ಶ್ರೀ ಗಿರಿಜಾ[ಸ್ಯಾಂಬುಜ ದಿನ]ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||

ರಾಮನ ನೆನೆ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆನೆ ಕಂಡ್ಯಾ ತನುವೆ |
ರಾಮರಾಮಾ ಎಂಬ ನಾಮವ ನೆನೆದರೆ
ಕಾಮಿತ ಫಲವೀವ ರಾಮ || ೨ ||

ಹೇಳಿದ ಕಂಪಿಲರಾಯಗೆ ಮಂತ್ರೀಶ
ಮೇಳೈಸೊ ದುರ್ಗಸ ರಣೆಯ |
ಕಾಳಗಕನುವ ಮಾಡಿಸೊ ಕಂಪಿಲಭೂಪ
ಹಾಳಾಯಿತಿನ್ನು ಕುಮ್ಮಟವು || ೩ ||

ನಳಿನಪತ್ರದೊಳಿಹ ಜಲದಂತೆ ಕುಮ್ಮಟ
ಕಳವಳಿಸುತ ಭಯಗೊಂಡು |
ತಳಮಳಗೊಳುತ ಕಂಪಿಲಗೆ ಹೇಳಿದ ಬಂದು
ಉಳಿಯದು ದುರ್ಗವೆಂದೆನುತ || ೪ ||

ಒಂದು ಸುತ್ತಿನ ಕೋಟೆಯ ತೆಕ್ಕೊಂಡರು
ನಿಂದರು ಹುಲಿಮುಖದೊಳಗೆ |
ಬಂದು ಮೂದಲಿಸಿ ನೇಮಿಯ ಪರಿವಾರವು
ನಿಂದವಂಬಿನ ಮಳೆಗರೆದು || ೫ ||

ಕುಂಭಿನಿಯೊಳಗೆ ತಾ ಬೈಚಪ್ಪನಿಂತೆಂದ
ಇಂಬಿಡೆ ಎನ್ನ ಮುಂದೆ[ಸೆ]ಗೆ |
ಹಂಬಲಿಪರೆ ಕಂಪಭೂ ನೀ[ನೆಂ]ದು
ಕಂಬನಿ [ತೊ]ಡೆದು ಸಂತೈಸಿ || ೬ ||

ಇಂಬಿಡುವೆನು ಎಂದು ಬೈಚಪ್ಪ ನುಡಿದನು
ಕುಂಭಿನಿಗೊಡೆಯ ಎಂದೆನುತ |
ಧೀರ ನೀ ಏಳು ನೆಲೆಯ ಉಪ್ಪರಿಗೇರು
ತೋರುವೆ ಬಲುಗಾಳಗವ || ೭ ||

ಹೆದ್ದೊರೆ ತನಕ ಮುರಿಸುವೆನು ತುರುಕವ ಗಂಡ
ತಿದ್ದುವೆ ರಕುತ ಕಾಲುವೆಯ |
ಗೆದ್ದೆನೆನಿಸಿಕೊಂಬೆನು ಮರುಳ್ಗಳ ಕೈಯ್ಯಲಿ
ಇದ್ದಂತೆ ನೋಡೊ ಕಂಪಿಲನೆ || ೮ ||

ಎಂದು ಕಂಪಿಲನ ಉಪ್ಪರಿಗೆಯನೇರಿಸಿ
ಬಂದು ದುರ್ಗವ ಹೊರಹೊಂಟ |
ಇಂದುಧರನ ರಾಮೇಶನ ಗುಡಿಗಾಗಿ
ಬಂದನು ಮಂತ್ರಿ ಬೈಚಪ್ಪ || ೯ ||

ಭೇರಿ ತಂಬಟೆ ಡೊಳ್ಳು ವಾರಾಣ ಗಿಡಿಬಿಡಿ
ಭೋರಿಡುವವು ವಾದ್ಯಗಳು || ೧೦ ||

ಬಂದನು ಬೇಗ ಪ್ರಧಾನ ಬೈಚಪ್ಪನು
ತಂದು ಕಾಣಿಕೆಯ ಮಡಗಿದನು | ಮುಂದೆ ಜಟ್ಟಂಗಿರಾಮೇಶಗೆ ಮಂತ್ರಿಶ
ಅಂದಡ್ಡಬಿದ್ದು ಕೈಮುಗಿದ || ೧೧ ||
ಏಳ್ನೂರು ಎಪ್ಪತ್ತು ಕೋಣನು ಸಾವಿರ

ಏಳ್ನೂರು ಎಪ್ಪತ್ತು ಕೋಣನು ಸಾವಿರ
ಏಳ್ನೂರು ಕೋಳಿ ಕುರಿಯನು |
ಬಲಿಯ ಆಹಾರ ಕೊಟ್ಟು ಬಂದೆನು ಬೈಚಪ್ಪ
ಏಳಯ್ಯ ರಾಯರಗಂಡ || ೧೨ ||

