ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ [ಕುಂಡಲ] ಶರಣೆಂಬೆ || ೧ ||

ಗಂಗೆಯ ಜಡೆಯೊಳು ಧರಿಸಿದ ಲಿಂಗನೆ
ತಿಂಗಳ ಸೂಡಿದಭವನೆ |
ಮಂಗಳಮೂರ್ತಿ ಪಾವಚರಿತನೆ
ಸಂಗಮೇಶ[ನೆ] ಸಲಹೆನ್ನ || ೨ ||

ನಾನು ರಾಮನ ಕೂಡೆ ಹೆಣಗುವಾಗಲೆ ಸಂಗಿ
ನೀ ನನ್ನ ಒದಗಿ ಬರಲಿಲ್ಲ |
ನಾನಾ ಕಾಲ ನಾ ಬಯಸಿದ ಬಯಕೆಯು
ಏನೂ ಕೈಸೇರಿದುದಿಲ್ಲ || ೩ ||

ಇಬ್ಬರು ಹಿಡಿದು ಬಾಗಿಲ ಮುಚ್ಚಿ ಒಬ್ಬನ
ತ[ಬ್ಬೆ] ಹೋಗಲಿ ಏನಹುದು |
ದಬ್ಬಿ ತರ್ಕೈಸಿ ದೈನ್ಯವ ಮಾಡಿ ಆಮೇಲೆ
ಇಬ್ಬರೊಂದಾಗಿ ಕೂ[ಡಿದೆನೆ] || ೪ ||

ಇದ್ದವನೊಬ್ಬನ ಇಬ್ಬರು ಹಿಡಿದರೆ
ಎದ್ದುಹೋಗುವ ರಾಮ[ನಾಥನ] |
ಬಿದ್ದು ಪಾದಕೆ ದೈನ್ಯವ ಆಡಿ ಆಮೇಲೆ
ಮುದ್ದು ಮಾತಿಂದ ಮೆಚ್ಚಿ [ದೆನೆ] || ೫ ||

[ಆಗಲೆ]ಕರೆದು[ಹೇಳಿ]ದಿಲ್ಲ ರತ್ನಾಜಿ
ಈಗ ಬಯಸಿದರೇನು ಬಹುದು |
ನಾಗಲಿಕನು ಚೆಲ್ವ ರಾಮಯ್ಯ ಬರುವನೆ
ಹೋಗಲೇತಕ ಮರೆಯೆಂದು || ೬ ||

ಎಂತು ಮರೆವೆನೆಲೆ ಸಂಗಾಯಿ ತುರುಗರೇ
ವಂತ ರಾಮಯ್ಯನ ಮೇಲೆ ಅ |
ನಂತ ಕಾಲವು ಬಯಕೆಯು ಎನ್ನ ಮನದೊಳು
ಚಿಂತೆ ಪರಿಹರಿದಿಲ್ಲ ಸಂಗಿ || ೭ ||

ಹಲವು ಪರಿಯಲಿ ಹಂಬಲಿಸುತ ರತ್ನಾಜಿ
ಮಲಗುವ ಸಜ್ಜೆಗೃಹದಲ್ಲಿ |
ಕೆಲಬಲದಲಿಯಿರ್ದ ತೆರೆಯ ಮಂಚದ ಸುತ್ತ
ಲಲನೆ ಆಲುತ ಕರೆದಳು || ೮ ||

[ಏರುಂಡ] ಹುಲಿಯಂತೆ ಚೀರಿ ನೆಲನ ಹಾಯ್ದು
ಮೀರಿದ [ಬಿಸಿಯ] ಕೋಪದಲಿ |
ಬೇರೆ ಬೇರೆಲ್ಲರ ಬೈವುತ ಹೊಯ್ವುತ
ನೀರೆ ಸೈವೆರಗಾಗಿ ನಿಂದು || ೯ ||

