ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ಉದಯದೊಳೆದ್ದು ವಂದಿಸಿ ಜಟ್ಟಿಂಗೀಶಗೆ
ಚೆದುರ ರಾಮಯ್ಯ ಕೈಮುಗಿದ |
ಒದಗಿ ತಾನೆದ್ದು ಮುಖ ಮಜ್ಜನಂಗಳ ಮಾಡಿ
ಕದುಬಿದ ಸಣ್ಣ ನಾಮನವನು || ೨ ||

ಪಟ್ಟಸಾಲಿಗೆ ಹೊರಟುಬಂದನು ರಾಮಯ್ಯ
ಕಟ್ಟಿಗೆಕಾರರ ಕರೆಸಿ |
ನೆಟ್ಟನೆ ಹೋಗಿ ಬೈಚಪ್ಪನ ಕರೆಯಿರೊ ಎಂ
ದಟ್ಟಿದ ಸೃಷ್ಟೀಶ ರಾಮ || ೩ ||

ಚರರೋಡಿ ಬಂದು ಬೈಚಪ್ಪಗೆ ಕರೆದರು
ಬರಬೇಕು ಮಂತ್ರೀಶ ಬೇಗ |
ದೊರೆ ರಾಮ ಶೀಘ್ರದಿ ಕರೆತರ ಹೇಳಿದ
ಅರಿಕೆ ಮಾಡಿದೆವಯ್ಯ ಮಂತ್ರಿ || ೪ ||

ಬಂದನು ಬೇಗದೊಳಗೆ ಬೈಚಪ್ಪನು
ನಿಂದನು ರಾಮನ ಹುಜರ |
ಇಂದಿನ ಪಯಣವ ಪೇಳೆಂದು ರಾಮಯ್ಯ
ಚಂದ್ರಶೇಖರನ ದರುಶನಕೆ || ೫ ||

ಮೃತ್ಯುಂಜಯನ ದರುಶನಕೆ ಹೋಗಲಿಬೇಕು
ಸತ್ಯವಂತನೆ ಬೈಚಪ್ಪ |
ಮತ್ತೆ ಹಾಕಿಸಬೇಕು ಮೋಪನಾಕ್ಷಣದಲ್ಲಿ
ಅರ್ತಿಲಿ ಉಂಡುಟ್ಟು ಬರಬೇಕು || ೬ ||

ಅಪ್ಪನ ಕೂಡಿನ್ನು ಹೇಳಯ್ಯ ಈ ಮಾತ
ಅಪ್ಪಣೆ ತೆಕ್ಕೊಳ್ಳೊ ಬೇಗ |
ಮುಪ್ಪುರವ ಗೆಲಿದ ಜಟ್ಟಂಗಿ  ರಾಮೇಶಗೆ
ಒಪ್ಪದಿ ಪಯಣಮಾಡೆಂದ || ೭ ||

ತಂದೆ ಮಕ್ಕಳು ನಾವು ವಂದಿಸಿ ಸ್ವಾಮಿಗೆ
ಕಂದುಗೊರಳ ಪರಶಿವಗೆ |
ಇಂದು ನಾವೀಗ ಕುಟುಂಬ ಜಾತ್ರೆಗಳನು
ವೊಂದಿಲಿ ತೆರಳಬೇಕೆಂದ || ೮ ||

ರಾಮ ಹೇಳಿದ ಸುದ್ದಿ ಕೇಳುತ ಬೈಚಪ್ಪ
ಆ ಮಹಾ ಸಂತೋಷದಲ್ಲಿ |
ಭೂಮೀಶರಾಯ ಕಂಪಿಲನ ಬಳಿಗೆ ಬಂದು
ಪ್ರೇಮವನುಸುರಿದ ಬೇಗ || ೯ ||

ಮಂತ್ರಿಯ ಮಾತನು ಕೇಳುತ ಕಂಪಿಲ
ಸಂತೋಷ ಅತಿ ಹರುಷದಿಂದ || ೧೦ ||

ಅಕ್ಕಿ ಬೇಳೆಯು ಗೋದಿಹಿಟ್ಟು ಸಂಬಾರವು
ಸಕ್ಕರೆ ಹೇರು ಬೆಲ್ಲವನು |
ಮುಕ್ಕಣ್ಣ ಹರನ ನೈವೈದ್ಯಕೆ ಬೇರೆ ಸ
ಣ್ಣಕ್ಕಿ ಹೇರುಗಳನು ಹೊಡಸೊ || ೧೧ ||

