖಾರ
ಓಡಿಬಂದನು ಡಿಳ್ಳಿ ಬಿಟ್ಟು |
ಕೂಡೈದು ಮಂದಿ ರಾಹುತರ ಕರಕೊಂಡು
ಕಾಡರಸುತ ರಾತ್ರಿಯಲಿ || ೫ ||

ಈ ಧರೆಯೊಳು ನಮ್ಮ [ಮೊರೆ] ಹಾಕಿಕೊಂಡು ತಾ
ಕಾದುವ ದೊರೆಗಳಿನ್ನಾರು |
ಆದರೊಳ್ಳಿತು ತನ್ನ ಮಾನವುಳಿದರೆ ಸಾಕು
ಭೇದ ಹುಟ್ಟಿದವು ಡಿಳ್ಳಿಯೊಳು || ೬ ||

ಸಾದಿಸೆನೆಂದರೆ ಶಕ್ತಿ ಸಾಲದು ಮುಂದೆ
ಹಾದಿ ಹತ್ತುವುದು ಲೇಸೆನುತ |
ಈ ಧರೆಗೆಲ್ಲ ಪಚ್ಛಾವನ ಪಾವುಗೆ
ನೆರೆದು ಮೆಟ್ಟಿದನಂತೆ ರಾಮ || ೭ ||

ಬಿರಿದಕಂನಹುದು ನಾನಲ್ಲಿಗೆ ಪೋ[ಪೆ]ನೆಂ
ದಿರದೆ ಬಂದನು ಬಾದೂರ |
ಬೆಳಗೊ ಹೊತ್ತಿಗೆ ಹತ್ತು ಗಾವುದ ಬಂದನು
ಒಳಗುದುರೆಯನೇರಿಕೊಂಡು || ೮ ||

ಕುಳಿತಲ್ಲಿ ಕುಳ್ಳಿರದೆ ನಿಂತಲ್ಲಿ ನಿಲ್ಲದೆ
ಹೊಳೆಯ ದಂಡೆಗೆ ಬಂದನಾಗ |
ಬುತ್ತಿಗಳನು ಉಂಡು ಮುಂದಕೆ ಸಾಗಿದನು
ಮತ್ತೆ ಬೈತನಕ ಬೆಳತನಕ || ೯ ||

ಒತ್ತಿ ನಡೆದನು ಮತ್ತಿಪ್ಪತ್ತು ಗಾವುದ
ಎತ್ತ ಹೋಗುವೆನೆಂದೆನುತ ಈ |
ರೀತಿಯಲಿ ಹತ್ತಉ ದಿವಸಕೆ ನರ್ಮದೆಯ
ತೀರವ ದಾಂಟಿದನಾಗ || ೧೦ ||

ಧಾರುಣಿಯೊಳಗೆ ಬಲ್ಲಿದನು ಮುಂದುಲಿರಾಯ
ಸೇರಬೇಕೆಂದು ನಡೆದನು |
ಬಾದೂರಖಾನನು ಬಂದನೆಂಬುದ ಕೇಳಿ
ಚೋದ್ಯವಾದನು ಮುಂಗುಲಿರಾಯ || ೧೧ ||

ಇದೇನು ಕಾರಣವೆಂದು ಕರೆಸಿದನಾಗ
ಭೇದವ ತಿಳಿಯಬೇಕೆಂದು |
ಬಂದ ಬಾದೂರಖಾನ ನಿಂದು ಮುಂದುಲಿರಾಯ
ಗೊಂದಿಸಿ ಉಡುಗೊರೆನಿತ್ತು || ೧೨ ||

ಇಂದು ನಮ್ಮನು ನಿಲ್ಲಿಸಿದ ಕಾರಣ[ವೇನು]
ಎಂದನು ಬಾದೂರಖಾನ |
ಸಂದೇಹವಾದರೆ ಸಾಗೆವು ಮುಂದಕೆ ನಾ
ವೆಂದಾನು ಖಾನ ವಜೀರ || ೧೩ ||

ಅಲ್ಲಿಂದ ಬಿಟ್ಟು ನೀ ಬಂದ ಸುದ್ದಿಗಳು
ಎಲ್ಲವ ಪೇಳು ನನ್ನೊಡನೆ |
ಇಲ್ಲದ ಸಂಶಯ ಪುಟ್ಟಿತು ನಮ್ಮೇಲೆ
ನಿಲ್ಲದೆ ಬಂದೆನು ರಾಯ || ೧೪ ||

ನಿಲ್ಲಿಸಿಕೊಂಡೇವು ನೇಮಿ ಬಂದರೆ ನಾಳೆ
ಎಲ್ಹೊಕ್ಕೊಬೇಕು ಬಾದೂರನೆ |
ಮೆಲ್ಲನೆ ಮುಂದಕ್ಕೆ ಸಾಗೆಂದು ಮುಂಗುಲಿರಾಯ
ವೀಳ್ಯ ಉಡುಗೊರೆ ಕೊಟ್ಟನವಗೆ || ೧೫ ||

ವೆಚ್ಚಕ್ಕೆ ಕೊಡುವಷ್ಟು ಹೊನ್ನು ಕೊಟ್ಟವನಿಗೆ
ಉಚ್ಚಾಹದಲಿ ಕಳುಹಿದನು |
ರಚ್ಚೆಯ ಮಾಡದೆ ಹೋಗಿ ಮುಂದಕೆ ನಿ
ಮ್ಮಿಚ್ಚೆ ಇದ್ದಂತೆ ನಡೆಯೆಂದ || ೧೬ ||

ಓರುಗಲ್ಲಿಗಾಗಿ ಬಂದನು ಬಾದೂರ
ವೀರ ಪ್ರತಾಪನ ಕಂಡು |
ಧಾರುಣಿಯೊಳು ನೀ ಬಲ್ಲಿದನಹುದೆಂದು
ಸೇರಿದೆವಯ್ಯ ನಾವ್ನಿಮ್ಮ || ೧೭ ||

ನಿಮ್ಮನಿಲ್ಲಿಸುವುದು ನಮ್ಮ ಕೈಲಾಗದು
ಗಮ್ಮನೆ ನೇಮಿ ತಾ ಬರಲು |
ಸುಮ್ಮನೆ ಹಿಡಿಕೊಡು ಎಂದರೆ ನಮಗಿನ್ನು
ಸಾಮ್ಯವೆ ಅದು ನಮಗೆ ಗುಣವೆ || ೧೮ ||

ಬಂದ ಬಾದೂರಖಾನಗೊಂದು ವೀಳ್ಯವನಿತ್ತು
ಮುಂದಕ್ಕೆ ಸಾಗಿ ನೀವೆಂದ |
[ಹಿಂ]ದುವ ರಾಮನು ಬಲ್ಲಿದನವ ನಿಲಿಸುವ
ನೆಂದು ಪ್ರತಾಪ ಹೇಳಿದನು || ೧೯ ||

ಅವನಲ್ಲದಿನ್ಯಾರು ನಿಲಿಸುವಂಥವರಿಲ್ಲ
ಭುವನದೊಳಗೆ ನಿಮ್ಮನಾರು |
ಅಹುದೆಂದು ಸಾಗಿದನವನು ಮುಂದಕೆ ಬೇಗ
ಕುವರ ರಾಮನ ನೋಡ್ವೆನೆನುತ || ೨೦ ||

ಗುತ್ತಿಯಾನಾಳುವ ಜಗದಪ್ಪರಾಯನ
ಒತ್ತಿಗೆ ಬಂದ ಬಾದೂರನು |
ಎತ್ತಣಿಂದಲಿ ಬಂದಿರೆನುತ ಜಗದಪ್ಪನು
ಒತ್ತಿ ಕೇಳಿದನು ಗುತ್ತಿಯರಸು || ೨೧ ||

