ಶ್ರೀ ಗಿರಿಜಾ[ಸ್ಯಾಂಬುಜ ದಿನನಾಯಕ]
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ನಾಗಕಂಕಣ ನಿಗಮಾಗಮ ಜನದೀಶ
ಭಾಗೀರಥಿಯ ಮನೋಪ್ರಿಯನೆ |
ಯೋಗಿ ಪೀತಾಂಬರಧರಸಖಚೂಡನೆ
ಆಗಮ[ತತಿ] ವಂದಿತನೆ || ೨ ||

ಜಗದೊಳಧಿಕ ಕರ್ನಾಟಕಕೊಪ್ಪುವ ವಿದ್ಯಾ
ನಗರ [ದಕ್ಷಿಣಭಾ]ಗದಲ್ಲಿ |
[ಅಗ]ಜಾಧಿಪತಿ [ಇಹ] ಮೇರುಗಿರಿ [ಗು] ದೊಡ್ಡ
ಸೊಗಸೆನಿಸುವ ಹೊಸಮಲೆಯ || ೩ ||

ಗಿರಿಯಲ್ಲಿ ಬಹು ಬೇಂಟೆಕಾರನಾಗಿ[ಯೆ] ತಾನು
ಇರುವನು ಕಿರಾತನೊರ್ವ |
ಪರಿವೇಷ್ಟಿಸಿ ದಾರಿಯ ಕಟ್ಟಿ ಸುಲಿಕೊಂಡು
[ಅ]ರ[ಸನಾಗಿಯೆ] ಕಂಪಿಲನು || ೪ ||

ದಾರಿದಾರಿಯ ಜನರನೆಲ್ಲ ಸುಲಿದು ತಾನು
ಇರುವನು ಕಿರಾತನೊರ್ವ |
ಊರು ಗ್ರಾಮಗಳನು ಹಿಡಿದು ವೀರದಿ ಲುಬ್ದ
ಅರ[ಸಾಗಿ] ಆಳ್ವ ಹೊಸಮಲೆಯ || ೫ ||

ಈ ಪರಿಯಿಂದಿರುತಿರೆ [ತಾ]ನಾ ರಾಜ್ಯಕ್ಕೆ
ಭೂಪನಾಗಿಹನು ಕಂಪಿಲನು |
ತಾ ಪಿರಿದೆನಿಸಿ ಹತ್ತೆಂಟು ಗ್ರಾಮಗಳನು-
ಮಾಪತಿ ಕೃಪೆಯಲಾಳುವನು || ೬ ||

ಭೂಪತಿ ಗುತ್ತಿಯನಾಳ್ವ ರಾಯನು ಜಗ
ದಪ್ಪ ಕಪ್ಪವ ಬೇಡಿ ಕಳುಹೆ |
ಈ ಪರಿಯಿಂದ ಕಪ್ಪವನಿತ್ತು ಕಂಪಿಲ
ಕೋಟಾರಣ್ಯ ಮಧ್ಯದೊಳಿಹನು || ೭ ||

ಅಷ್ಟ ದಿಕ್ಕಿನ ರಾಯರಿಗೆ ಕಪ್ಪವನಿತ್ತು
ಪಟ್ಟಾಭಿಷೇಕಿತನಾಗಿ |
ಕೊಟ್ಟದ ಬೇಡರ ತಡೆದು ಆ ಗಿರಿಯೊಳು
ಸೃಷ್ಟೀಶನಾಗಿರುತಿಹನು || ೮ ||

ಸೃಷ್ಟಿಗಧಿಕ ಹೊಸಮಲೆಯೊಳು ದುರ್ಗವ
ಕಟ್ಟಿ ಆಳುವನು ಕಂಪಿಲನು |
ಕೊಟ್ಟ ಸಂಬಳ ಭಕ್ಷಪಡಿಗಳ ನಡೆಸಿ ಬಲು
ದಿಟ್ಟ ಈ ಬೇಡನೆಂದೆನಿಸಿ || ೯ ||

ಅಗುಳು ಆಳ್ವೇರಿಯು ಮಿಗೆ ಜಿಡ್ಡಿ ಕೊತ್ತಳ
ಜಗಳಕ್ಕೆ ಭಾರಿ ಹುಲಿಮುಖವು |
ನೆಗಳಿಹ ಕೋಟೆಗೆ ಘಣಿಪನಂತೆಸೆದಿಹ
ಅಗಣಿತ ತೆನೆಗಳೊಪ್ಪಿದವು || ೧೦ ||