ಆದ ಅಡಕೆ ಬಿಳಿಯೆಲೆ ಕರ್ಪುರಗಳ
ಮಾದಾಳ ಖರ್ಜೂರಫಲವು || ೧೨ ||

ಹಾಲುಮೊಸರಿಗೆ ನಮ್ಮ ಕಂಪಳಕೆ ಹೇಳಿರೊ
ಆಲೆ ರಸದಾಳಿ ಕ್ಷೀರವನು |
ಸಾಲಿಟ್ಟು ಕೊಡಗಳ ಕಳುಹಿದನು ಮಂತ್ರೀಶ
ಆಲಸ್ಯ ಬೇಡವೊ ನಡೆಯೊ || ೧೩ ||

ಬೊಕ್ಕಸದೊಳು ಹೊಕ್ಕು ಕಟ್ಟಿಸೊ ಜವಳಿಯ
ರೊಕ್ಕ ಹೊನ್ನುಗಳ ತೆಕ್ಕೊಳ್ಳೊ |
ಮುಕ್ಕಣ್ಣನಿಗೆ ಪಾದಗಾಣಿಕೆ ಮಾಡುವೆನು
ಲೆಕ್ಕದ ಮೇಲೆ ತರಿಸಯಯ || ೧೪ ||

ತೆರಳಿ ಬಂದನು ಮಂತ್ರಿ ಬೈಚಪ್ಪ ಚಾವಡಿಗೆ
ಭರದಿಂದ ಬಂದು ಕುಳಿತನು |
ಕರೆಸಿದ ಕಟ್ಟಿಗೆಯವರ ಕಾಮಾಟದ
ಪರಿವಾರದವರನು ಬೇಗ || ೧೫ ||

ಬಂದು ಕಟ್ಟಿಗೆಯವರು ನಿಂದು ಕೈವ ಗಿಯಲು
ಇಂದುಶೇಖರನ ಬೆಟ್ಟಕ್ಕೆ |
ಮುಂದಾಗಿ ತೆರಳಿ ನೀವೋಪ [ಸಾ]ಗಿಸಿಕೊಂಡು ಹೋ
ಗೆಂದು ಹೇಳಿದನು ಬೈಚಪ್ಪ || ೧೬ ||

ಹತ್ತು ಖಂಡುಗ ಹೇರು ಅಕ್ಕಿಯ ತುಂಬಿರೊ
ಮತ್ತೈದು ಖಂಡುಗ ಬೇಳೆ |
ಮುತ್ತಿನ ಸರದ ಸಣ್ಣಕ್ಕಿಯು ಸಹವಾಗಿ
ಮತ್ತೆ ತುಂಬಿಸಿರೊ ಬೇಗದೊಳು || ೧೭ ||

ಪುನಗು ರಾಜಾನ್ನವು ಗಿಣಿಮೂಗಿನಕ್ಕಿಯ
ಕಣಕದ ಹೇರೊಂದು ನೂರು || ೧೮ ||

ಬೆಲ್ಲದ ಹೇರು ಐವತ್ತು ಬೇಳೆಯ ಹೇರು
ಕಲ್ಲುಸಕ್ಕರೆ ಹೇರೊಂದೈದು |
ಎಲ್ಲ ಉಗ್ರಾಣದೊಳು ತುಂಬಿಸಿಕೊಂಡರು ಬೇಗ
ನಿಲ್ಲದೆ ತೆರಳಬೇಕೆಂದ || ೧೯ ||

ತುಪ್ಪದ ನಗಗಳು ಐವತ್ತು ಆಗಲೆ
ಇಪ್ಪಿಯ [ಹ] ಣ್ಹೇರು ಹತ್ತೆಂಟು |
ಕಡಲೆಯ ಹೇರು ಹುರುಳಿಯ ಹೇರು ಇನ್ನೂರು
ಬಿಡಬ್ಯಾಡಿ ಬಿದಿರ ಅಕ್ಕಿಯನು || ೨೦ ||

