ಶ್ರೀ ಗಿರಿಜಾ [ಸ್ಯಾಂಬುಜ ದಿನ]ನಾಯಕ
ಭೋಗೀಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ]ಶರಣೆಂಬೆ || ೧ ||

ಬಿಟ್ಟೋಡಿ ಹೋದಂಥ ಮಾತಂಗಿ ತಾ ಬಂದು
ಬಿಟ್ಟಳು ಕುಮ್ಮಟಕಾಗಿ |
ಕೊಟ್ಟದ ಬೇಡರು ಕಡಿಕಡಿದೊಟ್ಟುವ
ದಿಟ್ಟವನೇನ ಬಣ್ಣಿಸುವೆ || ೨ ||

ಬಂದಂಥ ವಾಲೆಯ ನೋಡುತ ಮಾತಂಗಿ
ನಿಂದಳು ಸಂತೋಷದಲ್ಲಿ |
ಮಂದಿ ಕುದುರೆ ಪರಿವಾರ ರಾಹುತರೆಲ್ಲ
ಬಂದಳು ತಿರುಗಿ ಮಾತಂಗಿ || ೩ ||

ಹೇಳಿದ ಮಾತ ಕೇಳುತಲಿ ಮಾತಂಗಿಯು
ದಾಳಿ ಮಾಡಿದಳು ಕುಮ್ಮಟಕೆ || ೪ ||

ತಿರುಗಿ ಬಂದನು ಕುಮಾರ ಕಾಟಣ್ಣನು
ಅರಮನೆಗಾಗಿ ಬೇಗದೊಳು |
ಅರಸುಯಿಲ್ಲದೆ ಕಾಳಗವಿನ್ನು ಜಯಿಸದು
ಧುರಧೀರ ರಾಮ ಚಿತ್ತೈಸು || ೫ ||

ಆಳ ಕಾದಿಸಿ ನೋಡುವ ರಾಯರಗಂಡ
ಕೇಳಿ ಕಾಟಣ್ಣನ ಮಾತ |
ತಾಳಿ ಮನದಲ್ಲಿ ಸಂತೋಷದಿ ನಲಿವುತ
ಹೇಳೆಂದು ಮತ್ತೆ ನುಡಿದನು || ೬ ||

ಕಾಲನ ಕಾಮಾಟವಾಗಿದೆ ಕುಮ್ಮಟ
ಲೀಲೆಯಾಗಿದೆ ದುರ್ಗದೊಳಗೆ |
ಬಾಲಕ ಮಕ್ಕಳೆಲ್ಲರು ಕಡಿದಾಡಿದರು
ಹೇಳಲಿನ್ನೇನು ಪಟ್ಟಣವ || ೭ ||

ಕೆಳಗೋಟೆ ಹೋಯಿತು ಎಲೊ ರಾಯರಗಂಡ
ಬಳಿಕ ನೀ ಮಾಡುವುದೇನು |
ಒಳಗೊಟ್ಟರು ನಮ್ಮ ತೆಲುಗ ಮನ್ನೆಯರೆಲ್ಲ
ಇಳುಹೊ ಲೆತ್ತವನು ಬೇಗದಲಿ || ೮ ||

ಮನ್ನೆಮನ್ನೆಯರೆಲ್ಲ ತುರುಕರಿಗೊಳಗಾದ
ರೆನ್ನುವ ಸುದ್ದಿಯ ಕೇಳಿ |
ಇನ್ನದು ಚೋದ್ಯವೆಂದು ರಾಮನಾಥನು
ತನ್ನೊಳು ತಾನು ನಿಶ್ಚೈಸಿ || ೯ ||

ಈಗಲೆ ಕಡಿವೆನು ತುರುಕರ ದಂಡನು
ಹೋಗದೆ ಮರೆತು ಕಾದಿದರೆ |
ನೀಗುವೆನೆನ್ನ ಪ್ರಾಣವನೆಂದು ರಾಮಯ್ಯ
ಸಾಗಿ ಬಂದನು ತನ್ನರ ಮನೆಗೆ || ೧೦ ||

ತಿರುಗಿ ತನ್ನರಮನೆಗಾಗಿ ರಾಮಯ್ಯನು
ಅರಸಿಯರನು ಕರೆಸಿದನು |
ತರಿಸಿ ಮುತ್ತಿನ ಗದ್ದುಗೆ ಮೇಲೆ ಕುಳಿತಿರ್ದು
ಹರುಷದಿ ಮಾತಾಡಿದನು || ೧೧ ||

ಕಿಚ್ಚ ಕಂಡು ಕಣ್ಣುಗೆಡಬೇಡಿ ಮನದೊಳು
[ಒಚ್ಚೆಯ] ತಂದುಕೊಳ್ಳೆನುತ |
ನಿಶ್ಚೈಸಿ ತನ್ನ ಕೂಡಲಿ ಬನ್ನಿಯೆನುತಲಿ
ಮೆಚ್ಚಿನ ಮಡದೆರ್ಗೆ ಉಸುರೆ || ೧೨ ||

