ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ನಮೋಯೆಂಬೆ || ೧ ||

ಇತ್ತ ಕುಮ್ಮಟರಾಮ ರಾಜ್ಯವನಾಳೆ
ಅತ್ತ ಸುರಿತಾಳನು ಮಗಳ |
ಕತ್ತಿಯ ಖಾನರ ಕರೆಸಿ ಕೊಡುವೆನೆಂಬ
ಅರ್ತಿಯ ಮನದೊಳ್ಯೋಚಿಸಿದ || ೨ ||

ಪ್ರಾಯದ ಚೆಲುವ ಚೆನ್ನಿಗ ವಜೀರರ
ಬಾಯೆಂದು ಕರೆಸಿದನವರ |
ಕೋಯೆಂದು ಕೊಡುವೆ ಮಗಳು ಒಪ್ಪಿದವರಿಗೆ
ಆಯುಧ ಊರ ಉಮ್ಮಳಿಯ || ೩ ||

ಮಗಳು ಬಾಬಮ್ಮನ ಕರೆದು ತೋರಿದನವರ
ಸೊಗಸಿನ ಖಾನಖಾನರನು |
ಮೊಗ ನೋಡ್ಯವರ ಒಲ್ಲೆನೆಂದು ನುಡಿದಳಾಗ
ಸೊಗಸದು ಮನಕೆಂದಳವಳು || ೪ ||

ಇಂತಪ್ಪ ಚೆಲುವರೊಳಗೆ ಒಬ್ಬರೋರ್ವನು
ಕಾಂತೆ ನಿನಗೆ ಸರಿಬರದೆ |
ಪಂಥ ಯಾರ ಮೇಲೆ ಇದೆ ಕರೆಸುವೆನೆಂದು
ಚಿಂತೆಯೊಳಿರುತಿರ್ದನವನು || ೫ ||

ಭೂಮಿಯೊಳುಳ್ಳ ಖಾನರನೆಲ್ಲ ಕರೆಸಿದ
ಕೋಮಲೆ ತಾನೊಲ್ಲೆನೆಂದು |
ಆ ಮಹ ಕಾಶಿ ರಾಮೇಶ್ವರಕೆ ತಿರುಗುವ
ಬ್ರಾಹ್ಮ[ರು] ಕಾಡೊ[ಳು] ಬರಲು || ೬ ||

ನೇಮಿಯಖಾನನ ಬಳಿಗೆ ತಾ ಬಂದಾಗ
ಸ್ವಾಮಿ ನಮಗೆ ಸ್ವಯಂಪಾಕವ |
ಪ್ರೇಮದಿ ಕೊಡಿಸು ಉಂಡು ನಾವು ಪೋದೇವು
ಆ ಮಹಾ ಸಂತೋಷದಿಂದ || ೭ ||

ತುಪ್ಪ ಅಕ್ಕಿಯು ಬೇಳೆ ಸಕ್ಕರೆ ಗೋದಿಯ ಹಿಟ್ಟು
ತಪ್ಪದೆ ಕೊಡಿಸಿದ ಬೇಗ |
ತಪ್ಪದೆ ತಿರಿಗಿ ಬಂದಿರಿ ರಾಜ್ಯವನೆಲ್ಲ
[ಒ]ಪ್ಪಾದ ಡಿಳ್ಳಿಗೆ ನೀವು || ೮ ||

ನಮ್ಮ ಪಾಚ್ಛವನ ಮಗಳಿಗೆ ತಕ್ಕಂಥ
ಕಮ್ಮಗೋಲನ ರೂಪಿನವನ |
ಇಮ್ಮಡಿ ಕಾಮನ ಪೋಲ್ವಂಥ ಚೆಲ್ವನ
ರುಮ್ಮಿಯ ತನಕ ನೋಡಿದಿದೆ || ೯ ||

ನೀವು ರಿತುಗಿಬಂದ ರಾಜ್ಯದೊಳಲ್ಲಲ್ಲಿ
ಆವ ದೇಶದೊಳೊರ್ವ ಕುವರ |
ಜೀವರತ್ನಗಳಂತೆಸೆವಂಥ ಚೆಲುವನ
ನೀವು ಕಂಡವನ ಪೇಳೆಮಗೆ || ೧೦ ||

ಮುನ್ನೂರು ಅರವತ್ತುನಾಲ್ಕು ಗಾವುದ[ದೊ]ಳೊಂದು
ಹೊನ್ನ ಕುಮ್ಮಟ ಉಂಟು ಅಲ್ಲಿ |
ಚೆನ್ನಿಗ ರಾಮ ಕಾಮನ ರೂಪಿಗತಿ ಚೆಲ್ವ
ಮನ್ಮಥನಂತೆಸೆವನವನು || ೧೧ ||

ಇಂತಪ್ಪ ಸುದ್ದಿಯ ಕೇಳುತ್ತ ನೇಮಿಯು
ಅಂತರಿಸದೆ ತಾನು ಪೋಗಿ |
ಚಿಂತೆಯಾತಕೆ ಸುರಿತಾಳ ಚೆನ್ನಿಗನೊಬ್ಬ
ಕಾಂತೆಗೆ ತಕ್ಕಂಥ ವರ[ನು] || ೧೨ ||

ಕಾಶಿಯ ಜೋಯಿಸರ ಕರೆಸಿ ಕೇಳಲಿ ಬೇಕು
ಹಾಸ್ಯವ ನೀವ್ಮಾಡಬೇಡಿ |
ದೇಶವ ತಿರುಗಿ ಬಂದವರು ಪೇಳುವಂಥ
ವಾಸೆ ಮಾತುಗಳ ನೀವ್ಕೇಳಿ || ೧೩ ||

ಕರೆಸಿದ ಕಾಶಿಯ ಬ್ರಾಹ್ಮಣರ ಸುರತಾಳ
ಅರಿಕೆ ಮಾಡಿದರೆ ವಿಸ್ತರದಿ |
ಬಿರಿದಂಕ ಚೆಲುವ ಚೆನ್ನಿಗ ರಾಮನ ಸುದ್ದಿಯ ವಿ
ಸ್ತರಿಸಿ ಪೇಳಿದರಾಗ ಅವರು || ೧೪ ||