ಡಿಳ್ಳಿಯ ಬಿಟ್ಟು ಬಂದೆವು ಜಗದಪ್ಪ
ತಳ್ಳಿ ತಗಾದಿಯ ಮಾಡಿ |
ಪೊಳ್ಳು ಹೋಗಲಿಬೇಡ ಜಗದೊಳು ನೀ ದೊಡ್ಡ
ಪಾಳ್ಯೆಯ ದೊರೆಯೆಂದು ನಾವು || ೨೨ ||

ಜಗದೊಳು ಕಂಪಿಲರಾಯನ ಮಗ ರಾಮ
ಅಗಣಿತ ಬಿರಿದ ಧರಿಸಿಹನು |
ಸೊಗಸಿಂದ ನೀವು ಅಲ್ಲಿಗೆ ಹೋಗಿರೆನುತಲಿ
ಜಗದಪ್ಪರಾಯ ಕಳುಹಿದನು || ೨೩ ||

ಬಂದಂಥ ಬಾದೂರಗೆ ವಂದಿಸಿ ವೀಳ್ಯವ ಕೊಟ್ಟು
[ಮುಂದು] ಮುಂದಕೆ ನಡೆಯಿನ್ನು |
ಸಾಗಿ ಹೋಗೆನುತಲಿ ಬಂದ ಬಾದೂರನ
ಅಂದು ಕಳುಹಿದ ಜಗದಪ್ಪ || ೨೪ ||

ನಡೆದು ಬಂದನು ಬಾದೂರಖಾನ ಕುಮ್ಮಟಕಾಗಿ
ಬೆದರಿದ ಹುಲ್ಲೆಯಂದದಲಿ |
ಚೆದುರ ರಾಮಯ್ಯ ಸ್ವಾರಿಯ ಹೋಗಿಬರುವಾಗ
ಒದಗಿ ಕಾಣಿಸಿಕೊಂಡರೆಲ್ಲ || ೨೫ ||

ಎಲ್ಲಿಂದ ಬಂದಿರಿ ಯಾವ ದೇಶವು ನೀವು
ಸೊಲ್ಲಿಸಿ ನಮ್ಮೊಡನೆನಲು |
ಡಿಳ್ಳಿಯ ಸುರಿತಾಳ ಪಾಚ್ಛಾವನ ಮೇಲಿನ್ನು
ತಳ್ಳಿಯ ಮಾಡ್ಬಂದೆವಯ್ಯ || ೨೬ ||

ಮೊರೆ ಹಾಕಿಕೊಂಬ ರಾಯರ ಕಾಣೆವೈ ನಾವು
ತಿರಿಗಿದೆವು ನಾನಾ ಪಾಳ್ಯಗಳ |
ದೊರೆಗಳ ಕಂಡೆವು ನಿಲಿಸಲಾರದೆ ನಮ್ಮ
ಪರಬಲಾಂತಕ ನಿನ್ನ ಬಳಿಗೆ || ೨೭ ||

ಬಿರಿದಂಕ ರಾಮನು [ಅಹ] ನಿಮ್ಮ ಮರೆಗೊಂಬ
ಅರಸುಗಳಲ್ಲ ನಾವೆನುತ |
ಮರೆಯ ಮಾತೇನು ಸುರಿತಾಳಗೆ ಅಂಜುವರು
ದೊರೆ ನಿಮ್ಮ ತೋರಿ ಕಳುಹಿದರು || ೨೮ ||

ಬಾದೂರಖಾನನು ಬಂದು ಕೈಮುಗಿದಿನ್ನು
ಸಾಧಿಸು ನಮ್ಮ ಮರೆಗೊಂಡು |
ಈ ಧರೆಯೊಳು ನಮ್ಮರಣದೊಳು [ಕಾ]ದುಕೋ
ಖೇದವಲ್ಲವು ಕೀರ್ತಿವುಂಟು || ೨೯ ||

ಮೊರೆಹೊಕ್ಕ ಖಾನರ ಕೊಡೆನೆಂಬ ಬಿರಿದನು
ಧರಿಸಿದ ರಾಮ ಕಾಲೊಳಗೆ |
ಬರಹೇಳಿ ನೇಮಿಯ ಕಂಡು ಕಾಬುವೆನೆಂದು
ದೊರೆ ರಾಮ [ಮೊರೆ] ಹಾಕಿಕೊಂಡ || ೩೦ ||

ಬಂದ ಬಾದೂರನಿಗೆ ವೀಳ್ಯಗಳನೆ ಕೊಟ್ಟು
ಒಂದು ಗ್ರಾಮವನು ಉಮ್ಮಳಿಯ |
ಚೆಂದದಿಂದಲಿ ಉಡಗೊರೆಗೊಟ್ಟು ರಾಮಯ್ಯ
ಬಂದ ಬಾದೂರನ ನಿಲಿಸಿದನು || ೩೧ ||

ಮನ್ನಿಸಿ ಕರೆದೊಯು ಮನೆಗಳನವರಿಗೆ
ಉನ್ನತ ಹರುಷದೊಳ್ಕೊಟ್ಟು |
ಮುನ್ನೂರು ವರಹವ ವೆಚ್ಚಕ್ಕೆ ಕೊಟ್ಟನು
ಚೆನ್ನಿಗನವನಿಟ್ಟುಕೊಂಡ || ೩೨ ||

ಬಾದೂರಖಾನನು ಹೋದನೆಂಬುದ ಕೇಳಿ
ಮೇದುನಿಪತಿಯು ಸುರಿತಾಳ |
ಖೇದವ ಮನದೊಳಗಿಟ್ಟು ನೇಮಿಯಖಾನನ
ಕ್ರೋಧದಿ ಕರೆಸಿದನವನು || ೩೩ ||

ಕರೆಸಲು ಬಂದು ನೇಮಿಯು ಕೈಮುಗಿದನು
ಬೆರಸಿ ಮಾತಾಡುತಲವನ |
ಇರದೋಡಿಹೋದ ಬಾದೂರ ಅಪರಾತ್ರಿಯೊಳ್
ಹರುಷವಾಯಿತೆ ನಿನಗೆಂದ || ೩೪ ||

ಕೋಪವ್ಯಾತಕೊ ಭೂಪ ಎಲ್ಲಿದ್ದರವನನು
ಧೂಪಿಸಿ ಪಿಡಿದುತರಿಸುವೆ |
ಈ ಪರಿಯಲಿ ಮೋಸವ ಮಾಡಿ ಹೋದನು
ತಾ ಪಿರಿದಾಗಿ ಬಾಳುವನೆ || ೩೫ ||

ಬಲವಂದ ಬಾದೂರನವನ ಮೋಸದಿ ನೀನು
ಒಲಿದು ಬಂಧಿಸಿ ಎಳೆತರಿಸಿ |
ಸುಲಿಸಿ ನಿಂದಿರಿಸಿ ಡಿಳ್ಳಿಯ ಪಟ್ಟಣಕೆಲ್ಲ
ಬಲಿಯ ಕೊಡೆಂದು ಪೇಳಿದನು || ೩೬ ||

ಮೋಸವ ಮಾಡಿ ಹೋದನು ರಾತ್ರಿಯೊಳು
ಹೇಸದೆ ಜೀವದಾಸೆಯೊಳು |
ದೇಶದೊಳೆಲ್ಲಿ ಹೊಕ್ಕರೆ ಬಿಡೆನವನ
ಭಾಷೆಯಲಿ ಪಾಲಿಸೊ ಪಾಚ್ಛಾ || ೩೭ ||

ಚರರನು ಕಳುಹಿಸಿ ನೆಲೆಯನ್ನು ತರಿಸಯ್ಯ
ಪರಬಲಾಂತಕ ನೇಮಿಖಾನ |
ಧರೆಯ ದೊರೆಗಳು [ಮೊರೆ] ಹಾಕಿಕೊಂಡರೆ ಅವರ
ದೊರೆತನವನು ಕೆಡಿಸಯ್ಯ || ೩೮ ||

