ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತರ |
[ಭಾಗೀರಥಿಧರ ಭವರೋಗವೈದ್ಯನೆ
ನಾಗಕುಂಡಲ]ಶರಣೆಂಬೆ || ೧ ||

ತಿರಿಗಿಬಂದಳು ಮಾತಂಗಿ ರಾಮನ ಮೇಲೆ
ಧುರಗಲಿತನದಿಂದಲೆಚ್ಚು |
ಪರಿದು ಮುತ್ತಿತ್ತು ತುರುಕರ ದಂಡು ಸುತ್ತಲಿ
ನೆರಹುಗೊಡದೆ ರಾಮಯನ || ೨ ||

ನೆಟ್ಟವು ಸರಳು ರಾಮಯ್ಯನ ಮೈತುಂಬ
ಬೊಟ್ಟ ತೂರುವರೆ ಇಂಬಿಲ್ಲ |
ದಿಟ್ಟ ಕುಮಾರರಾಮಯ್ಯ ಬೊಬ್ಬಿಟ್ಟಿರೆ
ಬೆಟ್ಟವೆಲ್ಲವು ಆರ್ಭಟಿಸೆ || ೩ ||

ತುಟ್ಟಯಿಸಿತು ಕೂರಂಬಿನ ಗಾಯವು
ಕೆಟ್ಟಿತು ಹೊಸಮಲೆದುರ್ಗ |
ದಿಟ್ಟ ಕಂಪಿಲನ ದೆಸೆಯು ಹಾರಿಯೋಯಿತು
ಬಿಟ್ಟನು ರಾಮ ಪ್ರಾಣವನು || ೪ ||

ಉಳಿದಂಥ ಮಂದಿ ರಾಹುತರೆಲ್ಲ
ಒಳಿತಾಗಿ ಕಡಿದಾಡಿ ಬಿದ್ದರು |
ಕಳಕಳಿಸುವ ರಾಮಯ್ಯನ ಸಂಗಡ
ಆಳಿದರು ಎಲ್ಲ ಮನ್ನೆಯರು || ೫ ||

ಧುರಧೀರ ರಾಮನ ಮನವ ನೋಡುವೆನೆಂದು
ಪರಮೇಶ್ವರ ಪ್ರಾಣವಿತ್ತ || ೬ ||

ಕೂಗುತ ಬಂದ ರಾಮಯ್ಯನ ಮೇಲೊಂದು
ಕಾಗೆ ಕುಳಿತರೆ ಸತ್ತನೆಂದು |
ಸಾಗಿಬಂದಿತು ಮಾತಂಗಿಯ ಬಲವೆಲ್ಲ
ಬೇಗ ರಾಮನ ಸುತ್ತ ಬಳಸಿ || ೭ ||

ಕೇಳಿ ಮನ್ನೆಯರೆಲ್ಲ ಕೊಂದೇನೆನುತ ಬಂದು
ಒತ್ತಿ [ನಿಂ]ದರು ಬೊಲ್ಲನೆಡೆಗೆ |
ಬಂದು [ಮಾತಂಗಿ]ಯು ರಾಮನ ಎಳೆದಳು
ಒಲಿದು ಬಿದ್ದನು ರಣದೊಳಗೆ || ೮ ||

ತೆರೆದು ಕಣ್ಣನು ನೋಡಲು ರಾಮ ತುರುಕರು
ಮುತ್ತಿ ಕೊಲ್ಲು[ವ]ನೆಂದು ನಮಿಸೆ |
ತ[ರಿ]ವೆನೆನುತ ಮುಂದಕೆ ತಾ ತೆರಳಿದರೆ
ಸುರಲೋಕದ ನಾರಿಯರು || ೯ ||

ಕರೆದೊ[ಯ್ವೆ]ಕ ತಮ್ಮ ನೆರೆವುದೆಂದೆನು[ತಿರೆ]
ಚರಣವ ಹಿಮ್ಮೆಟ್ಟಿದನು |
ಪರನಾರಿಯ ಸಹೋದರನೆಂಬ ಸತ್ಯವು
ಬಿರಿದು ದಕ್ಕಿದರೆ ಸಾಕೆನುತ || ೧೦ ||

ಧುರದೊಳು ಹೊ[ದ್ದಿದ]ನೆಂಬ ಅಪಕೀರ್ತಿಯು
ಬರುವದೆಂದು ಹಿಮ್ಮೆಟ್ಟಿದನು |
ಧುರಹೇಡಿಯಾದನೆಂದೆನುತಲಿ ಜರಿವುತ
ಸುರಲೋಕದ ನಾರಿಯರು || ೧೧ ||

ತಿರಿಗಿದರತ್ತಲಿ ಕಲಿ ರಾಮನಾಥನು
ಮರಣವಾದನು ನಿಮಿಷದಲಿ || ೧೨ ||

ಬಿಟ್ಟು ಕಣ್ಣವ ಕಾಣುತ ಬರುತಾನೆಂದು
ಕೆಟ್ಟೋಡಿ ತುರುಕರ ದಂಡು |
ಮುಟ್ಟಲಮ್ಮದೆ ಮಾತಂಗಿಯ ಪರಿವಾರ
ಕಟ್ಟಕಡೆಯಲಿ ನಿಂದಿಹರು || ೧೩ ||

ಮತ್ತೆ ಮೇಲಾಗಿ ಕಾಗೆ ಬಂದು ಕುಳ್ಳಿರಲು
ಸತ್ತನು ಎನುತ ನಿಶ್ಚೈಸಿ |
ಮುತ್ತಿ ಸಹಬಲವು ರಾಮಯ್ಯನ
ಒತ್ತಿ ತಿವಿದು ನೂಕಿದರು || ೧೪ ||

ಹತ್ತಿರೆ ಬಂದು ಮಾತಂಗಿ ಖಾನರ ಕೂಡಿ
ಸತ್ತನೆನುತ ತಲೆಗೊಯ್ದು |
ಬೊಲ್ಲನ ಪಿಡಿಯಬೇಕೆನುತಲಿ ತುರುಕರು
ಮೆಲ್ಲನೆ ಸರಪಳಿ ತಂದು || ೧೫ ||

ಸರಪಳಿ ಬೊಲ್ಲಗೆ ಹಾಕಿ ಹಿಮ್ಮಡಿ ತಪಪಿಸಿ
ಝಾಗಿಸಿ ಎಳೆದು ಬೊಲ್ಲನನ |
ಎಳೆಯಲಾಕಾಶಕ್ಕೆ ಪಕ್ಷಿಯಂದದಿ ಹಾರಿ ಮ
ರಳಿ ಬಿದ್ದಿತು ಧರಣಿ ಮೇಲೆ || ೧೬ ||

ರಾಮನ ತಲೆಯನು ಕೊಯ್ದರು ತುರುಕರು
ನೇಮದಿ ಡಿಳ್ಳಿ ಮುಟ್ಟಿಪೆವು |
ಮುತ್ತು ಮಾಣಿಕ ಚೆನ್ನವ ಬಾಯೊಳು ತುಂಬಿ
ಸುತ್ತಿ ದೇವಾಂಗವ ತಲೆಗೆ || ೧೭ ||

ಸಾಯಬಹುದೆ ಚೆನ್ನಿಗರಾಮ ಮಲೆವಂತ
ರಾಯವಜೀರರಗಂಡ |
ಕಾಯಜರೂಪ ಎನುತ ಖಾನ ಮಲುಕರು
ಹಾಯೆಂದು ಬೊಟ್ಟ ಕಚ್ಚಿದರು || ೧೮ ||

