ಶ್ರೀ ಗಿರಿಜಾ[ಸ್ಯಾಂಬುಜ ದಿನ] ನಾಯಕ
ಭೋಗಿ ಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ಅಘಹರ ಭವಹರ ಮಿಗೆ ಮೂರು ಕಣ್ಣುಳ್ಳ
ಜಗದೀಶ್ವರ ರುದ್ರರೂಪ |
ಜಗಕೆಲ್ಲ ಕರ್ತೃ ಶಂಭುವೆ ತ್ರಾಹಿ ಗಿರಿಜೇಶ
ಸೊಗಸಿಂದ ಕೊಡು ಮತಿಗಳನು || ೨ ||

ಕರೆಸಿ[ದಳ್] ಮಂತ್ರಿಯ ಹರಿಯಲದೇವಿಯು
ದೊರೆ ರಾಮ ಮಾಡಿದ ಕಥೆಯ |
ಬರೆದೋದಿ ಕೇಳಿದರೆ ತೀರದೊ ಮಂತ್ರೀಶ
ಸರಸವೆ ಸುರಿತಾಳನೊಡನೆ || ೩ ||

ಇಂತಪ್ಪ ಬುದ್ಧಿಯು ಹುಟ್ಟಿತೆ ರಾಮಗೆ
ಚಿಂತಾಯಕ ತಾನೆ ಬಲ್ಲ |
ಪಂಥವ ಗೆಲ್ಲದೆ ಬಿಡನು ರಾಮಯ್ಯನು
ಚಿಂತೆ ಯಾತಕೆ ತಾಯೆ ನಮಗೆ || ೪ ||

ಅಪ್ಪಾಜಿ ರಾಮಯ್ಯ ಮೆಟ್ಟಿದ ಮೇಲಿನ್ನು
ಸೊಪ್ಪುಂಟು ಕಸವ ತೆಗೆವರೆ |
ಒಪ್ಪವ ಮಾಡಿ ಪೇಳುವೆ ಮಂತ್ರಿ ಬೈಚಪ್ಪ
ಮುಪ್ಪಾಯಿತು ಕುಮ್ಮಟವು || ೫ ||

ಮತ್ತೆ ರಾಮನ ಮೇಲೆ ಚಿಂತೆಗಳ್ಯಾತಕೆ
ಕರ್ತೃ ಹರನು ಶಿವ ಬಲ್ಲ |
ಅ[ರ್ತಿಯೆ] ನೋಡಿ ಪುಟ್ಟಿಸಿದ ಜಗದೊಳು
ಮರ್ತ್ಯದ ದೊರೆಯೆ ಕೇಳಮ್ಮ || ೬ ||

ನಾಳೆ ಸುರಿತಾಳನ ದಂಡು ಬಂದರೆ ಮಂತ್ರಿ
ಕೋಳುಹೋಗದೆ ಕುಮ್ಮಟವು |
ಹೇಳುವ ಮಾತಲ್ಲ ಕೇಳಮ್ಮ ಜಗದೊಳು
ಏಳುಕೋಟಿಗೆ ದೊರೆಯವನು || ೭ ||

ಎಲ್ಲರಂತಲ್ಲವೊ ಡಿಳ್ಳಿಯ ಸುರಿತಾಳ
ಎಲ್ಲ ರಾಜ್ಯಕೆ ಪಾಚ್ಛವ |
ಮಲ್ಲೇಶ್ವರನ ದಯವುಂಟು ರಾಮಯ್ಯಗೆ
ಬಲ್ಲಿದನವನು ಅಂಜುವನೆ || ೮ ||

ಯಾಕಿಷ್ಟು ಮಾಡಿದನರಿಯನೆ ಹರಿಯಮ್ಮ
ನಾಕಜರುಂಟು ಅವನಲ್ಲಿ |
ಲೋಕದ ದೊರೆಯಲ್ಲ ಜನಿಸಿದ ಧರಣಿಗೆ
ಶ್ರೀ ಕೃಷ್ಣ ನಿನ್ನ ಗರ್ಭದೊಳು || ೯ ||

ಇವರೀರ್ವರು ಸಂಹರುಷದೊಳಿರೆ
ಭುವನೇಶ ಕಂಪಿಲನ[ನ]ರಸಿ |
ಹವಣಿಸಿ ಗುತ್ತಿಯ ಜಗದಪ್ಪನವರು ಬಂದು
ನವಲಕ್ಷ ಹೊನ್ನ ಬೇಡಿದರು || ೧೦ ||

ಕಪ್ಪದ ಹೊನ್ನ ತಾರೆನ್ನುತ ಕಂಪಿಲನ
ಬಪ್ಪ ಬೀದಿಯಲಿ ನಿಲ್ಲಿಸಲು |
ಕಪ್ಪುಗೊರಳನ ವರದಲ್ಲಿ ತನ್ನೊಡ [ನೋಡ]
[ನಿ]ಪ್ಪ ಬಾಲಕರೈವರೊಡನೆ || ೧೧ ||

ಬರುತ ಬರತಲಿ ಕಂಡನು ರಾಮನಾಥನು
ದೊರೆಯು ಕಂಪಿಲನ ತರುಬಿದುದ |
ನೆರೆದು ಕೇಳಿದನು ಇವರ್ಯಾಕೆ ಬೀದಿಯೊಳಿನ್ನು
ತರುಬಿಕೊಂಡಿಹರಿವರ್ಯಾರು || ೧೨ ||