ಆಗ ಸುರಿತಾಳನೆಂದೆಂಬಮಾ ತನು ಕೇಳಿ
ಬೇಗದೊಳ್ ಚರರನಟ್ಟಿದನು |
ಸಾಗಿ ಹೋಗಿ ನೀವು ಛಪ್ಪನ್ನಾರು ದೇಶವ
ಜೋಗಿ ವೇಷವ ತಾಳಿಕೊಂಡು || ೩೯ ||

ಎಲ್ಲಿರ್ದರವನ ನೆಲೆಯ ನೋಡಿ ಬನ್ನಿರೊ
ಬೇಗನೆ ಹೋಗಿ ನೀವೆನಲು || ೪೦ ||

ನಿಲ್ಲದೆ ಚರರೋಡಿ ಪೋದರು ಜಗಕೆಲ್ಲ ಭೂ
ವಲ್ಲಭನಪ್ಪಣೆಯ ತಕ್ಕೊಂಡು |
ಅಂಗ ಕಾಳಿಂಗ ಕಾಶ್ಮೀರ ಬರ್ಬರದೇಶ
ಬಂಗಾಳ ತೆಲುಗ ಕಾಂಬೋಜ || ೪೧ ||

ಛಪ್ಪನ್ನ ದೇಶವ ತಿರುಗಿ ಕರ್ನಾಟಕದ ಜಗ
ದಪ್ಪನ ಪುರಕೆ ತಾವ್ ಬಂದು |
ತಪ್ಪದೆ ಸುದ್ದಿಯ ಕೇಳುತ ಬರಲಾಗ
ಇಪ್ಪನು ಕುಮ್ಮಟದೊಳಗೆ || ೪೨ ||

ಬಂದು ಸುರಿತಳರಾಯಗೆ ಅಡ್ಡಬಿದ್ದರು
ವಂದಿಸಿ ಕರಗಳ ಮುಗಿದು |
ಬಂದೆವು ಸ್ವಾಮಿ ಕುಮ್ಮಟದೊಳು ಬಾದೂರ
ಹೊಂದಿದ ರಾಮಯ್ಯನೊಡನೆ || ೪೩ ||

ಇಂತಪ್ಪ ಸುದ್ದಿಯ ಕೇಳುತ ಸುರಿತಾಳ
ಪಂಥದ ರಾಮನ ಬಳಿಗೆ |
ಚಿಂತೆಯಾತಕೊ ನೇಮಿ ಹೊರಡೋ ನೀ ಬೇಗದಿ
ಇಂತು ದಂಡನೆ ಕೂಡಿಕೊಂಡು || ೪೪ ||

ಕೊಟ್ಟನು ಉಡುಗೊರೆ ಮೈಜೋಡು ದಗಲೆಯ
ಕೊಟ್ಟನು ಕೊರಳ ಪದಕವ |
ದಿಟ್ಟ ಕಾನರ ಕೂಡಿಕೊಂಡು ನೀ ಹೋಗೆಂದು
ಕೊಟ್ಟನು ಪಟ್ಟಿ ವೀಳೆಯವ || ೪೫ ||

ಜೀವದರಸಿ ರಾಮನ ತರಬೇಕೆಂದು
ಕೋವಿದೆ ಬಾಬಮ್ಮ ಪೇಳೆ |
ಜೀವದಾಸೆಯ ಬಿಟ್ಟು ಕಂಪಿಲನೊಳು ಕಾದಿ
ತೀವಿ ರಾಮನ ಕೈಸೆರೆಯ || ೪೬ ||

ಅಪ್ಪಣೆ ಕೊಟ್ಟ ಕಳುಹಲು ಸುರಿತಾಳನು
ತಪ್ಪದೆ ನೇಮಿ ತಾ ಹೊರಟ |
ಕಪ್ಪವ ಕೊಂಡು ಕುಮ್ಮಟದ ರಾಮನೊಂ
ದೊಪ್ಪದಿ ಪಿಡಿತಹೆನೆನುತ || ೪೭ ||

ಹೊರ ಪ್ರಯಾಣವ ಮಾಡಿ ಇಳಿದನು ನೇಮಿಯು
ಬರುವಂಥ ಖಾನರ ಕರೆಸಿ |
ತುರುಕರ ಬಲವ ಚೆನ್ನಾಗಿ ಕೂಡಿಸಿಕೊಂಡು
ತೆರಳಿದ ಡಿಳ್ಳಿಯ ಬಿಟ್ಟು || ೪೮ ||

ಕೂಡಿತು ಖಾನಖಾನರು ಒಂದು ಗುಂಪಾಗಿ
ಜೋಡು ಸಿಂಗಾಡಿ ನೇಜೆಗಳು |
ನಾಡೆಲ್ಲ ಬೆಸಲಾದಂತೆ ತುರುಕರ ಪಡೆ
ಕೂಡಿತು ಚಿಕ್ಕ ಡಿಳ್ಳಿಯಲಿ || ೪೯ ||

ಅಂಬರಖಾನ ತುಂಬುರಖಾನ ಅಬ್ದುಲ್ಲ
ಶಂಬಾರಖಾನ ಶೇರ್ಖಾನ |
ಡೊಂಬಿ ಸಾಹೇಬ್ಖಾನ ಅಲ್ಲೀಯಖಾನನು
ಶಂಬಾರಿಖಾನ ಜಲ್ಲಿಖಾನ || ೫೦ ||

ಯಕಲಾಸಖಾನ ಯಕ್ಕಟಿಖಾನ ಸೈದ್ರಲ್ಲಿ
ಬಕರಿಯಖಾನ ಬಲೆಖಾನ |
ಮಕರಂಕಖಾನ ಮಾಮುದ್ದು ಬಕರಿಯಖಾನ
ಶೇಕುನಾದಖಾನ ಬಾಬ್ಖಾನ || ೫೧ ||

ಬಿಜ್ಜಾರಿಖಾನ ಗುಜ್ಜರಿಖಾನ ಮೀರಲ್ಲಿ
ಮಜ್ಜಾ ಬಾಪುರೆ ರಾಜಖಾನ |
ಹೆಜ್ಜೆಹೆಜ್ಜೆಗೆ ಗೆಲ್ವ ತುಂಬುರಖಾನನು
ಲುಜ್ಜಖಾನರು ಒದಗಿದರು || ೫೨ ||

ಎಪ್ಪತ್ತು ಸಾವಿರ ಕುದುರೆ ವಜೀರನು
ಎಪ್ಪತ್ತಿಖಾನನೆಂಬವನು |
ಕುಪ್ಪಳಿಸುತ ಅರಿಬಲದೊಳು ತೂರುವ
ಅಪ್ಪಾಜಿಖಾನನೆಂಬವನು || ೫೩ ||

ಮೂವತ್ತು ಸಾವಿರ ಕುದುರೆ ವಜೀರನು
ಮೀರ ಅಬ್ದುಲಖಾನನವನು |
ಆವಾಗ ಸುರಿತಾಳನ ಹುಜುರಿನಲ್ಲಿರುವಂಥ
ಮಾವೀ ಹಳದಿಯಖಾನ ಬಂದ || ೫೪ ||

ಐವತ್ತು ಸಾವಿರ ಕುದುರೆಯ ವಜೀರ
ಸೈದಾಲಖಾನನೆಂಬವನು |
ಮೈಜೋಡು ಸಿಂಗಾಡಿ ತರ್ಕಾಸ ಕೈಯಂಬು
ಸೈದಲಖಾನನೆಂಬವನು || ೫೫ ||

