ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ದೇವ ಜಟ್ಟಂಗಿದೇವರ ಪಿಂಡ ರಾಮಯ್ಯ
ಕೋವಿದೆಪ್ಪತ್ತಿರಾಜನ |
ಅವನ ಬೊಲ್ಲನ ತಂದು ಕುಮ್ಮಟದೊಳು
ಭಾವಜ ರಾಮಯ್ಯನಿರಲು || ೨ ||

ಅತ್ತ ಹುಳಿಯೇರ ಮಾರಿಭೂಪನು ತನ್ನ
ಒತ್ತಿನ ಮನ್ನೆಯರೊಡನೆ |
ಚಿತ್ತಜರೂಪ ರಾಮನ ಕೊಡೆ ಕಾದುವ
ಅರ್ತಿಲಿ ಮಂತ್ರಿಯೊಳುಸುರೆ || ೩ ||

ಕೇಳುತ ಮಾತುಗಳನು ಶಿರೋಮಣಿ ತಾನು
ಬಹಳ ಹರುಷದಿಂದಲೆದ್ದು |
ವೀಳ್ಯವ ಎಕ್ಕಟಿಗರಿಗಿತ್ತನು ತಾನು
ಕೇಳಿದ ಕುಮ್ಮಟದರಸು || ೪ ||

ಮಾರಿಗೊಂಡನು ತನ್ನ ಮಂತ್ರಿಯೊಳುಸುರುತ
ಮೂರು ಮಾತುಗಳನಾಡಿದನು |
ಗಾರುಡವನು ಮಾಡಿ ಓರುಗಲ್ಲಿಗೆ ಹೋಗಿ
ವಾರುವ ತಂದನಂತೆ ರಾಮ || ೫ ||

ಅಲ್ಲಿ ತನ್ನಯ ಬಿರಿದುಗಳ ಕೊಂಡಾಡಿಸಿ
ಎಲ್ಲ ರಾಯರಗಂಡನೆಂದು |
ಇಲ್ಲದ ತಳ್ಳಿಗಳನು ಮಾಡಿ ಕಡಿದಾಡಿ
ನಿಲ್ಲದೆ ಓಡಿ ಬಂದನಂತೆ || ೬ ||

ಕಳ್ಳ ಬೇಡನಿಗಿಷ್ಟು ಕಾತರವೇಕೆನುತ
ವಿಳ್ಳಾಟವನು ಬಿಡಿಸುವೆನು |
ಬಳ್ಳಿ ತೋಟಿಗರು ಕೊಯ್ದಂತೆ ಕುಮ್ಮಟವನು
ಹಳ್ಳಿಯ ಮಾಡಿ ಆಳುವೆನು || ೭ ||

ಗುತ್ತಿಯ ಜಗದಪ್ಪರಾಯನ ಮಗಳನು
ಕತ್ತಿಲಿ ಗೆದ್ದು ತಂದೆನುತ |
ಸುತ್ತಣ ರಾಯರ ಗಂಡನೆಂದೆನಿಸು[ವ]
ಮೊತ್ತದ ಬಿರಿದ್ಯಾಕೆ ತನಗೆ || ೮ ||

ಸುತ್ತಣ ಸಣ್ಣ ಪಾಳೆಯಗಾರರಿಗೆಲ್ಲ
ಒತ್ತಿ ರಾಜ್ಯವ ಕಟ್ಟಿದಂತೆ |
ಮತ್ತೆ ನಮ್ಮ ಮೇಲೆ ಎತ್ತಿ ಬಂದರೆ ಇನ್ನು
ಮುತ್ತಿ ಹಿಡಿವೆನು ಕೈಸೆರೆಯ || ೯ ||

ಇಂತಪ್ಪ ಸುದ್ದಿಯ ಕೇಳಿ ರಾಮಯ್ಯನು
ಅಂತರಂಗದೊಳು ಕೇಳಿದನು |
ಪಂಥದಿ ಹುಳಿಯೇರು ರಣರಂಗ ಭಯವಾಯ್ತು
ಚಿಂತೆಯು ನಮಗೇತಕೆಂದ || ೧೦ ||

ಇತ್ತ ಸುದ್ದಿಯ ಕೇಳಿದನು ರಾಮಯ್ಯ
ಎತ್ತಿದ ಧ್ವಜ [ಪತಾ]ಕವನು |
ಮುತ್ತಿಗೆ ಹುಳಿಯೇರಿಗೆಂದು ಮನ್ನೆಯರನು
ಇತ್ತ ಶೃಂಗರಿಸಿ ರಾಮಯ್ಯ || ೧೧ ||

ಕರೆಸಿದ ತನ್ನ ಎಕ್ಕಟಿಗೆ ನಾಯಕರನು
ಕರೆಸಿದ ಕಂಪಿಲನರಸ |
ಕರೆಸಿದ ಮಂತ್ರಿ ಬೈಚಪ್ಪನ ಬೇಗದಿ
ಕರೆಸಿ ವೀಳ್ಯವನಿತ್ತ ರಾಮ || ೧೨ ||

ಅರುಸು ಮಂತ್ರಿಗಳೆ[ಲ್ಲ] ಎಕ್ಕಟಿಗರು ಎಲ್ಲ
ಬೆರಸಿ ಏಕಾಂತವಾಡಿದರು |
ತುರಗ ಕರಿಯು ಹರಿಗೆ ಭಟರುಗಳನು
ನೆರಹಿದ ಕಾಲಾಳು ಬೇಗ || ೧೩ ||