ನಳನೊ ಜಯದ್ರಥನೊ ನಳಿನನಾಭನೊ ದೊಡ್ಡ
ಕಳೆಯಲ್ಲಿ ಕಾಮ ಮನ್ಮಥನೋ |
ಇಳೆಯೊಳು ಅಂತಪ್ಪ ಚೆಲುವನಿಲ್ಲವು ಎಂದು
ಬೆಳೆಸಿ ಪೇಳಿದರು ಜೋಯಿಸರು || ೧೫ ||

ಕತ್ತಿಲಿ ಸಮರಂತ ಸುತ್ತಣ ರಾಯರು
ಮತ್ಯಾರು ಇದಿರಿಲ್ಲ ಅವಗೆ |
ಪುತ್ರರೊಳು [ಚೆನ್ನ] ಕುವರನ ರೂಪಿಂಗೆ
ಎಂತಪ್ಪ ಸತಿಯು ಸೋಲುವರು || ೧೬ ||

ಬಂದ ಬ್ರಾಹ್ಮಣರಿಗೆ ಉಡುಗೊರೆಗಳ ಕೊಟ್ಟು
ವಂದಿಸಿ ಕಳುಹಿದನವರ |
ಮುಂದೇನೊ ನೇಮಿಯೆ ಮಗಳನವನಿಗೆ ಕೊಟ್ಟು
ಚೆಂದದಿ ಮದುವೆ ಮಾಡುವೆ[ನೆ?] || ೧೭ ||

ಮಗಳ ಮೂರ್ಖತ್ವಕ್ಕೆ ಜಗದೊಡೆಯನು ತಾನು
ನಗುತ ಈ ಮಾತನಾಡಿದನು |
ಅಘಹರನಾಣೆ ಅವನಲ್ಲದೆ ಮತ್ತೊಬ್ಬ ಜಗದೊಳು ನಾ ಒಲ್ಲೆನೆಂದು || ೧೮ ||

ಪರಪುರುಷರು ನನಗೆ ನಿನ್ನ ಸಮಾನರು
ಬರಿಯ ಮಾತಲ್ಲ ಈ ಭಾಷೆ |
ಸ್ಥಿರವಾಯಿತೇ ನಿನ್ನ ವಾಕ್ಯವು ಭೂಪ ನೀ
ಕರೆದು ತರಿಸು ಅವನ ಬೇಗ || ೧೯ ||

ನಗೆಗೆ ನಾನೆಂದರೆ ಹಗರಣವ್ಯಾಕಮ್ಮ
ಜಗದೊಳು ಅಪಕೀರ್ತಿಯುಂಟೆ |
ಅಗಣಿತ ಬೇಡರ ಕುಲದಲ್ಲಿ ಹುಟ್ಟಿದ
ಮಗನಂತೆ ಕೇಳು ನೀ ಮಗಳೆ || ೨೦ ||

ಸೂನಿತವನು ಮಾಡಿ ನಮ್ಮ ಕುಲಕೆ ತಂದು
ಆನಂದ ಹರುಷದೊಳ್ ನೀನು |
ಜ್ಞಾನಿಯಲ್ಲವೆ? ಅವನಲ್ಲದೆ ಮತ್ತೊರ್ವ
ಮಾನವನ ಕೊಡುವಳಲ್ಲ || ೨೧ ||

ಇಂತಪ್ಪ ಪಂಥವನಾಡಿ[ದಳು] ಮಗಳಿಂದು
ಚಿಂತೆಯಾತಕೋ ನೇಮಿಖಾನ |
ಕಾಂತೆಯ ಮನಸಿನ ಬಯಕೆಯ ಇದ
ಕೆಂತು ಉಪಾಯ ಪೇಳೆನಗೆ || ೨೨ ||

ಛಪ್ಪನೈವತ್ತಾರು ದೇಶದ ದೊರೆಗಳು
ಕಪ್ಪವ ಕೊಡಬೇಕು ಎಲ್ಲ |
ಅಪ್ಪಂತ ಖಾನರ ಕಳುಹಿಸಿ ಕೊಡುವೆನು
ತಪ್ಪದೆ ಪ್ರಯಾಣವ ಮಾಡಿ || ೨೩ ||

ಕರೆಸಿದ ಪಗುದೀಯಖಾನ ಆಕಾಶ ಖಾನ
ಕರೆಸಿದ ಅಬ್ದೂಲಖಾನ |
ಕರೆಸಿದ ಖಂಡೇಯಖಾನ ಮಲುಕರನು
ಕರೆಸಿದ ಸುರಿತಾಳನೆಡೆಗೆ || ೨೪ ||

ಇಂದು ನಿಮಗೆ ಪ್ರಯಾಣವೆಂದು ಪೇಳಿದ ನೇಮಿ
ಸಂದೇಹವಿಲ್ಲದೆ ಹೊರಡಿ |
ಬಂದರು ಖಾನರು ನಿಂದು ಕೈಮುಗಿದರು
ವಂದಿಸಿದರು ಸುರಿತಾಳಗೆ || ೨೫ ||

ಐವತ್ತು ಆರು ದೇಶದ ರಾಯರ ಕೂಡ
ಸೈಮಾಡಿಕೊಂಡು ಪಗುದಿಯನು |
ಮೈಲಾಪುರಿ ಮಲೆಯಾಳ ಕೊಂಕಣದೇಶ
ಐಗಾರರಡ್ಡಿಯ ಹೊನ್ನ || ೨೬ ||

ಚಿಕ್ಕ ಪಾಳ್ಯಗಳುಂಟು ಕರ್ನಾಟದೊಳಗೆಲ್ಲ
ಲೆಕ್ಕವೆಷ್ಟಿದ್ದರೆ ಇರಲಿ |
ಮಿಕ್ಕ ಪಾಳೆಯಗಾರರು ಜಗದಪ್ಪನೊಳ
ಗೊಕ್ಕಲು ಅಹರೆಲ್ಲ ಅವಗೆ || ೨೭ ||

ಗುತ್ತಿಯ ನಾಡಿಗೆ ಅಯಿಗಾರರಡ್ಡಿಯ
ಅರ್ತೇಯ ಹೊಡೆದು ತಕ್ಕೊಳ್ಳಿ |
ಸುತ್ತಣ ಸಣ್ಣ ಪಾಳೆಯಗಾರರಿಗೆಲ್ಲ ಅದ
ರರ್ತು ತಕ್ಕೊಳ್ಳುವರ ಕೊಡೆ || ೨೮ ||