ಅರವತ್ತು ಸಾವಿರ ಕುದರೆ ವಜೀರನು
ತರುವೂಲಿಖಾನನೆಂಬವನು |
ಬಿರಿದಿನ ಟೆಕ್ಕೆಯು ಜಲ್ಲಿಯ ಮುಖರಂಬ
ಬರುದಲೆ ಬಾಬಾಜಿಖಾನ || ೫೬ ||

ಎಪ್ಪತ್ತು ಸಾವಿರ ಕುದುರೆ ವಜೀರನು
ಮುಪ್ಪಿನ ಮುಜುರಲ್ಲಿಖಾನ |
ತಪ್ಪದೆ ಢಂಮೆಂದಿರಿವನು ರಣದೊಳು
ಒಪ್ಪದಿ ಬಂದು ಕೂಡಿದನು || ೫೭ ||

ಅಚ್ಚಾಗಿ ಐವತ್ತು ಲಕ್ಷವು ಕೂಡಿತು
ಬಿಚ್ಚಿತು ಭೂಮಿ ಬಾಯ್ದೆರೆದು |
ಹುಚ್ಚಾದವು ಅಷ್ಟ ದಿಗ್ದಂತಿ ತಲೆಬಾಗಿ
ಮುಚ್ಚಿದ ಕೂರುಮ ಕಣ್ಣ || ೫೮ ||

ನೆರೆದುದು ನೆಮಿಖಾನನ ವಾಲಗದೊಳು
ಸುರಿತಾಳನಪ್ಪಣೆಯಿಂದ |
ಬರೆದು ಕಳುಹಿದನು ಐದು ಲಕ್ಷ ವಾಜಿಯ
ದೊರೆದೊರೆ ಖಾನಖಾನರನು || ೫೯ ||

ಇನ್ನೊಂದು ಲಕ್ಷ ರಾಜಪುತ್ರ ರಾಹುತರನು
ಮನ್ನಿಸಿ ಕಳುಹಿ ಸುರಿತಾಳ || ೬೦ ||

ನಾಳೆ ನೇಮಿಯನು ತೆರಳಿ ಹೋಗ ಹೇಳಿರೊ
ಬಾಳ ದಿನ ನೀವು ನಿಲುಪೇಕೆ |
ಕೋಳು ಹಿಡಿದು ಕುಮ್ಮಟವ ಲೆಗ್ಗೆಯ ಮಾಡಿ
ಸಾಳುವ ರಾಮನ ಬಿಡೆನೊ || ೬೧ ||

ಗಂಗಾಸಾಗರದ ಕೋಡೆಗೆ ಒಂದು ಸಾವಿರ
ಭಂಗಿಯ ಹೇರೊಂದು ಲಕ್ಷ |
ಶೃಂಗಾರ ಕಡಲೆ ಮೀಠಾಯಿ ಹೇರು ಸಾವಿರ
ಸಡಗರವೇನ ಬಣ್ಣಿಸುವೆ || ೬೨ ||

ಆಯತವನು ಮಾಡಿ ಆಹಾರಗಳನೆಲ್ಲ
ಜಾಯಿಕಾಯಿ ಜಾಪಾತ್ರೆಗಳನು |
ಬೇಯಿಸಿದ ರೊಟ್ಟಿಯ ಕಟ್ಟಿ ತಿತ್ತಿಗಳನು
ಆಯತವಾಗಿ ನಿಂದಿಹರು || ೬೩ ||

ನೇಮಿಖಾನನು ದಂಡ ಕೂಚೆಯ ಮಾಡಿ
ಮುಂದಕ್ಕೆ ನಡೆಯಬೇಕೆಂದ |
ಢಂಢಾಂ ಢಮಢಮ ಎಂದು ಗರ್ಜಿಸೆ ವಾದ್ಯ
ಮಂಡಲಿಕರು ತೆರಳಿದರು || ೬೪ ||

ಅಕ್ಕಿ ಬೇಳೆಯ ಹೇರು ಸಕ್ಕರೆ ಗೋದಿಯ ಹಿಟ್ಟು
ಲೆಕ್ಕವಿಲ್ಲದೆ ಹೇರಿದರು |
ಮಿಕ್ಕ ಮಾತಿನ್ನೇನು ತುಪ್ಪದ ನಗಗಳು
ಲಕ್ಷದ ಮೇಲೆ ಹೇರಿದರು || ೬೫ ||

ಹಸುರು ಕೆಂಪಿನ ಗುಡಿಯು ಸಾಳು ಪಟ್ಟೆದ ಗುಡಿ
ಹಸುರಂಜಿ ಬಿಳಿದಿನ ಗುಡಿಯು |
ಹೊಸ ಒಂದು ಲಕ್ಷ ಗುಡಿಗಳು ಹೇರಿದವು
ಬಿಸಿಲು ಗುಡಾರ ಲೆಕ್ಕವಿಲ್ಲ || ೬೬ ||

ಬೆಳಗಿದ ಮೇಲೊಂದು ಕೂಚೆ ನಗಾರಿಯು
ಬೋರುಗುಟ್ಟುವ ಕರ್ಣೆ ಬುರುಗು || ೬೭ ||

ಹೊಡೆದವು ಬರಸಿಡಲಂತೆ ವಾದ್ಯದ ಧ್ವನಿ
ಬಿಡದೊದರುವ ಚಿನ್ನಗಹಳೆ |
ಮೇದುನಿ ಘೀಳಿಡುವಂತೆ ವಾದ್ಯದ ಧ್ವನಿ
ಸಾಧಿಸಿ ದಂಡು ನಡೆಯಿತು || ೬೮ ||

ಚೆಕ್ಕನೆ ತುರುಕರ ದಂಡೆತ್ತಿ ನಡೆಯಿತು
ಚಿಕ್ಕ ಡಿಳ್ಳಿಯ ಬಿಟ್ಟು ನಡೆಯೆ |
ಉಕ್ಕಿತು ಕೆಂಧೂಳು ಸೂರ್ಯಮಂಡಲಕಾಗಿ
ದೊಕ್ಕನೆ ಆಕಾಶ ಮುಸುಕಿ || ೬೯ ||

ತೆಗೆದು ತೆರಳಿದುದು ಕುದುರೆಯ ಪೌಜಲ್ಲಲ್ಲಿ
ಒಗುಮಿಗಿಲಾಗಿ ನಡೆದರು |
ಅಗಣಿತ ಹರುಷದಿ ಭಾಗೀರಥಿಯ ದಾಂಟಿ
ಸೊಗಸಿಂದ ತೆರಳಿತು ದಂಡ || ೭೦ ||

ಹರಿದು ಬಂದಿತು ಕುದುರೆಯ ಪೌಜು ವಿಂಗಡಿಸಿ
ತೆರಳಿತು ಮುಂದಕ್ಕೆ ಸಾಗಿ |
ಕರಿಘಟೆಪೌಜು ನೇಮಿಯ ಖಾನರ ಬಲ
ಮರಡಿಗಳಂದದಿ ಬರಲು || ೭೧ ||

ಇತ್ತರದಲಿ ಛತ್ರ ಐನೂರು ಹಿಡಿದವು
ಎತ್ತ ನೋಡಲು ನೇಮಿಯೊಡನೆ |
ಎತ್ತಿದ ಮೊನೆಮೊನೆ ನ್ಯಾಜ್ಯದ ತುರುಕರು
ಮೊತ್ತದ ಕಾಲಾಳು ಸಹಿತ || ೭೨ ||

ಮುಂದೆ ಮೂವತ್ತು ಲಕ್ಷ ವಾಜಿಯು ನಡೆಯಿತು
ಇಪ್ಪತ್ತು ಲಕ್ಷದ ಪೌಜು |
ನಿಂದವಲ್ಲಲ್ಲಿ ಒಂದೇ ವಾದ್ಯ ರಭಸದಿ
ಆಂಧ್ರದೇಶದ ಗಡಿಗಾಗಿ || ೭೩ ||

