ಶ್ರೀ ಗಿರಿಜಾ [ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ]ಶರಣೆಂಬೆ || ೧ ||

ರಾಮನ ನೆನೆ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆನೆ ಕಂಡ್ಯಾ ತನುವೆ |
ರಾಮರಾಮಾ ಎಂಬ ನಾಮವ ನೆನೆದರೆ
ಕಾಮಿತಫಲವೀವ ರಾಮ || ೨ ||

ಸಕ್ಕರೆ ಸವಿದಂತೆ ಮಧುರ ಮಾವಿನಹಣ್ಣು
ಉಕ್ಕುವ ತನಿರಸದಂತೆ |
ಮಕ್ಕಳ ಮಾಣಿಕದಂತೆ ರಾಮನ ಕೃತಿ
ಸತ್ಕವಿಗಳು ಲಾಲಿಪುದು || ೩ ||

ತನ್ನರಮನೆಯಿಂದ ಬಂದನು ಕಾಟಣ್ಣ
ಚೆನ್ನ ರಾಮುಗನಿದ್ದೆಡೆಗೆ |
ಸಂತೋಷದಿಂದ ರಾಮಯ್ಯನಿದಿರಿನಲ್ಲಿ
ಬಿನ್ನೈಸಿದನಿಂತೆಂದು || ೪ ||

ಅರಿಯೆದೆ ಬಲ್ಲಾಳ [ಮೂರು]ರಾಯರಗಂಡ
ಪರಬಲ ನಿರ್ಧೂಮಧಾಮ |
ಎರಡೆಂಟು ದಿಕ್ಕಿಗೆ ವಾರ್ತೆಯಾಗಿಹುದಯ್ಯ
ಹರಿಯಮ್ಮನೊಶದಲಿದೆ ಚೆಂಡು || ೫ ||

ಅದ ತರಬೇಕು ಚೆನ್ನಿಗರಾಮ ನೀನೆಂದು
ಚದುರ ಕಾಟಣ್ಣ ತಾ ನುಡಿದ || ೬ ||

ಹೊತ್ತುಹೋಗದು ಚೆಂಡನಾಡಬೇಕೆನುತಲಿ
ಮತ್ತೆ ಆಯತವಾದ ರಾಮ |
ಮುತ್ತಿನ ವಾಲು ಚಿಮ್ಮುರಿ ಸುತ್ತಿ ರಾಮಯ್ಯ
ಮತ್ತಿಟ್ಟ ಸಣ್ಣ ನಾಮವನು || ೭ ||

ನಿಲುವುಗನ್ನಡಿಯ ನೆಳಲ ನೋಡಿ ರಾಮಯ್ಯ
ರುಳಿಯ ಪದಕವನಿಟ್ಟನೊಲಿದು |
ಸುಲಲಿತವಾದ ಕಂಠಮಾಲೆಯ ಧರಿಸಿದ
ಕಲಿಗಳರಸ ಚೆನ್ನರಾಮ || ೮ ||

ಸೂರ್ಯನ ಕಿರಣಕೆ ಸರಿಯಾದ ಪದಕವ
ವೀರ ರಾಮುಗನಿಟ್ಟುಕೊಂಡು || ೯ ||

ಎಳೆ ಮಿಂಚು ಹೊಳೆವಂತೆ ನೀಲನಾಮವನಿಟ್ಟ
ಕಳೆಯು ಏರಿದ ಚಂದ್ರನಂತೆ |
ಕಳಕಳಿಸುವ ಮುಖಕಾಂತಿ ರಂಜಿಸುತಿರೆ
ಬಲವಂತ ರಾಮನೊಪ್ಪಿದನು || ೧೦ ||

ಮೊರೆಯ ಹೊಕ್ಕವರ ಕೊಡುವ ರಾಯನ ಗಂಡ
ಧರೆಯೊಳು ನೇಮಿಯಮಿಂಡ |
ಮೊತ್ತದ ಖಾನಖಾನ ಮಲುಕರಗಂಡ
ಮುತ್ತಿನ ಖಡೆಯವನಿಟ್ಟ || ೧೧ ||

ಇನ್ನು ಮುನ್ನಿನ ರಾಮದೇವ ತಾನಲ್ಲದೆ
ಚೆನ್ನ ರಾಮಗೆ ಸರಿಯಿಲ್ಲ |
ಭಿನ್ನವಿಲ್ಲದೆ ಪರರಾಯರಗಂಡನೆಂದೆಂಬ
ರನ್ನದ ಖಡೆಯವನಿಟ್ಟ || ೧೨ ||

ಮಾಳವ ರಾಯರ ಗಂಡನೆಂದೆನಿಸುವ
ನೀಲಕಂಕಣ ರಾಮನಿಟ್ಟ |
ಸಾಳುವ ರಾಯರ ಗಂಡನೆಂಬವದೊಂದು
ತೋಳಬಾಪುರಿನಿಟ್ಟ ರಾಮ || ೧೩ ||

ಕನ್ನೋಜಿರಾಯರ ಗಂಡನೆಂದೆನಿಸುವ
ಉಂಗುರವನು ಇಟ್ಟ ರಾಮ |
ಮುಂಗುಲಿರಾಯರ ಗಂಡನೆಂಬವದೊಂದು
ಮುಂಗೈಯ್ಯ ಸರಪಳಿಯನಿಟ್ಟ || ೧೪ ||

ಪಡುವಲರಾಯರ ಗಂಡನೆಂದೆನಿಸುವ
ಕಡುಕು ತೊಂಗಲನಿಟ್ಟ ರಾಮ |
ಬಡಗಲ ರಾಯರ ಗಂಡನೆಂಬುವದೊಂದು
ಕಾಲಪೆಂಡೆವನಿಟ್ಟ ರಾಮ || ೧೫ ||

ಕೊಟ್ಟ ಭಾಷೆಗೆ ತಪ್ಪುವ ರಾಯರ ಗಂಡ
ದಿಟ್ಟ ರಾಮುಗ ಕರದಿಂದ |
ದೃಢಗಲಿ ನೇಮಿಯ ಗಂಡನೆಂಬುವದೊಂದು
ಎಡದ ಪಾದದ ಬೊಂಬೆ ಮೆರೆಯೆ || ೧೬ ||

ದಿಕ್ಕು ದೇಶದೊಳುಳ್ಳ ಮೊಗಲ ದೇವಾಂಗವ
ಬಿಗಿದುಟ್ಟ ಮಲ್ಲಗಾಸೆಯನು || ೧೭ ||

ಇತ್ತ ರಾಮುಗ ಶೃಂಗಾರವಾಗಲು ಕಂಡು
ಮತ್ತೆ ರಾಮಲದೇವಿ ನೋಡಿ |
ಮುತ್ತಿನಾರತಿಯ ರಚಿಸಿ ತಂದಳು ಬೇಗ
ಎತ್ತಿ ಚಾಂಗುರೆ ಭಲನೆರಲು || ೧೮ ||

