ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರಭವರೋಗವೈದ್ಯನೆ
ನಾಗ[ಕುಂಡಲ]ಶರಣೆಂಬೆ || ೧ ||

ರಾಮನ ನೆನೆ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆನೆ ಕಂಡ್ಯಾ ತನುವೆ |
ರಾಮರಾಮಾ ಎಂಬ ನಾಮವ ನೆನೆದರೆ
ಕಾಮಿತ ಫಲವೀವ ರಾಮ || ೨ ||

ಮಂತ್ರಿ ಬೈಚಪ್ಪನು ಯೋಚನೆ ಮಾಡಿನ್ನು
ಬಂದನು ಕಂಪಿಲನ ಬಳಿಗೆ |
ಕೊಂಡೆರ ಮಾತಿಗೆ ರಾಮನ ಕೊಲ್ವರೆ
ಮಂಡಲವೆಲ್ಲ ಕೆಡುವುದು || ೩ ||

ಹೆಣ್ಣಿಂದ ವಾಲಿ ಸುಗ್ರೀವರು ಕೆಟ್ಟರು
ಹೆಣ್ಣಿನ ಮಾತ ನಂಬುವರೆ |
ಹೆಣ್ಣಿಂದ ರಾಮರು ಕೆಟ್ಟರು ಎಲೆ ರಾಯ
ಹೆಣ್ಣಿಂದ ಕೀಚಕನಳಿದ || ೪ ||

ಯಾತರ ಮಾತನಾಡಿದೆ ನೀನು ಬೈಚಪ್ಪ
ಕೀರ್ತಿಯಾಯಿತು ನಮ್ಮ ಬದುಕು || ೫ ||

ಕೊಂದೆಯಾತಕೆಯೆಂದು ಹಿಂದೆ ನೋಯಲಿಬೇಡ
ಸಂದೇಹವಿಲ್ಲದೆ ಹೇಳಯ್ಯ |
ಎಂದ ಬೈಚಪ್ಪನ ನುಡಿಗೇಳಿ ಕಂಪಿಲ
ಇಂದಿತ್ತ ನಂಬುಗೆಯ ಕೊಟ್ಟು || ೬ ||

ಕೊಲ್ಲಲಿಂತೆಂದರೆ ಕೊಲ್ಲುವೆ ತಪ್ಪದೆ
ಬಲು ನಂಬಿಗೆಯ ಪಾಲಿಸೆನಗೆ |
ಸಲೆ ನಂಬುಂಬೆಂದು ಕಂಪಿಲರಾಯನು
ಬಲುಹಿಂದ ಹೇಳಿದನಾಗ || ೭ ||

ನಿಲ್ಲದೆ ಮಂತ್ರಿಗೆ ವೀಳ್ಯಯವನು ಕೊಟ್ಟು
ಕೊಲ್ಲೆಂದು ಕಳುಹಿದ ರಾಯ |
ಕೊಲ್ಲೆಂದ ಮಾತಿಗೆ ಕೊಲ್ಲದಿರ್ದಡೆ ನಿನ್ನ
ಕಲ್ಲಗಾಣಕೆ ಹಾಕಿಸುವೆನು || ೮ ||

ಒಪ್ಪವ ಕೊಡುವುದ ಕಾಣುತ ಬೈಚಪ್ಪ
ತಪ್ಪದೆ ಕಡೆಗಣ್ಣಿಲುದಕ |
ಒಂದೆರಡು ಭಾಷೆಯ ತಪ್ಪದೆ ತಕ್ಕೊಂಡು ಕರೆ
ಸಿದ ತನ್ನ ಮಂದಿಯನು || ೯ ||

ಬನ್ನಿರೊ ಹಳೆಯ ಎಕ್ಕಟಿಗರೆಲ್ಲರು ನೀವು
ಬನ್ನಿರೈ ತೆಲುಗು ಮನ್ನೆಯರು |
ಚೆನ್ನಿಗ ರಾಮನ ಹಿಡಿಯಬೇಕೆನುತಲಿ
ತನ್ನ ಬಂಟರಿಗೆ ಹೇಳಿದನು || ೧೦ ||

ಒಡೆಯನ ಮಾತನು ಕೇಳುತ ಬೈಚಪ್ಪ
ಹಿಡಿಯಬೇಕೆಂದ ರಾಮುಗನ |
ಕಡುಗಲಿ ರಾಮಯ್ಯ ಕೈಕೊಂಡನಾದರೆ
ಪೊಡವಿಯೊಳಗೆ ಇದಿರಿಲ್ಲ || ೧೧ ||

ದೊರೆ ರಾಮಯ್ಯನ ಬಳಿಗೆ ಬಂದ ಬೈಚಪ್ಪ
ಭರದಿಂದ ಬಿನೈಸಿದನು || ೧೨ ||

ಏಕಾಂಗಿ ವೀರ ರಾಮಯ್ಯ ಬೈಚಪ್ಪನು
ಏಕಾಂತದ ಮನೆಗೈದು |
ಯಾಕೆ ಬಂದೆಯೊ ಮಂತ್ರಿ ಬಂದ ಕಾರಣವೇನು
ಎಂದು ಕೇಳಿದನು ರಾಮಯ್ಯ || ೧೩ ||

ಇಂದು ನಿನಗೆ ರಾಮ ರತ್ನಿಯಿಂದಪಕೀರ್ತಿ
ಬಂದಿದೆ ಕೇಳು ಚೆನ್ನಿಗನೆ || ೧೪ ||

ಕೊಲ್ಲೆಂದು ಕಳುಹಿದ ಕಂಪಿಲರಾಯನು
ಕೊಲ್ಲದಿರ್ದಡೆ ನಿನ್ನ ನಾನು |
ಕಲ್ಲುಗಾಣಕ್ಕೆ ಹಕಿಸುವೆನೆನು
ತಲಿ ಅರಸು ಕೋಪಿಸಿದ ಎನ್ನ ಮೇಲೆ || ೧೫ ||

ಎತ್ತಣ ಮಾತು ಎಲ್ಲಿಯ ಬಹು ಸುದ್ದಿಯು
ಹೊತ್ತಿತು ಬಯಲಪಕೀರ್ತಿ |
ಎಲ್ಲಿಯ ಮಾತಿನ್ನು ಹೊಂದಿತು ಬೈಚಪ್ಪ
ನಿಲ್ಲದೆ ಕೇಳ್ದ ರಾಮಯ್ಯ || ೧೬ ||

ಇಲ್ಲಿಗೆ ಹೋಯಿತು ಈ ಕ್ಷಣವೆ ಪ್ರಾಣವು
ಕೊಲ್ಲು ಪ್ರಧಾನಿಗಳರಸ || ೧೭ ||

ಮೊತ್ತದ ಪರಿವಾರ ಸಹಿತ ಮುತ್ತಿನಚೆಂಡ
ಅರ್ತಿಯಿಂದಲಿ ಆಡುತಿರಲು |
ಒತ್ತಿ ಇಡಲು ಚೆಂಡು ಬೀಳಲು ತರಹೋದೆ
ಮತ್ತೆ ಚಿಕ್ಕಮ್ಮನರಮನೆಗೆ || ೧೮ ||

ಚಿಕ್ಕಮ್ಮನೆಂದು ನಾ ಚೆಂಡ ತರಹೋದೆ
ತಕ್ಕೈಸಿ ಮುಂದೆ ಪಿಡಿದಳು |
ಅಮ್ಮಾಜಿ ನೀ ನನ್ನ ಪಿಡಿಯಸಲ್ಲದು ಎಂದೆ
ಕಲಶ ಕುಚಗಳನು ತೋರಿದಳು || ೧೯ ||

