ಶ್ರೀಗಿರಿಜಾ[ಸ್ಯಾಂಬುಜ ದಿನ] ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ತಂದೆ ಕುದುರೆಗಳ ರಾಮಯ್ಯಗೆ ತೋರದೆ
ಅಂದೆ ಕುಮಾರರಿಗಿತ್ತ |
ಯೆಂದು ಬಗೆ[ದು ಇಂ]ತು ಕಂದ ರಾಮಯ್ಯ |
ಮುಂದೆ ವೈಹಾಳಿ ಬಯಲಲ್ಲಿ || ೨ ||

ಬಂದನು ಇದಿರಲಿ ರಾಮನಾಥನು ಆಗ
ಕುಂದದೈವರು ಕುಮಾರಕರ |
ಕೊಂದು ಗೋಳಾಡಿಸಿ ತುರಂಗಗಳ ತಂದು
ಅಂದು ಕಟ್ಟಿದ ಲಾಯದೊಳಗೆ || ೩ ||

ತುರಗವೈದನು ಕೊಂಡು ಹೋದ[ನೆ]ನುತ ಬಂದು
ವರದ ಐವರು ಕುಮಾರಕರು |
ಪುರಜನವರಿಯೆ ಒಯ್ದನು ತುರುಗವನೆಂದು
ನೆರೆದು ಹೇಳಿದರು ಕಂಪಿಲ[ಗೆ] || ೪ ||

ಹೇಳಿದ ಸುದ್ದಿಯ ಕೇಳಿ ಕಂಪಿಲರಾಯ
ತಾಳಿದ ಮನದಿ ಕೋಪವನು |
ಊಳಿಗದವರ ಕೈಲಿ ಹೇಳಿ ಕಳುಹಿಸಿ ತನ್ನ
ಬಾಲರಾಮಯ್ಯನ ಕರೆ [ಸೆ] || ೫ ||

ಏನು ಕಾರಣ ನಮ್ಮ ಕರೆಸಿದೆ ಕಂಪಿಲ
ಏನು ಊಳಿಗವು ಹೇಳೆನಲು |
ಏನ ಹೇಳಲಿ ರಾಮ ಕುವರರೈವರ ಕೊಂದು
ನೀನು ಒಯ್ದೆಂತೆ ತೇಜಿಯವನು || ೬ ||

ಚಿಕ್ಕವರನು ಕೊಂದು ಕುದುರೆಯನೊಯಿವರೆ
ತಕ್ಕುದೆ ನಿನಗೆ ಈ ಬುದ್ದಿ |
ಮಿಕ್ಕ ಮಾತೇನು ಮಕ್ಕಳ ಕೈಯಿನೊಯಿದಂಥೆ
ಅಕ್ಕರಿಂದಲಿ [ತಾ] ಬೊಲ್ಲನನು || ೭ ||

ಎಪ್ಪತ್ತಿರಾಜನ ಬೊಲ್ಲನ [ತಾಯೆಂ]ದು
ಒಪ್ಪದಿ ಕಂಪಿಲ ನುಡಿಯೆ |
ಅಪ್ಪಾಜಿ ನೀನಾಡಿದರೇನಾಯಿತು
ತಪ್ಪದ ತಹೆನು ಬೊಲ್ಲನನು || ೮ ||

ಭೇರಿ ಮೃದಂಗ ಕೈತಾಳ ತಾಳೆಯ ಕೊಂಬು
ವೀರಜಡೆಯು ಢಮಾಮಿ |
ಭೂರಿ ವಾದ್ಯಗಳ ಗಡಣದಿ ರಾಮಯ್ಯನು
ಧೀರ ನಡೆದನರ್ತಿಯಿಂದ || ೯ ||

ರಾಮಯ್ಯ ಬರುವ ಸಂಭ್ರಮ ಕಂಡು ಹರಿಯಮ್ಮ
ಪ್ರೇಮದಿಂದಪ್ಪಿ ಮುಂಡಾರಿ |
ಕೋಮಲೆಯರು ಆರತಿಯನೆತ್ತಿದರು ನಿ
ಸ್ಸೀಮನು ರಾಮನಾಥನಿಗೆ || ೧೦ ||

ಮುಂದೆ ಪೇಳುವೆನು [ಓರುಗಲ್ಲ] ಪ್ರತಾಪನ
ಕಂದ ಎಪ್ಪತ್ತಿರಾಜನನು |
ಚೆಂದದಿ ಬೊಲ್ಲನ ತರುವಂಥ ಸುದ್ಧಿಗೆ
ಇಂದೊದಗಿದವು ಪ್ರಯಾಣಗಳು || ೧೧ ||

ಓರುಗಲ್ಲಿಗೆ ಪ್ರಯಾಣ ಸಾರಿ ರಾಮಯ್ಯನು
ಸಾರಿಸಿ ಮಾನ್ಯರಿಗೆಲ್ಲ |
ಧೀರರ ಬೇಗ ಬರಹೇಳೆಂದು ಚರರನು
ಭೊರನಟ್ಟಿದನು ಕರೆಯಲ್ಕೆ || ೧೨ ||

ಎಕ್ಕಟಿಗೆ ಸಿಂಗನು ಮೀನಿಗರ ಲಕ್ಕನು
ಚಿಕ್ಕ ತಮ್ಮುಗ ಗುಜ್ಜಲೋಬ |
ರಕ್ಕಸ ಮಾದನು ಕರುವೂರ ತಿಪ್ಪನು
ಬೊಕ್ಕ ಬೋಳುಗ ಓಬುಗನು || ೨೩ ||

ಕರೆಯಲಾ ಅರಸು ರಾಮನಾಥನ ಮಾನ್ಯರು
ನೆರೆದರು ದೊರೆಯ ಇದಿರಿನಲಿ |
ತರಹೇ[ಳಿ] ನೀಲನ್ನ ಬರಹೇಳೆಕ್ಕಟಿಗರ
ದೊರೆಯು ಹೇಳಿದ [ಮ]ರುಮಾತ || ೧೪ ||

ಎಪ್ಪತ್ತು [ಎರಡು] ಮನ್ನೆಯರು ಸಹವಾಗಿ
ಒಪ್ಪದಿಂದೂರ ಹೊರಗಣ |
ಮುಪ್ಪುರವೈರಿಯ ಗುಡಿಯ ಮುಂದಿಳಿದರು
ಒಪ್ಪುವ ರಾಮಯ್ಯ ಸಹಿತ || ೧೫ ||

ಕುಮ್ಮಟದಿಂದ ಹೊರಟುಬಂದರು ಬೇಗ
ಗಮ್ಮನೆ ಕಂಪಲಿಯ ಬಳಿಗೆ |
ಉಮ್ಮಯದಿಂದ ಸೋಮೇಶಗೆ ಶರಣೆಂದು
ಎಮ್ಮಿಗನೂರು ದಾಂಟಿದರು || ೧೬ ||

ಬರುತ ಕಂಡರು ಹೊ[ಸ] ಮಲೆಯ ದುರ್ಗವ
ಉರುತರ ದೊಡ್ಡ ಬಸವನ |
ಪುರ ಕುರುಗೋಡ ಪಯಣತಿಯೊಳು ರಾಮಯ್ಯ
ಭರದಿಂದ ತನ್ನ ಮನ್ನೆಯರ || ೧೭ ||

ಕರೆದು ವೀಳ್ಯವನಿತ್ತು ಹರುಷದಿ ರಾಮಯ್ಯ
ನೆರೆಗಲಿಗಳನು ಸಂತೈಸಿ |
ಪರಿವಾರವನೆಲ್ಲ ಇರದೆ ಬೋಳೈಸುತ
ಕರೆದು ವೀಳ್ಯಗಳ ತಾ ಕೊಡಿಸಿ || ೧೮ ||

ಧರೆಯು ಭೋರೆಂಬಂತೆ ದಾರಿ ಪ್ರಯಾಣವ
ಸಾರಿ ತೆರಳಿದನು ಆ ಕ್ಷಣಕೆ |
ಗುರುವೆ ಜಟ್ಟಂಗಿ ರಾಮೇಶನೆ ಗತಿಯೆಂದು
ಗರುವ ರಾಮಯ್ಯ ವಂದಿಸಿದ || ೧೯ ||

ಕುರುಗೊಡನುಳಿದು ಮುಂದಕೆ ದಾಂಟಿ ನಡೆದರು
ಕರ[ಡಿ]ಕಲ್ಲೂರ ಮುಂದಿಳಿದು |
ಹರಿವ ನದಿಯ ದಾಂಟಿ ಬಂದನು ರಾಮಯ್ಯ ನಿ
ಬ್ಬರದಲಿ ತಾನು ನಡೆದನು || ೨೦ ||

ತೆರಳಿ ಬಂದನು ರಾಮ ಯಾದವಗಿರಿಗಾಗಿ
ಮರಳಿ ಪಾಳ್ಯವ ತಾನಿಳಿದು |
ಇರದೆ ಮಜ್ಜನಮಾಡಿ ಉಂಡು ರಾಮಯ್ಯನು
ಹರುಷದಿ ಸುಖನಿದ್ರೆಗೈದ || ೨೧ ||

ನಿದ್ರೆಗೈದೆದ್ದು ರಾಮಯ್ಯ ಜಟ್ಟಂಗಿಯ
ರುದ್ರನ ನೆನೆದು ಮನದೊಳಗೆ |
ಕ್ಷುದ್ರರಾಯರ ಗಂಡ ತೆರಳಿ ಮುಂದಕೆ [ಬ]ರೆ
ಭದ್ರವನೇನ ಪೇಳುವೆನು || ೨೨ ||

ಅದವನ್ನಿಯ ದಾಂಟಿ ಅತ್ತ ಮುಂದಕೆ ನಡೆದ
ಮೇದಿನಿ ಅರಸರನೆಲ್ಲ |
ಸಾಧಿಸೇನೆಂಬ ಬಿರುದಿನ ಕಡೆಯವನಿಟ್ಟು
ಮೂದಲಿಸುತ ತಾ ನಡೆದ || ೨೩ ||

ಅಲ್ಲಿಂದ ಮುಂದಕ್ಕೆ ನಡೆದು ಬಂದನು ಬೇಗ
ರೊಳ್ಳೆಯ ಗೊನಗೊಂದಿಗಾಗ |
ಚೆಲ್ಲವರಿದು ನಡೆದರೆಲ್ಲರೊಂದಾಗಿ
ಕಲ್ಲೂರ ಮುಂದೆ ಇಳಿದರು || ೨೪ ||

ಮಜ್ಜನ ಭೋಜನಂಗಳ ಮಾಡಿ ರಾಮಯ್ಯ
ಗುಜ್ಜರಿ ಮಂಚದ ಮೇಲೆ |
ಸಜ್ಜನ ಜನದಿಂದ ನಿದ್ರಾಂಗನೆಯೊಳು
ಬೆಜ್ಜಾರಕೆಚ್ಚರಿಕೆಯಲಿ || ೨೫ ||

ಎದ್ದನು ಮುಂದಕ್ಕೆ ತುಂಗಭದ್ರೆಯ ದಾಂಟಿ
ಉದ್ಯಾವಾರಣ್ಯಕ್ಕೆ ಬಂದ |
ಸಿದ್ಧವಟ್ಟವ ದಾಂಟಿ ಬಂದಿಳಿದನು ಬೇಗ
ಉದ್ದಗಿರಿಯ ದುರ್ಗದಲಿ || ೨೬ ||

ಇಳಿದರು ಇನಿಗೊಂಡೆದ ಪಾಳ್ಯದ ಮುಂದೆ
ಗಳಿಲನೆ ಜಾಗುಜಾತೆನುತ |
ಭಳಿರೆ ಎನ್ನುತ ರಾಮ ಶರಣಪುರದ ಕೈಯ್ಯ
ಇಳಿದನು ಇಂದ್ರಕೀಲದಲಿ || ೨೭ ||

ಇಂದ್ರಕೀಲವ ದಾಂಟಿ ಮುಂದೆಕ್ಕೆ ನಡೆದನು
ಆಂದ್ರಪ್ರದೇಶ ಗಡಿಗಾಗಿ |
ಬಂದನು ಗಡಿಯ ದಾಂಟುತ ಲಾಳದೇಶಕ್ಕೆ
ಮುಂದುವರಿದು ರಾಮನಾಥ || ೨೮ ||

