ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ]ಶರಣೆಂಬೆ || ೧ ||

ರಾಮನ ನೆನೆ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆನೆ ಕಂಡ್ಯಾ ತನುವೆ |
ರಾಮರಾಮಾ ಎಂಬ ನಾಮವ ನೆನೆದರೆ
ಕಾಮಿತ ಫಲವೀವ ರಾಮ || ೨ ||

ರಾಮಗೆ ಪಟ್ಟವ ಕಟ್ಟಬೇಕೆನುತಲಿ
ನೇಮಿಸಿದನು ಮನದೊಳಗೆ |
ಭೂಮೀಶ ಕಂಪಿಲ ತನ್ನ ಪ್ರಧಾನನೊಳ್‌
ಆಲೋಚನೆಯ ಮಾಡಿದನು || ೩ ||

ಕರಸಿಕೊಂಡನು ಆಗ ಮಂತ್ರಿ ಬೈಚಪ್ಪನ
ಬೆರಸಿ ಮಾತಾಡಿದರಾಗ |
ಧುರಧೀರ ರಾಮಗೆ ದೊರೆತನವನು ಮಾಡಿ
ಹರುಷವ ನೋಡಬೇಕೆಂದ || ೪ ||

ಮುಪ್ಪಾದೆವು ಎಪ್ಪತ್ತು ವರುಷವು ತುಂಬಿ
ಇಪ್ಪೆವೆ ಸ್ಥಿರಕಾಲವಾಗಿ |
ಅಪ್ಪಾಜಿ ಕೇಳು ನೀ ಮಂತ್ರಿ ಬೈಚಪ್ಪಗೆ
ಬೆರೆಸಿ ಮಾತಾಡಿದರಾಗ || ೫ ||

ಹಾಗೆಯಾಗಲಿ ನಿನ್ನ ಮನಸಿನಂತೆ ರಾಯ
ಈಗ ಕರೆಸು ಜೋಯಿಸರ |
ಕರೆಸಿದ ತನ್ನಯ ರಾಜಪುರೋಹಿತರ
ಕರೆಸಿದ ವೇದಪಾಠಕರ || ೬ ||
ಬಂದರು ಜೋಯಿಸ ಬ್ರಾಹ್ಮರು ದಿವ್ಯರು
ನಿಂದರು [ಮ]ಖದಲೆ ಅವರು |
ಗಂಧ ಅಕ್ಷತೆ ಖರ್ಜೂರ ಕದಳಿಗಳನು
ಮುಂದಿಟ್ಟು ಹರಕೆಯನಾಂತು || ೭ ||

ಕರೆಸಿದಿರೇಕೆಮ್ಮ ಅರಸೆ ಕಂಪಿಲರಾಯ
ದೊರೆ ಕೊಡು ಎಮಗೆ ಬುದ್ಧಿಯನು |
ಧುರಧೀರ ರಾಮಗೆ ಪಟ್ಟಗಟ್ಟಲಿಬೇಕು
ಒರೆದು ಪೇಳಿರಿ ಶುಭ ದಿವಸ || ೮ ||

ಇಂದಿನ ದಿವಸ ಒಳ್ಳೆಯದು ಅಮೃತಯೋಗ
ಬಂದಿದೆ ಶುಭಲಗ್ನಯೋಗ |
ಕಂದ ರಾಮಯ್ಯಗೆ ಪಟ್ಟಾಗಬೇಕೆಂದು
ನಿಂದು ಹೇಳಿದರು ಜೋಯಿಸರು || ೯ ||

ತರಿಸಿ ವಸ್ತ್ರಾಭರಣ ಪುಷ್ಟಂಗಳೆಲ್ಲವ
ಕರೆಸಿದ ಮಾನ್ಯರನೆಲ್ಲ |
ಹರುಷದಿ ತನ್ನ ಹಳಬರನೆಲ್ಲ ಕರೆಸಿದ
ಅರಸುಮಕ್ಕಳ ರಾಹುತರ || ೧೦ ||

ಎಲ್ಲರ ಕರೆಸಿಕೊಂಡಾಗ ಕಂಪಿಲರಾಯ
ಉಲ್ಲಾಸದಿಂದ ತಾನೆದ್ದು |
ಬಲ್ಲಿದ ರಾಮಗೆ ಪಟ್ಟದ ಪಿರಂಗಿಯ
ನಿಲ್ಲದೆ ಕೊಟ್ಟು ಕರೆಸಿದನು || ೧೧ ||

ಉಡುಗೊರೆ ಉತ್ಸಾಹ ಒಡವೆ ವಸ್ತುಗಳನು
ಕೊಡೆ ಕೊಟ್ಟ ಕಂಪಿಲರಾಯ |
ದೃಢಗಲಿ ರಾಮಯ್ಯ ಸ್ಥಿರಪಟ್ಟವಾಳೆಂದು
ಕೊಡೆ ಒಳ್ಳೆ ಬುದ್ಧಿಲಿ ಕೊಟ್ಟ || ೧೨ ||