ನಾಲ್ಕ ದಿನಕೆ ನಡೆವಂಥ ದಾರಿಯ ನೇಮಿ
ಎರಡು ದಿನಕೆ ನಡೆವುತಲಿ |
ನೂಕಿ ನಡೆಯಿತು ಕುದುರೆಯ ಪೌಜು ಮುಂದಕ್ಕೆ
ಏಕವಾಯಿತು ಗಂಗೆ ತಡಿಯ || ೭೪ ||

ಗಂಗೆಯ ತಡಿಯ ಸುರಿತಾಳಪುರದ ಮುಂದೆ
ಮುಂಗುಡಿಗಳ ಹೊಯ್ದರವರು |
ಶೃಂಗಾರದಾನೆಯನಿಳಿದು ನೇಮಿಯಖಾನ
ಸೊಗಸಿಂದ ಇಳಿದ ದಂಡಿನಲಿ || ೭೫ ||

ಮುಂದಾನೆ ಎದ್ದು ನಡೆಯಿತು ಮೂಗಾವುದ
ಸಂಜೆಗೆ ಎರಡು ಗಾವುದವು |
ಅಂಜದೆ ನೇಮಿಯು ನಡೆದನು ಈ ರೀತಿ ಧ
ನಂಜಯ ಪಟ್ಟಣಕಿಳಿದ || ೭೬ ||

ಆರು ದಿನದ ದಾರಿ ಮೂರು ದಿನಕೆ ನಡೆದು
ವಾರಣಾಸಿಯ ಸೀಮೆ ಗಡಿಗೆ |
ನೂರು ಗಾವುದ ರಾಯ ನೇಮಿ ನಡೆದು ಬಂದ
ಧಾರುಣಿ ಭೋರಿಡುವಂತೆ || ೭೭ ||

ಎಂಟು ದಿನದ ಪಯಣ ನಾಲ್ಕು ದಿನಕೆ ಬಂದ
ಬಂಟ ನೇಮಿಯಖಾನ ತಾನು || ೭೮ ||

ಹತ್ತು ದಿನದ ದಾರಿ ಐದು ದಿನಕೆ ನಡೆದ
ಒತ್ತಿ ಬಂದನು ನೇಮಿಖಾನ |
ಚಿತ್ರಕೂಟದ ಪುರವನು ದಾಂಟುತಾಗಲೆ
ಸುತ್ತಿ ಯಮುನೆ ತೀರಕಿಳಿದ || ೭೯ ||

ಅಲ್ಲಿಂದ ತೆರಳಿ ಹೊರಟ ದಂಡು ಬೇಗದಿ
ಸೊಲ್ಲಾಪುರವನು ದಾಂಟಿದರು |
ನಿಲ್ಲದೆ ನಾಲ್ಕೆಂಟು ಪ್ರಯಾಣಕೆ ನರ್ಮದೆ
ಬಲ್ಲಿದ ಗಂಗೆ ತೀರದಲಿ || ೮೦ ||

ಚೆಲ್ಲಿತು ಅಲ್ಲಿಯ ದಂಡು ಮುಂದಕೆ ಎದ್ದು
ಎಲ್ಲರು ಒಂದಾಗಿ ಕೂಡಿ |
ನಿಲ್ಲದೆ ಅವರಂಗಬಾದಿಗೆ ಇಳಿದರು
ಅಲ್ಲಿಂದ ಕುಮುಕ ಮಾಡಿದರು || ೮೧ ||

ಹಿಂದುಮುಂದೆಲ್ಲ ಕೂಡಿತು ದಣಿದಂದು
ಬಂದು ಕೂಡಿತು ಖಾನರೆಲ್ಲ |
ಇಂದಿಗೆ ಸುರಿತಾಳನ ಚಾಕರಿ ಸಾಕೆಂದು
ನುಡಿದರು ಬಾದುಬಾದುರರು || ೮೨ ||

ಇಷ್ಟು ತವಕದಿ ನಾವು ಹೋಗಲೇತಕೆ ರಾಮ
ಬಿಟ್ಟು ಹೋಗುವನೆ ನಮಗಂಜಿ |
ಸೃಷ್ಟಿಯೊಳಗೆ ಅವನು ಕಾರಣಿಕದ ಪುರುಷ
ಹುಟ್ಟಿಬಂದನು ಕಲಿಯುಗದಿ || ೮೩ ||

ಇಷ್ಟು ದಂಡಿನ ಮೇಲೆ ಕಡಿದಾಡದೆ ಅವ
ಬಿಟ್ಟುಹೋಗುವನೆ ಗೂಳೆಯವ |
ದಿಟ್ಟತನವು ರಾಮಗಿಲ್ಲದಿದ್ದರೆ ಅವ
ಮೆಟ್ಟುತಲಹನೆ ಪಾವುಗೆಯ || ೮೪ ||

ಎಲ್ಲರು ಕೂಡಿ ಮಾತಾಡುತ್ತ ಖಾನರು
ಅಲ್ಲಿಂದ ವಿಜಾಪುರಕೆ ನಡೆದು |
ನಿಲ್ಲದೆ ನಾಲ್ಕಾರು ದಿವಸಕೆ ತಾವ್ಬಂದು
ಮೆಲ್ಲನಿಳಿದರು ನಿಲುಪಯಣ || ೮೫ ||

ಅಲ್ಲಿ ನಿಲ್ಲಿಸಿ ದಂಡ ನೇಮಿಯಖಾನನು
ಬಲ್ಲಿದ ಖಾನಖಾನರನು |
ಎಲ್ಲ ವಜೀರರ ಕರೆಸಿ ಆಲೋಚನೆ
ಬಲ್ಲಂತೆ ಪೇಳಿ ನೀವೆನಲು || ೮೬ ||

ಸಾವಧಾನವಮಾಡು ದಂಡ ಚತುರೋಪಾಯ
ನೇಮಗಳುಂಟು ದೊರೆಗಳಿಗೆ |
ಕ್ಷೇಮದೊಳಲ್ಲಿಂದ ಕುಳಿತು ಸುದ್ದಿಯ ತರಿಸಿ
ಆಮೇಲೆ ಮಾಡು ಕಾರ್ಯವನು || ೮೭ ||

ಎನಲು ವಜೀರರಾಡಿದ ಮಾತುಗಳನು
ಅನುಕರಿಸಿದ ನೇಮಿ ತಾನು || ೮೮ ||

ಸುತ್ತಣ ಸಣ್ಣ ಪಾಳ್ಯಗಾರರು ಎಲ್ಲ
ಎತ್ತಳ ಮಾಡಿ ಬಂತೆನುತ |
ಉತ್ರ ಉಡುಗೊರೆಗಳ ಕಟ್ಟಿಸಿ ಮಂತ್ರಿಗಳು
ಇತ್ತ ಕಳುಹಿದರು ಬೇಗದೊಳು || ೮೯ ||

ಬಂದರು ನಾಡಮಂತ್ರಿಗಳೆಲ್ಲ ಕೂಡಿನ್ನು
ತಂದಂಥ ಉಡುಗೊರೆಗಳನು |
ಮುಂದಿಕ್ಕಿ ಕರಗಳ ಮುಗಿದು ವಂದಿಸಿದರು
ಮುಂದೇನು ಗತಿ ನಮಗೆನುತ || ೯೦ ||

ಆವಾಗ ಕೊಡುವ ಕಪ್ಪವ ಕೊಟ್ಟು ಬರುವೆವು
ನಾವು ಕೊಟವನು ಮಾಡುವೆನು |
ಭಾವಶುದ್ಧವಾಗಿ ನಡೆಕೊಂಬೆವಲ್ಲದೆ
ನಾವು ಮಾಡಿದ ತಪ್ಪುಗಳೇನು || ೯೧ ||