ಮುಕ್ಕಣ್ಣ ಜಟ್ಟಂಗಿ ರಾಮೇಶ್ವರನಾಣೆ
ಚಿಕ್ಕಮ್ಮಗೆರಡೆಣಿಸಿದರೆ || ೨೦ ||

ಇನಿತಿಷ್ಟು ತಪ್ಪ ಮಾಡಿದುದಿಲ್ಲ ಬೈಚಪ್ಪ
ಅನುಮಾನವೇಕೆ ಕೊಲ್ಲಯ್ಯ |
ಮಾನಿನಿಯರ ಮಾತು ಕುಟಿಲ ಕೌತುಕವನು
ಏನೆನ್ನಬಹುದು ಸಿದ್ಧಾಂತ || ೨೧ ||

ಅಪ್ಪನ ರಾಣಿಗೆ ತಪ್ಪದೆನಾದರೆ
ಸರ್ಪಭೂಷಣ ಶಿವ ಬಲ್ಲ |
ತಪ್ಪು ಉಂಟಾದರೆ ಕೊಲ್ಲೊ ಪ್ರಧಾನಿ ಎಂ
ದೊಪ್ಪಿಸಿದನು ಕಠಾರವನು || ೨೨ ||

ತಪ್ಪು ಉಂಟಾದರೆ ಕೊಲ್ಲುವೆ ರಾಮಯ್ಯ
ತಪ್ಪುವನಲ್ಲ ಪರಸತಿಗೆ |
ತಪ್ಪೆನು ನಿನ್ನ ಪ್ರಾಣಕೆ ಎಂದು ಬೈಚಪ್ಪ
ಅಪ್ಪಿಕೊಂಡನು ಭುಜತುಂಬ || ೨೩ ||

ಆವ ಠಾವಿಲಿ ಮಡಗುವೆನೆಂದು ಬೈಚಪ್ಪ
ಭಾವದೊಳಗೆ ಧ್ಯಾನಿಸಿದನು |
ದೇವ ಜಟ್ಟಂಗಿರಾಮನ ಗುಡಿಯೊತ್ತಿಲಿ
ದೇವೇಂದ್ರಸುತನ ಮಡಗುವೆನು || ೨೪ ||

ಉಪ್ಪಲಿಕರ ಸಿಂಗಯ್ಯನ ಕರೆಸಿದ
ತಪ್ಪದೆ ಏಕಾಂತವಾಡಿ |
ಒಪ್ಪದಿಂದಲಿ ಬೆಳಗಾಗದ ಮುನ್ನಲಿ
ಇಪ್ಪಂತೆ ಮಾಡೊಂದು ಗೃಹವ || ೨೫ ||

ಮುನ್ನೂರು ಹಾರೆ ಗುದ್ದಲಿ ಸಲಿಕೆ ಸಹವಾಗಿ
ಚೆನ್ನಾಗಿ ತೋಡೊ ಮಾಳಿಗೆಯ || ೨೬ ||

ಎಂದ ಮಾತನು ಕೇಳಿ ಉಪ್ಪಾರ ಸಿಂಗಯ್ಯ
ಅಂದು ಮಾಳಿಗೆಯ ತೋಡಿದನು |
ಬಂದು ಕಾಮಾಟರು ಮಂತ್ರಿಗೆ ಪೇಳಲು
ಬಂದು ನೋಡಿದನು ಬೈಚಪ್ಪ || ೨೭ ||

ಚೆಂದವಾಗಿದೆಯೆಂದು ಮಂತ್ರಿ ಬೈಚಪ್ಪನು
ತಂದುಕೊಟ್ಟನು ಉಡುಗೊರೆಯ |
ಏಳು ತಿಂಗಳಿಗೆ ಅಕ್ಕಿ ಕಡಲೆ ಗೋದಿಗಳಾಗ
ಬೇಳೆ ಬೆಲ್ಲವು ಸಹವಾಗಿ || ೨೮ ||

ದೀಪದೆಣ್ಣೆಯು ತೂಗುಮಂಚ ರಾಮಯ್ಯಗೆ
ತಪ್ಪದೆ ತಂದಿರಿಸಿದರು |
ಉಪ್ಪು ಮೆಣಸು ಅಡಕೆ ಬಿಳಿಯಲೆ ಸುಣ್ಣವ
ತಪ್ಪದೆ ತಂದಿರಿಸಿದರು || ೨೯ ||

ದೇವಿಸೆಟ್ಟಿಯ ಲಿಂಗ ಕೊಳ್ಳಿಯ ನಾಗಣ್ಣ
ಭಾವಸಂಗಮ ಗುಜ್ಜಲೋಬ |
ಕೋವಿದ ಕೋಟಗರ ದ್ಯಾವ ಮಾದಿಗ ಹಂಪ
ಹಾವಳಿಕಾರನು ಹನುಮ || ೩೦ ||

ಲಿಂಗ ಕಾಟಣ್ಣನು ನಲ್ಲನಾಯಕ ಸಹ
ಸಿಂಗಯ್ಯ ಮುಮ್ಮಡಿಯೆನಿಪ |
ಅಂಗಜರೂಪ ನೆಲಮಾಳಿಗೆಯೊಳು ಆರು
ತಿಂಗಳು ನೀವಿರಿಯೆಂದು || ೩೧ ||

ಸಂಗಡದವರು ಹನ್ನೆರಡು ಮಾನ್ಯರು ಸಹ
ಹಿಂಗದೆ ಇರಿಯೆಂದು ಮಡಗಿ || ೩೨ ||

ಆರು ತಿಂಗಳ ಬೀಯ ಅಡಕೆಲೆ ಸಹವಾಗಿ
ತೋರಿದ ರಾಮಯ್ಯಗಾಗ |
ಆರು ತಿಂಗಳ ಸನ್ನಹವನು ತೋರಿಸಿ
ಧೀರ ರಾಮನ ಮಡಗಿದನು || ೩೩ ||

ಭಾವಜರೂಪನ ಮಡಗಿ ಬೈಚಪ್ಪನು
ನೋವ ತಾಳಿದನು ಮನದೊಳಗೆ |
ಬೇಗದಿ ತಿರಿಗಿಬಂದನು ಬೈಚಪ್ಪ
ಖಳರಾಮ ಬಂಟನಿದ್ದೆಡೆಗೆ || ೩೪ ||

ಅಳಿವ ಕಾಲವು ಬಂತು ನಿನಗೆ ಎನುತಲಿ ಈಗ
ಉಳಿಯಲೀಸನು ಕಂಪನೃಪತಿ || ೩೫ ||

ಪಾಪಿಯ ಪ್ರಾಣವ ಕಾಯ್ದೆ ಇಷ್ಟು ದಿನ
ಭೂಪ ಕಂಪಿಲ ಬೇಂಟೆಯಲಿ |
ಕೋಪವ ಮಾಡಿದ ನನ್ನ ಮೇಲೆನುತಲಿ
ಉಪಾಯದಿ ಬೈಚಪ್ಪ ನುಡಿದ || ೩೬ ||

ಒಡೆಯ ಕಂಪಿಲರಾಯ ಕೋಪಿಸಲ್ಯಾತಕೆ
ಕೊಡುವೆನು ನನ್ನ ಪ್ರಾಣವನು |
ಪೊಡವಿಯೋಳೀ ಕಾಯ ಇರಬಂದಿಲ್ಲೆಂದು
ತಡೆಯದೆ ಖಳರಾಮ ನುಡಿದ || ೩೭ ||