ಸದರೆಲ್ಲ ಎದ್ದು ಕೈಮುಗಿದರು ರಾಮಯ್ಯಗೆ
ಮುದದಿಂದ ಬೈಚಪ್ಪ ಸಹಿತ |
ಬುಧರೆಳ್ಳ ಎದ್ದು ಮಂತ್ರಾಕ್ಷತೆ ಇತ್ತಾಗ
ಮದಮುಖ ರಾಮನ ಹರಸಿ || ೧೩ ||

ಪಟ್ಟಾಭಿಷೇಕವ ಮಾಡಿ ರಾಮಯ್ಯಗೆ
ಪಟ್ಟಣವೆಲ್ಲ ಶೃಂಗರಿಸಿ |
ನೆಟ್ಟನೆ ಆನೆಯ ಮೇಲೆ ಸಕ್ಕರೆ ಹೇರಿ
ಕೊಟ್ಟರು ಸಕಲ ಜನಕೆಲ್ಲ || ೧೪ ||

ಬಂದ ಬ್ರಾಹ್ಮರಿಗೆಲ್ಲ ನಿಂದು ಕೈಮುಗಿದರು
ತಂದಿಕ್ಕಿದರು ಹಿಡಿಹೊನ್ನ |
ವಂದನೆಗೈದು ವೀಳ್ಯವಕೊಟ್ಟು ಕಳುಹಿದ
ಕಂದ ರಾಮಯ್ಯ ಅರ್ತಿಯಲಿ || ೧೫ ||

ಬಂದವರೆಲ್ಲರಿಗೆ ಗಂಧ ವೀಳ್ಯವನಿತ್ತು
ಸಂದೇಹವಿಲ್ಲದೆ ರಾಮ |
ತಂದೆಯ ಪಾದಕ್ಕೆ ಬಿದ್ದು ವಂದನೆಮಾಡಿ
ಮಂದಿರವನು ಒಳಪೊಕ್ಕು || ೧೬ ||

ಹರಿಯಲದೇವಿ ಪಾದಕ್ಕೆರಗಿ ರಾಮಯ್ಯ
ಕರವೆತ್ತಿ ಕೈಮುಗಿದನು |
ಸ್ಥಿರಪಟ್ಟವಾಳೆಂದು ಹರಕೆಯ ಕೊಟ್ಟಳು
ಪರನಾರಿ ಸಹೋದರನಾಗು || ೧೭ ||

ಮುತ್ತಿನಾರತಿಗಳ ಎತ್ತಿಸಿ ರಾಮಗೆ
ಮುತ್ತೈದೆರೆಲ್ಲ ಹರಸಿದರು |
ಸುತ್ತಳ ರಾಯರ ಗೆಲ್ಲೆಂದು ಹರಕೆಯ
ನಿತ್ತರು ಅಕ್ಕತಂಗಿಯರು || ೧೮ ||

ಅಲ್ಲಿಂದ ಅಪ್ಪಣೆ ತೆಕ್ಕೊಂಡು ರಾಮಯ್ಯ
ನಿಲ್ಲದೆ ತನ್ನರಮನೆಗೆ |
ಮೆಲ್ಲನೆ ಬಂದು ಪಟ್ಟೆಮಂಚದಿ ಮಲಗಿದ ತನ್ನ
ವಲ್ಲಭೆಯರ ಮೇಳದಲಿ || ೧೯ ||

ಉದಯದೊಳೆದ್ದು ಊಟವಮಾಡಿ ರಾಮಯ್ಯ
ಸದರಿಗೆ ಬಂದು ಕುಳಿತನು |
ಒದಗಾಗಿ ಕರೆಯೊರೊ ಮನ್ನೆ ರಾಹುತರನು
ಮುದದಿಂದ ಗಣತಿಗೆ ಎನುತ || ೨೦ ||

ಕರೆಸಿದ ಕರಣಿಕ ಲಿಂಗನ ಬೇಗದಿ
ಬರಕೊಳ್ಳೊ ಮಂದಿ ಲೆಕ್ಕವನು || ೨೧ ||

ಇಟ್ಟು ತೊಟ್ಟು ಶೃಂಗಾರವಾಗಿ ಮಾನ್ಯರನೆಲ್ಲ
ನೆಟ್ಟನೆ ಠಾಣ್ಯ ರಾಹಿತರ |
ಕಟ್ಟಿಗೆಕಾರರ ಕಳಿಸಿದ ರಾಮಯ್ಯ
ತಟ್ಟನೆ ಕರೆತನ್ನಿ ಎನುತ || ೨೨ ||

ಕೇರಿಕೇರಿಯೊಳೆಲ್ಲ ಸಾರುತ ಬಂದರು
ವೀರ ಮನ್ನೆಯ ರಾಹುತರು |
ಕಾರಣಿಕದ ರಾಮ ಕರೆಯೆಂ[ದ] ಗಣತಿಗೆ
ಧೀರ ಮನ್ನೆಯರೆಲ್ಲ ಬನ್ನಿ || ೨೩ ||