ತಳಮಳಗೊಂಡು ದುರ್ಗವು ಕಣುಗೆಡುತದೆ
ಚೆಲುವ ಬಾಯೆಂದು ಕರೆಯಲು || ೧೩ ||

ಭಾಷೆಯನಿತ್ತು ಬಂದೆನು ನಿಮ್ಮ ತಂದೆಗೆ
ಭಾಷೆಪಾಲಕ ಚೆನ್ನರಾಮ |
ದೇಶಾಧಿಪತಿ ರಾಮನಿರ್ದ ಬಳಿಗೆ ಬಂದು
ಸಾಸಿರ ಕುರಿಯ ಹೊಯ್ಸಿದನು || ೧೪ ||

ಹರುಷದಿ ಕುರಿ ಕೋಣನ ಬಲಿಯನಿಕ್ಕಿಸಿ
ಭರದಿಂದ ಕರೆದ ಮಂತ್ರೀಶ |
ಕರೆದರೆ ನುಡಿಯದಿರಲು ಕಂಡು ಬೈಚಪ್ಪ
ತಿರಗಿ ಬಂದಾಲಿಸಿ ಕೇಳಿ || ೧೫ ||

ಧರಧೀರ ರಾಮನ ಉಲುಹಿಲ್ಲವೆನುತಲಿ
ಭರದಿಂದ ಕರೆದ ಮಂತ್ರೀಶ || ೧೬ ||

ಚದುರಂಗ ಪಗಡೆಯನಾಡುತ ಪೇಳಿದ
ಮದದಾನೆ ಚೆನ್ನಿಗರಾಮ |
ಮುದದಿಂದ ಕಾಟಣ್ಣನೊಳು ಇಂತೆಂದನು
ಚೆದುರ ಪ್ರಧಾನ ಬಂದಿಹನೆ || ೧೭ ||

ಏನು ಕಾರಣ ಬಂದೆ ಬೈಚಪ್ಪ ನೀನೆಂದು
ತಾನು ಕೇಳಿದನು ರಾಮಯ್ಯ |
ಏನು ಹೇಳುವೆನು ಕುಮಾರ ಚೆನ್ನಿಗರಾಮ
ಹಾನಿ ಬಂದಿದೆ ಕಂಪಿಲಗೆ || ೧೮ ||

ಬಂದ ಹದನ ಹೇಳು ನೀನು ಮಾಜದ ಬೇಗ
ಎಂದು ರಾಮಯ್ಯ ಕೇಳಿದನು |
ಅಂದಿನ ಕಾಲಕ್ಕೆ ಕೊಂದನಲ್ಲವೆ ಕೇಳು
ಇಂದ್ಯಾಕೆ ನಿಮಗೆ ನಮ್ಮಾಸೆ || ೧೯ ||

ಇಂದೊಂದು ತಪ್ಪನು ಕಾಯಯ್ಯ ನಮಗೀಗ
ಸಂದೇಹಬೇಡ ಚಿತ್ತೈಸು || ೨೦ ||

ಸಾಕು ಬೈಚಪ್ಪ ಸಂಸಾರದ ಸುಖ ದುಃಖ
ಬೇಕಿಲ್ಲ ದೊರೆತನ ನಮಗೆ ಕು |
ಹಕು ಮಾಡಿದನು ಹೆಂಡತಿಯ ಮಾತನು ಕೇಳಿ
ನಾಕಜನರು ಬಲ್ಲರೆನುತ || ೨೧ ||

ನೆಲಮಾಳಿಗೆಯಿಂದಿನ್ನೇಳು ಚೆನ್ನಿಗರಾಮ
ಕಳೆಯುಳ್ಳ ಬಿದಿಗೆ ಚಂದ್ರಮನೆ |
ಛಲದಂಕ ತುರುಕರು ನಿಮ್ಮ ತಂದೆಯ ಜೀವ
ಕಳೆವೆವೆನ್ನುತಲಿ ನಿಂದಿಹರೆ || ೨೨ ||

ತಂದೆ ತಾಯಿಗಳಿಲ್ಲ ಬಂಧುಬಳಗವಿಲ್ಲ
ಹಿಂದೆಮುಂದಾರು ಎನಗಿಲ್ಲ |
ಕಂದರ್ಪದಹನ ಜಟ್ಟಂಗಿಲಿಂಗನ ಪಾದ
ಹೊಂದುವುದು ಲೇಸೆಂದ ರಾಮ || ೨೩ ||

ಏಳೋ ಚೆನ್ನಿಗರಾಮ ಏಳೋ ರಾಯರಗಂಡ
ಏಳೋ ಸುರಿತಾಳಮರ್ದನನೆ |
ಏಳಯ್ಯ ಏಳಪ್ಪ ಏಳೋ ಚೆನ್ನಿಗರಾಮ
ಏಳಯ್ಯ ರಣರಂಗಧೀರ || ೨೪ ||

ಕಾಳಮೇಘದವೋಲು ಕವಿದು ತುರುಕರ ದಂಡ
ಹಾಳಮಾಡುವ ಧೀರ ಏಳೋ |
ಏಳದಿದ್ದರೆ ನಿಮ್ಮ ತಂದೆ ಕಂಪಿಲನಾಣೆ
ಕುಲಗುರುವಿನ ಪಾದದಾಣೆ || ೨೫ ||