ಮಡದಿಯರಿಗೆ ಬುದ್ಧಿ ಹೇಳಿನ್ನು ರಾಮಯ್ಯ
ಮಡಿದೆನೆಂದರೆ ಎನ್ನೊಡನೆ |
ಬಿಡುವುದು ಪ್ರಾಣವ ಎನುತ ತಾಂಬೂಲವಿತ್ತು
ಕಡುಗಲಿ ಕಳುಹಿಸಿಕೊಂಡ || ೧೩ ||

ಉಟ್ಟನು ಪಟ್ಟೆ ವಂಕುಡಿದಾರವ ರಾಮ
ನೆಟ್ಟನೆ ಏಕಾಂಗವೀರ |
ಪಟ್ಟದರಾಣಿ ತಂದಳು ಅಮೃತಾನ್ನವ ಹೊಂ
ಬಟ್ಟಲೊಳಗೆ ರಾಮಯಗೆ || ೧೪ ||

ಹುಟ್ಟಿದ ಒಡಹುಟ್ಟು ಕಾಟಣ್ಣ ಸಹಿತ ಪೊಂ
ಬಟ್ಟಲೊಳಮೃತಾನ್ನವು |
ಕಟ್ಟಿಳಿಲ್ಲದೆ ಪರಿವಾರಕ್ಕೆ ಹೊನ್ನ
ತಟ್ಟೆಲಿ ಇತ್ತ ವೀಳ್ಯಯವ || ೧೫ ||

ತುಂಬಿತು ಪಣೆಯ ಬರಹವು ಜಟ್ಟಂಗಿಯ
ಶಂಭುಲಿಂಗನ ಕೃಪೆ ತಪ್ಪಿ || ೧೬ ||

ತನ್ನೊಳಗೈದು ಬಂದಿತು ನಾಲ್ಕು ಸಾವಿರ
ಹೊನ್ನ ಕಟ್ಟಿನ ಬಿಲ್ಲಿನವರು |
ಮನ್ನಿಸಿ ಕರ್ಪುರ ವೀಳ್ಯವನಿತ್ತನು
ಚೆನ್ನರಾಮಯ್ಯ ಧನು ಪಿಡಿದ || ೧೭ ||

ಧನುವ ಪಿಡಿದುಕೊಂಡು ಚೆನ್ನಿಗರಾಮಯ್ಯ
ಘನ ಕೋಪಾಟೋಪದಲೆದ್ದು |
ಚೆನುಮಯ ಜಟ್ಟಂಗಿ ರಾಮೇಶ ಗತಿಯೆಂದು
ಅನುವಾಗಿ ಹೊರಟ ಕಾಳಗಕೆ || ೧೮ ||

ದ್ವಾರವಾಟದಲಿ ನಿಂದನು ರಾಮನಾಥನು
ಆರು ಬಿದ್ದರು ಎಂದೆನಲು || ೧೯ ||

ನಲ್ಲ ನಾಗನು ಬಿದ್ದ ಬಿಲ್ಲ ಪೆನ್ನನು ಬಿದ್ದ
ಅಲ್ಲಿ ಮೀನಿಗ ಸಿಂಗ ಬಿದ್ದ |
ಜಲ್ಲಿಬಿಲ್ಲಿನ ಬುಕ್ಕಿನಾಯಕ ಮೊದಲಾದ
ಕಲ್ಲಕೋಟೆಯ ಚಿಕ್ಕ ಬಿದ್ದ || ೨೦ ||

ಮೂದಲಿಸುತ ಮಾದಿಗ ಹಂಪ ರಣದೊಳು
ಭೇದವಿಲ್ಲದೆ ಹೊಯ್ದಾಡಿ |
ಸಾಧಿಸಿ ಒಳಪೊಕ್ಕು ಬಾಹ ತುರುಕರೊಳು
ಕಾದಿ ಬಿದ್ದನು ಸಂಗ್ರಾಮದೊಳು || ೨೧ ||

ಎಕ್ಕಟಿಗರು ಬಿದ್ದರೇಳೊ ಚೆನ್ನಿಗರಾಮ
ಅಕ್ಕಸಾಲೆರ ಚಿಕ್ಕ ಬಿದ್ದ |
ದಿಕ್ಕು ದಿಕ್ಕಿಗೆ ಬಲು ಬಲಿಗಳನಿಕ್ಕುತ
ರಕ್ಕಸ ಮನ್ನೆಯ ಬಿದ್ದ || ೨೨ ||

ಖಂಡೆಯಕಾರ ತುಳುವರ ಮಂದಿ ಬಿದ್ದಿತು
ಗಂಡುಗಲಿಯೆ ವೀರರಾಮ |
ಕೊಂಡುಬಂದು ಕದನದ ಮೇಲೆ ಕೆಡಹುವ
ಲೆಂಡ ಕೊಳ್ಳಿಯ ನಾಗ ಬಿದ್ದ || ೨೩ ||

ತೊಲಗದೆ ಹೊಯ್ದಾಡಿ ಅಲ[ಗಿಗೆ] ಗುರಿಯಾಗಿ
ಬಲವಂತ ಬೇವಿನ ಸಿಂಗ |
ಕಲಿರಾಮ ನಿನ್ನ ಮೋಹದ ಎಕ್ಕಟ್ಟಿಗನು
ಹೊಲೆಯರ ಹಳ್ಳುಗ ಬಿದ್ದ || ೨೪ ||