ಶೃಂಗಾರವಾಗಿ ಸಂಗಡ ನಿಮ್ಮ ಮಂದಿಯ
ಶೃಂಗರಿಸಿಕೊಂಡು ಬನ್ನೆನಲು |
ನಿಲ್ಲದೆ ತಾವು ತಮ್ಮ ಮಂದಿ ಕೂಡಿಸಿಕೊಂಡು
ಉಲ್ಲಾಸದಲಿ ಬಂದರಾಗ || ೨೪ ||

ಬೂಟಕ ಬೊಮ್ಮನು ಬಂದು ಕೈಮುಗಿದನು
ಗಟ್ಯುಳ್ಳ ಮಂದಿ ನೂರಾರು |
ದಿಟ್ಟನಿವನು ಎಂದು ಕೊಟ್ಟ ರಾಮಯ್ಯನು
ಪಟುನೂಲು ಕೊರಳಪದಕವ || ೨೫ ||

ಮನ್ನಾಲ ಮಾಚನು ಬಂದು ಕೈಮುಗಿದನು
ಇನ್ನೂರು ಆಳು ತಾ ಸಹಿತ |
ಮನ್ನೆಯ ಇವ ಬಲ್ಲಿದನೆಂದು ರಾಮಯ್ಯ
ಹೊನ್ನ ಸರಪಳಿ ಕೊಟ್ಟನವಗೆ || ೨೬ ||

ಗಡಿಯಕೋಟೆಯ ದೇವ ಬಂದು ಕೈಮುಗಿದನು
ಒಡನೆ ನೂರಾಳು ತಾ ಸಹಿ |
ಪಡೆ ಮುರಿದರೆ ಹೊಕ್ಕು ಕಡಿವನು ಇವನೆಂದು
ಕಡುಕು ಕಂಠಮಾಲೆಯ ಕೊಟ್ಟ || ೨೭ ||

ಯನುಮಾಲ ಚಿತ್ತನು ಬಂದು ಕೈಮುಗಿದನು
ಅನುವಾದ ಬಂಟರೈವತ್ತು |
ಮೊನೆಗಾರ ಇವನೆಂದು ಮೆಚ್ಚಿನ ಮಾನ್ಯಗೆ
ಕನಕಮಣಿಯನಿತ್ತನವಗೆ || ೨೮ ||

ಮರುಳೆಯ ಪಾಪನು ಬಂದು ಕೈಮುಗಿದನು
ಅರುವತ್ತು ಬಿಲ್ಲಿನ ಮಂದಿ |
ಪರಬಲಾಂತಕನಿವ ಬಲ್ಲಿದನಹುದೆಂದು
ಸರಮುತ್ತು ಚವುಕಳಿ ಕೊಟ್ಟ || ೨೯ ||

ಎರಬೋತು ಕಾಮನು ಬಂದು ಕೈಮುಗಿದನು
ಬರುಚಿಯ ಮಂದಿ ನೂರಾಳು |
ಕರೆದು ರಾಮಯ್ಯನು ಅವನಿಗೆ ಕೊಟ್ಟನು
ಬಿರಿದುಬಾವುಲಿ ಸರಪಳಿಯ || ೩೦ ||

ತುಳುವರ ಹಿರಿಯ ಬಂದು ಕೈಮುಗಿದನು
ಒಳಕಾವಲ ಮಂದಿ ಇನ್ನೂರು |
ಹಳದಿ ಬಿರಿದು ಮುತ್ತಿನೊಂಟಿಯು ಕಡೆಯವ
ಬಳಸಿ ಕೊಟ್ಟನು ರಾಮಯ್ಯ || ೩೧ ||

ನೆಲಗತ್ತಿ ತಿಪ್ಪನು ಬಂದು ಕೈಮುಗಿದನು
ಹೊಣಕೆಯ ಮಂದಿ ಇನ್ನೂರು |
ಹಳದಿ ಬಿರಿದು ಮುತ್ತಿನೊಂಟಿಯು ಕಡೆಯವು
ಬಳಸಿ ಕೊಟ್ಟನು ರಾಮಯ್ಯ || ೩೨ ||

ಕೊಟಗರ ದೇವನು ಬಂದು ಕೈಮುಗಿದನು
ಮೀಟಾದ ಮುನ್ನೂರು ಹರಿಗೆ |
ಅಟಮಟಗೊಳಿಸುವ ತುರುಕರ ಇವನೆಂದು
ಕುಟುಕು ಮುರುಡಿಯ ಸರಪಳಿಯ || ೩೩ ||

ಒಕ್ಕಲಿಗರ ಮುದ್ದ ಬಂದು ಕೈಮುಗಿದನು
ಮುಕ್ಕಣ್ಣ ಬಲ್ಲೆವು ನೂರು |
ರಕ್ಕಸಘಾತ ತುರುಕರ ಮೇಲೆ ಇವನೆಂದು
ಹೊಕ್ಕುಳಗಂಟೆಯ ಕೊಟ್ಟ || ೩೪ ||