ಸಾರಿದವರ ಕಾಯ್ವ ಮೀರದವರ ಕೊಲ್ವ
ಒರುಗಲ್ಲಿಗೆ ಕೋಳಹಳ |
ವೀರ ಕುಮಾರ ರಾಮಗೆ ಸರಿಯಿಲ್ಲೆಂದು
ಚೀರುವ ಕಹಳೆ ಕೂಗಿದವು || ೧೯ ||

ಹುಳಿಯೇರ ಮಾರಿಗೊಂಡ[ನ ಗಂಡ]ನೆಂದೆಂಬ
ಭಾರಿ ಪದಕವನಿಟ್ಟ ರಾಮ |
ಬಲ್ಲಾಳ ರಾಯರ ಗಂಡನೆಂಬ … ಮುಂತಿನ
ಕಾಲಪೆಂಡೆವನಿಟ್ಟ ರಾಮ || ೨೦ ||

ಪಟ್ಟಸಾಲಿಗಾಗಿ ಬಂದನು ರಾಮಯ್ಯ
ಕಟ್ಟಿಗೆಕಾರರ ಕರೆಸಿ |
ಪಟ್ಟಣದೊಳಗುಳ್ಳ ಮಂತ್ರಿ ಮನ್ನೆಯರನು
ತೊಟ್ಟು ಶೃಂಗಾರವಾಗ ಹೇಳೋ || ೨೧ ||

ಎಂದ ಮಾತನು ಕೇಳಿ ಕಟ್ಟಿಗೆಕಾರರು
ಬಂದರು ಕೇರಿಕೇರಿಯಲಿ |
ಮಂದಿಯ ಹೊರಡ ಹೇಳಿದ ರಾಮನಾಥನು
ಇಂದು ಚಂಡಾಟವಾಡುವರೆ || ೨೨ ||

ಗಮ್ಮನೆ ಆ ಮಾತ ಕೇಳುತ ಕೆಲಬರು
ಉಮ್ಮಾಯದೊಳು ಶೃಂಗರಿಸಿ || ೨೩ ||

ಒತ್ತಿ ಬಂದರು ಮತ್ತೆ ರಾಮಗೆ ಬಿನ್ನೈಸ
ಲಿತ್ತನೆಲ್ಲರಿಗೆ ವೀಳ್ಯವನು |
ಇತ್ತ ಮನ್ನೆಯರನು ಕೂಡಿಕೊಳ್ಳುತ ರಾಮ
ಹೆತ್ತ ತಾಯರಮನೆಗಾಗಿ || ೨೪ ||

ಮುತ್ತಿನಂದಣವೇರಿ ಹೊರಟನು ರಾಮಯ್ಯ
ಅರ್ತಿಲಿ ಚೆಂಡ ಬೇಡುವರೆ || ೨೫ ||

ಐವರು ಮನ್ನೆಯರು ಸಹವಾಗಿ ಬಂದನು
ಕೈಯ್ಯ ಮುಗಿದು ಹರಿಯಮ್ಮಗೆ |
ಹುಯ್ಯಲ ಲೆಗ್ಗೆಯ ಕಲಿಯಬೇಕೆನುತಲಿ
ಒಯ್ಯನೆ ಬಿನ್ನೈಸಿದನು || ೨೬ ||

ಬಂದ ಮಗನ ನೋಡಿ ಒಂದಾರು ಭುಜವಾಗಿ
ಗಂಧ ಪರಿಮಳವನು ಕೊಡಿಸಿ |
ಚಂದ್ರನ ಕಳೆಯ ರಾಮ ಕೋ ಎನುತಲಿ
ತಂದು ವಿಳ್ಯವ ಕೊಟ್ಟಳಾಗ || ೨೭ ||

ಎಲ್ಲಿಗೆ ಪ್ರಯಾಣವಿದೇಕೆ ಶೃಂಗರವಾದೆ
ಸೊಲ್ಲಿಸೆನ್ನೊಡನೆ ರಾಮುಗನೆ |
ಗಲ್ಲವ ಪಿಡಿದು ಮುದ್ದಿಸಿ ಹರಿಯಮ್ಮನು
ನಿಲ್ಲದೆ ಕೇಳಿದಳು ಮಗನ || ೨೮ ||

ಹೆತ್ತತಾಯೆ ಕೇಳು ಹಂಪೆಯ ಹೊಳೆಯಲ್ಲಿ
ಅತ್ತ ಮಾನ್ಯರ ಕೂಡಿಕೊಂಡು |
ಮತ್ತೆ ನೀರಾಟವಾಡಿ ಬಳಲಿ ಬಂದೆ
ಹೊತ್ತುಹೋಗದು ಕಾಣಮ್ಮ || ೨೯ ||

ಲೆತ್ತ ಪಗಡೆ ಜೂಜನಾಡಿದೆವಮ್ಮಾಜಿ
ಮತ್ತೆ ಆಡಿದೆವು ಚದುರಂಗವನು |
ಮುತ್ತೈಯ್ಯ ಮುಮ್ಮಡಿ ಸಿಂಗನ ಕಾಲದ
ಮುತ್ತಿನ ಚೆಂಡದೆಯಂತೆ || ೩೦ ||

ಆರ್ತಿಯಿಂದಲಿ ಅದ ಆಡಿನೋಡುವೆ ತಾಯೆ
ಇತ್ತು ಎಮ್ಮಗಳ ಕಳುಹಮ್ಮ || ೩೧ ||

ನೆಟ್ಟನೆ ಆ ಮಾತ ಕೇಳುತ ಹರಿಯಮ್ಮಗೆ
ನಿಟ್ಟೆಲು ಮುರಿದವಾಕ್ಷಣದಿ |
ಕೆಟ್ಟೆನೊ ಮಗನೆ ಎನಗೆ ಮಾರಿಯಾಯಿತ್ತು
ಹುಟ್ಟಿದ ದಿನ ಬಂತು ಶಿವನೆ || ೩೨ ||

ಮರೆದು ಹೋದ ಚೆಂಡ ಅರುಹಿದರಾರಪ್ಪ
ನೆರೆಗಲಿ ಚೆನ್ನಿಗರಾಮ || ೩೩ ||

ಆವ ಪಾಪಿಗಳು ಚೆಂಡದೆಯೆಂದು ರಾಮನ
ಜೀವಕ್ಕೆ ಮುನಿದು ಹೇಳಿದರು |
ದೇವರೆ ಇದಕೇನ ಮಾಡುವೆನೆನುತಲಿ
ಬೇವುತಿರ್ದಳು ಹರಿಯಮ್ಮ || ೩೪ ||