ಗಂಧ ಕಸ್ತೂರಿ ಕುಂಕುಮ ಕಾದಂಬವ
ತಂದರು ಖಾನಮಲುಕರು |
ಮು………………ರಳುವ ಜಾಜಿ ಮಲ್ಲಿಗೆ ಸಂಪಗೆ
ತುಂಬಿ ನಿಂದು ರಾಮನ ಶೃಂಗರಿಸಿ || ೧೯ ||

ಮ[ನವೇಗ] ತೇಜಿಯ ತರಿಸಿ ಅದರ ಮೇಲೆ
ಘನ ವೀರರಾಮನ ತಲೆಯ |
ದಿಕರನುದಯವಾಗದ ಮುನ್ನ ನೀವು ಹೋಗಿ
ಎನುತ ಸುರಿತಾಳನ ಬಳಿಗೆ || ೨೦ ||

ಒಂದೆರಡು ದಿವಸದ ಮಧ್ಯಾಹ್ನದೊಳು ತಲೆ
ಬಂದಿತು ಡಿಳ್ಳಿ ಪಟ್ಟಣಕೆ |
ಮುಂದೆ ಬಂದ್ಹೇಳಿದರು ಸುರಿತಾಳರಾಯಗೆ
ನೊಂದು ವೀಳ್ಯವನುಗುಳಿದನು || ೨೧ ||

ತರಹೇಳು ತಲೆಯೆನುತ ಸುರಿತಾಳನು
ವರಸುತೆ ಸಹ ತಾವು ಬಂದು |
ಹಿರಿದು ದುಃಖವನು ಮಾಡಿದರು ತಲೆಯ ನೋಡಿ
ದೊರೆದೊರೆಗಳು ಮುರುಗಿದರು || ೨೨ ||

ಇದ್ದ್ಹಾಗೆ ತರಹೇಳಿದೆ ನಾನು ರಾಮನ
ನಿರ್ದೈಸಿ ಕೊಲ್ಲ ಹೇಳಿದೆನೆ? |
ಮುದ್ದುಮುಖದ ಚೆನ್ನಿಗರಾಮ ಹಾಯೆಂದು
ಬಿದ್ದನು ಸುರಿತಾಳ ಹೊರಳಿ || ೨೩ ||

ಸುರಿತಾಳನ ಮಗಳು ಈ ತಲೆಯನು ಕಂಡು
ಸ್ಥಿರಕಾಲವು ಬಯಸಿರ್ದೆ |
ಪುರುಷ ನೀನಳಿಯಬಹುದೆ ಈಗ ನೀನೆಂದು
ಹರುಷದಿ ಮುಖವ ನೋಡಿದಳು || ೨೪ ||

ನಿನ್ನನು ಪ್ರಾಣಸಹಿತ ತಂದರೆನುತಲಿ
ಚೆನ್ನಾಗಿ ನಂಬಿರ್ದೆ ಬೇಗ |
ಇನ್ನು ನೀನಳಿಯಬಹುದೆ ಎಂದೆನುತಲಿ
ಉನ್ನತ ಶೋಕ ಮಾಡಿದಳು || ೨೫ ||

ನೋಡಿದ ಸುರಿತಾಳನು ತನ್ನ ತನುಜೆಯ
ಬೇಡಿಕೊಂಡತಿ ಬುದ್ದಿ ಪೇಳಿ |
ಬೇ[ಡವ್ವ]ರೂಢಿಗೆ ಅಪಕೀರ್ತಿಯು ಎಂ
ದಾಡಿದ ಇದ ಬಿಡು ಮಗಳೆ || ೨೬ ||

ಕಡುಗಲಿ ರಾಮನ ಬಿಡಲಾರೆನುತವನ
ಜಡೆಯ ಮುತ್ತಿನ ಗೊಂಡೆಯವ |
ಮುಡಿಸಿ ತನ್ನಯ ತುರುಬಿನ ಮೇಲೆ ಕಟ್ಟಿದಳು
ಕಡು ಶೋಕವ ಮಾಡಿದಳು || ೨೭ ||

ದೇಶದೊಳಗೆಲ್ಲ ವಸ್ತುವನೆಲ್ಲ ತರಿಸಿದಳು
ರಾಸಿಗಳನು ಮಾಡಿಸಿದಳು |
ಭೂಸುರರಿಗೆ ದಾನವನಿತ್ತು ದಣಿಸಿದಳು
ಮೀಸರಗಂಡನೆಂದೆನುತ || ೨೮ ||

ಕಡುಗಲಿ ರಾಮನ ತಲೆಯ ತೆಗೆದುಕೊಂಡು
ತೊಡೆಯ ಮೇಲಿಟ್ಟು ನೋಡಿದಳು |
ಪಡೆದೆಯೊ ನಿನ್ನ ಚೆಲ್ವಿಕೆಯ ಬ್ರಹ್ಮನ ಕೈಲಿ
ನುಡಿದು ಶೋಕವನು ಮಾಡಿದಳು || ೨೯ ||

ಕಳೆಯಲಿ ಬಿದಿಗೆ ಚಂದ್ರ ದಿವ್ಯರೂಪಿಲಿ
ಇಳೆಯೊಳು ನೀನು ಮನ್ಮಥನೊ |
ತಳುಹದೆ ನಾ ನಿನ್ನ ಬಯಸಿದಲ್ಲದೆ ನೋಡಿ
ಕಳುಹಿದ ಸುರಿತಾಳ ದಂಡ || ೩೦ ||

ನೀನೆ ನನಗೆ ಗಂಡನಾಗಬೇಕೆನುತಲಿ
ನಾ ನಿನ್ನ ಬಯಸಿದೆ ನೋಡಿ |
ಖಾನರ ಕಳುಹಿಸಿ ಕೈಸೆರೆ ತಾರೆಂದೆ
ಹಾನಿ ಮಾಡಿದರು ಪಾಪಿಗಳು || ೩೧ ||

ಪೊಡವಿಪ ತಂದೆ[ಗೆ] ಕಿಚ್ಚ ಬೇಡಿದಳಾಗ
ಕಡುಗಲಿ ರಾಮನ ತಲೆಯ |
ಉಡಿಯಲಿ ತಾ ಕಟ್ಟಿಕೊಂಡು ಬೀಳುವೆನೆನಲು
ನುಡಿದ[ನು]ಸುರಿತಾಳನೊಡನೆ || ೩೨ ||

ಅಪಕೀರ್ತಿಯ ಮಾಡಿಕೊಂಬರೆ ಕಂದಯ್ಯ
ವಿಪರೀತ ನಿನ್ನಯ ಮಾತು |
ತಪವಿರುವಾ ಸತ್ತ ತಲೆಯನು ಪಿಡಿಕೊಂಡು
ಅಪಹರಿಸೆಂ[ದೂ]ರ[ಲಿ]ದನು || ೩೩ ||

ತಂದೆಯ ಮಾತ ಮೀರದೆ ನೋಡಿ ತಲೆಯನು
ಕಂದಪ್ನ ಸಮರೂಪ |
ಎಂದಿಗೆ ನಿನ್ನಂತ ಚೆಲುವ ಪುಟ್ಟುವನೆಂದು
ಕುಂದದೆ ಬಿಗಿದಪ್ಪಿದಳು || ೩೪ ||