ಸೋಮವೀಧಿಯು ಸೂರ್ಯವೀಧಿ ಉಪ್ಪರಗುಡಿ
[ಕಾರ್ಮುಕ]ಜನರರ್ತಿಜನರು |
ಪ್ರೇಮದಿ ನವಿಲುಯ್ಯಲೆಯ ನರ್ತನಗಳು
ಸ್ತೋಮದೊಳೆಸೆದೊಪ್ಪುತಿಹವು || ೧೧ ||

ಅಂಗಡಿ ವೀಧಿಯು ರಂಗಮಂಟಪಗಳು
ಶೃಂಗರಿಸಿದ ಕೆಂಡೋಕುಳಿಯು |
ಅಂಗಳ ಚಳೆಯಾಗಿ ಮಂಗಳ ಪಳುಕವು
ಅಂಗನೆಯರ ಕೇರಿಯೊಳು || ೧೨ ||

ಇತ್ತ ಈ ಪುರವನಾಳುತಲಿರೆ ಕಂಪಿಲ
ಅತ್ತ ಗುಜ್ಜಾರಿಯನಾಳ್ವ |
ಉತ್ತುಮ ಆರೆಯ ರಾಯ ರಾಜ್ಯವು ಕೆಟ್ಟು
ಮತ್ತೆ ಗೂಳೆಯವೆದ್ದು ಬಂದ || ೧೩ ||

ವರುಣನ ನದಿಯೆಂಬ ಕೃಷ್ಣನದಿಯ ದಾಟಿ
ತೊರುಗಲ್ಲು ಬಾದಾವಿಲಿಳಿದು |
ಸಾರಿದ ಕುಮ್ಮಟ ತುಂಗಭದ್ರೆಯ ದಾಂಟಿ
ಧೀರ ಕಂಪಿಲನಿದ್ದೆಡೆಗೆ || ೧೪ ||

ಧಾರುಣಿಯನು ಆಳ್ವ ಕಂಪಿಲರಾಯಗೆ ಕು
ಮಾರಿಯೊರ್ವಳನು ಕಾಣಿಕೆಯ |
ಓರಣದಲಿ ಇತ್ತು ಕಂಡನರಸನು ಭೂ
ಚಾರಮನೆಂಬ ಆರೆಯನು || ೧೫ ||

ಕಾಣಿಕೆಯನು ಇತ್ತು ಆರೆಯ ಚಾರ[ಮ]ಗೆ
ನಾಣ್ಯ ಬಂಗಾರ ವಸ್ತ್ರಗಳ |
ಊಣ್ಯವಿಲ್ಲದೆ ತಿರುಗಿಸಿ[ದ] ಹಿಂದಕೆ ಪಡು
ವಣರಾಜ್ಯ[ವಿತ್ತು] ಕಂಪಿಲನು || ೧೬ ||

ಪಡುವಣ ರಾಜ್ಯವನಿತ್ತವನಿಗೆ ಭೂಪ
ತಡೆದನು ಆರೆಯ ದೊರೆಯ |
ಸಡಗರದಿಂದಲಿ ಕಂಪಿಲರಾಯನು
ನಡೆವಳಿಗುಂಟಾಗಿ ಇಹನು || ೧೭ ||

ಬಂದ ಆರೆಯರಾಯ ನಿಂದ ಬಲ್ಲಿದನಾಗಿ
ನಿಂದನು ಅರಸು ಕಂಪಿಲನು |
ಚಂದ್ರವದನೆ ಹರಿಯಲದೇವಿಯು ಬಲು
ಚಂದದಿಂದಾರೈವುತಿರಲು || ೧೮ ||

ಸತಿ ಪುರುಷರು ಈ ಪರಿಯೊಳು ಇರುತಿರೆ
ಅತಿಶಯ ಕೈಲಾಸದೊಳಗೆ |
ಪೃಥ್ವಿಗೀಶ್ವರನ ವಾಲಗ ನೆರೆದಿರೆ ಗಣ
ತತಿಯು[ಮಾ]ದೇವಿಯರೊಲಿದು || ೧೯ ||