ಜಗದಪ್ಪ ಗುತ್ತಿಯ ರಾಯನ ಚ
ರರ್ಗಳು ಕಪ್ಪವ ಕೊಡಹೇಳಿ ಕಳುಹೆ |
[ತ]ಗಹಿಂದ ತಮ್ಮ ಪೊನ್ನುಗಳಿಗೆ ನಿಲಿಸಿದರು
ಅಘಹರ ಚೆನ್ನಿಗರಾಮ || ೧೩ ||

ನೀನು ಬಾಹನಕ ನಾನಿಲ್ಲಿಹೆ ಪೋ[ಗೆನೆ]
ಭಾನುಸಖನ ಮುಖದವ[ನು] |
ಜ್ಞಾನಿ ರಾಮನ ನಿಲಿಸಿದನು ಕಂಪಿಲರಾಯ
ತಾನರಮನೆಗೆ ಐತಂದ || ೧೪ ||

ಅವರಿಗವನನಿತ್ತು ಭವನಕ್ಕೆ ನಡೆತಂದು
ನವಯೌವನೆಯಳ ಕರೆ[ಯೆ] |
ತವಕದೊಳುದಕವ ಅರಸಗೆ ತಂದಿಕ್ಕೆ
ಭುವನೇಶ ತಾನು ಕೈಕೊಂಡ || ೧೫ ||

ಕೈಕಾಲು ಮುಖದೊಳೆದು ಕಂಪಿಲರಾಯನು
ಗಮ್ಮನೆ ಪೊಕ್ಕ ತಾ ಗೃಹವ |
[ಕೈ]ಯಿಟ್ಟು ಕುಳಿತು ಊಟವ ಮಾಡಲಂಗನೆ
ಕರದಲ್ಲಿ ತಾಂಬೂಲವಿಡಿದು || ೧೬ ||

ಅತ್ತ ಕಂಪಿಲ ತನ್ನ ಅರಮನೆ ಹೆಂಗಳ
ಅರ್ತಿಯಿಂ[ದಿರೆ] ಇತ್ತ ರಾಮ |
ಗುತ್ತಿಯ ಸ್ಥಾನಪತಿಗಳ ಪ್ರಧಾನರ ಹಿಡಿ
ದತ್ತ ನೂಕಿಸಿದ ಪೋಗೆನುತ || ೧೭ ||

ಹೊತ್ತ ಹಣವನು ಕೊಡದೆ ರಾಮನಾಥನು
ಕತ್ತನು ಹಿಡಿದು ನೂಕಿಸಿದ |
ಗುತ್ತಿಯ ಜಗದಪ್ಪರಾಯ ಕೋಪವ ತಾಳಿ
ಮತ್ತೆ ಮನ್ನೆಯರನು ಕಳುಹಿ || ೧೮ ||

ಇತ್ತ ವಾಲಗವಿತ್ತು ಜಗದಪ್ಪರಾಯನು
ಮೊತ್ತದ ಮಂತ್ರಿ ಮನ್ನೆಯರು |
ಸುತ್ತಣ ರಾಯರಿಗೋಲೆಯ ಬರೆಸಿದ
ಮತ್ತೆ ಕಳುಹಿದನು ಚರರುಗಳ || ೧೯ ||

ಚರರೋಡೆ ದಿಕ್ಕುದಿಕ್ಕಿನ ರಾಯರಿಗೆಲ್ಲ
ಇರದೆ ವಾಲೆಗಳ ಕಳುಹಿದನು |
ಕರದೊಳು ವಾಲೆಯ ಪಿಡಿದೋ[ದೆ] ಕರಣಿಕರ್
[ಉರು]ತರ ಮಾತು ನೀತಿಗಳ || ೨೦ ||

ಶ್ರೀಮನ್ಮಹಾರಾಯ ಮಂಡಲೇಶ್ವರ ಭೂಪ
ಭೀಮ ವಿಕ್ರಮನ ಪ್ರತಾಪ |
ರಾಮಾಭಿರಾಜಿತ ಜಗದಪ್ಪರಾಯನು
ಪ್ರೇಮದಿ ಕಳುಹಿದ ಕಾರ್ಯ || ೨೧ ||

ಲಾಳ ಕೊಂಕಣ ಮಲೆಯಾಳ ಸಿಂಗ ಬಂಗಾರ
ದಾಳು ನೆರೆದು [ಏಳಿ] ಭೂಪ |
ಕಾಳೆಯ ಹಿಡಿಸಿ ಭೂಪಾಲರೇಳಿರಿ ದೊಡ್ಡ
ದಾಳಿಯು ನಡೆವ ಸಂಭ್ರಮವು || ೨೨ ||

ವೀರ ಕನ್ನೋಜಿ ಕರಾಳ ಮನ್ನೆಯ ಸಿಂಧು ಮ
ಹಾರಾಷ್ಟ್ರ ಬಲವೆಲ್ಲ ಸಹಿತ |
ದೂರದೈವತ್ತಾರುದೇಶದ ಅರಸುಗಳು
ಸಂಗ್ರಾಮಕ್ಕಾಗಿ ನಡೆದರು || ೨೩ ||

