ಶ್ರೀ ಗಿರಿಜಾ [ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
[ಭಾಗೀರಥಿಧರ ಭವರೋಗವೈದ್ಯನೆ
ನಾಗಕುಂಡಲ] ಶರಣೆಂಬೆ || ೧ ||
ದಾನವ ಸುರಿತಾಳನ ಮಂತ್ರಿಯು
ಭುವನೇಶ[ನ] ಚಿತ್ರಪಟವ |
ತವಕದಿ ರಾಮನಂಗವ ಬರೆದು ತಂದು
ಕುವರಿಯ ಕೈಯಲ್ಲಿ ಕೊಟ್ಟ || ೨ ||
ಚಿತ್ರಪಟವ ಕಾಣುತ ಸುರಿತಾಳನ
ಪುತ್ರಿಯಗಿದು ಮೂರ್ಚೆಯಾಗಿ |
ಇತ್ತಲು ಸುರಿತಾಳ ಕುವರಿಗೆ ವಿರಹಾಗ್ನಿ
ಒತ್ತರಿಸಲು ಮನೆಯೊಳಗೆ || ೩ ||
ಎತ್ತಣ ವಿಧಿಯು ಇದೇನು ತಾಪವುಯೆಂದು
ಮತ್ತೆ ಭೂಪತಿಯು ಚಿಂತಿಸಿದ |
ಏನು ಮನದ ನೋವು ಮಗಳೆ ನೀ ಹೇಳೆಂದು
ಮಾನವೇಶ್ವರನು ಕೇಳಿದನು || ೪ ||
ಖಾನ ವಜೀರ ನಿನ್ನಯ ಮಂತ್ರಿ ನೇಮಿಯ
ಖಾನ ತೋರಿದ ಮನೋವ್ಯಾಧಿ |
ಕುಮ್ಮಟದರಸು ರಾಮನ ಚಿತ್ರಪಟವಿದು
ನನ್ನಯ ಮನ ಸೂರೆಗೊಂಡ || ೫ ||
ಹಿಂದಣ ದ್ವಾಪರದಲಿ ದ್ರುಪದನಂದನೆಯಾಗಿ
ಬಂದೀಗ ಕಲಿಯುಗದಲ್ಲಿ |
ಸುರಿತಾಳನ…………………………………
ಮಂದಿರದಲಿ ಜನಿಸಿದಳು || ೬ ||
ಅಂದೈವರ ರಾಣಿಯಾಗಿ ದೇವೇಂದ್ರನ
ನಂದನ ನೆರೆದ ಶಾಪದಲಿ |
ಕುಂದದೆ ಅರ್ಜುನನೆಂದು ಭೋಗಕೆಯೆಂದು
ಸಂದು ಹುಟ್ಟಿದಳು ಡಿಳ್ಳಿಯೊಳಗೆ || ೭ ||
ನಂದನೆಯಾಗಿ ರಾಮನ ಹೊಂದುವೆನೆಂದು
ಚೆಂದದ ಚೆಲುವಲಂಕರಿಸಿ |
ಬಂದು ಜಾನಿಸೆ ರಾಮನ ಮೇಲೆ ವಿರಹದಿ
ನೊಂದು [ಮಮ್ಮಲನೆ] ಸುರಿತಾಳ || ೮ ||
ಸತ್ತನೆಂದೇ ಹೋದ ರಾಮನ ಸುದ್ದಿಯ
ಮತ್ತೆ ಮಂತ್ರಿಯು ಮಡಗಿದನು |
ಕರ್ತು ಪ್ರಧಾನ ರಾಮನ ತಂದು ಕಾಣಿಸಿ
ಹೆತ್ತ ತಾಯಿ ತಂದೆ ಕಾಣಿಸಿದ || ೯ ||
ಭಾಪು ಭಾಪುರೆ [ಹಿಂ]ದುವಿನ ಮಂತ್ರಿಯೆಂದು
ಭೂಪತಿ ಸುರಿತಾಳ ಮೆಚ್ಚಿ |
ಈ ಪರಿ ಬುದ್ಧಿ ಪ್ರಧಾನರು ನಮಗಿಲ್ಲ
ಕೋಪದಿ ನೇಮಿಯ ಬೈದ || ೧೦ ||
ಅರಮನೆಯಳು ಸುರಿತಾಳನ ಸುತೆ ಮತ್ತೆ
ವಿರಹತಾಪದಿ ಸೊರಗಿದಳು |
ಕರೆದು ಮಗಳ ನಾನು ಕರೆಸುವ ಸಮಯಕ್ಕೆ
ನೆರೆದುದು ದಿಲ್ಲೀಶ ದೊರೆಯು || ೧೧ ||
ದ್ವಾಪರಯುಗದಲ್ಲಿ ದ್ರುಪದನಂದನೆಯಾಗಿ
ಭೂಪರನೈವರ ಕಾಡಿ |
ಈ ಪರಿ ಕಲಿಯುಗದೊಳು ಸುರಿತಾಳನ