ಬಂದ ಧನವನೆಲ್ಲ ಒಂದು ಜಾಳಿಗೆ ಮಾಡಿ
ಮುಂದಾಗಿ ಕಳುಹಿಸಿ ಕೊಡಿರಿ |
ಇಂದು ನಾಳೆನ್ನದೆ ಸಾಗಿಸಿ ಡಿಳ್ಳಿಗೆ
ನಿಂದು ಒಪ್ಪಿಸುವಂತೆ ಮಾಡಿ || ೨೯ ||

ಕುಮ್ಮಟದರಸು ಕಂಪಿಲನ ಬಳಿಗೆ ಹೋಗಿ
ಒಮ್ಮನ ಹೊನ್ನ ನೀವು ಕೇಳಿ |
ಸುಮ್ಮನೆ ಕೊಟ್ಟಷ್ಟು ಸಯಿ ಮಾಡಿಕೊಂಡು
ನೀವು ಗಮ್ಮನೆ ಬರಬೇಕು ಎಂದು || ೩೦ ||

ಕಂಪಿಲರಾಯನ ಮಗನು ರಾಮಯ್ಯ[ನ]
ಸಂಪಿನಿಂದಲಿ ನೀವು ನೋಡಿ |
ಇಂಪಾದ ಪ್ರಾಯದ ರೂಪು ರೇಖೆಯ ನೀವು
ಸೊಂಪನೆಲ್ಲವ ತಿಳಿದುಕೊಳ್ಳಿ || ೩೧ ||

ಕಳೆ ಚೆಲ್ವು ರೂಪು ಕಾಮಗೆ ಮಿಗೆ ಚೆಲ್ವಂತೆ
ಕಳೆಯಂತೆ ಪೇಳಿದನರ್ಗೆ |
ಇಳೆಯೊಳು ಹೋಗಿ ಬಂದವರ ಸುದ್ದಿಯ ಕೇಳಿ
ನಳಿನಾಕ್ಷಿ ಮನಸೋತಳವಗೆ || ೩೨ ||

ಇದ ಪರೀಕ್ಷೆಯನೆಲ್ಲ ತಿಳಿಕೊಂಡು ಬನ್ನಿಂದು
ಮುದದಿಂದಲವನ ಕರೆಸುವೆನು |
ಬೆದರಿ ಬಾರದೆ ಇರಲು ಭಾಷೆಯ [ತೊ]ಟ್ಟೆ[ನು]
ಕದಲಿಸಿ ತರು[ವೆ] ರಾಮುಗನ || ೩೩ ||

ಈ ಬಗೆಯಲ್ಲಿ ಬುದ್ಧಿಯ ಪೇಳಿ ಖಾನರಿಗೆ
ಬೇಗ ಪ್ರಯಣ ಸಿದ್ಧಮಾಡಿ |
ಆಗಲೈವತ್ತು ಕುದುರೆಯ ಪ್ರಧಾನರ
ಸಾಗಿಸಿದನು ನೇಮಿಖಾನ || ೩೪ ||

[ಪಾರಸಿ] ಪರಮಾ[ನೆ] ಬರೆಸಿ ಕಾಗದಗಳ
ಓರಣದಲಿ ಮುದ್ರೆ ಇಟ್ಟು |
ಬೇರೊಂದು ಪಲ್ಲಕ್ಕಿಯೊಳಗೆ ಪಾವುಗೆಗಳ
ಆರಿಸಿ ಜೋಡನಿಕ್ಕಿದರು || ೩೫ ||

ನವರತ್ನ ಖಚಿತವಾದಂಥ ಪಾವುಗೆಗಳ
ಅವ ತಂದು ಪಲ್ಲಕ್ಕಿಯೊಳಗೆ |
ತಾವೆ ನಿತ್ಯ ಪೂಜೆ ಮಾಡಲ್ಕೆ ಒಬ್ಬರ
ಯುವತಿಯ ಕೊಟ್ಟರಾಗ || ೩೭ ||

ಹಾಗೆಂದು ಅಪ್ಪಣೆ ಕೊಡಲು ಪ್ರಧಾನರು
ಆಗ ಖಾನರ ಕೂಡಿಕೊಂಡು |
ಸಾಗ್ಯಡ್ಡಬಿದ್ದು ಸುರಿತಾಳಗೆ ವಂದಿಸಿ
ಸಾಗಿಯಾ ದಿನದಲ್ಲಿ ಅವರು || ೩೭ ||

ಹಳ್ಳಿಪಳ್ಳಿಗಳೊಳಿರದೆ ಮುಂದಕೆ ಸಾಗಿದರು
ಎಲ್ಲ ಗ್ರಾಮಗಳ ದಾಂಟಿ ಬಂದು |
ನಿಲ್ಲದೆ ಸಾಗಿ ಬಂದರು ಪಯಣದಿ ಚಿಕ್ಕ
ಡಿಳ್ಳಿಗೆ ಬಂದು ಇಳಿದರು || ೩೮ ||

ಅಂಗ ಕಾಳಿಂಗ ಕಾಶ್ಮೀರ ಕಾಂಬೋಜ
ಕೊಂಗಳ ಮಿಗೆ ಸೌರಾಷ್ಟ್ರ |
ಬಂಗಾಳ ಕೇರಳ ಸಿಂಹಳ ಕರಾಟ
ವಂಗದೇಶಂಗಳನೆಲ್ಲ || ೩೯ ||

ಸುತ್ತಿ ಛಪ್ಪನ್ನಾರು ದೇಶದ ಕಪ್ಪವ
ಒತ್ತಿ ತೆಗೆದುಕೊಂಡು ಬಂದು |
ಗುತ್ತಿಯ ನಾಡ ಜಗದಪ್ಪನ ಬಳಿಗಾಗಿ
ಅರ್ತಿಲಿ ಬಂದರು ಅವರು || ೪೦ ||

ಬಂದವರಿದಿರ್ಗೊಂಡು ಗುತ್ತಿ ಜಗದಪ್ಪನು
ತಂದು ಹಿಡಿ ಹೊನ್ನ ಕಾಣಿಕೆಯ |
ಮುಂದಿಟ್ಟ ಪಾವುಗೆಗಳಿಗಡ್ಡ ಬಿದ್ದುನು
ವಂದನೆ ಮಾಡಿ ಕೈಮುಗಿದಿ || ೪೧ ||