ಪ್ರಾಣವಿಲ್ಲದೆ ಇಷ್ಟು ಕಳೆಯಲ್ಲಿ ನೀನಿರ್ದೆ
ಜಾಣತನದ ದೇಹವನು |
ಕಾಣಿಸಿ ನೆರೆವ ಸ್ವರ್ಗಲೋಕವ ಸುಟ್ಟು
ಊನ್ಯ[ವ]ಲ್ಲ[ವೆ] ಮುದ್ದುರಾಮ || ೩೫ ||

ಒಂದು ಗಳಿಗೆ ನಿನ್ನ ಭೋಗದೊಳಿದ್ದರೆ
ಹಿಂದೇಳು ಮುಂದೇಳು ಜಲ್ಮ |
ಕುಂದದೆ ಪಾವನವಾಗದೆ ಪೋ[ಗ]ದೆ
ಕಂದರ್ಪನ ಸಮರೂಪ || ೩೬ ||

ದುಂಡುಮಲ್ಲಿಗೆ ಸಂಪಗೆ ಕೇತಕಿಯನು
ಮಂಡೆ ತುಂಬಲಿ ಮುಡಿಸಿದಳು |
ಗಂಡರಗಂಡ ಚೆಲ್ವರಗಂಡನೆನುತಲಿ
ಮುಂಡಾಡಿ ಮುಖವ ನೋಡಿದಳು || ೩೭ ||

ಕಾಳಗದಲಿ ಕಲಿಪಾರ್ಥನೊ ಭೀಮನೊ
ಆಳುತನಕೆ ಮನ್ಮಥನೊ |
ಸೂಳಿಟ್ಟು ಮುಂಡಾಡಿ ಮುಖದೊಳು ಮುದ್ದಿಸಿ
ಊಳಿಗದರ ಕೈಗೆ ಕೊಡಲು || ೩೮ ||

ತಂದು ಕಟ್ಟಿದರು ಸುರಹೊನ್ನೆಯ ಮರದಲ್ಲಿ
ಬಂದು ಕುಳಿತ ಸುರಿತಾಳ |
ಬಂದರು ಪುರದ ಜನರು ರಾಮಯ್ಯನ
ಅಂದವ ನೋಡಿ ಮರುಗಿದರು || ೩೯ ||

ಒಂದು ದಿವಸ ಅಲ್ಲಿ ಇರಲಾಗ ಆ ತಲೆ
ಮುಂದುಗೆ[ಟ್ಟಿತು] ಪಟ್ಟಣವು |
ಸಂದಿತು ಮಧ್ಯರಾತ್ರಿಯ ನಡುವಿರುಳಲಿ
ಬಂದವು ಅರ್ಭೂತಗಳು || ೪೦ ||

ಡಿಳ್ಳೆಲ್ಲ ನಡುಗಿತು ರಾಮನ ಬೊಬ್ಬೆಗೆ
ನಿಲ್ಲಲಾರದೆ ಕಂಗೆಡುತ |
ಇಲ್ಲಿ ಇದ್ದರೆ ಪಟ್ಟಣ ಕೆಡುವುದು ಎಂದು
ಎಲ್ಲ ಶಾಸ್ತ್ರಿಕರು ಪೇಳಿದರು || ೪೧ ||

[ಹಿಂ]ದುವ ರಾಯನ ತಲೆ ನಮ್ಮ ಪಟ್ಟಣದ
ಮಂದಿಯನೆಲ್ಲ ಕೊಲುತಿಹುದು |
ಬಂದರು ಖಾನ ವಜೀರರು ತಲೆಯನು
ತಂದು ಹಾಕಿದರಗುಳೊಳಗೆ || ೪೨ ||

ಕೂ[ಗುವ] ರಾಮನ ಧ್ವನಿಗೇಳಿ ಕಂಗೆಟ್ಟು
ಆಗ ಮಡಿವುದು ಪಟ್ಟಣದಿ |
ನೀಗಿದೆವೆನುತಲಿರ್ದೆವು ನಮ್ಮ ಡಿಳ್ಳಿಗೆ
ಬೇಗೆಯನಿಕ್ಕ ಬಂದನೆನುತ || ೪೩ ||

ದಿನವೊಂದಕೆ ಲಕ್ಷವು ಲಕ್ಷ ಮಡಿವುದು
ಘನ ರಾಮನ ಧ್ವನಿಗೇಳಿ |
ಮನದೊಳು ಅನುಮಾನವ ಮಾಡಿ ಸುರಿತಾಳ
ತನುಗುಂದಿ ಚಿಂತಿಸುತಿರ್ದ || ೪೪ ||

ಕಳುಹಿದ ಸುರಿತಾಳರಾಯನು ಭಟ್ಟನ
ತಳುಹುದೆ ಕಂಪಿಲನೆಡೆಗೆ |
ಬೆಳಗಾಗೊ ಹೊತ್ತಿಗೆ ತಮ್ಮ ರಾಮನ ತಲೆಯ
ಗಳಿಲನೊಯ್ವಂತೆ ಮಾಡೆಂದ || ೪೫ ||

ಬಂದನು ಸುರಿತಾಳರಾಯನ ಭಟ್ಟನು
ಒಂದಾರುದಿವಸ ಬೇಗದಲಿ |
ನಿಂದಾಗ ಕಂಪಿಲರಾಯಗೆ ಪೇಳಿದ
ತಂದುಕೋ ಮಗನ ತಲೆಯನು || ೪೬ ||

ನೀವೆ ತಂದರೆ ಆಗುವುದೆಂದು ಭಟ್ಟನ
ದೇವ ಕಂಪಿಲ ಬೆಸಗೊಂಡ |
ಕೋವಿದ ಲಕ್ಷವ ಖೋಯೆಂದು ಕೊಲುವನು
ನಾವು ಮುಟ್ಟುವರಳಲ್ಲ || ೪೭ ||

ನಿಮ್ಮಲ್ಲಿ ಇರುವಂಥ ಭಟ್ಟನ ಕಳುಹೆಂದು
ನಿಮ್ಮ ರಾಮಯ್ಯನ ಬಿರಿದ |
ಸುಮ್ಮಾನದಿಂದ ಕೊಂಡಾಡಲು ಬರುವುದು
ನಮ್ಮಲ್ಲಿ ಮುಟ್ಟುವರಿಲ್ಲ || ೪೮ ||

ಭಟ್ಟರ ರೂಪಿದೇವಯ್ಯನ ಕರೆಸಿದ
ಹಚ್ಚಡ ದಟ್ಟಿ ಕಬಾಯಿ |
ಕೊಟ್ಟು ಕಂಪಿಲರಾಯ ಕಳಹಲು ಡಿಳ್ಳಿಗೆ
ಬಿಟ್ಟಲ್ಲಿ ಬಿಡದೆ ಬಂದಿಳಿದ || ೪೯ ||

ಈ ಪರಿಯಲ್ಲಿ ಸುದ್ದಿಯ ವಾಲಗದೊಳು
ಭೂಪಾಲ ಸುರಿತಾಳನೊಡನೆ |
ರೂಪಿದೇವಯ್ಯ ಬಂದನೆಂದು ಪೇಳಿದ
ಭೂಪತಿಗವರು ಬಿನ್ನೈಸೆ || ೫೦ ||