ಮುತ್ತೈಯ್ಯ ಮುಮ್ಮಡಿ ಸಿಂಗನ ಕಾಲದ
ಮುತ್ತಿನ ಚೆಂಡ ಕೊಡಮ್ಮ || ೩೫ ||

ಈ ಚೆಂಡು ಶ್ರೀಕೃಷ್ಣರಾಯನಾಡಿದ ಚೆಂಡು
ಈ ಚೆಂಡು ಅಭಿಮನ್ಯುವಾಡೆ |
ಈ ಚೆಂಡ ಮುಮ್ಮಡಿ ಸಿಂಗವಾಡಿ ಕೆಟ್ಟ
ಈ ಚೆಂಡ ಮಗ ರಾಮ ಬೇಡ || ೩೬ ||

ಕಿರಿದು ಬುದ್ಧಿಗಳೇಕೆ ಹರಿಯಮ್ಮಗೆನುತಲಿ
ಮರೆಯನು ವೀರ ರಾಮಯ್ಯ || ೩೭ ||

ಆರು ಹೇಳಿದರಪ್ಪ ಚೆಂಡಿನ ಸುದ್ದಿಯ
ಊರುಒಳಗರಸು ಹೆಣ್ಣುಗಳು |
ಸಾರಿ ಕೈತಪ್ಪಿ ಚೆಂಡತ್ತಿತ್ತ ಬಿದ್ದರೆ
ಆರು ಹೊರುವರಪಕೀರ್ತಿ || ೩೮ ||

ಚೆಲುವ ರಾಮಯ್ಯ ಬೇಡವೊ ಚೆಂಡಿನಾಟವು
ಚೆಲುವ ಹೆಣ್ಣುಂಟು ಕುಮ್ಮಟದಿ || ೩೯ ||

ತಂದೆ ಊರೊಳಗಿಲ್ಲ ಚಂದ್ರಮುಖಿಯರುಂಟು
ಕಂದ ನೀ ಕೇಳೊ ರಾಮಯ್ಯ |
ಇಂದಿಗೆ ಬೇಡ ಮತ್ತೊಂದಿನ ಆಡೆಂದು
ಕಂದಗೆ ಬುದ್ಧಿ ಹೇಳಿದಳು || ೪೦ ||

ಚಿಕ್ಕ ಸಿಂಗಮ್ಮನೋಪದಿ ಪರಸತಿಯರು
ಮಕ್ಕಳು ನಮಗೆ ಕಾಣಮ್ಮ |
ಮಿಕ್ಕ ಮಾತಿನ್ನೇನು ಪರಸ್ತ್ರೀಯರೆಂಬರು ನಮಗೆ
ಮಕ್ಕಳ ಸಮನು ಕಾಣಮ್ಮ || ೪೧ ||

ಅಕ್ಕ ಮಾರ್ಯಮ್ಮನೋಪದಿ ಸತಿಯರೆಲ್ಲರು
ಮಿಕ್ಕಿನೈವರು ಹೊರತಾಗಿ |
ಕಕ್ಕುಲತೆಯ ಮಾಡಿ ಕಳವಳಗೊಂಡರೆ
ಚಕ್ರಧರನ ಪಾದದಾಣೆ || ೪೨ ||

ಬೇಡ ರಾಮುಗ ನಿನ್ನ ನೋಡಿದ ಸತಿಯರು
ಮಾಡರು ಮನೆಗೆಲಸಗಳ |
ಊಡರು ತಮ್ಮ ಕಂದರಿಗೆ ಮೂಲೆವಾಲನು
ಕೂಡರು ತಮ್ಮ ಪುರುಷರ || ೪೩ ||

ಪರಸತಿಯೆಂಬವರು ಹಿರಿಯಕ್ಕ ಮಾರೆಮ್ಮ
ಮಾರೆಮ್ಮ ನಿಮ್ಮ ಸಮಾನ ಕೇಳಾಯ್ತಿ |
ಗುರುವಿನ ಸತಿಯ ಸಮಾನವು ನಮಗಿನ್ನು
ಹರುಷದಿ ಚೆಂಡ ಕೊಡಮ್ಮ || ೪೪ ||

ಹಿರಿಯರು ನೀವು ಎಲ್ಲರು ರಾಮಯ್ಯಗೆ
ತರುವಲಿ ಬುದ್ಧಿಗಲಿಸುವಿರೆ |
ಒರೆದು ಹೇಳಿದೆವಮ್ಮ ಕೇಳ[ನು]ರಾಮಯ್ಯ
ದೊರೆನುಡಿಗಳಿಗೆ ಅಂಜುವೆವು || ೪೫ ||

ಕೃತಯುಗ[ದಲಿ] ಹುಟ್ಟಿತು ಮಾಯಾಂಗನೆ
ಹತವ ಮಾಡಿಸಿತು ಕಾರ್ತಿವೀರನನು |
ಯತಿಶಾಪದಿಂದಲಿ ಪತಿ ಶಿರ ಹೋಯಿತು
ಸುತರ ಬಿಲ್ಲನು ಮುರಿ [ಯಿ]ಸಿತು || ೪೬ ||

ಹಿಂದಿನ ಕಾಲದಿ ದ್ರೌಪತಿ ವನವಾಸ ಮಾಡಿಸಿತು
ನೊಂದು ಕೀಚಕನ ಕೊಲಿಸಿತು |
ಮುಂದುಗೆಡಿಸುವುದು ರಾಮುಗ ಈ ಚೆಂಡು
ಕಂದರ್ಪ ಸಮರೂಪ ಕೇಳೊ || ೪೭ ||

ಪಟ್ಟಕ್ಕೆ ಸಲುವಂಥ ರಾಯರು ಪಿಡಿದಾಡುವ
ಕಟ್ಟಾಣಿ ಮುತ್ತ ಹುದುಗಿಹುದು |
ನೆಟ್ಟನೆ ಪೂಜೆಯ ಮಾಡುವ ಚೆಂಡಲ್ಲದೆ
ಇಟ್ಟಾಡುವ ಚೆಂಡು ಅಲ್ಲ || ೪೮ ||

ಪೃಥ್ವಿಯೊಳಗೆ ಇದು ಮಾಯಾಂಗನೆ ಸುರ
ಪತಿಯ ಐಶ್ವರ್ಯವ ಕೆಡಿಸಿ || ೪೯ ||

ಘನ ತಪಸಿಯ ವನದೊಳು ಮಾಯಾಂಗನೆ
ಬಿನುಗು ಸೂಕರನಾಗಿ ಜನಿಸೆ |
ಧನುವ ಹಿಡಿದುಕೊಂಡು ಹರಿಶ್ಚಂದ್ರನೆಸೆಯಲು
ಜನಿಸಿ ಮುತ್ತಿನ ಚೆಂಡಾಯಿತು || ೫೦ ||