ಭೂಪನಂದನೆಯಾಗಿ ಜನಿಸಿ || ೧೨ ||
ಶ್ರೀಪತಿ ಮೈದುನ ಪಾರ್ವತಿ ವರದಿಂದ
ಭೂಪ ಕಂಪಿಲನ ಮಗನಾಗಿ |
ಈ ಪರಿಯಲ್ಲಿ ಇಳೆಯೊಳಗುಳ್ಳರಾಯರ
ಕೋಪದಿ ಚಿಲ್ಲ ಬಡಿದನು || ೧೩ ||
ಎಂದು ಪೇಳಲು ಸುರಿತಾಳನಾ ಕ್ಷಣದಲ್ಲಿ
ಬಂದನು ಹೊರ ಚಾವಡಿಗೆ || ೧೪ ||
ಮತ್ತೆ ಕೇಳೆಲೋ ಮಂತ್ರಿ ನೇಮಿಯವರ ತಂದೆ
ಇತ್ತನಂತೆ ದೊರೆತನವ |
ಒತ್ತಿ ಪಟ್ಟವನು ಕಟ್ಟಿದರಂತೆ ರಾಮಗೆ
ಮತ್ತೆ ಕೇಳಿದೆ ಮಂತ್ರಿ ಸುದ್ದಿ || ೧೫ ||
ಹತ್ತು ಲಕ್ಷವು ವಾಜಿ ಕಾಲಾಳು ಕರಿಘಟೆ
ಮುತ್ತಲುಹೋಗಿ ಕುಮ್ಮಟಕೆ |
ನೆತ್ತರ ಹರಿವಂತೆ ಕಡಿವಾಗಲು ರಾಮ
ಹತ್ತು ತಲೆಯ ರಾವಣ[ನೆ] || ೧೬ ||
ಕೊಟ್ಟದ ಬೇಡನೆಂಬಿರಿ ಜಗವೆಲ್ಲವು
ಮುಟ್ಟಲಮ್ಮಗೆ ತಿರುಗಿದಿರಿ |
ದಿಟ್ಟನಹುದು [ಹಿಂ]ದುವ ರಾಯ ಕದನಕ್ಕೆ
ಅಷ್ಟದಿಕ್ಕಿಗೆ ಕಂಪಸುತನು || ೧೭ ||
ಒಪಡವಿಯೊಳಗೆ ಓರ್ಗಲ್ಲ ಪ್ರತಾಪನು
ಅಡಿಯಾದ ಹಮ್ಮೀರರಾಯ |
ಪಿಡಿತಹೆನೆಂದು ಮಾತಾಡಿ ಹೋದವರೆಲ್ಲ
ಮಡಿದು ಹೋದರು ಅವನ ಕೈಯ್ಯ || ೧೮ ||
ಚಿಪ್ಪರಿಗಿಯ ಮೊಗಲ ಎಪ್ಪತ್ತು ಸಾವಿರ ವಾಜಿ
ತಪ್ಪದೆ ತಾ ಹೋಗಿ ಮಡಿದ |
ಕಡುಗಲಿ ಆ ನಾಡ ಗುತ್ತಿ ಜಗದಪ್ಪನ
ಕಡಿದು ಹೆಣ್ಣನು ತೆಕ್ಕೊಂಡ || ೧೯ ||
ರಾಮನಿದಿರಿಗೆ ದಂಡು ನಿಮಿಷವು ನಿಲ್ಲದು
ನೇಮಿಯೊಬ್ಬನು ಏನಹನು |
ಸೀಮೆಯೊಳಗೆ ಸುತ್ತ ತರುಗಿರಿ ಕುಮ್ಮಟ
ಭೂಮಿಯೊಳೈಶ್ವರ್ಯ ದುರ್ಗ || ೨೦ ||
ಮುಗಿಲ ಸೆರಗಿನಂತೆ ಮಿಗಿಲಾದ ದುರ್ಗವ
ಬಗೆಯನದಾರು ಬಣ್ಣಿಪರು |
ಹಗೆಯಾದೆವು ಸುರಿತಾಳಗೆ ನಾವಿನ್ನು
ಹೊಗಬಾರದು ಕುಮ್ಮಟವ || ೨೧ ||
ಹೋಗುವ ಸೇನೆಯು ಸಹ ನೇಮಿ [ಹಿಂ]ದುವ ರಾಯ
ಹಾಗೆನ್ನಲವನು ಬಲ್ಲಿದನೆ |
ಸೋಗೆಗಂಗಳ ರಾಮ ರಾಯ ಬಲ್ಲಿದನೆಂದು
ನಾಗಲೀಕನ ತಾಹರಿಲ್ಲ || ೨೨ ||
ಎಲ್ಲಿಗಾದರೆ ನನ್ನ ಕಳುಹಯ್ಯ ದಂಡನು
ಬಲ್ಲಿದ ರಾಮನ ಮೇಲೆ |
ಇಲ್ಲಿಗೆ ತರಿಸಿಕೋ ಕಪ್ಪವ ಕುಮ್ಮಟ
ದಲ್ಲಿಗೆ ಕಳುಹಬೇಡೆಂದ || ೨೩ ||
ಕಳುಹು ಗುಜರಾತಿಯ [ಮೇಲೆ] ತೆಲುಗರ ಮೇ[ಲೆ]
ಕಳುಹು ಮಲೆಯಾಳರ ಮೇಲೆ |