ಪ್ರಾಣವನಾದರೆ ಕೊಡುವೆನೊ ಪ್ರಧಾನ
ಮಾಣದೆನಗೆ ಉಸುರೆನಲು |
ಏಣಾಕ್ಷಿ ರತ್ನಿಯರಮನೆಗೆ ಹೋಗಿ
ತಾ ಕೇಣವಿಲ್ಲದೆ ಚೆಂಡ ಬೇಡೆ || ೩೮ ||

ಜಾಣ ರಾಮುಗನ ಕೊಲ್ಲೆಂದು ಕಂಪಿಲರಾಯ
ಮಾಣದೆನ್ನೊಳು ಉಸುರಿದನು |
ಬಾಣವೈದುಳ್ಳ ರೂಪನ ಕೊಲ್ಲಲಾರದೆ
ಮಾಣದೆ [ಬಂ]ದೆ ನಿನ್ನೆಡೆಗೆ || ೩೯ ||

ಬಂದರೆ ಒಳ್ಳಿತಾಯಿತು ಮಂತ್ರಿಗಳದೇವ
ಇಂದೆನ್ನ ಪ್ರಾಣವ ಕೊಡುವೆ |
ಇಂದೆನ್ನ ಪ್ರಾಣವ ಕೊಡುವೆನು ಬೈಚಪ್ಪ ಕೇ
ಳೆಂದನು ಖಳಬಂಟರಾಮ || ೪೦ ||

ಒತ್ತಿಸಿ ಮೀಸೆಯೆಲ್ಲವನು ಬವರಿಯ ತಿದ್ದಿ
ಕಸ್ತೂರಿ ತಿಲಕವನಿಟ್ಟು |
ಮುತ್ತಿನ ಕಡುಕಿಕ್ಕಿ ವೀರಜಡೆಯ ಹೆಣೆದು
ಮತ್ತೆ ರಾಮನ ಸರಿಯೆನಿಸಿ || ೪೧ ||

ಜಡಿದು ಸುರಗಿಯನು ಪಿಡಿದೆದ್ದು ಬೈಚಪ್ಪ
ಬಿಡದೆ ರಾಮುಗನೆ ಪೇಳೆನಲು |
ಕೊಡುವೆ ಜಟ್ಟಂಗಿರಾಮಗೆ ಎನ್ನ ತಲೆಯನು
ನುಡಿದನು ಖಳಬಂಟರಾಮ || ೪೨ ||

ನುಡಿದ ಮಾತನು ಕೇಳುತಲಾಗ ಬೈಚಪ್ಪ
ಬಿಡದೆ ತನ್ನಿಷ್ಟದೈವರನು |
ತಡೆಯದೆ ನೆನೆದು ಮೃಡ ನೀನೆ ಬಲ್ಲೆಂದು
ಒಡನೆ ಗರ್ಜಿಸಿ ತುಂಡ್ರಿಸಿದನು || ೪೩ ||

ಕಡಿಯಲು ಖಳರಾಮನ ತಲೆ ಬಿದ್ದಿತು
ಒಡನೆ ನಾಲ್ವರು ಬೊಬ್ಬೆಯಿಡುತ |
ಪೊಡವಿಯೊಳಗೆ ಬ್ರ[ಹ್ಮ] ತ್ಯವಾಯಿತು ಎಂದು
ಒಡನೆ ಬೈಚಪ್ಪನಿಂತೆಂದ || ೪೪ ||

ಮು[ನ್ನ ಸೆರೆ]ಯೊಳಿರ್ದ ಹನ್ನೆರಡು ಮಂದಿಯ
ಚಿನ್ನಭಿನ್ನವಮಾಡಿ ಕಡಿದ |
ಬಿನ್ನಾಣದಿಂದ ತಲೆಯನು ತಂದು ಬೈಚಪ್ಪ
ಗನ್ನದ ಕೊಲೆಯ ತೋರಿದನು || ೪೫ ||

ಹೆಚ್ಚಿದವರ ಶಿರ ಛೇದನ ಮಾಡಿದ
ಮಚ್ಚರದವರನು ಕಡಿದ || ೪೬ ||

ಇತ್ತ ರಾಮನ ಪ್ರತಿರೂಪಿನ ತಲೆಯನು
ಎತ್ತಿ ತಂದರು ಎಳೆದೆಳೆದು |
ಅರ್ತಿಯಿನೆಲ್ಲ ಕಂಪಿಲರಾಯ ನೋಡೆಂದು
ಮತ್ತೆ ಸಂಜೆಯಲಿ ತೋರಿದರು || ೪೭ ||

ಈ ತಲೆ ದೇವಿಸೆಟ್ಟಿಯ ಲಿಂಗನ ತಲೆ
ಈ ತಲೆ [ಭಾವ ಸಂಗ]ನದು |
ಈ ತಲೆ ಕೊಳ್ಳಿಯ ನಾಗನ ತಲೆಯೆಂದು
ಈ ತಲೆ ಗುಜ್ಜಲೋಬನದು || ೪೮ ||

ಈ ತಲೆ ಹಾವಳಿಕಾರ ಹನುಮನ ತಲೆ
ಈ ತಲೆ ಲಿಂಗ ಕಾಟನದು |
ಈ ತಲೆ ನಲ್ಲನಾಗನ ತಲೆ [ದ್ಯಾವ]ನದು
ಈ ತಲೆ ಮುಮ್ಮುಡಿಸಿಂಗನದು || ೪೯ ||

ಈ ತಲೆ ಮಾದಿಗ ಹಂಪನ ತಲೆಯೆಂದು
ಮಾತನಾಡಿದ ಮಂತ್ರಿಯೊಡನೆ |
ಯಾತಕಿವರನೆಲ್ಲ ಹೊಯ್ಸಿದೆ ಬೈಚಪ್ಪ
ನೀತಿಯೆ ಕಂಪಿಲ ನುಡಿದ || ೫೦ ||

ಇದು ಸುರಿತಾಳನಗಂಡನೆಂದೆಂಬಂಥ
ಚದುರನ ತಲೆಯ ತೋರಿಸಿದ |
ಇದು ಕಾಮಭೀನ ರೂಪನ ತಲೆಯೆಂದು
ಮುದದಿ ತೋರಿದನು ಪ್ರಧಾನಿ || ೫೧ ||

ಇದು ಸುರಿತಾಳನೇಮಿಯ ಗಂಡನೆಂದೆಂಬ
ಒದಗಿ ಬಲ್ಲಾಳರಾಯನವರ |
ಎದೆಶೂಲ ಓರ್ಗಲ್ಲಸಿನಗಂಡನೆಂದೆಂಬ
ಚದುರನ ತಲೆಯ ತೋರಿಸಿದ || ೫೨ ||

ಕೊಂದೆ ಯಾತಕೊ ಕಾಟಲಿಂಗನ ಎನುತಲಿ
ತಂದೆ ಕಂಪಿಲರಾಯ ನುಡಿದ |
ಬಂದು ರಾಮನ ಕೊಂದುಹೋದೆ[ನೆಂ]ದರೆ ತಾವು
ಹಿಂದಟ್ಟೆ ಹರಿ[ಯೆ] ಹೊಯ್ಸಿದೆನು || ೫೩ ||

ಈಸು ಮಾಡಿದ ರಾಮ [ಗಾಸಿ]ಯಾದನು ಈಗ
ಭಾಷೆಯವಳ ಕರೆಸೆನಲು |
ಅರಗಿಳಿ ನುಡಿಯಂಥ ಕನ್ನಡಿಮುಖದವಳ
ಕರೆಸು ರತ್ನಾಜಿರಾಣಿಯನು || ೫೪ ||