ಮಾದಿಗ ಹಂಪನು ಬಂದು ಕೈಮುಗಿದನು
ಅವಗೆ ಐದೂರು ಉಮ್ಮಳಿಯ || ೩೫ ||

ಅಸಗೋಡ ಬಸವನು ಬಂದು ಕೈಮುಗಿದನು
ಹೊಸಕಟ್ಟಿನ ಈಟಿ ಇನ್ನೂರು |
ದೆಸೆಗೆಡಿಸುವ ತುರುಕರನೆಂದು ರಾಮಯ್ಯ
ಬಸವಗೆ ಕೊಟ್ಟ ಜವಳಿಯನು || ೩೬ ||

ಅಕ್ಕಸಾಲೆರ ಚಿಕ್ಕ ಬಂದು ಕೈಮುಗಿದನು
ಉಕ್ಕುವ ಬಾಣ ನೂರಾರು || ೩೭ ||

ಮಲೆಯ ಕಾವಲ ಕಾಟಿನಾಯಕ ಕೈಮುಗಿಯಲು
ಹಳೆಯ ಮಂದಿಯು ಮುನ್ನೂರು |
ಇಳಿದಿಹ ದಂಡಿಗೆ ಇದಿರೇರಿ ನಡೆವನು ಜ
ಗಳಕ್ಕೆ ಕೊಟ್ಟ ಉಡುಗೊರೆಯ || ೩೮ ||

ಬಾಣದ ಬಸವನು ಬಂದು ಕೈಮುಗಿದನು
ಬಾಣದ ಮಂದಿ ನೂರಾರು |
ಚೂಣಿಕಾಳಗ ಹಿಡಿವನು ಎಂದು ರಾಮಯ್ಯ
ಜಾಣ ಕೊಟ್ಟನು ಹಿಡಿಹೊನ್ನ || ೩೯ ||

ದಳಧೂಳಿ ಮಾದನು ಬಂದು ಕೈಮುಗಿದನು
ಒಳಕಾವಲ ಮಂದಿ ನೂರು |
ಅಳುಕಿ ತುರುಕರ ತಲೆಯ ತರಿವನು ಇವನೆಂದು
ಬಳೆಯ ಕೊಟ್ಟನು ರಾಮನವಗೆ || ೪೦ ||

ಬುಕ್ಕನ ಪಾಲನು ಬಂದು ಕೈಮುಗಿಯಲು
ಮುಕ್ಕಣ್ಣ ಬರುಚಿ ಮುನ್ನೂರು |
ಕಕ್ಕಸಗಾರ ಮನ್ನೆಯನೆಂದು ಇವನಿಗೆ
ಲೆಕ್ಕವಿಲ್ಲದೆ ಕೊಟ್ಟ ಹೊನ್ನ || ೪೧ ||

ಗುತ್ತಿಯ ಕಾಚನು ಬಂದು ಕೈಮುಗಿದನು
ಕತ್ತಿಗಾರಿಕೆ ನೂರಾರು |
ಕತ್ತಲೊಳಗೆ ಕಗ್ಗೊಲೆ ಬಿದ್ದು ಕಡಿವನೆಂದು
ಮುತ್ತಿನಾಭರಣವ ಕೊಟ್ಟ || ೪೨ ||

ಗುಜ್ಜಲ ಓಬನು ಬಂದು ಕೈಮುಗಿಯಲು
ಗಾಜಿನ ಮಂದಿ ಮುನ್ನೂರು |
ಹೆಜ್ಜೆಹೆಜ್ಜೆಗೆ ಡೊಳ್ಳು ಢಂಮೆಂದರಿರಿವನು
ಮಝ ಬಾಪುರಿ ಕೊಟ್ಟ ರಾಮ || ೪೩ ||

ರಕ್ಕಸ ಮಾದನು ಬಂದು ಕೈಮುಗಿದನು
ಮುಕ್ಕಣ್ಣ ಭಲ್ಲೆ ಮುನ್ನೂರು |
ಪಚಾರಿಸಿ ಖಾನರನಿಟ್ಟು ಕೆಡಹುವನೆಂದು
ಪಚ್ಚೇದ ಕಡಗವ ಕೊಟ್ಟ || ೪೪ ||

ಕುಂಬಕೋಣೆಯ ವೀರ ಬಂದು ಕೈಮುಗಿದನು
ಕಂಬಿಮರ ಬಿಲ್ಲು ಮುನ್ನೂರು |
ಅಂಬಿಗೊಬ್ಬೊಬ್ಬರ ಕೆಡಹಿ ತೋರುವನೆಂದು
ತುಂಬಿಕೊಟ್ಟನು ಜಾಳಿಗ್ಹೊನ್ನ || ೪೫ ||

ಹಗ್ಲಾದ ಮಾದ ಬಂದು ಕೈಮುಗಿದನು
ಬಿಲ್ಲೊಂದು ನೂರು ಮನ್ನೆಯರು |
ಕದ್ದು ಕಗ್ಗೊಲೆಮಾಡಿ ಕುದುರೆ ತರುವನು
ಇವ ಹುಗ್ಗಿ ತುಪ್ಪಕೆ ಊರ ಕೊಟ್ಟ || ೪೬ ||