ತಂದಂಥ ಪಾರಸಿ ಪರಮಾ [ನೆ] ಓದಿಸಿ
ಅಂದವರನು ಕರಕೊಂಡು |
ಒಂದು ಮನೆಯನು ಬಿಡಾರ ಮಾಡಲು [ಪೇಳಿ]
ಅಂದಚಂದದಲಿ ಕಳುಹಿದನು || ೪೨ ||

ಬೆಳಗೆದ್ದು ಕುಳಿತು ಕರೆಸಿದ ಖಾನಖಾನರ
ಒಳಿತಾಗಿ ಮಾತನಾಡಿದನು |
ಕುಳಿತು ಅವರ ಕಪ್ಪದ ಹೊನ್ನ ಕಟ್ಟಿಸಿ
ಉಳಿಕೆ ಇನ್ನೇನೆಂದು ಕೇಳೆ || ೪೩ ||

ಎಲ್ಲ ಆಯಿತು ರಾಯ ನಿಲ್ಲದೆ [ಬಂ]ದೆವು
ಇಲ್ಲಿಂದ ಡಿಳ್ಳಿಗೆ ಹೊನ್ನ |
ಬಲ್ಲಿದ ಸುರಿತಾಳ [ಪಾಚ್ಛಾನ] ಬಳಿಗೆ
ನಿಲ್ಲದೆ ಕಳುಹಬೇಕೆನಲು || ೪೪ ||

ಹಾಗಾಗಲಿ ಎಂದು ಒಂದೆ ಜಾಳಿಗೆ ಮಾಡಿ
ಸಾಗಿಸಿ ಕಳುಹಿದರಾಗ |
ಹೋಗಿರೈ ಸಂಗಾತ ಐದು ಸಾವಿರ ವಾಜಿ
ಸಾಗಿಸಿಕೊಟ್ಟ ಜಗದಪ್ಪ || ೪೫ ||

ಬಂದವರೊಳಗೆ ಸಂದ ಒಬ್ಬರಿಬ್ಬರು
ಹಿಂದಕ್ಕೆ ತಿರುಗಿದರವರು |
ಮುಂದುಳಿದವರು ಪಲ್ಲಕ್ಕಿಯ ಸಹವಾಗಿ
ಚೆಂದಂದಿ ಪ್ರಯಾಣ ಕುಮ್ಮಟಕೆ || ೪೬ ||

ಬಂದವರಿಗೆಲ್ಲ ಉಡುಗೊರೆ ಹೊನ್ನುಗಳ
ಅಂದಚೆಂದದಿ ವಸ್ತುಗಳನು |
ಕುಂದದೆ ಕೊಟ್ಟು ಭೂಷಣಮಾಡಿ ಜಗದಪ್ಪ
ಮುಂದಕ್ಕೆ ಕೊಟ್ಟು ಕಳುಹಿದನು || ೪೭ ||

ಸುರಿತಾಳ [ಪಚ್ಛಾನು] ಕುಮ್ಮಟವನು ಹೊಕ್ಕು
ಬರಹೇಳಿ ನಮ್ಮ ಕಳುಹಿದನು |
ಅರಸು ಜಗದಪ್ಪ ದಾರಿಯಕಾರರಿಬ್ಬರ
ಕರೆಸಿಕೊಂಡು ನಮ್ಮ ಸಂಗಡಲೆ || ೪೮ ||

ಅಲ್ಲಿಂದ ಚರರೋಡಿ ಬಂದರು ಬಾಗಿಲ
ಗೊಲ್ಲರ ಕರೆದು ಹೇಳಿದರು |
ಬಲ್ಲಿದ ಡಿಳ್ಳಿಯ ಸುರಿತಾಳ ಕಳುಹಿದ
ನಿಲ್ಲದೆ ಹೇಳೆ ಕಂಪಿಲಗೆ || ೪೯ ||

ಕೇಳುತ ಬಾಗಿಲ ಗೊಲ್ಲರೋಡಿ ಬಂದು
ಹೇಳಿದರು ಕಂಪಿಲನೊಡನೆ |
ಕೇಳು ಚಿತ್ತೈಸು ಅರಸೆ ಡಿಳ್ಳಿ ಖಾನನ
ಊಳಿಗದವರು ಬಂದಹರೆ || ೫೦ ||

ಬಂದವರನು ಆಗ ಕರೆಸೆ ಕಂಪಿಲರಾಯ
ನಿಂದರು ಬಂದು ಕೈಮುಗಿದು |
ಇಂದ್ಯಾಕೆ ಬಂದಿರಿ ಬಂದ ಕಾರ್ಯಗಳೇನು
ಎಂದು ಹೇಳಿದರು ಕಂಪಿಲನು || ೫೧ ||

ಪಾರಸಿ ಪರಮಾನೆ ಖಾನ ವಜೀರರು
ಧರೆಯ ಕಪ್ಪಗಳನೆಲ್ಲ ಕೊಂಡು |
ಭರದಿಂದ ನಿಮ್ಮ ಪವುದಿಯ ಕೇಳಬಂದೆವು
ಅರಸೆ ಕೇಳೆನ್ನ ಬಿನ್ನಪವ || ೫೨ ||

ಹೋಗು ಬೈಚಪ್ಪ ನೀ ಬೇಗ ವಿಚಾರಿಸು
ಸಾಗಿಸಿಕೊಂಡವರ ಬಾರೊ |
ಶೀಘ್ರದಿ ಬೀದಿಯ ಮನೆಯಲ್ಲಿ ಇಳುಹಿಸಿ
ಸಾಗಿಸೊ ಉಲುಪೆ ಉಡುಗೊರೆಯ || ೫೩ ||

ಎಂದ ಆತನು ಕೇಳಿ ಬಂದನು ಬೈಚಪ್ಪ
ಚೆಂದದೊಳವರ ಭೇಟಿಯನು |
ಮುಂದುಡುಗೊರೆ ಕೊಟ್ಟು ವೊಂದಿಲಿ ಅವರನು
ಬಂದನು ಕರಕೊಂಡು ಮನೆಗೆ || ೫೪ ||

ಚೆಂದಚೆಂದದ ಉಲುಪೆಯನು ಕೊಡಿಸಿ ಅವ
ಬಂದುದು ಏನೆಂದು ಕೇಳೆ |
ಸಂದೇಹವಿಲ್ಲದೆ [ನ]ಮ್ಮರಸಿ[ಗೆ ಕೊಡಿ]
ಸಂಧಿಸಿ ಕಪ್ಪವನೆನಲು || ೫೫ ||