ಕರಿಯ ಸಾರಂಗನು ಕುಣಿಕಾಲ ಬೊಲ್ಲನು
ಬಿರಿದು ಬಿಂಕದ ಜಂಬನನು || ೧೪ ||

ಹುಳಿಯೇರ ಮಾರಿಗೊಂಡನ ಗಂಡನೆಂದೆಂಬ
ತಳುಕಿನ ಪದಕವನಿಟ್ಟು |
ಘಳಿಲನೆ ತೇಜಿಯನೇರಿ ತಾ ಹೊರಟನು
ಇಳಿದನು ಹೊರ ಪಯಣವನು || ೧೫ ||

ತಂದೆ ಕಂಪಿಲರಾಯಗೊಂದನೆಯನು ಮಾಡಿ
ಮುಂದೆ ತೆರಳಿದ ದಾರಿವಿಡಿದು |
ಬಂದು ಬಿಟ್ಟನು ದಂಡ ಗಂಡಿಬಾಗಿಲ ಮುಂದೆ
ಮುಂದಣುಜ್ಜುಣಿಯ ಬಯಲಿಗೆ || ೧೬ ||

ಇರುಳಲಲ್ಲಿ ಕಳೆದು ಸೂರ್ಯ ಉದಯವಾಗಲು
ತೆರಳಿ ಕೊಡಲಿಗೆಯೊಳಿಳಿದ |
ಭರದಿಂದ ಉಂಡು ಬೈಗಿನ ಪಯಣವು ಬೇಗ
ಬೆರಸಿ ನಡೆಯಿತು ದಂಡು ಮುಂದೆ || ೧೭ ||

ಭರದಿಂದ ನಾಲ್ಕು ಪಯಣವ ಹೋಗಿ ಮುಂದಕ್ಕೆ
ತೆರಳಿ ಕಣಜದಹಳ್ಳಿಯಲ್ಲಿ |
ನೆರೆಯಲ್ಲಿ ಬೀಡು ಬಿಟ್ಟರು ಪಾಳೆಯವನು
ಮರಿವುಂಟ್ಲು ಬೂದಿಹಳ್ಳಿಯಲಿ || ೧೮ ||

ಅಲ್ಲಿಂದ ಮುಂದಕ್ಕೆ ತೆರಳಿ ಬಂದನು ಬೇಗ
ಎಲ್ಲರು ಒಂದೆ ಒಗ್ಗಿನಲಿ || ೧೯ ||

ನಿಲ್ಲದೆ ಬಂದಿಳಿದನು ಹುಳಿಯೇರಿನ
ಬಲ್ಲಿದ ನಂದನ ವನದಿ |
ನಿಲ್ಲದಿತ್ತಲಿ ಹುಳಿಯೇರ ಮಾರನು ತಾ
ಮೆಲ್ಲನೆ ಕರೆ[ಸೆ] ಮಂತ್ರಿಯನು || ೨೦ ||

ಕರೆಯಲು ಬಂದ[ರು] ಮಂತ್ರಿಕರೆಲ್ಲ[ರು]
ಅರಸೆ ನೀ ಕರೆಸಿರುವುದೇನು |
ತರಿಸುಡುಗೊರೆಯ ಎಕ್ಕಟಿಗರೆಲ್ಲಕೆ ನೀನು
ಕರೆಸು ಮನ್ನೆಯ ಮಾಂಡಲಿಕರ || ೨೧ ||

ಊರ ಬಳಸಿ ರಾಮ ದಂಡ ಬಂದಿಳಿದನು
ತೋರುತ ತನ್ನ ಸಾಹಸವ |
ಭೋರನೆಪ್ಪತ್ತು ಮನ್ನೆಯರು ಸಹವಾಗಿಯೆ
ಊರಮಂದಿಳಿದನೆಂದೆನಲು || ೨೨ ||

ಇತ್ತ ರಾಮನು ಪರಿವಾರ ಸಹ ಊರ
ಹತ್ತಿರೆ ಇಳಿದನೀ ಕ್ಷಣಕೆ |
ಮತ್ತೆ ಹುಳಿಯೇರು ಭೂಪತಿ ತನ್ನ ಮನದೊಳ
ಗತ್ಯಂತ ಹರುಷ ತಾಳಿದನು || ೨೩ ||

ಸುತ್ತಣ ಮಾನ್ಯರಿಗೋಲೆಯ ಬರೆಸಿದ
ಮತ್ತೆ ಬೇಗ ಬನ್ನಿರೆಂದು |
ಮುತ್ತಿಗೆ ಹುಳಿಯೇರಿಗಾಗಲು ಭೂಪ ತಾ
ನಿತ್ತ ಮಾನ್ಯರ ಕರೆಸಿದನು || ೨೪ ||

ಎಲ್ಲಿಯ ಮುತ್ತಿಗೆ ಎತ್ತಣ ದಾಳಿಯು
ಬಲ್ಲಿದರಾರು ನಿನ್ನೊಡನೆ |
ನಿಲ್ಲುವನಾವ ರಾಯನು ನಿನಗೆ ಭೂಪತಿ
ಸೊಲ್ಲಿಸೆನ್ನೊಳು ಸವಿಮಾತ || ೨೫ ||

ಹೊಸಮಲೆಯನಾಳುವ ಕಂಪಿಲ ಭೂಪನ
ಕುಶಲ ಕುಮಾರ ಬಂದಿಹನೆ |
ಎಸೆವ ಸತ್ತಿಗೆ ನೆಳಲಲಿ ರಾಮನಾಥನು
ಮುಸುಗುತ ಬಂದನಾಹವಕೆ || ೨೬ ||

ಕರೆಸು ನಮ್ಮಯ ಪರಿವಾರ ಎಕ್ಕಟಿಗರ
ಅರಸುಮಕ್ಕಳು ಮಂತ್ರಿಯನು |
ವಿರಸಕೆ ನೆರೆದುದು ಪದಿನೆಂಟು ಸಾವಿರ
ಕರಿ ತುರಗವು ಏಳ್ನೂರು || ೨೭ ||

