ಶ್ರೀ ಗಿರಿಜಾ[ಸ್ಯಾಂಬುಜ ದಿನನಾಯಕ]
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣಾರ್ಥಿ || ೧ ||
ಜಗದೊಳಗೀ ಕೃತಿಯ ಹವಣಿಸಬೇಕೆಂದು
ಅಗಜೆಯರಸನ ನೆನೆದು |
ತಗಡೂರ ಕಟ್ಟೆಲಿ ನೆಲಸಿ ವರವನೀವ
ಮಿಗಿಲು ರೂಪಿನ ವಿಘ್ನರಾಜ || ೨ ||
ಸುರಲೋಕದಿಂದ ಊರ್ವಶಿ ರಂಭೆ ಶಾಪದೊಳು
ನರಲೋಕದೊಳಗೆ ತಾ ಜನಿಸಿ |
ಪರಪುರುಷರ ವ್ರತಗೆಡಿಸಿ ಹೋಗುವೆನೆಂದು
ಭರದಿಂದ ತಾ ಪುಟ್ಟಿ ಬಂ[ದು] || ೩ ||
ಕಾಮನ ಗೆಲುವಂತೆ ಕ್ಷೇಮವ ನುಡಿಸಿ
ರಾಮಯ್ಯ ಮನದೊಳು ಗುಣಿಸಿ |
ಕೋಮಲೆಯರ ಕಣ್ಣ ಬೇಟಕ್ಕೆ ಸಿ[ಕ್ಕ]ದ
ನೇಮವ ಕೈಕೊಂಡ ರಾಮ || ೪ ||
ಆಗಲೆ ಕರೆಸಿದ ಮೇಘವಾಹನಾಚಾರಿಯ
ಈ ಗಳಿಗೆಯಲೊಂದು ಬಿರಿದ |
ಬೇಗದಿ ಮಾಡೀಕ್ಷಣದೊಳು ತಂದುಕೊಡು ಎಂದು
ತ್ಯಾಗ ಉಡುಗೊರೆ ಕೊಟ್ಟ ರಾಮ || ೫ ||
ನವರತ್ನ ಖಚಿತದಿಂ ರಚಿಸಿ ಆಚಾರಿಯು
ಭುವನೇಶ ರಾಮಗೆ ಕೊಡಲು |
ಭವಹರ ಮೃತ್ಯುಂಜಯ ಜಯ ಜಯಮೆಂದು
ತವೆ ಧರಿಸಿದನು ಕಾಲೊಳಗೆ || ೬ ||
ಪರನಾರಿಯರ ಸಹೋದರನೆಂಬ ಬಿರಿದನು
ಧರಿಸಿದ ಎಡದ ಕಾಲೊಳಗೆ |
ಹರಿಯಲದೇವಿಯಮ್ಮಾಜಿ ಪಾದಕೆ ಬೀಳೆ
ಹರಸಿ ಎತ್ತಿದಳಾಗ ಮಗನ || ೭ ||
ಗರಡಿಯ ಮನೆಗಾಗಿ ಬಂದನು ರಾಮಯ್ಯ
ಪರಿಪರಿ ಸಾಮಸಾಧನೆಯ |
ಪರೀಕ್ಷಿಸಿ ಮಾಡಿ ಮಾಧವಗೆ ತಾ ವಂದಿಸಿ
ಅರಮನೆಗಾಗಿ ತಾ ಬಂದ || ೮ ||
ಉದಯದ ಊಟವ ಮಾಡಿ ರಾಮಯ್ಯನು
ಚದುರಂಗದಾಟವ ಮುಗಿಸಿ |
ಕುದುರೆಗಳನು ಏರಿ ನಡೆದರಣತಮ್ಮಗಳು
ಒದಗಿತು ಮಂದಿ ಮಾನ್ಯೆಯರು || ೯ ||
ಬೇಂಟೆಯ ಮಾರ್ಗದಿ ಹೊರಟನು ರಾಮಯ್ಯ
ದಾಂಟಿದ ಹಂಪಿಯ ಹೊಳೆಯ |