ಪಾವುಗೆಗಳಿಗೆ ಕಾಣಿಕೆ ಇಟ್ಟು ವಂದಿಸಿ
ಆವಾಗ ಕೊಡುವಂಥ ಹೊನ್ನ |
ಭಾವ ಶುದ್ಧದೊಳು ಬಳ್ಳದ ಹೊನ್ನನಳಕೊಟ್ಟು
ಸಾವಧಾನದೊಳೆಮ್ಮ ಕಳುಹಿ || ೫೬ ||

ಎಂದ ಮಾತನು ಕೇಳಿ ಬಂದನು ಬೈಚಪ್ಪ
ತಂದೆ ಮಕ್ಕಳ ಕೂಡೆ ಹೇಳೆ |
ಕಂದಿದ ಕಂಪಿನ ಮನದೊಳಾಳಾಪದಿ
ಬಂದೀತು ಕಂಟಕವೆನುತ || ೫೭ ||

ಬಳ್ಳದ ಹೊನ್ನ ನಾನೆಲ್ಲಿಂದ ಕೊಡಬೇಕು
ಬಲ್ಲಿದ ಸುರಿತಾಳನೊಡನೆ |
ನಿಲ್ಲದ ಕಾದುವ ಶಕ್ತಿ ನಮಗಿಲ್ಲವೊ
ಬಲ್ಲಂತೆ ಪೇಳೊ ಮಂತ್ರೀಶ || ೫೮ ||

ಹೇಳುವುದೇನು ಕೇಳುವುದೇನು ಅಪ್ಪಾಜಿ
ನಾಳೆ ನಾವಿಬ್ಬರು ಹೋಗಿ |
ಬಾಳುವ ತೆರನ ಮಾಡಿದರೆ ಸರಿ
ಇಲ್ಲವೆ ಕಾಳಗ ಬಂತು ಕುಮ್ಮಟಕೆ || ೫೯ ||

ಬಂದರೆ ಬರಲಿ ನೋಡುವೆನೆಂದ ರಾಮಯ್ಯ
ತಂದೆಗೆ ಎದ್ದು ಕೈಮುಗಿದ |
ಸಂದೇಹವ್ಯಾತಕೆ ಮುಂದಾಗುವಂಥದ
ಕಂದುಗೊರಳ ಶಿವ ಬಲ್ಲ || ೬೦ ||

ಬಲ್ಲಿದನಹುದೆಂದು ನೋಡಿ ಭಾಸ್ಕರ ತಾನು
ನಿಲ್ಲದೆ ಪಡುವಣಾದ್ರಿಯೊಳು |
ಮೆಲ್ಲನೆ ಇಳಿದು ತಾ ಪೋದನು ಬೇಗದಿ
ಎಲ್ಲರು ಮನೆಗೆ ಐದಿದರು || ೬೧ ||

ಬೆಳಗೆದ್ದು ತಂದೆ ಮಕ್ಕಳು ಬೈಚಪ್ಪನು
ಉಳಿಯದೆ ಹೋಗಿ ತಾವೆಲ್ಲ |
ಕಳೆಯುಳ್ಳ ಖಾನ ಹೇಜೀಬರ ಕಂಡೀಗ
ಒಳಿತಾಗಿ ಮಾತನಾಡಿದರು || ೬೨ ||

ಬಂದಂಥ ಖಾನ ಹೇಜೀಬರನೆಲ್ಲರ
ಸಂದರುಶನ ಮಾಡಿಕೊಂಡು |
ಎಂದಿಗೆ ಇಲ್ಲದೆ ಇಂದಿಗೇತಕೆ ನೀವು
ಬಂದದ್ದು ಏನೆಂದು ಕೇಳೆ || ೬೩ ||

ಡಿಳ್ಳಿಯನಾಳ್ವ ಸುರಿತಾಳನು ಕಳುಹಿದ
ವೀಳ್ಯವ ಕೊಟ್ಟು ನಿಂ ಬಳಿಗೆ |
ಹಳ್ಳಿಪಳ್ಳಿಗಳ ಬಡಿದು ದೊಡ್ಡರಸಾದ
ಬಳ್ಳದ ಹೊನ್ನ ಕಪ್ಪವನು || ೬೪ ||

ಬಡವರ ವೀಳ್ಯಕ್ಕೆ ಬಳ್ಳದ ಹೊನ್ನುಂಟೆ
ಕೊಡುವೆವು ನೀವು ಬಂದುದಕೆ |
ಅಡವಿಯ ಸೀಮೆಗೆ ತಕ್ಕಂಥ ಹೊನ್ನನು
ಕೊಡುತೇವೆ ನೀವು ಕೊಂಡ್ಹೋಗಿ || ೬೫ ||

ಖಾನ ಹೇಜೀಬರು ನೋಡಿ ರಾಮಯ್ಯನ
ಆನಂದ ಹರುಷದೊಳ್ ತಾವು |
[ಮೌ]ನದಿ ತಮ್ಮೊಳು ತಾವೆ ಮಾತಾಡಿದರು
ಜ್ಞಾನಿ ಬಾಬಮ್ಮಗೇನಹುದು || ೬೬ ||

ಮಿಗೆ ಹೊನ್ನ ಕೊಡಲಾರದಿದ್ದರೆ ಕಂಪಿಲ
ಮಗ ರಾಮನ ಕೊಟ್ಟು ಕಳುಹೊ |
ಅಗಣಿತ ಪಾಚ್ಛನ ಸುರಿತಾಳನ ಕಾಣಿಸಿ
ಮಿಗೆ ಹರುಷದಿ ಕಳುಹುವೆನು || ೬೭ ||

ಮಗನ ಕೊಟ್ಟವರುಂಟೆ ಜಗದೊಳೆಲ್ಲಾದರು
ಜಗಳಕ್ಕೆ ಬಂದಿರಿ ನೀವು |
ಸೊಗಸದು ಈ ಮಾತು ಸಟೆ ಹೊನ್ನ ಕೊಡುವೆವು
ಮಗ ರಾಮನ ಕೊಟ್ಟುದುಂಟೆ || ೬೮ ||

ಚೆನ್ನಿಗ ರಾಮನು ನಗುತ ಮಾತಾಡಿದ
ಪನ್ನಂಗದೊಳಗಿರುವಂಥ |
ಹೊನ್ನ ಪಾವುಗೆಗಳ ನೋಡಿ ವಂದಿಸಿ ನಾನು
ಹೊನ್ನ ಕಪ್ಪಗಳ ಕೊಡುವೆನು || ೬೯ ||