ಕರೆಸಿದ ಭಟ್ಟರ ರೂಪಿದೇವಯ್ಯನ
ಸುರಿತಾಳರಾಯ ಬೇಗದಲಿ |
ಹರುಷದಿ ಪಲ್ಲಕ್ಕಿ ಇಳಿದು ತಾ ಬಂದನು
ಬಿರಿದೆತ್ತಿ ಕೊಂಡಾಡಿದನು || ೫೧ ||

ಮಲೆವ ಮಾನ್ಯರ ಗಂಡ ಬಲುಗಜ ಕಂಠೀರವ
ಬಲವಂತರಿಗೆ ಅಂಕುಶವೆ |
ಕುಲದೀಪ ಸುರಿತಾಳ ಡಿಳ್ಳಿಯಾಳುವನೆಂದು
ನಲಿದು ಕೊಂಡಾಡಿದ ಭಟ್ಟ || ೫೨ ||

ಕೊಂಡಾಡಿದ ಭಟ್ಟನ ನೋಡಿ ಸುರಿತಾಳ
ದಿಂದುದಿಂಡಿನ ಉಡುಗೊರೆಯ |
ದಂಡಿಗೆ ಸತ್ತಿಗೆ ದಣಿವಷ್ಟು ವಸ್ತುವ
ಮಂಡಲೇಶ್ವರನು ಕರೆದಿತ್ತ || ೫೩ ||

ಇತ್ತನು ಸುರಿತಾಳರಾಯನಾ ಭಟ್ಟಗೆ
ಮುತ್ತಿನ ದಂಡೆ ಪದಕವ |
ಚಿತ್ತಜ ಸಮರೂಪ ರಾಮನ ತಲೆಯನು
ಎತ್ತಿಕೊಂಡಿನ್ನು ಪೋಗೆನಲು || ೫೪ ||

ನಾಳಿನ ಉದಯಕ್ಕೆ ರಾಮನ ತಲೆಯ ಹೇ
ಳದೆ ನಾನು ಕೊಂಡೊಯ್ವೆನೆನಲು |
ಕೇಳಿ ಸಂತೋಷದಿ ಸುರಿತಾಳ ಭಟ್ಟಗೆ
ವೀಳ್ಯವ ಕೊಟ್ಟು ಮನ್ನಿಸಿದ || ೫೫ ||

ಬೀಡಾರಕೆ ಬಂದು ರೂಪಿದೇವಯ ಊಟ
ಮಾಡಿ ಮಲಗೆ ಸ್ವಪ್ನದಲ್ಲಿ |
ರೂಢಿರಾಯರಗಂಡನೆಂಬ ರಾಮಯ್ಯನು
ಆಡಿದನವಗೆ ಮೂದಲಿಸಿ || ೫೬ ||

ಡಿಳ್ಳಿನಾಳುವ ಸುರಿತಾಳನ ಗಂಡ
ಬಲ್ಲಿದ ರಾಯರಗಂಡ |
ಎಲ್ಲರ ರಾಯರಗಂಡ |
ಎಲ್ಲ ತುರುಕರ ಗಂಡನೆಂದೆಂಬ ಬಿರಿದನು
ಇಲ್ಲಿ ಹೊಗಳು ನಾನು ಬಹೆನು || ೫೭ ||

ಸುರಿತಾಳನ ನಾನಿರುವಂಥ ಠಾವಿಗೆ
ಕರೆತಂದು ಅವನ ಮುಂದೆನ್ನ |
ಭಟ್ಟಾ ಕೇಳಲೋ ನೀನು ನಿನಗೆ ನಾ ಸಿಕ್ಕುವೆ[ನು]
ಉನ್ನತ ಬಿರಿದ ಕೊಂಡಾಡು || ೫೮ ||

ಸುರಿತಾಳನ ಮಗಳು ಮಿಂದು ಮಡಿಯನುಟ್ಟು
ಒಂದೊತ್ತು ಉಪವಾಸದಿಂದ |
ಎರಡು ಕೈಯ್ಯಲ್ಲಿ ಆರತಿಯನೆ ಪಿಡಿಕೊಂಡು
ನಿಂದು ಹಜಾರದ ಮುಂದೆ || ೫೯ ||

ಬಲದಲ್ಲಿ ಸುರಿತಾಳ [ಎ]ಡದಲ್ಲಿ ಆಕೆಯು
ಚೆನ್ನಾಗಿ ನಿಂತು ಹೊಗಳಿದರೆ |
ಪರಿಪರಿ ಬಿರಿದು ಕೊಂಡಾಡಲು ನಿನ್ನೊಳು
ಬರುವೆನೆನುತ ರಾಮ ನುಡಿದ || ೬೦ ||

ಛಪ್ಪನ್ನ ದೇಶದ ರಾಯರಗಂಡನೆಂದು
ತಪ್ಪದೆ ನನ್ನಯ ಬಿರಿದ |
ಒಪ್ಪದಿ ಕೊಂಡಾಡೆ ಬರುವೆನಲ್ಲದೆ ನಾನು
ಅಪ್ಪಳಿಸುವೆನು ಡಿಳ್ಳಿಯನು || ೬೧ ||

ಕಣ್ಣುದೆರೆದು ನೋಡಿದ ರೂಪಿದೇವಯ್ಯ
ಇನ್ನಿದು ಚೋದ್ಯವೆಂದೆನುತ |
ಚೆನ್ನಿಗರಾಮಯ್ಯ ತನ್ನ ಬಿರಿದನೆಲ್ಲ
ಇನ್ನ ಕೊಂಡಾಡ ಹೇಳಿದನು || ೬೨ ||

ದೈವವೆ ಬಲ್ಲವೆನುತ ರೂಪಿದೇವಯ್ಯ
ಸುಯ್ವುತ ಸುರಿತಾಳನೊಡನೆ || ೬೩ ||

ಗಂಡರಗಂಡ ಖಾನರಗಂಡ ಡಿಳ್ಳಿಯ
ಮಾಂಡಲಿಕರ ಗಂಡನೆಂದು |
ಹಿಂಡು ಮಾನ್ಯರಗಂಡನೆಂಬಂಥ ಬಿರಿದನು
ಕೊಂಡಾಡೆ ನಾ ಬರುವೆನೆಂದ || ೬೪ ||

ಹೀಗೆಂದು ಕೊಂಡಾಡೆ ಬರುವೆನೆಂದನು ರಾಮ
ಬೇಗ ಕೊಂಡಾಡದುಳಿದರೆ |
ನೀಗುವೆ ಸುರಿತಾಳನ ಡಿಳ್ಳಿಯನೆಂದು
ಈಗ ಹೇಳಿದನು ಸ್ವಪ್ನವನು || ೬೫ ||

ಸಾವುದೊಳ್ಳಿತೆ ಬರುವೆನು ರಾಮನಾಥನ
ಆವ ಪರಿಯಲಿ ನೀನು ಪೊಗಳೊ |
ನಾವು ಮಾಡಿದ ಫಲವೆನುತಲಿ ಸುರಿತಾಳ
ನೋವುತ ಬಂದನಾಯೆಡೆಗೆ || ೬೬ ||

ನಡೆದು ಬಂದನು ವೀರ ರಾಮನ ಬಳಿಗಾ
ಮುಡಿಯಿರುವಲ್ಲಿಗೆ ಬೇಗ |
ಎಡೆಯಲ್ಲಿ ನಿಂದು ಸುರಿತಾಳನು ಭಟ್ಟನ
ನುಡಿದನು ಕೊಂಡಾಡು ಎನುತ || ೬೭ ||