ಕಾಟಣ್ಣ ಮನ್ನೆಯರು ಸಹವಾಗಿ ಕಂಡರು
ಮೀಟಾದ ದುರ್ಗವನವರು || ೧೦ ||
ಒಮ್ಮೆ ರಾಮಯ್ಯ ಪೆಸರಿನ ದುರ್ಗವ
ನಿರ್ಮಿಸಬೇಕು ಎಂದೆನುತ |
ಉಮ್ಮಯವಾಗಿ ಕಾಟಣ್ಣ ಮನ್ನೆಯರೆಲ್ಲ
ಗಮ್ಮನೆ ಪೆಸರಿಟ್ಟರಾಗ || ೧೧ ||
ರಾಮನ ಕುಮ್ಮಟವೆನುತ ಪೆಸರನಿಟ್ಟು
ಆ ಮಹಾ ಮನ್ನೆಯರೆಲ್ಲ |
ಕ್ಷೇಮದಿ ಹಿಂದಕ್ಕೆ ತಿರುಗಿ ಬೇಂಟೆಯನಾಡಿ
ಆ ಮಹ ಹೊಸಮಲೆಗಾಗಿ || ೧೨ ||
ತಂದೆಯ ಬಳಿಗೆ ಬಂದರು ಅಣ್ಣತಮ್ಮಗಳು
ವಂದಿಸಿ ವರಣಕ್ಕೆರಗಿದರು |
ಕಂದ ರಾಮಯ್ಯನ ಎತ್ತಿ ಮುದ್ದಾಡುತ
ಬಂದಿರಾ ಬೇಂಟೆಗಳಾಡಿ || ೧೩ ||
ದೊರೆಗಳ ಗರ್ಭದೊಳ್ ಜನಿಸಿದ ಬಳಿಕಿನ್ನು
ಧುರದೊಳು ಅಂಜದಿರಬೇಕು |
ಮರೆಯ ಹೊಕ್ಕವರ ಮರಳಿ ಕೊಡದಿರಬೇಕು
ಅರಿಗಳ ಹೊಕ್ಕಿರಿಯಬೇಕು || ೧೪ ||
ರಾಯರ ಗರ್ಭದೊಳ್ ಜನಿಸಿದ ಬಳಿಕಿನ್ನು
ಕಾಯದಾಸೆಯ ಬಿಡಬೇಕು |
ಆಯತವಾಗಿ ರಣಾಗ್ರದೊಳ್ ಕಡಿದಾಡಿ
ಸಾಯಬೇಕು ಮುಕ್ತಿಗಳುಂಟು || ೧೫ ||
ಹತ್ತೆಂಟು ವರುಷಕ್ಕೆ ಹುಯ್ಯಲ ಮಾಡ್ಬೇಕು
ಮತ್ತಾಳಬೇಕು ರಾಜ್ಯವನು |
ಸುತ್ತಣ ರಾಯರಿಗೆ ಕಪ್ಪವನ್ಯಾಕೆ ಕೊಡಬೇಕು
ಹತ್ತಿ ಬಲಿಸು ಕುಮ್ಮಟವ || ೧೬ ||
ಹುಟ್ಟುತ ಸಣ್ಣದು ಬೆಳವುತ [ದೊಡ್ಡದು]
ಕಟ್ಟಿಸು ಕೋಟೆಕೊತ್ತಳವ |
ಮುಟ್ಟಿಸೊ ಹಣ ಹೊನ್ನು ಮಂದಿಗೆ ಜೀತವ
ಕೊಟ್ಟದ ಬೇಡರ ನಿಲಿಸೊ || ೧೭ ||
ದಿನಕೊಂದು ಚಂದದಿ ದುರ್ಗವ ಬಲಿಸೊ ನೀ
ಅನುವಾದ ಮಂದಿಯ ನಿಲಿಸೊ |
ಮನಬಂದ ಕಾರ್ಯಕ್ಕೆ ನಮ್ಮನೀ ಕಳುಹಿಸೊ
ಜನಕ ನಮ್ಮ ಮಾತ ನಡೆಸೊ || ೧೮ ||
ಕಂದನ ಮಾತನು ಕೇಳಿ ಕಂಪಿಲರಾಯ
ಒಂದಾರು ಭುಜವಾದನಾಗ |