ಬರಿ ಮಾತ ಬಿಡು ಇನ್ನು ರಾಮನ ಹಂಬಲ ಕೆಡಹಿ
ಕೆಡಹಿ ಕೊರಳ ಕೊಯ್ಸುವೆನು || ೧೦ ||

ಅತ್ತು ಕಂಪಿಲರಾಯಗೆ ಚಾಡಿಯ ಹೇಳಿ
ಮತ್ತೆ ರಾಮನ ಪಿಡಿತರಿಸಿ |
ಒತ್ತಿ ಶಿರವನರಿಸಿದಲ್ಲದೆ ಉಂಡರೆ
ಹೊತ್ತವು ಮೊಲೆಯಲ್ಲ ಸಂಗಿ || ೧೧ ||

ಹಾರವ ಹರಿದಿಟ್ಟು ಸೀರೆಯ ಸೆಳೆದಿಟ್ಟು
ನಾರ ಸೀಳಿದ ಹಾಗೆ ಸೀಳಿ || ೧೨ ||

ಹೊಸ ಗಾಯವಾದವು ನಖರೇಖೆಗಳ ಮೇಲೆ
ಅಸಿಯಳ ತೋಳು ತೊಡೆಯೊಳು |
ಹುಸಿ ದಿಟವನು ಮಾಡಿ ಸೋಲಿಸುವೆನೆನುತಲಿ
ಮಸೆದಳು ಕದನದಾಯುಧವ || ೧೩ ||

ಮದನಹರನು ಬಲ್ಲಗೆನುತಲಿ ರತ್ನಾಜಿ
ಮದನಗೃಹಕೆ ಒದಗಿಳು |
ಹೊಟ್ಟೆಬೇನೆಗಳಾದಂತೆ ರತ್ನಾಜಿಯು
ಒಟ್ಟಿಸಿದಳು ಅಗ್ಗಷ್ಟಿಗೆಯ || ೧೪ ||

ಇರಲಿತ್ತ ಕಂಪಿಲರಾಯನ ಬೇಂಟೆಯ
ಪರಿಯ ಕೇಳುವುದು ಕೋವಿದರು || ೧೫ ||

ಬೆಟ್ಟದ ಮೇಲೆ ಬೇಂಟೆಯನಾಡಿ ಕಂಪಿಲ
ಬಿಟ್ಟನು ಮೊಲಕೆ ನಾಯಿಗಳ |
ಅಟ್ಯಾಡಿ ಹುಲಿ ಹಂದಿ ಸಾರಂಗ ಮೊದಲಾದ
ಒತ್ತಿ ಇರಿದು ಭಟರುಗಳು || ೧೬ ||

ಎಡಬಲದಲ್ಲಿ ಬಳಸಿ ಬೇಂಟೆಯನಾಡಿ
ಕಡು ಬೆಮರಿಲಿ ಬಳಿವಿಡಿದು |
ತೊಡರು ಕಲ್ಲಿಯೊಳು ನಾನಾ ಪಕ್ಷಿಗಳ ಹಾಕಿ
ನಡೆದವು ಬಂದಿಯ ಮೃಗವು || ೧೭ ||

ವನದ ಮೃಗಗಳನ್ನೆಲ್ಲ ಬಂಡಿಲಿ ಹೇರಿಸಿ
ಮೊನೆಗಾರ ಕಂಪಿಲರಾಯ |
ದಕ್ಕಡಿರಾಯರಗಂಡ ಕಂಪಿಲನೆಂದು
ಹೊಕ್ಕನು ಬಂದು ಕುಮ್ಮಟವ || ೧೮ ||

ಭೇರಿ ಮೃದಂಗ ತಂಬಟೆ ಕಹಳೆ ಹೊಡೆಸುತ
ಭೋರೆಂದು ನಾದಮಾಡಿದವು |
ತುಡುಮು ತಂಬಟೆ ಭೇರಿ ಗಿಡಿಬಿಡಿ ನಿಸ್ಸಾಳ
ಬಿಡದೊದರುವ ಚಿನ್ನಗಹಳೆ || ೧೯ ||

ಕೆಲರ ಕೈಯ್ಯಲಿ ಮೊಲ ಕೆಲರ ಕೈಯ್ಯಲಿ ಉಡ
ಕೆಲರ ಕೈಯಲಿ ನವಿಲುಗಳು |
ಕಂಪಿಲರಾಯ ಮನ್ನೆಯರಿತ್ತ ಸಹಿತಲಿ
ಸೊಂಪಿಲಿ ಹೊಕ್ಕ ಪಟ್ಟಣದ || ೨೦ ||

