ಶ್ರೀ ಗಿರಿಜಾ[ಸ್ಯಾಂಬುಜ ದಿನನಾಯಕ]
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ಶ್ರೀ ಗೌರಿ[ಯರ್ಧಾಂ]ಗ ಭಾ[ಗೀ]ರಥೀಮೌಳಿ |
ನಾಗಭೂಷಣ ಪರಮೇಶ |
ಆಗಮಾತೀತ ಪರಮ ಋಷಿಮುನಿವಂದ್ಯ
ಬೇಗದಿಂ ಕೊಡು ಮತಿಗಳನು || ೨ ||

[ದು]ಷ್ಟಾರಿಮದಭಂಗ ದುರಿತಸಂಹರ [ಶೃಂಗ]
ಸೃಷ್ಟಿಗಧಿಕ ಶಂಭುಲಿಂಗ |
ಅಷ್ಟದಿಕ್ಪಾಲಕರೊಡೆಯ ಗೌರೀಶನೆ
ಸೃಷ್ಟಿಸು ಮತಿಗೆ ಮಂಗಳವ || ೩ ||

ಸತಿಯರೊಳಗೆ ರೂಪವತಿಯ ನೆಚ್ಚಿನ ಪುಣ್ಯ
ವತಿಯಾದಳಾ ಪಾರ್ವತಿಯ |
ಕ್ಷಿತಿಯ ಜನರಿಗೆಲ್ಲ ಮತಿಯ ಕೊಡುವ ಮಾನ್ಯ
ವತಿಯುಮೆದೇವಿಯ ನೆನೆವೆ || ೪ ||

ಇಂದು ಪಾರ್ವತಿದೇವಿಗೆರಗಿ ಶ್ರೀ ಲೋಕೇಶ
ಗೊಂದಿಸಿ ವರಗಳ ಪಡೆದು |
ಚಂದದಿಂದಲಿ ಉಮೆಯಳ ನಾನು ಭಜಿಸಿ ಆ
ನಂದದಿ ಪೇಳ್ವೆನೀ ಕಥೆಯ || ೫ ||

ಲೇಪಾಕ್ಷಿಪುರವಾಸ ಲೀಲಾವಿಲಾಸನೆ
ಪಾಪಸಂಹರನೆ ಕರುಣಿಸು |
ಮಾಪತಿಯಾವಾಸ ಭದ್ರಕಾಳೀಶನೆ ಉ
ಮಾಪತಿ ಕುವರ ವೀರೇಶ || ೬ ||

ಹರನ ಮೋಹದ ಪುತ್ರ ಹರಿನೀಲಗಾತ್ರನೆ
[ಉರು]ತರಗುಣ [ಮ]ಹಾವೀರ |
ಪರಮಭಕ್ತರ ಪೋಚ ಕರುಣದಿಂದೆಮಗೆ ನೀ
ವರವ ಪಾಲಿಸು ಚೆನ್ನವೀರ || ೭ ||

ಕಾಮನ ಪೆತ್ತನೆ ಕಮಲಲೋಚನ ಸತ್ಯ
ಭಾಮೆಯರರಸ ಶ್ರೀಕೃಷ್ಣ |
ಈ ಮಹಿಯೊಳಗೆ ನಾನಾ ಜೀವಾತ್ಮನೆ
ಕಾಮಿತ ಫಲದಾಯಕನೆ || ೮ ||

ಕಲಿಯುಗದೊ[ಳ]ಗೆ ಕರ್ನಾಟದೊಳರ್ಜುನ
ಹಲವು ಶಾಪಗಳಿಂದ ಜನಿಸಿ |
ಬಲವಂತವಾಗಿನ್ನು ತಾ ಪುಟ್ಟಿ ಬರುವಂಥ
ಗೆಲುವಿನ ಕಥೆಯ ಪೇಳುವೆನು || ೯ ||

ಅಂದಿನ ಪಾರ್ಥ [ತಾ] ಇಂದಿನ ನಾಯಕ
ಬಂದು ಜನಿಸುವಂಥ ಬಗೆಯ |
ಚಂದದಿಂದೊರೆದು ಪೇಳುವೆನು ಈ ಕಥೆಯನು
ಚಂದ್ರಶೇಖರನ ವರದಿಂದ || ೧೦ ||

ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ
ಓ[ದಿ]ದಡಲಿ ತಿಳಿದಂತೆ |
ಈ ಧರೆಯೊಳಗೆಲ್ಲ ಪರನಾರಿ[ಯರಿ]ಗೆ ತಾ
ಸೋದರನೆಂಬಂಥ ಕಥೆಯ || ೧೧ ||