ಅರಿಷಿಣ ಶುಂಠಿ ಮೆಣಸು ಕೊಬ್ಬರಿಯ ಹೇರು
ಪರಿಪರಿ ಸಂಬಾರದ್ಹೇರು |
ಅರಮನೆ ಎತ್ತು ಸಾವಿರ ನಡೆಯಿತು
ಗಿರಿಯ ಜಟ್ಟಂಗೀಶ್ವರಗೆ || ೨೧ ||

ಅಡಿಯಿಟ್ಟು ನಡೆಯಿತು ಐದುಸಾವಿರ ಬಲ
ಹಡಪದ ಬಲ್ಲುಗ ಸಹಿತ || ೨೨ ||

ಬಂದನು ರಾಮಯ್ಯ ತಂದೆ ಪಾದಕೆ ಬಿದ್ದು
ವಂದನೆಮಾಡಿ ಕೈಮುಗಿದು |
ಸಂದೇಹವ್ಯಾತಕೆ ತೆರಳಬೇಕೆಂದನು
ಚೆಂದದಿ ತಾಯಿ ಕೂಡೆ || ೨೩ ||

ತೆಗೆದಪ್ಪಿ ಮಗನ ಮುದ್ದಾಡಿ ತಾ ಹೇಳಿದ
ಜಗದಪ್ಪರಾಯ ಮಾವನಿಗೆ |
ಝಗಝಗಿಸುವ ಜೀಬಿ ನಾಣ್ಯವ ಕಟ್ಟಿಸಿ
ಸೊಗಸಿಂದ ಕಳುಹೊ ರಾಮಯ್ಯ || ೨೪ ||

ತಂದೆ ತಾಯಿಗಳ ಹೊನ್ನಂದಣವನೇರಿಸಿ
ತಂದರು ಬೇಗದೊಳವರ |
ಜಗದಪ್ಪರಾಯಗೆ ಉಡುಗೊರೆಯನು ಕಟ್ಟಿ
ಅಗಣಿತವಾದ ವಸ್ತ್ರಗಳ || ೨೫ ||

ಪಲ್ಲಕ್ಕಿ ಪಲ್ಲಕ್ಕಿ ಸಾಲಿಟ್ಟು ನಡೆದವು
ನಿಲ್ಲದೆ ಕಂಪಿಲನೆಡೆಗೆ |
ಹಿರಿಯ ಸೊಸೆ ಕಂಚಲವ್ವನ ಕರೆಸಿದ
ಅರಸು ಮಕ್ಕಳ ಹೆಮ್ಮಕ್ಕಳನು || ೨೬ ||

ಇಂದುಶೇಖರ ಪೊಂಪಾಪತಿಗಳ ಗುಡಿಗಾಗಿ
ಬಂದು ಇಳಿದರು ಬೇಗದಲಿ |
ಸ್ನಾವ ಮಾಡಿ ಮಡಿಯನುಟ್ಟು ಎಲ್ಲರು
ಗ್ಯಾನದಿ ವಿರೂಪಾಕ್ಷನ ಗುಡಿಗೆ || ೨೭ ||

ಬಂದಡ್ಡಬಿದ್ದು ಕಾಣಿಕೆಯಿಕ್ಕಿ ಹಿಡಿಹೊನ್ನ
ಗಂಧ ಪ್ರಸಾದ ಕೈಕೊಂಡು |
ಅಂದಲ್ಲಿ ನಿಂತು ಪರುವಮಾಡಿ ಜಂಗಮಕೆ
ಚೆಂದದಿ ಕಂಪಿಲರಾಯ || ೨೮ ||

ಲಕ್ಷ ಬ್ರಾಹ್ಮರಿಗೆ ಸಮಾರಾಧನೆ ಮಾಡಿಸಿ
ದಕ್ಷಿಣಿ ತಾಂಬೂಲವಿತ್ತು |
ಲಕ್ಷಾಧಿಪತಿ ಕಂಪಿಲರಾಯ ಮನ್ನಿಸಿ ಮಂ
ತ್ರಾಕ್ಷತೆ ಕೈಕೊಂಡನಾಗ || ೨೯ ||