ಕೊಟ್ಟದ ಬೇಡರು ಹಟ್ಟಿಕಾರರು ಸಹ
ನೆಟ್ಟನೆ ಏಳು ಸಾವಿರವು |
ಬಿಟ್ಟರು ಪಾಳ್ಯೆಯ ಗುತ್ತಿಯ ಜಗದಪ್ಪ
ಸೃಷ್ಟಿಪ ರಾಯನ ಮುಂದೆ || ೨೪ ||

ಸುತ್ತಣ ಮನೆಯರ ಕೂಟವು ನೆರೆದಿದೆ
ಗುತ್ತಿಯ ಜಗದಪ್ಪನೊಡನೆ |
ಎತ್ತಿ ಸಾರುವ ಕಹಳೆ ಭೇರಿ ಮೃದಂಗವು
ಮೊತ್ತದ ಧ್ವನಿಗೂಡಿ ನಡೆಯೆ || ೨೫ ||

ವಾರುಧಿಯಂತೆ ಕೂಡಿತು ಒಂದು ಲಕ್ಷವು
ವಾರುವನಾರು ಸಾವಿರವು |
ಧೀರ ಮನ್ನೆಯರೇಳು ಲಕ್ಷವು ಸಹವಾಗಿ
ಧೀರ ನಡೆದನು ಕುಮ್ಮಟಕೆ || ೨೬ ||

ದಂಡೆತ್ತಿ ನಡೆದರು ಮಂಡಲಿಕರು ಕೂಡಿ
ಡಂಡಾಮ ಡಂಮೆಂದು ನಡೆಯೆ |
ದಿಂಡ ಕಂಪಿಲನು ಸೆಣಸಿ ತೋರಿದ ತನ್ನ
ಗಂಡಾಳುತನದ ರೀತಿಯನು || ೨೭ ||

ಬೇಡ ಸಾರಿದೆನು ಕಪ್ಪವ ಕೊಡು ಕಂಪಿಲ
ರೂಢಿಗೆ ಹೊಸತು ಮಾತು [ದೆ]ನು |
ಮಾಡದ ಮಾಟವ ಮಾಡಿ ಕೊಲ್ಲುವೆನೆಂದು
ನಾಡೊಡೆಯನು ಮಾತಾಡಿದನು || ೨೮ ||

ಆಡಲ್ಯಾತಕೆ ಕಂಪಿಲನಿನ್ನು ಬಿಡುವೆನೆ
ದಾಳಿಯ[ನಿ]ಡುವೆ ಕುಮ್ಮಟಕೆ |
ರೂಢೀಶ ಜಗದಪ್ಪರಾಯ ರಾಜ್ಯವ ಕೊಂಡು
ಹೂಡಿದ ಕದನಕಾಯುಧವ || ೨೯ ||

ಬಂದು ಬಿಟ್ಟನು ಕುಮ್ಮಟಕ್ಕೆ ಉರವಣಿಯಿಂದ
ಮಂದಿ ಮಾರ್ಬಲವೆಲ್ಲ ಸಹಿತ |
ನೊಂದನೂರೊಳಗೆ ಕಂಪಿಲನು ಠಾಣ್ಯ[ವ] [ಮುತ್ತಿ]
ಬಂದು ಹಿಡಿದರು ಕಾಳಗವ || ೩೦ ||

ಊರ ಹತ್ತಿರಕ್ಹೋಗಿ ಸಾರಿ ಹುಯ್ಯಲ ತೆಗೆದು
ಆರೇಳು ಸಾವಿರ ಬಿಲ್ಲು |
ಭೂರಿ ಜಗಳದೊಳು ಏರಿ ತಾವ್ಕಡಿವುತ
ತೂರಿದ ಶಿರ ಲೆಕ್ಕವಿಲ್ಲ || ೩೧ ||

ಒಂದೆಸೆ ಕಾಲಾಳು ಒಂದೆಸೆ ತುರಗವು
ಒಂದೆಸೆಯಲಿ [ಆ]ನೆ ಪಡೆಯು |
ಒಂದೆಸೆಯಲಿ ಸರ್ವ ದಂಡೇರಿ ಕಡಿಯಲು
ನೊಂದರು ಕಂಪಿಲನವರು || ೩೨ ||

ನೊಂದ ದಂಡ ಸಂತೈಸುತ ರಾಮಯ್ಯ
ಬಂದು ಹಿಡಿದನು ಕಾಳಗವ |
ಸಂದೇಹವ್ಯಾತಕೆ ಪರಬಲದೊಳು ರಾಮ
ಕೊಂದುಹಾಕೊಡನೆ ತಾನಿರಿದ || ೩೩ ||

ಪರಬಲಮಸ್ತಕಶೂಲನೆಂದೆನಿಸುವ
ಬಿರಿದನು ಹೊಗಳಿಸಿ ರಾಮ |
ಧರೆಯ ರಾಯರ ಗಂಡನೆಂಬ ಕಡೆಯವನಿಟ್ಟು
ಧುರಧೀರ ನಡೆದನರ್ತಿಯಲಿ || ೩೪ ||