ಕಾಳಿಂಗನೋಲಗಕೆ ಹೋಯಿತು ಈ ಚೆಂಡು
ಕಾಲನವರ ಚೆಂಡಾಡಿತು |
ನಾಳೆ ನಿಮ್ಮಪ್ಪ ಬಂದರೆ ಚೆಂಡನಾಡೆಂದು
ಹೇಳಿದಳು ಹರಿಯಲದೇವಿ || ೫೧ ||

ಅತಿಕಾಲ ವನದಲ್ಲಿ ಪುಟ್ಟಿತು ಈ ಮಾಯಿ
ಸುತರನೈವರ ತಿರುಗಿಸಿತು |
ಅತಿ[ಯಾಸೆಯಿಂ]ದ ಲೆತ್ತವನಾಡಿ ಕೆಡಿಸಿತು
ಹತವ ಮಾಡಿಸಿತು ಕೌರವರ || ೫೨ ||

ಆಸೆಯಿಂದಲಿ ದೇಶವ ಕೊಡಲೀಸದೆ
ಮೋಸದಿ ಕೌರವರ ಪಡೆಯ |
ಗಾಸಿಯ ಮಾಡಿತು ಕೇಳು ಮುಮ್ಮುಡಿಸಿಂಗನ
ಈಶ ಕುಮಾರ ರಾಮಯ್ಯ || ೫೩ ||

ಪೊಡವಿಯನಾಳ್ವ ರಾಯರ ಕೆಡಸಿತು ಮಾಯಿ
ನಡೆದು ಪೋಡಶ ರಾಯರುಗಳ |
ತಡೆಯದೆ ನಿಮ್ಮ ಮುಮ್ಮಡಿಸಿಂಗನಾಯಕನು
ಪಿಡಿದು ಆಡುವ ಚೆಂಡು ಅಲ್ಲ || ೫೪ ||

ಉಡುರಾಜನಂದದಿ ಮೈಯೆಲ್ಲ ಕೆಡುತಿರೆ
ಮಡಗಿ ಪೂಜಿಸುವರೊ ಮಗನೆ |
ಕಡುಗಲಿ ಚೆಲುವ ರಾಮ ಚೆಂಡ ಬೇಡೆಂದು
ನುಡಿದಳು ಹರಿಯಲದೇವಿ || ೫೫ ||

ಒಂದು ಹೊಮ್ಮಿಗವಾಗಿ ಜನಿಸಿತು ಈ ಚೆಂಡು
ಒಂದು ಜಲ್ಮದಲಿ ಚೆಂಡಾಯಿತು |
ಕಂದ ನೀನಾಡಲು ವಿಧಿ ಬೆನ್ನ ಹುತ್ತುವುದು
ಕೊಂಡೊಯ್ವುದು ರತ್ನಿ ಮನೆಗೆ || ೫೬ ||

ವಿಧಿಯಿಂದ ರಾಮರು ಕೆಟ್ಟರು ಎಲೆ ತಾಯೆ
ವಿಧಿಯಿಂದ ರಾವಳನಳಿದ |
ವಿಧಿಯಿಂದ ಪಾಂಡವರು ವನವಾಸ ಹೋದರು
ವಿಧಿಯಿಂದ ಕೀಚಕನಳಿದ || ೫೭ ||

ತಲೆ ಹೋಯಿತೆಂದು ಶೂದ್ರಿಕವೀರನು ತಾನು
ಸಲೆ ತನ್ನ ಕೈಕಾಲು ಹೊಯ್ಸಿ |
ಬಲು ಬುದ್ಧಿಯಿಂದ ಇರುವೆನೆಂದು ಇರುತಿರೆ
ತಲೆಯ ಕಟ್ಟಿತು ಕಂಚಾಲಕ್ಕೆ || ೫೮ ||

ಪೊಡವಿಯೊಳಗೆ ಹರಿಶ್ಚಂದ್ರರಾಯನು
ಸುಡುಗಾಡನು ಕಾಯ್ದುದಿಲ್ಲವೆ |
ಹೆಡತಲೆಯೊಳಗಣ ವಿಧಿ ಬೆನ್ನ ಬಿಡುವುದೆ
ಕೊಡು ತಾಯಿ ಚೆಂಡ ಬೇಗದಲಿ || ೫೯ ||

ನಿನ್ನ ಪಾಡೇನಪ್ಪ ಮುನ್ನಿನ ದೊರೆಗಳು
ಹೊನ್ನು ಬಂಗಾರವ ನೆಚ್ಚಿ |
ತನ್ನ ತಾನರಿಯದೆ ಕೆಟ್ಟುಹೋದರು ರಾಮ
ಇನ್ನು ಈ ಚೆಂಡಾಟ ಬೇಡ || ೬೦ ||

ಆಡಿದ ಮಾತಿಗೆ ಅಳುಕದೆ ರಾಮಯ್ಯ
ಬೇಡಿದ ಚೆಂಡ ಕೊಡಮ್ಮ |
ಕಾಡುವ ಶನಿಯು ಎಲ್ಲಿದ್ದರೆ ಬಿಡದಮ್ಮ
ಆಡಿದಲ್ಲದೆ ಬಿಡ ಚೆಂಡ || ೬೧ ||

ರಾಜಬೀದಿಯಲಿ ಲಗ್ಗೆಯನಾಡಬೇಡೆಂದು
ವಾಜೆಯ ಮಗಗೆ ಹೇಳಿದಳು |
ರಾಜಲಕ್ಷಣಕೆ ಆಯುಧ ವಿದ್ಯೆ ಚದುರಂಗ
ತೇಜಿಯ ಮೇಲೆ ವೈಹಾಳಿ || ೬೨ ||

ಮಂದಿಯ ತಡೆ ಕುದುರೆಯ ಕಟ್ಟು ಜೀತವ
ಸಂದುದು [ಚಾ]ರ ಸುಭಟರಿಗೆ |
ಮಂದತನವು ಬೇಡ ಮಕ್ಕಳಾಟಿಕೆ ಯಾಕೆ
ಮುಂದುಂಟು ಬಹು ರಾಜಕಾರ್ಯ || ೬೩ ||

ಗುತ್ತಿಯ ನಾಡನಿರಿದು ಜಗದಪ್ಪನ
ಒತ್ತಿ ಸಾಧ್ಯವ ಮಾಡಿಕೊಂಡೆ |
ಹತ್ತಿತು ಬಹಳ ಹುಳಿಯಾರ ಮಾರಿಗೊಂಡನ ಮೇಲೆ
ಇತ್ತ ಸಲ್ಲದು ಚೆಂಡಿನಾಟ || ೬೪ ||