ಒಂದು ಹಿಡಿ ಹೊ[ನ್ನ]ದಿನ ಒಂದಕ್ಕೆ ಕೊಡುವಂತೆ
ಕಂದಗೆ ಕಟ್ಟು ಮಾಡಿಸಿದ || ೧೯ ||
ಮಗನ ಮಾತನು ಕೇಳಿ ಮಿಗೆ ಹರುಷವ ತಾಳಿ
ಸೊಗ[ಸಿಂ]ದ ಕಂಪಿಲರಾಯ |
ಅಗಣಿತವಾದ ಕುಮ್ಮಟದುರ್ಗವನು ತಾನು
ಜಗದೊಳಗತಿ ಪ್ರಿಯನೆನಿಸಿ || ೨೦ ||
ಕುಮ್ಮಟದುರ್ಗ[ದ] ಕೋಟೆಯ ಬಲಿಸಿದ
ತಮ್ಮರಮನೆಗಳ ರಚಿಸಿ |
ಎಮ್ಮೆಯ ಹಿಂಡು ಆಕಳ ಹಿಂಡು ಕುರಿಗಳ
ಗಮ್ಮನೆ ಹೊಡೆಸಿ ಕಂಪಳವ || ೨೧ ||
ಕೋಟೆ ಕೊತ್ತಳ ಅಗುಳು ತೋಟ ವನ ಕೆರೆ ಬಾವಿ
ಮೀಟಾದ ರಾಜಬೀದಿಗಳು |
ಪೇಟೆಯ ಸಾಲು ಉಪ್ಪರಿಗೆಯ ಮನೆಗಳು
ಕಾಟಣ್ಣನರಮನೆ ಸಹಿತ || ೨೨ ||
ಅಂಗಡಿ ಬೀದಿಯು ರಂಗಮಂಟಪಗಳು
ಶೃಂಗಾರ ವಿಟರ ಕೇರಿಗಳು |
ಹೊಂಗೆಲಸದ ಅರಮನೆಯುಪ್ಪುರಿಗೆಯು
ಸಂಗ್ರಾಮಧೀರಗೆ ರಚಿಸಿ || ೨೩ ||
ದೊಡ್ಡರಮನೆಯ ಚಿಕ್ಕರಮನೆ ಪೇಟೆಯು
ದೊಡ್ಡಾನೆ ಸಾಲು ಬೀದಿಗಳು |
ಜಿಡ್ಡಿಯು ಊರ ಬಾಗಿಲು ಹೊರಕೋಟೆಯು
ವಡ್ಡರು ರಚಿಸಿದರಾಗ || ೨೪ ||
ರಂಗಮಂಟಪಗಳು ರಮಣಿಯರ ಕೇರಿಗಳು
ಶೃಂಗಾರದೋಟದ ಮನೆಯು |
ಅಂಗಳಕೇರಿಯು ರತ್ನಿಯ ಅರಮನೆಯು
ಶೃಂಗಾರವಾಗಿ ಒಪ್ಪಿದವು || ೨೫ ||
ಕಾಟಣ್ಣನರಮನೆ ನಾಟಕಸಾಲೆಯು
ಮೀಟಾದ ಕುದುರೆಯ ಲಾಯ |
ಆಟಪಾಟಗಳ ನೋಡುವರ್ತಿಯ ಚಾವಡಿ
ನೋಟವಾದವು ಪುರದೊಳಗೆ || ೨೬ ||
ಆನೆಯ ಸಾಲು ವಾಜಿಯ ಸಾಲು ಬೊಕ್ಕಸ ಮ
ಹರ್ನೌಮಿ [ರಸ್ತೀ]ನರಮನೆಯು |
ಜ್ಞಾನಿ ರಾಮಯ್ಯನ ಅರಮನೆ ಮೇಲೊಂದು
ನೂನವಿಲ್ಲದೆ ರಚಿಸಿದರು || ೨೭ ||
ಮಂತ್ರಿ ಬೈಚಪ್ಪಗೆ ಮತ್ತೊಂದು ಅರಮನೆ
ಅಂತು ಮನ್ನೆಯರ ಕೇರಿಗಳು |
ಕಂತುಕೇಳಿಯ ಮನೆ ಐದಾಯಿಗಳ ಬಾಜಾರ
ಎಂತು ಪೇಳುವೆನು ಶೃಂಗಾರ || ೨೮ ||
