ಶ್ರೀ ಗಿರಿಜಾ[ಸ್ಯಾಂಬುಜ ದಿನನಾಯಕ]
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣಾರ್ಥಿ || ೧ ||

[ಪಾವನ]ಚರಿತೆ ಪಾರ್ವತಿದೇವಿ ವರದಿಂದ
ಭಾವಕಿ ಪಡೆದಳು ಮಗನ |
ಜೀವರಾಶಿಯೊಳು ಜನಿಸಿದಳು ಊರ್ವಶಿ
ರಂಭೆ ಮೋಹದ ಕುವರಿ ಮರ್ತ್ಸದೊಳು || ೨ ||

[ಭೂವಳಯದಿ] ಸುರಸತಿಯು ತಾ ಜನಿಸಿ[ದಳ್]
ದೇವರ ವರದಿಂದಲಾಗ |
ತಾವವತರಿಸಿ ಸಾಲ್ಗುಂದಿ ಮುಕ್ಕುಂದಿಯ
ದೇವಿರಡ್ಡಿಯ ಪುತ್ರಿಯಾಗಿ || ೩ ||

ಬಂದಳು ರಂಭೆ ರತ್ನಾಜಿ ಪೆಸರ ತಾಳ್ದು
ನಿಂದು ಸಾಲ್ದುಂದಿ ಮುಕ್ಕುಂದಿಯಲಿ |
ಚಂದನಗಂಧಿ ಯಲ್ಲಮ್ಮನ ಗರ್ಭದಿ
ಚಂದ್ರವದನೆ ಜನಿಸಿದಳು || ೪ ||

ಇತ್ತ ರಂಭೆಯು ಜನಿಸಲು ಭೂಲೋಕದ
ಉತ್ತುಮ ಜನರು ಕಣ್ಗೆಟ್ಟು |
ಮತ್ತೆ ಸತಿಯರನುಳಿದು ಅವಳೊಳು ದೃಷ್ಟಿಯಿಸಿ
ಚಿತ್ತದಿ ನೋಡುತಲಿಹರು || ೫ ||

ಭೂಲೋಕಕತಿ ಚೆಲ್ವೆ ಬಾಲೆ ರತ್ನಾಜಿಯು
ಬಾಲಲೀಲೆಯೊಳಾಡುತಿರಲು |
ಬಾಲದೊಡಿಗೆ ತೊಡಿಸಿ ತಂದೆತಾಯಿಗಳಾಗ
ಲೀಲೆಯಿಂದಲಿ ಸಲಹುತಲಿ || ೬ ||

ಅರಳೆಲೆ ಮಾಗಾಯಿ ಮೂರುಡಿಯ ಸರಪಳಿ
ಕೊರಳೊಳು ರತ್ನದ ಹಾರ |
ಹರಳುಂಗುರ ಕಾಲಕಡೆಯ ಪೆಂಡೆಯನಿಟ್ಟು
ತರಳೆ ಒಪ್ಪಿದಳು ರತ್ನಾಜಿ || ೭ ||

ಈ ಪರಿಯಲಿ ಬೆಳೆದು ಹತ್ತೆಂಟು ವರುಷವು |
ರೂಪದೋರುತ ಇರುತಿಹಳು |
ಭೂಪಾಲ ಕಂಪಿಲರಾಯ ಬೇಂಟೆ ಮಾರ್ಗದಿ ಬಂದು
ಚಾಪಲಾಕ್ಷಿಯ ಕಂಡನಾಗ || ೮ ||

ಕಾಣುತಲಂಗಜ ಬಾಣದಿ ಸೊರಗಿದ
ತ್ರಾಣಗುಂದಿದನು ವಿರಹದಲಿ |
[ಏಣ]ಲೋಚನೆಯು ಇಳಾಪುತ್ರಿಯು ಎಂದು
ಮಾಣದೆ ಚರರ ಕೇಳಿದನು || ೯ ||

ಕೇಳು ಕಂಪಿಲ ಭೂಪ ದೇವಿರಡ್ಡಿಯವರ
ಬಾಲೆ ರತ್ನಾಜಿಯೆಂಬವಳು |
ಕೇಳಿ ಬನ್ನಿರೊ ಅವಳ ತಂದೆತಾಯಿಗಳನೆಂದು
ಹೇಳಿದನವರ್ಗೆ ಕಂಪಿಲನು || ೧೦ ||