ಬಲದ ಪಟ್ಟದರಾಣಿ ಹರಿಯಮ್ಮನಾಣೇಳೋ
ಲಾಳವಿಂಡಿಗೆಯ ತೆಗಸಿದೆನು || ೨೬ ||

ನೆರೆದು ಮಂತ್ರಿಯೊಳು ಮಾತಾಡುವ ಸಮಯಕೆ
ಅರಸು ಕಂಪಿಲರಾಯನಿತ್ತ |
ಪುರವ ಮುತ್ತಿದರೆಂಬ ಭರವಸವನು ಪೇಳಿ
ಕರೆಸಿದ ಮಂತ್ರಿಯನರಸ || ೨೭ ||

ಕರೆಯಲಾಕ್ಷಣದಿ ರಾಮಯ್ಯನ ಮುಖವನು
ನೆರೆಗಲಿ ಮಂತ್ರಿ ನೋಡಿದನು |
[ಭರದೆ]ಬೈಚಪ್ಪನ ನುಡಿಗೇಳಿ ರಾಮಯ್ಯ
ಒಂದಾರು ಭುಜವಾಗಿ ಹಿಗ್ಗಿ || ೨೮ ||

ಚಂದದಿಂ ಸಹಿತ ಕಾಟಣ್ಣ ತಾ ಪೊರಮಟ್ಟು
ಅಂದದಿ ನೆಲಮಾಳಿಗೆಯ |
ಎದ್ದು ಬಂದಂಥ ರಾಮಯ್ಯನ ಮುಖನೋಡಿ
ಹೊದ್ದಿ ಬೈಚಪ್ಪ ಮುದ್ದಾಡಿ || ೨೯ ||

ನೆಲಮಾಳಿಗೆ ಬಿಟ್ಟು ಒಡಗೂಡಿ ಬಂದನು
ಛಲದಂಕ ರಾಮಯ್ಯ ನಡೆದ || ೩೦ ||

ತನ್ನೊಡನೈವರು ಮನ್ನೇರು ಸಹವಾಗಿ
ಚೆನ್ನಿಗ ನಡೆದನರ್ತಿಯಲಿ |
ಖಿನ್ನವಿಲ್ಲದೆ ಕಾಟಣ್ಣ ಕೊಳ್ಳಿಯ ನಾಗ
ಚೆನ್ನ ಹಂಪನು [ಸಿಂಗ]ಯ್ಯ || ೩೧ ||

ಕೋವಿದ ಕೊಟಗಾರ ದ್ಯಾವ ರಾಮಯ್ಯನು
ಭಾವಜ ಮಂತ್ರಿ ಬಚಪ್ಪ |
ಗಂಡರಗಂಡನು ಕದನ ಪ್ರಚಂಡ ಮುಂ
ಕೊಂಡು ಬಂದನು ರಾಮನಾಥ || ೩೨ ||

ಕಂದನ ಕವಿಡಿದೈತಂದು ಬೈಚಪ್ಪ
ಬಂದನು ತನ್ನರಮನೆಗೆ |
ಚಂದಚಂದದಲ ಆರತಿಯೆತ್ತಿ ಸ್ತ್ರೀಯರು
ಅಂದದಿಂದಲಿ ಪಾಡಿದರು || ೩೩ ||

ಹರಕೆಯ ಕೈಕೊಂಡು ಬಂದ ಚೆನ್ನಿಗರಾಮ
ತರಿಸಿದ ತನ್ನ ಆಯುಧವ |
ಅರಸು ಕಂಪಿಲನ ಕುಮಾರ ಚೆನ್ನಿಗರಾಮ
ಬರಿಸಿದ ತನ್ನ ವಾರುವನ || ೩೪ ||

ಗಳಿಗೆಯೊಳ್ಯಾಲ ಗಗ್ಗರ ಕೊರಳೊಳ್‌ ಗೆಜ್ಜೆ
ಹೊಳೆವ ಮಾಣಿಕದ ಹಲ್ಲಣವು |
ತಳುಪು ರನ್ನದ ಪಟ್ಟೆ ಮುತ್ತಿನ ಬಾಸಿಂಗ
ಚೆಲುವ ರಾಮುಗನ ವಾರುವಿಗೆ || ೩೫ ||

ಲಕ್ಷ ಕುದುರೆಗಳ ಒಕ್ಕಲಿಕ್ಕುವೆನೆಂದು
ರಕ್ಕಸರಾಯನ ತೇಜಿ |
ಹಕ್ಕರಿಕೆಯ ಮೇಲೆ ಇತ್ತರದಲಿ ಝಲ್ಲಿ
ಕಕ್ಕಸ ಕದನ ಬಲ್ಲೆಯವು || ೩೬ ||

ಬಂದ ಬೊಲ್ಲಗೆ ರಾಮ ಗಂಧ ಅಕ್ಷತೆನಿಟ್ಟು
ವಂದಿಸಿ ಏರಿ ಬೊಲ್ಲನನು |
ಒಡೆಯ ಚೆನ್ನಿಗರಾಮನಹುದೆಂದು ಪೊಡವಿಯೊಳ್‌
ಸಡಗರದಲಿ ಬೊಲ್ಲ ನೋಡಿ || ೩೭ ||

ಆರು ತಿಂಗಳ ಮೇವ ನೀರನೊಲ್ಲದೆ ತಾನು |
[ಧೀರ]ರಾಮನ ಕಾಣದಿರಲು |
ತೋರಿತು ಹರುಷವು ರಾಮನ ತೇಜಿಯು
ಹಾರಿತು ಪಕ್ಷಿಯಂದದಲಿ || ೩೮ ||