ಹಾರೋರ ಕೇರಿ ಹರದರ ಕೇರಿಗಳು
ಸಾರಿ ಕಟ್ಟಿದವು ಕುಮ್ಮಟದಿ |
ಆರೆಯ ಚಾರಮರಾಯನ ಅರಮನೆ
ಮಾರ್ಯಮ್ಮ ಸಿಂಗಮ್ಮನರಮನೆಯು || ೨೯ ||
ಹೊಸಬರ ಹಳಬರ ಅಸಗರ ಕೇರಿಯು
ಮೊಸರ ಮಾರುವವರ ಬಾಜಾರ |
ಶಿಶುವಿಗೆ ಪಾಲ್ಬೆಣ್ಣೆ ಛತ್ರದ ಮನೆಗಳು
ಹಸನಾದವು ನಗರದೊಳಗೆ || ೩೦ ||
ಕುರಿ ಕೋಣ ಬಲಿಗಳ ಕೊಡಿಸಿದ ದುರ್ಗಕೆ
ಪರಿಪರಿ ಶಾಂತಿ ಮಾಡಿಸಿದ |
ಬರಹೇಳಿ ಬ್ರಾಹ್ಮರ ತೃಪ್ತಿಪಡಿಸಿದ ಲಕ್ಷ
ಪರಿಯಲಿ ಅನ್ನ ಶಾಂತಿಯನು || ೩೧ ||
ಈ ಪರಿ ಪಟ್ಟಣ ರೂಪಿಸಿ ತುಂಬಿತು
ಮಾಪತಿಯ ದಯ ಕರುಣದಿಂದ |
ಪಾಪರಹಿತ ಮಲ್ಲೇಶನ ಗುಡಿ ಮುಂದೆ
ಆ ಪಟ್ಟಣದ ಶೃಂಗಾರ || ೩೨ ||
ಹೊಸಮಲೆದುರ್ಗವ ಬಿಟ್ಟು ಸಮಸ್ತರು
ವಾಸವಾದರು ಕುಮ್ಮಟಕೆ |
ಹೊಸಪರಿಯರಮನೆಯೊಳು ತಾವು ಇಳಿದರು
ದೆಸೆವಂತ ಕಂಪಿಲ ರಾಮ || ೩೩ ||
ಆಡಿದ ಸಂಬಳವ ಕೊಡದೆ ಉಳಿಹಿಕೊಂಬ
ನಾಡ ಮನ್ನೆರ ಗಂಡ ರಾಮ |
ಮಾಡಿದ ಜೀತವ ಕೊಡದೆ ನಿಲಿಸುವಂಥ
ಖೋಡಿ ರಾಯರ ಗಂಡನೆಂದು || ೩೪ ||
ಅನ್ನುಂಟು ಆಳಿಲ್ಲ ಹೊನ್ನುಂಟು ಕುದುರಿಲ್ಲ
ವೆನ್ನುತ ಸಾರಿ ಕುಮ್ಮಟದಿ |
ಬನ್ನಿ ಮನ್ನೆಯ ಬಲವಂತ ರಾಹುತರು
ಹಾಗೆನ್ನುತ ಕರೆದನು ರಾಮ || ೩೫ ||
ಹಣವಿಗಾಸೆಯ ಮಾಡಿ ರಣದೊಳು ಜುಣುಗುವ
ರಣಹೇಡಿ ರಾಯರ ಗಂಡ |
ಹೊಣಕೆಯ ಮಾಡಿ ಬೇಡಿದ ಬಿರಿದ ಕೊ[ಡದಂ]ಥ
ಬಣಗು ರಾಯರ ಗಂಡನೆಂದ || ೩೬ ||
ಬರಗಾಲ ಬಂದರೆ ಬಂಟರ ಜೀತವ
ಕರೆದು ಕೊಡದೆ ನಿಲಿಸಿಕೊಂಬ |
ಅರಸುಗಳ ಗಂಡನೆಂದೆಂಬ ಬಿರಿದನು
ಇರದೆ ಕೊಂಡಾಡಿದರಾಗ || ೩೭ ||
ಈ ಬಗೆಯಲ್ಲಿ ಬಿರಿದುಗಳ ಕೊಂಡಾಡಿಸಿ