ಹಾಸಿದ ಹಾಸಿಕೆ ಪೂಸಿದ ತಲೆಮದ್ದು
ಮಾಸಿದ ಸೀರೆ ಸೋಲ್ಮುಡಿಯು |
ಭಾಷೆಗೆ ತಪ್ಪದ ರಾಯ ಕಂಪಿಲನೆಂದು
ಆಸೆಕಾತಿಯು ಹೊರಹೊಂಟು || ೫೫ ||

ಅಲ್ಲಲ್ಲಿ ನಿಲ್ಲುತ ಅಲ್ಲಲ್ಲಿ ನೋಡುತ
ಮೆಲ್ಲಮೆಲ್ಲನೆ ಅಡಿಯಿಡುತ |
ಗಲ್ಲದ ಮೇಲೆ ಕರವಿಟ್ಟು ರತ್ನಾಜಿಯು
ಅಲ್ಲಿಗೆ ಬಂದಳು ನಗುತ || ೫೬ ||

ದೃಷ್ಟಿಸಿ ನೋಡಿದಳು ರಾಮನ ತಲೆಯನು
ಮೆಟ್ಟಿ [ನಿಲ್ವೆನು] ಎಲೋ ಮಂತ್ರಿ |
ನಿಷ್ಠುರಿ ಹಾಗೆಂದು ನೀಕರಿಸಿ ತಲೆಯನು
ಕಟ್ಟಕಡೆಗೆ ಹಾಕಿಸಿದಳು || ೫೭ ||

ಕಷ್ಟವ ನುಡಿವುತ ಮಂತ್ರಿಯ ರತ್ನಾಜಿ
ಪಟ್ಟಸಾಲೆಯನೊಳಪೊಕ್ಕು || ೫೮ ||

ಕುರುಹಿನ ಕಡೆಯ ಪೊಂಗಲು ಕಂಠಮಾಲೆಯ
ಮರೆಮಾಡಿ ತಂದು ತೋರಿಸಿದ |
ಕುರುಹನು ತಂದು ತೋರಲು ಕಂಪಿಲರಾಯ
ಬೆರಗಾದನು ದಿಟವೆನುತ || ೫೯ ||

ಮುಂದರಿಯದೆ ವಿಚಾರವ ಮಾಡದೆ
ಹಿಂದಣ ಹಗೆಯುಂಟೆ ನಿನಗೆ || ೬೦ ||

ಮೂರು ಮಾತನು ಕೇಳುವರು ಪ್ರಧಾನರು
ಏರಿತೆ ಹುಚ್ಚು ತಲೆಗೆನಲು |
ಮೀರಿ ಆಜ್ಞೆಯ ಮಾಡಿದೆ ನೀನು ರಾಮನ
ತೋರೆಂದು ರಾಯನಾಡಿದನು || ೬೧ ||

ನಿರ್ಧಾರವಹುದೇನೋ ಎನಲು ಕಂಪಿಲರಾಯ
ಬಿದ್ದನು ಮುಖ ಅಡಿಯಾಗಿ || ೬೨ ||

ಗಬ್ಬಿ ರಾಮಯ್ಯನ ಕೊಲ್ಲೆಂದು ನಿನಗೆ
ನಾ ಉಬ್ಬಿ ಕೊಟ್ಟೆನೆ ಸಲೆ ಚೀಟಿ |
ಹೆಬ್ಬುಲಿ ರಾಮನ ತೋರೆಂದು ಕಂಪಿಲ
ನುಬ್ಬಿ ಬಿದ್ದನು ಧರಣಿ ಮೇಲೆ || ೬೩ ||

ಅರಸಿಗೆ ಆರುಬಾಯೆಂಬುದು ತಪ್ಪದು
ಸರಸವೆ ನಿಮ್ಮೊಳು ನಮಗೆ || ೬೪ ||

ಹೊನ್ನಮೂಳೆಯ ಕಠಾರಿಯ ತೆಗೆದಿತ್ತ
ರನ್ನ ಮಾಣಿಕದ ಉಂಗುರವ |
ಚೆನ್ನ ಸರ ಕಾಲಪೆಂಡೆಯ ತೆಗೆದಿಟ್ಟ
ಹೊನ್ನ ಒರೆಯ ಮಂಕುಡಿಯ || ೬೫ ||

ಹೊ[ನ್ನ]ದೇವಾಂಗ ಹಚ್ಚಡವ ತೆಗೆದುಕೊಟ್ಟ
ಹನಿವ ರಕ್ತದ ತಲೆ ಸಹಿತ |
ಇನಿತು ತಲೆಯನು ಕಟ್ಟಿದ ಚಂದ್ರಗಾವಿಯ
ಅನುವಾಗಿ ಕೊಟ್ಟ ಕಂಪಿಲಗೆ || ೬೬ ||

ಕೊಲುವಾಗ ಏನೆಂದ ಚೆನ್ನಿಗ ರಾಮಯ್ಯ
ಸೊಲ್ಲ ಹೇಳೆನಗೊಂದು ಬಾರಿ || ೬೭ ||

ಪರಿವಾರ ಮಂತ್ರಿ ರಾಹುತರು ಮನ್ನೆಯರೆಲ್ಲ
ಸ್ಥಿರವಾಗಿ ಬಾಳಲಿನ್ನೆಂದ |
ದೊರೆಯು ಶಿರೋಮಣಿ ಕಂಪಿಲರಾಯನು
ಧರೆಯನೆಲ್ಲವನಾಳಲೆಂದ || ೬೮ ||

ಅಪ್ಪನ ಮೋಹದ ರಾಣಿ ಚಿಕ್ಕಮ್ಮನು
ಮುಪ್ಪಿನ ಮುತ್ತೈದೆಯಾಗಿ |
ಕಪ್ಪುಗೊರಳನ ಕರುಣದಲಿ ಸ್ಥಿರಬಾಳಲಿಯೆಂದು
ತಪ್ಪದೆ ಹರಕೆಯ ಕೊಟ್ಟ || ೪೯ ||

ಹಗಲು ಕಗ್ಗೊಲೆಯ ಸಾಹಸಭೀಮ ರಾಮಯ್ಯ
ಮರೆಯದೆ ನಿನಗೆ ಹೇಳೆಂದ |
ಅಗಣಿತವಾಗಿ ರತ್ನಮ್ಮ ಹೇಳಿದ ಮಾತ
ಉಗುಳ ದಾಟಲಿಬೇಡವೆಂದ || ೭೦ ||

ಎಂದೆಂದು ರತ್ನಮ್ಮ ಹೇಳಿದ ಮಾತನು
ಒಂದಿಷ್ಟು ಮೀರಬೇಡೆಂದ |
ಕುಂದದೆ ಇಬ್ಬರು ಸ್ಥಿರವಾಗಿ ಬಾಳಲಿ
ಎಂದು ಹರಕೆಯ ಕೊಟ್ಟ ರಾಮ || ೭೧ ||

ಏಳೇಳು ಜಲ್ಮಕ್ಕೆ ಕಂಪಿಲ ತಂದೆಯು
ಏಳೇಳು ಜಲ್ಮಕೆ ರತ್ನಾಜಿ |
ಏಳೇಳು ಜಲ್ಮಕೆ ತಾಯಾಗಲಿಯೆಂದು
ಲೋಲ ರಾಮಯ್ಯ ಹರಸಿದನು || ೭೨ ||

ಏಳೇಳು ಜಲ್ಮಕೆ ಜಟ್ಟಂಗಿ ರಾಮೇಶ
ಭಾಳಲೋಚನನಾಗಲೆಂದ |
ಏಳೇಳು ಜಲ್ಮಕೆ ಕಾಟಣ್ಣನಂತಣ್ಣ
ಏಳು ಜಲ್ಮದಲಾಗಲೆಂದ || ೭೩ ||