ಹೇಳಲಾ ಮಾತ ಕೇಳುತ ಆ ಕ್ಷಣದಲ್ಲಿ
ತೊಳದಿಂದಲಿ ಪೋಗಿ ಚರರು |
ಕೇಳಲು ಅವರೊಳು ಪೇಳಿದ ಅವರಪ್ಪ
ಕೀಳು ಕುಲದವರಿಗೆ ಕೊಡೆವು || ೧೧ ||

ಚಿತ್ತೈಸು ಅರಸು ಕಂಪಿಲರಾಯ ಕೇಳ್ದೆವು
ಹೆತ್ತ ತಂದೆಗಳು ಆಡಿದುದ |
ಪೃಥ್ವಿ ಕಿರಾತಗೆ ಕೊಡೆನೆಂದು ಮಗಳನು
ಉತ್ತುಮ ಕುಲದವರ್ಗೆ ಕೊಡುವೆ || ೧೨ ||

ಇತ್ತಲಾ ಚರರು [ಆ]ಡಿತ ನುಡಿಗಳ ಕೇಳಿ
ಮತ್ತೆ ಕಂಪಿಲರಾಯ ನುಡಿದ |
ಒತ್ತಿ ಕೋಪದಿ ನಡೆದವರ ಮನೆಗೆ
ಮೃತ್ಯುವಿನಂತೆ ಗರ್ಜಿಸಿದ || ೧೩ ||

ಆದರೆ ಕೇಳು ನೀ ರಾಯ ಕೋಪಗಳ್ಯಾಕೆ
ಭೇದಿಸಿ ಬಾಲೆಯ ನುಡಿಯ |
ಮೂದಲಿಸಿ ಕೇ[ಳ್ವೆ] ಹೇಳೆ ನಾನೆಂಬುದ
ಕ್ರೋಧವ್ಯಾತಕೆ ಕಂಪಭೂಪ || ೧೪ ||

ಬಾಲೆಯ ಕರೆದು ಕೇಳಿದಳು ಅವರ ತಾಯಿ
ಪೇಳು ನಿನ್ನ ಮನದೊಳುಳ್ಳುದನು |
ಹಾಳು ಮಾಡುವನು ಕಂಪಿಲರಾಯ ಬಿಡನೆಂದು
ಹೇಳಿದ ಅವರಪ್ಪ ಒಲಿದು || ೧೫ ||

ಮುನ್ನ ಪೂರ್ವದೊಳೆನ್ನ ಪಣೆಯ ಬರಹದ
ಪುಣ್ಯ ಚೆನ್ನಾಗಿದ್ದರೆ ಕಾಯ್ದಪು[ದು] |
ಇನ್ನು ನೀ ಮಾಡುವುದೇನು ನಾನೇನೆಂಬೆ
ತನ್ನ ಮನಸಿನಲ್ಲಿದ್ದಂತೆ || ೧೬ ||

ಮನ್ನಿಸಿ ಮಾತನಾಡಿ[ದಳು] ಕಂಪಿಲನೊಳು
ರನ್ನದೊಡಿಗೆಯ ಬೇಡಿದಳು |
ಚೆನ್ನನ ಸರ ಹೊನ್ನ ಹೂವು ಮುತ್ತಿನ ಕೊಪ್ಪ
ರನ್ನದುಂಗುರ ಭುಜ ಕೀರ್ತಿ || ೧೭ ||

ನೀಳಾಂಬಕಿಯು ಆಡಿದಳು ಕಂಪಿಲನೊಳು
ಸಾಲಗುಂದಿಯ [ಅ]ರಮನೆಯ |
ಬಾಲಕಿ [ಕೊ]ಡಿಸೇನೆಂದೆಂಬ ಭಾಷೆಯ
ನಾಳೆ ಕಳಹುಲೇನು ನಿನ್ನೊಡನೆ || ೧೮ ||

ಹಾಗೆಂದ ಮಾತ ಕೇಳುತ ಕಂಪಿಲರಾಯ ಚೆ
ನ್ನಾಗಿ ತೆರಳ್ದ ಕುಮ್ಮಟಕೆ |
ಬೇಗದಿಂದೆರಡು ಗ್ರಾಮವ ದೇವಿರಡ್ಡಿಗೆ
ಅಗಲಿತ್ತರಸು ತೆರಳಿದನು || ೧೯ ||

ಹೊನ್ನಂದಣವನೇರಿಸಿ ಕಂಪಿಲರಾಯ
ಚೆನ್ನಾಗಿ ತೆರಳ್ದ ಕುಮ್ಮಟಕೆ |
ಪನ್ನಂಗಗವಿದು ಸತಿಯಳ ತಾನೊಡಗೊಂಡು
ತನ್ನರಮನೆಯನು ಪೊಕ್ಕು || ೨೦ ||