ಪನ್ನಂಗ ತಗೆಯಿರೊ ಪಾವುಗೆಗಳ ನೋಡಿ
ಹೊನ್ನು ಕಾಣಿಕೆನಿಟ್ಟು ಮುಂದೆ |
ಉನ್ನತ ಭಕ್ತಿಲಿ ವಂದಿಸಿ ಕಪ್ಪವ
ಹೊನ್ನ ಕಟ್ಟಿಸಿ ಕಳುಹುವೆನು || ೭೦ ||

ಹಾಗೆಂದ ಮಾತನು ಕೇಳುತ ಖಾನರು ತಾವು
ಬೇಗದಿ ಪನ್ನಂಗ ತೆಗೆಯೆ |
ಜಾಗಿಸಿ ನೋಡಿ ಕಣ್ಣಿಟ್ಟು ಪಾವುಗೆ ಮೇಲೆ
ಮಾಗಿ ಕೋಗಿಲೆಯಂತೆ ಆದ || ೭೧ ||

ನವರತ್ನ ಖಚಿತ ಪಾವುಗೆಗಳ ರಾಮಯ್ಯ
ವಿವರಿಸಿ ನೋಡಿದನಾಗ}
ತವಕದಿ ಹೋಗಿ ಕಾಲಿಟ್ಟು ಮೆಟ್ಟಿದನಾಗ
ವಿವರವ ಮುಂದೆ [ಕೇಳೆಂದ] || ೭೨ ||

ನನಗೆ ಇವು ಸರಿಯಾದವು ನಮ್ಮಣ್ಣಗೆ
ಅನುವಾದವಿನ್ನೊಂದು ನೋಡ |
ಮನೆ ಮನುಷರ ಕೈಯ್ಯ ತರಿಸಿ ನೀವು ಕೊಟ್ಟ[ರೆ]
ಮನಬಂದ ಹೊನ್ನ ಕೊಡುವೆನು || ೭೩ ||

ಮೂಗಿಲಿ ಬೆರಳಿಟ್ಟು ಮುಂಗೈಯ್ಯ ಕಡಕೊಂಡು
ಕೂಗಿ ಒರೆದು ಬೊಬ್ಬೆನಿಟ್ಟು |
ನಿನ್ನ ಕುಮ್ಮಟದುರ್ಗ ಹಾಳಾಗಿ ಹೋಯಿತು
ನಿನ್ನ ತಲೆಗೆ ವ್ಯಾಳ್ಯ ಬಂತು || ೭೪ ||

ಇಂತಪ್ಪ ಬುದ್ಧಿಯು ಯಾತಕೆ ರಾಮಯ್ಯ
ಪಂಥವೆ ಸುರಿತಾಳನೊಡನೆ |
ಕಾಂತೆ ಹರಿಯಮ್ಮನು ಕೈಸೆರೆ ಹೋದಳು
ಇಂತು ಸುರಿತಾಳ ಕೇಳಿದರೆ || ೭೫ ||

ಮಕ್ಕಳಾಟಿಕೆ ನೀನು ಮಾಡಿದೆ ರಾಮಯ್ಯ
ಸಿಕ್ಕಿದೆ ತುರಕರ ಸೆರೆಗೆ |
ಕಕ್ಕುಲಾತಿಯ ಎಣಿಸದೆ ನಿನ್ನ ಮನದೊಳಗೆ
ಒಕ್ಕಲ ಕೆಡಿಸಿದೆ ಮಗನೆ || ೭೬ ||

ತರುವಲಿ ಬುದ್ಧಿಯ ಮಾಡಿದೆ ರಾಮಯ್ಯ
ದೊರೆತನವನು ಕಳಕೊಂಡೆ |
ಸೆರೆಯಾದ ಕಂಪಿಲರಾಯನು ತುರುಕರಿಗೆ
ಬರುವುದು ನವಲಕ್ಷ ಕುದುರೆ || ೭೭ ||

ಬಿಡುಬಿಡು ಪಾವುಗೆಗಳನು ನೀ ರಾಮಯ್ಯ
[ಕೆಡಬೇಡ] ಸುರಿತಾಳನೊಡನೆ |
ಹೆಡೆಗೈಯ್ಯ ಕಟ್ಟಿಕೊಂಡೊಯ್ವರು ಡಿಳ್ಳಿಗೆ
ಬಡವಾ ನಿನಗ್ಯಾಕೆ ಈ ತಳ್ಳಿ || ೭೮ ||

ಹೇಳಿದ ಮಾತು ಕೇಳದೆ ರಾಮಯ್ಯ
ಕೋಳ ಹೋಯಿತು ಕುಮ್ಮಟವು |
ಹಾಳಾಗಿ ಹೊಸಮಲೆದುರ್ಗವು ಮುಂದಿನ್ನು
ಬಾಳುವ ತೆರನಿಲ್ಲ ಮುಂದೆ || ೭೯ ||

ಎಂದಿದ್ದರೀ ಕಾಯ ಉಳಿವುದೆ ಜಗದೊಳು
ಬಂದರೆ ಬರಹೇಳೊ ದಂಡ |
ಕಗ್ಗೊಲೆಯನು ಮಾಡುವೆ [ನಾನು] ರಣದೊಳು
ಸಂದೇಹವೇಕೆ ಹೋಗೆಂದ || ೮೦ ||

ಒತ್ತಿ ಖಾನರನೆಲ್ಲ ಕಡಿವೆನು ರಣದೊಳು
ಸುತ್ತಿಕೊಂಡವರ ತಲೆಗಳನು |
ಮೊತ್ತವ ಮಾಡಿ ಕಳಿಸುವೆ ಯಮಪುರಿಗಾಗಿ
ಕತ್ತಿಯ ಮೊನೆಯ ನೋಡೆಂದ || ೮೧ ||

ಅಂಜುವರಾರಿಲ್ಲ ನಂಜುಗೊರಳನೆ ಬಲ್ಲ
ಮಂಜು ಮುಸು[ಗೀತೆ] ತರುಗಿರಿಯ |
ಕುಂಜರದಾನೆ[ಗೆ] ಜಂಬುಕ ಬಲ್ಲುದೆ ಹೋಗು
ಪಂಜು ಹಿಡಿದರೆ ಕೈಯ ಸುಡದೆ || ೮೨ ||