ಏಳೇಳು ಜಲ್ಮಕೆ ಮಾರಮ್ಮ ಸಿಂಗಮ್ಮ
ಏಳು ಜಲ್ಮಕೆ ಹರಿಯಮ್ಮ |
ಏಳು ಜಲ್ಮದಿ ಒಡಹುಟ್ಟಿದವರಾಗಲಿಯೆಂದು
ಕೋಳಾಹಳನು ರಾಮ ನುಡಿದ || ೭೪ ||

ಹರಕೆಯ ನಮಗಿತ್ತು ಜಟ್ಟಂಗಿರಾಮನ
ವರಪಾದವನು ಸೇರಿಕೊಂಡ |
ಹರುಷದಿ ಮೂಡ ಮುಂದಾಗಿ ಕುಳಿತು ರಾಮ
ಶಿರವನಿತ್ತನು ಕಡಿಯೆನುತ || ೭೫ ||

ಬಾಯನೆತ್ತದೆ ಹೊಯ್ದು ಶಿರವನು ನಾನು
ಕಾಯವ ಕಡಿತಂದೆನೆಂದ |
ಆ ಮಾತ ಕೇಳಿ ಕಂಪಿಲರಾಯ ಶೋಕದಿ
ಭೂಮಿಪ ಧರಣಿಗೆ ಕೆಡೆದ || ೭೬ ||

ಕಾಯವ ಮರೆದು ಕಂಗಳ ಮುಚ್ಚಿ ಧರೆಯೊಳು
ಬಾಯಬಿಟ್ಟನು ದೆಸೆದೆಸೆಗೆ || ೭೭ ||

ಹೆಸರಡಗಿತು ಕುಮಾರರಾಮಯ್ಯನ
ದೆಸೆಹೋಯಿತು ಕಂಪಿಲನ |
ಅಸುರರ ದಂಡು ಬಂದರೆ ಕಾದುವರಾರು
ದೆಸೆಯ ಮಾನ್ಯರ ಕಾಣೆನೆಂದ || ೭೮ ||

ಉಕ್ಕುವ ಕೋಪದಿ ರಾಯ ಬೀಳಲು ಮಂತ್ರಿ
ತರ್ಕ್ಕೈಸಿ ತಬ್ಬಿ ಕುಳ್ಳಿರಿಸಿ |
ಮುಕ್ಕಣ್ಣ ಸಾಕೆಂದರೆ ರಾಮನಳಿದನು
ದುಃಖವ ಬಿಡು ರಾಯನೆನಲು || ೭೯ ||

ಬಿಡು ಇನ್ಯಾಕೆ ರಾಮನ ಹಂಬಲಯೆಂದು
ಬೇಡಿಕೊಂಡನು ಕಂಪಿಲನ |
ಗನ್ನ ಘಾತಕಿ ರತ್ನಿಗೆ ರಾಮನ ತಲೆಯ
ಕೊಂಡಿರೆಂದು ಕಂಪಿಲ ನುಡಿಯೆ || ೮೦ ||

ಖಿನ್ನವಿಲ್ಲದೆ ತೋರೆಂದ ಕಂಪಿಲರಾಯ
ತನ್ನ ಮಂತ್ರಿಯೊಳು ಕಳುಹಿದನು || ೮೧ ||

ಕೊಡ ಬಂದರು ಹರಿವಾಣದಿ ತಲೆಯನು
ದಿಂಡೆ ರತ್ನಿಗೊಪ್ಪಿಸಲು |
ಬಂಡುಮಾಡಿದ ತಲೆಯೆಂದು ರಾಮಯ್ಯನ
ಮಂಡೆಯನೊಲಿದು ನೋಡಿದಳು || ೮೨ ||

[ಗಾಸಿ]ಯ ಮಾಡಿದ ಕುಮಾರರಾಮಯ್ಯನ
ಮೀಸೆಯ ಪಿಡಿದು ನೋಡಿದಳು |
ಬೇಡ ಹೆತ್ತ ತಂದೆಯ ಅಪಮಾನಕ್ಕೆ
ನಿಲ್ಲದೆ ಎಳಸಿದ ದ್ರೋಹಿ || ೮೩ ||

ಒಲ್ಲದಿರ್ದರೆ ಎನ್ನ ಭವಗೆಡಿಸಿದನೆಂದು
ಗಲ್ಲವ ಪಿಡಿದು ನೋಡಿದಳು || ೮೪ ||

ಜಗದೊಳಗಿನ್ನೇನು ಜಿಗುರಿ ಕಾಡಿದನೆಂದು
ಬಿಗಿದ ತಲೆಯನು ಮೆಟ್ಟಿನಿಂದು |
ತೆಗೆದುಹಾಕಿದರು ರಾಮಯ್ಯನ ತಲೆಯನು
ಅಗುಳಿಗೆ ಬಿಸುಟರಾಕ್ಷಣದಿ || ೮೫ ||

ಬೊಬ್ಬಿಟ್ಟು ಅಳುತಿರೆ ರಾಮನ ತಲೆ[ಯಿ]ನ್ನು
ಗಬ್ಬಿ ರಾಮುಗ ನಿಜವೆನುತ |
ಉಬ್ಬಿದಳಾಗ ಮನದಲಿ ರತ್ನದೇವಿಯು
ತಬ್ಬಿಬ್ಬಗೊಂಡಳಾಕ್ಷಣದಿ || ೮೬ ||

ನರೆಗಲಿ ರಾಮನ ಕೊಂದರೆಂದೆನುತಲಿ
ಹಿರಿದು ಹಿರ್ರನೆ ಹಿಗ್ಗಿದಳು || ೮೭ ||

ಇತ್ತ ಕೇಳ್ದಳು ರಾಮ ಸತ್ತ ಸುದ್ದಿಯನವನ
ಹೆತ್ತತಾಯಿ ಹರಿಯಲದೇವಿ |
ಹೆತ್ತ ಒಡಲನಾಗ ಹೊಯ್ಕೊಂಡು ಮರುಗಿದಳು
ಮತ್ತೆ ಅಂಗಜರಾಮನಳಿದ || ೮೮ ||

ಎಲ್ಲಿಯ ಮಾತು ರಾಮಯ್ಯನೇನಾದನೊ
ಹೊಲ್ಲಹ ಸ್ವಪ್ನವ ಕಂಡೆ |
ನಿಲ್ಲದೆ ಬಲಗೈಯ ಕಂಕಣ ಮುರಿವುದು
ಬೊಲ್ಲನು ತೊಡಕಿ ಬಿದ್ದಿಹುದು || ೮೯ ||

ಸಂದೇಹವಾಗಿ ಬೈಚಪ್ಪನ ಕರೆಸಿದಳು
ಇಂದು ಮನೆಗೆ ಬಾರದ್ಹೋದ |
ತಂದಳು ದಾಳಿಯ ರತ್ನಾಜಿ ಎಂದೀಗ
ಅಂದು ಸೋದರರಳಲಿದರು || ೯೦ ||

ಹೊಟ್ಟೆಹೊರಕರಂತೆ ಹೊರಸಿಗೆ ತಲೆಯನು
ಗೊಟ್ಟು ಸಾವರೆ ಗಂಡುಮರಿಯೆ |
ಮೆಟ್ಟಿ ಇರಿದು ಖಂಡೆಯದ ಕೈಮಾಡದೆ
ಪೆಟ್ಟಿಗೊಳಗಾಗೊರೆ ಮಗನೆ || ೯೧ ||