ಈ ಪರಿಯಲಿ ರಾಮನಾಥನು ಬರಲತ್ತ
ಭೂಪನೋರ್ಗಲ್ಲ ಅರಸಿನ |
ಚಾಪನ ಕುವರ ತಾನೆಪ್ಪತ್ತಿರಾಜನು ಲಕ್ಷ
ಹೊಂಗಳ ಕಟ್ಟಿಕೊಂಡು || ೨೯ ||

ಭೂಪತಿ ಮುಂಗುಲಿರಾಯನಲ್ಲಿಗೆ ಹೋಗಿ
ಮಾಪಾ ವಾಜಿಗಳು ಲಕ್ಷಗ[ಳ] |
ನಾ ಪರೀಕ್ಷಿಸಿ ತಾಹೆನೆನುತ ಎಪ್ಪತಿರಾಜ
ಕೂಪ ವಾರುವಗಳ ನೋಡೆ || ೩೦ ||

ಲಕ್ಷ ಕುದುರೆ ಲಾಯಗ[ಟ್ಟೆ] ಮುಂಗುಲಿರಾಯ
ದಿಕ್ಕನೆ ಈ ಬೊಲ್ಲನಿರುವ |
ಲೆಕ್ಕವಿಲ್ಲ[ದ] ತೇಜಿಯ ನೋಡಿ ಮನವನು
ಇಕ್ಕಿದ ಬೊಲ್ಲನ ಮೇಲೆ || ೩೧ ||

ಕೇಳಿದ ಎಪ್ಪತ್ತಿರಾಜ[ನು] ಬೊಲ್ಲನ
ಹೇಳೆಂದು ಮುಂದುಲಿಯೊಡನೆ |
ಪೇಳುವೆನಿದರ ವೃತ್ತಾಂತವ ನೀ ಕೇಳು
ಮೇಳವಿಸಿದ ಮನಸಿನಲಿ || ೩೨ ||

ಒಳ್ಳೆಯ ಶುಭಲಗ್ನದಲ್ಲಿ ಜನಿಸಿತು ಬೊಲ್ಲ
ಹೊಲ್ಲೆಯ ದಿನ ಶುದ್ಧ ಹಗಲೆ |
ಬಲ್ಲಿದ ಎಪ್ಪತ್ತಿರಾಜ ಲಕ್ಷವ ಕೊಟ್ಟು
ನಿಲ್ಲದೆ ತಂದೆ ಬೊಲ್ಲನನು || ೩೩ ||

ಬೊಲ್ಲನ ಏರಿದ ಎಪ್ಪತ್ತಿರಾಜ ಭೂ
ವಲ್ಲಭ ಪ್ರತಾಪ ದೊರೆಗೆ |
ಉಲ್ಲಾಸಮಂ ತೋರಿ ನೆಲಮಾಳಿಗೆಯೊಳಿಟ್ಟು
ಮೇಲೆ ಉಕ್ಕಿನ ಕಡಲೆಯನು || ೩೪ ||

ಇಂದ್ರಕೀಲವ ದಾಂಟಿ ಬಂದನು ರಾಮಯ್ಯ
ನಿಂದನು ರಹುದ್ರೇಕಪುರದಿ |
ಕಂದರ ಮಾಳ ಕರಾಳದೇಶವ ದಾಂಟಿ
ಬಂದಿಳಿದನು ಮಾದ್ರಿರಿಗೆ || ೩೫ ||

ಐವತ್ತು ಆರು ದೇಶವ ದಾಂಟಿ ರಾಮಯ್ಯ
ಒಯ್ಯನೆ ನಡೆದನರ್ತಿಯಲಿ |
ಒಯ್ಯನಿಳಿದು ರುದ್ರನಗಿರಿಯನು ದಾಂಟಿ
ಮೈಲಾರಪುರವ ದಾಂಟಿದನು || ೩೬ ||

ಎದ್ದನು ಅಲ್ಲಿಂದ ಧರ್ಮಾವತಿಯೆಂಬೂರ
ಹೊದ್ದಿ ಸಾರಿದನು ರಾಮಯ್ಯ |
ನಿರ್ಧಾರದಲಿ ಬಂದು ನಲ್ಲೂರಪುರವನು
ಉದ್ದುರಪುರ ಹೊಕ್ಕರೊಡನೆ || ೩೭ ||

ಶರಣರ ಮಠವನು ಸೇರಿದ ರಾಮಯ್ಯ
ಉರತರ ಹರಕೆಯನಾಂತು |
ಪುರದೋರುಗಲ್ಲ ಪ್ರತಾಪರುದ್ರನ ತೇಜಿ
ಭರದಿಂದಲೆನ್ನ ಸೇರಿದರೆ || ೩೮ ||

ದೊರೆ ರಾಮನಾಥನು ಗುಂಡಬ್ರಹ್ಮಯ್ಯಗೆ
ಉರುತರವಾದ ಶೂಲವನು |
ಸರಿಮಿಗಿಲಪ್ರತಿ ಹರುಷದಿ ಪೂಜೆಯ
ಧರೆಯೊಳಪ್ರತಿ ಮಾಡಿಸುವೆನು || ೩೯ ||

ಕಳುಹಲವರ ಕೈಯ್ಯ ಕಳುಹಿಸಿಕೊಂಡನು
[ತ]ಳುಹದೆ ರಾಮಯ್ಯ ಹೊರಟ |
ಘಳಿಲನೆ ಬೇಟೆವಿಡಿದು ಬಾಹನಿದಿರಿಗೆ
ಸುಳಿದನು ದೇವಿಶೆಟ್ಟಿಯ ಲಿಂಗ || ೪೦ ||

ದಾರಿಯೊಳಿದಿರು ತಾನಾಗಿ ಮಾತಾಡುತ
ಆರು ನೀನೆಂದ ಲಿಂಗಣ್ಣ |
ಧಾರುಣಿಯೊಳು ಹೊಸಮಲೆಯ ಕಂಪಿಲನ
ಕುಮಾರ ಚೆನ್ನಿಗ ರಾಮನೆನಲು || ೪೧ ||

ಏನು ಕಾರಣ ಬಂದೆ ಚೆನ್ನಿಗ ರಾಮಯ್ಯ
ಭಾನುಸಖನ ಮುಖದವನೆ |
ನಾನು ಕಂಪಿಲನೊಳು ಮುನಿದು ಬಂದೆನು ಎಂದು
ಮೌನದಿಂದವನೊಳು ನುಡಿದ || ೪೨ ||

ನೀನಾರು ನಿನ್ನ ಹೆಸರೇನು ನೀನಾವೂರು
ಊನ್ಯವಿಲ್ಲದೆ ಹೇಳೆನಗೆ |
ನಾನೋರುಗಲ್ಲ ಪಟ್ಟಣಸೆಟ್ಟಿ ಲಿಂಗಣ್ಣ
ಮಾನವಪತಿ ರಾಮ ಕೇಳು || ೪೩ ||

ತಂದೆ ಕಂಪಿಲನೊಳು ಪಂಥವನಾಡಿ ಬಂದೆನು
ಇಂದು ಬೊಲ್ಲನ ತಾಹೆನೆನುತ |
ಸಂದೇಹವ್ಯಾತಕೆ ರಾಮಯ್ಯ ನಾ ನಿನ್ನೊಳ
ಗೆಂದನು ದೇವಿಸೆಟ್ಟಿ ಲಿಂಗ || ೪೫ ||

ಬಂದು ರಾಮ ಓರ್ಗಲ್ಲದುರ್ಗದ ಮುಂದೆ
ನಿಂದಿರಿಸಿದ ನದಿಯ ತಡಿಯ |
ತಂದೆ ಕಂಪಿಲನೊಳು ಮುನಿದು ರಾಮಯ್ಯನು
ಬಂದನು ನಿಮ್ಮನೋಲೈಸಿ || ೪೬ ||

ಹಾಗೆಂದು ಪೇಳೆ ಪ್ರತಾಪರುದ್ರನು ಕೇಳಿ
ಬೇಗದಲವನ ಕರೆಸೆನಲು |
ಹಾಗೆಂದ ಮಾತನು ಕೇಳುತಲಿರ್ದಂತೆ
ಹೇಳಿದ ರಾಮಯ್ಯನೊಡನೆ || ೪೭ ||

ಹಸ್ತಿನಿ ಚಿತ್ತಿನಿ ಪದ್ಮಿನಿ ಶಂಕಿನಿ
ಮೊತ್ತದ ಸತಿಯರೊಗ್ಗಿನಲಿ |
ಮತ್ತು ಮಾಣಿಕ ದಿವ್ಯಾಭರಣ ಹೊನ್ನೋಲೆಯು
ಒತ್ತಿಲಿ ಎಸೆವ ಪೆಂಡೆಯವು || ೪೮ ||

ನೋಡಿ ರಾಮನ ರೂಪ ಹೆರೆ ಹಿಂಗಲಾರದೆ
ಕೂಡುವ ಪರಿಯು ಹ್ಯಾಗೆನುತ |
ಗೋಡೆಯ ಚಿತ್ರದ ಪರಿಯಂತೆ ನಿಂದರು
ಗಾಡಿಕಾತಿಯರು ಸಂಚಲದಿ || ೪೯ ||

ಎತ್ತಿ ಮಕ್ಕಳ ಕೆಳೆಯಾಕೆ ಬಿಟ್ಟರು
ಹತ್ತಿದ ವಿರಹ ತಾಪದಲಿ |
ನೆತ್ತಿಯ ಕೊಡಗಳು ಬಿಟ್ಟು ಕೈಮರೆದರು
ಚಿತ್ತದಿ ಭ್ರಮಿಸಿ ನಾರಿಯರು || ೫೦ ||

ಕಾಮನ ಕೆಳಗೆ ವೆಗ್ಗಳ ಪುಟ್ಟಿದನಿವ
ಭೂಮಿಯ ಚೆಲುವರ ಗಂಡ |
ಸಾಮಜಗಮನೆ ಪೆತ್ತವಳಾರೊ ಎನುತಲಿ
ಕೋಮಲೆಯರು ಕೊಂಡಾಡಿದರು || ೫೧ ||

ಮತ್ತೊಬ್ಬ ಸತಿಯು ರಾಮನ ಕಂಡು ಭ್ರಮಿಸಿಯೆ
ಚಿತ್ರದ ಬೊಂಬೆಯಂದದಲಿ |
ಚಿತ್ತವ ಕೈಸೆರೆವಿಡಿದನವನ ಕಂಡು ಮೂರ್ಚೆಯಾದಳು ತಾಪದಲಿ || ೫೨ ||

ಪಡೆದ ತಾಯಿಗಳು ಮಕ್ಕಳ ನೋಡುವಂದದಿ
[ಒ]ಡಹುಟ್ಟಿದವರು ತಮ್ಮಂದಿರನು |
ಕಡುಗಲಿ ರಾಮನ ಕಂಡು ಭ್ರಮಿಸಿಯೆ ಆಗ
ದೃಢವುಳ್ಳ ಪತಿವ್ರತೆ ಹೆಣ್ಣು || ೫೩ ||

ನೋಡಿ ಕಂಡನು ರಾಮ ವಿರಹದ ಹೆಣ್ಣು
ಆಡಿದ ತನ್ನೊಳು ತಾನು |
ರೂಢಿಗೀಶ್ವರ ಬಲ್ಲ ಹರಿಯಮ್ಮನಿವರೆಂದು
ಕೊಡೆ ಕಹಳೆಗಳ ಹಿಡಿಸಿದನು || ೫೪ ||

ಪರಿನಾರಿಯರ ಸೋದರನು ಚೆನ್ನಿಗರಾಮ
ಪರದಳ ರಣಭಯಂಕರ |
ಪರರಾಯದಲ್ಲಣನೆಂದು ನುಡಿಯ ಕೇಳಿ
ಬಿಡದೆತ್ತಿ ಹಲವು ಪರಿಯಲ್ಲಿ || ೫೫ ||