ಸಾರಿ ಬಿರಿದನೆಲ್ಲ ಮಾರಿ ಹೆಗ್ಗಾಳೆಯು
ಚೀರುವ ಚಿನ್ನಗಾಳೆಗಳು |
ಧೀರ ಕೊಮಾರ ರಾಮಯ್ಯ ಮುಂಗಾಳಗಕೆ
ಭೋರನೆ ತನ್ನೈವರೊಡನೆ || ೩೫ ||

ಗುತ್ತಿಯನಾಳ್ವ ಜಗದಪ್ಪರಾಯನ ಗಂಡ
ಸುತ್ತಣ ರಾಯರ ಮಿಂಡ |
ಉತ್ತರಿಗೆಯ[ನು]ಟ್ಟು ನಡೆದನು ರಾಮಯ್ಯ
ಅರ್ತಿಯಿಂದಲಿ ಮುಂಗಾಳಗಕೆ || ೩೬ ||

ವಾರುವನೇರಿ ದುವ್ವಾಳಿಸಿ ರಾಮಯ್ಯ
ಸಾರ ಕನ್ನೋಜಿ ನಾಯಕರು |
ಭೂರಿ ದಳವ ಕೂಡಿಕೊಂಡವರ ಶಿರಗಳ
ಹಾರಿಸಿದನು ಯಮಪುರಿಗೆ || ೩೭ ||

ಮುಂದಣ ತಲೆಯನು ಮನ್ನೂಲ ಮಾಚನು
ತಂದನು ರಾಮಯ್ಯನೆಡೆಗೆ |
ವಂದಿಸಿ ಕರಗಳ ಮುಗಿದು ಬೂಟಲ ಬೊಮ್ಮ

ಮುಂದಕ್ಕೆ ನಡೆಯಬೇಕೆಂದ || ೩೮ ||

ಮನ್ನಲ ಚಿನಮಾದ ವಂದಿಸಿ ರಾಮಗೆ
ಕನ್ನೆ ಹುಯ್ಯಲರಸ ನೀ ನೋಡು |
ಮುನ್ನೂರು ಮೊನೆ ಈಟಿ ಹೊಕ್ಕಿರಿದನು ಅವ
ಹನ್ನೊಂದು ಸಾವಿರ ಪೌಜ || ೩೯ ||

ಬಕ್ಕನಪಾಲನು ಹೊಕ್ಕನು ರಣದೊಳು
ಒಕ್ಕಲಿಕ್ಕುವ ಅರಿಬಲವ |
ಮಿಕ್ಕು ಬಂದವರನು ಮುದುಗೊಂಡ್ಲ ಮೂಗನು
ಕುಕ್ಕೂತ ಮುನ್ನೂರು ಈಟಿ || ೪೦ ||

ಕನಕ ತಪ್ಪಟೆಯನು ಹೊಯ್ಸೂತ ಬಂದನು
ಚಿನುಕ ರಾಹುತನು ಮಲ್ಲಣ್ಣ |
ಅನುವಾದವೈವತ್ತು ರಾಜಯೊಳ್ ಕೈರತ್ತು
ಅನುವಾದವು ರಾಮನ ಮುಂದೆ || ೪೧ ||

ಮದಗಜ ಹಿಂಡು ಮುತ್ತಲು ರಾಮಯ್ಯನು
ಕುದುರೆಯ ಹಾರಿಸಿ ಕಡಿಯೆ |
ಒದಗಿತು ಮೂರು ಸಾವಿರ ಬಿಲ್ಲು ಅಂಬಿನ
ಹೊದೆಗಳು ತೀರಿದವಲ್ಲಿ || ೪೨ ||

ಸ್ವಾನೆಯ ಮಳೆಯಂತೆ ಸುರಿದವಂಬಿನ ಮಳೆ
ಆನೆಯ ಹಿಂಡಿನ ಮೇಲೆ |
ಮೌನದಿ ಮುದಿಲನ್ನಕ ಹೊಕ್ಕಿರಿದನು
ಆನೆಯ ಹಿಡಿದ ಕೈಸೆರೆಯ || ೪೩ ||

ಕಾಮಗೇತಿಯ ತಿಮ್ಮನ ಮಂದಿ ಸಹವಾಗಿ
ಆನೆಯ ಹಿಂಡಿನ ಮೇಲೆ |
ಬೋನಗುರಿಯ ಹಿಡಿದು ತಂದಂತೆ ಹತ್ತೆಂಟು
ಜ್ಞಾನಿ ರಾಮಯ್ಯಗೆ ಒಪ್ಪೊ || ೪೪ ||

ಕೊಟ್ಟದ ಬೇಡರು ಬೆಟ್ಟದ ಸಿಂಹರು
ಕಟ್ಟಿನ ಬಿಲ್ಲು ಮುನ್ನೂರು |
ಪಟ್ಟೆದ ಮಂದಿ ಮರುಳೆ ಪಾಪನವರಿನ್ನು
ದಿಟ್ಟ ರಾಮಯ್ಯನೆಡಬಲದಿ || ೪೫ ||

ಚಾರಮರಾಯನ ಮಕ್ಕಳು ಮುನ್ನೂರು
ವಾರುವ ಕಾಟಣ್ಣ ಸಹಿತ |
ಬ್ಯಾರೊಂದು ಕಡೆಯೆ ಕಡಿದಾಡುತಲಿರ್ದರು
ಧೀರ ಮಾನ್ಯರ ಕೂಡಿಕೊಂಡು || ೪೬ ||