ಒಡೆಯ ಕಂಪಿಲ ಬೇಂಟೆಯ
ನಾಡಿ ಬಂದಾಗ ತವಕದಿಂದಲಿ ಅರಮನೆಗೆ |
ಪಡುವಣ ಸೂರ್ಯನು ಇಳಿವಂತೆ ಕಂಪಿಲ
ಒಡನೆ ಹೊಕ್ಕನು ಅರಮನೆಯ || ೨೧ ||

ಬಂದು ಹಜಾರದ ಮುಂದೆ ನಿಂದನು ರಾಯ
ಮಂದಿ ಮಾರ್ಬಲ ನೋಡಿದನು |
ನೊಂದು ಬೇಂಟೆಯನಾಡಿ ಬಳಲಿದಿರಿ ನೀವೆಂದು
ಎಂದು ಎಲ್ಲರ ಕಳುಹಿದನು || ೨೨ ||

ಕರೆಸಿದ ಬಾದೂರಖಾನನ ಕಂಪಿಲ ಈ
ಪರಿ ಬೇಂಟೆ ನೋಡೆನುತ |
ಷಡುಚಕ್ರವರ್ತಿಗಳು ಪೊಗಳುವರೆನ್ನಳವೆ
ಪೊಡವಿಪ ನಿಮ್ಮಯ ಬೇಂಟೆ || ೨೩ ||

ಹೋಗಿ ಬೈಚಪ್ಪ ಖಾನರು ಬಳಲಿದಿರೆಂದು
ಹೋಗಿರೈ ತೆಲುಗ ಮನ್ನೆಯರು || ೨೪ ||

ಹಿರಿಯರು ಮನೆಯ ಹೆಮ್ಮಕ್ಕಳು ಹರಿಯಮ್ಮ
ಹರಿವಾಣದಾರತಿ ಸಹಿತ |
ಪುರದೊಳಗುಳ್ಳ ನಾರಿಯರು ಆರತಿಗಳ
ಪಿಡಿದೆತ್ತಿ ಹರಸಿ ಕಂಪಿಲನ || ೨೫ ||

ಹೆಣ್ಣುಮಕ್ಕಳು ಚೊಕ್ಕ ಬಣ್ಣ ಬಂಗಾರವಿಟ್ಟು
ಪುಣ್ಯಸ್ತ್ರೀಯರುಗಳು ನಡೆದರು |
ಬಣ್ಣಿಸಿ ಪಾಡಿ ಭೂಪಾಲ ಕಂಪಿಲಗಗ್ರ
ಗಣ್ಯಗಾರತಿಯನೆತ್ತಿದರು || ೨೬ ||

ಚಿತ್ತದೊಲ್ಲಭೆ ಬಾರಳೆನುತ ಕಂಪಿಲರಾಯ
ಮತ್ತೆ ಮನದಲಿ ಅತಿ ನೊಂದು |
ಚಿತ್ತದಿಂ ಬವಣೆಗೊಳುತಲಾಗ ಭೂಪತಿ
ಒತ್ತಿ ನಡೆದನರಮನೆಗೆ || ೨೭ ||

ಮಾನಿನಿ ಮುನಿದಳೆನುತ ಕಂಪಿಲರಾಯ
ತಾನೈದಿದನರಮನೆಗೆ |
ಏನ ಬೇಡಿದಡೆ ಈವೆನು ಮನದಣಿವಂತೆ
ಭಾನುಸಖನ ಮುಖದವಳೆ || ೨೮ ||

ಚಿಕ್ಕರಮನೆಗೆ ಕಂಪಿಲರಾಯ ಬರುವಾಗ
ಇಕ್ಕಿತು ಗೌಳಿಯ ಶಕುನ |
ಸೊಕ್ಕಿದ ರತ್ನಿಯಸಜ್ಜೆಗೃಹವ ತಾನು
ಹೊಕ್ಕು ನೋಡಿದನು ಹೊಸಪರಿಯ || ೨೯ ||