ಕಳುಹು ಮಗಧ ವಡ್ಡದೇಶದ ಮೇಲಿನ್ನು
ಕಳುಹಲು ಬೇಡ ಕುಮ್ಮಟಕೆ || ೨೪ ||
ಈಗ ಹೋಗುವೆನು [ಹಿಂ]ದುವಿನ ರಾಯರ ಮೇಲೆ
ಬೇಗ ತಾಹೆನು ಕೈಸೆರೆಯ |
ನಾಗಲೋಕಕೆ ಹೋಗೆಂದರೆ ಹೋದೇವು
ಹೋಗಲಾರೆವು ಕುಮ್ಮಟಕೆ || ೨೫ ||
ಇಂತೆಂಬ ಮಾತನು ಕೇಳುತ ಸುರಿತಾಳ
ಚಿಂತೆಯಾದನು ಮನದೊಳಗೆ |
ಪಂಥವನಾಡಿ ಪಿಡಿತರದೆ ಹೋದಿರಿ ಕಾ
ಲಾಂತಕನವನೇನೊ ರಾಮ || ೨೬ ||
ಹೋದಹೋದವರೆಲ್ಲ ಕಾದಿ ನುಗ್ಗಾದಿರಿ
ಬಾದೂರಖಾನನ ತರದೆ |
ಮಾದಿಗಿತ್ತಿಯು ಪುಟ್ಟಿ ಬಂದು ಮಾತಂಗಿಯು
ನಿಂದು ಬಿನ್ನೈಸಿ ಸುರಿತಾಳಗೆ || ೨೭ ||
ರಾಮನ ತರುವೆನು ಎಂದು ಮಾತಂಗಿಯು
ಪ್ರೇಮದಿ ವೀಳ್ಯ ಪಾಲಿಸೆನಲು |
ಎಂದ ಮಾತನು ಕೇಳಿ ಸುರಿತಾಳನು ತಾನು
ನಿಂದ ಮಂತ್ರಿಯ ಮುಖನೋಡಿ || ೨೮ ||
ಹೇಡಿ ಮಂತ್ರಿಯೆ ಕೇಳು ಹೆಂಗೂಸು ತರುತಾಳೆ
ಎಂದು ಮೂದಲಿಸೆ ಸುರಿತಾಳ |
ಎಂದು ಮಾತನು ಕೇಳಿ ಎಲೆ ರಂಡೆ ತರುತೀಯ
ಎಂದು ಕೇಳಿದನು ಮಂತ್ರೀಶ || ೨೯ ||
ಮಂತ್ರಿ ನೇಮಿಯೆ ಕೇಳು ತರುತೇನೆ ರಾಮುಗನ
ಮಂತ್ರಿಗೆ ಉಸುರಿದಳು ಎಂದ |
ಮಾತನು ಕೇಳಿ ಮಂತ್ರಿ ಸೋಜಿಗಬಟ್ಟು
ಚಿಂತಿಸುತಿರ್ದ ಮನದೊಳಗೆ || ೩೦ ||
ಮಾದಿಗಿತ್ತಿಗೆ ವೀಳ್ಯವ ಕೊಟ್ಟು ಸುರಿತಾಳ
ತರುಹೋಗು ರಾಮುಗನ ಎನುತ |
ಚೆಲುವುಳ್ಳ ಚೆನ್ನಾರಿ ಒನಪು ಹೊಂತಕಾರಿ
ಬಲವುಳ್ಳ ಮಾನಿನಿ ರನ್ನೆ || ೩೧ ||
ತುರಗ ಶೃಂಗಾರಕೆ ಒಪ್ಪುವ ಹೊನ್ನಾಯುಧ
ಸರಪಳಿ ಝಲ್ಲಿ ಜಮದಂಡೆ |
ಆದರಿವಳ ಕೂಡೆ ಹೋಗಿ ನೀವೆಲ್ಲರು
ಹೋಗಿರಿ ಎನ್ನಯ ಮುಂದೆ || ೩೨ ||
ನವಲಕ್ಷ ಕುದುರೆ ಕಾಲಾಳು ಕೋಟಿಯು ಮತ್ತೆ
ಭುವನದ ಸೂರೆಗೊಂಬಂತೆ |
ಹವಣಿಸಿ ಸುರಿತಾಳ ನೇಮಿಯ ಕಳುಹಲು
ನವ ರಾಮನಾಥನ ಮೇಲೆ || ೩೩ ||
ಹತ್ತು ಲಕ್ಷವು ಆಳು ನವಲಕ್ಷ ವಾಜಿಯು
ಮತ್ತೆ ಗಜವಿಂಡೊಂದು ಲಕ್ಷ |
ಇತ್ತರದಲಿ ನೆರೆದಿಹ ಪರಿವಾರವು
ಮುತ್ತಿ ನಡೆಯಿತು ಕುಮ್ಮಟವ || ೩೪ ||
ಇತ್ತಲಿ ಸುರಿತಾಳರಾಯ ಮಾತಂಗಿಗೆ
ಮೊತ್ತದ ವೀಳ್ಯವನಾಗ |
ಇತ್ತರದಲ್ಲಿ ನಿಂದಿರುವ ಪರಿವಾರವ