ವಾಲಗಗೊಟ್ಟು ಈಶ್ವರ ಕುಳಿ[ತಿರೆಯುವೆ]
ಬಾಲ ಜಾಹ್ನವಿ ಗಣತತಿಯು |
ಲೀಲೆಯಿಂದಲಿ ಬಂದ[ರ]ಷ್ಟವಧಾನದಿಂ
ದಾಲಿಸಿ ಗಣಸ್ತೋಮವೆರಸಿ || ೨೦ ||

ತೆತ್ತೀಸಕೋಟಿ ದೇವರ್ಕಳೆಲ್ಲರು ಕೂಡಿ
ಇತ್ತಲಗಜೆಯೊಳು ನೆರೆದು |
ಮೃತ್ಯುಂಜಯನ ವಾಲಗಕೈದು ಬಂದರು
ಸಮಸ್ತ ಗಣರು ತಿಂಥಿಣಿಯು || ೨೧ ||

ಎಂಟು ದಿಕ್ಕುಗಳ ನೋಡುತ ಉಮೆ [ನೋ]ಟದಿ
ಗಂಟಿಕ್ಕಿ[ದ] ಮೊಗವ ನೋಡಿದಳು |
ಉಂಟು ದ್ವಾಪರರಾಯ [ರೈವರಲಿ] ಕೃಷ್ಣ[ನ]
ನಂಟನರ್ಜುನನುಮೆದೇವಿ || ೨೨ ||

ದೇವಸಭೆಯು ಹರಿಬ್ರಹ್ಮರುಮವರೆದ್ದು
ಭಾವಿತ ನಮಿತರು ಸಹಿತ |
ದೇವಿಯ ಕಾಣಲೊಡನೆ ಎದ್ದು ಕೈ ಮುಗಿ[ಯೆ ಸ]
[ದ್ಭಾವೆ] ಪರಬ್ರಹ್ಮ[ನೊ]ಡನೆ || ೨೩ ||

ಇವಗಿಷ್ಟು ಗರ್ವಿಕೆ ಯಾಕೆ ಮಾನವನೆಂದು
ಭೂವನೇಶನರ್ಧಾಂಗಿ ನುಡಿಯೆ |
ದಿವಿಜಾರಿಗಿಂದ ವೆಗ್ಗಳ ಕಾಣೆ
ಪಾರ್ವತಿ [ನವೆವ]ನರ್ಜುನ ಪರಸತಿಗೆ || ೨೪ ||

ಧರೆಯೊಳಗಿವನ ಕುರುಹ ನೋಡಬೇಕೆಂದು
ಪರನಾರಿಯರ ಬಿರಿದುಗಳ |
ಪರೀಕ್ಷಿಸಿ ನಾ ನೋಡಿದಲ್ಲದೆ ಬಿಡೆನೆಂದು
ವರ ರಂಭೆಯನು ತಾನಟ್ಟಿದಳು || ೨೫ ||

ಆದರೆ ಕೇಳು ಗೌರಾಯಿ ಮಾ[ತ]ನದೊಂದು
ಈ ಧರೆಯೊಳಗೆ ಈತನನು |
ಸಾಧಿಸಿ ವೆಗ್ಗಳವಾದರೆ ನಿನ್ನ ರಂಭೆಗೆ
ಮೇದಿನಿಯೊಳಗೆ ಸರಿಯುಂಟೆ || ೨೬ ||

ಶಂಭುವರ್ಧಾಂಗಿವಾದಿಗಳಿತ್ತ ಧರೆಯೊಳು
ರಂಭೆ ಅರ್ಜುನ ಸಹವಾಗಿ |
ಬೆಂಬಳಿಯಿಂದಲೀರ್ವ[ರ]
ಧರಣಿಗೆ ಕಳುಹೆ ಸಂಭ್ರಮ ಕೈಲಾಸವಿಳಿದು || ೨೭ ||

ಬಂದರಿರ್ವರು ಕೈಲಾಸವನಿಳಿಯುತ
ನಿಂದರು ಧರೆಯ ಮಧ್ಯದಲಿ |
ಕುಂದ[ದಿಳೆ]ಯೊಳು ಉದಿಸಬೇಕೆನುತಲಿ
ಅಂದವರು ಉಮೆ ಈಶ ರಚಿಸೆ || ೨೮ ||

ಇತ್ತ ಕಂಪಿಲನರಸಿ ಹರಿಯಾಲದೇವಿಯು
ಪುತ್ರರಿಲ್ಲೆನುತ ಮನದೊಳಗೆ |
ಮತ್ತೆ ಜಟಿಂಗ ರಾಮೇಶನ ವರಗಳ
ಅರ್ತಿಯಿಂ ಸಂಬಾಳಿಸಿದಳು || ೨೯ ||