ಮಾಳವ ಮಗಧ ಪಾಂಚಾಲ ನಾಯಕರನು
ಬೀಳಲಿ ಹೊಯ್ದು ಕೆಡಹಿದರು |
ತಾಳಿ ಕೋಪವನು ಗುತ್ತಿಯನಾಳ್ವ ರಾಯನ
ಚೂಣಿಯ ಮುರಿಯಲಿಕ್ಕಿದರು || ೪೭ ||

ಇರಿದು ತರಿದು ಶಿರಗಳನು ಉತ್ತರಿಸುತ
ಕೊರೆದು ಕೊರಳನು ಕತ್ತರಿಸಿ |
ಭರದಿಂದ ಬಲವ ಮುರಿಯಲೊದೆದ ರಾಮಯ್ಯ
ದೊರೆಮಗ ಕಂಪಿಲನೆಡೆಗೆ || ೪೮ ||

ಕಾಡ ಬೇಡರ ಪಡೆಗೂಡಿತು ರಣಕಂಜಿ
ಓಡುವ ರಾಯರ ಗಂಡ |
ಮೂಡಲ ಪೌಜಿಗೆ ಕುದುರೆಯ ಹಾಕಿದ
ಕಾಡ ಬೇಡರು ಬೊಬ್ಬೆಯಿಡುತ || ೪೯ ||

ಮೂಡಲ ಪೌಜನು ಮುರಿಯಲಿಕ್ಕಿದ ರಾಮ
ನೋಡಿದ ತನ್ನ ಎಡಬಲವ |
ಓಡಿಹೋದನು ರಾಯ ಆರೆಯರ [ದ]ಳನೆಲ್ಲ
ಕೂಡಿ ಬಂದಿತು ನಮ್ಮ ಬಲವು || ೫೦ ||

ಕಡೆಯ ಕಾಳಗ ಮಾಡಿ ಗಡಿಯಂಕ ಚಿನ್ನನು
ಒಡೆಯಗೆ ಬಂದು ಕೈಮುಗಿದ |
ಹಿಡಿಸು ರಾಮಯ್ಯ ಧರ್ಮಗಾಳೆಯನಿನ್ನು
ನಡೆಯಿನ್ನು ಹೋಗುವ ತಿರುಗು || ೫೧ ||

ರಂಗುಮೊಟ್ಟೆ ಕಟ್ಟಿದವರುಂಟೆ ಲೋಕದೊಳು
ಸಂಗ್ರಾಮಧೀರ ವಜೀರ |
ಮುಂಗಡೆಯಲಿ ಬಂದು ಕಾಟಣ್ಣ ಕೂಡಿದ
ಸಂಗಾತ ಅಣ್ಣತಮ್ಮಗಳು || ೫೨ ||

ಹಿಡಿಯೆಂಬ ಧರ್ಮಗಾಳೆಯನು ರಾಮಯ್ಯನು
ಹಿಡಿಸಿ ಮುಂದಕೆ ನಡೆಸಿದನು |
ಒಡನೈದು ಮಂದಿ ಮನ್ನೆಯರು ತಾ ಸಹವಾಗಿ
ಕಡುಗಲಿ ಹಿಂದಕ್ಕೆ ತೆರಳಿ || ೫೩ ||

ತನ್ನೊಡನಿದ್ದೈವರು ಬಿಲ್ಲುಕಾರರು
ಮನ್ನೆಯ ಮಕುಟವರ್ಧನರು |
ಸನ್ನುತವನು ಮಾಡಿ ಕಡಿದೊಟ್ಟಿ ರಣದೊಳು
ತನ್ನರಮನೆಗಾಗಿ ತಿರುಗಿ || ೫೪ ||

ಅರಮನೆಗೈದರು ಆ ಕ್ಷಣ [ದ]ಲತ್ತವು
ಧುರಧೀರ ಜಗದಪ್ಪನೊಡನೆ |
ಮುರಿದೋಡಿಹೋಗಿ ಪೇಳ್ದರು ತಮ್ಮರಸಗೆ
ಧುರಧೀರ ರಾಮನ ಬಿರಿದ || ೫೫ ||

ಬಿರಿದ ಕೇಳಿದನಾಗ ಜಗದಪ್ಪರಾಯನು
ಭರದಿ ವಾಜಿಗಳೈದ ನೋಡಿ || ೫೬ ||

ಮಗಳ ಕಪ್ಪವನಿತ್ತು ಜಗದಪ್ಪರಾಯನು
ನಗುತ ವಾರುವನೈದ ನೋಡಿ |
ಸೊಗಸಿನ ತೇಜಿಯು ಸಹ ಕನ್ನೆಯ ಬೇಗ
ಮಿಗೆ ಕೊಟ್ಟು ಒಂದಾದನಾಗ || ೫೭ ||

ಮಂತ್ರಿಗಳೆರಡು ಮಾತಾಡಲು ರಾಮಯ್ಯ
ನಂತವನೆಲ್ಲಿ ಪುಟ್ಟುವನು |
ಕಂತುಹರನ ವರದಿಂದ ಪುಟಿದವನ
ನೆಂತೆಂದು ನೋಡಲಿಬ್ಯಾಡ || ೫೮ ||