ಬೇಗ ರಾಮಯ್ಯಗೆ ಜೋಡು ವಜ್ರಂಗಿಯ
ಆಗ ಬೈಚಪ್ಪನು ತೊಡಿಸಿ |
ರಾಗವಳಿಯ ತಲೆ ಠೌಳಿಯ ಮೊದಲಾಗಿ
ತ್ಯಾಗವು ದೃಷ್ಟಿಗಳೆನುತ || ೩೯ ||

ಕಾಯವ ದಂಡಿಸಿದನು ರಾಮನಾಥನು
ಮಾಯಕಾರನು ಬೈಚಪ್ಪ |
ರಾಯರಾಹುತನೆಂಬ ಪೆಸರವನಿಗೆ ಇತ್ತು
ಆಯತದಲಿ ನಡೆತಂದ || ೪೦ ||

ಎಲ್ಲಿಂದ ಬಂದ ಈ ಮಾನ್ಯ ರಾಹುತನೆಂದು
ಎಲ್ಲರು ಕೇಳಿದರಾಗ |
ಕಲ್ಯಾಣದಿಂದ ಬಂದನು ರಾಹುತನೆಂದು
ಎಲ್ಲಕ್ಕೆ ಪೇಳಿದ ಮಂತ್ರಿ || ೪೧ ||

ಹೊಸದಾಗಿ ಬಂದ ಮಾನ್ಯ ರಾಹುತನಿಗೆ
ವಶಮಾಡಿ ಹಳೆಯ ಮಂದಿಯನು |
ಹೆಸರುಳ್ಳ ಕುದುರೆಯ ಕೊಟ್ಟು ಪೌಜನೆ ಮಾಡಿ
ಸಸಿಮಾವಿನ ಮರದಡಿಯ || ೪೨ ||

ಶೃಂಗಾದೋಟದೊಳಗೆ ನಿಲ್ಲಿಸಿ ಮಂತ್ರಿ
ಕಂಗಳ ಬೊಲ್ಲನ ತರಿಸಿ || ೪೩ ||

ಕರೆಸಿದ ಮಾನ್ಯರನರಸಿದ ರಾಮನ
ತರಿಸಿದ ಗಂಧ ವೀಳ್ಯಯವ |
ಸುರಿತಾಳನ ಮಂತ್ರಿ ನೇಮಿಯ ದಂಡಿಗೆ
ಇರಿಸಿದ ಇದಿರು ಪೌಜುಗಳ || ೪೪ ||

ದೇವಿಸೆಟ್ಟಿಯ ಲಿಂಗ ಬೇವಿನ ಸಿಂಗಯ್ಯ
ಭಾವಸಂಗಮ ಹಾರೋ ಲಿಂಗ |
ಕೋವಿದ ಕೊಟಗರ ದ್ಯಾವನು ಇರುಪನು
ಹಾವಳಿಕಾರ ಹಂಪಯ್ಯ || ೪೫ ||

ಮಾದಿಗ ಹಂಪನು ಮುದುಗೊಂಡ ಲೋಭನು
ಸಾಧನೆ ಬಸವರಾಜಯ್ಯ |
ಭೇದವಿಲ್ಲದೆ ಬಂದ ಬಾದೂರಖಾನನು
ಮೂದಲಿಸುತ ಭಟರುಗಳು || ೪೬ ||

ಎನುಮಾಲ ಚಿತ್ತನು ಎರಬೋತು ಗಂಗನು
ಮನಕೆ ಬೆಟ್ಟದ ಸಿಂಗನವರು |
ಮರುಳೆಯ ಪಾಪನು ಬೂಟಕ ಬೊಮ್ಮನು
ಉರಿವ ಕೊಳ್ಳಿಯ ನಾಗಣ್ಣ || ೪೭ ||

ಹೊಸತಾಗಿ ಬಂದಂಥ ರಾಯರಾಹುತನಿಗೆ
ವಶಮಾಡಿ ಹಳೆಯ ಮಂದಿಯನು || ೪೮ ||

ತಿರುಗಿಬಂದನು ಮಂತ್ರಿ ಬೈಚಪ್ಪ ಆಗಲೆ
ಅರಸು ಕಂಪಿಲರಾಯನೆಡೆಗೆ |
ಬರಹೇಳು ನಿನ್ನ ಮಂದಿ ಕುದುರೆಯನೆಲ್ಲ
ಧುರಕಿದಿರಾದ ಮನ್ನೆಯರ || ೪೯ ||

ನೋಡು ಕಂಪಿಲ ನಿನ್ನೊಳಾಡಿದ ಮಾತಿಗೆ
ನಾಡೊಳು ಹೊಸ ರಾಹುತನ |
ತಳಮಳಗೊಂಡು ದುರ್ಗವು ಕಣುಗೆಡುತದೆ
ಚೆಲುವನೆ ಬಾಯೆಂದು ಕರೆಯೆ || ೫೦ ||