ಸತ್ಕರಿಸಿದನು ಸುರಿತಾಳ || ೩೫ ||
ಹೋಗಿರೈ ನೇಮಿ ಬೇಗದಿ ಕುಮ್ಮಟಕೆಂದು
ಆಗ ಹೇಳಿದ ಸುರಿತಾಳ |
ಎದ್ದು ಮಾತಂಗಿ ಸುರಿತಾಳನ ಪಾದಕ್ಕೆ
ಬಿದ್ದಳು ತುಂಬಿದೋಲಗದಿ || ೩೬ ||
ಭಾಷೆಯ ಕೊಟ್ಟಳು ಆ ಸುರಿತಾಳಗೆ
ದೇಶವರಿಯೆ ಕಂಪಿಲನ |
[ಗಾಸಿ]ಯ ಮಾಡಿ ರಾಮನ ಕಟ್ಟಿ ತಹೆನೆಂದು
ಲೇಸಾಗಿ ಸುರಿತಾಳನ ಮುಂದೆ || ೩೭ ||
[ತೆಂ]ಕಣದೇಶದ ಮಧ್ಯದಿ ಮಾತಂಗಿ
ಶಂಕೆಯಿಲ್ಲದೆ ದಂಡ ಬಿಟ್ಟು |
ಬಿಂಕವ ಮುರಿವೆ ರಾಮನ ದುರ್ಗವನೆಂದು
ಅಂಕಕಾತಿಯು ಬರುತಹಳು || ೩೮ ||
ಮುತ್ತಿನ ಗುಡಿಯು ಸಾವಿರ ಮಾತಂಗಿಗೆ
ಇತ್ತರದಲ್ಲಿ ಸತ್ತಿಗೆಯು |
ಹತ್ತುಸಾವಿರ ಕಾಲಾಳು ಕುದುರೆಗಳು
ಒತ್ತಿಲಿ ನೇಮಿಯ ದಂಡು || ೩೯ ||
ಇಲ್ಲಿಗೆ ಮುನ್ನೂರು ಅರುವತ್ತು ಗಾವುದ
ಅಲ್ಲಿಹ ಕುಮ್ಮಟದುರ್ಗ |
ಅಲ್ಲಿಗಲ್ಲಿಗೆ ಅಂಚೆ ಕುದುರೆಯನಿಟ್ಟಳು
ನಿಲ್ಲದೆ ದಾಳಿ ಮಾಡಿದಳು || ೪೦ ||
ಮುಂಜೂಣಿ ಕುದುರೆಯ ಬಿಟ್ಟಳು ಮಾತಂಗಿ
ಸಂಜೆಯ ಅಡಗುಗಳಡಗಿ |
ಮಂಜು ಮುಸುಕಿದಂತೆ ರಾಮನ ರಾಜ್ಯವ
ಅಂಜಿಕಿಲ್ಲದೆ ಒಳಪೊಕ್ಕು || ೪೧ ||
ಅಲ್ಲಲ್ಲಿ ಬಿಡದೆ ಬಂದಳು ಮಾತಂಗಿಯು
ನಿಲ್ಲದೆ ಪಯಣ ಗತಿಯಲ್ಲಿ |
ಕೊಲ್ಲದ ಕೊಲೆಯ ಕೊಲ್ಲುವೆನೆಂದು ಮಾತಂಗಿ
ಎಲ್ಲ ಪೌಜನು ಮಾಡಿಕೊಂಡು || ೪೨ ||
ಬಿಟ್ಟಲ್ಲಿ ಬಿಡದೆ ಬಂದಳು ಮಾತಂಗಿಯು
ಬೆಟ್ಟವಾವುದು ಕಂಪಿಲನ |
ಮುಟ್ಟಿ ತರಿದು ರಾಮನ ಹೆಡಗೈಯ್ಯನು
ಕಟ್ಟಿ ಸುರಿತಾಳನೆಡೆಗೆ || ೪೩ ||
ಗಡಿಯ ದಾಟಿದಳು ಮಾತಂಗಿಯು ಬೇಗದಿ
ಪಿಡಿತಹೆನೆಂದು ಬಾದೂರನ |
ಇಂದಿನ ದಿನವಿರಳು ಬೆಳಗ ಕಳೆದೆವಾದರೆ
ಚಂದ್ರಶೇಖರ ಶಿವನಿಂದ || ೪೪ ||
ಹಿಂದೆ ಮರಳಿ [ತಾ]ಯಿ ಗರ್ಭದೊಳ್ ಬಂದಂತೆ
ಎಂದು ನುಡಿ[ಯುತೆ] ತಮ್ಮೊಳಗೆ |
ಬಂದ ದಂಡನು ಕಂಡು ರಾಮನಾಥನು ತನ್ನ
ತಂದೆ ಬಳಿಗೆ ಆಳ ಕಳುಹಿ || ೪೫ ||
ಒಂದು ದಿನಕೆ ಹತ್ತು ಸಾವಿರ ಹೊನ್ನನು
ಮಂದಿಗೆ ಕಳುಹ ಹೇಳಿದನು |
ಕಡೆಯಕಲ್ಲನೆ ಹತ್ತಿ ನೋಡುತ ರಾಮಯ್ಯ
ಒಡನೆ ಮಾನ್ಯರು ಸಹವಾಗಿ || ೪೬ ||