ಹಿರಿಯೂರನಾಳ್ವ ನರಸನ ಕರೆಸಿದ
ದೊರೆ ಮಾರಭೂಪಾಲನೊಲಿದು |
ಕುರುಸಾಣಿ ಬಾಗೂರು ಕಟ್ಟೆಯನಾಯ್ಕನ
ಪರಿವಾರ ನೆರೆದುದು ಆರುನೂರು || ೨೮ ||

ಮಾನ್ಯರು ಗೋವಿಂದನೊಡಗೊಂಡು ಸಾವಿರ
ಮುನ್ನೂರು ವಾರುವ ಸಹಿತ |
ಸಣ್ಣಕ್ಕಿ ಬಾಗೂರನಾಳ್ವ ನಾಯಕನಿಗೆ
ಮಾನ್ಯರು ಕುದುರೆಯ ಪೌಜು || ೨೯ ||

ಮನ್ನೆಯ ಮಾರುಭೂಪತಿಯ ಕೂಟಕೆ ಬಂದ
ಮುನ್ನೂರು ಕರಿಯ ಆರುನೂರು |
ಇನ್ನೊಂದು ಸಾವಿರ ಕಾಲ್ಬಲಕಧಿಕವು
ಮುನ್ನೂರು ಲಕ್ಷ ಪೈಟಣೆಯು || ೩೦ ||

ಸುತ್ತಲ ಅರಸರ ಕೂಟವ ಕೂಡಿಸುವ ಭೂಪ
ನೊತ್ತಿ ಲೆತ್ತವನಾಡುತಿರಲು |
ಮುತ್ತಿಗೆ ತೆಗೆಸಬೇಕೆಂದು ಯೋಚನೆಮಾಡಿ
ಅತ್ತ ಮನ್ನಯರು ಹಿಗ್ಗುತಲಿ || ೩೧ ||

ಲೇಸನಾಡಿದೆ ದೊರೆಗಳ ದೇವ ನಿನ್ನಯ
ಭಾಷೆಯ ಸಲಿಸುವೆನೆನಲು |
ವಾಸೆಯಿಂದಲಿ ಬಂದು ಅಸಗೋಡ ನಾಯಕ
ಲೇಸಿನ ವೀಳ್ಯವ ಪಿಡಿದ || ೩೨ ||

ಮುಂದಣ ವೀಳ್ಯವು ಅವಗೇಕೆ ಎನುತಲಿ
ನಿಂದ ಬಾಗೂರ ಓಬಯ್ಯ |
ಹಿಂದಣ ಹುಯ್ಯಲದೊಳು ತಾನು ಪಿಡಿದಿರ್ದ
ಚಂದ್ರವಂಕಿಯ ಬಿಟ್ಟು ಬಂದ || ೩೩ ||

ತಂದ ನಮ್ಮೊಳಗಿರ್ದ ಬಂಟ ಬಾಗೂರ ತಿಪ್ಪ
ಮುಂದ್ಯಾಕೆ ಅವನಿಗೆ ವೀಳ್ಯ |
ಅಂದ[ಣ]ವೇರಿಯೆ ಹೊರಟು ಬಂದನು ಹುಳಿಯೇರ
ನಂದ ರಾಯಿನಪಾಲ ಸಹಿತ || ೩೪ ||

ವೀಳ್ಯವ ಹಿಡಿದು ಎಕ್ಕಟಿಗರೆಲ್ಲ ಕೂಡಿ
ಭಾಳದ ಲಿಪಿ ಒರೆಸುವಂತೆ |
ನಾಳಿಯ ಹುಯ್ಯಲೊಳಗೆ ಎನ್ನ ನೋಡೆಂದು
ವೀಳ್ಯವ ರಾಯಿಪಾಲ ಹಿಡಿದ || ೩೫ ||

ಹಿಡಿದಂಥ ವೀಳ್ಯವ ತಡೆದ ಮನ್ನೂಲ ಮಾಡ
ಕಡುಗಲಿ ರಾಯಿಪಾಲ ಜರಿದ |
ಬಿಡು ಅವರಿಗ್ಯಾಕೆ ರಾಯಿಪಾಲನನ್ನು
ತೊಡರ ಬಾಪು[ರ] ಬಿಟ್ಟು ಬಂದ || ೩೬ ||

ಮನ್ನೂಲ ಮಾರ [ನ] ವೀಳ್ಯವ ತಡೆದನು
ಚೆನ್ನ ಕಂಪಿಲಿಯ ಸೋಮುಗನು |
ಇಂದಿವಗ್ಯಾಕೆ ವೀಳ್ಯವು ಎಂದು ಜರಿದನು
ತನ್ನ ಜಲ್ಲಿಯು ಬಿದ್ದಿರಲು || ೩೭ ||

ಇರದೆ ನಮ್ಮೊಳಗಿಹ ಬಂಟ ತಂದನು ಜೀಯ
ಕರೆದೇಕೆ ಅವನು ಮನ್ನಿಸಿದೆ |
ಹಿರಿಯೂರವ ಜಗಳದಿ ತನ್ನ ಬಿರಿದಿನ
ಸುರಗಿ ಮುಕ್ಕ[ಣ] ನ್ಯಾಜ್ಯವನು || ೩೮ ||

ತನ್ನ ಕೊರತೆಯ ತಾನರಿಯದೆ ನ್ಯಾಜ್ಯವ
ಭಿನ್ನವಿಲ್ಲದೆ ಬಿಟ್ಟುಬರಲು |
ಹೊನ್ನೂರ ಇರಪಯ್ಯ ತಂದನು ಇವಗ್ಯಾಕೆ
ಮುನ್ನಿನ ವೀಳ್ಯವಿತ್ತಯ್ಯ || ೩೯ ||