ಹೇಳಿದ ಮಾತನು ಕೇಳುತ ರಾಮನು
ತಾಳಿದ ಮನ[ದಿ] ರೋಷವನು |
ಹೋಳುಹೋಳಾಗಿ ಕಡಿವೆ ತುರುಕರ ದಂಡ
ಕಾಳಗದಲಿ ಮೂದಲಿಸಿ || ೨೫ ||

ಈ ಕಡೆಯ ಹೋಗಿ ಕಾದಿಸೊ ಕಾಟಣ್ಣ
ಬೇಕಾದ ಮಂದಿಯ ಕೊಂಡು |
ಏಕಾಂಗವೀರರೆಲ್ಲರು ಕೋಟೆಯ ಹತ್ತಿ
ನೂಕಿ ತಿವಿದು ಸಬಳದಲಿ || ೨೬ ||

ಸಂಭ್ರಮದಲಿ ಇಳಿದನು ರಾಮ ದುರ್ಗವ
ಕೊಂಬಿನ ನಾದ ಹೆಗ್ಗಾಳೆ |
ಬೊಂಬುಳಿ ವಾದ್ಯ ನಿಸ್ಸಾಳ ವಾದ್ಯಗಳಿಂದ
ಕುಂಭಿನಿ ನಾಲ್ಕು ದೆಸೆಯಲ್ಲಿ || ೨೭ ||

ಕಹಳೆಯ ಧ್ವನಿಯನು ತುರುಕರು
ಪಾಳೆಯ ಗದಗದಿಸುತಲಿ |
ದಾಳಿಯ ಬರು [ತಾ]ನದಕೋ ರಾಮಯ್ಯನು
ಕರದಲ್ಲಿ ಧನುವ ಜೇವೊಡೆದು || ೨೯ ||

ಮೆಲ್ಲನೆ ದುರ್ಗವನಿಳಿದು ರಾಮಯ್ಯನು
ಬೊಲ್ಲನ ತಂದು ನಿಲ್ಲಿಸಲು |
ಜಲ್ಲನೆ ಏರಿ ದುವ್ವಾಳಿಸಿ ರಾಮಯ್ಯ
ಎಲ್ಲ ಕುದುರೆಯ ಪೌಜಿನಿಂದ || ೩೦ ||

ಏರಿ ಆನೆಯ ಮೇಲೆ ಬರುವ ಮಾತಂಗಿಗೆ
ತೋರಿದರು ಇವ ರಾಮನೆನುತ |
ಧಾರುಣಿಯೊಳು ಚೆಲ್ವರಗಂಡ ರಾಮನ ಕ
ಣ್ಣಾರೆ ನೋಡಿದಳು ಮಾತಂಗಿ || ೩೧ ||

ಮಾದಿಗಿತ್ತಿಯ ತೋರೆನುತಲಿ ರಾಮಯ್ಯ
ಕಾದುತ ಕೇಳಿದನಾಗ |
ಮೂದಲಿಸುತ ಬಂದಳು ರಾಮಗಿದಿರಾಗಿ
ಕಾದುತ ಮಾತಂಗಿ ನಿಂದಳು || ೩೨ ||

ನಿನ್ನ ನೀನರಿಯೆ ನೋಡೆನುತ ಮಾತಂಗಿ ಅ
ಹನ್ನೆ ಹೇಳಿದಳು ರಾಮನಿಗೆ |
ತನ್ನ ಸಮಾನದ ದೊರೆಗಳು ಸಹವಾಗಿ
ಚೆನ್ನಿಗ ರಾಮನ ಮೇಲೆ || ೩೩ ||

ರಕ್ಕಸ ಮಾದಿಗಿತ್ತಿಯ ಮೇಲೆ ಎಸೆವುತ
ಲೆಕ್ಕವಿಲ್ಲದೆ ಸಿಂಗಾಡಿಯನು |
ಸೊಕ್ಕಾನೆ ಕುದುರೆ ಕಾಲಾಳು ರಾಹುತರೆಲ್ಲ
ಇಕ್ಕೆಲದಲ್ಲಿ ಏರಿದರು || ೩೪ ||

ಸಿಡಿಲ ತಡೆಯನೊಡೆದಂತೆ ಸಿಂಗಾಡಿಯು
ಕಾಡಿನೊಳೆಸೆದ ಕಾರ್ಮಳೆಯು |
ಕಡುಗಲಿ ರಾಮನು ಒಳ ಕಣಿವೆಯ ಪೊಕ್ಕು
ಕಡಿದನಾನೆಯ ಶಿರದೆಡೆಯ || ೩೫ ||

ಪಿಡಿದೆಳೆಯಲು ವೀರಜಡೆಯ ಮಾತಂಗಿಯ
ಪಡೆ ಮುರಿದುದು ದೆಸೆದೆಸೆಗೆ |
ತಡೆಯದೆ ರಾಮನವಳ ನೋಡಿ ಮನ್ನಿಸಿ
ಕಡುಗಲಿ ಮನದೊಳಿಂತೆಂದ || ೩೬ ||