ಹೊಸಪರಿಯಾಗಿದೆ ಮಂಡೆಗೆ ಮಸಿ ಪೂಸಿ
ಮಿಸುನಿಯ ಬಳೆಯೊಡೆದಿವೆ ಕೋ |
ಮುಸುಕಿದ ಕೋಪವಿದೇಕೆಂದು ಕಂಪಿಲ
ಬೆಸಗೊಂಡ ತನ್ನ ರಾಣಿಯನು || ೩೦ ||

ತನ್ನ ವಲ್ಲಭನ ಕಾಣುತಲಾಗ ರತ್ನಾಜಿ ಮೆ
ಲ್ಲನೆ ಮಂಚದೊಳಿರ್ದು ಕುಟಿಲ |
ಕುಟಿಲ ಮಾಯಗಳ ಮಾಯದೊಳಿಟ್ಟು ರತ್ನಾಜಿ
ಬಂದ ಗಂಡನ ಕೂಡೆ ಹೇಳಿ || ೩೧ ||

ಮುತ್ತಿನ ಹಾರವು ಹರಿದು ಕುರುಳ್ಗುಂದಿವೆ
ಹಸ್ತದ ಬಳೆ ಒಡೆದಿವೆ ಕೋ |
ಒತ್ತಿದ ನಖರೇಖೆ ಇವು ಎಲ್ಲಿಯವೆಂದು
ಮತ್ತೆ ಕೇಳಿದನು ಮಡದಿಯನು || ೩೨ ||

ಎಲೆ ಪ್ರಿಯಳೆ ಮಾಜಲಿಬೇಡ ಈ ಮೈಯ್ಯ
ಕಲೆಗಳೆಲ್ಲಿಯವು ನಿನ್ನಾಣೆ |
ಸುಮ್ಮನಿರಲು ಕಂಪಿಲರಾಯ ಬೆರಗಾಗಿ
ಗಮ್ಮನೆ ಮುಖವ ನೋಡಿದನು || ೩೩ ||

ಸತಿಯು ಕುಹಕವನು ಹೇಳಿದಳು ಗಂಡನ ಕೂಡೆ
ಹಿತವುಳ್ಳ ಮಗನು ನೀನೆಂಬೆ |
ಕಥೆಯ ಇನ್ನೆಂದು ಮರೆವೆ ಈಗ ಸಾವೆನು
ಸುತನು ಎಂಬುವನು ಎಣಿಸಿದನು || ೩೪ ||

ಬೇಟೆಗೆ ಬಾರದೊಂದಾಟವ ಕೈಕೊಂಡು
ನೋಟಕೆ ಚೆಂಡನಾಡಿದನು |
ಪಾಟಿಸಿ ಬಂದು ಮನೆಯಹೊಕ್ಕು ಮಾಡಿದ
ಮಾಟವ ಕೇಳು ಮಹರಾಯ || ೩೫ ||

ಚೆಂಡು ಬಿದ್ದ ನೆವದಿ ನಿನ್ನಯ ಮಗ ಬಂದು
ಬಂಡು ಮಾಡಿದನು ಮೈ ಕೆಡಿಸಿ |
ಹೊಕ್ಕು ಒಗತನವನು ಮಾಡಲಾರೆನು ನಾನು
ತಂದೆ ಮಗನಿಗೆ ಒಬ್ಬಳಾದೆ || ೩೬ ||

ಒಗತನವನು ಮಾಡಲರಿಯೆ ನಿನ್ನೊಳು ನಾನು
ನಗೆಗೇಡಲ್ಲವೆ ರಾಯ ನಿನಗೆ |
ನಗುವರ ಮುಂದೆ ನಿನ್ನಯ ಮಗ ಮಾಡಿದ
ಬಗೆಯ ನಾನೇನ ಬಣ್ಣಿಸುವೆ || ೩೭ ||