ತಡೆದನಾತನ ವೀಳ್ಯವನು ಇರುಪನು
ಕಡುಗಲಿಯಿಂದ ಸೋಮುಗನು |
ಬಿಡದೆ ಜಡಿದನು ಸುರಗಿಯ ಕೊಂಡುಬಂದನು
ನಡಗೂರ ಬಸವನೆಂಬನು || ೪೦ ||

ಬಸವನ ವೀಳ್ಯವ ತಡೆದನು ಅವನೊಬ್ಬ
ಬಸವಾಪುರದ ಬೊಮ್ಮಲಿಂಗ |
ಅಸಗೋಡ ಜಗಳದೊಳಗೆ ತನ್ನ ಬಿರುದನು
ಬಿಟ್ಟು ಬಂದನು ಅವಗ್ಯಾಕೆ || ೪೧ ||

ಅಸಹಾಯಶೂರನೆಂದೆಂಬ ಗರ್ವಿಕೆಯಲ್ಲಿ
ಉಸುರಿದ ದೊರೆಯ ಮಧ್ಯದಲಿ |
ಆದರೆ ಲೇಸನಾಡಿದೆ ಬೊಮ್ಮುಗ ನಿನ್ನ
ವಾದ ವಾದಿಯ ಗೆಲ್ಲಬೇಕು || ೮೨ ||

ಭೇದಿಸಿ ವೀಳ್ಯವ ಇವನಿಗೆ ಕೊಡಬೇಕು
ಕಾದಲೆ ಗಿರಿಯ ನೋಡಿದನು |
ಕಾದಲೆ ವೀಳ್ಯವ ಗಿರಿಯನು ತಡೆದನು
ಸಾಧನೆ ಸಿದ್ಧನ ಮಗನು || ೪೩ ||

ಬೇಧವಿಲ್ಲದೆ ರಣರಣದಿ ತನ್ನ ಕತ್ತಿಯ
ಮೂದಲಿಸಲು ಬಿಟ್ಟುಬಂದ |
ಮೇದುನಿಪತಿ ಕೇಳು ಇವಗ್ಯಾಕೆ ವೀಳ್ಯವು
ಹಾಯ್ದು ತಡೆದುಕೊಂಡ ಗಿರಿಯ || ೪೪ ||

ಕದುಬಿ ತಡೆದ ಮುರುಡಿಯ ಚೆನ್ನಸೋಮನು
ಮೊದಲು ವೀಳ್ಯವು ತನಗ್ಯಾಕೆ || ೪೫ ||

ಚೆನ್ನಸೋಮಯ್ಯನ ಜರಿದು ವೀಳ್ಯವ ತಾನು
ಮನ್ನೂಲ ಮಾಚ ತಾ ನುಡಿದ |
ಚೆನ್ನಾಯಿತಿವನ ಕೈಯೊಳಗಣಾಯುಧವನು
ಕನ್ನವೆಂಬವ ತೆಗೆದು ತಂದ || ೪೬ ||

ಕನ್ನನ ವೀಳ್ಯವ ತಡೆದನು ಬೂಟಕ
ಚಿನ್ನಮರುಳೆಯ ಪಾಪಯ್ಯ |
ತನ್ನ ಆಯುಧವನು ಬಿಟ್ಟು ಬರಲು ಬೇಗ
ಉನ್ನತ ಮೀನಿಗರ ಲಕ್ಕ || ೪೭ ||

ಬಿದ್ದ ಆಯುಧವನು ಗೆದ್ದು ತಂದನು ತಮ್ಮ
ಮುದ್ದು ಬಸವಯ್ಯನೆಂಬವನು |
ಗೆದ್ದು ವೀಳ್ಯಗಳನು ಪಿಡಿದು ಬಾರೋ ನೀನು
………… ತಮತಮಗಾಗ || ೪೮ ||

ಮೇದುನಿಯೊಳಗೆ ಇವಗ್ಯಾಕೆ ವೀಳ್ಯಗಳೆಂದು
ಮೂದಲಿಸುವ ತಮತಮಗೆ |
ವಾದಿಸಿ ವೀಳ್ಯವ ಪಿಡಿದರೊಬ್ಬೊಬ್ಬರು
ಅದುಕೊಂಡರು ಹೊಳಕೆಯಲಿ || ೪೯ ||

ಹೊಳಕೆಯ ಹಿಡಿದು ಬಂಟರು ಮಾರಭೂಪನ
ಕಲಹವ ಕಂಡು ತಮತಮಗೆ |
ಗಲಭೆಯ ನಿಲಿಸುತ ಹೊಳಕೆಯ ಬಂಟರು
ಸುಳುಹುದೋರುತ ಪರಬಲಕೆ || ೫೦ ||

ಏರಿತು ಹನ್ನೊಂದು ಸಾವಿರ ಭಟರ್ಗಳು
ವೀರ ರಾಮಯ್ನ ಕೆಣಕಿದರು || ೫೧ ||

ಭರದಿಂದಲೇರಿ ಮುತ್ತಿಗೆಯನು ತೆಗೆಸಿದರು
ದೊರೆ ಮಾರಭೂಪನ ಭಟರು |
ತೆರಳದೆ ಹಿಂದೆ ರಾಮನ ಪರಿವಾರವು
ನೆರೆದ ಬಂಟರನು ಬೆನ್ಹತ್ತಿ || ೫೨ ||