ಎಲ್ಲರು ಉಂಡುಟ್ಟು ಸಂತಸದಲಿ ಕಂಪಿಲ
ನಿಲ್ಲದೆ ಹೊರಟನು ಬೇಗ |
ಅಲ್ಲಿಂದ ಕಂಪಿಲ [ಸೋ]ಮೇಶಗೆ ಬಂದನು
ಬಲ್ಲಿದ ರಾಮಯ್ಯ ಸಹಿತ || ೩೦ ||

[ಸೋ]ಮೇಶ್ವರನ ಪೂಜೆಯ ಮಾಡಿ ಕಂಪಿಲ
ಆ ಮಹಾಪರುವ ಮಾಡಿಸಿದ |
ಪ್ರೇಮದಿ ಹಿಡಿಹೊನ್ನ ಕಾಣಿಕೆಗಳನಿಟ್ಟು
ಕ್ಷೇಮದಿ ಹೊರಟನಲ್ಲಿಂದ || ೩೧ ||

ಪಲ್ಲಕ್ಕಿನೇರಿದ ಕಂಪಿಲರಾಯನು
ನಿಲ್ಲದೆ ಹೊರಟ ಬೇಗದಲಿ |
ಜಟ್ಟಂಗಿರಾಮನ ಬಲ್ಲಿದ ಗಿರಿಯ
ಕೆಳಗೆ ಉಲ್ಲಾಸದಿಂದ ಬಂದು ಇಳಿದ || ೩೨ ||

ಬಿಟ್ಟರು ದಂಡೆಲ್ಲ ಕಟ್ಟಿತು ಗುಡಿಗಳ
ನೆಟ್ಟನೆ ಸಾಲು ಪಾಳೆಯವ |
ಹುಟ್ಟಿತು ಬೀದಿ ಬಾಜಾರ ಅಂಗಡಿಸಾಲು
ನೆಟ್ಟನೆ ಗಿರಿಯ ಮಧ್ಯದಲಿ || ೩೩ ||

ದೇವಸಮುದ್ರವೆಂಬುವದೊಂದು ಕರೆಯುಂಟು
ಬಾವಿ ಪೂದೋಟ ವನವುಂಟು |
ಕಾವಲ ಮಲೆಯುಂಟು ಕಸ್ತೂರಿಮೃಗವುಂಟು
ದೇವನ ಗಿರಿಯ ಮಧ್ಯದಲಿ || ೩೪ ||

ಎಲ್ಲರು ಅಭ್ಯಂಗಸ್ನಾನವ ಮಾಡಿದರು
ನಿಲ್ಲದೆ ಗಿರಿಯನೇರಿದರು |
ಮಲ್ಲಿಕಾರ್ಜುನ ಜಟ್ಟಂಗೀಶನ ಗುಡಿಗಾಗಿ
ನಿಲ್ಲದೆ ಕಂಪಿಲ ಬಂದ || ೩೫ ||

ಕಲರು ಬಂದಡ್ಡಬಿದ್ದು ಕಾಣಿಕೆಯಿಟ್ಟು
ಅಕಳಂಕ ಮಹಿಮನ ಭಜಿಸಿ |
ಭಕ್ತಿಲಿ ಹಣ್ಣುಫಲಗಳಿಂದ ಪೂಜಿಸಿ
ಮುಕ್ತಿಪದವ ಬೇಡಿಕೊಂಡು || ೩೬ ||

[ಪಂಚಾ]ಭಿಷೇಕವ ಮಾಡಿಸಿ ರಾಮಯ್ಯ
ಪಂಚಭಕ್ಷವು ಪರಮಾನ್ನ |
ಪಂಚಮುಖನು ಪರಮಾತ್ಮಗೆ ಒಪ್ಪಿಸಿ
ಪಂಚಾರತಿಗಳ ಬೆಳಗಿ || ೩೭ ||

ಲಕ್ಷ ಸಮರಾಧನೆಯನು ಮಾಡಿಸಿ
ದಕ್ಷಿಣೆ ಕೊಟ್ಟು ಬ್ರಾಹ್ಮರಿಗೆ |
ಲಕ್ಷ ಜಂಗಮಕೆ ಭೋಜನವನು ಮಾಡಿಸಿದ
ಲಕ್ಷಾಧಿಪತಿ ಕಂಪಭೂಪ || ೩೮ ||