ಆಧಾರವಿಡಿದು ಪೇಳಿದನಾ ಗಂಗಯ್ಯ
ಈ ಧರೆಯ ವಿದ್ವಾಂಸರೊಳಗೆ |
ಸಾಧಿಸಿ ಅವರ ಸೇವಕನಾಗಿ ಪೇ[ಳ್ವೆ]ನು
ಯಾದವಸಖ ಪಾರ್ಥ ಕಥೆಯ || ೧೨ ||

ಕುಲದಲ್ಲಿ ಪೂವಲಿ ಮುಮ್ಮಡಿಸಿಂಗನು
ಬಲವಂತನಾಗೊಬ್ಬ ಶಬರ |
ಹಲವು ಕಾಲದೊಳು ಕಂಪಳಕೆ ತಾನರಸಾಗಿ
ಇಳೆಯನಾಳುತ ಇರುತಿಹನು || ೧೩ ||

ನೂರಾರು ಮಂದಿ ಕಿರಾತರ[ನೊಡಗೊಂಡು]
ಆರಣ್ಯ ಅಡವಿಯೊಳ್ ತಾನು |
ಕಾರುಣ್ಯನಿಧಿಯೆ ಕಂಪಿಲದೇವರೆಂಬುತ
ಮಾರಹರನ ಪೂಜೆಯಿಂದ || ೧೪ ||

ಸತಿಪುರುಷರು ತಾವು ಅತಿ ಹರುಷದೊಳಿರೆ
ಮತಿವಂತೆ ಮಂಚಕ್ಕನವಳು |
ಗತಿಯಿಲ್ಲ ಮುಂದೆ ಕಂಪಳಕೆಂದು ಪುತ್ರನ
ಅತಿ ಹರುಷದೊಳು ಬೇಡಿದಳು || ೧೫ ||

ಕೊಟ್ಟನು ಬಿಲ್ಲಿನ ಮೇಲಣ ಪುಷ್ಪವ
ಇಟ್ಟನು ಮುಂದಕ್ಕೆ ಹೂವ |
ಕಟ್ಟಿಕೊಂಡಳು ಸೆರಗಿಗೆ ಪ್ರಸಾದವ
ಅಷ್ಟರೊಳ್ ಗರ್ಭ ಸೂಚಿಸಲು || ೧೬ ||

ಉದಿಸಿದನೊರ್ವ ಕುಮಾರಕ ಜನಿಸಿದ
ಪೊಡವಿಯನಾಳ್ವಂತನಾಗಿ |
ಸುದತಿಯೊರ್ವಳ ಕೂಡಿ ಸುತ[ನು] ಸಾಹಸವಾಗಿ
ಸದರನೇರುವ ಮುಂದೆ ಇವನು || ೧೭ ||

ಇಂತಪ್ಪ ಪುತ್ರನುದಿಸಲು ಕಂಪಿಲನೆಂದು}
ಕಾಂತೆ ಪೆಸರನಿಟ್ಟಳಾಗ |
ಸಂತೋಷದಲ್ಲಿ ಬಾಳುತಲಿರೆ [ಕಂಪಿಲ]
ಕಂತುಹರನ ಕರುಣದಿಂದ || ೧೮ ||

ದಿನಕೊಂದು ಚೆಂದದಿ ಬೆಳೆದು ದೊಡ್ಡವನಾಗಿ
ಮನೆಯೊಳು ತಾನಿರುತಿಹನು |
ವಿನಯದಿ ಸೋದರತ್ತೆಯ ಮಗಳನು ತಂದು ಜನಕ
ಮದುವೆಯ ಮಾಡಿದನು || ೧೯ ||

ತಮ್ಮ ಮಕ್ಕಳು ತಾವು ಕೂಡಿ ಸಂತೋಷದಿ
ಹೊಂದಿದ ಶಬರರು ಸಹಿತ |
ಕಂದರ್ಪದಹ ಪರಮಾತ್ಮನ ಕೃಪೆಯಿಂದ
ಚೆಂದದಿ ಬಾಳುತಲಿಹರು || ೨೦ ||

ಕೆಲವು ಕಾಲವು ಹೋದ ಬಳಿಕ ಮುಮ್ಮಡಿಸಿಂಗ
ಅಳಿದು ಹೋದನು ವೃದ್ಧನಾಗಿ |
ಬಳಿಕ ಕಂಪಿಲ ತಾನು ಹತ್ತೆಂಟು ವರುಷಾಗಿ
ಬಲವಂತನಾಗಿರುತಿರ್ದ || ೨೧ ||