ಮುಟ್ಟಬಂದವರ ಮುಂದಲೆಯನೆಳೆದು ಸುತ್ತಿ
ಹೊಟ್ಟೆಯ ಬಗಿಯದೆ ನೀನು |
ದಿಟ್ಟತನದಲಿ ಬಂದವರ ಕೊಲ್ಲದೆ ರಾಮ
ನಿತ್ತೆ ಪ್ರಾಣವನು ನೀ ಮಗನೆ || ೯೨ ||

ಮುತ್ತಿ ಬಂದವರನು ಇರಿದು ಕೊಲ್ಲದೆ ನೀನು
ಇತ್ತೆ ಪ್ರಾಣವನು ನೀ ಮಗನೆ || ೯೩ ||

ಅಟ್ಟಿ ಹಿಡಿವರನೆಲ್ಲ ಮನೆಯ ಬಾಗಿಲ ಮುಂದೆ
ಒಟ್ಟಬಾರದೆ ತಲೆಗಳನು |
ಪಟ್ಟಣ ಮೊರೆದು ಎದ್ದರೆ ಕಾದಿ ಕೊಲ್ಲದೆ
ಕಟ್ಟಿಗೆ ನೀ ಸಿಕ್ಕಬಹುದೆ || ೯೪ ||

ಬಲ್ಲಿದ ರಾಮನ ನಿನ್ನದೆ ಕರೆದೊಯ್ದು
ಮೆಲ್ಲನೆ ಕೊರಳ ಮುರಿದರೊ |
ಕಲ್ಲು ಮರನ ಹಾಯ್ದು ಅತ್ತಳಾ ಹರಿಯಮ್ಮ
ಬಲ್ಲಿದನರಮನೆಯೊಳಗೆ || ೯೫ ||

ಮತ್ಸರದಿಂದ ಮಾನಿನಿ ರತ್ನಾಜಿಯು
ಎಚ್ಚಳೆ ಗುರಿಮಾಡಿ ನಿನ್ನ |
ಹೆಚ್ಚಳವಾಯಿತೆ ಕಂಪಿಲರಾಯಗೆ
ಮುಚ್ಚಿತೆ ರಾಮನ ಕಣ್ಣ || ೯೬ ||

ಮಣ್ಣ ಹೊಯ್ಸುವರೆ ನೋಡುವ ಕಣ್ಣುಗಳೊಳು ಮು
ಕ್ಕಣ್ಣನೆ ಎನುತ ಮರುಗಿದಳು |
ಅಣ್ಣ ರಾಮಣ್ಣನ ನೋಡುವ ಕಣ್ಣಿಗೆ
ಸುಣ್ಣವ ತೊಡೆದಂತಾಯ್ತು || ೯೭ ||

ಹೆಣ್ಣುಮಕ್ಕಳ ಅರ್ತಿಯ ಸಲಿಸುವ
ತಮ್ಮ ರಾಮನ ಕೊಂದ್ಯಾ ಶಿವನೆ || ೯೮ ||

ಶೂಲದ ಹಬ್ಬಕಿನ್ನಾರ ಮನೆಗೆ ಹೋಹೆ
ಬಾಲೆ ಮರುಗಿದಳು ಸಿಂಗಮ್ಮ |
ಸಾಲುಮುತ್ತಿನ ಸರ ಲೋಲ ಚಿಂತಕ ನೀನು
ಕಳುಹುವೆಯಲ್ಲೊ ಎಮಗೆ || ೯೯ ||

ಪಟ್ಟೆಪಟ್ಟಾವಳಿ ದೇವಾಂಗ ಆಭರಣ
ಪೆಟ್ಟಿಪೆಟ್ಟಿಗೆಯನು ತುಂಬಿ |
ಕೊಟ್ಟು ದೀಪಾವಳಿ ಮಾಡಿಪ ರಾಮ ಒಡ
ಹುಟ್ಟಿದ ಅಣ್ಣ ತಾನಳಿದ || ೧೦೦ ||

ಟ್ಟದೆ ಏಳೆಂಟು ದಿನದೊಳಗೆಲ್ಲ ಗೋ
ಳಿಟಟು ಬೀಳಲಿ ರಾಮನಂತೆ || ೧೦೧ ||

ವಾಲೆಗಳು ಹರಿದವು ಕೀಲು ಕಂಕಣ ಸಡಿಲಿ
ಸಲುಮುತ್ತಿನ ಸರ ಹರಿದು |
ಬಾಲೆ ಸಿಂಗಮ್ಮನು ಬಿಡದುರುಳಿದಳಾಗ
ಲೋಲ ರಾಮಯ್ಯನ ನೆನೆದು || ೧೦೨ ||

ದೇವರೆ ಈ ನೋವ ಆವಾಗ ಮರೆಯಲೊ
ಆವ ಮಕ್ಕಳ ನೋಡಲೈಸೆ |
ಗೋವಿಂದ ಬ್ರಹ್ಮ ಶಿವನೆ ಮೊರೆಯೊ ಎಂದು
ಬೇವುತಿರ್ದಳು ಹರಿಯಮ್ಮ || ೧೦೩ ||

ಮುಡುಬನ ಕೊಡದೆ ಕೆಡಿಸಿದೆ ಪಾಪಿದೇವರೆ ಎ
ನೊನ್ನಡಲಿಗೆ ಕಿಚ್ಚ ಹೊಯ್ಕೊಂಡೆ |
ಬಡವಿಯ ಮಕ್ಕಳು ಎಲ್ಲರು ಸತ್ತಂತೆ
ಸುಡು ಸಂಸಾರವೆಂದೆನುತ || ೧೦೪ ||

ಬ್ಯಾರೊಂದು ಅರಮನೆಯೊಳು ರಾಮನಾಥನ
ನಾರಿಯರೆಲ್ಲ ಚಿಂತಿಸುತ |
ವೀರ ಕುಮಾರ ರಾಮಯ್ಯ ನಮ್ಮರಮನೆಗೆ
ಬಾರದ ಕಾರಣವೇನೋ || ೧೦೫ ||

ಎಂದು ರಾತ್ರಿಯ ಸ್ವಪ್ನದೊಳಗೆ ನಮ್ಮರಮನೆ
ನಿಂದ ಹೆಗ್ಗಂಬ ಮುರಿವುದು |
ಅಂದು ನಮ್ಮಮ್ಮಾಜಿ ಕಳುಹಿದ ಕರಬಾನ
ಒಂದುಳಿಯದೆ ಕೆಡೆದಿಹವು || ೧೦೬ ||

ಹಿರಿಯ ಹೆಂಡತಿ ರಾಮಲದೇವಿ ಸ್ವಪ್ನದಿ
ಇರದೆ ಹೇಳುವ ಸಮಯದಲಿ |
ಕಿರಿಯಾಕೆ ಹೇಳಿದಳ್‌ ಅಕ್ಕ ಕೇಳೆನ್ನಯ
ತುರುಬ ನಿಂದುರಿವುದ ಕಂಡೆ || ೧೦೭ ||

ಚಿಕ್ಕ ಹೆಂಡತಿ ತಿಮ್ಮಾಜಿ ಹೇಳಿದಳಂದು
ಲೆಕ್ಕವಿಲ್ಲದ ಸ್ವಪ್ನಗಳನು |
ಅಕ್ಕರಿಂದಲಿ ಎನ್ನ ಕೊರಳ ಮುತ್ತಿನಹಾರ
ಉಕ್ಕುಳಿಸಿ ಬೀಳ್ವದು ಧರೆಗೆ || ೧೦೮ ||