ನಿನ್ನ ಹೆಂಡತಿ ನಿನ್ನ ಮಗನಿಗೆ ಹೆಂಡತಿ
ವನಿತೆ ಒಬ್ಬಳಿಗಿಬ್ಬರುಂಟೆ |
ಮನದೊಳು ನೀ ನನ್ನ ಮೇಲಣಾಸೆಯು ಬೇಡ
ತನುಜಗೆ ಒಪ್ಪಿಸು ಎನ್ನ || ೩೮ ||

ಒಲ್ಲೆನೆಂದರೆ ಎನ್ನ ಬಲುಹಿಂದಲಪ್ಪಿದ
ಗಲ್ಲಕ್ಕೆ ರೇಖೆಯನೊತ್ತಿ |
ಸಲ್ಲದು ಇದು ಮಾತಲ್ಲವೆಂದರೆ ರಾಮ
ಚೆಲ್ಲಿದ ಬಿಡಿಮುತ್ತ ಹರಿದು || ೩೯ ||

ಹಿಡಿದೆಳೆದರೆ ಕೈಯ್ಯ ಮುರಿದು ಬಿಡಿಸಿಕೊಂಡೆ
ಒಡನೆ ಬಿಡದೆ ತೊಡರಿದನು |
ಬಿಡು ಪಾಪಿ ಹರಿಯಮ್ಮನೋಪಾದಿ ಎಂದರೆ
ಕಡುಪಾಪಿ ಅವನು ಅಂಜುವನೆ || ೪೦ ||

ಭಂಗಿಸೆನ್ನಂಗವ ಪಿಡಿದುಕೊಂಡಾಕ್ಷಣ
ಮುಂಗೈಯ್ಯ ಪಿಡಿದೆನ್ನನೆಳೆದ |
ಅಂಗಕ್ಕೆ ಹತ್ತಿರ ಬಂದೆನ್ನ ತುಡುಕಲು
ಭಂಗಕ್ಕೆ ಒಳಗಾದೆ ರಾಯ || ೪೧ ||

ಗಂಡನೆಂಬವ ಮುಪ್ಪು ಮಿಂಡಿ ಹೆಂಗಡು ನೀನು
ಪುಂಡರಿಕಾಕ್ಷಿ ಬಾರೆನುತ |
ದಂಡಿಸಿ ಮೈಯೇರಿ ಎಳೆದು ನಿನ್ನಯ ಮಗ
ಬಂಡು ಮಾಡಿದ ಮೆಯ್ಯ ಕೆಡಿಸಿ || ೪೨ ||

ಕಾವಲ ದುರ್ಗಕ್ಕೆ ಮತ್ತೊಬ್ಬರಿಲ್ಲದೆ
ಗಾವುದಿಗನ ಇರಿಸುವರೆ |
ಅಸಗೊಳ್ಳದಲೆ ರಾಮ ಮಾಡಿದ ಮಾಟಕ್ಕೆ
ಸೊಸೆಯಾದೆನು ರಾಯ ನಿನಗೆ || ೪೩ ||

ಕಳೆಯುಳ್ಳವನಾದರೆ ತನ್ನ ಹೆಂಡರಿಗೆ
ಜೋಕೆಯೊಳ್ಬಾಳಿಸಬೇಕು |
ಸಾಕಾಗಿ ಪ್ರಾಣವ ತೊರೆದು ಪರಸ್ತ್ರೀಯರ
ಸೊಕ್ಕಿ ಪಿಡಿವರೆ ಮುಂದಲೆಯ || ೪೪ ||

ಕುಂಭಕುಚವು ಬಿ[ಚ್ಚಿ]ಅಂಗವು ತೋರಲು
ತಿಂಗಳರೇಖೆಯ ಕಂಡ |
ಭಂಗಭಡಿಸಿದನು ನಿನ್ನಯ ಮಗ ಬಂದು
ಸಂಗಿಯ ಕೇಳು ಹೇಳುವಳು || ೪೫ ||

ಬಸುರೊಳು ಬರಬೇಕೆ ಮಗನಲ್ಲವೆ ತಾನು
ದಶಪಾತಕ ದ್ರೋಹಿ ಅವನು |
ಕುಸುರಿದರಿದು ತಲೆಯನು ತಾರದಿರ್ದರೆ
ವಿಷವ ಕೊಂಬೆನು ನಿನ್ನ ಮುಂದೆ || ೪೬ ||