ನವಲಕ್ಷ ಕುದುರೆಯ ವಾಜಿಯ ಬಂಟನ
ಅವನ ಕೊಡದೆ ಬಾದೂರನ |
ಬವರಕ್ಕೆ ಸುರಿತಾಳನ ದಂಡು ಬಂದರೆ ನಾಳೆ
ಹವನಾಗಿಹುದೆ ರಾಜಕಾರ್ಯ || ೬೫ ||

ವೀರ ಬಲ್ಲಾಳನ ಮುರಿಯಲಿಂದೆ ರಾಮ
ಓರುಗಲ್ಲವನ ಕೆಣಿಕಿಸಿದೆ |
ಹೋರಾಟವನು ಮಾಡಿಕೊಂಡೆ ತುರುಕರೊಳು
ಆರಿಂತು ಮೈಮರೆದಿಹರೆ || ೬೬ ||

ಚೆಂಡುಗಳನೆ ಆಡಿ ಕೈಕಾಲು ನೊಂದರೆ
ಆರು ಹೊರುವರಪಕೀರ್ತಿ |
ದಂಡೆತ್ತಿ ಬಾರದೆ ಬಿಡುವರೆ ಚೆಲ್ವರ
ಗಂಡ ಬೇಡವೊ ಚೆಂಡಿನಾಟ || ೬೭ ||

ಬುದ್ಧಿ ಹೇಳಲು ರಾಮ ಮುದ್ದುಮುಖವು ಬಾಡಿ
ಬಿದ್ದವು ಕಂಗಳ ಉದಕ |
ಎದ್ದಳು ಈ ನೋವು ಯಾಕೆಂದು ಹರಿಯಮ್ಮ
ಮುದ್ದಿಸಿ ಮಗನ ಸಂತೈಸಿ || ೬೮ ||

ಎನ್ನ ತಾಯೆ ಕೇಳು ನಿನ್ನ ಸೊಸೆಯರೊಳು
ಇನ್ನೈವರು ಹೊರತಾಗಿ |
ಪನ್ನಂಗಂಧರನಾಣೆ ಪರಸತಿ ಎಂಬವರು
ನಿಮ್ಮ ಸಮಾನ ಕಾಣಮ್ಮ || ೬೯ ||

ಊರ ನಾರೆರ ದೃಷ್ಟಿ ತಾಕಿತು ರಾಮಗೆ
ಮಾರಿ ಬಂದಿತು ಕುಮ್ಮಟಕೆ |
ಇತ್ತ ಕೇಳಿದಳು ಹೊಸ ಸುದ್ದಿಯ ರತ್ನಾಜಿ
ಮತ್ತೆ ಹೇಳಿದಳು ಸಂಗಿಯೊಡನೆ || ೭೦ ||

ತಂದೆ ಇಲ್ಲದೆ ಹಿಂದೆ ಕಂಡವರುಶ್ಯಾರರು
ಕಂದ ಕೇಳೆಲೊ ರಾಮಯ್ಯ |
ಎಂದು ಬುದ್ದಿಯ ಹೇಳಿ ಹರಿಯಲದೇವಿಯು
ನಿಂದು ರಾಮನಿಗೆ ಹೇಳಿದಳು || ೭೧ ||

ಇಷ್ಟರ ಮೇಲಿನ್ನು ಚೆಂಡು ಬೇಕಾದರೆ
ಮುಟ್ಟಿ ಬಲಿಯ ಕೊಡು ಮಗನೆ |
ಅಷ್ಟ ದಿಕ್ಕಿನ ರಾಹು ದಣಿವಂತೆ ಬಲಿಯನು
ಕೊಟ್ಟು ಬೆಂಡನು ಒಯ್ಯೊ ಮಗನೆ || ೭೨ ||

ಏನು ಬಲಿಯು ಬೇಕು ಹೇಳಮ್ಮ ನಮಗಿನ್ನು
ನಾನು ತರಿಸುವೆನು ಈ ಕ್ಷಣದಿ |
ನಾನೂರು ಕುರಿಗಳು ಐನೂರು ಕೋಳಿಗಳು ಬಲಿಯ
ಕೊಟ್ಟೊಯ್ಯೊ ರಾಮಯ್ಯ || ೭೩ ||

ಎಂದ ಮಾತನು ಕೇಳುತ ರಾಮಯ್ಯ ತನ್ನ
ಮಂದಿಯ ಕರೆಸಿ ಹೇಳಿದನು |
ಬನ್ನಿರೊ ಮನ್ನಯರು ಹೋಗಿರೊ ದಿಕ್ಕುದಿಕ್ಕಿಗೆ
ತನ್ನಿರಿ ಕುರಿ ಕೋಳಿಗಳ || ೭೪ ||

ಸಂದೇಹವಿಲ್ಲದೆ ದಿಕ್ಕುದಿಕ್ಕಿಗೆ ಹೋಗಿ
ತಂದರೈನೂರು ಕೆಂಗುರಿಯ |
ಏಳ್ನೂರು ಕೋಳಿಯ ಏಳ್ನೂರು ರಸದಾಳಿ
ಏಳ್ನೂರು ಕಾಯಿ ಹಣ್ಣುಗಳ || ೭೫ ||

ಏಳು ಗಳಿಗೆ ಚೆಂಡಿಗೆ ಬಲಿಯ ಕೊಟ್ಟರು
ಲೋಲರಾಮನು ಕೈಮುಗಿದ |
ಗಂಧ ಅಕ್ಷತೆ ಧೂಪ ದೀಪ ನೈವೇದ್ಯಾದಿ
ತಂದು ಅರ್ಚಿಸಿದಳು ಹರಿಯಮ್ಮ || ೭೬ ||

ಭಾಷೆಪಾಲಕ ರಾಮ ಚೆಂಡು ಬೇಕಾದರೆ
ಲೇಸಿನ ಸತ್ಯವ ಮಾಡೊ || ೭೭ ||

ಎನ್ನ ತಾಯೆ ಕೇಳು ನಿನ್ನ ಸೊಸೆಯರೊಳು
ಇನ್ನೈವರು ಹೊರತಾಗಿ |
ಪನ್ನಂಗಧರನಾಣೆ ಪರಸತಿ ಎಂಬವರು
ನಿನ್ನ ಸಮಾನ ಕಾಣಮ್ಮ || ೭೮ ||

ಈ ಚೆಂಡ ನೀನಾಡಬೇಡ ಚೆನ್ನಿಗ ರಾಮ
ಈ ಚೆಂಡ ನಿನ್ನ ಕೆಡಸೀತು |
ಎಂದು ಬುದ್ದಿಯ ಹೇಳಿ ಹರಿಯಲದೇವಿಯು
ತಂದುಕೊಟ್ಟಳು ಚೆಂಡ ಬೇಗ || ೭೯ ||