ಬಿರಿದಂಕನಾದ ಕಾರಣದಿಂದ ಡಿಳ್ಳಿಯ
ಸುರಿತಾಳನವರ ಪಾವುಗೆಯ |
ಧರೆಯೊಳು ಮೆಟ್ಟಿ ದಕ್ಕಿಸಿಕೊಂಡನಲ್ಲದೆ
ಮರುಳರಾದರಿಗೆ ದಕ್ಕುವುದೆ || ೫೯ ||

[ದ್ವಾಪರದ]ಲ್ಲಿ ತಾ ಪಾರ್ಥನು ಜನಿಸಿದ
ಭೂಪ ಕಂಪಿಲನ ಗರ್ಭದಲಿ |
ಈ ಪರಿ ಬಿರಿದನು ಪೊಗಳಿಸಿ ನಡೆದಂತು
ಮಾಪತಿ ದಯವುಂಟು ಅವಗೆ || ೬೦ ||

ಪರನಾರಿಯ ಸಹೋದರನೆಂಬ ಬಿರಿದನು
ಧರಿಸಿದನಂತೆ ಕಾಲೊಳಗೆ |
ಧರೆಯೊಳು ಈ ಬಿರಿದ ದಕ್ಕಿಸಿಕೊಂಬಂಥ
ದೊರೆಯುಂಟೆ ಮೂರು ಲೋಕದೊಳು || ೬೧ ||

ಸುರರೊಳು ನರರೊಳು ನಾರಿಗೆ ಸೋಲದ
ಪುರುಷರಿನ್ನುಂಟೆ ಲೋಕದೊಳು |
ಪರನಾರಿ ಶಾಪವು ಮುನ್ನುಂಟು ಪಾರ್ಥಗೆ
ಪರಿಹರಿಸಿಕೊಂಬರೆ ಬಂದು || ೬೨ ||

ಆದ ಕಾರಣದಿ ಮಗಳ ಕೊಟ್ಟೆ ಮಂತ್ರೀಶ
ಚದುರ ರಾಮಯ್ಯಗೆ ನಾನು |
ಮದುವೆಯ ಮಾಡಿಕೊಂಡು ನೀ ಬಾರೈ ಚಂದ್ರ
ವದನೆ ರಾಮಲದೇವಿಯನು || ೬೩ ||

ಇತ್ತ ಜಗದಪ್ಪನು ಮದುವೆಯ ಸಂಭ್ರಮ
ಅತ್ತ ಕಂಪಿಲರಾಯನ ಮಗನ |
ಎತ್ತಿ ಮುದ್ದಾಡಿ ಮಗನ ಮುಖವನು ನೋಡಿ
ಮುತ್ತಿನ ತುರಾಯವ ಕೊಟ್ಟ || ೬೪ ||

ಅರ್ತಿಯಿಂದಾರತಿಗಳ ತಂದು ಹರಿಯಮ್ಮ
ಮೊತ್ತರ ಹೆಮ್ಮಕ್ಕಳೊಡನೆ |
ಎತ್ತಿಸಿ ನಾನಾ ಪರಿಯ ನಿವಾಳಿಯ
ಮತ್ತೆ ತೆಗಸಿ ಕಾಡಿಗಿಡಿಸಿ || ೬೫ ||

ತಂದೆತಾಯಿ ಪಾದಕೆ ಬಿದ್ದನು ರಾಮಯ್ಯ
ವಂದಿಸಿದನು ಭಕ್ತಿಯಲಿ |
ಇಂದಾದ ರಾಜ್ಯವನೆಲ್ಲವ ಕೇಳುತ
ತಂದೆ ಮಕ್ಕಳು ಹರುಷದಲಿ || ೬೬ ||

ಸಕ್ಕರೆ ಚಿನಿಪಾಲು ತುಪ್ಪ ಮೃಷ್ಟಾನ್ನವು
ಚೊಕ್ಕಟ ಕಡುಬು ಕಜ್ಜಾಯ |
ಅಕ್ಕರದಿಂದ ಮಗನ ಕರೆದು ಕೂಡುಂಡು
ಚಿಕ್ಕರಮನೆಗಾಗಿ ನಡೆದ || ೬೭ ||

ಉದಯದೊಳೆದ್ದು ಊಟವ ಮಾಡಿ ಕಂಪಿಲ
ಸದರಿನೊಳಗೆ ಬಂದು ಕುರಿತ |
ಚದುರ ರಾಮಯ್ಯನ ಕರೆಸಿ ರಣಾಗ್ರದ
ಹದನ ಕೇಳುತ ಅರ್ತಿಯಿಂದ || ೬೮ ||

ನಿನ್ನೆ ರಣಾಗ್ರದೊಳ್ ಕಡಿದಾಡಿ ಬಂದಂಥ
ಮನ್ನೆಯರೆಲ್ಲರ ಕರೆಸು |
ಚೆನ್ನಾಗಿ ನೋಡಿ ನೋಡಿದಂಥ ಕಷ್ಟವ
ಮನ್ನಿಸು ರಾಮಯ್ಯನೆನುತ || ೬೯ ||