ವಸುಧೆ ಎಲ್ಲವು ಬೆಸಲಾದಂತೆ ತುರುಕರ ದಂಡು
ದೆಸೆದೆಸೆಯಲ್ಲಿ ಪೌಜುಗಳು |
ಅಸದಳವಾಗಿದೆ ಕಂಪಿಲರಾಯನ
ಹೊಸದುರ್ಗಕೆ ಹೋ[ಗೆ]ನಲು || ೪೭ ||
ಇಂತೆಂದು ತಂದೆಗೆ ಹೇಳಿ ಕಳುಹಿ ರಾಮ
ಸಂತೋಷವಾದನು ಮನದಿ |
ಸಂದೇಹವ್ಯಾತಕೆ ಹೊಯ್ದು ಕೆಡುಹುವೆನೆಂದು
ಪಂಥವ ಬಿಡೆನೆಂದ ರಾಮ || ೪೮ ||
ಸ್ವರ್ಗ ಮರ್ತ್ಯ ಪಾತಾಳದಿ ಕೀರ್ತಿಯು
ವೆಗ್ಗಳವಾಗಿ ಪಡೆವೆನು |
ದುರ್ಗಕ್ಕೆ ತನಗೆ ಮದುವೆಯೆಂದು ರಾಮಯ್ಯ
ಒಗ್ಗಿನ ಮಾತನಾಡಿದನು || ೪೯ ||
ದೇಶದಿಂದಲಿ ದೇಶಕೆ ಬಂದು ಬಾದೂರ
ಆಶೆಯಮಾಡಿ ಮರೆಹೊಕ್ಕ |
ಮೀಸಲಾಯಿತು ನನ್ನ ತಲೆಯು ಸುರಿತಾಳಗೆ
ಭಾಷೆಯ ಬಿಡೆನೆಂದ ರಾಮ || ೫೦ ||
ಮಂಡಲದೊಳು ಜಟ್ಟಂಗಿರಾಮನ ವರ
ಪಿಂಡವು ತಾನು ಎಂದೆನುತ |
ತಂಡತಂಡವಾಗಿ ಕಡಿವೆನು ತುರುಕರ
ಗಂಡುಗಲಿಯು ರಾಮ ನುಡಿದ || ೫೧ ||
ಎಂದು ನುಡಿದನು ರಾಮಯ್ಯನು ಹಾಗೆಂದು
ತಂದೆ ಕಂಪಿಲರಾಯನೆಡೆಗೆ |
ಸಂದೇಹವಿಲ್ಲದೆ ಕಡಿದು ಕಾದುವೆನೆಂದು
ಅಂದು ಬಿನ್ನಹವ ಮಾಡಿದನು || ೫೨ ||
ಹೇಳಿದ ಮಾತ ಕೇ[ಳುತ] ಕಂಪಿಲರಾಯ
ತಾಳಿದ ಮನದಿ ಚಿಂತೆಯನು |
ಹಾಳಾಯಿತು ಹೊಸಮಲೆದುರ್ಗ ಕುಮ್ಮಟವೆಂದು
ಮೇಳೈಸಿದ ಹೊಸಮಲೆಗೆ || ೫೩ ||
ಕಂಡನಾಗಲು ರಾಮ ಬಾದೂರಖಾನನ
ಕೊಂಡಲ್ಲದೆ ಹೋಗರಿವನ |
ಹೆಂಡರು ಮಕ್ಕಳು ಸಹವಾಗಿ ಬೈಚಪ್ಪ
ಭಂಡಾರವನು ತೆರಳೆಂದ || ೫೪ ||
ಹೊಕ್ಕುಳ ಗಂಟೆಯ ಐನೂರು ಕುದುರೆಯ
ಗಕ್ಕನೆ ಕಳುಹಿದ ರಾಮ || ೫೫ ||
ಇತ್ತ ಕುಮ್ಮಟವ ಹೊರಟನು ರಾಮಯ್ಯನು
ಒತ್ತಿ ಮಾಡಿದ ಮುಂ[ಗಾ]ಳಗವ |
ಒತ್ತರಿಸಿ ಬರುವ ತುರುಕರ ದಂಡ ಕಣಿವೆಯೊಳ್
ಮುತ್ತಿ ಕಡಿದು ಮುರಿಯಲೊತ್ತಿ || ೫೬ ||
ರಣಭೀತಿ ಹೆಣಭೀತಿ ಮಾಡಿ ರಾಮಯ್ಯನು
ಕುಣಿಸುತ ಭೂತಪ್ರೇತಗಳ |
ಉಣಿಸಿ ಮರುಳು ತಂಡವೆಲ್ಲಕೆ ದಣಿವಂತೆ
ಹೊಣಕೆಯ ಬಂಟರು ಸಹಿತ || ೫೭ ||
ತಿರಿಗಿ ಬಂದನು ಕುಮ್ಮಟಕಾಗಿ ರಾಮಯ್ಯ
ಭರದಿಂದ ತನ್ನ ದುರ್ಗದೊಳು |
ಇರುತಿರಲಾಕ್ಷಣ ತಂದೆ ಬಳಿಗೆ ಸುದ್ದಿ
ಬರೆಸಿ ಕಳುಹಿ ಚರರಟ್ಟಿ || ೫೮ ||
ಹರಿಯಲದೇವಿಗೆ ಪರಿತಂದು ಸುದ್ದಿಯ