ಎಂದು ರಾಮಯ್ಯನ ಬಿರಿದನೆಲ್ಲವ ತನ್ನ
ಮುಂದೆ ಕೊಂಡಾಡಲು ತಲೆಯು |
ಬಂದೀತೆ ನಿನ್ನ ಬಳಿಗೆ ಎಂದು ಸುರಿತಾಳ
ಕುಂದದೆ ನುಡಿದ ಭಟ್ಟನಿಗೆ || ೬೮ ||

ಗಂಡುಗಲಿಯು ರಾಮಯ್ಯನ ಬಿರಿದನು
ಕೊಂಡಾಡಲು ಬಾರದಿರಲು |
ತುಂಡುತುಂಡಾಗಿ ಕಡಿಸು ಎನ್ನನು ಎಂದು
ಕೊಂಡಾಡಿದ ವೀರಭಟ್ಟ || ೬೯ ||

ಧರೆಯನಾಳುವ ಸುರಿತಾಳರಾಯನ ಗಂಡ
ಉಳಿದ ರಾಯರ ಗಂಡ ರಾಮ |
ತುರುಕರ ಗಂಡ ಚೆಲ್ವರ ಗಂಡನೆಂದು
ದೊರೆ ರಾಮನ ಕೊಂಡಾಡಿದನು || ೭೦ ||

ಕಾಟಣ್ಣ ಕಂಪಿಲನಲ್ಲದೆ ಉಳಿದೊಂದು
ಕೋಟ್ಯಾನುಕೋಟಿ ವೈರಿಗಳ |
ಕಾಟಕ ನಾಲ್ಕು ದಿಕ್ಕಿನ ರಾಯರಗಂಡ
ಸಾಲ್ಲ ರಾಮಯ್ಯ ನಿನಗೆ || ೭೧ ||

ಭುಗಿಭುಗಿಲೆನುತಲಿ ಎದ್ದಿತು ಆ ತಲೆ
ಬಂದಿತು ಗುಡಿಗುಡಿಸುತಲಿ |
ಬಂದು ಆ ತಲೆಯೊ[ಡನೆ] ಕುಳ್ಳಿರಲು
ಆ ತಲೆ ಪಕಪಕನೆ ನೋಡಿ ನಗುತಲಿ || ೭೨ ||

ಇದ್ದಂಥ ಖಾನಮಲುಕ ಸುರಿತಾಳರು
ನಿರ್ಧಾರದಲಿ ಬೆರಗಾಗಿ || ೭೩ ||

ಕಸ್ತೂರಿ ನಾಮವ ತಿದ್ದುತ ಸುರಿತಾಳ
ಮುತ್ತಿನ ಚೌಕುಳಿ ಇಟ್ಟ |
ಮತ್ತೆ ಹೆಣಿಸಿ ವೀರಜಡೆಯ ಶೃಂಗಾರಕ್ಕೆ
ಸುತ್ತಿದ ಜಾಜಿ ಮಲ್ಲಿಗೆಯ || ೭೪ ||

ಗಂಧವಿಡಿಯ ಕುಂಕುಮ ಕದಂಬವ
ತಂದು ರಾಮಯ್ಯನ ತಲೆಗೆ |
ಚೆಂದದಿ ಶೃಂಗಾರಮಾಡಿ ಭಟ್ಟನ ಕೈಗೆ
ತಂದು ಇಟ್ಟನು ಸುರಿತಾಳ || ೭೫ ||

ಇನ್ನಾದರು ಹೋಗೆನುತಲಿ ಸುರಿತಾಳ
ತನ್ನ ಕರಂಗಳ ಮುಗಿದು |
ಚೆನ್ನಿಗ ರಾಮನ ಕಳುಹಿ ತನ್ನರಮನೆಗೆ
ಉನ್ನತ ಹರುಷದಿ ಬಂದ || ೭೬ ||

ಡಿಳ್ಳಿಯ ಕಳೆದು ರೂಪಿದೇವಯ್ಯನು
ನಿಲ್ಲದೆ ನಾಲ್ಕಾರು ದಿನಕೆ |
ಬಲ್ಲಿದ ರಾಮನ ತಲೆಯನಿಳುಹಿ ಇತ್ತ
ನಲ್ಲಿ ವಿಶಾಲ್ಯ[ಕ್ಕೆ] ಪೋದ || ೭೭ ||

ತಿರುಗಿ ತಾ ಬಂದು ನೋಡಲು ರಾಮನ ತಲೆ
ಇರಿಸಿಹೋದಲ್ಲಿ ಇರಲಿಲ್ಲ |
ಕರೆದನು ಚೆಲ್ವರಗಂಡ ರಾಮಯ್ಯನ
ಮರದ ಮೇಲಿದ್ದು ಓಯೆನಲು || ೭೮ ||

ಅಡಗದೆ[ನಿನ್ನ] ಪರಾಕ್ರಮ ಕೀರ್ತಿಯು
ಉಡುಗಿ ಹಾಳಾಗದೆ ಎನುತ |
ಕಡುಗೋಪದಿ ರೂಪಿದೇವಯ್ಯ ಮರ ಹತ್ತಿ
ಪಿಡಿಯಲು ಪ್ರಾಣವಳಿಯಿತು || ೭೯ ||

ಭಟ್ಟನ ಶಾಪದಿ ರಾಮಯ್ಯನ ಪ್ರಾಣ
ಬಿಟ್ಟುಹೋಯಿತು ಆ ತಲೆಯ |
ಇಟ್ಟ ಕಸ್ತೂರಿ ಕಾದಂಬ ಸಹಿತ ಬಂದು
ಕೊಟ್ಟನು ಕಂಪಿಲರಸಗೆ || ೮೦ ||

ಉಡುಗೊರೆ ವೀಳ್ಯವ ದಟ್ಟಿ ಕಬಾಯವ
ಕಡೆಯದ ಪದಕ ಚೌಕಳಿಯ |
ಕಡುಗಲಿ ಕಂಪಿಲರಾಯ ಭಟ್ಟಗೆ ಕೊಟ್ಟು
ತಡೆಯದೆ ಕಳುಹಿದನವನ || ೮೧ ||

ತಲೆಯ ಕಾಣುತಲಿ ದುಃಖದೊಳದ್ದು ಕಂಪಿಲ
ಹಲಬುದಪ್ಪಿದ ಹುಲ್ಲೆಯಂತೆ |
ಬಲುಹು ಹಾಳಾಯಿತೊ ಕಂದಯ್ಯ ಎನುತಲಿ
ಚೆಲುವರ ಗಂಡನೆಂದೆನುತ || ೮೨ ||

ಅಂದು ರತ್ನಿಯ ಮಾತ ಕೇಳುತ ನಿನ್ನನು
ಕೊಂದೆನೊ ಏ ಎನ್ನ ಕಂದ |
ಬಂದಪಕೀರ್ತಿಯ ಕಳೆದ ಬೈಚಪ್ಪನು
ಮುಂದೆ ನನಗಿನ್ನು ಗತಿಯಾರೊ || ೮೩ ||

ಮೂಜಗದೊಳು ನಿನ್ನ ದೆಸೆಯಿಂದ ಕಂದಯ್ಯ
ರಾಜ್ಯವನಾಳಿದೆ ಇನ್ನು |
ಪೂಜ್ಯ ಹೋಯಿತು ದೆಸೆಗೇಡಿಯಾದೆನೊ ನಿನ್ನ
ನೇಜದ ಮೊನೆಗೆಣೆಯುಂಟೆ || ೮೪ ||