ಬೊಕ್ಕಸದೊಳಗಿಂದ ತರಿಸಿದ ಹಣ ಹೊನ್ನ
ಚೊಕ್ಕಟ ಒಡವೆ ವಸ್ತುಗಳ |
ಅಕ್ಕರ ಮಿಗೆ ಜವಳಿಯ ಜೀಬಿ ನಾಣ್ಯವ
ಇಕ್ಕಿದ ರಾಮಯ್ಯನೊಡನೆ || ೭೦ ||

ಕರೆಸಿದ ರಾಮಯ್ಯ ರಾಣುವೆ ಮಂದಿ ಮಕ್ಕಳ
ಧುರಧೀರ ಮನ್ನೆಯರುಗಳ |
ದೊರೆಯ ಮಕ್ಕಳು ರಾಹುತರು ಕುಮಾರರ
ಮರೆಯದೆ ಕರೆಸಿದ ರಾಮ || ೭೧ ||

ರಣರಂಗದೊಳು ಹೊಕ್ಕು ಹೆಣಗಿದ ಬಂಟರನು
ಎಣಿಕೆಯ ಮಾಡಿಸಿ ರಾಮ |
ಬಣವೆಯ ಹುಲ್ಲ ಬಸವಗೆ ಕೊಟ್ಟ ತೆರನಂತೆ
ಉಣಿಸಿದ ಮಂದಿ ಮಕ್ಕಳನು || ೭೨ ||

ಕಾಲಗಗ್ಗರ ಕೊಟ್ಟ ತೋಳಬಾಪುರಿ ಕೊಟ್ಟ
ಮೇಲಾಗಿ ಕೊಟ್ಟ ಚೌಕುಳಿಯ |
ಸಾಲು ಮೋಹನ್ಮಾಲೆ ಸರಗಳ ಕೊಟ್ಟನು
ಕಾಲಸರವ ಕೊಟ್ಟ ರಾಮ || ೭೩ ||

ಹೊನ್ನ ಗಂಟೆಯ ಕೊಟ್ಟ ಪುಲಿಯ ಚರ್ಮವ ಕೊಟ್ಟ
ಮನ್ನಿಸಿ ಕೊಟ್ಟ ಚೌರಿಗಳ |
ಚೆನ್ನನ ಸರ ಮುತ್ತು ತೊಡರು ಬಾಪುರಿಗಳ
ಚೆನ್ನಾಗಿ ಕೊಟ್ಟ ರಾಮಯ್ಯ || ೭೪ ||

ಊರು ಉಮ್ಮಳಿ ಕೊಟ್ಟ ಭಾರಿ ನಿಗಳವ ಕೊಟ್ಟ
ಹಾರುವ ಉಡಾಸವ ಕೊಟ್ಟ |
ನಾರಂಜಿ ತೋಪಿಗಳ ಕೊಟ್ಟನು ರಾಮಯ್ಯ
ಮೀರಿದ ಬಿರಿದುಗಳ ಕೊಟ್ಟ || ೭೫ ||

ಹಗಲು ದೀವಿಟಿಗೆ ಕೊಟ್ಟ ಮಿಗೆ ಜಲ್ಲಿಗಳ ಕೊಟ್ಟ
ಜಗಜಂಪಿನ ಸತ್ತಿಗೆಗಳನು |
ಮಿಗಿಲು ವಸ್ತ್ರವ ಕೊಟ್ಟ ಮುತ್ತಿನೊಂಟಿಯ ಕೊಟ್ಟ
ಜಗಳಕ್ಕೆ ಕೊಟ್ಟ ಆಯುಧವ || ೭೬ ||

ಆನೆ ಕುದುರೆ ಕೊಟ್ಟ ಸೇನೆ ಭಂಡಾರ ಕೊಟ್ಟ
ಮಾನನಿಧಿ ಮದುವೆಗೆ ಕೊಟ್ಟ |
ಬೋನಕ್ಕೆ ಕೊಟ್ಟ ಗದ್ದೆಯು ಹೊಲ ಮಾನ್ಯವ
ಆನಂದ ಅರ್ತಿಲಿ ರಾಮ || ೭೭ ||

ತೊಡ[ರು] ಬಾಪುರಿ ಕೊಟ್ಟ ನಡುವಿನೊಡ್ಯಣ ಕೊಟ್ಟ
ಉಡಿದಾರ ವಂಕುಡಿ ಕೊಟ್ಟ |
ಬಡತನವನು ನೋಡಿ ಹೊನ್ನು ಹಣಗಳ ಕೊಟ್ಟ
ಎಡರಿಲ್ಲದಂತೆ ರಾಮಯ್ಯ || ೭೮ ||

ಗಾಯದವರಿಗೆ ಕೊಟ್ಟ ಬಾಯಿತುಂಬ ಹೊನ್ನ
ಆಯುತವಾದ ಉಡುಗೊರೆಯ |
ಗಾಯದಾರೈಕೆಗೆ ಕೊಟ್ಟನು ಹಿಡಿ ಹೊನ್ನ
ಆಯುತವಾಗಿ ರಾಮಯ್ಯ || ೭೯ ||

ಸತ್ತವರ ಮಕ್ಕಳ ಕರೆಸಿದ ರಾಮಯ್ಯ
ಮುತ್ತು ಬಂಗಾರವ ಕೊಟ್ಟ |
ಹೆಚ್ಚ ತಂದೆಯ ಮರೆಯದೆ ನಡೆವಂತೆ
ಒತ್ತಿ ಹೇಳಿದನು ಕಂಪಿಲನು || ೮೦ ||