ನಲ್ಲೂರ ನಲ್ಲನು ಬಂದು ಕೈಮುಗಿದನು
ತಂದು ನೂರಾಳು ಮನ್ನೆಯರು |
ಹಿಂದು ಮುಂದಾದ ಖಾನರ ಕಡಿವನುಯೆಂದು
ಚಂದ್ರಗಾವಿಯ ಬಿರಿದ ಕೊಟ್ಟ || ೪೮ ||

ರಾಯದುರ್ಗದ ರಾಮ ಬಂದು ಕೈಮುಗಿದನು
ಕಾಲಸರದ ಮಂದಿ ನೂರು |
ಅವನಿಗೆ ಕೊಟ್ಟನು ಹೊನ್ನು ಜವಳಿಗಳ
ಉನ್ನತ ವಸ್ತ್ರ ಭೂಷಣವ || ೪೯ ||

ಬಿರಿದು ಬಾವುಲಿ ಕೊಟ್ಟ ಕಾಲಸರವ ಕೊಟ್ಟ
ಮೇಲಾದಾಭರಣವ ಕೊಟ್ಟ || ೫೦ ||

ಎಪ್ಪತ್ತು [ಎರಡು] ಮಾನ್ಯರಿಗೆಲ್ಲ ವೀಳ್ಯವ
ತಪ್ಪದೆ ಕೊಟ್ಟನು ರಾಮ |
ಒಪ್ಪಿ ತುರುಕ [ಗೆ]ಹೆಚ್ಚಾಳ ಕಟ್ಟುವದೆಂದು
ಒಪ್ಪದಿ ಪೇಳಿದ ರಾಮ || ೫೧ ||

ಕುದುರೆಯ ಪೌಜ ಬರಹೇಳಿರೊ ರಾಹುತರು
ಒದಗಿ ಬರಲು ಬೇಗದಲಿ |
ಮದಗಜ ಹಿಂಡು ರಾಹುತರ ಬರಹೇಳೆಂದು
ಚೆದುರ ರಾಮಯ್ಯ ಪೇಳಿದನು || ೫೨ ||

ಆರೆಯ ಚಾರಮರಾಯನ ಮಕ್ಕಳು
ಸ್ವಾರಿಯ ವಾಜಿ ಸಾವಿರವು ||
ದೂರಳ ದಂಡಿನ ದಾರಿಯ ಕಾಯ್ವಂತ
ಭಾರಿಯ ವಾಜಿ ಏಳ್ನೂರು || ೫೩ ||

ದೇವಿಸೆಟ್ಟಿಯ ಲಿಂಗ ಭಾವ ಸಂಗಮದೇವ
ಜೀವರತ್ನದ ಮಲ್ಲಿದೇವ |
ಆವಾಗ ರಾಮನ ಕಾದುಕೊಂಡಿರುವಂಥ
ಕಾವಲ ವಾಜಿ ಸಾವಿರವು || ೫೪ ||

ಹಳಬಿಕೆ ತುರುಕರು ಹಂಡೆಯ ರಾಹುತರು
ಒಳಹೊಕ್ಕು ನೇಮಿ ಬರುವಾಗ |
ತಳುಹದೆ ಹೆಗಲೇರಿ ಇರಿದಿರಿದು ಕಡಿವಂಥ
ಒಳ ಲಾಯ ಕುದುರೆ ಸಾವಿರವು || ೫೫ ||

ಅಣ್ಣ ಕಾಟಣ್ಣನ ಮುಂದೆ ಕಾದುವಂಥ
ಬಣ್ಣಕೊಂದ್ವಾಜಿ ಸಾವಿರವು |
ಮುಕ್ಕಣ್ಣ ನೇಜ್ಯದ ವಾಜಿ ಒಂದೈನೂರು
ಹೊಕ್ಕುಬಂದವು ರಾಮನೆಡೆಗೆ || ೫೬ ||

ಕುದುರೆಯ ಪೌಜ ನೋಡಿದ ರಾಮನಾಥನು
ಸದರಿಗೆ ಕರೆಸಿ ರಾಹುತರ |
ಮುದದಿಂದಲವರ ಬಾಟಣೆಯ ಲೆಕ್ಕವ ಮಾಡಿ
ಚದುರ ಉಡುಗೊರೆ ವೀಳ್ಯಕೊಟ್ಟ || ೫೭ ||

ಲಕ್ಷದ ಮೇಲೆ ತೊಂಬತ್ತಾರು ಸಾವಿರ
ಲೆಕ್ಕವಾಯಿತು ಬಾಟಣೆಯು |
ಬೊಕ್ಕಸ ತೆಗೆಸಿ ಹಣವ ಕೊಟ್ಟನವರಿಗೆ
ಲಕ್ಷಾಧಿಪತಿ ರಾಮನಾಥ || ೫೮ ||