ಗಾಢದಿ ತಪ್ಪನೆ ತಂದೆನೊ ಭೂಪಾಲ
ನೋಡು ನಿನ್ನಯ ಮನದಣಿಯೆ || ೫೧ ||

ರಾಮನ ಪೋಲ್ವರ ಭೂಮಿಯೊಳ್ಕಾಣೆನೊ
ಸೀಮೆಯೊಳಪ್ರತಿವೀರ |
ತಾಮಸ ಮಾಳ್ಪನೆ ದಳವ ಕಂಡರೆ ಅಂಥ
ರಾಮನೆಂದಿಗೆ ಪುಟ್ಟುವನೊ || ೫೨ ||

ಪೊಡವಿಗೆ ಒಡೆಯ ಕಂಪಿಲರಾಯ ತನ್ನಯ
ಒಡನೆ ಎಕ್ಕಟಿಗರ ಕರೆಸಿ |
ಕಡುಗಲಿ ನೇಮಿಯ ಬಲವ ತರಿವೆನೆಂದು
ನಡೆದರು ರಾಯ ಮನ್ನೆಯರು || ೫೩ ||

ಪೊಡವಿಯೊಳಗೆ ಅರಿರಾಯಮರ್ದನನೆಂದು
ಹೊಡೆದರು ರಾಯಭೇರಿಯನು |
ಕಡುಗಲಿ ಅಬ್ದುಲಖಾನ ನಡೆದ ಮುಂದೆ
ತಡೆಯದೆ ಹೆಬ್ಬಾಗಿಲೊಳಗೆ || ೫೪ ||

ಹೆಬ್ಬಾಗಿಲನು ತೆಗೆಸಿದನು ಅಬ್ದುಲಖಾನ
ಉಬ್ಬಿತು ಸಾವಿರ ಗಜವು || ೫೫ ||

ಬಾಗಿಲ ಹೊರಹೊಂಟು ಏರಿ ತುರುಕರ ಮೇಲೆ
ಸಾಗರದೊಲು ವಾರುವನು |
ಬೇಗದಿ ಬಂದು ನೂಕಿತು ಹೊಸ ರಾಹುತನ
ಮೂಗ ಸನ್ನೆಯಲಿ ರಾಹುತರು || ೫೬ ||

ಬಾದೂರಖಾನನು ಬರಲು ತುರುಕರ ದಂಡು
ಕ್ರೂರಮಾಡಿತು ತಮ್ಮೊಳಗೆ |
ಕಾದುವೆನೆಂಬ ಸಮಯಕ್ಕೆ ನೇಮಿಯ ದಂಡ
ಮೂದಲಿಸಿದನು ಬಾದೂರ || ೫೭ ||

ಹೋಗದಿರೆಲೊ ಹೇಡಿಗಳಿರಾ ನೀವೆಂದು
ಆಗ ಹೊಕ್ಕನು ಬಾದೂರನು |
ಸಾಗಿ ಐದಾರೇಳು ಸಾವಿರ ಗಜವಿಂಡು
ಬೇಗ ನೇಮಿಯಖಾನನೊಡನೆ || ೫೮ ||

ಭಾಪುಭಾಪುರೆ ಮಝರೆ ಧೀರ ಬಾದೂರ
ಕೋಪವ್ಯಾತಕೆ ನಿಮ್ಮೊಡನೆ |
ಈ ಪರಿ ಕದನವ ನೇಮಿಖಾನನ ಕೂಡೆ
ತಾ ಪಿರಿದೆನಿಸಿಕೊಂಡಿಹನು || ೫೯ ||

ಹಿಂದಣ ಭಯ ಬಂದಿತೆಂದು ನೇಮಿಯಖಾನ
ಮಂದಿಯ ಮುಖವ ನೋಡಿ |
ಇಂದುವ ರಾಮ ಸತ್ತುದು ಸಟೆಯನುತಲಿ
ಬಂದನು ಕದನಕ್ಕೆ ನೇಮಿ || ೬೦ ||

ಏರಿತು ನಾಲ್ಕು ಪೌಜನುಮಾಡಿ ಕಂಪಿಲನ
ವೀರಮಾನ್ಯಯರುರವಣಿಸಿ |
ತೋರುತ ಸಾಹಸಗಳ ವೈರಿಶಿರಗಳ
ತೂರುತ ನಡೆದರೊಂದೆಸೆಯ || ೬೧ ||

ಒಂದೆಸೆಯಲ್ಲಿ ಹೊಸರಾಹುತನ ಪರಿವಾರ
ಒಂದು ಕಡೆಯಲ್ಲಿ ಕಂಪಿಲನ |
ಮುಂದೆ ಮನ್ನೆಯರೊಂದು ಕಡೆಯಲ್ಲಿ ಸವರುತ
ಬಂದು ನಿಂದನು ರಾಮನಾಥ || ೬೨ ||

ಬಲಿದು ತೊಡೆಯನೊತ್ತಲು ಕಲಹ ದಾಂಟಿತು
ಕಲಿ ಕಾದ ಕೈಯ್ಯನೆತ್ತಿದನು || ೬೩ ||

ಎತ್ತ ನೋಡಿದಡತ್ತ ಬಾಯನು ತೆರವುತ
ಮತ್ತೆ ರಾಮಯ್ಯನ ತೇಜಿ |
ಕತ್ತಿಯ ಕಿತ್ತು ಜಡೆಯ ಬೋಳೈಸಿ [ದ]
ಮೃತ್ಯುಂಜಯ ಜಯವೆನುತ || ೬೪ ||