ಬಂದವರೆಲ್ಲರು ಒಂದಾಗಿ ಹೋಗಿರೊ
ಕುಂದದೆ ನಿಮ್ಮರಮನೆಗೆ |
ವಂದನೆ ಮಾಡಿ ಸುರಿತಾಳಗೆ ಪೇಳಿರೊ
ಬಂದರೊಳ್ಳಿತು ದಂಡು ನಮಗೆ || ೮೩ ||

ಹನ್ನೊಂದು ವರುಷಕ್ಕೆ ಕನ್ನೆ ಹುಯ್ಯಲು ಬೇಲು
ಎನ್ನುತಿ[ರ್ದೆ]ನು ಮನದೊಳಗೆ |
ಚೆನ್ನಾಗಿ ಕೊಟ್ಟ ಶಿವ ಕರುಣಿಸಲ್ ನಮಗೆ
ಇನ್ಯಾಕೆ ಬಿಡಲಿ ನಾನೆಂದ || ೮೪ ||

ಹೋಗಲಿ ಕೊಡಿಸಯ್ಯ [ಪಡಿಪೊನ್ನ] ವೆಚ್ಚಕ್ಕೆ
ಹಾಗೆ ಕಳಸಬೇಡ ಮಂತ್ರಿ |
ಹೋಗಲಿ ಸಾಗಿಸು ಅವರನು ಮನ್ನಿಸಿ
ಬೇಗ ಬಾರೆಂದರಮನೆಗೆ || ೮೫ ||

ಹೋಗೆಂದು ಹೇಳಿ ಉಡುಗೊರೆ ವೀಳ್ಯಗಳನಿತ್ತು
ಆಗ ಕಂಪಿನ ತಾನು ಸಹಿತ |
ಸಾಗಿ ಬಂದರು ಸದರು ಚಾವಡಿಯಲಿ ಕುಳಿತು
ಬೇಗ ಹೊಕ್ಕರು ಅರಮನೆಯ || ೮೬ ||

ಬಂದವರೆಲ್ಲರು ಒಂದಾಗಿ ಮಾತಾಡಿ
ಸಂದೇಹವೇಕಿನ್ನು ನಮಗೆ |
ಮುಂದಣ ಕಾರ್ಯವ ಬಲ್ಲನು ಸುರಿತಾಳ
ಇಂದು ನಾವು ತೆರಳಬೇಕೆಂದು || ೮೭ ||

ಇತ್ತಲಿ [ಪಡಿಪೊನ್ನ] ಹೊನ್ನನು ತೆಕ್ಕೊಡು
ಗುತ್ತಿಯ ಜಗದಪ್ಪನೆಡೆಗೆ
ಮತ್ತೆ ಸಂಗಡ ಬಂದ ಮನುಷರ ಕರಕೊಂಡು
ಹತ್ತಿದವರು ದಾರಿಯನು || ೮೮ ||

ಜಗದಪ್ಪ ರಾಯಗೆ ಹೇಳಿ ಈ ಮಾತನು
ಅಗಣಿತವಾದ ಸುದ್ದಿಯನು |
ಮಿಗೆ ರಾಮನ ಮೇಲೆ ಕಾರ್ಯವ ಮಾಡೆಂದು
ಬಗೆಯಿಂದ ಹೇಳಿದರವರೆ || ೮೯ ||

ಪಾಚ್ಛಾವನ ಕೂಡೆ ಖಾನಝಂಗೆಯ ಮಾಡಿ
ರಚ್ಚಿಗಿಕ್ಕಿದನು ರಾಮುಗನು |
ಹುಚ್ಚಾದ ನೇಮಿಖಾನ ಬಂದರೆ ನಾಳೆ
ಫಜ್ಜೀತಿಯ ಮಾಡದೆ ಬಿಡನು || ೯೦ ||

ಆ ರಾತ್ರಿಯೊಳಿದ್ದು ಬೆಳಗೆದ್ದು ಹೋದರು
ಸಾರಿಕೊಳ್ಳುತ ಡಿಳ್ಳಿ ತನಕ |
ಆರೇಳು ತಿಂಗಳ ದಾರಿ ಶೀಘ್ರದಿ ಹೋಗಿ
ಸೇರಿದರು ಡಿಳ್ಳಿಯನು || ೯೧ ||

ಹೋದರು ಸುರಿತಾಳ ಖಾನರಾಯನ ಬಳಿಗೆ
ಆದ ವೃತ್ತಾಂತವೆಲ್ಲವನು |
ಭೇದವಿಲ್ಲದೆ ಪೇಳಿದರೊಂದು ವಿನಯದಿ
ಕಾದಲು ಬಲು ಗಟ್ಟಿ ರಾಮ || ೯೨ ||

ರೂ[ಪಿ]ಗೆ ಚೆಲುವನು ಎಳೆಯ ಯೌವನ ಪ್ರಾಯ
ಕೋಪವು ನೋಡು ಅರ್ಜುನನು |
ಮಾಪತಿ ವರದ ಕುಮಾರನಲ್ಲದೆ ಬೇರೆ
ಈ ಪರಿ ರಾಯರೊಳಗಿಲ್ಲ || ೯೩ ||

ಅಷ್ಟು ದಿಕ್ಕನು ನೋಡಿ ಬಂದೆವು ನಾವಿನ್ನು
ಅಷ್ಟರೊಳಗೆ ಕಾಣಲಿಲ್ಲ |
ಸೃಷ್ಟಿಯೊಳಗೆ ಇಲ್ಲ ಇಂತಪ್ಪ ಪುರುಷನು
ಕೃಷ್ಣನ ರೂಪಿಗೆ ಸಮನು || ೯೪ ||

ಕಾಮನ ಪೋಲ್ವಂತ ರೂಪಿನ ಚೆಲ್ವನು
ರಾಮಗೆ ಸಾಟಿ ಯಾರಿಲ್ಲ |
ಭೂಮಿಯನೆಲ್ಲ ತಿರಿಗಿದರಿಲ್ಲ ಅವನಂಥ
ಕೋಮಲಕಾಯ ಸನ್ನಿಭನು || ೯೫ ||

ಕರೆಸಿದ ಬಹುಮಾನದಲಿ ನಮ್ಮನೆಲ್ಲರ
ಇರಿಸಿದನೊಂದು ಮನೆಯೊಳಗೆ |
ಸರಸದಿಪ್ಪುಲುಪೆ ಉಡುಗೊರೆಯು ಹೊನ್ನುಗಳನು
ಹೊರಿಸಿ ಕಳುಹಿದ ಇದ್ದ ಬಳಿಗೆ || ೯೬ ||