ಒಂದೊಂದು ಪರಿ ಚಂದ್ರಸಾಲೆ ಉಪ್ಪರಿಗೆಯ
ಚಂದವ ಲಿಂಗ ತೋರುವಲಿ |
ಮಂದಿ ಕುದುರೆ ಸಂದೋಹ ಸಂಭ್ರಮದಲ್ಲಿ
ಕಂದರ್ಪರೂಪ ನೋಡುತಲಿ || ೫೬ ||

ಇತ್ತರದಂಗಡಿಯುಪ್ಪರಿಗೆ ಸಾಲುಗಳಿಂದ
ಮೊತ್ತದ ಶೃಂಗಾರಗಳನು |
ಚಿತ್ರದ ಮಗಿಲು ಮಂದಿರಗಳ ನೋಡುವ
ಮತ್ತೆ ಬಂದರು ಅರಮನೆಗೆ || ೫೭ ||

ಹುಳಿಯೇರ ಬಾಗಿಲ ಹೊಕ್ಕನು ರಾಮಯ್ಯ
ಒಳೆಯಾಕ ನಡೆದನಾದಕ್ಷಣದಿ |
ಇಳಿದನು ಕುದುರೆಯ ಕನ್ನಡಿ ಮೋರೆಯ
ತಳುಹದೆ ನಡೆದನೋಲಗಕೆ || ೫೮ ||

ಧುರಗಲಿ ವೀರ ಪ್ರತಾಪರುದ್ರನೋಲಗ
ದಿರುವನು ಏನು ಬಣ್ಣಿಸುವೆ |
ಬಿರಿದುಳ್ಳ ಮನ್ನೆಯ ಮಕುಟವರ್ಧನರನು
ಅರಸು ರಾಮಯ್ಯ ನೋಡಿ ಕಂಡ || ೫೯ ||

ಎಡವಂಕ ಬಲವಂಕ ರಾಯರ ವಾಲಗ
ಕಡುಗಲಿ ರಾಜಕುವರರು |
ಧೃಡವುಳ್ಳ ಮಂತ್ರೀಶ ರಾಯ ರಾಹುತರೆಲ್ಲ
ಪೊಡವಿಪಾಲಕನೋಲಗದಿ || ೬೦ ||

ಮುತ್ತಿನ ಗದ್ದುಗೆಯಲಿ ರುದ್ರರಾಯನು
ಚಿತ್ತಜ ಕಳೆವೊಪ್ಪುತಿರಲು |
ಇಂತಪ್ಪ ವಾಲಗದೊಳಗೆ ಚೆನ್ನಿಗರಾಮ
ಅರ್ತಿಯಿಂದಲಿ ನಡೆತಂದ || ೬೧ ||

ತಾರಕಿಯೆಡೆಗೆ ಚಂದ್ರಮನು ಬಂದ ತೆರನಂತೆ
ತೆರನಂತೆ ಹಾರದೆಡೆಗೆ ಜೀವರತ್ನ |
ಓರುಗಲ್ಲರಸು ರುದ್ರರಾಯನೋಲಗದೊಳು
ಮಾರಸನ್ನಿಭ ರಾಮನೆಸೆದ || ೬೨ ||

ಕಟ್ಟಳಿಲ್ಲದ ಮನ್ನೆಯ ಮಂಡಳಿಕರು
ದಿಟ್ಟ ರಾಮನ ರೂಪ ನೋಡಿ |
ನೆಟ್ಟನೆ ಬೇರಗಾಗಿ ತಮತಮಗೆಲ್ಲರು
ಬೊಟ್ಟನೊಲಿದು ಕೊಂಡಾಡಿದರು || ೬೩ ||

ವಂದನೆಮಾಡಿ ರಾಮನು ರುದ್ರರಾಯಗೆ
ತಂದು ಕಾಣಿಕೆಯನಿಕ್ಕಿದನು |
ಚಂದ್ರನ ಕಳೆಯ ಕುಮಾರ ಕುಳ್ಳಿರು ಎಂದು
ಅಂದುರ ಆಯನು ಸಂತೋಷದಲಿ || ೬೪ ||

ನೋಡಿದ ರಾಯನ ಮಂದಿ ಕುದುರೆಯನು
ಮಾಡಿದ ಮನವ ಸಂತಸವ |
ಕೂಡಿದರೆಪ್ಪತ್ತಿರಾಜನ ರಾಮನಿಗೆ
ಬೇಡಿದ ಸೀಮೆಯ ಕೊಡುವೆ || ೬೫ ||

ಬುದ್ಧಿನಿತಿಲ್ಲವೊ ಕಂಪಿಲರಾಯಗೆ
ಮುದ್ರು ಮುಖದ ರಾಮನನು |
ಎದ್ದು ಮುನಿಸುಗುಟ್ಟಿ ಬರಲಿಬಹುದೆ ಎಂದು
ರುದ್ರ ಮಂತ್ರಿಯೊಳು ಪೇಳಿದನು || ೬೬ ||

ಇತ್ತನು ಕಂಠಮಾಲೆಯ ಉಡುಗೊರೆಯನು
ಅರ್ತಿಯಿಂದಲಿ ರಾಮನಿಗೆ |
ಉತ್ತುಮ ಪಡಿಬಿಡಾರವ ಕೊಡುವೆನುಯೆಂದು
ಮತ್ತೆ ಲಿಂಗಗೆ ಹೇಳಿದನು || ೬೭ ||

ಕಳುಹಿಸಿಕೊಂಡು ರಾಮಯ್ಯನಾಕ್ಷಣದಲ್ಲಿ
ಇಳಿದ ರುದ್ರನ ಚಾವಡಿಯ |
ನಳಿನನಾಭನೆ ಗತಿಯೆನುತಲಿ ರಾಮಯ್ಯ
ಕಳವಳಿಸುತ ನಡೆತಂದ || ೬೮ ||

ಆ ಸಮಯದಿ ಭಟ್ಟರು ಕೊಂಡಾಡಿದರು
ಸಾಸಿರ ಕಳೆಯ ರಾಮುಗನ |
ದೇಶದೊಳಗೆ ರಾಯರಗಂಢ ರಾಮನು
ಆಸೆಗೊಳ್ಳನು ಪರಸತಿಗೆ || ೬೯ ||

ಮಂಡಲದೊಳು ಜಟ್ಟಂಗಿರಾಮೇಶನ
ಪಿಂಡದ ನಿಜಸುತ ನಡೆದ |
ಹಿಂಡ ವೈರಿಯಗಂಡ ಸಿಂಹ ರಾಮಯ್ಯನು
ಕೊಂಡಾಡೆ ಮುಂದೆ ಪಾಠಕರು || ೭೦ ||

ಮುಂದಕ್ಕೆ ರಾಮನು ಅಡಿಯಿಟ್ಟು ನಡೆವಾಗ
ಮುಂದೆ ಬಿರಿದುಗಳ ಸಾರುತಲಿ ||
ಸಂದೆಹವಿಲ್ಲದೆ ಜೀವದಾಸೆ ಮಾಡುವ
[ಹಂ] ದೆ ರಾಯರಗಂಡ ರಾಮ || ೭೧ ||

ಮುಗಿಲ ಕೆಳಗೆ ಬಹು ತೋಳ ಬೀಸಿ ನಡೆವಂಥ
ಅಗಣಿತ ರಾಯರಗಂಡ |
ಜಗದಪ್ಪ ಮೊದಲಾದ ರಾಯರಗಂಡನೆಂದು
ಅಗಣಿತ ಕಹಳೆ ಸಾರಿದವು || ೭೨ ||

ಆಸೆಯ ಮಾಡಿ ದೇಶವನಾಳಬೇಕೆಂಬ
ಭಾಷೆ ಹೀನರಗಂಡ ರಾಮ |
ಕೂಸ ಹಾಸಿಗೆಯೊಳು ಮಲಗಿಸುವರ ಗಂಡ
ರಾಸಿ ಮಾಂಡಲಿಕರ ಗಂಡ || ೭೩ ||

ಕಳ್ಳತನದಿಂದ ಬಿರಿದ ಹೊಗಳಿಸಿಕೊಂಬ
ಅಳ್ಳೆದೆ ರಾಯರಗಂಡ |
ಡಿಳ್ಳಿಯ ಗಂಡ ಡಿಳ್ಳಿ ಸುರಿತಾಳನ ಮಿಂಡ
ಬಲ್ಲಿದ ನೇಮಿಯ ಗಂಡ || ೭೪ ||

ಎತ್ತಣ ಗಾಳಿ ಬೀಸಿದರತ್ತ ಮಲೆತಿಹ
ಮೊತ್ತದ ರಾಯರ ಗಂಡ |
ಸತ್ತಿಗೆ ನೆರಳಲ್ಲಿ ಬಹ ಮಾಂಡಲಿಕರ
ನೆತ್ತಿಯ ಶೂಲ ರಾಮಯ್ಯ || ೭೫ ||

ಕೊಟ್ಟ ಹಣವ ಗಂಡ ಕಟ್ಟಿಕೊಂಬರ ಗಂಡ
ಇಷ್ಟಲಿಂಗವು ಜಟ್ಟಿಂಗೇಶ || ೭೬ ||

ಮಣಿವ ರಾಯರಗಂಡ ಮಲೆವ ರಾಯರಗಂಡ
ರಣದಿ ಮಚ್ಚರಿಪರಗಂಡ |
ಢಣಢಣಿಸುವ ಗಂಟೆಗಳುಲಿಯಲು ಆಕ್ಷಣ
ಕಣಕಾಲಿನಲಿ ರಾಮಯಗೆ || ೭೭ ||

ನರಪತಿ [ಗಜ]ಪತಿ ಅಶ್ವಪತಿಗಳೆಂಬ
ಅರಸುಗಳಿಗೆ ಗಂಡನೆಂಬ |
ಬಿರಿದ ಪೊಗಳಲು ಭಟರು ರಾಮನಾಥನ
ಭರದಿ ಕೇಳಿದ ರುದ್ರರಾಯ || ೭೮ ||

ಬಿರಿದ ಕೇಳುತ ರುದ್ರ ಉರಿದೆದ್ದು ಕೋಪದಿ
ತರಹರಿಸದೆ ಮನದೊಳಗೆ |
ಹರುಷವಡಗಿ ಕಾಲರುದ್ರನಂತವನಾಗ
ಇರದೆ ಕೋಪವನು ತಾಳಿದನು || ೭೯ ||

ಕಡೆಗಣ್ಣು ಕಿಡಿಸೊಸೆ ಕುಡಿಮೀಸೆ ಕುಣಿದಾಡೆ
ಬಿಡದೆ ಗಂಟಿಕ್ಕಿ ಪುರ್ಬುಗಳು |
ಒಡನೆ ನುಡಿದನು ಮಂತ್ರಿಯ ಕೂಡೆ ರೋಷದಿ
ಕಡು ಬೇಗದೊಳು ಇಂತೆಂದ || ೮೦ ||

ಕಟ್ಟಾಣೆಲ್ಲದ ಬಿರಿದನು ರಾಮಯ್ಯ[ನ]
ಭಟ್ಟರು ಕೊಂಡಾಡಿದರು |
ಸೃಷ್ಟಿಪಾಲಕ ರಾಯ ಕೇಳಿ ಕೋಪವ ತಾಳಿ
ಮುಟ್ಟಿ ಮಂತ್ರಿಯೊಳಿಂತೆಂದ || ೮೧ ||

ನಮ್ಮ ಬಳಿಗೆ ರಾಮನೋಲೈಸಲು ಬಂದು
ಹಮ್ಮಿನ ಬಿರಿದನಿಕ್ಕಿದನೆ |
ಗಮ್ಮನೆ ಮಂಡಲಿಕರು ಗಜಬಜಿಸುತ್ತ
ಇಮ್ಮಡಿ ತಿಟ್ಟವಿಕ್ಕಿದರು || ೮೨ ||

ನಿಮ್ಮ ಸಮಾನದಿ ಕುಳಿತನಾದರೆ ಜಾತಿ
ಧರ್ಮವ ಬಿಡುವನೆ ಅವನು |
ನಿಮ್ಮ ಪಾದವನು ಕಾಣಿಸಿದಂದವು
ನಮ್ಮೆಲ್ಲರ ಗಂಡನೆಂದೆಂಬ || ೮೩ ||