ಬಂದಂಥ ಗುರಿಕಾರ ಎಕ್ಕಟಿಗಾರರು
ವೊಂದಿನ ಹಳೆಯ ರಾಹುತರು |
ಮಂದಿ ಮಕ್ಕಳು ಮನ್ನೆಯರ ವಿನಿಯೋಗಕ್ಕೆ
ಸಂಧಿಸು ಪಡಿ ರೋಜುಗಳ || ೩೯ ||

ಕರಣಿಕ ಲಿಂಗಗೆ ಕರೆದು ಹೇಳಿದ ರಾಮ
ದೊರೆ ಮಕ್ಕಳಿಗೆ ಉಲುಪೆಯನು |
ನೆರೆದಂಥ ಜನರು ಪರಿವಾರವೆಲ್ಲಕೆ ನೀನು
ಕರೆಕೊಂಡು ಹೋಗೆಂದನಾಗ || ೪೦ ||

ಹರಿಯಮ್ಮ ಮಾಡಿದಳು ಪರಿಪರಿ ಪೂಜೆಯ
ನೆರೆದು ಹೆಮ್ಮಕ್ಕಳು ಸಹಿತ |
ದೊರೆತನ ರಾಮಗೆ ಸ್ಥಿರವು ಆಗಲಿಯೆಂದು
ಹರಕೆಯ ಬೇಡಿದಳಂದು || ೪೧ ||

ಒಂದೆರಡು ದಿನವಿರ್ದು ಮೂರನೆ ದಿನದಲ್ಲಿ
ಬಂದರು ಕುಮ್ಮಟವಾಗಿ |
ಗಂಧ ಪ್ರಸಾದವ ಕೈಕೊಂಡು ರಾಮಯ್ಯ
ಒಂದ ನೆನೆಸಿದ ಮನದೊಳಗೆ || ೪೨ ||

ನರಜಲ್ಮದೊಳಗೆನ್ನನೇಕೆ ಪುಟ್ಟಿಸಿದಯ್ಯ ಈ
ದೊರೆಯ ಗರ್ಭದೊಳು ನಾ ಜನಿಸಿ |
ಧರಿಸಿದ ಬಿರಿದ ದಕ್ಕಿಸಿ ರಣರಂಗದಿ
ಕರೆದೊಯ್ಯಬೇಕೆನ್ನ ನೀನು || ೪೩ ||

ಎಂದಿದ್ದರೀ ಕಾಯ ಎನಗೆ ನಂಬುಗೆಯಿಲ್ಲ
ಕಂದನ ಮೇಲೆ ದಯಮಾಡೊ |
ಸಂದೇಹವಿನ್ಯಾಕೆ ನಿಮ್ಮ ಸಮೀಪಕ್ಕೆ
ಎಂದಿದ್ದರೆ ಬರಬೇಕು || ೪೪ ||

ಅತಿ ಬೇಡಿಕೊಂಡ ಭಾವಕ್ಕೆ ತಾ ಶಿವ ಮೆಚ್ಚಿ
ಇತ್ತನು ಬೇಡಿದ ವರವ |
ನೆತ್ತಿಯಳಿರ್ದ ಮಲ್ಲಿಗೆಯ ಪುಷ್ಪಂಗಳ
[ಭೃತ್ಯ]ರಾಮಯ್ಯಗೆ ಕೊಟ್ಟ || ೪೫ ||

ಕೊಟ್ಟ ಪ್ರಸಾದವ ಕೈಕೊಂಡು ರಾಮಯ್ಯ
ಇಟ್ಟನು ಮಂಡೆಯೊಳೊಲಿದು |
ಧೀರ ರಾಮಯ್ಯ ತಾನೆಲ್ಲರನೊಡಗೊಂಡು
ಸೃಷ್ಟೀಶ ಹೊಕ್ಕ ಕುಮ್ಮಟವ || ೪೬ ||

ಬಂದನು ಕಂಪಿಲವೊಂದಿಲಿ ರಾಮಯ್ಯ
ನಿಂದು ಹಜಾರದೊಳ್‌ ತಾವು |
ಮಂದಿ ಮಕ್ಕಳನೆಲ್ಲ ಮನೆಗೆ ಅಪ್ಪಣೆಕೊಟ್ಟು
ಅಂದುಹೊಕ್ಕನು ಅರಮನೆಯ || ೪೭ ||