ಸಂಗ್ರಾಮದೊಳು ಕಾದಿ ಹೆಂಗಡ ಕೊಂದರೆ ದು
ಸ್ಸಂಗ ತಪ್ಪದು ಸ್ವರ್ಗದಲಿ |
ನಿಂಗಿ ಹೋಗೆನುತ ಮುಂದಲೆಯನು ಬಿಡಲಾಗ
ಸಿಂಗಾಡಿಯಲಿ ತೆಗೆದೆಚ್ಚಳು || ೩೭ ||

ಹೊಕ್ಕಳು ಮೂದಲಿಸುತ ಮಾತಂಗಿಯು
ಇಕ್ಕೆಲದಲ್ಲಿ ಕರ್ಕಸದ |
ಲೆಕ್ಕವಿಲ್ಲದ ಅಂಬುಗಳನು ತೆಗೆತೆಗೆ[ತೆಗೆ]
ದಿಕ್ಕಿ ದೊರೆ ರಾಮನ ಮೇಲೆ || ೩೮ ||

ಆಲುತ ಬೊಬ್ಬಿರಿದೆಚ್ಚರೆ ರಾಮನ ಕೀಲಿಸಿ
ಕೀಲಿಸಿ ತಲೆಯ ತಟ್ಟುಗುಚಿ |
ಕೋಳಾಹಳವ ರಾಮ ನೋಡಿ ಇಂದಿನದಲ್ಲಿ
ಹಾಳಾಯಿತು ಕುಮ್ಮಟವು || ೩೯ ||

ಕಿತ್ತನು ರಾಮ ತನ್ನದೆಯ ಅಂಬನು ಆಗ
ಒತ್ತಿ ಹರಿವ ರಕುತವನು |
ಅತ್ಯಂತ ಹರುಷದಿ ನೋಡಿ ಹಾಹಾಯೆಂದು
ಮತ್ತೆ ಮನದೊಳಗೆ ಇಂತೆಂದ || ೪೦ ||

ರಾಮನು ಧರೆಯ ರಾಯರಗಂಡನೆಂದೆಂಬ
ನಾಮವಳಿಯತು ಇಂದಿನಲಿ |
ಹಾಹಾ ವಿಧಿಯೆ ಎಂದೆನುತಲಿ ರಣದ ನಿ
ಸ್ಸೀಮ ನುಡಿದ ರಾಮನಾಥ || ೪೧ ||

ಧಾರುಣಿಯೊಳು ತೋಳ ಬೀಸಿ ನಡೆವ ದೊರೆಯ
ವೀರ ರಾಯರಗಂಡನೆಂಬ |
[ಬಿರಿದಿ]ದೀಗಳಿಯಿತೆ ಎನುತಲಿ ರಾಮಯ್ಯ
ಮಾರಸನ್ನಿಭನು ತಾ ನುಡಿದ || ೪೨ ||

ಬಲವಂತ ರಾಮನೆಕ್ಕಟಿಗರೆಲ್ಲರು ತಮ್ಮ
ಅಲಗನುಗಿದು ಬೊಬ್ಬಿರಿದು |
[ಕೆಲ]ಬಲದಲ್ಲಿ ಬಾಣದ ಮಳೆಗರೆಯಲು
ಕೊಲಲೊಯೆಂದು ಏರಿದರು || ೪೩ ||

ಕೆಣಕುತ ಕಿಚ್ಚಿನ ರೋಷದಿ ಎಕ್ಕಟಿಗರು
ರಣಮಯವರ್ಭುತವಾಗೆ |
ದಣಿಯದೆ ಬಾಣದ ಬಸವಯ್ಯ ನೇಮಿಗೆ
ಹಣಿದನು ಖಾನಖಾನರನು || ೪೪ ||

ಹೆಬ್ಬುಲಿ ಪಶುವಿನ ಹಿಂಡಿನೊಳಗೆ ಹೊಕ್ಕು
ಅಬ್ಬರದಲಿ ಹೊಯ್ದಂತೆ |
ತಬ್ಬಿಬ್ಬಿಗೊಳ್ಳದೆ ಬಾಣದ ಬಸವಯ್ಯ
ನಿಬ್ಬರದಿ ಬಿದ್ದ ರಣದೊಳಗೆ || ೪೫ ||

ಇಟ್ಟಣಿಸುವ ಮುಂದಲ ಕಾಳಗದೊಳಗೆ
ಒಟ್ಟಿತು ಹೆಣದ ರಾಸಿಗಳು |
ಅಟ್ಯಾಡಿ ಕಡಿದರು ತುರುಕರ ದಂಡನು
ನೆಟ್ಟನೆ ರಾಮನ ಭಟರು || ೪೬ ||

ಹುಲಿಮುಖದಲ್ಲಿ ಕವಿಚೆಚ್ಚರು ಖಾನರು
ಕಲಿ ರಾಮನ ಮುಸುಕಿದರು |
ಅಲಗಿನ ತಡೆಯ ಬಿಟ್ಟಂತೆ ಕಾಲಾಳ
ತಲೆಗಳ ಚೆಂಡಾತಿರಲು || ೪೭ ||

ಕೊಂದನು ಕೈದಣಿಯದೆ ಮೈದಣಿಯದೆ
ಬಂದ ಮಲ್ಲೂಖಾನರನು |
ಬಂದನು [ಗೂ]ಗೆಗಲ್ಲಿನ ಮೇಲೆ ರಾಮಯ್ಯ
ಮಂದಿ ಬಿದ್ದಿತು ಹಿಂದೆಮುಂದೆ || ೪೮ ||