ಬೊಲ್ಲನ ಏರಿ ದೂವಾಳಿಸಿ ರಾಮಯ್ಯ
ಮಲ್ಲಖಾನರನು ಎಲ್ಲರನು |
ಕೊಲ್ಲುತ ತತ್ತರದರಿವುತ ರಣದೊಳು
ಬಲ್ಲೆಯದಲಿ ತಿವಿತಿವಿದ || ೬೫ ||

ಚಪ್ಪೆಲು ಮುರಿದು ನಿಟ್ಟೆಲು ಮೊಲೆ ಖಂಡ್ರಿಸಿ
ಇಬ್ಬರೊಂದಾಗಿ ಹೊಯ್ದಾಡಿ |
ರಣದೊಳು ರಾಮನಲ್ಲದೆ ಹೀಗೆ ಕಾದುವ
ಬಣಗರಿಗೆಲ್ಲಿಯದೈಸೆ || ೬೬ ||

ಆ ಬರವಿಂಗೆ ತಲೆ ಹೊಡೆದರೆ ಖಂಡ್ರಿಸಿ
ಕುಪ್ಪಳಿಸುತ ಕಾಲು ಮುರಿದು |
ಒಪ್ಪ ನೇಮಿಯ ದಂಡನೆಲ್ಲ ಸಂಹರ ಮಾಡಿ
ಕುಪ್ಪೆಯನೊಟ್ಟಿದಂತಾಯ್ತು || ೬೭ ||

ಹಣಿವನೆ ತುರುಕರ ದಂಡಿಗೆ ಇವನೆಂದು
ಎನಿಸಿಕೊಂಡರು ಜಾಣರುಗಳು || ೬೮ ||

ಸಾವಿರಕೊಬ್ಬ ರಣವ ಹೊಕ್ಕು ಕಡಿವನು
ಇವನಾರು ಎನುತ ರಣದೊಳಗೆ |
ವಿವರಿಸಿ ನೋಡಲು ಇವ ರಾಮನೆನುತಲಿ
ಕವಿದು ಕಂಗೆಟ್ಟು ನೋಡಿದರು || ೬೯ ||

ವಾದಿಸುವರು ರಾಮನಹುದೆಂದು ಮನದೊಳು
ಭೇದಿಸುವರು ಜೂಜನಾಡಿ |
ಮೂದಲಿಸಿಯೆ ಮಾತನಾಡಲಮ್ಮರು ಅವ
ಕಾದುವ ತೋಟಿಯ ನೋಡಿ || ೭೦ ||

ಕನ್ನವನಿಕ್ಕಿ ಕಳ್ಳನು ಮನೆಯನು ಹೊಕ್ಕು
ಕೆಮ್ಮಿದಂತಾಯಿತು ನೇಮಿ |
ಇನ್ನೇನು ಹೋದೆನೆಂದರೆ ರಾಮ ಬಿಡುವನೆ
ಎನ್ನುತಿರ್ದರು ತಮತಮಗೆ || ೭೧ ||

ಪೊಡವಿಪ ನೇಮಿಯ ಎಡಬಲದೊಳಗಿರ್ದ
ಕಡುಗಲಿ ವೀರ ರಾಹುತರು |
ತಡೆಯದೆ ರಾಮನ ಕಡಿದು ಶಿರವ ಬೇಗ
ಬಿಡದೆಮಪುರಕೆ ಕಾಣಿಪೆವು || ೭೨ ||

ಕುಡುಗಲಿ ರಾಮನ ಹೊಡೆವೆವು ರಣದೊಳು
ಒಡನೆ ಬಾದೂರನೆಂಬವ[ನ] |
ಹೆಡಗಯ್ಯ ಕಟ್ಟಿ ತರುವೆವು ಬಾದೂರನೆಂದು ತ
ಮ್ಮೊಡೆಯನ ಬೆಸನ ಬೇಡಿದರು || ೭೩ ||

ತಟ್ಟನೆ ಕವಿದು ಕಾರ್ಮುಗಿಲಂತೆ ಖಾನನು
ನೆಟ್ಟನೆ ಸೇರಿ ನಿಂದೆಸೆಯೆ |
ತಟ್ಟನೆ ರಾಮನು ಅದ ಕಂಡು ಜೇಯೆಂದು
ತಟ್ಟಿದ ಕುದುರೆ ಕಂಧರವ || ೭೪ ||

ಏರಿ ಬೊಲ್ಲನ ರಾಮ ಸೇರುವೆಯನು ಕೂಡಿ
ಧೀರ ಮನ್ನೆಯರನು ಕರೆಸೆ |
ವಾರಣ ತುರಗ ಕಾಲಾಳು ಮನ್ನೆಯರೆಲ್ಲ
ಭೋರನೇರದರಿದಿರಾಗಿ || ೭೫ ||

ಸುರಿತಾಳನ ಮಂತ್ರಿ ನೇಮಿಖಾನನ ಮೇಲೆ
ಉರುವಣಿಸುತಲಿದಿರಾಗಿ |
ಭರದಿಂದಲೇರಿಸು ಕುದುರೆ ಕಾಲಾಳೆಲ್ಲ
ಕರಿಘಟೆಗಳು ಇದಿರಾಗಿ || ೭೬ ||