ಹುಯ್ಯಲ ಹಿಡಿದರು ರಾಮನ ಭಟರಾಗ
ಒಯ್ಯಾರದಲಿ ಭಟರೊಡನೆ |
ಕೈಯ್ಯಮಾಡುತ ರಣದೊಳು ಕಲಿಭಟರಾಗ
ಮುಯ್ಯೆಂದು ಕೆಡಹಿ ಮಾರ್ಬಲವ || ೫೩ ||

ಅರಿರಾಯ ಮಾರಮರ್ದನ ಚೆನ್ನರಾಮನು
ಧುರಗಲಿಗಳ ಕೂಡಿಕೊಂಡ |
ನೆರೆದ ಮಾರ್ಬಲದೊಳು ತುರುಗವ ನೋಡುತ
ಇರಿದು ರಾಹುತರನು ಕೆಡಹಿ || ೫೪ ||

ಶಿರಗಳನರಿದು ಚೆಂಡಾಡುತ ರಾಮನ
ಪರಿವಾರ ನಾಯಕರೆಲ್ಲ |
ತರಿದು ಗೋನಾಳಿಯ ಬಿಡಿಸುವ ಭಟರ್ಗಳ
ಉರುಬಿ ರಣವ ಹೊಕ್ಕರೊಡನೆ || ೫೫ ||

ಅರೆ ರಾಹುತ ಭಲಭಲರೆ ರಣರಂಗದಿ
ಸರಸರಿ ನಿಲ್ಲುನಿಲ್ಲೆನುತ |
ಧುರಧೀರ ರಾಮನ ಪರಿವಾರವೆಲ್ಲವು
ಪರಬಲದೊಳಗೆ ಮೂದಲಿಸೆ || ೫೬ ||

ಮುಂದಿಟ್ಟ ಕಾಲನು ಹಿಂದಕ್ಕೆ ತೆಗೆಯದೆ
ಸಂಧಿಸಿ ಮುಂದ[ಲೆ] ಹಿಡಿದು |
ಬಂದು ಹೊಕ್ಕರು ಹುಳಿಯೇರ ಮಾರನ ಬಲ
ಒಂದುಳಿಯದೆ ತರಿದೊಟ್ಟಿ || ೫೭ ||

ಅಟ್ಟಿ ಇರಿದು ತಲೆಯೊಟ್ಟಿ ಮೂದಲಿಸುತ
ನಿಟ್ಟೆಲುವುಗಳ ಮುರಿವುತಲಿ || ೫೮ ||

ಮುರಿದ ಬಲವನು ಸಂತೈಸಿ ಮಾರಭೂಪಾಲ
ವರದ ಎಕ್ಕಟಿಗರ ಕೂಡೆ |
ಸರಿದೊರೆಗಳು ಮುನ್ನೂರು ಮಂದಿಯು ಸಹ
ಹರಿದು ಹೊಕ್ಕನು ರಣದೊಳಗೆ || ೫೯ ||

ಮುರಿದ ಬಲವು ಮತ್ತೆ ತಿರುಗಿ ಬಾಹುದ ಕಂಡು
ತುರುಗವೇರಿದವೆಡಬಲದಿ |
ಹರಿಗೆಯ ಬಲ ಈಟಿ ಪೆಟಲು ಸಬಳಿಗರು
ನೆರೆದು ಹೊಕ್ಕರು ತಮತಮಗೆ || ೬೦ ||

ಉರುಬಿ ಹುಯ್ಯಲ ಹಿಡಿದರು ರಾಮನಾಥನ
ಚರರು ಡೊಕ್ಕನೆ ರಣದೊಳಗೆ |
ತರಿವರು ಶಿರವನೆ ಕಡಿಮಾಡಿ ರಣದೊಳು
ಕೊರೆದು ಕತ್ತಿರಿಸಿ ಕಾಳಿಜವ || ೬೧ ||

ಹೊಯ್ದು ಹೆಯ್ದೂರ ಹೊಗಿಸಿ ಮುತ್ತಿದ ರಾಮ
ಕಪ್ಪ ಕೊಳದೆ ಬಿಡೆನೆಂದ |
ಐದಾರು ಬಿಂದಿಗೆ ಹೊನ್ನು ಹೊನ್ನರಗಿಳಿಯ
ಸೈಮಾಡಿ ಕೊಡದೆ ನಾ ಹೋಗೆ || ೬೨ ||

ಜೇರು ಮುತ್ತಿಗೆಯ ಮಾಡಿಸಿದ ರಾಮಯ್ಯನು
ಆರು ಸಾವಿರ ಬಲ ಮುತ್ತಿ |
ಬ್ಯಾರೊಂದು ಕಡೆಯಲ್ಲಿ ಮೂರು ಸಾವಿರ ಬಲ
ಸೇರೀತು ಹುಲಿಮುಖವಿಡಿದು || ೬೩ ||

ಕುದುರೆಯ ಪೌಜೊಂದು ಕಡೆಯಲ್ಲಿ ನಿಲಿಸಿದ
ಚೆದುರ ಮಾನ್ಯರ ಕೂಡಿಕೊಂಡು |
ಕದನ ಕೋವಿದರು ದೊರೆ ಮಕ್ಕಳು ತಾವೆಂದು
ಸದನದೊಳಗೆ ಕಾದುಕೊಂಡು || ೬೪ ||

ಈ ರೀತಿ ಮುತ್ತಿಗೆ ಮಾಡಿ ರಾಮಯ್ಯನು
ದುರದೊಳು ತಾ ನಿಂತುಕೊಂಡು |
ಮಾರತಮ್ಮನು ಜರಿದು ದೂರಿಕೊಂಡಹನಲ್ಲ
ತೋರ ಹೇಳೆಂದ ರಾಮಯ್ಯ || ೬೫ ||