ಕಾಟಣ್ಣನೊಂದು ಕಡೆಯಲಿ ಕಾದುತಲಿರ್ದ
ನೋಟ ರಾಮನ ಮೇಲೆ ಹರಿದು |
ಕೂಟದ ಮಂದಿ ಸಂಗ್ರಹನೆಲ್ಲವ ಕೂಡಿ
ದಾಟಿಬಂದನು ರಾಮನೆಡೆಗೆ || ೪೯ ||

ಹರಿದೋಡಿ ಬಂದು ಹೊರಬಿದ್ದನು ಕಾಟಣ್ಣ
ದೊರೆ ರಾಮನ ಕಾಲ ಮೇಲೆ |
ಪರಬಲಾಂತಕ ವೈರಿಯಗಂಡನೆಂದೆಂಬ
ಬಿರಿದು ಸಲ್ವದೊ ರಾಮ ನಿನಗೆ || ೫೦ ||

ಕಡುಗಲಿ ಕಾಟನ ಕರೆದು ಹೇಳಿದನಾಗ
ದೃಢಗಲಿ ಚೆನ್ನಿಗರಾಮ |
ಪಡೆಯಡಗಿತು ನೀ ಮನೆಗ್ಹೋಗೊ ಕಾಟಣ್ಣ
ಒಡೆಯರಿಲ್ಲವು ಹೆಮ್ಮಕ್ಕಳಿಗೆ || ೫೧ ||

ಒಡಹುಟ್ಟಿದವನ ಬಿಟ್ಟು ಬಂದರೇನೆಂಬಳು
ಪಡೆದ ತಾಯಿ ಹರಿಯಮ್ಮ |
ಕಡುಗಲಿ ನೀ ಹೋಗು ಹೋಗೆನುತ ರಾಮಯ್ಯ
ಅಡಿಗೆರಗಿದನು ಕಾಟಣ್ಣಗೆ || ೫೨ ||

ಒಡನೊಡನರಸಿ ರಾಮಯ್ಯ ಕಾಟಣ್ಣಗೆ
ಒಡಲ ಗಾಯವು ಸೊಕ್ಕಿತೆನಗೆ |
ಪಡೆದ ತಾಯಿ ಹರಿಯಮ್ಮಗೆ ನೀ ಹೇಳು
ಕಡೆಯವನೊಪ್ಪಿಸುಯೆಂದ || ೫೩ ||

ಸುಣ್ಣ ಸಾಸುವೆಯ ತನ್ನೊಡಲೊಳು ಹೊಯ್ದಂತೆ
ಕಣ್ಹೋದ ಸಿಂಹ ಮುರಿಯಂತೆ |
ಪುಣ್ಯವಿಂದಿಗೆ ಹಾಳಾಗಿ ಹೋಯಿತೆ
ಎನ್ನುತ ಕಾಟಣ್ಣ ನುಡಿದ || ೫೪ ||

ಜೀವಗಳ್ಳರಗುಡ ಎನ್ನ ಸಹೋದರ ರಾಮ
ಆವಲ್ಲಿ ಗಾಯ ಪಡೆದೇಯೊ |
ದೇವ ಜಟ್ಟಂಗೀಶ್ವರನ ಕೃಪೆ ತಪ್ಪಿತು
ಸಾವೆನೊ ನಿನ್ನೊಡನೆಂದ || ೫೫ ||

ಆರು ಎಚ್ಚರು ಚೆಲ್ವರಗಂಡ ರಾಮಯ್ಯ
ಧಾರಣಿಯೊಳು ಸುಪ್ರಚಂಡ |
ತೋರಿಸು ನನಗವನ ಖಾನ ವಜೀರನ
ಬೇರು ಮಟ್ಟವು ಕಿತ್ತು ತರುವೆ || ೫೬ ||

ಹೆಂಗುಸು ಎನುತ ಬಿಟ್ಟೆನು ಮಾತಂಗಿಯ
ಸಂಗ್ರಾಮದೊಳು ಕವಿದೆ[ಚ್ಚೆ] |
ಹಿಂಗದೆ ಎದೆಯನು ತಾಕಿತು ಕಾಟಣ್ಣ ನೀ
ಕಂಗೆಡಬೇಡೆಂದ ರಾಮ || ೫೭ ||

ನನ್ನ ಸಂತೋಷಕ್ಕೆ ಕಿಚ್ಚನಿಕ್ಕಿದೆಯಲ್ಲೊ
ಮಾನ್ಯ ಕುಮಾರರಗಂಡ |
ಇನ್ನಾವ ಕಾಲಕ್ಕೆ ನಿನ್ನಂಥ ಬಿರಿದುಳ್ಳ
ಚೆನ್ನನ ಕಾಬೆನೊ ತಮ್ಮ || ೫೮ ||

ಇರುವೆಯ ಗೂಡಿಗೆ ಕಿಚ್ಚನಿಕ್ಕಿದೊ ರಾಮ
ಅರಿಬಿರಿದಿನ ಹೊಂತಕಾರ |
ಹರಿಯಮ್ಮಗೇನೆಂದು ಹೇಳಲಪ್ಪೆನು ಚಾರಿ
ವರಿಯರೆ ಈ ಸುದ್ದಿ ಕೇಳಿ || ೫೯ ||