ಬೆಳಗೆದ್ದು ತಂದೆ ಮಕ್ಕಳು ಕೊಡಿ ಬಂದರು
ಇಳುಹಿದ ಪಲ್ಲಕ್ಕಿಯ ತೆಗೆಸಿ |
ಒಳಗಿರ್ದ ಪಾವುಗೆಗಳ ನೋಡಿ ಮೆಟ್ಟಿದ
ವೈರಿಯ ಗಂಡ ನಾನೆಂದು || ೯೭ ||

ಆಡಿದ ಮಾತಿಗೆ ಆಡಿದ ಹತ್ತೆಂಟು
ಜೋಡಿಸಿದನು ಅರ್ಭಕತನವ |
ಕಾಡದೆ ಹೋಗಿ ಸುರಿತಾಳಗೆ ಪೇಳೆಂದು
ನೋಡಿ ನಗುತಲಿರ್ದ ರಾಮ || ೯೮ ||

ಕತ್ತಿಗೆ ಅಳುಕುವನಲ್ಲ ಕರ್ನಾಟದೊಳ್
ಉತ್ತಮಪುರುಷ ಪುಟ್ಟಿಹನು |
ಚಿತ್ತೈಸು ಸುರಿತಾಳ ಪಚ್ಛಾನೆ ಹೋಗಿ ಬಂ
ದರ್ತಿಯನೆಲ್ಲ ಪೇಳಿದೆವು || ೯೯ ||

ಬಂದ ಕಪ್ಪನ ಹೊನ್ನ ಮುಂದಕ್ಕೆ ಕಳುಹಿದೆವು
ಹಿಂದಾಗಿ ನಾವು ಹೊಕ್ಕು ನೋಡಿ |
ಚಂದದಿ ಅದರ ವರ್ತಮಾನವನೆಲ್ಲ
ಕುಂದದೆ ಬಿನ್ನೈಸಿದೆವು || ೧೦೦ ||

ಕೇಳಿದ ಸುರಿತಾಳ ಕರೆಸಿದ ನೇಮಿಯ
ಬಾಳ ಕೋಪವ ತಾಳಿ ಮನದಿ |
ಸಾಳುವನಹುದೊ ಕರ್ನಾಟದೊಳ್ ಕೀರ್ತಿಯ
ಬೀಳು ಮಾಡಿದ ನಮ್ಮ ಬಿರಿದ || ೧೦೧ ||

ಉರಿದೆದ್ದು ಸುರಿತಾಳ ಕರೆಸಿದ ನೇಮಿಯ
ಮರೆಮಾತೆ ಹೊರಡೊ ನೀ ದಂಡ |
ಬಿರಿದ ನುಂಗಿದನು ರಾಮನ ಹಿಡಿತರುವರೆ
ಕರಸಿದೆವಯ್ಯ ನಾವ್ನಿಮ್ಮ || ೧೦೨ ||

ತಂದೆಯ ಸಿಟ್ಟನು ಕಾಣುತ ಮಗಳೆದ್ದು
ವಂದಿಸಿ ಪಾದಕ್ಕೆ ಬಿದ್ದು |
ಇಂದೆನ್ನ ಮುತ್ತೈದೆತನವ ನೀನುಳುಹೆಂದು
ತಂದೆಗೆ ಬಿನ್ನೈಸಿದಳು || ೧೦೩ ||

ಇಂತಪ್ಪ ಬುದ್ಧಿಯ ಮಾಡಬಹುದೆ? ರಾಮ
ಎಂತು ಪೇಳಲು ಕೇಳಿದಿಲ್ಲ |
ಚಿಂತೆಯಾತಕೆ ನಿನ್ನಳಿಯಗೆ ನೀ ಕೊಟ್ಟೆ
ಅಂತರಂಗದಿ ನೋಡಲಿಕೆ || ೧೦೪ ||

ನಕ್ಕಳು ಸುರಿತಾಳ ಮಗಳ ಮಾತನು ಕೇಳಿ
ರಕ್ಕಸ ಸಿಟ್ಟನು ಬಿಟ್ಟ |
ಅಕ್ಕನ ಕರಕೊಂಡು ನೇಮಿಗಪ್ಪಣೆ ಕೊಟ್ಟು
ಹೊಕ್ಕನು ತನ್ನರಮನೆಯ || ೧೦೫ ||

ಇಲ್ಲಿ ಸಂತೋಷದೊಳಿರಲತ್ತಲಿತ್ತ
ಬಲ್ಲಿದ ಕಂಪಿಲರಾಯ |
ನಿಲ್ಲದೆ ರಾಮ ಮಾಡಿದ ಮಾಟಂಗಳ
ಎಲ್ಲವ ಕಂಡೆಲೊ ಮಂತ್ರಿ || ೧೦೬ ||

ರಾಮನು ಮಾಡಿದ ಮಹತ್ಕಾರ್ಯ ಮುಂದಿಟ್ಟು
ಭೂಮಿ ತೂಕದ ದಂಟುಬಹದೆ |
ಸ್ವಾಮಿ ಜಟ್ಟಂಗಿ ರಾಮೇಶನೆ ಗತಿಯೆಂದ
ಆ ಮಹಾದೇವನೆ ಕಾಯ್ವ || ೧೦೭ ||

ಸುರಿತಾಳ ಕಳುಹಿದ ಪವುದಿ ಪಾವುಗೆಗಳ
ದೊರೆ ರಾಮ ಮೆಟ್ಟಿದನೆಂದು |
ಧರೆಯೆಲ್ಲ ಕೇಳಿತು ಮುಂದೆ ಹುಟ್ಟುವಂಥ
ನರರಿಗೆ ಆಶ್ಚರ್ಯವಾಯ್ತು || ೧೦೮ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಚದುರ ರಾಮಯ್ಯ ಮಾಡಿದ [ವೀರ]ರಸಗಳ
ಕದನದ ಕಥೆಯು ಸಂಪೂರ್ಣ || ೧೦೯ ||

ಅಂತು ಸಂಧಿ ೫ ಕ್ಕಂ ಪದನು ೨೮೦ಕ್ಕಂ ಮಂಗಳ ಮಹಾಶ್ರೀ