ತನ್ನ ಬಿರಿದುಗಳ ಕೊಂಡಾಡಿಸುತಲಿ ರಾಮ
ತನ್ನ ಮಾನ್ಯರ ಕೂಡಿಕೊಂಡು |
ಉನ್ನತ ಮುತ್ತಿನ ಸತ್ತಿಗೆ ನೆಳಲಡಿ
ಹೊನ್ನ ಹಂಚಿಸಿ ಕೊಡುತಿರ್ದ || ೬೬ ||

ಹುಳಿಯೇರ ಮಾರಗೊಂಡನ ಗಂಡನೆಂಬಂಥ
ಕೊಳಲು ತಪ್ಪಟೆ ಚಿನ್ನಗಾಳೆ |
ಚಳಿಯದೆ ಕೂಗುವ ಭಟರ ಧ್ವನಿಯ ಕೇಳಿ
ಒಳಗಿರ್ದ ಮಾರಭೂಪಾಲ || ೬೭ ||

ಕೂಗುವ ಬಿರಿದ ಕೇಳುತ ಮಾರಭೂಪನು
ಆಗ ತನ್ನೊಳಗತಿ ನೊಂದು |
ಬೇಗ ತನ್ನ ಮಂತ್ರಿ ಕಲ್ಲರಸನ ಕರೆಸಿದ
ಮುಂದಣ ರಾಜಕಾರ್ಯಕ್ಕೆ || ೬೮ ||

ಹೇಳುವುದೇನು ಕೇಳುವುದೇನು ನಾವಿನ್ನು
ಕೋಳು [ಹೋಯಿತು] ಹುಳಿಯೇರು |
ಧೂಳೂಗೋಡೆಯ ಮಾಡಿ ಕೆಡಿಸುವ ರಾಮನು
ನಾಳಿನ ದಿನದೊಳಗವನು || ೬೯ ||

ರಣಮಯವಾಯಿತ್ತು ರಾಜ್ಯದ ಬಲವೆಲ್ಲ
ಮುಣಗಿತು ಮಾನ್ಯರು ಸಹಿತ |
ಹೊಣಕೆಯ ಬಂಟರೆಲ್ಲರು ಅಳಿದು ಹೋದರು
ಕೆಣಕಿ ಮಾಡುವುದೇನು ನಾವು || ೭೦ ||

ಕಾರಣಿಕದ ರಾಮ ಪುಟ್ಟಿದ ಜಗದೊಳು
ಓರುಗಲ್ಲವ ತಾ ಗೆದ್ದ |
ಧಾರುಣಿಯೊಳು ಗುತ್ತಿ ಜಗದಪ್ಪರಾಯನ ಮಗಳ
ಕಾಳಗ ಗೆದ್ದು ತೆಕ್ಕೊಂಡ || ೭೧ ||

ಡಿಳ್ಳಿಯ ಸುರಿತಾಳನ ಪಾವುಗೆಗಳ
ನಿಲ್ಲದೆ ಮೆಟ್ಟಿದನಿವನು |
ಎಲ್ಲ ರಾಯರ ಸೀಮೆ ಒಳಹೊಕ್ಕು ಕಟ್ಟಿದ
ಸಲ್ಲದು ಅವನೊಳು ಕದನ || ೭೨ ||

ಈಗ ಅವನಿಗೆ ನಾವು ಬೇಗ ಪಗುಡಿಯ ಕೊಟ್ಟು
ಹೋಗೆಂದು ಕಳುಹುದೆ ಲೇಸು |
ಹಾಗಲ್ಲವೆಂದರೆ ನಿಮ್ಮ ಚಿತ್ತವು ಬಂದ
ಹಾಗೆ ಮಾಡುವೆನೆಂದ ಮಂತ್ರಿ || ೭೩ ||

ಆದರಾಗಲಿ ಅವನಿಗೆ ತಕ್ಕ ಮಾತನು
ಭೇದಿಸಿ ನೀನೊಂದು ಮಾಡು |
ಭೇದವಿನ್ಯಾತಕೆ ನಮ್ಮ ಬಲ ಮುರಿಯಿತು
ಕಾದುವರಿಲ್ಲ ಊರೊಳಗೆ || ೭೪ ||

ಸಾಯಕಗಳುವುಳ್ಳ [ಸೆ]ಳೆದುರುವಣಿಸುತು
ಪಾಯಕರೊಡನೆ ಮಾತಾಡಿ |
ಕೋಯೆಂದು ಕೊಟ್ಟು ಕಳುಹುದೆ ತಾನು ಬೇಡಿದುದ
ಮಾಡಿ ಕಳುಹಿದನಾಗ ಮಾತ || ೭೫ ||

ಹುಳಿಯೇರ ಮಾರಗೊಂಡನು ಕಪ್ಪವನಿತ್ತು
ಘಳಿಲನೆ ಸಮರಸವಾಗಿ |
ಅಳಿಕಿ ಬಿಂದಿಗೆ ಹೊನ್ನ ಐದೂರುಗಳನಿತ್ತು
ಗಿಳಿಯ ತಂದಿತ್ತು ಒಂದಾದ || ೭೬ ||

ಅತ್ತಲು ಮಾರಭೂಪನ [ಮೊ]ನೆಯೊಳಗೆ
ಮುತ್ತಿಗೆ ತೆಗಸಿ ರಾಮಯ್ಯ |
ಕೊತ್ತಲ ಚಿಂಚೆಯು ಕಣಜದಹಳಿಗಾಗ
ಮತ್ತೆ ತಿರುಗಿದನು ರಾಮಯ್ಯ || ೭೭ ||