ಕಂಗೆಡದಿರಪ್ಪ ನಾ ಸಂಗ್ರಾಮದೊಳು ಕಾದಿ
ಹಿಂಗದೆ ಕೀತಿರ್ಯ ತಂದೆ |
ತುಂಗವಿಕ್ರಮ ಬಿದ್ದನೆನುತಲಿ ಕಾಟಣ್ಣ
ಅಂಗನೆಯರಿಗೆಲ್ಲ ಪೇಳೊ || ೬೦ ||

ಹೋಗೊ ಬೇಗದೊಳು ನನ್ನಣ್ಣ ದೊಡ್ಡಣ್ಣ
ಹೋ[ಗದ] ಅಭಿಮಾನಗಳನು |
ಚೇಗಿ ಮಾಡಲಿಬೇಡ ರಾಣಿವಾಸವ ಕೊಲ್ಲು
ಹೋಗೆಂದು ನುಡಿದ ರಾಮಯ್ಯ || ೬೧ ||

ತಂದೆಯ ವಂಶಕ್ಕೆ ಕುಂದ ತಂದವನಲ್ಲ
ಅಂದೆ ಕೊಂದಳು ಚಿಕ್ಕಮ್ಮ |
ಕಂದರ್ಪರೂಪ ಕಾಟಣ್ಣ ಕೇಳೆನುತಲಿ
ನೊಂದು ನುಡಿದ ರಾಮನಾಥ || ೬೨ ||

ನಲಿದು ನನ್ನ ಪೆತ್ತ ತಾಯಿ ಹರಿಯಮ್ಮಗೆ
ಬಲು ಖತಿಯನು ಹೇಳಬೇಡ || ೬೩ ||

ಇನ್ನು ನೀ ಗಾಯದಲಳಿ[ದೆ ಎಂ] ದೆಂಬುದು
ಎನ್ನಲ್ಲಿ ಇನಿತಿಲ್ಲ ರಾಮ |
ಮನ್ನಿಸೊ ನಿನ್ನ ಪ್ರಾಣವನೊಂದು ಗಳಿಗೆಗೆ
ನಿನ್ನೊಳಯದುವೆನೆಂದ ಕಾಟ || ೬೪ ||

ಅಂಗವ ಕೊಡಬೇಡ ನಾ ಬರುವನಕಲಿ
ಸಂಗ್ರಾಮದೊಳು ಓಡಬೇಡ |
ಕಂಗಳು ಮೂರುಳ್ಳ ಜಟ್ಟಂಗಿರಾಮನ
ಲಿಂಗನ ಕೃಪೆ ತಪ್ಪಿತೆಮಗೆ || ೬೫ ||

ತರಿಹರಿಸದೆ ಓಡಿಬಂದನು ಕಾಟಣ್ಣ
ಉರಿಗೊಂಡ ಕರ್ಪುರದಂತೆ || ೬೬ ||

ಹೇಳುತ ದುಃಖದೊಳಾಡುತ ಕಾಟನ
ಕೇಳಿ ಕಂಪಿಲ ಮೂರ್ಛೆಗೈದ |
ಕೇಳಿದಳಾಗಲೆ ಹರಿಯಮ್ಮ ಸುದ್ದಿಯ
ಗೋಳಿಟ್ಟು ಹುಡಿಯೊಳು ಹೊರಳಿ || ೬೭ ||

ಕಡುಗಲಿ ರಾಮನ ಒಡಹುಟ್ಟಿದವರೆಲ್ಲ
ಹುಡಿಯಲ್ಲಿ ಬಿದ್ದು ಹೊರಳಿದರು |
ನುಡಿದರು ಜನರೆಲ್ಲ ತಮತಮಗಿಂದಿಗೆ
ಕಡೆಗಾಲವಾಯಿತೆಂದರೆಲ್ಲ || ೬೮ ||

ತಡೆಯದೆ ಹರಿಯಮ್ಮನೊಳು ಪೇಳಿ ಪಾದಕೆ ಬಿದ್ದು
ನಡೆದು ಬಂದನು ಕುಮ್ಮಟಕೆ || ೬೯ ||
ಬಂದನು ರಾಮಯ್ಯನ ಮಡದಿಯರೆಲ್ಲರ
ನಿಂದು ಶೃಂಗಾರ ಮಾಡಿಸಿದ |

ಚೆಂದದಿ ಮೊರೆವುತ ಆಡುತ ಪಾಡುತ
ಬಂದರು ರಾಜಬೀದಿಯಲಿ || ೭೦ ||

ಬಂದರು ರಮನ ಮಡದಿಯರೆಲ್ಲರು
ಚೆಂದಚೆಂದದಲಿ ಮೆರೆವುತ |
ಇಂದೆಮ್ಮ ಜೋಡುಗಲುವರೆ ಚೆನ್ನಿಗರಾಮ
ಕಂದರ್ಪರೂಪ ಎಂದೆನುತ || ೭೧ ||