ರಾಮಗೆ ಹಿಡಿವ ಸತ್ತಿಗೆ ಮುರಿವುದ ಕಂಡೆ
ಪ್ರೇಮದಿ ನಾನಿಟ್ಟ ವಾಲೆ |
ಭೂಮಿಗೆ ಕಳಚಿ ಬೀಳ್ವದ ಕಂಡೆ ಇರುಳಲಿ
ಕಾಮಾಯಿ ಹೇಳಿದಳು ಕನಸ || ೧೦೯ ||

ಮತ್ತೊಬ್ಬ ಸತಿಯು ಭೂಮಾಯಿ ಹೇಳಿದಳೊಂದು
ಚಿತ್ತಜ ಸಮರೂಪ ರಾಮ |
ಅರ್ತಿಯಿಂದೇರುವ ಬೊಲ್ಲನು ಸ್ವಪ್ನದಿ
ಸತ್ತುದ ಕಂಡೆ ನಿನ್ನಿರುಳು || ೧೧೦ ||

ಉತ್ತುಮ ಸತಿಯರ ನೋಡಿ ಇಂದಿಗೆ ನಿಮ್ಮ
ಮುತ್ತೈದೆತನಗಳು ಬತ್ತೆ |
ಚಿತ್ತಜ ಸಮರೂಪದ ರಾಮಳಿದನೆಂದು ಅವ
ರತ್ತೆ ಹೇಳಿದಳು ಸುದ್ದಿಯನು || ೧೧೧ ||

ಏನು ಕಾರಣ ರಾಮಳಿದನೆನ್ನುತಲಾಗ
ಮಾನಿನಿಯರೆಲ್ಲ ಕೇಳಿದರು |
ಏನೆಂದರಿಯೆ ರತ್ನಾಜಿ ಕಂಪಿಲನೊಳು
ಏನು ತಂತ್ರಗಳ ಹೇಳಿದಳೊ || ೧೧೨ ||

ಇಂದ್ರ ಮಹೇಂದ್ರಜಾಲವಹ ಳಿ ಕಂಪಿಲಗೆ
ಚಂದ್ರನ ಪೋಲ್ವ ರಾಮನನು || ೧೧೩ ||

ನಾವು [ಪಡೆದ] ಫಲವಿಷ್ಟೆಂದು ತಮ್ಮೊಳು
ತಾವೆ ಮಾತಾಡಿ ನಿಶ್ಚೈಸಿ
ಮಾವನಿದ್ದೆಡೆಗೈದು ಕಿಚ್ಚ [ಬೀಳು]ವೆವೆಂದು
ಭಾವಕಿಯರು ತೆರಳಿದರು || ೧೧೪ ||

ದುಕುಲವ ಸಣ್ಣ ನಡುವಿಗುಟ್ಟು ನವರ
ತ್ನ ಖಚಿತದಾಭರಣವನಿಟ್ಟು |
ಮಕರಂಕನರಸಿಯ ಪಳಿವಂತೆ ರಾಮನ
ಸಖಿಯರೆಲ್ಲರು ತೆರಳಿದರು || ೧೧೫ ||

ಪಿಡಿದು ಕಠಾರಿಯ ಬಲಗೈಯ್ಯಲೈವರು ಎಡಗೈಯ್ಯ
ಕನ್ನಡಿ ನಿಂಬೆ ವಸ್ತ್ರಗಳು |
ನಡೆದು ಬಂದರು ಕಂಪಿಲರಾಯನೋಲಗಕೆ
ತಡೆಯದೆ ಕಿಚ್ಚ ಬೇಡುವರೆ || ೧೧೬ ||

ನೋಡುತ ಕನ್ನಡಿಯನು ನಲಿದಾಡುತ
ಪಾಡುತಲಾಗ ರಾಮಯನ || ೧೧೭ ||

ಎಳೆಮೀಸೆ ಕೊನೆಮೀಸೆ ಬರುವಂಥ ಭೂಮಿಯ
ದಳಪತಿ ರಾಯರ ಗಂಡ |
ಕಳೆಯುಳ್ಳ ಚೆಲುವ ಚೆನ್ನಿಗರಾಮನೆನುತಲಿ
ನಲಿದು ಗಂಡನ ಪಾಡಿದರು || ೧೧೮ ||

ಭೀಮ ವಿಕ್ರಮ ರಾಮ ಬಿಟ್ಟಗಲುವರೆ ನಿ
ಸ್ಸೀಮಗೆ ಗುಣವಹುದೇನೊ || ೧೧೯ ||

ಖಾನ ವಜೀರರ ಮೇಲೆ ನೀ ದಂಡೆತ್ತಿ
ಏನ ಹೇಳದೆ ನಮ್ಮೊಡನೆ |
ಹೊನ್ನಂಬ ಬಿಟ್ಟು ಹೋದರೆ ನಾವು ಬಿಡುವೆವೆ ಹಾ!
ನಿನ್ನನಗಲಿ ಜೀವಪೆವೆ || ೧೨೦ ||

ಹಾ! ಎಮ್ಮ ಬಿಟ್ಟು ಅಗಲುವರೆ ಚಿನ್ನಿಗ ರಾಮ
ಹಾ! ನಿನ್ನ ಮುಖವನು ತೋರೋ |
ಇಂದು ರಾಮನ ಸಿಂಹದ ಮೇಲೆ ನೀ ಬಿಟ್ಟು
ಕೊಂದೆಯೊ ಕಂಪಿಲ ಮಾವ || ೧೨೧ ||

ಆವ ಠಾಣ್ಯಕೆ ರಾಮನ ಕಳುಹಿದೆ ಮಾವಾ
ಆವ ರಾಯರ ಮೇಲೆ ದಂಡ |
ಆವ ರಾಜ್ಯವನು ನೀ ದಾಳಿಯ ಮಾಡೆಂದು
ರಾಮನ ಕಳುಹಿದೋ ಮಾವ || ೧೨೨ ||

ಮಲೆವರಾಯರ ಪಿಡಿ ತರಹೇಳಿ ಈ ಕ್ಷಣ ಒಲಿದು
ಕಳುಹಿದೆಯಾ ಕಂಪಭೂಪ |
ಚೆಲುವ ರಾಮನ ಎಲ್ಲಿ ಕಳುಹಿದೆ ಎನುತಲಿ
ಬಲುಹಿಂದೆ ಕೇಳಿ ನುಡಿದರು || ೧೨೩ ||

ಬಲ್ಲಾಳರಾಯಗ ಬಳಿಗೆ ನೀ ಕಳುಹಿದೆಯೊ ಓ
ರ್ಗಲ್ಲ ಪ್ರತಾಪನ ಮೇಲೆ || ೧೨೪ ||

ಗುತ್ತಿಯ ಜಗದಪ್ಪರಾಯನ ಠಾಣ್ಯಕ್ಕೆ
ಮುತ್ತಿಗೆಯನು ಕಳುಹಿದೆಯೊ |
ಮೊತ್ತದಿ ಹುಳಿಯೇರ ಮಾರಗೊಂಡನ ಮೇಲೆ
ಒತ್ತಿ ಕಳುಹಿದೆಯೊ ರಾಮಯನ || ೧೨೫ ||

ಅಂಬಲಿಗಾಗಿ ಅಮೃತಾನ್ನವ ಚೆಲ್ಲಿದೆ
ಕಂಬಳಿಗಾಗಿ ದೇವಾಂಗವನು |
ಡೊಂಬಿತಿ ರತ್ನಿ ಮಾತನು ಕೇಳಿ ಮಾವಾಜಿ
ಕುಂಭಿನಿಪತಿಯ ಕೊಲ್ಲಿಸಿದೆ || ೧೨೬ ||