ಉದಯದೊಳೆದ್ದು ವಂದಿಸಿ ತಂದೆ ತಾಯಿಗೆ
ಮದಗಜದಾನೆ ರಾಮಯ್ಯ |
ಮುದದಿಂದ ಕೇಳಿ ಬಿನೈಸುವೆ ನಾ ನನ್ನ
ಹೃದಯದ ಅಂತರಂಗವನು || ೪೮ ||

ಇಷ್ಟು ಕುದುರೆ ಮಂದಿ ನಿಲಿಸಿದನೆಂಬಂತೆ
ಸಿಟ್ಟು ಮಾಡಲಿಬೇಡ ಭೂಪ |
ಪಟ್ಟಾಭಿರಾಮನ ಮಾಡಿದೆ ಜಗದೊಳು
ಮುಟ್ಟುವುದು ಡಿಳ್ಳಿಗೆ ಸುದ್ದಿ || ೪೯ ||

ಸುರಿತಾಳನ ಮಗಳು ತನಗಾಗಬೇಕೆಂದು
ಕುರುಹು ನೇಮದಿ ತಾನಿಹಳೊ |
ಪರಿಪರಿ ವಿಧದಿಂದ ತಂದೆಗೆ ಪೇಳುವಳು
ತರಿಸು ರಾಮನ ಎಂಬುವಳು || ೫೦ ||

ಹಿಡಿಯಾಳ ಮಾಡಿ ಹಿಡಿತರಿಸೆಂದು ಪೇಳಿದಳು
ಬಿಡದೆ ಬಾಹನು ನೇಮಿ ತಾನು |
ಕಡೆಯ ಮಾತೇನು ನೇಮಿಯ ನುಂಗಿದಿರ್ದರೆ
ಬಿಡದು ಮುಂದಣ ರಾಜಕಾರ್ಯ || ೫೧ ||

ಪರನಾರಿ ಸಹೋದರನೆಂಬ ಬಿರಿದನು
ಧರಿಸಿದೆ ಕಾಲೊಳು ನಾನು |
ಮರೆಯ ಮಾತೇನು ದಕ್ಕಿಸಿಕೊಂಬಂಥದು
ಸರಸಿಜಭವ ತಾನೆ ಬಲ್ಲ || ೫೨ ||

ಇಂದಿನ ಮಾತಲ್ಲ ಬಂದವು ಕಾರ್ಯವು
ಮುಂದಣ ತಾಗುಬಾಗುಗಳು || ೫೩ ||

ಅಪ್ಪಣೆ ಕೇಳಿ ತನ್ನರಮನೆಗೆ ಬಂದನು
ಒಪ್ಪದಿ ಸತಿಯರು ಸಹಿತ |
ಚಪ್ಪರ ಮಂಚದಿ ತಾ ನಿದ್ರೆಗೈದೆದ್ದು
ಒಪ್ಪದಿ ಊಟವ ಮಾಡಿ || ೫೪ ||

ಶೃಂಗಾರವಾಗಿ ಹೊರಹೊಂಟನು ರಾಮಯ್ಯ
ಮಂಗಳ ನೀಲನ ಏರಿ |
ಸಂಗಡ ಬೈಚಪ್ಪ ತನ್ನ ಮನ್ನೆಯರನು
ಹಿಂಗದೆ ಕರಕೊಂಡು ಬೇಗ || ೫೫ ||

ಹೊಸಮಲೆದುರ್ಗವ ಹೊಕ್ಕನು ರಾಮಯ್ಯ
ಅಸಹಾಯ ಮಾನ್ಯರಿಗೆಲ್ಲ |
ಕುಸುಮ ಗಂಧವು ಹೊನ್ನ ಹಂಚಿಕೊಟ್ಟನು ರಾಮ
ದೆಸೆವಂತ ಮಾನ್ಯರಿಗೆಲ್ಲ || ೫೬ ||

ಬಿದ್ದಿದ್ದ ಕೋಟೆಯನಿಕ್ಕಿಸಿ ಬೊಕ್ಕಸ
ಇದ್ದುವ ನೋಡಿ ಒಕ್ಕಲಿಗೆ |
ಬುದ್ದಿಯ ಪೇಳಿ ಎಲ್ಲರಿಗೆ ತಾ ಹೊರಟನು
ಇದ್ದ ಗಡಿಗಳ ನೋಡುತಲಿ || ೫೭ ||