ವೀರಾಧಿವೀರ ಹಾ ವೀರ ರಣಶೂರ ಹಾ
ಮಾರಾಂತರ ಗಂಡ ಮಹಾ |
ಧಾರುಣಿಯೊಳು ಚೆಲ್ವರಗಂಡ ಹಾಯೆಂದು
ನಾರಿಯರೆಲ್ಲ ಮೊರೆದು || ೭೨ ||

ಮಳಲಗೌರಿಯ ನೋಂತರು ಏಳು
ಜಲ್ಮಕೆ ದೊರೆ ರಾಮಗೆ ಗಂಡನೆನುತ |
ಅರಸು ಕಂಪಿಲರಾಯ ಮಾವಲನಾಗಲಿ ನಮಗೆ
ಹರಿಯಮ್ಮ ಅತ್ಯಾಗಲೆಂದು || ೭೩ ||

ಓಡಿಬಂದರು ಕೊಂಡವಹತ್ತಿ ಬೇಗದಿ
ಗಾಢದಿ ಹತ್ತಿ ಕೆಂಡವನು |
ನೋಡುತ ನಸುನಗೆ ನಗುತ ರಾಮಯ್ಯನ
ಪಾಡುತ ದುಮುಕಿದರಾಗ || ೭೪ ||

ಕಿಚ್ಚ ಹಾಯ್ವಾಗಲಿ ಹೆಚ್ಚಿತು ಬೊಬ್ಬೆಯು
[ಬೆ]ಚ್ಚಿತು ಕುಮ್ಮಟದುರ್ಗ |
ಒಚ್ಚೊತ್ತಿಗೆಲ್ಲರ ಕಿಚ್ಚಿನೊಳಗೆ ನೂಕಿ
ನಿಶ್ಚೈಸಿ ತಿರುಗಿದ ಕಾಟ || ೭೫ ||

ತನ್ನರಮನೆಗಾಗಿ ಬಂದನು ಕಾಟಣ್ಣ
ಉನ್ನತ ಕಿಚ್ಚುರಿವುತಿರೆ |
ಮನ್ನೆಯ ರಾಮನ ಮಡದೇರ ಕೊಂದೆನು
ಎನ್ನುತ ಕಾಟ ಪೇಳಿದನು || ೭೬ ||

ತಡಬೇಡ ಎನ್ನನು ಕಡಿ ಬೇಗ ಎಂದಳು
ಕಡುಗಲಿ ಕಾಟಣ್ಣನರಿಸ |
ಬಿಡು ನನ್ನ ಮೇಲನ ಆಸೆಯನೆಂದಳು
ನುಡಿದಳು ತನ್ನರಸನ ಕೂಡೆ || ೭೭ ||

ಕಡಿಯೊ ಎನ್ನಯ ಜೀವದಾಸಿಲ್ಲ ಕಾಟ
ಹಿಡಿಯಿರಿಯೆನೆ ಖಂಡೆಯವ |
ಬಿಡದೆ ಖಂಡೆಯವೆತ್ತಿ ಜಲ್ಪಿಸಿ ಕಾಟನು
ನಡುವುರದ ಮೇಲಿನ್ನು ಇರಿದ || ೭೮ ||

ಸುರಿವ ರಕ್ತವ ಕಂಡು ಬಾಯೊಳು ಬಾಯಿಟ್ಟು
ಒರಗಿಸಿದನು ರಾಣಿಯನು |
ತರಿಗೆಂಡವ ತನ್ನ ಒಡಲೊಳು ಹೊಯ್ದಂತೆ
ತಿರುಗಿದ ರಾಮನಿದ್ದೆಡೆಗೆ || ೭೯ ||

ಹೆಮ್ಮಕ್ಕಳ ಕೊಂದು ತಿರುಗಿ ಕಾಟಣ್ಣನು
ನಿರ್ಮಳವಾಯಿತೆಂದೆನುತ |
ತಮ್ಮ ರಾಮಯ್ಯನೇನಾದನೆನುತ ಬಂದು
ಉಮ್ಮಳಿಸುತಲಿ ಕಾಟಣ್ಣ || ೮೦ ||

ಊರು ಹೋಯಿತು ಒಳಹೊಕ್ಕರು ತುರುಕರು
ಧೀರ ರಾಮನ ಎಕ್ಕಟಿಗರು |
ಸೇರಿ ನಿಂದರು ತಮ್ಮೊಡೆಯನ ಸುತ್ತಲಿ
ಹೋರಾಡಿ ಹೊಯ್‌ಹೊಯ್ದೆಳೆದು || ೮೧ ||

ಮುಂದಿದ್ದ ದೇವಿಸೆಟ್ಟಿಯ ಲಿಂಗ ನುಡಿದ ನಾ
ನೆಂದೆಂದು ನಿನಗಿತ್ತೆ ಪ್ರಾಣ |
ಇಂದಿನ ಕಾಳಗದೊಳು ಎನ್ನ ನೋಡೆಂದು
ಕೊಂದನು ಖಾನ ಮಲುಕರ || ೮೨ ||

ಕಾಯವೆಲ್ಲವು ತಾತತೂತಾಗಲೆಚ್ಚರೆ
ಗಾಯದಿ ಕಡಿಕಡಿದೊಟ್ಟಿ |
ರಾಯ ಕಂಪಿಲನ ಕುಮಾರನೆ ನೋಡೆಂದು
ಆಯೆಡೆಯಲಿ ಬಿದ್ದ ಲಿಂಗ || ೮೩ ||