ಬಾಬೋಜಿ ಮಲ್ಲನ ಕರೆಸಿ |
ಲೋಭಿಮಾನ್ಯರ ಗಂಡ
ನೆಂಬಂಥ ರಾಮಯ್ಯ ಆಗ ಪೇಳಿದ ಅವ[ನೊ]ಡನೆ || ೩೮ ||
ದೇಶ ದೇಶಂಗಳ ನೋಡಿ ಹುಡುಕಿ ಜೀವ
ದಾಶೆ ಇಲ್ಲದ ಮಾನ್ಯರುಗಳ |
ಭಾಷೆಯ ಕೊಟ್ಟು ನೀ ಕರಕೊಂಡು ಬಾರೆಂದು
ಲೇಸಿನಿಂದಲಿ ಅವಗುಸುರೆ || ೩೯ ||
ನಾನಾ ರಾಜ್ಯವನೆಲ್ಲ ನೋಡೆ ಬಾಬೋಜಿ ಮಲ್ಲ
ಆನಂದ ಹರುಷದೊಳ್ ತಾನು |
ನಾನಾ ಬಗೆಯ ಕಿರಾತರ ಕುಲ ಬೇಡರು
ಆನಂದದಿಂದ ಕೂಡಿದರು || ೪೦ ||
ಕೊಟ್ಟದ ಬೇಡರು ಕೂಡಿ ಬಂದರು ಒಳ್ಳೆ
ಹಟ್ಟಿಕಾರರು ಹರಿಗೆಯರು |
ದಿಟ್ಟ ಬೇಡರ ಪಡೆಗೂಡಿ ಕುಮ್ಮಟದೊಳು
ಕಟ್ಟಿತು ಕೇರಿಕೇರಿಗಳ || ೪೧ ||
ಬೂಟಕ ಬೊಮ್ಮನು ಮುದುಗೊಂಡ ಲೋಭನು
ಬೇಟದ ಸಿಂಗನೆಂಬವನು |
[ಕ]ಟ್ಟ ಬಿಲ್ಲಿನ ಮಂದಿ ಕೂಡಿತು ಕುಮ್ಮಟ
ಕೊಟ್ಟವಾಯಿತು ಲೋಕದೊಳಗೆ || ೪೨ ||
ಬಂದಂಥ ಕುದುರೆ ಮಂದಿಯನ್ನೆಲ್ಲ ನಿಲಿಸಿದ
ಹಿಂದೂವ ರಾಮಯ್ಯ ತಾನು |
ಮುಂದಳ ರಾಜಕಾರ್ಯವ ನೋಡಿ ಮನದೊಳು
ಮಂದಿಯ ಕೂಡಲಿಕ್ಕಿದನು || ೪೩ ||
ಕೊಟ್ಟದ ಬೇಡರ ಕರೆಸಿದ ರಾಮಯ್ಯ
ಕಟ್ಟಿದ ಮನ್ನೆಯರನೆಲ್ಲ |
ಒಟ್ಟನು ನಾನಾ ದೇಶದಲಿಂದ ಬಂದವರ
ದಿಟ್ಟರ ನೋಡಿ ರಾಮಯ್ಯ || ೪೪ ||
ಎಪ್ಪತ್ತು ಮಂದಿ ಮನ್ನೆಯರನು ಕೂಡಿಸಿ
ಎಪ್ಪತ್ತು ಸಾವಿರ ಹೊನ್ನ |
ಒಪ್ಪದಿ ಹಂಚಿಕೊಟ್ಟೆಲ್ಲರ ಮನ್ನಿಸಿ
ತೊಪ್ಪದ ಮೇಚರ ಕರೆಸಿ || ೪೫ ||
ಅವರಿಗೆ ಕೊಟ್ಟನು ವಿವರಿಸಿ ಹೊನ್ನುಗಳ
ಜವಳಿ ಉಡುಗೊರೆಯ ವಸ್ತ್ರಗಳ |
ಕವಿದು ಮೇಚರ ಪಡೆ ಕೂಡಿತು ಶಬರರ
ವಿವರವನೇನ ಬಣ್ಣಿಸುವೆ || ೪೬ ||
ಆರೇಯ ಚಾರಮರಾಯನ ಮಕ್ಕಳ ಆ
ರ್ನೂರು ಕುದುರೆಯ ಪೌಜು |