ಆವ ಮಗನ ನೋಡಿ ರಾಜ್ಯವನಾಳಲಿ
ಆವ ಸುತನ ನೋಡಿ ನಿನ್ನ |
ಆವ ಪರಿಯ ನಿನ್ನ ಗುಣ ಹೇಗೆ ಮರೆಯಲಿ
ದೇವ ಕಂಪಿಲ ಮರುಗಿದನು || ೮೫ ||

ಹೀನಜಾತಿಯ ಕೈಲಿ ಅಳಿಯೆಂದು ಹಣೆಯಲ್ಲಿ
ಏನೆಂದು ಬರೆದನೊ ಬ್ರಹ್ಮ |
ನಾನೀಗ ಪುತ್ರ ಶೋಕವನೆಂತು ಮರೆಯಲೊ
ಖಾನ ವಜೀರರಗಂಡ || ೮೬ ||

ಪಟ್ಟದ ರಾಣಿ ಹರಿಯಮ್ಮ ಸಹಿತ ಒಡ
ಹುಟ್ಟಿದವರೆಲ್ಲ ಬಾಯಿ ಬಿಡುತ |
ಕಟ್ಟೆವು ನಮ್ಮಯ ಸಿರಿಯು ಸಂತೋಷವು
ಸುಟ್ಟಹೋಹದೆ ಅಣ್ಣಾಜಿ || ೮೭ ||

ಕಂತುಸನ್ನಿಭ ಚೆನ್ನಿಗರಾಮ ನಿನಗಿದಿ
ರಾಂತು ಬಾಳುವರಿಲ್ಲವೆಂದು |
ಸಂತೋಷದಲ್ಲಿ ನಂಬಿದ್ದೆವು ತಮ್ಮನೀ
ನಿಂತು ಕೆಡಿಸಿ ಹೋಗುವರೆ || ೮೮ ||

ಪೊಡವಿಯೊಳಗೆ ನಿನಗಿದಿರಿಲ್ಲವೆನುತಲಿ
ಕಡು ನಂಬಿರ್ದೆವೊ ಅಣ್ಣ |
ಬಿಡದೆ ನೀನೀ ಪರಿಯಲಿ ನಮ್ಮ ಬಾಯಲಿ
ಹುಡಿಯನು [ಹೊಯ್ದು ] ಹೋಗುವರೆ || ೮೯ ||

ಮಾದಿಗಿತ್ತಿಯ ಕೈಲಿ ಅಳಿಯೆಂದು ಪಣೆಯಲ್ಲಿ
ಸಾ[ಧಿ]ಸಿ ಬರದಂಥ ಬ್ರಹ್ಮ |
ಹೋದ ದಾರಿಯು ಹಾಳಾಗಲಿ ಎನುತಲಿ
ಸೋದರರೆಲ್ಲ ಮರುಗಿದರು || ೯೦ ||

ಲೆ[ಕ್ಕವಿಲ್ಲ]ದೆ ತಾಯಿ ಒಡಲಿಗೆ ಕಿಚ್ಚನು
ಇಕ್ಕಿ ಹೋಗುವರೆ ಕಂದಯ್ಯ |
ದಿಕ್ಕುಗೇಡ್ಯಾದೆನೊ ಎನುತಲಿ ಹರಿಯಮ್ಮ
ದುಃಖದಲತಿ ಮರುಗಿದಳು || ೯೧ ||

ಸಿರಿಯು ಸಂತೋಷವು ದೊರೆತನವೆಲ್ಲವ
ನುರುಹಿ ಹೋಗುವರೆ ಕಂದಯ್ಯ |
ರಾಮನ ವರದಿಂದ ಪಡದೆನೊ ಜಟ್ಟಂಗಿ
ಸ್ವಾಮಿಗೆನ್ನಯ ಉಲಿಮುಟ್ಟ || ೯೨ ||

ಅರೆಯಾಯುಷ್ಯವ ನಿನಗೆ ಬರೆದಂಥ
ನೆರೆ ಬ್ರಹ್ಮನ ಮನೆ ಉರಿ[ಯಾ] |
…………………………………..
ಹರಿಯಮ್ಮ ಬಿದ್ದು ಹೊರಳಿದಳು || ೯೩ ||

ಭೂಮಿಯೊಳುಳ್ಳಂಥ ದೇವರನೆಲ್ಲವ
ನೇಮದಿ ಭಜಿಸಿ ಜಟ್ಟಂಗಿ |
ಹರನು ನಾರಾಯಣ ನನ್ನಂತೆ ದುಃಖ
ವೆರಸಲಿ ಪುತ್ರಶೋಕದಲಿ || ೯೪ ||

ದೇವ ಬ್ರಹ್ಮನು ನಾರಾಯಣ ನನ್ನಂತೆ
ಮೂವರು ಚಾಲ್ವರಿವುದ |
ಆವ ಕಾಲಕೆ ಕೇಳುವೆನೆಂದು ಹರಿಯಮ್ಮ
ದೇವಿ ಬಿದ್ದಳು ದುಃಖದಲಿ || ೯೫ ||

ಒಡ್ಡುಗೆಡೆದು ದುಃಖಮಾಡೆ ಹರಿಯಮ್ಮನ
ನೋಡಲು ಕಂಪಿಲನಾಗ || ೯೬ ||

ಇರುವೆಯ ಗೂಡಿಗೆ ಕಿಚ್ಚನಿಕ್ಕಿದೆ ಬಂದು
ಅರೆಮಾಡಿ ನಮ್ಮ ಮೋಹವನು |
ಬರುಕೈಯಮಾಡಿ ಹೋಗುವರೆ ರಾಮಯ್ಯ
ಸ್ಥಿರ [ಮಾಡಿ] [ಎ]ನಗೆ [ದುಃಖವನು] || ೯೭ ||

ಹೆಂಡರು ಮಕ್ಕಳು ಸಹವಾಗಿ ಕಂಪಿಲ
ಮುಂಡಾಡಿ ಮುದ್ದಾಡಿ ಮಗನ |
ಕೊಂಡುಹೋಗಿರೊ ಕಾಶಿಯಪಟ್ಟಣಕೆಂದ
ಗಂಡಾಳು ರಾಮನ ತಲೆಯ || ೯೮ ||

ದೇಶಾಧಿಪತಿ ರಾಮಯ್ಯನ ತಲೆಯನು
ಕಾಶಿಯ ಪಟ್ಟಣಕೊಯ್ದು |
ಈಶ್ವರನ ಪಾದಕರ್ಪಿಸುಯೆಂದು ಕಂಪಿಲ
ಆ ಸಮಯದಿ ಕಳುಹಿದನು || ೯೯ ||

ಇತ್ತಲೀ ತಲೆಯ ಕಂಪಿಲರಾಯ ಕಳುಹಿದ
ಅತ್ತಲೀಶ್ವರ ಮನಮೆಚ್ಚಿ |
ನೆತ್ತರ ಕಾಯವ ತರಹೇಳಿ ಚರರಟ್ಟಿ
ಅರ್ತಿಲಿ ತೆಗೆಸೆ ಕಾಯವನು || ೧೦೦ ||