ಎಂದ ಮಾತನು ಕೇಳಿ ಕಂಪಿಲರಾಯನು
ನೊಂದು ಕೋಪದಲುರಿದೆದ್ದು |
ಬಂದು ಭಂಡಾರಿ ಬುಕ್ಕಣ್ಣನ ಕರೆಸಿದ
ಇಂದೊಂದು ಕಂಪಿಲ ನುಡಿದ || ೪೭ ||

ಕರೆಸಿದಿರೇಕೆಂದು ಬಂದು ಭಂಡಾರಿಯು
ಕರೆಯೊ ಬೈಚಪ್ಪನ ಬೇಗ |
ಬರಹೇಳು ಬೇಗದಿ ತಡೆಯದೆ ಎಂದಾಗ
ಇರದೆ ಅಟ್ಟಿದನರಮನೆಗೆ || ೪೮ ||

ಬಂದು ಭಂಡಾರಿಯು ಬೈಚಣ್ಣನ ಕೂಡೆ
ನಿಂದು ಬಿನ್ನಹವ ಮಾಡಿದನು |
ಕಂದ ರಾಮಯ್ಯನ ಕೊಲ್ಲಬೇಕೆನುತಲಿ
ನಿಂದು ಇಹನೆ ಕಂಪಿಲನು || ೪೯ ||

ಸತಿಯು ಕುಹಕವ ಹೇಳಲು ಗಂಡನ ಕೂಡೆ
ಸುತನ ಕೊಲಲೆಂಬ ಕಂಪಿಲನು |
ಕತೆಯಾಯಿತು ಇಂದಿಗೆ ಕಾಂತಿ ಅಳಿದಿತು
ಹತವಾಯಿತು ಕುಮ್ಮಟವು || ೫೦ ||

ಕರೆಸಿದಿರೇಕೆಂದು ಬೈಚಪ್ಪ ಬಂದಿನ್ನು
ಹೊರೆಯಲ್ಲಿ ಬಿನ್ನೈಸಿದನು |
ಧರೆಯೊಳಗಿಲ್ಲದ ಪಾಪವ ಮಾಡಿದ
ಹಿರಿಯಾಕೆಯ ಮಗ ರಾಮ || ೫೧ ||

ಮಗ ರಾಮ ಮಾಡಿದ ಹಗರಣವನು ಕೇಳು
ಜಗಕೊಂದು ಕಥೆಯ ಮಾಡಿದನು |
ಜಗದೊಳಗಿಲ್ಲದ ಪಾಪವನೆಣಿಸಿದ
ನಘಧರ ಚೆನ್ನಿಗರಾಮ || ೫೨ ||

ಎತ್ತಣ ಮಾತು ಎನುತಲಿ ಬೈಚಪ್ಪ
ಒತ್ತಿ ಕೇಳಿದನೊರೆದೊರೆದು |
ಹೆತ್ತ ಮಗನು ಕುಮಾರ ರಾಮಯ್ಯನು
ತ್ತದೊಳೆಣಿಸುವನಲ್ಲ || ೫೩ ||

ತಂದೆಯ ಕಾಲದ ಹಿರಿಯನಲ್ಲವೆ ನೀನು
ಬಂದು ನೋಡರಮನೆಯೊಳಗೆ |
ಕೊಂದು ರಾಮನ ಅಂಗವ ತಾರದಿರ್ದರೆ ಈ
ನಿಂದ್ಯವ ನೀನೆ ಮಾಡಿದೆ || ೫೪ ||

ಹೇಳಿದ ಮಾತನು ಕೇಳುತ ಬೈಚಪ್ಪ
ತಾಳಿದ ಮನದಲ್ಲಿ ನೋವ |
ಹಾಳಾಯಿತು ಹೊಸಮಲೆಯು ಕುಮ್ಮಟವೆಂದು
ಹೇಳಿ[ದ] [ತ]ನ್ನೊಳು [ತಾ]ನು || ೫೫ ||