ಘುಡಿಘುಡಿಸುತ ರುದ್ರಾರಾಯ ಕೋಪವ ತಾಳಿ
ಹಿಡಿತನ್ನಿ ಲಿಂಗನ ಬೇಗ |
ಒಡನೆ ಕಳುಹೆ ಕಂಚುಕಿಯರು ಬೇಗದಿ
ನಡೆದು ಬಂದರು ಲಿಂಗನೆಡೆಗೆ || ೮೪ ||

ಪರಿಪರಿ ಬಿಡಾರ ರಾಮಗೆ ಲಿಂಗಣ್ಣ
ಅರಿದೆನಿಸುತ ಮಾಡುತಿರಲು |
ಕರ ಬೇಗ ರಾಯ ನಿನ್ನನ್ನು ಬರಹೇಳಿದ
ಧುರಧೀರ ಲಿಂಗ ಬಾರೆನಲು || ೮೪ ||

ನಡೆದು ಬಂದನು ಲಿಂಗರಾಹುತ ವಹಿಲದಿ
ಒಡೆಯ ರುದ್ರನ ಕಂಡು ನಮಿಸೆ |
ಕಿಡಿಗೆದರುತ ರಾಯ ಕೋಪದಿ ಉರಿದೆದ್ದು
ಜಡಿದು ಗರ್ಜಿಸಿದ ಲಿಂಗನನು || ೮೬ ||

ಕೊಟ್ಟದ ಬೇಡನ ಕರೆತಂದೆ ಇಲ್ಲಿಗೆ
ಮುಟ್ಟಿ ಬಿರಿದನು ಹೊಗಳಿಸಿದೆ |
ಸೃಷ್ಟಿಯ ರಾಯರಗಂಡನು ತಾನಂತೆ
ಇಷ್ಟುವುಳ್ಳವ ಬರಬಹುದೆ || ೮೭ ||

ಬಂದನ್ಯಾತಕೆ ರಾಮನೋಲೈಸಲಿಲ್ಲಿಗೆ
ಗೊಂದಣ ಬಿರುದುಳ್ಳ ಬಂಟ |
ಹಿಂದಣ ಪಂಥವನೆಲ್ಲ ಬಿಟ್ಟಿರ ಹೇಳೊ ಇಲ್ಲ
ದಿರ್ದಡೆ ಹೋಗ ಹೇಳೊ || ೮೮ ||

ಬಲ್ಲಿದಗಲ್ಲದೆ ಬಿರಿದು ದೇವರೆ ಕೇಳು
ತಲ್ಲಣಿಸುವ ಹೇಡಿಗುಂಟೆ |
ನಿಲ್ಲದೆ ಗುತ್ತಿಯ ಜಗದಪ್ಪ ಮೊದಲಾದ
ಎಲ್ಲ ಮಾನ್ಯರ ಗೆದ್ದ ರಾಮ || ೮೯ ||

ಹಳೆಯಬೀಡಾಳುವ ಬಲ್ಲಾಳನ ಗೆಲಿದನು
ಚೆಲುವುಳ್ಳ ರಾಯ ಚಿತ್ತೈಸು |
ಛಲದಿಂದ ಹುಳಿಯೇರ ಮಾತಿಗೊಂಡನ ಗೆಲಿದ
ಬಲವುಳ್ಳ ನೇಮಿಯ ಮುರಿದ || ೯೦ ||

ಬಿರಿದ ಬಿಟ್ಟರೆ ರಾಮನಿರಲಿ ಕೇಳೊ ಲಿಂಗಾ
ಭರದಿಂದ ಪಂಥವಾಡಿದರೆ |
ಮುರಿವೆನು ತನ್ನಯ ಬಲುಹನೆಲ್ಲವನು ತಾ
ಸೆರೆಯಮನೆಯ ಕೂಡಿಸುವೆನು || ೯೧ ||

ದುಗುಡವ ತಾಳಿದ ದೇವಿಶೆಟ್ಟಿಯಲಿಂದ
ವಿಗಡ ರಾಮನ ಬಳಿಗೈದ |
ಅಗಣಿತ ಬಿರಿದ ಬಿಟ್ಟರೆ ಇರಹೇಳಿದ
ಸುಗುಣ ರಾಮಯ್ಯ ಚಿತ್ತೈಸು || ೯೨ ||

ಅಬ್ಬರಿಸುವ ರಾಮ ಕೋಪವ ತಾಳಿದ
ಉಬ್ಬಿ ಕಾಟಣ್ಣನಿಂತೆಂದ
ಕಂಪಿಲರಾಯನ ಸುತನು ರಾಮಯ್ಯನು
ಹಬ್ಬಿದ ಬಿರಿದ ಬಿಡುವನೆ || ೯೩ ||

ಕಟ್ಟಳಿಲ್ಲದ ದಂಡ ಕಡಿದು ಕುಪ್ಪೆಯನೊಟ್ಟಿ
ಸುಟ್ಟು ಬೊಟ್ಟಿಡುವೆ ಪಟ್ಟಣವ |
ಮುಟ್ಟಿ ಕಾದಲು ರುದ್ರರಾಯನ ಹಿಡಿವೆನು
ದಿಟ್ಟ ಲಿಂಗಣ್ಣ ಕೇಳ್ಬಿರಿದ || ೯೪ ||

ಭಂಡಾರ ಬೊಕ್ಕಸ ಹೆಂಡಿರು ಮಕ್ಕಳು
ತಂಡತಂಡದಿ ಪ್ರಯಾಣಮಾಡಿ |
ದಂಡೆತ್ತಿ ರುದ್ರರಾಯನು [ಬ]ರೆ ಕೊಡೆ ನಿನ್ನ
ಗಂಡಾಳು ಲಿಂಗ ಹೋಗೆಂದ || ೯೫ ||

ಬಂದು ಲಿಂಗಣ ದೇವಿಶೆಟ್ಟಿ [ಯರಿಗೆ] ಪೇಳೆ
ಅಂದು ರಾಯನ ಜಗಳವನು |
ಇಂದು ಇಲ್ಲಿದ್ದರೆ ಕೆಡುವೆವು ನಾವೆಲ್ಲ
ಸಂದೇಹ ಬೇಡವೇಳೆಂದ || ೯೬ ||

ಮುತ್ತು ಮಾಣಿಕ ನವರತ್ನ ಭಂಡಾರವ
ಮತ್ತೆ ಪೆಟ್ಟಿಗೆ ತುಂಬಿಸಿದನು |
ಉತ್ತಮ ಹೊನ್ನು ಹಣದ ಜಾಳಿಗೆಗಳ
ಇತ್ತನೆಕ್ಕಟಿಗರಿಗೆಲ್ಲ || ೯೭ ||

ಕಾಲು ಕುಪ್ಪಸವ ತೊಡಿಸಿ ಹೆಣ್ಣುಗಳಿಗೆಲ್ಲ
ಆಲಸ್ಯವಿಲ್ಲದೆ ಬೇಗ |
ಮೇಲು ಹಕ್ಕರಿಕೆಯ ಮುಸುಕನು ತೇಜಿಯ
ಸಾಲುಸಾಲಿನಲಿ ಶೃಂಗರಿಸಿ || ೯೮ ||

ತಡೆಯದೆ ಹೋಗಿ ಚಾವಡಿಗೆ ನಡೆದುಬಂದು
ಕರೆಸಿದ ತನ್ನ ರಾಹುತರ |
ಭರದಿ ಕಾಲಾಳು ಮೇಲಾಳುಗಳನು ಕರೆಸಿ || ೯೯ ||

ಸುಟ್ಟನು ಪಟ್ಟಾವಳಿಯ ಪೆಂಡಿಗಳನು
ಸುಟ್ಟನುಪ್ಪರಿಗೆ ಚಾವಡಿಯ |
ಸುಟ್ಟನು ಭತ್ತದ ಕಣಜ ಲಾಯಗಳನು
ಸುಟ್ಟು ಲಿಂಗನು ಹೊರಟನು || ೧೦೦ ||

ಅತ್ತ ಹೋಗಲು ಲಿಂಗ ಇತ್ತ ಮನ್ನೆಯರೆಲ್ಲ
ಒತ್ತಿ ಚಾಡಿಯನು ಹೇಳಿದರು |
ಚಿತ್ತೈಸಿ ಸ್ವಾಮಿ ರಾಮನ ಲಿಂಗ ಪೊಗಳಿದ
ಅತ್ಯಂತ ಸ್ವಾಮಿದ್ರೋಹಿಕೆಯ || ೧೦೧ ||

ಹೇಳಿದ ಚಾಡಿಯ ಕೇಳಿದ ರುದ್ರನು
ತಾಳಿದ ಕಡುಗೋಪವನು |
ಬೀಳುಕೊಟ್ಟನು ಮನೆಯ ಮುದ್ರಿಸೆದಾಗಲೆ
ಊಲಿಗದವರನು ಕಳುಹೆ || ೧೦೨ ||

ಹೆಡಕ ಹಿಡಿದು ನೂಕುನೂಕೆಂದು ಲಿಂಗನು
ಒಡೆಯ ರುದ್ರನು ನನಗಲ್ಲ |
ಸುಡುವೆ ಪಟ್ಟಣವನು ದಂಡೆತ್ತಿ ಬಂದರೆ
ಕಡಿವೆ ಮನ್ನೆಯರನೀಕ್ಷಣದಿ || ೧೦೩ ||

ಕಟ್ಟಿಗೆಕಾರರು ಹೇ[ಳೆ] ರಾಯನ ಕೊಡೆ
ದಿಟ್ಟ ಲಿಂಗಣ್ಣ ಕೋಪಿಸಿದ |
ಸೃಷ್ಟಿಪಾಲಕ ನೀನೊಡೆಯನು ಅಲ್ಲವೆಂದು
ಬಿಟ್ಟೋಡುತಾನೆ ಪಟ್ಟಣವ || ೧೦೪ ||

ಬೆರಸಿ ಚೂಣಿಯ ಹುಯ್ಯ[ಲ] ಮಾಡಿ ನಿಮುಷದಿ
ಕರ ಬೇಗ ಕಡಿದಾಡಿದರು |
ತುರುಗ ರುತಗ ಕೂಡಿ ಕೂಡಿದಾಡಿ ರಾಹುತರೆಲ್ಲ
ಇರಿದಾಡಿದರು ಹೊಳಕೆಯಲಿ || ೧೦೫ ||

ಕಂಡ ದೂರದಲಿಂದ ದೇವಿಶೆಟ್ಟಿಯಲಿಂಗ
ಹಿಂಡು ತುರಗ ರಾಹುತ |
ಗುಂಡಿಗೆ ಒಡೆದಂತೆ ಲವುಡಿಕೆ ಹೊಡೆಯೆನುತಲಿ
ಮುಂಡಗಳುರುಳೆ ಭೂಮಿಯಲಿ || ೧೦೬ ||

ಅಂಡಮಂಡೆಯ ರಾಸಿ ಕಂಡಗರುಳ ಸಂತೆ
ತಂಡತಂಡದಲಿ ಮುರಿದೋಡೆ ||
ಮಂಡಲಪತಿ ರುದ್ರರಾಯಗೆ ಪೇಳ್ದರು
ಕಂಡ ಗಜವನು ಕಳುಹಿದನು || ೧೦೭ ||

ದಿಕ್ಕಿದಿಕ್ಕಿನ ಬಾಗಿಲಲಿ ಹೊರಹೊಂಡರು
ಲೆಕ್ಕವಿಲ್ಲದೆ ಮಂದಿ ಕುದುರೆ |
ಕಕ್ಕಸದಲಿ ಮಂದಿ ಮಾನ್ಯರು ಕಡಿವಾಡಿ
ಒಕ್ಕಲಿಕ್ಕಿದರು ರಾಹುತರ || ೧೦೮ ||

ಮತ್ತೆ ರಾಮಯ ತನ್ನ ಪರಿವಾರವೆಲ್ಲಕೆ
ಮತ್ತೆ ಬೆಸನಯಿತ್ತು ಕಳುಹೆ |
ಕತ್ತಿ ಕಠಾರಿ ಮನ್ನೆಯರ ಮಾರ್ಬಲವೆಲ್ಲ
ಮುತ್ತಿತು ರುದ್ರನ ದಂಡ || ೧೦೯ ||