ಹಿಂದಣ ಶಾಪದಿ ರಾಮನ ತಲೆಹೋಗಿ
ಸಂದಿತು ಡಿಳ್ಳಿಪಟ್ಟಣಕೆ |
ಕುಂದದೆ ಉಳಿದಂಥ ಕಾಯವ……
…………………………………. || ೧೦೧ ||

……………………………………..
ಕಾಯಾ ಒಣಗಿಸಿ ನೋಡದಿ |
……………………………………..
ಶಿವನೊಯ್ದನೆಂದೆನುತ || ೧೦೨ ||

ಎಲ್ಲರು ರಣವ ಶೋಧಿಸಿಕೊಳುತ ಬಂದರು
ಬಲ್ಲಿದ ರಾಮನ ಕಾಯ |
ಇಲ್ಲವೆನುತ ಪೇಳಿದರೆಲ್ಲ ಬೈಚಪ್ಪ
ಎಲ್ಲಿ ಹೋಯಿತೊ ರಾಮನ ಕಾಯ || ೧೦೩ ||

ಕಾಯವಿದ್ದರೆ ತಲೆ ಮುಂಡವ ಕೂಡಿಸಿ
ಸಾಯುಜ್ಯಪದವಿಯ ಮಾಡಿ |
ಕಾಯ[ವೆ]ರಸಿ ಕಳುಹುವೆ ಕಾಶಿ ನದಿಗಾಗಿ
ಕಾಯ ಸಿಕ್ಕದೆ ಹೋಯಿತೊ ಮಂತ್ರಿ || ೧೦೪ ||

ತಲೆಯ ಕಳುಹಿಸೊ ಮಂತ್ರಿ ಬೇಗ ಕಾಶಿಗಾಗಿ
ನಿಲ್ಲಿಸಬೇಡೊಂದು ಗಳಿಗೆ |
ಕಲಿ ರಾಮನಾಥನ ತಲೆಯ ಭಟ್ಟರು ಕೂಡಿ
ಒಲಿದು ಬ್ರಾಹ್ಮರ ಕೊಟ್ಟುಕಳುಹೆ || ೧೦೫ ||

ಕಾಶಿಯಪಟ್ಟಣಕೊಯ್ದು ಈ ತಲೆಯನು
ಲೇಸಿಂದ ಭಾಗೀರಥಿಯೊಳಗೆ |
ವಾಸವಮಾಡಿಯೆ ಕಾಶಿಯ ಈಶ್ವರಗೆ
ಲೇಸು ಆರಾಧನೆ ಮಾಡಿ || ೧೦೬ ||

ಅನ್ನಶಾಂತಿಯ ಮಾಡಿ ನೀವು ಬನ್ನೆನುತಲಿ
ಮನ್ನಿಸಿ ಹಣ ಹೊನ್ನು ಕೊಟ್ಟು |
ಉನ್ನತ ಮಾತನೆಲ್ಲವ ಹೇಳೆ ಕಂಪಿಲ
ಚೆನ್ನಾಗಿ ಪುರೋಹಿತರಿಗೆ || ೧೦೭ ||

ಅಪ್ಪಣೆ ತೆಗದು ಪುರೋಹಿತರು ಅವರಾಗ
ತಪ್ಪದೆ ಕಾಶಿಪಟ್ಟಣಕೆ |
ಒಪ್ಪದಿ ಬಂದು ಸ್ನಾನವಮಾಡಿ ನದಿಯೊಳು
ಸುಪ್ಪಾಣಿ ರಾಮನ ತಲೆಯ || ೧೦೮ ||

ಆಗಲೆ ತಲೆಯ ನದಿಯೊಳು ಹಾಕುವರೆಂಬ
ಯೋಗವ ತಿಳಿದು ಗುರುಡಾಳು |
ಬೇಗ ಆಕಾಶದೊಳ್‌ ಕಾದು ತಾನಿರ್ದು
ತೂಗಿ ಬೀಸಾಡುವದ ಕಂಡು || ೧೦೯ ||

ಬಂದ ಬ್ರಾಹ್ಮರು ಮಂತ್ರಯೋಗದಿಂದ ತಲೆಯ
ನಿಂದು ಹಾಕಲು ನದಿಯೊಳಗೆ |
ಅಂದು ತಲೆಯು ನದಿಯೊಳು ಬೀಳುವಾಗಲು
ಬಂದು ಗುರುಡಾಳು ಕೊಂಡೊಯ್ಯೊ || ೧೧೦ ||

ನದಿಯೊಳು ತಲೆ ಬಂದು ಬೀಳುವ ಸಮಯದಿ
ಒದಗಿ ಅಂತರ ಮಾರ್ಗದಲಿ |
ಮುದದಿಂದ ಕಚ್ಚಿಕೊಂಡೊಯ್ದ ಗುರುಡಾಳನು
ಚೆದುರ ರಾಮಯ್ಯನ ತಲೆಯ || ೧೧೧ ||

ಇದು ಚೋದ್ಯವೆಂದು ಬಂದವರೆಲ್ಲ
ನೋಡಲು [ಒಯ್ದಿತು] ಕೈಲಾಸಪುರಕೆ |
ಒದಗಿ ನಾನಾ ದಾನ ಧರ್ಮವನು ಮಾಡಿ
ಕದಲಿ ಬಂದರು ಈಶನೆಡೆಗೆ || ೧೧೨ ||

ಕಾಶಿಯ ಈಶ್ವರಗೆ ನೈವೇದ್ಯವ ಮಾಡಿ
ಲೇಸಿಂದ ಮಾಡಿದರಾಗ |
ದೋಸಿಗ ಬ್ರಾಹ್ಮರಿಗೆಲ್ಲ ದಾನವನಿತ್ತು
ಆ ಸಖೆಯರ ಕೂಡಿಕೊಂಡು || ೧೧೩ ||

ಇಲ್ಲಿಂದ ತೀರ್ಥ ಪ್ರಸಾದವ ತೆಕ್ಕೊಂಡು
ಮೆಲ್ಲನೆ ಕುಮ್ಮಟಕಾಗಿ |
ಎಲ್ಲರು ಕೂಡಿ ಒಂದಾಗಿ ಮಾತಾಡುತ
ನಿಲ್ಲದೆ ಕಂಪಿಲನೆಡೆಗೆ || ೧೧೪ ||

ಇತ್ತ ಜೋಯಿಷ್ಯರು ಕುಮ್ಮಟಕಾಗಿ ಬಂದರು
ಅತ್ತ ಗರುಡಾಳು ಬೇಗದೊಳು |
ಎತ್ತಿ ತಲೆಯನು ತಂದು ಈಶ್ವರನ ಸದರಿಗೆ
ಮತ್ತೆ ಗರುಡಾಳು ಬಿನ್ನೈಸೆ || ೧೧೫ ||

ಹರನು ವಾಲಗದೊಳು ಸಕಲ ಗಣಂಗಳು
ಹರಿ ಬ್ರಹ್ಮ ರುದ್ರಾದಿಗಳು |
ಇರಲುಮೆ ಸಹ ಈಶ ನುಡಿದನು ರಾಮನ ಪರಿಯ
ಪರಿಯ ಕಂಡಿರ ಕಂಡಿರೆನುತ || ೧೧೬ ||

ನರಜಲ್ಮದಲ್ಲಿ ಪುಟ್ಟಿಸಿ ನೋಡಿದೆವು ಅವನ
ಪರನಾರಿಯರ ಸಹೋದರನ |
ಬಿರಿದ ಕಾಲೊಳು ಹಾಕಿ ಗೆದ್ದನು ಪಾರ್ಥನು
ಕರೆತನ್ನಿ ಅವರ ನೋಡುವರೆ || ೧೧೭ ||