ಇತ್ತ ಕಂಪಿಲರಾಯ ಬಂದ ಸುದ್ಧಿಯ ಕೇಳಿ
ಚಿತ್ತದಿ ಹರಿಯಲದೇವಿ |
ಮತ್ತೆ ಚರರುಗಳನು ಕರೆಸಿ ಕೇಳಿದಳಾ
ಹೊತ್ತ ದುಗುಡದ ಸುದ್ದಿಯನು || ೨೧ ||

ಹೇಳುವೆನಮ್ಮಾಜಿ ಸಾಲಗೊಂದಿಯ ವರ
ಬಾಲೆಯ ನಿನ್ನ ವಲ್ಲಭನು |
ಲೀಲೆಯಂ [ತಂದ] ತಂದೆಗೆ [ಸಾಲ]ಗೊಂದಿಯ
ಲೋಲನುಮ್ಮಳಿಯನು ಇತ್ತು || ೨೨ ||

ಭೂ[ಪನ] ಸುದ್ದಿಯ ಕೇಳಿದಾಕ್ಷಣದಲಿ
ಕೋಪದಿ ಹರಿಯಲದೇವಿ |
ಶ್ರೀಪತಿ ಕರು[ಣು]ಳ್ಳವ ರಾಮನೊಡನಿಂತು
ತಾ ಪೇಳಿದಳು ಹರಿಯಮ್ಮ || ೨೩ ||

ತಂದುಕೊಂಡನು ಒಬ್ಬ ಸತಿಯಳನೆನಲಿತ್ತ
ಕಂದ ರಾಮಯ್ಯ ಕೇಳಿದನು |
ಹಿಂದಳ ಹಗೆಯ ತೀರಿಸಿಕೊಳ ಬಂದಳು
ಸಂದೇಹವೇಕೆಲೆ ತಾಯೆ || ೨೪ ||

ರಾಜೀವಲೋಚನೆ ಚಿಕ್ಕಮ್ಮ ಬಂದಳೆಂ
ಬೋಜೆಯ ಮಗಗೆ ಹೇಳಿದಳು |
ಮೂಜಗದೊಳು ರಾಮ ಪರಸತಿಯೆಂಬ ಸಂ
ವಾಜಕ್ಕೆ ಒಳಗಾಹನಲ್ಲ || ೨೫ ||

ಹಾಗೆಂಬ ನುಡಿಯ ಕೇಳುತ ರತ್ನಾಜಿಯು
ಬೇಗದಿ ಮನದಲ್ಲಿ ಭೀತಿಯ |
ತೂಗಿ ಹಿಡಿದು ಮಾಗಿಯ ಕೋಗಿಲಂದದಿ
ಜಾಗಿಸಿದಳು ತನ್ನ ಮನವ || ೨೬ ||

ಇವರಿರ್ವರು ಸಂವಾದದೊಳಿರಲಿತ್ತ
ಭುವನೇಶ ಕಂಪಿಲರಸನ |
ಹವಣಿಸಿ ನೋಡಿ ಮುಂದಣ ರಾಜಕಾರ್ಯವ
ವಿವರಿಸ ಬಂದ ರಾಮಯ್ಯ || ೨೭ ||

ಮುಂದೆ ರಾಮಯ್ಯ ತಾನೊಂದು ದಿವಸದೊಳು
ಚಂದದಿ ಬೇಂಟೆ ಮಾರ್ಗದೊಳು |
ಅಂದದಿ ಕುಮ್ಮಟದುರ್ಗವ ರಚಿಸುವ
ನಂದದ ಕಥೆಯು ಮುಂದುಂಟು || ೨೮ ||

ಇದು ರಾಮನಾಥ ಪದಕೃತಿಯೊಳಗೊರ್ವ
ಚದು[ರಾನನನು] ಪುಟ್ಟಿಸಿದ |
ಸುದಿತಿ ರಂಭೆಯು ಕಲಿಯುಗಕೆ ತಾ
ಬಂದಂಥ ಪದಗಳು ಪೂರಾಯವಾಯ್ತು || ೨೯ ||

ಅಂತು ಸಂಧಿ ೩ಕ್ಕಂ ಪದನು ೧೦೭ಕ್ಕಂ ಮಂಗಳ ಮಹಾಶ್ರೀ