ಒಡೆಯನ ಮಾತನು ಮೀರದೆ ಬೈಚಪ್ಪ
ನುಡಿದು ಹೇಳಿದನೊಂದು ಮಾತ |
ಹಿಡಿದನು ಕತ್ತಿಯ ಮಂತ್ರಿಶಿರೋಮಣಿ
ನುಡಿದನು ಕಂಪಿಲನೊಡನೆ || ೫೬ ||

ದೇವ ಕಂಪಿಲರಾಯ ನಿಧಾನಿಸಿ ನೋಡು
ತೀವಿ ಕೋಪದ ಮನಸಿನಲಿ |
ಕಾವುದಿಲ್ಲವೆ ಒಮ್ಮೆ ಎನುತ ಪ್ರಧಾನರ
ದೇವ ನುಡಿದನು ಕಂಪಿಲಗೆ || ೫೭ ||

ಇಂದೇನು ನೋಡುವೆನೆನುತಲಿ ಕಂಪಿಲ
ತನ್ನ ಮಗನ ಕೋಪದಲಿ |
ಚೆನ್ನರಾಮನ ಈ ಕ್ಷಣ ಕೊಲ್ಲದಿರ್ದರೆ
ನಿನ್ನ ಮೇಲಾಣೆಯೆಂದೆನುತ || ೫೮ ||

ಒಡೆಯ ಕಂಪಿಲರಾಯನ ಮಾತ ಕೇಳುತ
ಹಿಡಿಯಬೇಕೆಂದು ಬೈಚಪ್ಪ |
ತಡೆಯದೆ ತನ್ನರಮನೆಗೆ ಬಂದನು ಬೇಗ
ಬಿಡದೆಣಿಸಿದನು ಬುದ್ಧಿಯನು || ೫೯ ||

ಬಂದು ಪ್ರಧಾನಿಗಳರಸ ತನ್ನರಮನೆಗೆ
ಒಂದು ಬುದ್ಧಿಯನೆಣಿಸಿದನು |
ಕುಂದದೆ ತಾನು ನೆನೆದು ತನ್ನ ಮನದೊಳು
ಕಂದರ್ಪರೂಪನ ಮೇಲೆ || ೬೦ ||

ಹುಲಿಯಡಗಿದ ಮೆಳೆಯಂತಿರ್ದ ರಾಮನ
ಕೊಲುವರೆ ಕೈಯೇಳವೆಂದ |
ಚೆಲುವರ ಗಂಡ ಚೆನ್ನಿಗ ರಾಮನಳಿದರೆ
ಲಲನೆಯರೆಂತು ಬಾಳುವರು || ೬೧ ||

ದಿಟ್ಟ ಚೆನ್ನಿಗರಾಮನಳಿದರೆ ಸುದ್ದಿಯು
ಹುಟ್ಟದಿಹುದೆ ಡಿಳ್ಳಿಯೊಳಗೆ |
ನೆಟ್ಟನೆ ತುರುಕರ ಮಾರ್ಬಲ ಕೂಡಿಬಂದರೆ
ತೊಟ್ಟು ಕಾದುವರಿನ್ನಾರು || ೬೨ ||

ಕಟ್ಟಾಳು ರಾಮನ ಮಡಗಿ ಕಾರ್ಯವ ಕಾಬೆ
ಬೆಟ್ಟ ಕುಮ್ಮಟವನುಳುಹುವೆನು |
ದಿಟ್ಟ ಕಂಪಿಲಗೆ ಆಪತ್ತು ಬಂದಾಗಲೆ
ಕೊಟ್ಟವ ರಾಮನ ತೋರು[ವೆ] || ೬೩ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ವಿಧಿಮುಂಡೆ ರತ್ನಿ ರಾಮನ ಕೊಲ್ಲಹೇಳಿದ
ಪದಗಳು ಮುಗಿಯೆ ಸಂಪೂರ್ಣ || ೬೪ ||

ಅಂತು ಸಂಧಿ ೧೮ಕ್ಕಂ ಪದನು ೧೮೯೩ಕ್ಕಂ ಮಂಗಳ ಮಹಾಶ್ರೀ