ಮುಂದಲೆ ಮುಂದಲೆ ಇರಿದಾಡಿ ಪರಿವಾರ
ಬಂದು ರಾಮನ ಪರಿವಾರ |
ಕುಂದದೆ ಕುದುರೆಯ ಕಡಿಕಡಿದು ಬೇಗದಿ
ಕಂಡದಲೊರಸಿ ಕತ್ತಿಗಳ || ೧೧೦ ||

ಚೆಲ್ಲಿತು ರುದ್ರನ ಬಲ ನಿಮುಷದೊಳಗೆ
ಭಲ್ಲೆವು ಚಕ್ರ ತೋಮರದಿ |
ಜಲ್ಲಿಸಿ ಕುದುರೆಯ ಪೌಜ ಹಾಕಿರಿದರು
ಬಲ್ಲಿದ ರಾಮನ ಭಟರು || ೧೧೧ ||

ಎಡಬಲದಲಿ ಕೆಲಕಡೆಯ [ಲೆ]ಲುಬೆಯಾಗಿ
ಜಡಿದು ರುದ್ರನ ದಂಡ ಕಡಿದು |
ಸಿಡಿಲು ಪರ್ವತಕೆ ಮುಸುಕುವಂತೆ ಮುಸುಕಿತು
ಕಡುಗಲಿ ರಾಮನ ಪೌಜ || ೧೧೨ ||

ಹೊಕ್ಕು ಕಾಲಾಳು ಮೇಲಾಳುಗಳೆಲ್ಲರ
ನಿಕ್ಕಡಿಯಾಗಿ ಕಡಿಯೆ ಬಾಣದಲಿ |
ಕಕ್ಕಸದಲಿ ಕಡಿದು ರಾಮನ ದಂಡ
ಒಕ್ಕಲಿಕ್ಕಲು ಹಿಮ್ಮೆಟ್ಟಿದರು || ೧೧೩ ||

ಹಿಮ್ಮೆಟ್ಟಿ ಬರುವ ಪೌಜನು ಕಂಡು ರಾಮಯ್ಯ
ಸುಮ್ಮಾನದಲಿ ನಸುನಗುತ |
ಹಮ್ಮು ಮುರಿ[ವೆ] ರುದ್ರರಾಯನ ದಂಡನು
ಒಮ್ಮೆಲಿಂಗಣ್ಣ ನೀ ನೋಡು || ೧೧೪ ||

ಎಡವಂಕ ಬಲವಂಕ[ಕೋ]ಡಿ ರಾಂಯ್ಯನು
ನಡೆದನು ಕೊಡೆ ವಹಿಲದಲಿ |
ನುಡಿದವು ಬಿರಿದಿನ ಕಹಳೆ ತಮ್ಮಟ ಭೇರಿ
ಪೊಡವಿರಾಯರ ಗಂಡನೆಂಬ || ೧೧೫ ||

ಬಲ ಒದಗಿತು ರುದ್ರನ ಮನ್ನೆಯರು ಬೇಗ
ಬಂದು ಜಗಳವನು ಮಾಡಿದರು |
ಕಾಟಣ್ಣ ದೇವಿಶೆಟ್ಟಿಯಲಿಂಗ ರಾಮಯ್ಯ
ಮೀಟುಳ್ಳ ಪರಿವಾರವೆಲ್ಲ || ೧೧೬ ||

ಕತ್ತರಿ ಬೋಳಯ್ಯ ಒತ್ತಿ ಮೆಟ್ಟಿ ಸೀಳಲು
ಮತ್ತೆ ತುರಗ ಕಡಿದಾಡಿ |
ರಕ್ತದ ಹಳ್ಳ ಕರಿಯೆ ಧರಣಿಯ ಮೇಲೆ
ಸುತ್ತಗರುಳು ಸುರಿಸುರಿಯೆ || ೧೧೭ ||

ದೆಸೆ ಬಾಯದೆರೆಯದೆನುತ ರುದ್ರನ ದಂಡು
ಬಿಸಿಯ ರಕ್ತವ ಸುರಿವುತಲಿ |
ಅಸಮಸಾಹಸ ರಾಮ ಬೆನ್ನಟ್ಟಿ ಬರುತಿರೆ
ಮುಸುಕಿಲಿ ಹಾಯೆ ಪಟ್ಟಣಕೆ || ೧೧೮ ||

ಕೇಳಿದ ದಂಡು ಮುರಿದ ಸುದ್ದಿಯ ರಾಯ
ತಾಳಿದ ಕಡುಗೋಪವನು |
ಕೋಳಹಳವ ಮಾಡಿ ಕಡಿವೆ ರಾಮನ ದಂಡ
ದಾಳಿ ಮಾಡುವೆ ಹೊಸಮಲೆಗೆ || ೧೧೯ ||

[ಇದ್ದೆ] ದೆಸೆಯ ಮಗುಟವರ್ಧನರ ನೋಡಿ ರಾಯ
ಗದ್ದುಗೆಯಿಂದೇಳುತಿರಲು |
ಬಿದ್ದು ಚರಣದಿ ಕೊಮಾರ ಎಪ್ಪತ್ತಿರಾಜ
ರುದ್ರ ಬೆಸನ ಪಾಲಿಸೆಂದ || ೧೨೦ ||

ಮನ್ನೆಯ ಮಂಡಲಿಕರು ಹೋಗಿ ರಾಮಗೆ
ಬೆನ್ನ ಕೊಟ್ಟರು ಕೇಳು ಕಂದ |
ನಿನ್ನ ಹವಣೇನು? ಸಮರಂಗ ಬಲ್ಲದೆ ರಾಯ
ಇನ್ನು ತೆಗದೇನು ಚಿತ್ತೈಸು || ೧೨೧ ||

ಪೊಡವಿಯೊಳಗೆ ಸುರಿತಾಳ ತಾ ಬಂದರೆ
ನಡೆಯಬೇಕಲ್ಲದೆ ಬೇಗ |
ಜ[ಡ]ದೇಹಿ ಮಾನ್ಯರ ಮೇಲೆ ಛಲವನಿತ್ತು
ಒಡನೆ ನೀ ಕಳುಹು ಕಾಳಗಕೆ || ೧೨೨ ||

ದಾಳಿಯ ಮಾಡಿ ರಾಮನ ಹಿಡಿಯಾಳ ಹಿಡಿವೆನು
ಜೋಡಿಸಿ ಕಡಿವೆ ಮನ್ನೆಯರ |
ಗೂಳೇವ ತೆಗೆಸುವ ಹೊಸಮಲೆದುರ್ಗವ
ಹೇಳ್ವರೆ ಹೆಸರ ಕೆಡಿಸುವೆನು || ೧೨೩ ||

ಎಪ್ಪತ್ತಿರಾಜನ ನುಡಿಗೇಳಿ ರುದ್ರನು
ಅಪ್ಪಿಕೊಂಡನು ಸಂತೋಷದಲಿ |
ಒಪ್ಪಿಸಿದನು ಮನ್ನೆಯ ಮಾಂಡಲಿಕರ
ಒಪ್ಪದಿ ಪ್ರಯಾಣ ಮಾಡಿದನು || ೧೨೪ ||

ಸರ್ಪಭೂಷಣ ಕಡಿದಾಡಿ ರಣದೊಳು
ಒಪ್ಪುವ ರಾಮನ ಹಿಡಿವೆ |
ಅಪ್ಪಣೆಯನು ಕೊಟ್ಟು ಕಳುಹಯ್ಯ ಬೇಗದಿ
ತಪ್ಪದೆ ತರಿಸು ಬೊಲ್ಲನನು || ೧೨೫ ||

ಬೊಲ್ಲನ ತರಹೇಳಿ ಮಲ್ಲಯ್ಯ ಸಾಣಿಯ
ನಲ್ಲಿ ರುದ್ರನು ಕಳುಹಿದನು |
ಬಂದ ಬೊಲ್ಲಗೆ ಗಂಧ ಪುಷ್ಪ ಪರಿಮಳವನು
ತಂದು ಒಪ್ಪಿಸಿ ನೈವೇದ್ಯಗಳ || ೧೨೬ ||

ಒಂದು ಖಂಡುಗ ರಾಶಿ ಉಕ್ಕಿನ ಕಡಲೆಯ
ತಂದು ಕಟ್ಟಿದರು ಕವಣವನು |
ಇಂದೇರಿಸಿದ ಕಂಪಿನ ಹೂವು ಗಂಧಕ್ಷತೆಯ
ನಂದು ಬೊಲ್ಲಗೆ ನೀರ್ಗುಡಿಸಿ || ೧೨೭ ||

ಹಕ್ಕರಿಕೆಯ ಜೋಡು ಹೊಕ್ಕುಳ ಗಂಟೆಯು
ಇಕ್ಕೆಲದಲ್ಲಿ ಬಿಲ್ಲುಗಳ |
ಇಕ್ಕಿದ ಕರ್ಕಸ ಅಂಬು ಸಿಂಗಾಡಿಯು
ಪಕ್ಕೆಲಿ ಬಿಗಿದ ರಂಚಿಕೆಯು || ೧೨೮ ||

ಇಕ್ಕಿದ ಕಡಿವಾಳ ಉಕ್ಕಿನ ಭಲ್ಲೆವು
ಕಕ್ಕಡ ವಂಕಿ ಕೈಯ್ಯಂಬು |
ಎಕ್ಕಲ ಕೋರೆಯು ರಕ್ಕಸ ಬೊಲ್ಲಗೆ
ಇಕ್ಕೆಲದಲಿ ಬಿರಿದುಗಳು || ೧೨೯ ||

ಬೊಲ್ಲನ ಶೃಂಗರಿಸಿ ಎಪ್ಪತ್ತಿರಾಜನು
ನಿಲ್ಲದೆಲ್ಲರ ಕರೆಸಿದನು |
ಸಲ್ಲೀಲೆಯಿಂದ ಮೈಜೋಡನಂಗಕೆ ತೊಟ್ಟು
ಬಲ್ಲೈಸಿದ ತಲೆ ಠೌಳಿ || ೧೩೦ ||

ವೀರಜಡೆಯ ಹೆಣೆಸಿದ ಎಪ್ಪತಿರಾಜ
ಧೀರ ಬಂದನು ಬೊಲ್ಲನೆಡೆಗೆ |
ಸಾರಿ ಅರ್ಚಿಸಿ ಧೂಪ ದೀಪ ನೈವೇದ್ಯವ
ವೀರವಿಕ್ರಮ ಗೆಲ್ಲೆನುತ || ೧೩೧ ||

ಹಚ್ಚ ಕೆಚ್ಚನೆ ಆರತಿಯೆ[ತ್ತಿ] ಬೊಲ್ಲಗೆ
ಮಚ್ಚರಿಸಿದ ವೈರಿ ಗೆಲ್ಲು |
ಪಚ್ಚೆಯ ಜೋಡು ಹಕ್ಕರಿಕೆ ಹಲ್ಲಣ ಗುಬ್ಬಿ
ಗಚ್ಚಿನ ಮುಖರಂಬವೆಸೆಯೆ || ೧೩೨ ||

ಹೆಚ್ಚಿನ ಬೊಲ್ಲಗೆ ಶರಣೆಂದು ಎಪ್ಪತಿರಾಜ
ಉತ್ಸಾಹದಲಿ ಏರಿದನು |
ಅಚ್ಚಾಳು ಕುದುರೆ ಐವತ್ತು ಸಾವಿರ ಸಹ
ನಿಶ್ಚೈಸಿದ ರಾಮನ ಮೇಲೆ || ೧೩೩ ||

ತುಡುಮು ತಂಬಟ ಭೇರಿ ಗಿಡಿಬಿಡಿ ನಿಸ್ಸಾಳ
ಬಿಡದೊದರುವ ಚಿನ್ನಗಹಳೆ |
ಒಡನೆ ಬುರುಗು ನೌಬತ್ತು ಅಬ್ಬರದಿಂದ
ನಡೆದನು ಪಡೆ ಬೆದರ್ವಂತೆ || ೧೩೪ ||

ಅರಿರಾಯದಲ್ಲಣಮರ್ದನ ಬಿರಿದನು
ಸಾರಿಸುತಲಿ ಧೀರ ನಡೆದ |
ಮರೆಯದಿರೆಪ್ಪತ್ತಿರಾಜ ಈ ಮಾತನು
ಬರಿಗೈವೆನು ನಿನ್ನ ಬಲವ || ೧೩೫ ||