ನೊರೆದರು ಊಳಿಗದವರು |
ಅರಸು ಭಂಡಾರದೊಳೆರಡು ಖಂಡುಗ ಹೊನ್ನ
ತರಿಸಿ ರಾಮಗೆ ಕಳುಹಿದ[ಳು] || ೫೯ ||
ಮುಂಜೂಣಿ ಕಾಳಗಕೆ ಹೋಗಿರ್ದ ರಾಮಯ್ಯ
ಮಂದಿ ಮಕ್ಕಳು ಸಹವಾಗಿ |
ಕುಂಜರದಾನೆ ಕುದುರೆಯ ಪಿಡಿಕೊಂಡು
ಸಂಜೆಲಿ ಹೊಕ್ಕ ಅರಮನೆಯ || ೬೦ ||
ಕೊಬ್ಬಿ ದಾಳಿಯ ಬರುತಿರಲು ಮಾತಂಗಿಯು
ಸಬ್ಬ ದಂಡಿಗೆ ಇದಿರಾಗಿ |
ಹೆಬ್ಬಾಗಿಲ ತೆಗೆತೆಗೆಯೆಂದು ರಾಹುತರು
ಉಬ್ಬಿ ರಾಮಗೆ [ಕಲಿ]ಮಂದಿ || ೬೧ ||
ಬಿಲ್ಲ ಮಂದಿಯು ಹರಿಗೆಯ ಮಂದಿ ಸಹವಾಗಿ
ಎಲ್ಲರು ಕೋಟೆಯ ಮೇಲೆ |
ಭಾಷೆಕೊಡಲು ನಳಿನಸಖನಸ್ತನಾದನು
ಕಳೆಯು ಏರಿತು ಕುಮ್ಮಟವು || ೬೨ ||
ತಳೆದವು ಕೈದೀವಿಗೆಯು ಕೋಟೆಯ ಮೇಲೆ
ಹೊಳೆಯಿತು ಕಾವಲ ಮಂದಿ |
ಬಿಲ್ಲ ಮಂದಿಯು ಹರಿಗೆಯ ಮಂದಿ ಸಹವಾಗಿ
ಎಲ್ಲರು ಕೋಟೆಯ ಮೇಲೆ || ೬೩ ||
ಎಲ್ಲಿ ನೋಡಿದರಲ್ಲಿ ತುಳುವ ಎಕ್ಕಟಿಗರು
ಸೊಲ್ಲೆರಡಿಲ್ಲ ಪಟ್ಟಣದಿ || ೬೪ ||
ಈ ಪರಿಯಲ್ಲಿ ಬೆಳಗಾಯಿತು ಕುಮ್ಮಟ
ಭೂಪನೈದಿದ ರಾಮನಾಥ |
ಶ್ರೀಪತಿ ಶರಣು ಎನ್ನುತ ನಿಶ್ಚೈಸುತ
ಭಾಪುರೆಯೆಂದು ಮನದೊಳಗೆ || ೬೫ ||
ತನ್ನರಮನೆಗಾಗಿ ಬಂದನು ರಾಮಯ್ಯ
ಮನ್ನೆರನೆಲ್ಲ ಕರೆಸಿದನು |
ಚೆನ್ನಾಗಿ ಊಟ ಮಾಡಿಸಿ ಉಡುಗೊರೆಯಿತ್ತು
ಮನ್ನಿಸಿದನು ರಾಹುತರ || ೬೬ ||
ತಂದರು ವಸ್ತ್ರಾಭರಣವನೆಲ್ಲವ
ಮುಂದಿರಿಸಿದರು ರಾಮಯನ |
ಗಂಧ ಕಸ್ತೂರಿ ಕುಂಕುಮ ಕಾದಂಬವ
ಮಂದಿ ಎಲ್ಲಕ್ಕೆ ಕೊಡುತಿರ್ದ || ೬೭ ||
ಮಂಡಲದೊಳಗುಳ್ಳ ರಾಯರಗಂಡನೆಂಬ
ಚರಣದೊಳುಲಿಯೆ ಪೆಂಡೆಯವು || ೬೮ ||
ಮುತ್ತಿನ ಜೋಡು ಪಚ್ಚೆದ ಜೋಡು ಚಿನ್ನದ
ಚಿತ್ರದ ಜೋಡು ವಜ್ರಂಗಿ |
ಸುತ್ತುಗಟ್ಟಿದ ಕುಮುದ ಝಲ್ಲಿ ಕುದುರೆಗೆ
ಮಸ್ತಕಕೆ ಮೆರೆವ ಲಲಾಟ || ೬೯ ||
ಬಂದರು ಭಟರು ಉಗ್ಗಡಿಸುತ ಬಿರಿದನು
ನಿಂದರು ರಾಮನೊಂದಿನಲಿ |
ಮುಂದೆ ಹೆಬ್ಬಾಗಿಲ ತೆಗೆಯೆಂದು ರಾಹುತರು
ನಿಂದು ರಾಮನ ಪಚಾರಿಸುತ || ೭೦ ||
ಎತ್ತಿತು ಮುತ್ತಿನ ಸತ್ತಿಗೆ ರಾಮಗೆ
ಮತ್ತೆ ಬಿರುದಿನ ಡೊಳ್ಳುಗಳು |