ಪಾರ್ವತಿರಮಣನೆ ಉರ್ವಿಗೆ ಒಡೆಯನೆ
ನಿರ್ವಾಣಮುನಿಗಳೊಂದಿತನೆ |
ಸರ್ವಜೀವರ ಸಲಹುವ ಸೂತ್ರಧಾರನೆ
ಗರ್ವದಲ್ಲಣನೆ ಕೊಡು ಸುತನ || ೩೦ ||

ಇಂತಪ್ಪ ಭಕ್ತಿಯೊಳು ಚಿಂತಾಯಕನ ಸ್ತುತಿಸುವ
ಕಾಂತೆ ಇಹಳು ತನ್ನ ಮನದಿ |
ಅಂತು ಸಂತೋಷದಿಂದಲಿ ಮೀಸಲಗಳನು
ಕಂತುಹರಗೆ ಕಳುಹಿದಳು || ೩೧ ||

ಮೀಸಲ [ಕೊಡ] ಹಾಲು ತುಪ್ಪ ಕದಳಿಯ ಫಲ
ಸೂಸಲ ಸಣ್ಣಕ್ಕಿ ಬೇಳೆ |
[ಭಾ]ಸುರ ತೇಜನ ಬಲಗೊಂಡು ಬನ್ನೆಂದು
ಆ ಸಖಿಯರ ಕೂಡೆ ಕಳುಹೆ || ೩೨ ||

ಗಿರಿಜೆಯ ರಮಣಗೆ ವಂದಿಸಿ ಮೀಸಲೊಪ್ಪಿಸಿ
ಪರಮಾತ್ಮ ಕೊಡು ಇಷ್ಟಾರ್ಥವನು |
ದೊರೆಗಳ ಅರಸಿ ಹರಿಯಲದೇವಿಗೆ ಒಬ್ಬ
ವರಪುತ್ರನೆಂಬಂಥ ಮಗನ || ೩೩ ||

ವರಗಳ ಬೇಡಲು ಹರುಷದಿಂ ಪೂಜಾರಿ
ಕರೆದು ಕೊಟ್ಟನು ಪುಷ್ಪಗಳನು |
ಹರಿಯಲದೇವಿಗೆ ಕೊಡಿರೆಂದು ಕದಳಿಯ
ಪರಿಪರಿ ಹಣ್ಣು ಪುಷ್ಟಗಳ || ೩೪ ||

ಸೋಮವಾರದ ದಿನ ಆ ಮಹಾದೇವನ
ಪ್ರೇಮದಿಂದಲಿ ಪೂಜೆ ಮಾಡಿ |
ಕೋಮಲೆ ಹರಿಯಲದೇವಿಗೆ ಕಳುಹಿದರು
ಕಾಮಿತ ಫಲವಾಗಲೆನುತ || ೩೫ ||

ಬಂದರು ಪ್ರಸಾದ ಹಣ್ಣು ಪುಷ್ಪಗಳನು
ತಂದರು ಹರಿಯಮ್ಮನ ಬಳಿಗೆ |
ಗಂಧ ಪ್ರಸಾದ ಕದಳಿಯ ಫಲಂಗ[ಳ]
ಮುಂದಿಕ್ಕಿ ಕೈಯ ಮುಗಿದರು || ೩೬ ||

ಉಂಡುಟ್ಟು ಮಲಗಲು ಕಂಡಳು ಕನಸನು
ಪುಂಡರೀಕ ಪುರುಷೋತ್ತಮನ |
ಖಂಡುಗ ಪೂವಿನೊಳಗೆ [ಒಂದು] ಬಹು ದೊಡ್ಡ
ದುಂಡು ಮಲ್ಲಿಗೆ ಅರಳ ಕೊಟ್ಟ || ೩೭ ||

ಕೊಟ್ಟೆನು ಸುತನ ಹರಿಯಲದೇವಿ ಕೇಳಿನ್ನು
ಪಟ್ಟಾಭಿಷೇಕ[ನು] ಎನಿಸಿ |
ಕೊಟ್ಟದ ರಾಮನೆನಿಸಿ ಅರ್ಜುನ ಬಂದು
ಪುಟ್ಟುವನು ನಿನ್ನಾತ್ಮದೊಳಗೆ || ೩೮ ||