ತೋರು ಸಾಹಸವ ಎನ್ನೊಳಗಿದಿರಾಗೆಂದು
ಮೀರಿ ಹೊಯ್ದನು ಖಡ್ಗದಲಿ |
ಬೆನ್ಹತ್ತಿ ಕಡಿವುತ ಬರುವರ ರಾಮಯ್ಯ
ಚೆನ್ನಾಗಿ ಕಣ್ಣಿಲಿ ಕಂಡ || ೧೩೬ ||

ಇನ್ನು ಜಗಳ [ಹೆ]ಚ್ಚಿತು ನೋಡಿ ನೀವೆಂದು
ಮಾನ್ಯರಿಗಪ್ಪಣೆ ಕೊಟ್ಟ |
ದೃಢದಲಿ ರಾಮಯ್ಯ ನಡೆದು ದುವ್ವಾಳಿಸಿ
ಜಡಿದನು ವಜ್ರದಾಯುಧವ || ೧೩೭ ||

ಏರಿ ಇಕ್ಕೆಲದಲಾಗುವ ಬೊಬ್ಬೆಯ ಕೇಳಿ
ತೋರಿದ ರಾಮ ಕೈಗುಣವ |
ಧಾರುಣಿಯೊಳು ಇದಿರಾದರ ಸೀಳುವ
ತೂರಿದ ಗಾಳಿಯ ಮಾಡಿ || ೧೩೮ ||

ವಾರುವನೇರಿಸಿ ಕರುಳ ತರಿದನಾಗ
ಸೇರಿಸಿದನು ಯಮಪುರಿಗೆ |
ತೋರಿದ ಸಾಹಸವೇರಿ ಬೊಲ್ಲನ ರಣ
ಭಾರಿಯ ಮುರಿಯಲೇರಿದನು || ೧೩೯ ||

ಹೊಕ್ಕನು ರಣವ ನಿರಾಕರಿಸಿ ಬಲವನು
ಒಕ್ಕಲಿಕ್ಕಿಯೆ ತುಳಿಸಿದನು |
ಸೊಕ್ಕಮುರಿದು ಪ್ರತಾಪರುದ್ರನ ದಂಡ
ಲೆಕ್ಕವಿಲ್ಲದೆ ತರಿದೊಟ್ಟಿ || ೧೪೦ ||

ರಕ್ಕಸ ನೀಲನ ಏರಿ ರಾಮಯ್ಯನು
ಇಕ್ಕಡಿ ಮಂಡಲಿಕರನು |
ಹೊಕ್ಕರೀ ಬಲವ ಮನ್ನೆಯರು ಸಂಹರಿಸುತ
ಮುಕ್ಕಿಸಿದರು ರಕ್ತವನು || ೧೪೧ ||

ಆದಡೀ ಗಾಯವ ನೋಡೆಂದು ಹೊಯ್ದನು
ಮೇದುನಿಪತಿಯು ರಾಮಯ್ಯ |
ಭೇದಿಸಿ ಮೈಜೋಡು ಕತ್ತರಿಸಿ ಬಲು
ನಾದದಿಂದ್ಹೊಯ್ದ ಖಡ್ಗದಲಿ || ೧೪೨ ||

ಜೋಡು ಕತ್ತರಿಸಲು ರೂಢೀಶ ಕೋಪದಿ
[ಓ]ಡಿದೆಪ್ಪತ್ತಿರಾಜನನ |
ನೋಡಿ ಅಂತರಿಸದೆ ಓಡಿ ನಿಂದವರೆಲ್ಲ
ಹೇಡಿಗೊಂಡಿಹ ವ್ಯಾಳ್ಯದೊಳಗೆ || ೧೪೩ ||

ಹಲವು ಬಗೆಯ ಸಾಹಸವ ತೋರಿದೆ ವೀರ
ಭಲರೆ ಭಾಪುರೆ ಜಗಜಟ್ಟಿ |
ಛಲದಂಕನಹುದೆಂದು ತಲೆಯ ಠೌಳಿಗೆ ಹೊಯ್ಯೆ
ಒಲಿದು ಬಿದ್ದನು ರಣದೊಳಗೆ || ೧೪೪ ||

ಬೀಳಲೊಡನೆ ಹಿಂಗಾಲು ಮುಂಗಾಲಿಂದ
ಏಳಲೀಸದೆ ಬಂದು ಬೆನ್ನ |
ಕಾಳಗದೊಳು ರಾಮನಾಥಗೆ ಬೊಲ್ಲನಂ
ದೇಳೀಗೆಯಲಿ ಬೆನ್ನನಿತ್ತು || ೧೪೫ ||

ಬೊಲ್ಲ ತನಗೆ ಸಾಧ್ಯವಾಗಲು ರಾಮಯ್ಯ
ನಿಲ್ಲದೆ ಕೋಟೆಯ ನೆಗೆಸಿ |
ಗಲ್ಲದ ಬಾರಲ್ಲಿ ಜಲ್ಲನೆ ಹರಿಯಲು
ಅಲ್ಲಿ ಮಾದಿಗ ಹಂಪ ತನ್ನ || ೧೪೬ ||

ಒಳದೊಡೆ ತೊಗಲ ತೆಗೆದು ಎದೆಬಾರನು
ಗೆಲವಿಂದಲದಕೆ ಹೊಂದಿಸಲು |
ಸಲಹುವೆ ನಿನ್ನ ಪ್ರಾಣಕೆ ಎನ್ನ ಜೀವವ
ನೊಲಿದೀವೆ ಹಂಪ ನೀ ಕೇಳೂ || ೧೪೭ ||

ಗೆಲಿದೂರ ಹೊರಟು ಚರರ ಕಳುಹಿದ ರಾಮ
ಒಲಿದು ಲಿಂಗನ ಕರೆಯೆನುತ ||
ನಲಿದೋಡಿ ಚರರಿತ್ತ ಭರದಿಂದ ಬಂದರು
ಉಲುಹನಾರಿಸುತ ಊರೊಳಗೆ || ೧೪೮ ||

ಧುರರೊರಗಿದ ಜಾಳಿ ಹರಿದು ಎಪ್ಪತಿರಾಜ
ಅರೆಗಣ್ಣ ತೆರೆದು ಎಚ್ಚತ್ತು || ೧೪೯ ||

ನೆರೆದಿರ್ದ ಮನ್ನೆಯರ ಕಳುಹಿದನು ತಾನು
ಅರಮನೆಗೈದಿದನಾಗ |
ಸಾರಿದವರ ಕಾಯ್ವ ಮೀರಿದವರ ಕೊಲ್ವ
ನೋರುಗಲ್ಲಿಗೆ ಕೋಳಾಹಳ || ೧೫೦ ||

ನರಪತಿ ವೀರಪ್ರತಾಪ[ನ] ಕೊಮಾರ ಹೊಕ್ಕನು
ಊರು ದುಗುಡದಲಿ |
ಹರುಷದಿಂದಲಿ ದೇವಿಶೆಟ್ಟಿಲಿಂಗನು ಆಗ
ಭರದಿಂದ ಊರ ಹೊರಟನು || ೧೫೧ ||

ವೀರಪ್ರತಾಪ[ನ] ದುಗುಡವ ಕಂಡು ರಾಮಯ್ಯ
ಭೇರಿಯ ಹೊಯ್ಸಿದನಾಗ |
ಊರ ಹೊರಗೆ ಇಹ ಪೌಜಿಗೆ ಇದಿರಾಘಿ
ಏರಿ ಮನ್ನೆಯರುಗಳೆಲ್ಲ || ೧೫೨ ||

ಸಾವಿರ ಕುದುರೇ[ಳು] ಸಾವಿರ ಕಾಲಾಳು
ಸಾವಿರ ಮನ್ನೆಯರ ತುರಗ |
ಭಾರಿಯ ನಿಗಳದ ಪರಿವಾರ ಕೂಡಿ[ತಾ]
ವೀರ ರಾಮನ ಇದಿರಿನಲಿ || ೧೫೩ ||

ಹುಯ್ಯಲ ಹಿಡಿದು ರಾಮನ ಹೋಗಲೀಸದೆ
ಕೈಯ್ಯ ಆಯುಧವ ಝಳಪಿಸುತ |
ಹೊಯ್ಯುಹೊಯ್ಯೆನುತ ಮೂದಲಿಸಿದ ಏರಿದರಾಗ
ಒಯ್ಯನೆ ವೀರ ಪರಿವಾರ || ೧೫೪ ||

ಎರಡು ಬಲವು ಕೂಡಿ ತಗರಂದದಿ ತಾಕ್ಯಾಡಿ
ದೊರೆದೊರೆಗಳ ನೇಮದಲಿ |
ತುರುಗಕೆ ತುರುಗವು ಕರಿಗಳಿಗೆ ಕರಿಗಳು
ಹರಿಗೆ ಹರಿಗೆ ಬಿಲ್ಲಿನವರು || ೧೫೫ ||

ವೀರ ರಾಮನು ಹೊಕ್ಕ ಸಾ[ರ]ದಿ ತನ್ನೊಡನೆ ಮು
ನ್ನೂರು ಕುದುರೆಯು ಎಪ್ಪತ್ತು |
ಭೋರನೆ ಇರಿದು ಸಾವಿರ ಶೂಲಗಳಲಿ
ಧೀರ ಪ್ರತಾಪನ ಇದಿರ || ೧೫೬ ||

ಶರಣರ ಸೂಲವು ಇರಿದು ನೂಕುತ [ಬರೆ]
ಮುರಿದೋಡಿ ತಮತಮಗಲ್ಲಿ |
ಪರಿವಾರ ಪುರಜನ ಬಂದೋಡಿ ಹೊಕ್ಕರು
ಪುರವೋರ್ಗಲ್ಲ ಪಟ್ಟಣವ || ೧೫೭ ||

ಹಿಂದುಮುಂದೆಲ್ಲ ರಾಮನ ಬಲ ಕೂಡಿತು
ಸಂದಣಿಸಿತು ಮನ್ನೆಯರ |
ಮುಂದುವರಿದು ರಾಮ ಊರು ಹೊಗಿಸಿ ತಾನು
ಹಿಂದಕ್ಕೆ ತಿರುಗಿದ ಬೇಗ || ೧೫೮ ||

ಧರ್ಮಗಾಳೆಯ ಹಿಡಿಸಿದ ರಾಮಯ್ಯನು
ನಿರ್ಮಳದೊಳು  ಲಿಂಗನೊಡನೆ |
ಪೆರ್ಮೆಯೊಳೊಂದಾಗಿ ಮಾತುಗಳನಾಡುತ
ವರ್ಮವಿಲ್ಲದೆ ಮನದೊಳಗೆ || ೧೫೯ ||

ಓರುಗಲ್ಲನು ಹೊಕ್ಕರು ತಾವಾಗಲೆ
ವೀರ ರಾಮಯ್ಯ ನೆಲ್ಲೂರು |
ಸಾರಿ ವನವನು ಹೊಕ್ಕು ಶರಣರು ಇಹ
ದ್ವಾರವಾಟವನೊಳಪೊಕ್ಕ || ೧೬೦ ||

ಹೊಕ್ಕು ಶರಣರ ಅಡಿಗೆರಗಿದ ರಾಮಯ್ಯ
ಗಕ್ಕನೆ ಹೊರಟ ಬೇಗದಲಿ |
ಅಕ್ಕರಿಂದಲಿ ಬಹ ದಳವನು ಕಾಣುತ
ಹೊಕ್ಕು ಬಾಬಾಜಿ ನಿಲ್ಲೆನುತ || ೧೬೧ ||

ಬಿಡು ನಮ್ಮ ಎಪ್ಪತ್ತಿರಾಜ ಬೊಲ್ಲನನೆಂದು
ನುಡಿಯನು ಕೇಳಿ ರಾಮಯ್ಯ |
ಖಡ್ಗವನುಚ್ಚಿ ಕೋಪದಿ ಘಡಿಘುಡಿಸುತ
ಹೊಡೆದು ಬಾಬಾಜಿಯ ಬಲವ || ೧೬೨ ||