ಕರಣಿಕ ಲಿಂಗನ ಕರೆಸಿ ಕೇಳಿದನಾಗ
ಬರೆದಿರುವ ಲೆಕ್ಕವೇನಾಯ್ತು |
ಇರುವಂಥ ಲೆಕ್ಕವ ಬರೆದು ಪೇಳೆನಗೆಂದು
ಧುರಧೀರ ರಾಮ ಕೇಳಿದನು || ೫೯ ||

ಹತ್ತುಸಾವಿರ ವಾಜಿ ಮೂವತ್ತು ಸಾವಿರ ಬಲ
ಮತ್ತೆ ಆಯಿತು ಧುನ್ನೆದಾರ |
ಚಿತ್ತೈಸು ಎಂದು ಕರಣಿಕ ಮಂತ್ರಿ ಆ ಕ್ಷಣ
ಒತ್ತಿ ಮಾಡಿದನು ಬಿನ್ನಪವ || ೬೦ ||

ಸಾಲದು ಪೌಜಿನ್ನು ಹೇಳುವ ಮಾತೇನು
ನಾಳೆ ಸುರಿತಾಳ ಬರುತಾನೆ |
ಕಾಳಗದೊಳು ಅವನ ಮಡುಹದಿದ್ದರೆ ನಮಗೆ
ದಾಳಿ ತಪ್ಪುವುದೆ ಬೈಚಪ್ಪ || ೬೧ ||

ಲಕ್ಷ ಮಂದಿಯು ವಾಜಿ ಮೂವತ್ತು ಸಾವಿರವ
ಸುಕ್ಷೇಮದಲಿ ನೀನು ಕಟ್ಟೊ |
ಶಿಕ್ಷೆ ನೇಮಿಯ ಕೊಲ್ಲದಿರ್ದಡೆ ನಮಗೆಯು
ಅಕ್ಷಯವಿಲ್ಲೆಂದನಾಗ || ೬೨ ||

ಕರೆದು ರಾಹುತರ ಕರ್ಪೂರ ವೀಳ್ಯವ ಕೊಟ್ಟು
ಉಡುಗೊರೆಗಳನು ಮಾಡಿದನು |
ಮರೆಯಬೇಡಿರಿ ಹೆಚ್ಚು ಮಂದಿ ಕುದುರೆಯನು
ಕರೆಸೆಂದು ರಾಮ ಹೇಳಿದನು || ೬೩ ||

ಮನ್ನೆಯರ ಕರೆದನು ಮನ್ನಣೆಯಲಿ ರಾಮ
ಇನ್ನು ಹೆಚ್ಚಾಳ ಕಟ್ಟೆಂದ |
ಮನ್ನಿಸಿ ಅವರನು ಮನೆಗೆ ಅಪ್ಪಣೆ ಕೊಟ್ಟು
ಆಗ ಲಿಂಗನ ಕರೆಸಿದನು || ೬೪ ||

ಬೈಗಿನ ಸರದಿಗೆ ಬಂದಾನು ರಾಮಯ್ಯ
ಮೈಗಾವಲು ಮಂದಿ ಸಹಿತ |
ಬೇಗ ಬೈಚಪ್ಪನ ಕರೆತರ ಹೇಳಿದ
ಆಗ ಲಿಂಗನ ಕರೆಸಿದನು || ೬೫ ||

ಬಂದು ಬೈಚಪ್ಪನು ವಂದನೆಯನು ಮಾಡಿ
ನಿಂದು ಕರಂಗಳ ಮುಗಿದು
ತಂದೆ ಕಂಪಿಲರಾಯ ಹೊರಟು ಬಂದನು ಬೇಗ
ಹೊಂದಲೈದರು ಎಲ್ಲ ಆಗ || ೬೬ ||

ಅಪ್ಪನ ಪಾದಕ್ಕೆ ಬಿದ್ದನು ರಾಮಯ್ಯ
ಒಪ್ಪದಿ ಮಗನ ಎತ್ತಿದನು |
ಮುಪ್ಪಿನವರು ನಾವು ರಾಜ್ಯದ ಭಾರವ
ಒಪ್ಪಿಸಿದೆನು ರಾಮ ನಿನಗೆ || ೬೭ ||

ಪಟ್ಟಾಭಿಷೇಕ ರಾಮಯ್ಯಗಾಯಿತು ಎಂದು
ಪಟ್ಟಣದ ಪ್ರಜೆಗಳು ತಾವು |
ಶೆಟ್ಟಿ ಮಾನ್ಯಯರುಗಳು ಗೌಡ ಒಕ್ಕಲುಗಳು
ಪಟ್ಟದುಡುಗೊರೆ ತಂದರಾಗ || ೬೮ ||

ಬನ್ನಿ ಕುಳ್ಳಿರಿ ಎಂದು ಮನ್ನಿಸಿದ ರಾಮ ಹಾ
ಗೆನ್ನಲು ಪ್ರಜೆಗಳು ಬಂದು |
ಹೊನ್ನು ಕಾಣಿಕೆ ಉಡುಗೊರೆ ಕೊಟ್ಟು ರಾಮಗೆ
ಮನ್ನಣೆಯಲಿ ಕುಳಿತರಾಗ || ೬೯ ||