ಮಗನ ನೋಡುವರೆ ತಾ ಮಂತ್ರಿಯ ಕರಕೊಂಡು
ಸೊಗಸಿಂದ ಬಂದ ಕಂಪಿಲನು |
ಅಗಣಿತವಾದಂಥ ಮಂದಿ ಕುದುರೆ ಸಹ
ಜಗಳವ ನೋಡಲಿ ಬಂದ || ೭೮ ||

ತಂದೆ ಬರುವುದ ಕೇಳಿ ಹಿಂದಕ್ಕೆ ತಿರುಗಿದ
ಬಂದ ಕಾರ್ಯವ ಮಾಡಿಕೊಂಡು |
ಒಂದಾಗಿ ಹುಳಿಯೇರ ಕಪ್ಪವ ತೆಕ್ಕೊಂಡು
ಮುಂದಕ್ಕೆ ನಡೆತಂದನಿದಿರ || ೭೯ ||

ಉತ್ತುಮ ಬೊಲ್ಲನ ಏರಿ ಕಾಟಿಗ[ರಿಗೆ]
ಮತ್ತೆ ಕರೆದ ರಾಮನಾಥ |
ಚಿತ್ತೈಸು ರಾಯ ಅರಿರಾಯಮಸ್ತಕಶೂಲ
ವೆತ್ತಣ ಪ್ರಯಾಣ ಪೇಳೆಮಗೆ || ೮೦ ||

ಅರಿರಾಯ ಮಾನಮರ್ದನಶೂಲ ನರಪತಿ
ಗಜಪತಿ ಅಶ್ವಪತಿಗಳ |
[ಪಿ]ರಿದೋರ್ಗಲ್ಲ ಪ್ರತಾಪರುದ್ರನ ಗಂಡ
ಕರಸಿದ್ಯಾತಕೆ ನಮ್ಮೆಲ್ಲರನು || ೮೧ ||

ಕಂಪಿಲರಾಯ ತನ್ನಯ ಕುಮಾರನ ಮಾತ
ಸಂಪಿಂದ ಕೇಳಿ [ನೀ ಒಡನೆ] |
ಮುಂ ಪರಿವುತ ಪೋಗಿ ಹುಳಿಯೇರ ಮಾರನ
ಚಂಪಕಮಾಲೆಯ ತಹೆಯಾ || ೮೨ ||

ಕಪ್ಪವ ಕೊಂಡು ಗಕ್ಕನೆ ರಾಮ ತಿರುಗಿದ
ಭೂಪಕರೊಡವೆರಸುತಲಿ |
ಅಪ್ಪಾಜಿ ಇ[ದ]ನೊಪ್ಪಿಸು ಮಂತ್ರಿ ನೀನು ಬೈ
ಚಪ್ಪನೆನುತ ರಾಮ ನುಡಿದ || ೮೩ ||

ರಾಮನಾಥನ ಪರಿತಾಪವ ಕಾಣುತ
ಪ್ರೇಮದಿ ಮಂತ್ರಿ ಬೈಚಪ್ಪ |
ಸಾಮ್ಯಗಳನು ಹೇಳಿ ಕಂಪಿಲರಾಯಗೆ
ಭೂಮಿರಾಯರಗಂಡನೆನುತ || ೮೪ ||

ಗುತ್ತಿಯ ಜಗದಪ್ಪನ ಮುರಿಯಲೊತ್ತಿದೆ
ಮತ್ತೆ ಒರ್ಗಲ್ಲವನ ಅಳಿದೆ |
ಇತ್ತಲಿ ಹುಳಿಯೇರ ಮಾರಿಗೊಂಡನ ಮೇಲೆ
ಒತ್ತಿ ಕಾದಿದೆ ರಾಮನಾಥ || ೮೫ ||

ಕೊಡದೆ ಬಾದ್ದೂರನ ಕಡಿದು ಸುರಿತಾಳನ
ಬಡಿದು ನೇಮಿಯನೆಲ್ಲ ತಾನು |
ಬಿಡದಪ್ಪಿ ಹುಳಿಯೇರ ಮಾರಗೊಂಡನ ಕೈಯ್ಯ
ತಡೆಯದೆ ತಂದೆ ಕಪ್ಪವನು || ೮೬ ||

ಕಪ್ಪದ ಬಿಂದಿಗೆ ಹೊನ್ನು ಪಂಜರಗಿಳಿಯನು
ಒಪ್ಪಿಸಿದನು ಮಾರಭೂಪ |
ಛಪ್ಪನ್ನ ದೇಶ ರಾಯರುಗಳ ಕೂಡೆ
ತಪ್ಪದೆ ಕಾದಿ ಗೆಲಿದ[ವ]ನು || ೮೮ ||

ಕಪ್ಪವ ಕೊಟ್ಟು ರಾಮನನೊಂದು ಮಾಡಿಕೊಂ
ಡೊಪ್ಪದಿ ಕಳುಹಿದನವರ |
ಅಪ್ಪಾಜಿ ಕೇಳು ನೀನಾಡಿದ ಮಾತಿಗೆ
ಕಪ್ಪವ ರಾಮಯ್ಯ ತಂದ || ೮೯ ||

ಎಂದ ಮಾತಿಗೆ ಹುಳಿಯೇರ ಮಾರಗೊಂಡನ ಕೈಯ್ಯ
ತಂದು ತೋರಿದನು ಕಪ್ಪವನು |
ಒಂದಾರು ಭುಜವಾಗಿ ಕಂಪಿಲರಾಯನು
ಬಂದ ರಾಮಯ್ಯನ ತಬ್ಬಿ || ೯೦ ||