ಕೃತಕಯುಗದಲ್ಲಿ ಹುಟ್ಟಿತು ಮಾಯಾಂಗನೆ
ಹತಮಾಡಿಸಿತು ಕಾರ್ತಿವೀರನ |
ಇಂದಿನ ಜಲ್ಮದಿ ಮಾಯಾಂಗನೆಯಾಗಿ
ಬಂದು ಜನಿಸಿತು ಕುಮ್ಮಟದಿ || ೮೦ ||

ತಾಯಿ ಹೇಳಿದ ಮಾತ ಕೇಳುತ ರಾಮಯ್ಯ
ಜೀಯ ಎನುತ ಪಾದಕೆರಗೆ |
ಆಯುಷ್ಯ ಬಲ್ಲಿದನಾಗೆಂದು ಪಿಡಿದೆತ್ತಿ
ರಾಯರಗಂಡನೆಂದೆನುತ || ೮೧ ||

ಮುತ್ತಿನಚೆಂಡು ಸಹಿತ ರಾಮಯ್ಯನು
ಮತ್ತೆ ಅಂದಳವೇರಿ ನಡೆದ |
ಎತ್ತಿತ್ತು ಸತ್ತಿಗೆ ರಾಮನಾಥಗೆ ಆಗ
ಮುತ್ತಿನ ಚೌರ ಢಾಳಿಸುತ || ೮೨ ||

ಪಟ್ಟಣ ಬೀದಿಲಿ ರಾಮಯ್ಯ ಬರುವಾಗ
ಭಟ್ಟರು ಉಗ್ಗಡಿಸುತಿರಲು |
ಕಟ್ಟದಿರಿನಲಿ ಸೀನಲು ರಾಮನಾಥನು
ಸೃಷ್ಟಿಗೀಶ್ವರನೆ ಗತಿಯೆನುತ || ೮೩ ||

ಚಿತ್ತಜರೂಪನ ನೋಡಬೇಕೆನುತಲಿ
ಅತ್ತ ಮಕ್ಕಳನೆತ್ತದಿಹರು |
ಇತ್ತರದಲಿ ನಿಂದು ನೋಡುವ ಸತಿಯರು
ಮತ್ತೆ ರಾಮಯ್ಯನ ನೋಡುತಲಿ || ೮೪ ||

ಹೆತ್ತತಾಯಿಗಳು ಮಗನ ನೋಡುತಿಹರೆಂದು
ಚಿತ್ತದೊಳ್‌ ರಾಮ ಹಿಗ್ಗಿದನು || ೮೫ ||

ಚೆಂಡನು ಇಸುಕೊಂಡು ಮಂಡಲೇಶ್ವರ ರಾಮ
ಕೊಂಡುಬಂದನು ಹರುಷದಲಿ |
ಚಂಡಮಿಕ್ರಮ ಕಾಟಣ್ಣನೆಡೆಗೆ ಬಂದು
ಚೆಂಡಿಗೆ ಆಳ ಹಂಚೆಂದ || ೮೬ ||

ಆಳ ಹಂಚೆಂದ ಮಾತನು ಕೇಳಿ ಕಾಟಣ್ಣ
ಬೋಳೈಸಿದ ಮನದೊಳಗೆ |
ಹೇಳಿದ ತನ್ನ ಎಕ್ಕಟಿಗ ನಾಯಕರಿಗೆ
ಭಾಳ ಹರುಷದಲಿ ಕೊಡೆಂದ || ೮೭ ||

ಹಟ್ಟಿಕಾರರು ಹಳ್ಳಿಕಾರರು ಎಲ್ಲರು
ದಿಟ್ಟ ಗಾಣಿಗ ಬೊಮ್ಮನವರು |
ಕಟ್ಟಾಳು ಕುಂಬಾರ ಸೋಮನು ಇರುಪನು
ಬೆಟ್ಟಗಳಂದದಿ ಹೊರಟು || ೮೮ ||

ನೆಲಗತ್ತಿ ಕಾಮ ಭಟ್ಟರ ಭೀಮ ಚಿಕ್ಕಯ್ಯ
ದಿಟ್ಟ ಮನೆಯರು ತಾವು ಬಂದು |
ಒಕ್ಕಲಿಗರ ಮುದ್ದ ಅಕ್ಕಸಾಲೆಯ ಚಿಕ್ಕ
ಮಿಕ್ಕ ಮೀನಿಗೆ ಬೊಮ್ಮನವರು || ೮೯ ||

ಹೊಕ್ಕು ಹೊಯ್ದು ಹೆಸರಾದ ಕೊಳ್ಳಿಯ ನಾಗ
ವೀರ ಮನ್ನೆಯರೆಲ್ಲ ಬಂದು |
ಯನುಮಲ ಚಿತ್ತನು ಯರಬೋತು ಗಂಗನು
ಮನಕೆ ಮನ್ನೂಲ ಚಿನ್ನನವರು || ೯೦ ||

ಬೂಟಕ ಬ್ರಹ್ಮನು ಮಿಡಿಗೇಸಿ ನಲ್ಲನು
ಕಟ್ಟಾಳು ರವಳಿಯ ಹನುಮ || ೯೧ ||

ಅರಸುಮಕ್ಕಳು ಹಂಪರಾಜ ಕಂಪರಾಜನು
ಅರಿಬಿರಿದಿನ ಮನ್ನೆಯರು |
ಮನ್ನಾಲ ಮಾಚನು ಮುದುಕೊಂಡ ಲೋಬನು
ಮನ್ನೆಯರ ಕೊಟಗರ ದೇವ || ೯೨ ||

ಬುಕ್ಕನ ಪಾಲನು ಹೊಳಕೆಯ ಕೆಂಚನು
ರಕ್ಕಸ ಚಿನುಮಾದನವರು |
ಕರೆಸಿದ ಕತ್ತಿಯ ವೀರಾಧಿ ವೀರರ
ಬಿರಿದಂಕ ಚೆನ್ನಿಗರಾಮ || ೯೩ ||

ಬಾದೂರಖಾನನು ಮಹಿಮೆಯಖಾನನು
ಸಾಧನೆ ಬಸವರಾಜಯ್ಯ |
ಭೇದಿಸಿ ಮಣಿಹದ ಮಲ್ಲನ [ಕರಿಸಿದ್ದ]ಬೇ
ಗದಿ ಕರೆಸಿದ ರಾಮ || ೯೪ ||