ಕೆಲವು ರಾಜ್ಯವನ್ನೆಲ್ಲ ಕಟ್ಟಿಕೊಂಡನು ರಾಮ
ಉಳಿದ ರಾಜ್ಯವು ಹಾಳಾಯ್ತು |
ಬಳಿಕೀಗ ನಾವು ಬದುಕುವ ತೆರನಿಲ್ಲ ಮುಂದೆ
ಬೆಳೆದಂಥ ಪೈರೆಲ್ಲ ಹೋಯ್ತು || ೯೨ ||

ನಿಮ್ಮೇಲೆ ನಾವು ಕಾರ್ಯಕೆ ಬಂದವರಲ್ಲ
ಕುಮ್ಮಟವನು ಮುತ್ತಿಕೊಂಡು |
ಹಮ್ಮಿನ ರಾಮನ ಹಿಡಿದು ಕೈಸೆರೆಯನು
ಗಮ್ಮನೆ ಸುರಿತಾಳನೆಡೆಗೆ || ೯೩ ||

ಮುತ್ತಿಗೆಯನು ಮಾಡಿ ಕುಮ್ಮಟ ದುರ್ಗವ
ಒತ್ತಿ ರಾಮನ ಹಿಡಿಕೊಂಡು |
ಮತ್ತೆ ಸುರಿತಾಳನ ಹುಜುರಿಗೆ ಒಯ್ವೆವು
ಎತ್ತಣ ಕಾರ್ಯ ನಮ್ಮಗಿಲ್ಲ || ೯೪ ||

ಬಂದ ಮಂತ್ರಿಗಳೊಂದು ಉಡುಗೊರೆಯನು ಮಾಡಿ
ನಿಂದಿರಬೇಡಿ ನೀವು ಹೋಗಿ
ಮಂದಿಮಕ್ಕಳನೆಲ್ಲ ಕೂಟವು ಕಳಹಿಸಿ
ಮುಂದುವರಿದು ಕುಮ್ಮಟಕೆ || ೯೫ ||

ಪಗುದಿಯಖಾನನ ಕರೆಸಿದ ನೇಮಿಯು
ಸೊಗಸಿಂದ ಹೋಗು ಕಮ್ಮಟಕೆ |
ಮಿಗೆ ಐದು ಕುದುರೆಯ ಚರರನ್ನು ಕರಕೊಂಡು
ಅಗಣಿತ ಕಂಪಿಲನೆಡೆಗೆ || ೯೬ ||

ಒಪ್ಪದಿಂದಲಿ ಕಪ್ಪವ ಕೊಟ್ಟು ಬಾದ್ದೂರನ
ಒಪ್ಪಿಸ ಹೇಳೊ ಸ್ನೇಹದಲಿ |
ತಪ್ಪು ಮಾತುಗಳಾಡಿ ತಳ್ಳಿಯ ಮಾಡಿದರೆ
ತಪ್ಪ[ದೆ] ಬಾರೋ ನಮ್ಮೆಡೆಗೆ || ೯೭ ||

ಒಡೆಯ ಮಾತನು ಕೇಳಿ ಪಗುಡಿಯಖಾನ
ತಡೆಯದೆ ಪೊರಟನಾಕ್ಷಣದಿ |
ಒಡನೈದು ವಾಜಿ ಚೋರರ ಕರೆಸಿಕೊಂಡಾಗ
ನಡೆದನು ಕಮ್ಮಟಕಾಗಿ || ೯೮ ||

ಬಂದವು ಬಾಗಿಲಿಗೈದು ಕುದುರೆಯು ಬೇಗ
ನಿಂದಲ್ಲಿ ಸುದ್ದಿಯ ಪೇಳಿ |
ಅಂದು ಗೊಲ್ಲರು ಕಂಪಿಲರಾಯಗುಸುರಲು
ಬಂದವರನು ಕರೆಸಿದನು || ೯೯ ||

ವಂದಿಸಿ ಕರವ ಮುಗಿದು ಅವರು ಕುಳಿತಾಗ
ಎಂದರು ಮೂರು ಮಾಗುಗಳ |
ಬಂದಿತು ಸುರಿತಾಳನ ದಂಡು ಮಿರಿಜಿಗೆ
ಬಂದನು ಮೇಮಿಯಖಾನ || ೧೦೦ ||

ನಡೆತೆಲೊಂದಾಗಿ ಕಪ್ಪವ ಕೊಟ್ಟು ಬಾದ್ದೂರನ
ಹಿಡಿದುಕೊಡುವದು ಕರ ಲೇಸು |
ಬಿಡದೆ ಬಾದ್ದೂರನ ಹಿಂದಿಕ್ಕಿಕೊಂಡರೆ ನಾವು
ಅಡವಿಯ ಪಾಲೆಂದರವರು || ೧೦೧ ||

ಮುತ್ತಿ ಕುಮ್ಮಟವ ಕೈಸೆರೆಯನು ನಿಮ್ಮನು
ಒತ್ತಿ ಹಿಡಿಸುವ ನೇಮಿಖಾನ |
ಒತ್ತರದೋಡಿಹೋದರೆ ನಾವು ಬಿಡುವೆವೆ
ಚಿತ್ತೈಸಿ ಕೇಳು ಕಂಪಿಲನೆ || ೧೦೨ ||

ಅಗಣಿತ ಸುದ್ದಿಯ ಕೇಳುತ ಕಂಪಿಲರಾಯ
ಮಗ ರಾಮನ ಮುಖ ನೋಡಿ |
ಬಿಗುವಿನ ಮಾಗುಗಳೇಕೆ ನೇಮಿಗೆ ಎಂದು
ಸೊಗಸಿಂದ ಬರಹೇಳೋ ದಂಡ || ೧೦೩ ||

ಮರೆಹೊಕ್ಕಗಾಸರೆ ಕೊಡುವ ರಾಯರ ಗಂಡ
ಜಗದೊಳು ನೇಮಿಯ ಮಿಂಡ |
ಜಗಬಿರಿದನು ಧರಿಸಿದೆನು ಕಾಲೊಳು ನಾನು
ಮಿಗೆ ಕೊಡುವನಲ್ಲ ಬಾದೂರನ || ೧೦೪ ||

ಇಂತಪ್ಪ ಬಿರಿದು ಧರಿಸಿ ಕೊಟ್ಟರೆ ನನ್ನ
ಪಂಥವೇನಾಯ್ತಪ್ಪ ಜೀಯ |
ಚಿಂತೆ ಇನ್ಯಾತಕೆ ಬರಹೇಳೋ ನೇಮಿಯ
ಪಂಥವನೆಲ್ಲ ನೋಡುವೆನು || ೧೦೫ ||

ಬಂದ ಖಾನರಿಗೊಂಡು ವೀಳ್ಯ ಉಡುಗೊರೆ ಕೊಟ್ಟು
ಹಿಂದಕೆ ತೆರಳಿ ನೇವೆಂದ |
ಮಂದಿ ಮನ್ನೆಯರ ಕರೆಸಿಕೊಂಡು ರಾಮಯ್ಯ
ಬಂದನು ಹೊರ ಚಾವಡಿಗೆ || ೧೦೬ ||

ಬಂದನಂತೆ ನೇಮಿ ನಮ್ಮೇಲೆ ಕಾರ್ಯಕ್ಕೆ
ಇಂದು ಬಾದೂರನ ಕೊಡಹೇಳಿ |
ಬಂದಿದ್ದವೈದು ಕುದುರೆಯ ಸುದ್ದಿಯ ಕೇಳಿ
ಹಿಂದಕ್ಕೆ ಅಟ್ಟಿದೆವೆನಲು || ೧೦೭ ||