ಈ ಪರಿಯಲಿ ರಾಮ ಮಂದಿ ಮಕ್ಕ[ಳಿಗೆ]ಲ್ಲ
ಭೂಪತಿ ಸಮದಾಸಿ ಕೊಟ್ಟ |
ಅಪಾರವಾಗಿ ಉಡುಗೊರೆ ಗಂಧ ವೀಳ್ಯವ
ಭೂಪ ಕೊಡಿಸಿದನೆಲ್ಲರಿಗೆ || ೮೧ ||

ಮೊತ್ತದ ವೀಳ್ಯವ ಕೊಡಿಸಿದ ರಾಮಯ್ಯ
ಇತ್ತನೆಲ್ಲರಿಗೆ ಅಪ್ಪಣೆಯ |
ಹೆತ್ತ ತಂದೆಯ ಪಾದಕೆ ಬಿದ್ದು ರಾಮಯ್ಯ
ಒತ್ತಿ ನಡೆದನರಮನೆಗೆ || ೮೨ ||

ಮಗನ ಸಂತೋಷದ ಮಿಗೆ ನೋಡಿ ಕಂಪಿ
ಮುಗುಳು ನಗೆಯಲ್ಲಿ ನಗುತಿರ್ದ |
ಬಗೆಯೇನೊ ಮಂತ್ರಿ ರಾಮಯ್ಯನೆದ್ದು ಪೋದ
ಸೊಗಸು ತಿಳಿಯದು ನಮಗೆಂದ || ೮೩ ||

ಕನ್ನೆ ಹುಯ್ಯಲ ಕಡಿದುಬಂದ ರಾಮಯ [ಗೆ]
ಇನ್ನೇನ ಕೊಡಬೇಕು ಮಂತ್ರಿ |
ಕನ್ನೆವೆಣ್ಣುಗಳೈದು ಧಾರೆಯೆರೆಯಲಿ ಬೇಕು
ಉನ್ನತ ಹರುಷದೊಳ್ ನಾವು || ೮೪ ||

ಬಿರುದಿಗೆ ಒಂದೊಂದು ಒಡವೆಯ ಕೊಡಬೇಕು
ಮನೆಯ ಮಾತಿನ್ಯಾಕೆ ರಾಯ |
ಧರೆಯ ರಾಯರಗಂಡನೆಂದು ಹೊಗಳಿಸುವನು
ಅರಿಕೆಯಿಲ್ಲವೆ ನಿನ್ನ ಮನಕೆ || ೮೫ ||

ಹಿರಿಯ ನೀ ಬೈಚಪ್ಪ ಹೇಳಿದ ಮಾತಿಗೆ
ಅರೆಮರೆಯುಂಟೆ ನಮ್ಮೊಳಗೆ |
ದೊರೆತನ ರಾಮಗೆ ಮಾಡುವೆ ನಾ ಮುಂದೆ
ಬರಿಯ ಮಾತಲ್ಲವೊ ಮಂತ್ರಿ || ೮೬ ||

ಭಾವ ಮಂಚಣ್ಣನ ಮಗಳೊಂದು ನೀ ನೋಡು
ಭಾವೆ ರಾಮಲದೇವಿಯೊಡನೆ |
ಮಾವ ಚಾರಮನ ಮೊಮ್ಮಕ್ಕಳು ಇಬ್ಬರ
ಭಾವಿಸಿ ನೋಡು ಬೈಚೊಒ || ೮೭ ||

ಇನ್ನೊಂದು ಕನ್ನಿಕೆ ನಿನ್ನಲ್ಲಿ ನೀ ನೋಡು
ಕನ್ನೆವೆಣ್ಣುಗಳೈದ ಮಾಡೊ |
ಜೊನ್ನಿನ ಕಳೆ ರೂಪು ಲಕ್ಷಣಂಗಳ ನೋಡಿ
ಚೆನ್ನಾಗಿ ಮದುವೆಯ ಮಾಡು || ೮೮ ||

ಕನ್ನೆ ಹುಯ್ಯಲ ಕಡಿದು ಹೆಣ್ಣುಗಳ ಮದಿವಾದ
ಚೆನ್ನಿಗ ರಾಮಯ್ಯನೆಂದು |
ಉನ್ನತ ಕೀರ್ತಿಯ ಪಡೆದನು ಜಗದೊಳು
ಕನ್ನೆ ಜಗಳದ ಸಂಧಿ ಮುಗಿಯೆ || ೮೯ ||

ಇದು ಪರನಾರಿ[ಸೋ]ದರ ರಾಮನಾಥನ
ಪದ[ಕೃತಿಯೊ]ಳಗೊಂಡು ಪದನು |
ಕದನವ ಗೆಲಿದು ರಾಮಲದೇವಿಯನು
ತಂದ ಕದನದ ಸಂಧಿ ಸಂಪೂರ್ಣ || ೯೦ ||

ಅಂತು ಸಂಧಿ ೬ಕ್ಕಂ ಪದನು ೩೭೦ಕ್ಕಂ ಮಂಗಳ ಮಹಾಶ್ರೀ