ಹಳದಿಯ ತಿಪ್ಪನು ಬಾರಿಯ ಮಲ್ಲನು
ದಳದುಳಿಯ ರಕ್ಕಸ ಮಾದ |
ಹೊಳಕೆಯ ಬಂಟರ ಕರೆಸಿದ ರಾಮಯ್ಯ
ಕಳುಹಿದ ಚೆನ್ನಿಗರಾಮ || ೯೫ ||

ಹೊನ್ನಮೊಳೆಯ ಕಠಾರಿ ಎಕ್ಕಟಿಗರು
ನಿನ್ನ ಕಡೆಯಲೊ ಕಾಟಣ್ಣ |
ಮನ್ನಿಸಿ ಉಡುಗೊರೆ ಕೊಂಬ ಎಕ್ಕಟಿಗರ
ತನ್ನ ಕಡೆಗೆ ಮಾಡಿಕೊಂಡ || ೯೬ ||

ತೆಲುಗ ಮನ್ನೆಯ ಮಕ್ಕಳು ಊರೊಳಗುಳ್ಳ
ಸಲೆ ರಾಜಪುತ್ರರೆಲ್ಲರನು |
ಗೆಲವುಳ್ಳವರ ಹಂಚಿಕೊಟ್ಟನು ಕಾಟಗೆ
ಛಲದಂಕ ಚೆನ್ನಿಗರಾಮ || ೯೭ ||

ಆವ ಠಾವಿಲಿ ಚೆಂಡನಾಡುವ ಕಾಟಣ್ಣ
ಆವ ಬಯಲು ಹಸ ನಮಗೆ |
ಕೋವಿದೆ ರತ್ನಾಜಿ ಚಿಕ್ಕಮ್ಮನರಮನೆಯ
ಠಾವಿಗೆ ನಡೆಯೊ ಕಾಟಣ್ಣ || ೯೮ ||

ಅಲ್ಲಿ ನೋಡಲಿ ಮಕ್ಕಳರ್ತಿಯ ಕಾಟಣ್ಣ
ಅಲ್ಲಿಗೆ ನಡೆಯೊ ಹಿರಿಯಣ್ಣ || ೯೯ ||

ಚಿನ್ನದ ಲೆಗ್ಗೆ ಬೆಳ್ಳಿಯ ಲೆಗ್ಗೆ ತೆಕ್ಕೊಂಡು
ಚೆನ್ನಾಗಿ ನಡೆಯೊ ಕಾಟಣ್ಣ |
ಉನ್ನತ ಹರುಷದಿ ಚಿಕ್ಕಮ್ಮನರಮನೆಗೆ
ಹೊನ್ನ ಉಪ್ಪರಿಗೆಯ ಬಳಿಗೆ || ೧೦೦ ||

ತಗ್ಗು ಮುಗ್ಗಿಲ್ಲದ ಠಾವಿಲಿ ಕಾಟಣ್ಣ
ಲೆಗ್ಗೆಯ ಮಾಡ ಹೇಳಿದನು |
ಒಗ್ಗೊಡೆಯದೆ ಕೂಡಿತು ಪರಿವಾರವು
ವೆಗ್ಗಳ ರಾಮನ ಭಟರು || ೧೦೧ ||

ಚಿನ್ನದವೇಳು ಬೆಳ್ಳಿಯವೇಳು ಲೆಗ್ಗೆಯ
ಚೆನ್ನಾಗಿ ಹೂಡ ಹೇಳಿದನು |
ತನ್ನ ಮನ್ನೆಯರು ಮಂದಿಗಳೆಲ್ಲ ಒಂದಾಗಿ
ಭಿನ್ನವಿಲ್ಲದೆ ಚೆನ್ನರಾಮ || ೧೦೨ ||

ಸರಿಯಾಗಿ ಹಂ[ಚೆ] ಇಕ್ಕೆಲದ ಮನ್ನೆಯರನಿ
ತ್ತರದ ಬೊಬ್ಬೇನು ಸಂಗಾಯಿ |
ಹೊರಗಣ ಲೆಗ್ಗೆಯ ಚೆಂಡಾಟವು ನೋಡಿ
ಸರಸಿಜಮುಖಿಗೆ ಹೇಳಿದಳು || ೧೦೩ ||

ಲೋಲ ರಾಮಯ್ಯ ಚೆಂಡಾಡುವ ಬಯಲಿಗೆ
ಸೂಳೆಯರೆಲ್ಲ ಶೃಂಗರಿಸಿ |
ಲೀಲೆಯಿಂದಲಿ ಹೊರಟು ಬಂದರು ಬೇಗದಿ
ಮೂಲೋಕ ಜನರು ಕಂಗೆಡಲು || ೧೦೪ ||

ಸೂಳೆ ಹಂಪಾಜಿ ಬಂದಳು ಬೇಗದಲಿಂದ
ಮೇಲೆ ರಹುಡೆಯನು ಹೊಡೆಸುತಲಿ |
ಬಾಳ ಪಂಥವನಾಡುವ ವಿಟರೆದೆಗೊಂದು
ಲಾಳರಸದ ಬೊಂಬೆಯಂತೆ || ೧೦೫ ||

ಕಳವಳಿಸುವ ಕಾಂತಿ ಹೊಳೆವುತ ನಡೆದಳು
ಲಲನೆಯರೆಡಬಲದಲ್ಲಿ |
ಹೊಳೆಯ ಹೊನ್ನೂರ ರಾಮಾಜಿ ಬಂದಳು ಬೇಗ
ಗೆಲವಿಂದ ಚೆಂಡ ನೋಡುವರೆ || ೧೦೬ ||

ಸರುರಾತ್ರಿಗೆ ಹಿಡಿ ಹೊನ್ನ ಕೊಂಬುವಳೊಬ್ಬ
ಸುರತದ ಸುಗ್ಗಿ ಎಂಬವಳು |
ಗುರುಮುಕೊಂಡದ ಸೋಮಿ ಹೊರಟುಬಂದಳು ಬೇಗ
ಭರದಿಂದ ಚಂಡ ನೋಡುವರೆ || ೧೦೭ ||

ಹೊಲಬುದಪ್ಪಿದ ಹುಲ್ಲೆಯಂತೆ ಹಂಬಲಿಸುತ
ಕಳೆಯುಳ್ಳ ನಗೆಯ ಮುಖಕಾಂತಿ |
ಇಳೆಗೆ ಇಕ್ಕೇರಿಯ ಪ್ರಾಣನಾಯಕಿ ಬಂದಳು
ಬಲವಂತೆ ದುರ್ಗಾಯಿ ಎದ್ದು || ೧೦೮ ||

ಬಾಳೆಯ ಸುಳಿಯಂತೆ ಬಳುಕುತ ಬಂದಳು
ಬಾಲೆವೆಣ್ಣುಗಳ ಕೈವಿಡಿದು |
ಪಾಳೇದ ಪಾಪಾಜಿ ಬಂದಳು ಒಲವಿಂದ
ಲೋಲ ರಾಮುಗನ ನೋಡುವರೆ || ೧೦೯ ||