ಬಂದು ಜನಿಪ ಪಾಂಡವರೊಳಗೊರ್ವ ಮು
ಕುಂದನ ಮೈದುನ ನಿನ್ನ |
ಕಂದನಾಗಿಯೆ ಪುಟ್ಟಿ ರಾಯ ರಾಜ್ಯವನೆಲ್ಲ
ಬಂಧಿಸಿ ಪಿಡಿ[ವ] ದೊರೆಗಳ || ೩೯ ||

ಇಂತಪ್ಪ ಮಗನು ಪುಟ್ಟುವನೆಂದು ಸ್ವಪ್ನದೊಳ್
ಕಂತುಹರನು ಶಿವ ನುಡಿದ |
ಸಂತೋಷದಿಂ ನಿದ್ರೆ ತಿಳಿದೆದ್ದು ಹರಿಯಮ್ಮ
ಚಿಂತಾಯಕನ ಕರುಣದಲಿ || ೪೦ ||

ನವಮಾಸ ತುಂಬಿತು ಹರಿಯಲದೇವಿಗೆ
ಭವಹರ ರುದ್ರನ ದಯದಿ |
ಶಿವನ ಅನುಜ್ಞೆಯಿಂ ಪಡೆದಳು ಗಂಡು
ಕುವರನ ಹರಿಯಲದೇವಿ || ೪೧ ||

ದೇವ ಜಟ್ಟಿಂಗ ರಾಮೇಶನ ವರದಿಂದ
ಭಾವಕಿ ಪಡೆದಳು ಮಗನ |
ಕೋವಿದ ರಾಮ ಜನಿಸಲಿತ್ತಲತ್ತಲಾ
ದೇವೇಂದ್ರನ ವರ ರಂಭೆ || ೪೨ ||

ತೆಗೆದು ಬೀಸಾಟೆ ಸಿಪ್ಪೆಯನುಂಬ ದಾದಿಯು
ಅಘಹರನೇ ಗತಿಯೆಂದು |
ಜಗಿದು ನುಂಗಿದಳು ಏಕಭಕ್ತಿಯಿಂದವಳು
ಮಗ ಬಂಟ [ಕಳ್ಳ]ರಾಮ ಪುಟ್ಟೆ || ೪೩ ||

ರಾಮನೆಂಬ ಪೆಸರಿಟ್ಟು ಕಂಪಿನ ತನ್ನ
ಕುಮಾರನ ಅತಿ ಮೋಹದಿಂದ |
ಭೂಮಿಯೊಳತಿ ಚೆಲ್ವನಿಗೆ ಬಾಲದೊಡಿಗೆಯ
ಭೂಮೀಶ ತರಿಸಿದನಾಗ || ೪೪ ||

ಅರಳೆಲೆ ಮಾಗಾಯಿ ಬೆರಳ ಹೊನ್ನುಂಗುರ
ಕೊರಳಿಗೆ ಮುತ್ತಿನ ಹಾರ |
ಸರಪಳಿ ಗೆಜ್ಜೆ ನಡುವಿಗೆ ಹೊನ್ನುಡಿದಾರ
ದೊರೆ ರಾಮಗಳವಡಿಸಿದರು || ೪೫ ||

ಓದು ವಿದ್ಯವು ಸಾಧನೆಯ ಕಲಿತು ರಾಮ
ಕಾದುವ ಸಾಮ ಶಕ್ತಿಯನು |
ಭೇದಿಸಿ ಗಜ ತುರಗದೇರಾಟವನು ರಾಮ
ವಾದಿವಾದಿಗಳ ಗೆಲ್ವುದನು || ೪೬ ||

ಈ ರೀತಿಯಲಿ ರಾಮ ಬೆಳೆವುತಿರಲು ಇತ್ತ
ಕಾರಣದೊಳು ಮತ್ತೆ [ಇವಳು] |
ಊರ್ವಶಿ ರಂಭೆಯು ಪು
ಟ್ಟುವ ಕ್ರೀಯದು ಕಾರಣಿಕದ ಸಂಧಿ ಮುಂದೆ || ೪೭ ||

ಅಂತು ಸಂಧಿ ೨ಕ್ಕಂ ಪದನು ೭೮ಕ್ಕಂ ಮಂಗಳ ಮಹಾಶ್ರೀ