ಚಿತ್ರದ ಮುಖದ ಟೆಕ್ಕೆಯವೆತ್ತಿ ಬರಲಾ
ಮೊತ್ತವ ಕಂಡು ಮಾತಂಗಿ || ೭೧ ||
ಅರರೆ ರಾಮುಗನೆಂದು ಕೊಂಡಾಡಿದರಾಗ
ಧುರಧೀರ ನೀನಹುದೆನುತ || ೭೨ ||
ಅಬ್ಬರದಲಿ ರಾಮನಿಳಿದನು ದುರ್ಗವ
ಹೆಬ್ಬಾಗಿಲ ತೆಗಿಸಿದನು |
ನಿಬ್ಬರದಲಿ ಕಾಣುತಲೆದ್ದು ತಿವಿದರು
ಒಬ್ಬರೊಬ್ಬರನು ಮೂದಲಿಸಿ || ೭೩ ||
ಎಡವಂಕದಲಿ ನೋಡುತ ರಾಮನಾಥನು
ಬಡಿದಾಡಿತು ಬಲವಂಕ || ೭೪ ||
ಹೋದ ಮಂದಿಯು ತಿರುಗದುಯೆಂದು ಮಾತಂಗಿ
ಮೂದಲಿಸುತ ಏರಿದಳು |
ಆದಕೊಂಡರು ರಾಮನ ಮಂದಿ ತುರುಕರ
ಮಾದಿಗಿತ್ತಿಯು ಬೆರಾಗೆ || ೭೫ ||
ಬಲ್ಲಂತೆ ಕಡಿ ಹೊಡಿ ಎನುತಲಿ ರಾಮಯ್ಯ
ಎಲ್ಲಕೆ ಕೈಯ್ಯ ಬೀಸಿದನು |
ಹೊಳಕೆಯ ಮಂದಿಯಂಕವ ನೋಡಿ ಕಡಿವಾಗ
ಎಣಿಕೆಯಿಲ್ಲದೆ ಡೇರೆ ಪೊಕ್ಕು || ೭೬ ||
ತಳುವಿಲ್ಲದೆ ಕುದುರೆಯ ಪಿಡಿದೆಳೆದರು
ಘಳಲನೆ ಒಡೆಯಗೊಪ್ಪಿಸಿ || ೭೭ ||
ಹೆಣಮಯವಾಯಿತು ಕದನದೊಳೆಲ್ಲವು
ದಣಮಯವದ್ಭತವಾಯ್ತು |
ಹೊಣಿಕೆಯ ಮಂದಿಗೆ ಸರಿಯಲ್ಲ ರಾಮನ
ಕೆಣಕಿ ಕೆಟ್ಟೆವು ನೊಂದೆವೆನುತ || ೭೮ ||
ನುಗ್ಗುಮಾಡಿಯೆ ಕಡಿದರು ಕಣಿವೆಯ ಕಟ್ಟಿ
ಕಗ್ಗೊಲೆಯ ಕೆಲಬಲರ |
ಬಾಗಿಹೋಗುತ ಗಿಡುಗಳ ಮೆಳೆಯ ಹೋಗುತ
ಅಗ್ಗಾಗಿ ಓಡಿತು ದಂಡು || ೭೯ ||
ಕೆಟ್ಟು ಓಡಿತು ಮಾತಂಗಿಯ ಬಲವೆಲ್ಲ
ಅಷ್ಟದಿಕ್ಕಿಗೆ ಬಾಯಬಿಡುತ || ೮೦ ||
ನಾಲ್ಕು ಕಾಲುಗ ಕಟ್ಟಿರಿಸುತ ಕುದುರೆಯ
ನೂಕಲಮ್ಮದೆ ನಿಂದಿಹರು |
ಬೇಕಾಗಿ ಮಾತಂಗಿ [ಏ]ರಲು ರಾಮಯ್ಯ
ತಾ ಕೈಕೊಂಡ ಕಾಳಗವ || ೮೧ ||
ಎರಡು ಲಕ್ಷವು ಕುದುರೆಗಳೇರೆ ರಾಮನ
ಗರುಬಿ ಹಿಡಿವೆನು ಎಂದೆನುತ |
ಕರದ ಪಟ್ಟೆಯದಲಿ ಕಡಿಕಡಿದೊಟ್ಟಲು
ಒರಲುತ ಮುರಿದ ಓಡಿದರು || ೮೨ ||
ಕುದುರೆ ಕುದುರೆಗಳ ಸಂದಣಿ ರಾಮನು
ಕದಬುತ ಕತ್ತಿಯ ಹೊಯ್ದು |
ಕದಳಿಯೊಳಗೆ ಒಂದು ಮದಕರಿ ಹೊಕ್ಕಂತೆ
ಮೆದೆಗೆಡಹಿದನು ತುರುಕರನು || ೮೩ ||
ಖಂಡೆಯದಲಿ ಹೊಡೆಯಲು ತೋಲು ಖಂಡಿಸಿ
ಗುಂಡಿಗೆ ಒಡೆದು ಡೆಂಢಣಿಸಿ |
ತುಂಡುತುಂಡುಗಳಾಗಿ ಕಡಿದನು ರಾಮನು
ಗಂಡುಗಲಿಯು ರಾಹುತರ || ೮೪ ||