ಸಾರಿ ಕುಮ್ಮಟದೊಳು ಕೂಡಿಸಿ ಕಂಪಿಲ
ಧೀರನಾಗಿರ್ದ ಲೋಕದೊಳು || ೪೭ ||
ತನ್ನ ಲಾಯದ ವಾಜಿ ಮುನ್ನೂರು ಸಾವಿರ
ಹನ್ನೊಂದು ಸಾವಿರ ಬಲವು |
ಚೆನ್ನರಾಮಯ್ಯ ಕಾಟಣ್ಣನು ಸಹವಾಗಿ
ಮನ್ನೆಯರನು ಕೂಡಿಕೊಂಡು || ೪೮ ||
ಸುತ್ತಣ ರಾಜ್ಯಕ್ಕೆ ದಾಳಿಯನಿಕ್ಕುತ
ಎತ್ತ ನೋಡಿದಡತ್ತ ಗುಲ್ಲ |
ಹತ್ತಿಸಿ ಹಳ್ಳಿಪಳ್ಳಿಗಳ ಠಾಣ್ಯಗಳನು
ಒತ್ತಿಬಲಿಸಿದನು ರಾಮಯ್ಯ || ೪೯ ||
ಹಾನ್ಗಲ್ಲ ಸೀಮೆಯನೆಲ್ಲವ ಕಟ್ಟುತ
ನಾನಾ ರಾಜ್ಯವನು ಸುಲಿಸುತ |
ತಾನು ನೀಲನ ಏರಿ ನಡೆವುತ ರಾಮಯ್ಯ
ಮೋನಾದಿ ಬಾದಾವಿ ತನಕ || ೫೦ ||
ಕರಿಯ ಹೊಳೆಯ ದಾಟಿ ಕಟ್ಟಿದ ಸೀಮೆಯ
ಭರದಿಂದ ಠಾಣ್ಯವ ನಿಲಿಸಿ |
ಮರಳಿ ತಿರಿಗಿ ಬಂದು ಕುಮ್ಮಟವನು ಹೊಕ್ಕು
ಇರುತಿರ್ದ ಸಂತೋಷದಲಿ || ೫೧ ||
[ತೊ]ಟ್ಟನು ಮುತ್ತಿನಾಭರಣವ ರಾ[ಮುಗ]
ಇಟ್ಟನು ದೊಡ್ಡ ಚವುಕುಳಿಯ |
ಕಟ್ಟಿದ ಹೊನ್ನುಡಿದಾರ ಚೆನ್ನನ ಸರ
ಉಟ್ಟನು ಪಟ್ಟಾವಳಿಗಳನು || ೫೨ ||
ಕಡುಕು ಉಂಗುರ ತೊಟ್ಟ ತೊಡಕು ಸರಪಳಿ ತೊಟ್ಟ
ಬಿಡಿ ಮುತ್ತಿನ ಸರವನೆ ತೊಟ್ಟ |
ಕಡೆಯಾಣಿ ಚಿನ್ನದ ಬಳೆ ಸರಪಳಿ ತೊಟ್ಟ
ಸಡಗರವೇನ ಪೇಳುವೆನು || ೫೩ ||
ಸುತ್ತಣ ಸಣ್ಣ ಪಾಳೆಯಗಾರರೆಲ್ಲರು
ಮೊತ್ತದಿ ತಾವ್ದೊಡಿಕೊಂಡು |
ಅತ್ತಲು ತಮ್ಮನಾಳುವ ಬಲ್ಲಾಳಗೆ
ಇತ್ತಣ ರಾಜಕಾರ್ಯವನು || ೫೪ ||
ಕೊಟ್ಟದ ಕಂಪಿಲರಾಯನ ಮಗ ರಾಮ
ಬಿಟ್ಟನು ನೇಮಿಗೆ ದಂಡ |
ಸುಟ್ಟನು ಹಳ್ಳಿಪಳ್ಳಿಯ ಊರು ಸೀಮೆಯ
ಕಟ್ಟಿದ ದೊಡ್ಡ ಗ್ರಾಮಗಳ || ೫೫ ||
ಅವನ ಕತ್ತಿಗೆ ಇದಿರಾಗಿ ನಿಲ್ಲುವರಾರು
ಭುವನೇಶ ನೀನಲ್ಲದಿಲ್ಲ |