ಕುರಿಯ ಹಟ್ಟಿಯ ಹೊಕ್ಕರೆ ಕುರುಬ ಕೊಡಲು ತನ್ನ
ಮರೆಹೊಕ್ಕ ಪೋರನ ಎನುತ |
ಧರೆಯ ರಾಯರ ಗಂಡ ನೆರೆಸೋ ಸೇನೆಯನೆಲ್ಲ
ಬರಲಿನ್ನು ಮೇಮಿಯಖಾ || ೧೦೮ ||

ಎಡಬಲದಲಿ ನೋಡಿ ಬರುವಂಥ ಶಬರರ
ತಡೆಯದೆ ಕರೆಸಿರೋ ನೀವು |
ಬಿಡಬೇಡಿ ಬಂದಂಥ ಬೇಡಪಡೆಯ ಮುಂದೆ
ಕೊಡುವೆನು ವರುಷ ಸಂಬಳವ || ೧೦೯ ||

ತಂದೆಯ ಪಾದಕ್ಕೆ ಎರಗಿ ರಾಮಯ್ಯನು
ಒಂದು ಬಿಂದಿಗೆ ಹೊನ್ನ ಕೇಳಿ |
ಕಂದನ ಮಾತ ಕೇಳುತ ಕಂಪಿಲಭೂಪ
ಬಿಂದಿಗೆ ಹೊನ್ನ ಕೊಡಿಸಿದನು || ೧೧೦ ||

ಮಂದಿಮಕ್ಕಳು ರಾಹುತರು ರಾಣುವೆಗೆಲ್ಲ
ಗಂಧ ವೀಳ್ಯವ ಕೊಡಿಸಿದನು |
ತಂದಂಥ ಬಿಂದಿಗೆ ಹೊನ್ನ ಹಂಚಿಸಿ ಕೊಟ್ಟು
ಮಂದಿಯ ಸಮಾಜಾಸಿಕೊಂಡ || ೧೧೧ ||

ನೋಡು ಬೈಚಪ್ಪ ಕೂಡು ಬೇಗದಿ ಗಡಿ
ವಾಡದ ಮಂದಿ ನಾಯಕರ |
ಕೂಡಿಸೊ ಕರೆಸೋ ಬೇಗದೊಳೆಂದು ಪೇಳಿದ
ನಾಡ ಪರಿವಾರವನೆಲ್ಲ || ೧೧೨ ||

ಆರೆಯ ಚಾರಮರಾಯನ ಮಕ್ಕಳಿಗೆ
ಆರು ಸಾವಿರ ವಾಜಿಯನು |
ಭೋರನೆ ಕೊಡಿಸು ಎಂದು ಹಣವ ಕೊಟ್ಟು
ಬೇರೊಂದು ಪೌಜ ಮಾಡಿದನು || ೧೧೩ ||

ಇತ್ತ ರಾಮಯ್ಯನು ಕತ್ತಿ ಸಂಭ್ರಮದೊಳು
ಅರ್ತಿಯಿಂದಲಿ ಇರುತಿಹನು |
ಅತ್ತ ಪಗುದಿಯಖಾನ ನೇಮಿಯೊಳ್ ಸುದ್ದಿಯ
ಬಿತ್ತರದಿಂದ ಪೇಳಿದನು || ೧೧೪ ||

ಕೇಳಿದೆವೈ ನೇಮಿ ಎಮ್ಮೊಡೆಯ, ರಾಮನ ಸುದ್ದಿ
ಹೇಳುವುದೇನವನ ಕೊಬ್ಬ |
ಬಾಳ ಪಂಥದ ಬಿರುದುಗಳ ಕೊಂಡಾಡಿಸಿ
ಹೇಳಿ ನಿಮ್ಮೊಡೆಯಗೆ ಎನುತ || ೧೧೫ ||

ಅಡಗಿತ ಖಾನನ ಬಿಡಿಸುವ ನೇಮಿಯ
ಒಡೆಯ ಸುರಿತಾಳನ ಗಂಡ |
ಬಿಡೆನು ಬಾದೂರನ ಕೊಡೆನು ಕಪ್ಪವನೆಂದು
ಜಡಿದು ಖಡ್ಗವನು ಝಳ್ಪಿಸುತ || ೧೧೬ ||

ಹೇಳುವ ಮಾತನು ಕೇಳಿದ ನೇಮಿಯು
ಬಾಳ ಕೋಪವ ತಾಳಿ ಮನದಿ |
ಧೂಳುಗೋಟೆಯ ಮಾಡಿ ಕಡಿವೆನು ಕುಮ್ಮಟವ
ಸನ್ನೆಗಾಳಿಯ ಮಾಡಿಸಿದ || ೧೧೭ ||

ಅಲ್ಲಿಂದ ತೆರಳಿ ದಂಡು ಮುಂದಕ್ಕೆ ಸಾಗಿತು
ಮೆಲ್ಲನೆ ಮಿರುಜೆಯ ಬಳಿಗೆ |
ಬಲ್ಲಿದ ಖಾನಖಾನರು ಮುಂದಾಗಿ
ನಿಲ್ಲದೆ ದಾಳಿ ಮಾಡೆನುತ || ೧೧೮ ||

ಎಂಬತ್ತು ಸಾವಿರ ಕುದುರೆ ವಜೀರರ
ಮುಂಚಣಿ ಫೌಜ ನಡೆಯೆಂದ |
ಕುಂಭಿನಿ ಬಿರಿವಂತೆ ನಡೆಯಿತು ದಂಡಿನ
ಸಂಭ್ರಮವೇನ ಬಣ್ಣಿಸುವೆ || ೧೧೬ ||

ರಾಮನ ಸೀಮೆಯ ಗಡಿವಾಡದೊಳು ಬೇಗ
ನೇಮಿಯ ದಂಡು ಬಂದುದನು |
ಆ ಮಹಾ ಕಂಪಿಲರಾಯಗೆ ಪೇಳಲು
ರಾಮಗೆ ಪೇಳೆಂದನರಸ || ೧೨೦ ||

ಬಂದರು ಚರರು ರಾಮಗೆ ವಂದಿಸಿ ಬೇಗ
ನಿಂದು ಸುದ್ದಿಯನು ಪೇಳಿದನು |
ಇಂದೆಮ್ಮ ರಾಜ್ಯವ ಸಂದುತ ನೇಮಿಯ ದಂಡು
ಬಂದಿತು ರಾಮಯ್ಯನೆನಲು || ೧೨೧ ||

ಕೇಳಿದ ಸುದ್ದಿಯ ಹೇಳುವುದೇನೆಂದು
ಕಾಳಗ ಬಂತು ನಮಗೆಂದ |
ನಾಳಿನ ದಾಳಿಗೆ ಸಿಕ್ಕಿದೆ ನೀವೆಲ್ಲ
ಗೂಳೇವ ತೆಗಸು ಬನ್ನೆಂದ || ೧೨೨ ||

ಬಂದ ಚರರು ಓಡಿಹೋದರು ಹಿಂದಕ್ಕೆ
ಒಂದರಗಳಿಗೆ ನಿಲ್ಲದೆಲೆ |
ಕೂಡಿತು ಮಂಚೂಣಿ ಕುದುರೆ ಖಾನರು ಬಂದು
ನಾಡಿನ ಪ್ರಜೆಗಳ ಮೇಲೆ || ೧೨೩ ||

ಮುಂದಕ್ಕೆ ಗೂಳೆವ ತೆರಳಿಸಿಕೊಂಡು ಬಂದರು
ಬಂದಂಥ ಕುದುರೆಯ ನೋಡಿ |
ಹಿಂದಕ್ಕೆ ನಿಂತು ತರುಬುವ ಖಾನಖಾನರ
ಸಂದಣಿಯನು ನಿಲಿಸುತಲಿ || ೧೨೪ ||