ಹಂದೆ ಕುಮಾರರ ಕರೆದು ಕಂಪಿಲರಾಯ ಕೂ
[ಳ್ ಹಂದೆ] ಗಳಿರಾ ನೀವು |
ಕಂದ ರಾಮಯ್ಯ[ನು] ಪಿರಿದೆನಿಸುವ ಹಾ
ಗೆಂದು ನುಡಿದ ಕಂಪಭೂಪ || ೯೧ ||

ಅರಸು ಕಂಪಿಲರಾಯನೊಡನೆ ರಾಮಯ್ಯನು
ಬೆರಸಿ ಮಾತಾಡಿ ಸಂಭ್ರಮದಿ |
ಇರಿಸಿದ ಮಾರಭೂಪನ ಕೈಯ್ಯ ತಂದಂಥ
ಅರಗಿಳಿ ಕಪ್ಪವನೆಲ್ಲ || ೯೨ ||

ತಂದಿರಿಸಿದನು ಕಂಪಿಲರಾಯನ ಮುಂದೆ
ತಂದಿದ್ದ ಹೊನ್ನರಗಿಳಿಯ |
ಮುಂದರಿಯದ ಕುವರರೆಂದ ಮಾತಿಗೆ [ತಾನು]
ತಂದು ತೋರಿದನು ಕಪ್ಪವನು || ೯೩ ||

ತನ್ನ ಎಕ್ಕಟಿಗರು ಎಪ್ಪ[ತ್ತೆರ]ಳ್ಮನ್ನೆಯರು
ಮುನ್ನೂರು ವಾರುವ ಸಹಿತ |
ಚೆನ್ನ ರಾಮಯ್ಯನು ಏರಿ ಬೊಲ್ಲನ ಮೇಲೆ
ಸನ್ನೆಗಾಳೆಯ ಹಿಡಿಸಿದನು || ೯೪ ||

ಬಿರಿದಿನ ಕಾಳೆಯ ಕೇಳಿತ ಹರಿಯಮ್ಮ
ಹದಿರು ಬಂದಳು ಬೀದಿಗಾಗಿ |
ತರಳ ರಾಮಯ್ಯ[ಗೆಯ್ತ]ದಳು ಮಾರಮ್ಮ
ಎರಗಿ ಪಾದದ ಮೇಲೆ ಬಿದ್ದು || ೯೫ ||

ಅಣ್ಣ ರಾಮಣ್ಣನ ಕಾಣುತ ಮಾರಮ್ಮ
ಕಣ್ಣಹಬ್ಬವನು ನೋಡುತಲಿ |
ಸಣ್ಣವರೊಡಗೂಡಿ ತಂಗಿ ಸಿಂಗಮ್ಮನು
ಅಣ್ಣಗಾರತಿಯನೆತ್ತಿದರು || ೯೬ ||

ಆರತಿ ಎತ್ತಿ ಅಂಗಜ ರಾಮನಾಥಗೆ
ವೀರನಾರಿಯರೊಂದಾಗಿ |
ಭೋರನೆ ಅರಮನೆಗೈದು ಕನ್ನೆಯರನು
ಧೀರ ರಾಮಯ್ಯ ಕಳುಹಿದ || ೯೭ ||

ಕಳುಹಿದ ದೇವಿಸೆಟ್ಟಿಯ ಲಿಂಗಣ್ಣನ
ಕಳುಹಿದ ಭಾವ ಸಂಗಮನ |
ಕಲುಹಿದ ಮನ್ನೂಲ ಮಾಚನನಾಗ
ಕಳುಹಿದ ಕೊಳ್ಳಿ ನಾಗನನ || ೯೮ ||

ಕಳುಹಿದ ಬಾದೂರಖಾನನ ಮಂತ್ರಿಯ
ಕಳುಹಿದ ಅಣ್ಣ ಕಾಟಣ್ಣನ |
ಕಳುಹಿದ ಮಾದಿಗ ಹಂಪನ ಸಂಪನ
ಕಳುಹಿದ ಕಲಿ ಮುದ್ದುಗನ || ೯೯ ||

ಕಳುಹಿದ ಎಪ್ಪ[ತೆರಡು] ಮನ್ನೆಯರನು
ಕಳುಹಿದ ಹರಿಯಮ್ಮನವರ |
ಕಳುಹಿದ ತನ್ನಯ ಅರಮನೆಯನು ಹೊಕ್ಕು
ಲಲಗೆ ರಾಮಲದೇವಿ ಸಹಿತ || ೧೦೦ ||

ಒಲಿದರಮನೆಯ ಹೊಕ್ಕನು ರಾಮನಾಥನು
ಚೆಲುವ ಬಿರಿದಿನ ಮನ್ನೆಯರು |
ಗೆಲವಿಂದ ತಮ್ಮರಮನೆಯೊಳಗೆಲ್ಲರು
ಒಲಿದು ಹೊಕ್ಕರು ಅರ್ತಿಯಲಿ || ೧೦೧ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಚೆದುರ ರಾಮಯ್ಯ ಹುಳಿಯೇರ ಮಾರನ ಕೊಡೆ
ಒದಗಿ ಕಪ್ಪವ ತಾನು ತಂದ || ೧೦೨ ||

ಮುದರಿಂದ ಈ ಕೃತಿಯೊಳು ಮಾರಭೂಪನ
ಚೆದುರ ರಾಮಯ್ಯ ತಾ ಗೆದ್ದ |
ಕದನದಿ ಕಪ್ಪವ ತಂದು ತಂದೆಗೆ ಕೊಟ್ಟ
ಪದಗಳ ಸಂಧಿ ಪೂರಾಯ || ೧೦೩ ||

ಅಂತು ಸಂಧಿ ಕ್ಕ ಪದನು ೮೩೧ಕ್ಕಂ ಮಂಗಳ ಮಹಾಶ್ರೀ