ಹೊಳೆವ ಹೊಂಬಣ್ಣದ ಸೀರೆಯನುಟ್ಟಳು
ನಳಿನಾಕ್ಷಿಯು ತಾಳವಿಡಿದು |
ಹಳೆಯಬೀಡಿನ ಹಂಪಾಜಿ ಬಂದಳು ಬೇಗ
ನಲುವಿಂದ ಚೆಂಡ ನೋಡುವರೆ || ೧೧೦ ||

ನಾರಿ ಶಿರೋಮಣಿ ಬಾಣವಾರದ ಭದ್ರಿ
ಭೋರನೆ ತಾ ಬಂದು ನಿಂದಳು || ೧೧೧ ||

ಪಟ್ಟಾವಳಿಯ ಸೀರೆ [ಯು]ಟ್ಟು ಆಭರಣವ
ತೊಟ್ಟು ಶೃಂಗಾರ[ದಿ] ನಡೆದು |
ಕೊಟ್ಟೂರ ಕಾಮಾಜಿ ಬಂದು ನಿಂದಳು ಬೇಗ
ದಿಟ್ಟ ರಾಮುಗನ ನೋಡುವರೆ || ೧೧೨ ||

ಏಣಾಕ್ಷಿ ಬಾದಾವಿ ಬಸವಿ ಬಂದಳು ಪಂಚ
ಬಾಣ ರಾಮುಗನ ನೋಡುವರೆ || ೧೧೩ ||

ಗಂಧ ಕಸ್ತೂರಿ ತಿಲಕವನಿಟ್ಟು ನಡೆದಳು
ಚೆಂದಚೆಂದದ ಕೊನಬುಗಳ |
ಕುಂದುರ್ಪೆಯಿಂದಲಿ ನಡೆದು
ಬಂದಳು ಬೇಗ ಕೊನಬಿನ ಕೊಂಡಾಜಿ ಆಗ || ೧೧೪ ||

ಮುಡಿವಾಳ ಹೂವ ಮಲ್ಲಿಗೆ ಜಾಜಿ ಸಂಪಗೆ
ಎಡೆಯೆಡೆಯಲ್ಲಿ ಕುಂಕುಮವು |
ಬೇಲೂರ ಬೆನಕಾಜಿ ನಡೆದು ಬಂದಳು ಬೇಗ
ವಿಟರೆದೆ ಬೊಂಬೆಯಂದದಲಿ || ೧೧೫ ||

ಆದವನ್ನಿಯ ನಾಗಾಜಿ ಬಂದಳು ಬೇಗ
ಕಾದುವ ಮಾಸಾಳನಂತೆ || ೧೧೬ ||

ಕುಂಭಕೋಣೆಯ ವೀರಾಜಿ ಹೊರಟಳು ಬೇಗ
ಗಂಭೀರ ರಾಮನ ನೋಡುವರೆ || ೧೧೭ ||

ಹೊನ್ನ ಹಾವುಗೆ ಮೆಟ್ಟಿ ಹೊಳೆವ ಪಟ್ಟೆಯನುಟ್ಟು
ಚೆನ್ನೆಯರೊಡನೆ ತಾ ನಡೆದು |
ಕನ್ನಡಿ ಕದಪಿನ ನೀರೆ [ಯು]ಬಂದಳು
ಚೆನ್ನಪಟ್ಟಣದ ಚೆನ್ನಾಜಿ || ೧೧೮ ||

ಸಾಸುವೆ ಬಣ್ಣದ ಸೀರೆಯನುಟ್ಟಳು
ಮೋಸಮಾಡುತಲಿ ವಿಟರುಗಳ || ೧೧೯ ||

ಚಂದ್ರಗಾವಿಯನುಟ್ಟು ಬಂದಳು ಒಲವಿಂದ
ಚಂದ್ರ[ಕಳೆ]ಯ ಸೋಲಿಸುತ |
ನಿಂದಿರ್ದ ವಿಟರ ಕಾಲ್ಗೆಡಿಸುತ ಬಂದಳು
ಚಂದ್ರಗಿರಿಯ ಚೆಲ್ವ ಚೆನ್ನೆ || ೧೨೦ ||

ದಸುರಿ ಬಣ್ಣದ ಸೀರೆ ಹೊಸ ಮುತ್ತಿನೋಲೆಯು
ಕುಸುಮಶರನ ಸೋಲಿಸುತ |
ಹಸುರು ಕುಪ್ಪಸವು ಕಸ್ತೂರಿ ನೊಸಲೊಳಗಿಟ್ಟು
ಹೊಸಪ್ಯಾಟೆಯ ಜಂಬುಲಿಂಗಿ || ೧೨೧ ||

ಮಿಸುನಿ ಪುತ್ಥಳಿಯ ಪಿತಾಂಬರವನುಟ್ಟಳು
ಹೊಸಮುತ್ತಿನ ಬೊಟ್ಟನಿಟ್ಟು |
ಮಸೆದ ಅಂಬಿನ ಮೊನೆಯಂತೆ ನಡೆದು ಬಂದಳು
ವಸವಂತಪುರದ ಮಲ್ಲಾಜಿ || ೧೨೨ ||

ಏ[ಸು]ನೋಂಪಿಯ ನೋಂತು ಪಡೆದಳಿವನ ತಾಯಿ
ಈಶ ಕುಮಾರ ರಾಮಯ್ಯನ |
ಭಾಷೆಯ ಮಾಡಿಕೊಂಬರು ತಮ್ಮೊಳು ತಾವು
ಗಾಸಿಯಾದೆವು ಎಂದೆನುತ || ೧೨೩ ||

ಸೋತರು ತನುವನೀತನಿಗೆ ಭ್ರಮೆಯಾದರು ಈ
[ಭೂತಳ]ದ ರೀತಿಯಲ್ಲ || ೧೨೪ ||

ಕಟ್ಟಾಳುಗಳ ಕರೆಸುತ ರಾಮನಾಥನು
ಕೊಟ್ಟನು ಭೂಷಣವ |
ಪಟ್ಟಣದೊಳು ಕೂಗೆ ಬೊಬ್ಬಾಟ ಹತ್ತಿತು
ಉಟ್ಟು ಶೃಂಗರವಾಗುತಹಳೆ || ೧೨೫ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ
……………………………….
………………………………. || ೧೨೬ ||

ಅಂತು ಸಂಧಿ ೧೫ಕ್ಕಂ ಪದನು ೧೫೦೭ ಕ್ಕಂ ಮಂಗಳ ಮಹಾಶ್ರೀ