ತವಕ ಬೇಡವು ಸುಮ್ಮನಿರಿ ಕುಮ್ಮಟವನು
ಕವಿದು ಮುತ್ತಿಗೆಯ ಮಾಡು[ವೆ]ನು || ೫೬ ||
ರಾಮನ ಕೈಸೆರೆ ಹಿಡಿವೆನು ಕಂಪಿಲ
ನಾ ಮಾನ ಕೆಡಿಸಿ ನಾ ಬಿಡುವೆ |
ಕೋಮಲೆಯರಸ ತಾ [ನುಡಿದ] ಬಲ್ಲಾಳನು
ಆ ಮಹಾ ರುದ್ರಕೋಪದಲು || ೫೭ ||
ದಕ್ಷಿಣ ಸೀಮೆಯ ರಾಯರೆಲ್ಲರು ಕೂಡಿ
ಆ ಕ್ಷಣದೊಳು ತಾವು ಪೋಗಿ |
ಶಿಕ್ಷೆಯ ಮಾಡುವರಿಲ್ಲ ಕಂಪಿಲಗೆಂದು
ಲಕ್ಷಾಧಿಪತಿಗೆ ಹೇಳಿದರು || ೫೮ ||
ಸುತ್ತಣ ರಾಯ ರಾಜ್ಯಕ್ಕೆ ಧಣಿಯಾದ
ಗುತ್ತಿಯ ಜಗದಪ್ಪ ಅರಸೇ |
ಎತ್ತಿ ಬಂದನು ಕಂಪಿಲ ನಮ್ಮ ಸೀಮೆಯ
ಕತ್ತಿಯೊಳ್ ಬಲ್ಲಿದನೆನುತ || ೫೯ ||
ಮಗ ರಾಮನ ಬಿಟ್ಟು ಜಗವನೆಲ್ಲ ಸುಟ್ಟು
ಅಗಣಿತವಾದ ಕೋಟೆಗಳ |
ಮಿಗೆ ಠಾಣ್ಯ ಬಲಿದು ಮಂದಿಯ ಹಾಕಿ ಹೋದನು
ಜಗಳಕ್ಕೆ ಇದಿರಿಲ್ಲವೆನುತ || ೬೦ ||
ಕಳ್ಳ ಬೇಡನು ಇಷ್ಟು ಕಾರ್ಯವ ಮಾಡಿದ
ಒಳ್ಳಿತಾಯಿತು ಸುಮ್ಮಗಿರಿ |
ಬಳ್ಳದ ಹೊನ್ನ ಕಪ್ಪವ ತರಿಸುವೆನವನ
ಮಿಳ್ಳಾಟವ ಬಿಡಿಸುವೆನು || ೬೧ ||
ನಾನಾ ರಾಜ್ಯದ ದೊರೆಗಳನ್ನೆಲ್ಲ ರಾಮಯ್ಯ
ಕಾನಝಂಗೆಯ ಮಾಡಿಕೊಂಡು |
ಆನಂದ ಅರ್ತಿಯೊಳಿರುತಿರೆ ಡಿಳ್ಳಿಯ
ಖಾನನು ತಾನು ಕೇಳಿದನು || ೬೨ ||
ಸುರಿತಾಳ ಪಾಚ್ಛನ ಮಗಳೊಲಿದು ರಾಮಗೆ
ಕರೆಸುವ ಕಾರಣಿಕರನು |
ಅರುಪುವೆ ಜಗದೊಳು ಇಲ್ಲಿಗೆ ಈ ಸಂಧಿ
ಹರುಷದೊಳ್ ಪೂರಾಯವಾಯ್ತು || ೬೩ ||
ಇದು ಪರನಾರಿ ಸೋದರ ರಾಮನಾಥನ
ಪರಕೃತಿಯೊಳಗೊಂದು ಕಥೆಯ |
ಪದುಳದಿಂ ಪೇಳುವೆ ಖಾನ ವಜೀರರ
ಕದನ ಪುಟ್ಟುವುದ ಕುಮ್ಮ[ಟದಿ] || ೬೪ ||
ಅಂತು ಸಂಧಿ ೪ಕ್ಕಂ ಪದನು ೧೭೧ಕ್ಕಂ ಮಂಗಳ ಮಹಾಶ್ರೀ
Leave A Comment