ತಲೆ ಮುಂಡ ಗೂಡಿಸಿ ಪ್ರಾಣವಿತ್ತನು ಈಶ
ನಲಿವುತ………………..ರಾಮಯ್ಯ |
ಬಲವಂತನಹುದೊ ನಮ್ಮ ಜೂಜ ಗೆಲಿಸಿದೆ
ಕಲಿಪಾರ್ಥ ನೀನಹುದೆಂದ || ೧೧೮ ||

ಬಂದಡ್ಡಬಿದ್ದ ಉಮೆಯರಸಗೆ ರಾಮಯ್ಯ
ನಿಂದನು ಕೈಯ್ಯನು ಮುಗಿದು |
ಅಂದಚೆಂದವು ನರರೂಪಿನ ಕಾಂತಿಯು
ಅಂದೆಲ್ಲ ಹರಸಿ ಗಣ ನೋಡಿ || ೧೧೯ ||

ನಾರಾಯಣ ನಿನ್ನ ಮೈದುನ ಬಂದನು
ಈರೇಳು ಭುವನವ ಗೆದ್ದು |
ನಾರಿಯ ಶಾಪವ ಕಳೆದು ಹುಜುರು ಬಂದ
ವೀರಪಾರ್ಥನು ತಾನಹುದು || ೧೨೦ ||

ಪಾರ್ವತಿ ಕಂಡು ಪಾರ್ಥವ ಅತಿನಿಷ್ಠೆಯ
ಊರ್ವಿಯಳಗೆ ರಾಯರನೆಲ್ಲ |
ಗರ್ವವ ಮುರಿದು ಊರ್ವಶಿ ರಂಭೆಯ ಗೆದ್ದು
ನಿರ್ವಾಹ ಮಾಡಿದನು ಮಾತ || ೧೨೧ ||

ಬಲ್ಲಿದನಹುದೀಗ ಶಿವ ನಿಮ್ಮ ಪಾರ್ಥನ
ಗೆಲ್ಲಲಿಲ್ಲವು ನಮ್ಮ ರಂಭೆ |
ಉಲ್ಲಾಸ……[ಉ]ಮೆ ಹರಕೆಯ ಕೊಟ್ಟಳು
ಮೆಲ್ಲನೆ ನಾರಾಯಣನೊಡನೆ || ೧೨೨ ||

ಹೋಗಯ್ಯ ವೈಕುಂಠಪುರಕೆ ಸಾಗಿ ನೀನು
ಬೇಗದಿ ಹರಿಯನೆಡೆಗೊಂಡು |
ಆ ಗಳಿಗೆಯೊಳು ಸಾಯುಜ್ಯಪದವಿಯ ಕೊಟ್ಟು
ನೀಗೆಂದು ನರಜಲ್ಮವನು || ೧೨೩ ||

ನಾರಾಯಣ ಪಾರ್ಥರಿಬ್ಬರು ಗರುಡನ
ಏರಿಕೊಂಡು ಹರುಷದಲಿ |
ಹಾರಿತು ಅಲ್ಲಿಂದ ವೈಕುಂಠಪುರಕಾಗಿ
ನಾರಾಯಣನೊಡಗೊಂಡು || ೧೨೪ ||

ರಾಮನಾಥನ ಕಥೆಯನು ಕೇಳಿದ ಜನರಿಗೆ
ಭೂಮಿದಾನವನಿತ್ತ  ಫಲವು |
ಪ್ರೇಮದಿ ಸಕಲ ಐಶ್ವರ್ಯವು ದೊರಕುವುದು
ಆ ಮಹಾದೇವ ರಕ್ಷಿಸುವ || ೧೨೫ ||

ಸಂಗ್ರಾಮಧೀರನ ಚರಿತೆಯ ಕೇಳಲು
ಹಿಂಗದೆ ಸಂತಾನಫಲವು
[ಬಂಗಾರ] ರಾಜ್ಯವು ಸ್ಥಿರವು ಜಟ್ಟಂಗಿಯ
ಲಿಂಗನ ಕೃಪೆಯಿಂದಲಹುದು || ೧೨೬ ||

ಕಂದರ್ಪರೂಪ ರಾಮಯ್ಯನ ಚರಿತೆಯ
ಚೆಂದದಿಂದಲಿ ಕೇಳಿದವರ್ಗೆ |
ಬಂಧನ ಪೋಗಿ ಸಂತೋಷ ಬರುವುದಿಂದು
ಚಂದ್ರಶೇಖರನ ದಯದಿಂದ || ೧೨೭ ||

ಕರುಣದಿಂ ಕಾಪಾಡುವ ಪೊಂಪಾಪತಿ
ವಿರೂಪಾಕ್ಷಲಿಂಗ ರಕ್ಷಿಸುವ |
ಶರಣು ದಯಾಳು ಜಟ್ಟಂಗಿಯ ಸ್ವಾಮಿಯ
ಕರುಣದಿ ಸುಖ ಬಾಳ್ವರವರು || ೧೨೮ ||

ಈ ಮಹಾಕೃತಿಯನು ಓದಿ ಬರೆದು ಕೇಳಿ
ದಾ ಮಹಾಪುರುಷನಾವನಿಗೆ |
ಭೂಮಿಯೊಳ್‌ ಶನಿಹತ್ತಿರೆ ಬಿಟ್ಟು ಓಡುವುದು
ಸ್ವಾಮಿ ಈಶ್ವರ ಶಿವನಾಣೆ || ೧೨೯ ||

ಇದು ರಾಮನ ಸ್ತುತಿಯ ಬರೆದೋದಲು
ಪದೆಪದೆ ಲಕ್ಷ ಸ್ಮರಣೆಯ |
ಮಧುಸೂದನ ದಾರಿದ್ರವ ಕಳೆದಿನ್ನು
ಒದಗಿಸುವನು ಸೌಭಾಗ್ಯವನು || ೧೩೦ ||

ಪಾರ್ವತದೇವಿ ಪರಮೇಶ ವಾಲಗದೊಳು
ಊರ್ವಿಯೊಳರ್ಜುನ ಪುಟ್ಟಿ |
ದೇವ ಜಟ್ಟಂಗಿ ರಾಮೇಶ್ವರನ ವರದಿಂದ
ಊರ್ವಶಿ ರಂಭೆಯ ಗೆಲಿದ || ೧೩೧ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಸುದತಿಯೂರ್ವಶಿ ರಂಭೆಯ ಗೆದ್ದನರ್ಜುನ
ಪದಗಳು ಮುಗಿಯೆ ಈ ಸಂಧಿ || ೧೩೨ ||

ಪರನಾರಿಯರ ಸೋದರನೆಂಬ ಬಿರಿದನು
ಧರಿಸಿ ಧರಿಸಿಕೊಂಡ ರಾಮ |
ಪರಮಾತ್ಮ ಕೃಪೆಮಾಡಿ ಹುಜುರು ಕರೆಸಿಕೊಂಡು
ಸರಸದ ಸಂಧಿ ಸಂಪೂರ್ಣ || ೧೩೩ ||

ಅಂತು ಸಂಧಿ ೨೬ಕ್ಕಂ ಪದನು ೨೭೯೬ಕ್ಕಂ ಮಂಗಳ ಮಹಾಶ್ರೀ