ಬಂದ ಪ್ರಜೆಗಳಿಗೆಲ್ಲ ವಂದಿಸಿ ರಾಮಯ್ಯ ನಿ
ಮ್ಮಿಂದ ಎಮ್ಮಯ ದೊರೆತನವು |
ಮುಂದೆ ನಿಮ್ಮ ಕಾದು ನಡೆಸುವೆ ನಾನೆಂದು
ಗಂಧ ವೀಳ್ಯವ ಕೊಡಿಸಿದನು || ೭೦ ||

ಕರೆದನು ತನ್ನಯ ಮಂತ್ರಿ ಬೈಚಪ್ಪನ
ಬರೆಸೊ ವಾಲೆಗಳ ನೀನೆಂದ |
ಬರಮಾಡೊ ಸುತ್ತಣ ರಾಜ್ಯದ ಗೌಡರ
ಕರೆಸಯ್ಯ ನಾಡಿಗರನೆಂದ || ೭೧ ||

ದೊರೆ ರಾಮ ಹೇಳಿದ ವಾಕ್ಯವ ಕೇಳುತ
ಬರೆಸಿದ ವಾಲೆ ಉತ್ರಗಳ |
ಬರಹೇಳಿ ಸುತ್ತಣ ಸೀಮೆ ಗೌಡರನೆಲ್ಲ
ಇರದೆ ಕರೆಸಿದನು ಮಂತ್ರೀಶ || ೭೨ ||

ಹುಕ್ಕೇರಿ ಸೀಮೆಯ ಒಕ್ಕಲು ಗೌಡರು
ಲೆಕ್ಕದ ಕುಲರಣಿಕರು |
ಒಕ್ಕುಳ ಹೊನ್ನುಡುಗೊರೆ ಹಣ್ಣು ಫಲ ತಂ
ದಿಕ್ಕಿ ರಾಮಗೆ ಕೈಮುಗಿಯೆ || ೭೩ ||

ಇಕ್ಕೇರಿ ಸೀಮೆಯ ನಾಡಿಗ ಗೌಡರು ಬಂದು
ಲಕ್ಷ ಹನ್ನೊಂದು ಸಾವಿರವು || ೭೪ ||

ಕಲ್ಯಾಣ ಕಲುಬುರುಗಿ ಸೀಮೆಯ ಗೌಡರು
ಎಲ್ಲಾ ಸೀಮೆಯ ನಾಡಿಗರು |
ಉಲ್ಲಾಸದಿಂದ ಐದು ಲಕ್ಷ ಹೊನ್ನನು
ಭೊವಲ್ಲಭ ರಾಮಯ್ಯನೆಡೆಗೆ || ೭೫ ||

ಸಗರದ ಸೀಮೆಯ ಶೆಟ್ಟಿಯು ಪ್ರಜೆಗಳು
ಸೊಗಸಿಂದ ಗೌಡ ಕರಣಿಕರು || ೭೬ ||

ತಂದರು ಐದು ಲಕ್ಷ ಹೊನ್ನನುಡುಗೊರೆಯ
ಬಂದರು ರಾಮಯ್ಯನೆಡೆಗೆ |
ಮುಂದಿಟ್ಟು ಕೈಮುಗಿದು ರಾಮಯ್ಯನಾಥಗೆ
ಮುಂದೆಮ್ಮ ಸಲಹಬೇಕೆಂದು || ೭೭ ||

ತೊರಗಲ್ಲು ಬಾದಾವಿ ಸೀಮೆಯ ಗೌಡರು
ಮರಿ[ಗೌಡ] ಮನ್ನಿನ ಮುದಿಗೌಡ |
ಹರುಷದಿ ಎರಡು ಸಾವಿರ ಹೊನ್ನು ಉಡುಗೊರೆ
ಬಿರುದಾಂಕ ರಾಮನ ಮುಂದೆ || ೭೮ ||

ಸೀರೆದ ಸೀಮೆಯ ಗೌಡರು ಬಂದರು
ಸಾರನಗೌಡ ನಾಗಗೌಡ |
ಆರು ಲಕ್ಷ ಹೊನ್ನ ಉಡುಗೊರೆ ಫಲಗಳ
ದೊರೆಗಳ ಪಟ್ಟಗಾಣಿಕೆಯು || ೭೯ ||

ಬಸವಪಟ್ಣದ ಸೀಮೆ ಗೌಡರು ಬಂದರು
ಹಸುಮಗ ಮುದ್ದನಗೌಡ |
ಹೊಸಗಾಣಿಕೆ ಐವತ್ತು ಸಾವಿರ ಹೊನ್ನು
ಅಸಮ ಬಲಗೆ ಒಪ್ಪಿಸಿದರು || ೮೦ ||