ತಂದೆ ಮುಮ್ಮಡಿಸಿಂಗ ಸಂದುಹೋದ ಬಳಿಕ
ಬಂದಿತು ಬರಗಾಲ ದಿವಸ |
ಕಂದನ ಹಿಡಿಯಲಾರದೆ ಮಂಚಕ್ಕನು
ಬಂದಳು ಆ ಸ್ಥಲ ಬಿಟ್ಟು || ೨೨ ||

ಮೂಡಲದೆಸೆಯಿಂದ ಪಡುವಣ ದೇಶಕ್ಕೆ
ಕಾಡರಸಿ [ತಾ]ವಾಗ ಬರಲು |
ಕೂಡ್ಯೊಂದು ನಾಲ್ಕೆಂಟು ಮನೆಯ ಕಿರಾತರು
ಕೂಡಿ ಬಂದರು ಬಂಧುಬಳಗ || ೨೩ ||

[ಜಟ್ಟಂಗಿ] ರಾಮನ ಗಿರಿಗಾಗಿ ಬಂದರು
ಕೋಟಾಳೆ ಕಂಪಳ ಸಹಿತ |
ಕೋಟೇಶ್ವರನ ಪಾದವ ಕಂಡು ಪಡೆದರು
ಕಾಟಣ್ಣನೆಂಬಂಥ ಮಗನ || ೨೪ ||

ಮನೆದೈವವಾದನು ಜಟ್ಟಂಗಿ ರಾಮೇ[ಶ]
ಮನೆ ದೊಡ್ಡದಾ[ಯ್ತು] ಕಂಪಿಲನ |
ವನದೊಳು ಹಟ್ಟಿಯ ಹಾಕಿ ಕೆಲವು ಕಾಲ
ದಿನಗಳೆದರು ಅರ್ತಿಯಿಂದ || ೨೫ ||

ನಡುಮಲೆ ಮುಚ್ಚಾದ ಗುಡ್ಡದ ಮರೆಗಾಗಿ
ಒಡನೆ ಕಂಪಳ ಎದ್ದು ಹೋಗಿ |
ಅಡವಿಯೊಳ್ ಹಟ್ಟಿಯ ಹಾಕಿಕೊಂಡೆಲ್ಲರು
ಬಡತನದೊಳು ಇರುತಿಹರು || ೨೬ ||

ಬೇಟೆಯನಾಡುತ ಬಂದರು ಮಲೆಯೊಳು
ಮೀಟಾದ ಲೋಹಾರಿ ಗಿರಿ[ಯ]
ದಾಟುತ ಕಂಡರು ತಾರಕಸಂಹಾರಿ
ಕೋಟೀಶ್ವರನ ಪಾದವನು || ೨೭ ||

ಕಂಡಡ್ಡ ಬಿದ್ದು ಕಾಣಿಕೆಯಿಕ್ಕಿ ಫಲಗಳ
ಕಾಂಡ ಗೆಣಸು ಜೇನತುಪ್ಪ |
ಲಂಡ ಕಿರಾತರು ಕಂಪಿಲ ಸಹವಾಗಿ
ಖಂಡುಗ ಹರಕೆಯನಾಂತು || ೨೮ ||

ಅಲ್ಲಿಂದ ನಡೆದರು ಹೊಸಮಲೆ ಕಣಿವೆಗ
ಳೆಗಲ್ಲ ತಾವು ನೋಡುತಲಿ |
ಬಲ್ಲಿದರಾಗಿ ಬರಲು ಬಹು ಮಲೆಯೊಳು
ಬಲ್ಲಂತೆ ಮಾತನಾಡಿದರು || ೨೯ ||

ಸುತ್ತಣ ಅಡವಿ ಅರಣ್ಯವ ನೋಡುತ
ಒತ್ತಿ ಬೇಂಟೆಯನಾಡುತವರು |
ಕತ್ತಲೆಯೊಳು ತಮ್ಮ ಕಂಪಳಕೆ ಬಂದರು
ಹೊತ್ತು ತಂದರು ಮೃಗಗಳನು || ೩೦ ||

ಈ ರೀತಿಯಲಿ ತಾವು ಹಟ್ಟಿಯ ಮಾಡಿನ್ನು
ಸೇರಿಕೊಂಡರು ಹೊ[ಸ]ಮಲೆಯ |
ಕಾರಣ ಇವರಿಂದ ಪುಟ್ಟುವದು ಮುಂದೆ
ಪೂರಾಯವಾಯಿತ್ತು ಸಂಧಿ || ೩೧ ||

ಅಂತು ಸಂಧಿ ಕ್ಕಂ ಪದನು ೩೧ ಕ್ಕಂ ಮಂಗಳ ಮಹಾಶ್ರೀ