ಎಲ್ಲ ಗಡಿಗಳನು ತಾ ನೋಡಿಬಂದನು ರಾಮ
ನಿಲ್ಲದೆ ಭದ್ರವ ಮಾಡಿ |
ಬಲ್ಲಂತೆ ಕಣಜ ಬೊಕ್ಕಸಗಳ ಬಲಿಸಿದ
ಉಲ್ಲಾಸದಲಿ ರಾಮನಾಥ || ೫೮ ||

ಕೆರೆಯ ಕಟ್ಟಿಸಿದ ಪೊದೋಟವ ಹಾಕಿಸಿ
ಸೆರೆಯ ಬಿಡಿಸುತ ಸಿಕ್ಕಿದವರ |
ಮರೆಯದೆ ಹಸಿದು ಬಂದವರಿಗೆ ಅನ್ನವ
ಇರಿಸೆಂದು ಕಟ್ಟುಮಾಡಿಸಿದ || ೫೯ ||

ಎಲ್ಲೆಲ್ಲಿ ನೋಡಿದರೆ ಕೆರೆಯು ಕಾಲುವೆ ಬಾವಿ
ಎಲ್ಲಿ ನೋಡಲು ತೋಪು ವನವು |
ಮಲ್ಲಿಗೆ ಶೃಂಗಾರದೋಟ ಮಂಟಪಗಳು
ಬಲ್ಲಿದ ರಾಮಯ್ಯ ನಿಲಿಸಿ || ೬೦ ||

ಸೀಮೆಯ ಒಕ್ಕಲ ಕರೆಸಿದ ರಾಮಯ್ಯ
ಪ್ರೇಮದಿ ವೀಳ್ಯವ ಕೊಟ್ಟು |
ಕ್ಷೇಮದಿ ಸುಖಿ ಬಾಳಿ ನೀವೆಂದು ಪ್ರಜೆಗಳಿಗೆ
ಪ್ರೇಮದಿ ಮನ್ನಿಸಿದನವರ || ೬೧ ||

ಕೊಟ್ಟ ಮಾತಿಗೆ ಕೌಲು ತಪ್ಪುವುದಿಲ್ಲವೊ
ಗಟ್ಯಾಗಿ ದುಡುಕೊಂಡು ಇರುಹೋಗಿ || ೬೨ ||

ಅನ್ನಛತ್ರವು ಅರವಟ್ಟಿಗೆ ಮಠಮಾನ್ಯ
ಉನ್ನತ ಅಗ್ರಹಾರಗಳು |
ಚೆನ್ನಾಗಿ ಕೊಟ್ಟು ಬ್ರಾಹ್ಮರಿಗೆಲ್ಲ ರಾಮಯ್ಯ
ಉನ್ನತ ಹರುಷದೊಳ್‌ ತಾನು || ೬೩ ||

ಈ ಪರಿಯಲಿ ತಂದೆ ಮಕ್ಕಳು ರಾಜ್ಯದ
ತಾವು ಪಿರಿದಾಗಿ ಆಳುತಲಿ |
ಭೂಪಾ[ಲರೊ]ಳು ಇಂಥ ದೊರೆಗಳಿಲ್ಲವು ಎಂದು
ರೂಪ ಕೇಳಿದ ಸುರಿತಾಳ || ೬೪ ||

ಅಪ್ಪಾಜಿ ಕರೆಸು ರಾಮಯ್ಯನ ಬೇಗದಿ
ಕಪ್ಪವ ಮೊದಲಾಗಿ ನೀನು |
ತಪ್ಪದೆ ನೇಮಿಯ ಕಳುಹಿಸು ಬೇಗ
ದಿ ಮುಪ್ಪಾಗಿ ಹೋದೆನಯ್ಯಯ್ಯೋ || ೬೬ ||

ಮಗಳ ಮನ್ನಿಸಿ ಸುರಿತಾಳನು ಮನದೊಳು
……………………………………….. |
……………………………………………………
ಅಗಣಿತ ಸಂಧಿ ಪೂರಾಯ್ತು || ೬೭ ||

ಅಂತು ಸಂಧಿ ೨೩ ಪದನು ೨೪೭೫ಕ್ಕಂ ಮಂಗಳ ಮಹಾಶ್ರೀ