ಬೊಲ್ಲನ ಏರಿ ದುವ್ವಾಳಿಸಿ ರಾಮಯ್ಯ
ನಿಲ್ಲದೆ ಹೋಗುತಿರಲೊಡನೆ |
ಬಲ್ಲಿದ ಕೊಳ್ಳಿಯ ನಾಗಣ್ಣನೊಳಪೊಕ್ಕು
ಬಿಲ್ಲಿನ ಮಂದಿ ತಾ ಸಹಿತ || ೧೬೩ ||

ಗುಜ್ಜಲ ಓಬನು ಚಿಗತಮ್ಮ ಚಿನುಮಾದ
ಮಜಬಾಪುರೆ ರಾಮನೆಡೆಗೆ || ೧೬೪ ||

ಮುಂದಣ ಪೌಜಿಗೆ ಕೋಟಿಗರ ದ್ಯಾವನು
ಮಂದಿನ ನೋಡೆ ಹಾಯ್ಸಿಕೊಂಡು |
ಹಿಂದಕ್ಕೆ ಮರಳೆ ಪಾಪಯ್ಯನು ಮೂಗನು
ಅಂದು ಹಾಕಿದನು ಕುದುರೆಯನು || ೧೬೫ ||

ಕುದುರೆಯ ಹಾಕಲು ಒಡನೈದು ಮಂದಿಯು
ಕದುಬಿ ತಮ್ಮಯ ಮಂದಿ ಸಹಿತ |
ಒದಗಿತು ಬೂಟಕ ಬೊಮ್ಮನ ಮಂದಿಯು
ಚದರದೆ ರಾಮಯ್ಯನೊಡನೆ || ೧೬೬ ||

ಕಡಿದು ಕತ್ತರಿಸಿ ಖಂಡ್ರಿಸಿ ತುಂಡುಮಾಡಿದ
ವದನ ಒತ್ತರಿಸಿ ನಡೆ ಚಿನ್ನ |
ಸಿಡಿಲು ಹೊಡೆದಂತಾಗೆ ನಡುಗಿ ಹೋದರೆಲ್ಲ
ಅಡವಿ ಗಿಡಕೆ ಒಬ್ಬರಾಗಿ || ೧೬೭ ||

ಅತ್ತಲವರನಟ್ಟಿ ಇತ್ತಲೀ ರಾಮಯ್ಯ
ಒತ್ತಿ ನಡೆದನು ಮುಂದೆಸೆಯ || ೧೬೮ ||

ಮುತ್ತಿನಂದಣವೇರಿ ದೇವಿಸೆಟ್ಟಿಯ ಲಿಂಗ
ಹತ್ತಿ ವಾರುವನು ಹಾರಿಸುತ |
ಒತ್ತಿಲಿ ಮಾದಿಗ ಹಂಪ ಸಂಪಯ್ಯನು
ಸುತ್ತಲೈವರು ಮನ್ನೆಯರು || ೧೬೯ ||

ಚಿತ್ತಜ ಸಮರೂಪ ರಾಮಯ್ಯ ಅರ್ತಿಲಿ [ಬರೆ]
ಮೊತ್ತವ ಕಂಡು ಕಾಶ್ಮೀರ |
ಹೊತ್ತ ನ್ಯಾಜ್ಯವು ಹನ್ನೆರಡು ಸಾವಿರ ಮಂದಿ
ಮುತ್ತಿ ಮುಸುಕಿತು ಆ ಬಲವ || ೧೭೦ ||

ಬಿಡು ರುದ್ರರಾಯನ ಮಗನ ತೇಜಿ [ಯ] ಎಂದು
ತಡೆದನು ಕಾಶ್ಮೀರ [ಭೂ]ಪ |
ಜಡಿದು ಖಡ್ಗವನೆತ್ತಿ ಹೊಡೆದು ನೂಕಿತು ಬಲ
ಅಡೆಯೆದ್ದು ಮುರಿದು ಓಡಿದರು || ೧೭೧ ||

ಓಡದಿರೆಲ್ಲೊ ಹೇಡಿ ಮಾಡು ಹುಯ್ಯಲನೆಂದು
ನೋಡಿ ಭಲ್ಲೆಯದವರು ತಿವಿಯೆ |
ಮೂಡಿದ ಗಾಯವು ಪೌಜೆಲ್ಲ ಹೊರಬಿಚ್ಚಿ
ಓಡಿತು ಅಡವಿ ಪಾಲಾಗಿ || ೧೭೨ ||

ರೂಢಿಗೀಶ್ವರನ ಕೃಪೆಯುಂಟವನಿಗೆ
ನಾಡಾಡಿ ಮನ್ನೆಯವರೆಲ್ಲ |
ಜೋಡುಂಟೆ ಅವನಿಗೆ ಈ ನಾಡಿನೊಳಗೆಂದು
ಓಡಿಹೋದರು ತಮತಮಗೆ || ೧೭೩ ||

ಓಡಲತ್ತಲು ರಾಮ ಕೂಡಿ ಎಕ್ಕಟಿಗರು
ಬೀಡ ಬಿಟ್ಟರು ವಹಿಲದಲಿ |
ಅಲ್ಲಿಂದ ಮುಂದಕ್ಕೆ ನಡೆದು ಮೂಗಾವುದ
ಬಂದರು ಸಿದ್ಧವಟಕಾಗಿ || ೧೭೪ ||

ಕೆಂಧೂಳು ಮುಸುಕೆ ನಡೆದ ರಾಮನಾಥನು
ಕುಂದದೆ ಸಿದ್ಧವಟ್ಟದಲಿ |
ಇರುಳ ಕಳೆದು ನಿದ್ರೆಯೊಳೊರಗಿರ್ದು
ತೆರಳಿ ಮುಂದಕ್ಕೆ ನಡೆವಾಗ || ೧೭೫ ||

ರಟ್ಟಿನ ಹೊಳೆಯ ದಾಂಟಿಸಿ ಕಡಿದು ಬಂದು
ಬಿಟ್ಟನು ಬೆಳಗಿನೇಳ್ಯದಲಿ || ೧೭೬ ||

ಅಲ್ಲಿಂದ ತೆರಳಿ ಯಾದವಗಿರಿದುರ್ಗಕ್ಕೆ
ಬಲ್ಲಿದ ವೀರ ರಾಮಯ್ಯ |
ಬೊಲ್ಲನ ಏರಿ ದುವ್ವಾಳಿಸುತಲಿ ಬಂದು
ನಿಲ್ಲದೆ ಹೊಳೆಯ ದಂಡೆಯಲಿ || ೧೭೭ ||

ಅಡಿಗೆಯ ಮಾಡುಂಡು ಒಡನೆ ಎದ್ದನು ರಾಮ
ನಡೆದನು ಬೆಳ್ಳಬೆಳ[ತನ]ಕ |
ಅಡಗಿದ ಬೇಡರು ಅಡೆಯೆದ್ದು ಹೋದರು
ನಡೆದನು ಮುಂದಕ್ಕೆ ರಾಮ || ೧೭೮ ||

ಆದವನ್ನಿಗಾಗಿ ನಡೆದನು ರಾಮಯ್ಯ ವಿನೋ
ದದಿ ಹೊಳೆಯ ದಂಡೆಯಲಿ |
ಸಾಧಿಸಿ ಸ್ನಾನಪಾನವ ಮಾಡಿ ಉಂಡುಟ್ಟು
ಆ ದಿನಗಳೆದನು ಅಲ್ಲಿ || ೧೭೯ ||

ಅಲ್ಲಿಂದ ಮುಂದಕ್ಕೆ ಆದವನ್ನಿ [ಬಿಟ್ಟು]
ಬಲ್ಲಿದ ವೀರ ರಾಮಯ್ಯ |
ಬೊಲ್ಲನ ಏರಿ ದುವ್ವಾಳಿಸುತ ಬಂದನು
ಮೆಲ್ಲನೆ ಕುರುಗೋಡ ಬಳಿಗೆ || ೧೮೦ ||

ಮೂರು ದಿವಸ ತನಕ ನಿಲದಂಡ ನಿಲಿಸಿದ
ಚಾರುತನದ ವಾಣಿಯಲಿ |
ಭೂರಿಯ ಚರರುಗಳು ಇತ್ತ ಕಮ್ಮಟದೊಳು
ಮತ್ತೆ ಕಂಪಿಲನೊಳು ಉಸುರೆ || ೧೮೧ ||

ಕುರುಗೋಡ ಬಳಿಗೆ ಬಂದನು ರಾಮನಾಥನು
ದೊರೆಗಳ ದೇವ ಕೇಳೊಲಿದು |
ಧರೆಯೊಳಗುಳ್ಳ ರಾಯರು ನಿಮ್ಮ ಕಂದಗೆ
ಸರಿಯಾರೊ ಕಂಪಿಲರಾಯ || ೧೮೨ ||

ಓರುಗಲ್ಲವನ ಬೊಲ್ಲನ ತರಹೇಳಿದೆ
ವೀರ ರಾಮಯ್ಯಗವನಿದುರೆ |
ಹಾರಲೊದ್ದವನ ಎಪ್ಪತಿರಾಜನ ಗೆದ್ದು
ಸಾರಿ ತಂದನು ಕಂಪಿಲಿದಿರ || ೧೮೪ ||

ಓರುಗಲ್ಲವನ ಬೊಲ್ಲನ ತರಹೇಳಿದೆ
ವೀರ ರಾಮಯ್ಯಗವನಿದುರೆ |
ಹಾರಲೊದ್ದವನ ಎಪ್ಪತಿರಾಜನ ಗೆದ್ದು
ಸಾರಿ ತಂದನು ಬಿರಿದುಗಳ || ೧೮೩ ||

ಇತ್ತ ರಾಮಯ್ಯ ಪಾಳ್ಯವನಿಳಿದುದ ಕೇಳಿ
ಮತ್ತೆ ಬಂದನು ಕಂಪಿಲಿದಿರ || ೧೮೪ ||

ಕುರುಗೋಡ ಬಿಟ್ಟು ನಡೆಯ ಮುಂದಕಲ್ಲಿಂದ
ಹರುಷದಿಂದಲಿ ರಾಮನಾಥ |
ಇರದೆ ಕಂಪಿಲಿಯ ಸೋಮೇಶನೆಡೆಗೆ ಬಂದು
ಧುರಗಲಿ ರಾಮ ತಾನಿಳಿದ || ೧೮೫ ||

ಇಳಿದು ಸೋಮೇಶಗೆ ಥಳಥಳಿಸುವ ವಸ್ತ್ರ
ವಿಳಿವಿಡಿಸಿದನು ರಾಮಯ್ಯ |
ಭಾಳಲೋಚನ ಭವಪಾಪನಾಶನೆ ತ್ರಿ
ಶೂಲಧರನೆ ಜಯಜಯತು || ೧೮೬ ||

ಜಯ ಜಯ ಪಾಪನಾಶನೆ ಜಯ ಶಿರಕರಧರ
ಜಯತು ಜಯತು ಸೋಮೇಶ || ೧೮೭ ||

ಭೇರಿ ಮೃದಂಗ ತಪ್ಪಟೆ ಗಿಡಿಬಿಡಿ ಕೊಂಬು
ಭೋರು ಮೊರೆವ ನಾಗಸರವು |
ಭೋರೆಂಬ ವಾದ್ಯ ಘೀಳಿಡೆ ಬಂದ ಕಂಪಿಲ
ವೀರ ರಾಮಯ್ಯನಿದ್ದೆಡೆಗೆ || ೧೮೮ ||

ಬಂದ ಕಂಪಿಲರಾಯಗೊಂದಿಸಿ ರಾಮಯ್ಯ
ಬಂದು ಅಪ್ಪಿದನು ಭುಜತುಂಬ |
ಕಂದ ನೀ ಬಲ್ಲಿದನಹುದೊ ಬೊಲ್ಲನ [ತಾ]
ರೆಂದ ಮಾತಿಗೆ ಹೋಗಬಹುದೆ || ೧೮೯ ||

ಈತನಾರೆಂದು ಕೇಳಿದ ಭೂಪನಂದು
ಹೇಳಿದ ರಾಮನಾಥ |
ಕುಂದದೆ ಓರ್ಗಲ್ಲ ಪಟ್ಟಣಸೆಟ್ಟಿಯು
ದೇವಿಸೆಟ್ಟಿ ಲಿಂಗಣ್ಣ || ೧೯೦ ||