ಬಂಟತನಕೆ ಪ್ರಾಣ ಲಿಂಗಣ್ಣ ನೀನಳಿದೆ ಇ
ನ್ನುಂಟೆ ಎನಗೆ ಜೀವದಾಸೆ |
ಒಂಟಿಲಿ ಸಿಂಹದ ಮರಿಯಂತೆ ಕುಳಿತಿರ್ದ
ಕಂಟಾಯಿಸದೆ ರಾಮನಾಥ || ೮೪ ||

ಏಳು ವೀರರಗಂಡ ಕೈಯ್ಯ ಮರೆಯ ಬೇಡ
ಏಳು ಬಲ್ಲಾಳರಗಂಡ |
ಏಳು ಸುರಿತಾಳನ ಗಂಡ ರಾಮಯ್ಯ
ಏಳೆನ್ನ ಕಷ್ಟ ನೋಡೆಂದ || ೮೫ ||

ಬೊಲ್ಲನ ಏರಿರ್ದ ಬಲ್ಲೇವ ಪಿಡಿದಿರ್ದ
ಹೊಡೆದ ಅಂಬಿಗ ಗಾಯದಲಿ |
ಬಾಣದಿ ಹೊಡೆಯಲು ತಗುಲಿತು ರಾಮೈಗೆ
ನಿಂತಿತು ಬೊಲ್ಲ ಜೂಕರಿಸಿ || ೮೬ ||

ಬಾಣದ ತಾಪ ಬಂದಿತು ರಾಮನಾಥಗೆ
ಮೇಳೈಸಿ ಕಣ್ಣ ಮುಚ್ಚಿದನು |
ನೇಜದ ಮೊನೆಯನು ನಿಲಹಾಕಿ ರಾಮಯ್ಯ
ಮೂರ್ಛೆಯು ಆಗಿ ನಿಂತಿಹನು || ೮೭ ||

ಏಳು ರಾಯರಗಂಡ ಕಾಟಣ್ಣನೆನಲಾಗಿ
ತಪ್ಪನೆ ಕಣ್ಣ ತೆರೆದನು |
ಕಣ್ಣನು ತೆರೆಯಲು ಕಂಗೆಟ್ಟು ಓಡಿದರು ಕಾ
ಟಣ್ಣ ನೋಡಿ ಬೆನ್ಹತ್ತಿ || ೮೮ ||

ಮಾದಿಗಿತ್ತಿಯನು ತೋರೆಂದು ಕಾಟಣ್ಣನು
ಮೂದಲಿಸುತ್ತ ಏರಿದನು |
ಕಾದಿಸಿ ತನ್ನ ತಮ್ಮನ ಎಚ್ಚಳೆನುತಲಿ
ಭೇದಿಸಿ ನೋಡಿದನವಳ || ೮೯ ||

ಹತ್ತುಸಾವಿರ ಸಿಂಗಾಡಿಯ ತುರುಕರು
ಮತ್ತೆಚ್ಚರಂಬಿನಲಿ ಮುಳುಗಿ |
ಸುತ್ತ ತಿರಿಗಿ ನೋಡಿದ ಕಾಟಣ್ಣನು ಮಾದಿ
ಗಿತ್ತಿಯು ಸಿಕ್ಕಳೆನುತ್ತ || ೯೦ ||

ಕರುಳ ಹರಿದು ಚೆಲ್ಯಾಡಿ ಅವಳ ಸೀಳಿ
ಸುರಿಸುವೆ ರಕುತವನೆಂದ |
ದೊರೆ ರಾಮ ನನ್ನ ತಮ್ಮನ ಎಚ್ಚಳೆನುತಲಿ
ಉರಿವ ಗಾಯದಲಿ ಬೊಬ್ಬಿರಿದ || ೯೧ ||

[ಅದ್ದ]ರಿಸುತ ಖಾನಖಾನರ ತರಿದನು
ಹದ್ದು ಹಕ್ಕಿಯ [ಪೊ]ಯ್ವಂತೆ |
ಮುದ್ದು ಎನ್ನಯ ಒಡಹುಟ್ಟಿದವ ನೋಡೆಂದು
ಬಿದ್ದನು ರಣದೊಳು ಕಾಟ || ೯೨ ||

ಮಡಿದೆಯೊ ಎನ್ನ ಒಡಹುಟ್ಟಿದಣ್ಣಾ ಎಂದು
ಕಡಿದೆಯೊ ಖಾನಖಾನರನು |
ಬಿಡದೆ ನಿನ್ನೊಡನೀಗ ಪಯಣವು ನನಗೆಂದು
ನುಡಿದನು ಚೆನ್ನಿಗರಾಮ || ೯೩ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಚದುರ ತಾ ಕಾ[ದೆ] ಮಾತಂಗಿ ರಾಮಯ್ಯನ
ಚದುರಿಟ್ಟ ಗಾಯ ಸಂಪೂರ್ಣ || ೯೪ ||

ಅಂತು ಸಂಧಿ ೨೫ಕ್ಕಂ ಪದನು ೨೬೬೩ಕ್ಕಂ ಮಂಗಳ ಮಹಾಶ್ರೀ