ತುರುಕ ರಾಹುತರೆಲ್ಲರು ಮಡಿವಂತಹ
ಪರಿಯನದಾರು ಬಣ್ಣಿಪರು _
ಮೊರೆದವು ಮರುಳ ತಂಡದ ಹಿಂಡು ಬಂದಿತು
ದೊರೆ ರಾಮನ ಪರಸುತಲಿ || ೮೫ ||
ತಂಡತಂಡದ ಭೂತಗಳುಂಡು ದಣಿದವು
ಕೊಂಡಾಡಿದವು ರಾಮುಗನ |
ಮಿಕ್ಕಾದ ಮರುಳ ತಂಡವನೆಲ್ಲ ದಣಿಸಿದ
ದಿಕ್ಕಿನೊಳಗೆ ವೀರ ರಾಮ || ೮೬ ||
ಹೆಣಮಯವಾಯಿತ್ತು ಆಳುವೇರಿಯ ಸುತ್ತ
ರಣವನಿಕ್ಕಿದರು ಕುಮ್ಮಟಕೆ || ೮೭ ||
ಕೋಟೆಗೆ ತುರುಕರ ಬಲಿಯನು ಇಕ್ಕಿನ್ನು
ಕಾಟಣ್ಣ ಹಿಂದಕ್ಕೆ ಮರಳಿ |
ನಾಟಕವಲ್ಲ ರಾಮನ ಕೊಡೆ ಕಾಳಗ
ಕೋಟಲೆಯಾಯ್ತು ನಮಗೆಂದ || ೮೮ ||
ಕೊಪ್ಪರಿಗೆಯೊಳಗೆ ಕಾದ ಎಣ್ಣೆಯ ತಂದು
ಖಾನರ ಮೇಲೆ ಚಿಲ್ಲಿದರು |
ಕಾದ ಬೊಗ್ಗನು ತಂದು ಖಾನರ ಮೇಲಿನ್ನು
ಚೆಲ್ಲಲು ಅಯ್ಯೋ ಎಂದೆನುತ || ೮೯ ||
ಕಾದುವರಸದಳವೆನುತಲಿ ಮಾತಂಗಿ
ಮೂದಲಿಸುತಲೇರಿದಳು || ೯೦ ||
ಕಲ್ಲೊಳು ಕಾದ[ಬಹು]ದು ರಾಮನ ಕೂಡೆ
ನಿಲ್ಲಬಾರದು ಎಂದೆನುತ |
ಭಲ್ಲೆಯ ಖಾನ ವಜೀರರ ಕೂಡಿಸಿ
ಝಲ್ಲನೆ ಹಿಂದಕ್ಕೆ ತಿರುಗಿ || ೯೧ ||
ಹಿಂದಕ್ಕೆ ತಿರುಗಿ ಬಂದಳು ಮಾತಂಗಿಯು
ಒಂದುಗಾವುದ ದಾರಿಯನು |
ಸಂದೇಹವಿಡಿದು ಕಾದುವ ಬಗೆಯಿಲ್ಲ
ವೆಂದು ಚಿಂತಿಸಿ ಮನದೊಳಗೆ || ೯೨ ||
ನಿಲ್ಲದೆ ತಮ್ಮೊಳು ತಾವು ಮಾತಾಡುತ
[ಅಲ್ಲಿಹ] ತೆಲುಗ ಮನ್ನೆಯರು |
ಬಲ್ಲಿದ ರಾಮನ [ಕೊಲ್ಲಿ]ಸಬೇಕೆನುತಲಿ
ಎಲ್ಲ ರಾಯರು ಕಾಗದ ಬರಿಸಿ || ೯೩ ||
ನವಲಕ್ಷ ತೆಲುಗರ ಗಂಡನೆಂಬ ಕಡೆಯವ
ಇವನಿಕ್ಕಬಹುದೆ ಕಾಲೊಳಗೆ |
ತವಕದಿ ತಮ್ಮೊಳು ತಾವೆ ರೋಷವ ತಾಳಿ
ಇವನ ಕೊಲ್ಲಿಸಬೇಕೆನುತ || ೯೪ ||
ಹೋಗಬೇಡವು ತಿರುಗುಯೆಂದು ಮಾತಂಗಿಗೆ
ಆಗಲೆ ತೆಲುಗ ಮನ್ನೆಯರು |
ಬಾಗಿಲ ತೆಗೆದುಕೊಟ್ಟೇವು ಬರಹೇಳೆಂದು
ಬೇಗದಿ ಬರಸಿ ಕಳುಹಿದ[ರು] || ೯೫ ||
ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಸುದತಿ ಮಾತಂಗಿ ಕುಮ್ಮಟ ಮುತ್ತಿ ಮುರಿದೋಡಿ
ಹೆದರಿ ಓಡಿದ ಕಥೆ ಪೂರಾಯ್ತು || ೯೬ ||
ಅಂತು ಸಂಧಿ ೨೪ಕ್ಕಂ ಪದನು ೨೫೬೯ಕ್ಕಂ ಮಂಗಳ ಮಹಾಶ್ರೀ
Leave A Comment