ಓರುಗಲ್ಲರಸಿನ ಬಲಕೆ ಬಲ್ಲಿದನಿವ
ಕಾರಮಿಂಚಾಗಿ ಹೊಳೆವನು |
ವೀರ ಮಾದಿಗ ಹಂಪ ಭಾರಿ ಎಕ್ಕಟಿಗ[ನು]
ಧಾರುಣಿಗಧಿಕ ಸಮರ್ಥ || ೧೯೧ ||

ಇವರಿರ್ವರಿಂದ ತಂದೆನು ಬೊಲ್ಲನ
ಬವರಕ್ಕೆ ನಿಶ್ಯಂಕರಹುದು |
ಭುವನದೊಳಿವರ ಸಾಮರ್ಥ್ಯಕ್ಕೆ ಇದಿರುಂಟೆ
ತ್ರಿವಿಧ ಲೋಕದೊಳು ಕಾಣೆನೆಂದ || ೧೯೨ ||

ಹೋದೆ ನೆಲ್ಲೂರಪುರದ ಗುಂಡಭ್ರಹ್ಮಯ್ಯಗೆ
ಅದಿ ಶರಣರ ಮಠಕೊಲಿದು |
ಭೇದವಿಲ್ಲದೆ ಮುಂದಕ್ಕಡಿಯಿಟ್ಟು ಹೋಗಲು
ಹಾದಿಲಿ ಕಂಡಿದಿರಾಗಿ || ೧೯೩ ||

ಆರು ನೀನಾವೂರು ಆರ ಮಗನು ಎಂದು
ಹಾರು ಮಾತಿಂದ ಕೇಳಿದರೆ |
ಧೀರ ಕಂಪಿಲನ ಕುಮಾರನೆಂದುಸುರಲು
ಭೋರನವನು ಎನ್ನನೆತ್ತಿ || ೧೯೪ ||

ಏನು ಕಾರಣ ಬಂದೆ ಚೆನ್ನಿಗ ರಾಮಯ್ಯ ಅ
ದೇನು ಹೇಳಾ ಎನ್ನೊಡನೆ |
ನಾನುಸುರಿದೆನು ಬೊಲ್ಲನ ತಾಹರೆ ಬಂದೆ
ಮಾನವೇಶ್ವರ ಕೇಳಿ ನುಡಿಯೆ || ೧೯೫ ||

ನಂಬಿ ಬೊಲ್ಲನ ಕೊಂಡುಬಂದೆವೀ ತೆರದಿಂದ
ಉನ್ನತ ಹರುಷದೊಳ್ ನಾವು || ೧೯೬ ||

ಬೊಲ್ಲನ ತರಿಸಿ ನೋಡಿದನಾಗ ಕಂಪಿಲ
ಉಲ್ಲಾಸದಿಂದ ಹರುಷದಲಿ |
ಬಲ್ಲಿದ ರಾಮಗೆ ತಕ್ಕಂಥ ವಾಜಿಯು
ಒಲಿದು ಕೊಟ್ಟನು ಜಟ್ಟಂಗೀಶ || ೧೯೭ ||

ದೇವಿಸೆಟ್ಟಿಯ ಲಿಂಗಣ್ಣಗೆ ರಾಮಯ್ಯ
ಭಾವದಿ ಉಡುಗೊರೆಗಳನು |
ಕೋವಿದ ರಾಮಗೆ ಗೆಲ್ಲಿಸಿ ಕರೆತಂದೆ
ಆವ ಜಲ್ಮದ ಗೆಣೆತನವೊ || ೧೯೮ ||

ಸೆಟ್ಟಿ ಲಿಂಗಣ್ಣಗೆ ಕೊಟ್ಟನು ನೀಲನ
ಪಟ್ಟುಪಟ್ಟಾವಳಿಗಳನು |
ಇಟ್ಟನು ಹುರುಮಂಜ ಒಂಟಿಗಳನು ಆಗ
ಕೊಟ್ಟನು ಪದಕ ಸರಪಳಿಯ || ೧೯೯ ||

ಮನ್ನೆಯ ಮಾದಿಗ ಹಂಪಗೆ ಕೊಟ್ಟನು
ಉನ್ನಂತ ದಟ್ಟಿ ಕಬಾಯಿ |
ಹೊನ್ನ ಬಳ್ಳದ ಹತ್ತೆಕಟ್ಟು ಸರಪಳಿಯನು
ಮನ್ನಿಸಿ ಕೊಟ್ಟನುಡುಗೊರೆಯ || ೨೦೦ ||

ಜಗಳವ ಗೆದ್ದು ಬೊಲ್ಲನ ತಂದು ಮುಂದಿಟ್ಟು
ಸೊಗಸಿಂದಲವರು ಕೈ ಮುಗಿಯೆ || ೨೦೧ ||

ಬಂದಿರ ನಿರ್ಮಳದೊಳಗೆ ನೀವೆಲ್ಲರು
ಇಂದೆಮ್ಮ ರಾಮಯ್ಯನೊಡನೆ |
ಸಂದೇಹವ್ಯಾತಕೆ ಗುಜಲೋಬ ಚಿನುಮಾದ
ಮುಂದಾದ ಸುದ್ದಿಯನುಸರೆ || ೨೦೨ ||

ಇಲ್ಲಿಂದ ಹೊರಟು ಹೋದೆವು ಒರ್ಗಲ್ಲಿಗೆ
ಎಲ್ಲ ಮನ್ನೆಯರನು ದಾಂಟಿ |
ಬಲ್ಲಿದ ಪ್ರತಾಪರುದ್ರ ತಾ ಕರೆಸಲು
ಅಲ್ಲಿಗೆ ಹೋದೆವೆಂದೈಸೆ || ೨೦೩ ||

ರಾಮ ಹೋಗಲು ಎದ್ದು ಕುಳಿತನು ಪ್ರತಾಪ
ತಾನು ಮಾಡಿದನು ಉಡುಗೊರೆಯ |
ನೂನವಿಲ್ಲದೆ ಬಿಡಿದಿಯ ಮನೆಯ ಕೊಡಿಸಿದ
ಆನಂದದಲಿ ಹೋಗಿರೆಂದ || ೨೦೪ ||

ಎದ್ದು ಬರುತ ರಾಮಯ್ಯನ ಬಿರಿದುಗಳ
ನಿರ್ಧರದಲಿ ಭಟರ್ಹೊಗಳೆ |
ಇದ್ದಂತೆ ಕೊಂಡಾಡಲು ಕದನ ಹುಟ್ಟಿತು
ಬಿದ್ದರು ನಮ್ಮ ಮೇಲವರು || ೨೦೫ ||

ಹೆಣಮಯ ರಣಮಯವಾಯಿತು ಊರೊಳು
ರಣಕೇರಿ ಬಂದ ಬೊಲ್ಲನನು |
ಸೆಣಸಲು ರಾಮಯ್ಯ ಕಡಿದೇರಿ ಕೊಂದನು
ಅಣಕವನೆಂತು ಪೇಳುವೆನು || ೨೦೬ ||

ಈ ಬಗೆಯಲ್ಲಿ ಕುದುರೆಯನೆತ್ತಿಕೊಂಡು
ಬೇಗ ಹೊರಟು ಬಂದೆವೆನುತ |
ಹೋಗಿ ಬಂದಂಥ ಸುದ್ದಿಯ ಕೇಳಿ ಕಂಪಿಲ
ಆಗ ಸಂತಸಗೊಂಡ ರಾಯ || ೨೦೭ ||

ಮಾನ್ಯರಿಗೆಲ್ಲ ಉಡುಗೊರೆಗಳ ಕೊಟ್ಟು
ಹೊನ್ನು ಹಣವ ಹಂಚಿ ಕೊಟ್ಟು |
ಉನ್ನಂತ ಹರುಷದಿ ಬಿರಿದು ಬಾವುಲಿ ಕೊಟ್ಟು
ಮನ್ನಿಸಿದನು ರಾಯನವರ || ೨೦೮ ||

ಮೂರು ಸಾವಿರ ಬಲ ಮುನ್ನೂರು ವಾಜಿಯು
ಸಾರಿ ರಾಮಯ್ಯನ ಕೊಡೆ |
ಭೇರಿಯ ಹೊಯ್ಯುತ ಬಂದು ಕೈಮುಗಿದರು
ಧಾರುಣಿಪತಿಯು ಕಂಪಿಲಗೆ || ೨೦೯ ||

ತೆರಳಿ ಅಲ್ಲಿಂದ ಮುಂದಕ್ಕೆ ಹೊಳೆಯ ದಾಂಟಿ
ಉರವಣಿಯಲಿ ಹೊಸಮಲೆಗೆ |
ಧುರಧೀರ ಬಾಹದ ಕಂಡು ಹರಿಯಲದೇವಿ
ಹರಿವಾಣದಾರತಿಯ ಪಿಡಿದು || ೨೧೦ ||

ವೀರ ರಾಮಯ್ಯಗಾರತಿಗಳ ತಂದಂಥ
ನಾರಿಯರುಗಳ ಶೃಂಗಾರವ |
ಆರು ಪೊಗಳುವರು ಧಾರುಣಿಯೊಳಗೊರ್ವ
ವಾರಿಜೋದ್ಭವಗಿಂದ್ರಗಳವೆ || ೨೧೧ ||

ಮನ್ನೆಯ ಮಾಂಡಲಿಕರು ಮಂತ್ರಿ ಬೈಚಪ್ಪ
ಅಣ್ಣ ಕಾಟಣ್ಣ ಸಹೋದರರು |
ಚೆನ್ನಾಗಿ ರಾಮಯ್ಯನ ಇದಿರುಗೊಂಡರು ಎಲ್ಲ
ಸನ್ಮತದಿಂದಲಾಕ್ಷಣದಿ || ೨೧೨ ||

ಬಂದ ರಾಮನ ತಬ್ಬಿ ನಿಂದು ಆರತಿ ಎತ್ತಿ
ಕಂದನ ಕೈವಿಡಿದುಕೊಂಡು || ೨೧೩ ||

ಕಳುಹಿದನಣ್ಣ ಕಾಟಣ್ಣನ ರಾಮಯ್ಯ
ಕಳುಹಿದ ಭಾವ ಸಂಗಮನ |
ಕಳುಹಿದ ಮಂತ್ರಿ ಬೈಚಪ್ಪನ ಬೇಗದಿ
ಕಳುಹಿದ ಮನ್ನೆಯರುಗಳ || ೨೧೪ ||

ತನ್ನೊಡನಿತ್ತ ಬಂದವರಿಗೆ ಮನೆಗಳ
ಉನ್ನಿಸಿದನು ರಾಮನಾಥ |
ಮನ್ನಿಸಿ ಕಳುಹಿದ ಮನ್ನೆಯರೆಲ್ಲರ
ಭಿನ್ನವಿಲ್ಲದೆ ಅರಮನೆಗೆ || ೨೧೫ ||

ಚಿನುಮಯ ರೂಪ ಜಟ್ಟಂಗಿರಾಮನೆ ಗತಿ
ಎನುತ ಹೊಕ್ಕನು ಅರಮನೆಯ || ೨೧೬ ||

ತನ್ನರಮನೆಯ ಹೊಕ್ಕನು ರಾಮನಾಥನು
ಪನ್ನಗಂಧರ ಗತಿಯೆನುತ |
ಭಿನ್ನವಿಲ್ಲದೆ ಭೋಜನ ಮಾಡಿ ರಾಮಯ್ಯ
ಮನ್ನಿಸಿ ಸತಿಯರೆಲ್ಲರನು || ೨೧೭ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳು ಬೊಲ್ಲನನು |
ಇರದೆ ಬೊಲ್ಲನ ತಂದು ಮೆರೆವ ಜಟ್ಟಂಗಿ
ವರದಿಂದ ನೀನಹುದೊ ಎಂದು || ೨೧೮ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಕದನವ ಗೆದ್ದು ಬೊಲ್ಲನ ತಂದ ರಾಮ
ಪದಗಳು ಪೂರಾಯ್ತು ಮುಂದೆ || ೨೧೯ ||

ಅಂತು ಸಂಧಿ ೮ಕ್ಕಂ ಪದನು ೭೨೮ಕ್ಕಂ ಮಂಗಳ ಮಹಾಶ್ರೀ