ಆದವನ್ನಿಯ ಸೀಮೆ ರಡ್ಡಿ ಕರಣಿಕರು
ಒದಗಿ ಬಂದರು ಕುಮ್ಮಟಕೆ |
ಹದಿನೆಂಟು ಸಾವಿರ ಹೊನ್ನ ಮೋಹರುಗಳ
ಮುದದಿ ಮುಂದಿಟ್ಟು ಉಡುಗೊರೆಯ || ೮೧ ||

ಉಮ್ಮಳಿದಾರರು ಪುರವರ್ಗದವರೆಲ್ಲ
ಗಮ್ಮನೆ ತಾವೆಲ್ಲ ಕೂಡಿ |
ಒಮ್ಮನ ಹೊನ್ನು ಉಡುಗೊರೆಗಳ ತಂದರು
ಇಮ್ಮಡಿ ರಾಮಗೆ ಕೊಟ್ಟು || ೮೨ ||

ಬಂದವರನ್ನೆಲ್ಲ ಮನ್ನಿಸಿ ರಾಮಯ್ಯ
ಬಂದವರನೆಲ್ಲ ಕಳುಹಿದನು |
ಚೆಂದದಿ ಉಡುಗೊರೆಗಳ ಕೊಟ್ಟು ರಾಮಯ್ಯ
ನಂದು ಕಳುಹಿದನವರುಗಳ || ೮೩ ||

ತಂದೆಯ ಪಾದಕ್ಕೆ ವಂದಿಸಿ ರಾಮಯ್ಯ
ಬಂದನು ತನ್ನರಮನೆಗೆ |
ಬಂದಂಥ ಹೊನ್ನನು ಮುಂದಿಟ್ಟು ರಾಮಯ್ಯ
ಮಂದಿರಗಳನೊಳಪೊಕ್ಕ || ೮೪ ||

ಗುತ್ತಿಯನಾಳ್ವ ಜಗದಪ್ಪರಾಯನು ಕೇಳಿ
ಉತ್ರ ಉಡುಗೊರೆಯ ಕಳುಹಿದನು |
ಇತ್ತ ಚಾರರು ಓಡಿಬಂದು ರಾಮಯ್ಯಗೆ
ಮತ್ತೆ ಸುದ್ದಿಯನು ಪೇಳಿದರು || ೮೫ ||

ಕರೆಸಿದ ಬಂದ ಹೇಜಿಬರ ರಾಮಯ್ಯ
ಹರುಷದಿ ಕೇಳಿದನವರ |
ದೊರೆ ಜಗದಪ್ಪ ಕ್ಷೇಮವೆ ನಮ್ಮ ಮಾವಾಜಿ
ಇರುವನೆ ಸಂತೋಷದಲ್ಲಿ || ೮೬ ||

ಬಂದ ಕಾರ್ಯಗಳೇನು ಇಂದ್ಯಾಕೆ ಕಳುಹಿದ
ನೆಂದು ರಾಮಯ್ಯ ಬೆಸಗೊಳಸಲು |
[ಹಿಂ]ದುವ ರಾಯ ನಿಮ್ಮ ಪಟ್ಟವಾಯಿತೆಂಬ ಆ
ನಂದವ ಕೇಳಿ ಕಳುಹಿದನು || ೮೭ ||

ಪಟ್ಟದ ಉಡುಗೊರೆ ಪೆಟ್ಟಿಗೆ ಬಂಗಾರ
ಸೃಷ್ಠೀಶ ಕಂಪಿಲದೊರೆಗೆ |
ಪಟ್ಟಪಟ್ಟಾವಳಿ ಮುತ್ತಿನಾಭರವಣ
ಕೊಟ್ಟು ಕಳುಹಿದನು ರಾಮಯ್ಯ || ೮೮ ||

ಮಗಳು ರಾಮಕ್ಕಗೆ ಮುತ್ತಿನಾಭರಣವು
ಮಿಗಿಲಾದ ಜೀಬಿ ನಾಣ್ಯಗಳು |
ಬಗೆಮಾಡಿ ಐದೂರು ಉಮ್ಮಳಿಯನು ಕೊಟ್ಟ
ಜಗದಪ್ಪರಾಯ ರಾಮಯಗೆ || ೮೯ ||

ಬಂದವರ ಮನ್ನಿಸಿ ಒಂದಡುಗೊರೆ ಕೊಟ್ಟು
ಒಂದೊಂದು ಸಾವಿರ ಹೊನ್ನ |
ಅಂದು ಕೊಟ್ಟರು ರಾಮಗೆ ಉಡುಗೊರೆ ಕೊಟ್ಟು
ಬಂದವರ ಬೇಗ ಕಳುಹಿದನು || ೯೦ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೆ ಮೇಲ್ಗತೆಯ |
ವಿದಿತ ಈಶ್ವರನ ದರುಶನ ಮಾಡುವ
ಸಂಧಿ ಪದ ಮುಂದೆ ಸಂಪೂರ್ಣ || ೯೧ ||

ಅಂತು ಸಂಧಿ ೨೨ಕ್ಕಂ ಪದನು ೨೪೦೮ಕ್ಕಂ ಮಂಗಳ ಮಹಾಶ್ರೀ