ಮಡದಿಯ ಮಾತ ನಿಶ್ಚಯಮಾಡಿ ಕಂಪಿಲ
ಕಡಿಯೆಂದು ಚೆಲುವ ರಾಮಯನ |
ನುಡಿದು ಅಪ್ಪಣೆಯಿತ್ತು ಕಳುಹಿದೆ ನಿನ್ನಯ
ಒಡಲು ಮರುಗದೆ ಮಾವಾಜಿ || ೧೨೭ ||

ಗಂಡನಾಜ್ಞೆಯ ಮೀ[ರ]ದ ಪತಿವ್ರತೆ
ಹೆಂಡಿರುಂಟಲ್ಲದೆ ಮಾವಾ |
ಹೆಂಡಿರ ಮಾತಿಗೆ ಸುತರ ಕೊಲ್ಲಿಸುವಂಥ
[ಗಂಡಂದಿರುಂಟೆ] ಲೋಕದೊಳು || ೧೨೮ ||

ಶಂಕೆಯಿಲ್ಲದ ನಮ್ಮ ಮುತ್ತೈದೆತನಗಳಿಗೆ
ಬೆಂಕಿಯನಿಕ್ಕಲಿಬಹುದೆ || ೧೨೯ ||

ತಂದೆ ಆಜ್ಞೆಯ ಮೀರಬಾರದು ಸತ್ಯಕ್ಕೆ
ಬಂದು ತಲೆಯ ಕೊಟ್ಟನೈಸೆ |
ಹಿಂದಣ ರಾಯರು ಮುಂದಣ ರಾಯರು
ಮುಂದೆ ನಿಲ್ಲುವರೆ ರಾಮಯನ || ೧೩೦ ||

ನಿನ್ನ ಅಪ್ಪಣೆಯಿಂದ ಕೊಂದ ಧರ್ಮಾತ್ಮಗೆ
ಎಂತು ಕೈ ಎದ್ದವೊ ಶಿವನೆ |
ಮನ್ನೆಯ ರಾಮನ ಮಡಗಿರ್ದರಾದರೆ
ಏನ ಬೇಡಿದರು ಕೊಡುವೆವು || ೧೩೧ ||

ಅಯ್ಯಯ್ಯೋ ರಾಮನ ಕೊಂದ ಪುಣ್ಯಾತ್ಮಗೆ
ಕೈಯೆಂತು ಎದ್ದವೊ ಶಿವನೆ |
ದೈವವೆ ಬಲ್ಲುದು ನಮ್ಮ ಸೂರೆಯನೆಂದು
ಐವರಾಡಿದರು ತಮ್ಮೊಳಗೆ || ೧೩೨ ||

ಕಕ್ಕೆಗಾಗಿ ಕಲ್ಪವೃಕ್ಷವ ಕೆಡಿಸಿದೆ
ಎಕ್ಕೆಗಾಗಿ ಬಾವನ್ನವನು |
ಚಿಕ್ಕಹೆಂಡತಿಯ ಮಾತನು ಕೇಳಿ ಮಾವಾಜಿ
ಲಕ್ಷಾಧಿಪತಿಯ ಕೊಲ್ಲಿಸಿದೆ || ೧೩೩ ||

ನಿಚ್ಚಟ್ಟ ರಾಮಯ್ಯ ಮುಂಚೆ ಹೋದನು ನಮ
ಗಾಶ್ಚರ್ಯವಾಯಿತು ಈಗ |
ನಿಶ್ಚಯಿಸಿರಾಮನ ಕೂಡೆ ಪೋಪೆವು ನಾವು
ಕಿಚ್ಚ ಪಾಲಿಸೊ ಕಂಪ ಮಾವಾ || ೧೩೪ ||

ಬೇಡಿ ನಿಮ್ಮತ್ತೇರ ಕೂಡಿನ್ನು ಸುಖದಲ್ಲಿ
ನಾಡ ಹಂಚಿಸಿ ಕೊಡಿಸುವೆನು |
ರೂಢಿಯೊಳಗೆ ರಾಮನ ಬಿಟ್ಟು ಇರುವುದು
ಖೋಡಿಯಲ್ಲವೆ ಕಂಪ ಮಾವಾ || ೧೩೫ ||

ರಂಡೆತನಕ ಬೇರೆ ರಾಜ್ಯವ ಕೊಡಿಸುವೆ
ಚಂಡಿತನವ ಮಾಡಬ್ಯಾಡ |
ಮಂಡಲದೊಳಗೆ ರಾಮನ ಬಿಟ್ಟು ಇರುವುದು
ಭಂಡಲ್ಲವೆ ಕಂಪ ಮಾವಾ || ೧೩೬ ||

ಆಡಿದ ಮಾತ ಕೇಳದೆ ಮೂರ್ಖತನ[ವನು]
ಮಾಡುತಿರಲು ಕೋಪದಲಿ |
ನೋಡು ಬೈಚಪ್ಪ ನೀನಿದಕೊಂದುಪಾಯವ
ಮಾಡೆಂದು ಮತ್ತೆ ನುಡಿದ[ನು] || ೧೩೭ ||

ಏನ ಕೇಳಿದರು ಕೇಳದ ರಾಮನಾಥನ
ಮಾನಿನಿಯರ ಕರೆದೊಯ್ದು ಮಾ |
ರನು ಮದನನು ಮ[ಡದಿಹ] ಠಾವಿಗೆ
ನೀನಿವರನು ಕಳುಹೆಂದ || ೧೩೮ ||

ಪೊಡವೀಶ ನುಡಿದ ಮಾತನು ಕೇಳಿ ರಾಮನ
ಮಡದಿಯರನು ಕರೆದೊಯ್ದು |
ತಡೆಯದೆ ಬುದ್ದಿಯ ಹೇಳಿ ತಮ್ಮರಮನೆಗೆ
ನಡೆಯೆಂದು ಕಳುಹಿ ಬೈಚಪ್ಪ || ೧೩೯ ||

ಸತ್ತನೆಂದೆನಬೇಡಿರಿ ನಿಮ್ಮೆಲ್ಲರ
ಚಿತ್ತದೊಳಗೆ ಇರಲೆಂದು |
ಮೃತ್ಯುಂಜಯನ ವರ ಕರುಣವು ರಾಮಗೆ
ಮತ್ತೆ ಬೈಚಪ್ಪ ಹೇಳಿದನು || ೧೪೦ ||

ರಾಮನ ಮಡದೇರ ಕೊಂದುದುಂಟಾದರೆ
ಭೂಮಿಭಾರದ ದಂಡುಬಹುದು |
ತಾಮಸೆ ಬೇಡರುದಿಂಗಳು ರಾಣಿವಾಸವು ನಿ
ಸ್ಸೀಮ ಪ್ರಧಾನ ತಿರುಗಿದನು || ೧೪೧ ||

ನಿಲ್ಲಬೇಕಾರು ತಿಂಗಳು ರಾಣಿವಾಸವು
ಕೊಲ್ಲಬಾರದು ರಾಯನೆನಲು |
ಬಲ್ಲಿದ ರಾಮುಗ ಸ್ತಾಮಾತಗೈದರೆಂ
ಬಲ್ಲಿದ ಸಂಧಿ ಪೂರಾಯ್ತು || ೧೪೨ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ವಿದಿತ ವಿಶ್ವಾಸದಿ ನೆಲಮಾಳಿಗೆಯೊಳು
ಮುದದಿಂಬಿಟ್ಟ ಸಂಧಿ ಮುಗಿಯೆ || ೧೪೩ ||

ಅಂತು ಸಂಧಿ ೧೯ಕ್ಕಂ ಪದನು ೨೦೩೫ಕ್ಕಂ ಮಂಗಳ ಮಹಾಶ್ರೀ