ಧುರಧೀರ ರಾಮನ ಬೊಲ್ಲನು ರಣದೊಳು
ತುರುಗಗಳನು ಸದೆಬಡೆದು |
ಪರಬಲದಿದಿರಿಲಿ ನೆರೆದು ಪೌಜನು ಮಾಡಿ
ಸರಿ ಪೆಟ್ಟಿನಲ್ಲಿ ಹೊಯ್ದಾಡಿ || ೭೭ ||

ಆರೆ ರಾವುತ ಮಝರೆ ತುಂಬೂರಖಾನ
ಸರಸದಿ ನಿಲ್ಲುನಿಲ್ಲೆನುತ |
ಹತ್ತೆಂಟು ಸಾವಿರ ಚತುರಂಗ ಬಲಕೂಡಿ
ಮುದದಿ ಮೂದಲಿಸಿ ರಾಮಯ್ಯ || ೭೮ ||

ಕದನಕ್ಕೆ ಖಡ್ಗವ ಝಳ್ಪಿಸಿ ಮನ್ನೇರು
ಒದಗಿತು ರಾಮಯ್ಯನೊಡನೆ |
ಸಿಕ್ಕಿತು ಊರದಲ್ಲಿ ಬೆನ್ನಲುಗಿದು ಬೀಳೆ
ಒಕ್ಕಲಿಕ್ಕುತ ಅರಿಬಲವ || ೭೯ ||

ಒಡೆದುದು ನಡುಬೆನ್ನು ಕುಡಿಯಳ್ಳೆ ತೊಡೆಗಳು
ಕಡೆಗೆ ನೆತ್ತಿಯ ಚಿಪ್ಪು ಹಾರಿ |
ತಡೆಯದೆ ಗೋಣ ಖಂಡ್ರಿಸಿ ನೆಲದೊಳು ಬೀಳೆ
ಕಡುಗಲಿ ತುಂಬೂರನಳಿದ || ೮೦ ||

ಅರರೆ ತುಂಬೂರಖಾನನಳಿದನೆಂದು ಪರಿ
ವಾರ ಒದಗಿತು ಹುಯ್ಯಲ ಕಾಳಗಕೆ || ೮೧ ||

ಮತ್ತೆ ಮುರಿದು ತಿರುಗಿತು ಹರಿಗೆಯ ಬಲ
ಸುತ್ತಲಡ್ಡೈಸಿ ರಾಮಯ್ನ |
ಮುತ್ತಿಕೊಂಡರು ರಾಮ ಸಿಕ್ಕಿದನೆನುತಲಿ
ಹತ್ತಿತ್ತು ಉರವಣಿಗೆಯಲಿ || ೮೨ ||

ಹರಿಗೆಯ ಬಲವನಬ್ಬರಿಸಿ ಹೊಯ್ಯಲು ರಾಮ
ಹರಿದು ಮಿದುಳು ಚಿಪ್ಪುವೊಡೆದು |
ಕರುಳು ಹರಿದು ಕಾಳಿಜ ತಂಡು ತುಂಡಾಗಿ
ಮರುಳು ಭೂತಕೆ ಉಣಿಸಿದರು || ೮೩ ||

ಹಬ್ಬವಾಯಿತು ರಣಭೂತಪ್ರೇತಗಳಿಗೆ
ಬೊಬ್ಬಿಡುವರು ತಮತಮಗೆ || ೮೪ ||

ರಾಮನು ಸತ್ತ ಸುದ್ದಿಯ ಕೇಳಿ ಬಂದೆವು
ಸೀಮೆಯ ಮೆಟ್ಟಿದೆವು ನಾವು |
ಭೂಮಿಯ ಬಗೆದು ಹೊಕ್ಕರೆ ನಮ್ಮ ಬಿಡನೆಂದು
ನೇಮಿ ಚಿಂತಿಸಿ ತಿರುಗಿದನು || ೮೫ ||

ಕತ್ತಿಯ ಬೆಳಕ ರೂಪಿಗೆ ರೂಪನು ಕಂಡು
ಮತ್ತೆ ಬಂದನು ರಾಮನೆನುತ |
ಹುತ್ತವನ್ನೇರಿ ಹುಲ್ಲನೆ ಕಚ್ಚಿ ತುರುಕರು
ಬತ್ತಲೆ ಪರಿದು ಓಡಿದರು || ೮೬ ||

ಅಟ್ಟ ಬೆಟ್ಟವು ಗವಿಗಳ ಗಹ್ವರ ಬಿದ್ದು
ಬಟ್ಟೆ ಕಾಣದೆ ಓಡಿದರು |
ಅಟ್ಟಿ ಹೆದ್ದೊರೆಯ ತನಕಲು ರಾಮಯ್ಯನು
ಗಟ್ಟಿಸಿ ಬೊಲ್ಲನ ತಟ್ಟಿದನು || ೮೭ ||