ಹಿಂದಟ್ಟಿ ಬಂದಂಥ ಕುದುರೆಯ ಶಬರರು
ತಂದರು ಕುದುರೆಯ ಹಿಡಿದು |
ಕೊಂದು ಖಾನರನೆಲ್ಲ ಕಡಿದೊಟ್ಟುತಲಿ ತಾವು
ಹಿಂದುಮುಂದಾಗಿ ನಡೆವುತಲಿ || ೧೨೫ ||

ಎಡದಲ್ಲಿ ಬಾಹಂತ ಕುದುರೆಯ ಬೇಡರು
ಹಿಡಿದು ರಾಹುತರನ್ನು ಕಟ್ಟಿ |
ಕಟ್ಟಿದೊಟ್ಟಿ ಖಾನಖಾನರನೆಲ್ಲ ತಲೆಗಳ
ಪಿಡಿಕೊಂಡು ಮುಂದಕ್ಕೆ ನಡೆದು || ೧೨೬ ||

ಬಲದೊಳು ಬಾಹಂತ ಕುದುರೆಯನೆಚ್ಚರೆ
ಬಲದೊಳು ಕಲ್ಲು ಬಿದ್ದಂತೆ |
ಮರೆತು ಬಾಹಂತ ಕುದುರೆಯನೆಲ್ಲ ಶಬರರು
ಕತೆರು ಹಿಡಿಯುತಿರ್ದರಾಗ || ೧೨೭ ||

ಕೆಂದಗುದುರೆಯನೇರಿ ಬಾಹಂತ ರಾಹುತರ
ಮುಂದಲೆಗಳ ಪಿಡಿದುಕೊಂಡು |
ಕೊಂದು ಕೂಗುತ ಬೊಬ್ಬಿಡುತಲಿ ಶಬರರು
ಬಂದರು ಕುಮ್ಮಟಕಾಗ || ೧೨೮ ||

ಮಿರಜೆಯ ಬಿಟ್ಟು ಎದ್ದಿತು ದಂಡು ಕೂಚಾಗಿ
ಭರದಿಂದ ದಳ್ಳುದಳ್ಳಿಯಲಿ |
ತೊರಗಲ್ಲು ಬಾದಾವಿ ಬಳಿಗೆ ಬಂದಿತು ಬೇಗ
ಅರೆಮರೆಯಿಲ್ಲದೆ ನೇಮಿ || ೧೨೯ ||

ತೊರಗಲ್ಲು ಬಾದಾವಿಲಿಂದ ಕೂಚೆಯ ಮಾಡಿ
ನರಗುಂದದ ಹೊಳೆಯ ದಾಂಟಿ |
ಧುರಧೀರ ಖಾನವಜೀರರು ಮುಂದಾಗಿ
ಅರುವತ್ತು ಸಾವಿರ ವಾಜಿ || ೧೩೦ ||

ಬೆಟ್ಟವಾದುದು ಕಮ್ಮುಟದುರ್ಗ ನಮಗೊಂದು
ಕೊಟ್ಟವಾಯಿತು ಧರೆಯೊಳಗೆ |
ಮುಚ್ಚಿ ಕೇಳುತ ನೇಮಿ ಚರರನು ಅಲ್ಲಿಂದ
ಅಟ್ಟಿ ಒತ್ತಿಗೆ ಬಂದಿಳಿದ || ೧೩೧ ||

ತುರುಕ ನೇಮಿಯಖಾನ ಬಂದ ಕುಮ್ಮಟಕೆಂದು
ಅರಸು ಜಗದಪ್ಪ ಕೇಳಿದನು |
ಕರೆಕರೆ ಮಾತಲ್ಲ ಕಳುಹುವೆ ಕುದುರೆಯ
ಬೆರಸಿ ಮಾತಾಡಿ ನೀವ್‌ ಬನ್ನಿ || ೧೩೨ ||

ದೊರೆ ಕಂಪಿಲನ ಬಳಿಗೆ ನೀವು ಹೋಗಿರೊ
ಕರೆಸಿಕೊಳ್ಳಲಿ ನಮ್ಮ ಪೌಜ |
ಕರೆಕರೆ ಮಾತಲ್ಲ ಕುಳುಹುವೆ ಕುದುರೆಯ
ಬೆರಸಿ ಮಾತಾಡಿರೊ ನೀವು || ೧೩೩ ||

ಹೋದರು ಚರರೋಡಿ ಕಂಪಿಲರಾಯಗೆ
ಭೇದವಿಲ್ಲದೆ ಅಡ್ಡ ಬಿದ್ದು |
ಕಾದುವ ಕುದುರೆ ಮಂದಿಯ ಕೊಟ್ಟ ಕಳುಹುವ
ಈ ಧರೆ ಜಗದಪ್ಪ ಅರಸು || ೧೩೪ ||

ಮಾವನ ಸುದ್ದಿಯ ಕೇಳುತ ರಾಮಯ್ಯ
ಆವ ರಾಯರ ಕೂಟ ಬೇಡ |
ತಾವು ಸುರಿತಾಳಗೆ ಪಗುದಿಯ ಒಕ್ಕಲು
ಸಾವಂತರ [ಕೂಟ] ನಮಗೇಕೆ || ೧೩೫ ||

ಕೂಟವ ಕೂಡಿಸಿ ಕಡಿದಾಡುವಂಥವರ
ಕೋಟಿ ರಾಯರ ಗಂಡನೆಂದು |
ಆಟಕೆ ಬಿರಿದ ನಾ ಧರಿಸಿದೆ ಅಪ್ಪಾಜಿ
ಕೂಟ ನಮಗ್ಯಾಕೆಂದ ರಾಮ || ೧೩೬ ||

ಪರಬಲವನು ಬಯಸಿ ರಣರಂಗ ಮಾಡುವ
ದೊರೆಗಳ ಗಂಡನೆಂದೆಂಬ |
ಧರೆಯೊಳು ಬಿರಿದ ನಾಧರಿಸಿದೆನಲ್ಲದೆ
ದೊರೆಗಳ ಕೂಟ ಬೇಕಿಲ್ಲ || ೧೩೭ ||

ಇಂತಪ್ಪ ಬಿರಿದ ಧರಿಸಿದೆನೆಂದು ಮಾವಗೆ
ನಿಂತು ಮಾತುಗಳನಾಡಿದನು |
ಚಿಂತೆಯಾತಕೊ ನೇಮಿಖಾನನ ನೋಡುವೆನು
ಪಂಥವ ನೋಡ ಹೇಳೆಂದ || ೧೩೮ ||

ಬಂದ ಚರರಿಗೆ ರಾಮ ಒಂದುಡುಗೊರೆ ಕೊಟ್ಟು
ಹಿಂದಕ್ಕೆ ಹೋಗಿ ನೀವೆನಲು |
ಮಂದಿ ಕುದುರೆಯು ಬೇಡ ನಮಗಿನ್ನು ಮಾವಗೆ
ವಂದಿಸಿ ಕರಮುಗಿವೆನಿನ್ನು || ೧೩೯ ||

ಅತ್ತವರನು ಕಳುಹಿಸಿದ ರಾಮಯ್ಯನು
ಒತ್ತಿ ಮಾನ್ಯರ ಕೂಡಿಕೊಂಡು |
ಸುತ್ತಣ ಕಣಿವೆಯ ಕಟ್ಟಿ ಕೊಲ್ಲುವೆನೆಂದು
ಅರ್ತಿಲಿ ಹೊರಟ ರಾಮಯ್ಯ || ೧೪೦ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಚದುರ ಬಾದೂರಖಾನ ರಾಮನ ಮರೆಬಿದ್ದ
ಕದನದ ಕಥೆಯು ಪೂರಾಯ್ತು || ೧೪೧ ||

ಅಂತು ಸಂಧಿ ೧೦ ಕ್ಕ ಪದನು ೯೬೭೨ಕ್ಕಂ ಮಂಗಳ ಮಹಾಶ್ರೀ