ತೊರಗಲ್ಲು ಬಾದಾಮಿಯ ಊರ ಮುಂದಲ್ಲಿ
ತುರಗವನಿಳಿದ ಬಾದೂರ |
ಮುರಿದೋಡಿಹೋದ ಬಲವ ಕಂಡು ಕಂಪಿಲ
ಕರೆಸೆಂದ ಬೈಚಪ್ಪನೊಡನೆ || ೮೮ ||

ಕಂಡ ಕಂಪಿಲ ಉಪ್ಪರಿಗೆಯೊಳಗೆ ಇರ್ದು
ದಂಡ ಬಿಟ್ಟೋಡುವರ ನೋಡಿ |
ಚಂಡವಿಕ್ರಮ ಬೈಚಪ್ಪನೊಳಿಂತೆಂದ
ಕಂಡೆನೊ ಹೊಸ ರಾಹುತನ || ೮೯ ||

ಧೀರನಹುದು ನಿನ್ನಯ ಬಂಟ ಬೈಚಪ್ಪ
ವೀರನಹುದು ರಣದೊಳಗೆ |
ಹೇರಿದ ನೇಮಿಯ ಮೇಲೆ ಕೂರ್ಗಣೆಗಳ
ತೋರಿದ ಕೈಯ್ಯ ಚಳಕವ || ೯೦ ||

ರಾಮನಲ್ಲದೆ ರಣದೊಳು ಕಾದುವರಿಲ್ಲ
ಪ್ರೇಮದಿ ಎನ್ನೊಳಗುಸುರೊ |
ಆ ಮಹಾ ಸುರಿತಾಳ ರಾಯಮರ್ದನನೆಂದು
ಭೂಮಿಪ ಕಂಪಿಲ ನುಡಿದ || ೯೧ ||

ಸತ್ತವರೆದ್ದು ಬಹರೆ ಕೇಳು ಕಂಪಿಲ
ಮೃತ್ಯು ನುಂಗಿದ ತುತ್ತು ಬಹುದೆ |
ಮತ್ತೊಬ್ಬ ಹೊಸ ರಾಹುತನೆಂದು ಬೈಚಪ್ಪ
ಪೃಥ್ವಿಪಾಲಕಗೆ ಹೇಳಿದನು || ೯೨ ||

ಅವನ ಕರೆಸು ಮಂತ್ರಿ ದಳದುಳಿಕಾರನ
ಅವನ ಕರೆಸು ನಿನ್ನವನ |
ಅವನ ಕರೆಸೊ ಮಂತ್ರಿಗಳ ಶಿರೋಮಣಿಯೆ
ಅವನ ಕರೆಸು ಕರೆಸೆಂದ || ೯೩ ||

ಹಿಂದಕೆ ಐದಾರು ಗಾವುದ ಅಟ್ಟಿ ರಾಮಯ್ಯ
ಬಂದನು ತನ್ನ ಕುಮ್ಮಟಕೆ |
ಸಂದೇಹವಿಲ್ಲದೆ ಕಂಪಿಲರಾಯನ
ಕಂದ ರಾಮಯ್ಯ [ನು] ಭರದಿ || ೯೪ ||

ಬೆಳ್ಳಿ ಕಾಲಾಟದ ಕುದುರೆಯನೇರಿದ
ಮೆಲ್ಲನೊಂದೆರಡು ಪೇರಿಯನು |
ಬಲ್ಲ ಪರಿಯಲ್ಲಿ ಪೇರಿಯಮಾ [ಡೆ] ತೇಜಿಯ
ಅಲ್ಲಿ ಸಂಶಯವು ಕಂಪಿಲಗೆ || ೯೫ ||

ಕರೆಯಲಟ್ಟಿದನು ಬೈಚಪ್ಪ ಪ್ರಧಾನನು
ಅರಸು ಕಂಪಿಲರಾಯನೆಡೆಗೆ |
ಬರಹೇಳು ಕಂಪಿಲಭೂಪನ ಎನ್ನಲು ಸ
ತ್ಕರಿಸಿ ತೇಜಿಯ ರಾಮನಿಳಿದ || ೯೬ ||

ಭರದಿಂದ ಬಂದು ತಂದೆಗೆ ಕಾಣಿಕೆಯಿಟ್ಟು
ಸೆರೆಯ ಹಿಡಿದವರ ಒಪ್ಪಿಸಲು |
ಧುರಧೀರ ಕಂಪಿಲರಾಯನು ಮನಮೆಚ್ಚಿ
ಧರೆಯೊಳಿವಗೆ ಎಣೆಗಾಣೆ || ೯೭ ||

ತಲೆಯ ಠೌಳಿಯ ವಜ್ರಾಂಗಿಯ ತೆಗೆತೆಗೆ
ಚೆಲುವರ  ಗಂಡನೆ ನೀನು |
ಕಲಿಗಳರಸೆ ಏಳು ತಿಂಗಳು ಕಾಣೆವು ಸುಲಭ
ರಾಮಯ್ಯ ಮುಖದೋರೊ || ೯೮ ||

ಎನಲು ತಲೆಯ ಮೇಲೆ ಠೌಳಿಯ ತೆಗೆಯಲು
ತನುಜನ ಮುಖ ನೋಡಿದನು || ೯೯ ||

ಮಗನ ಮುಖವ ನೋಡಿ ಬಾಯೊಳು ಬಾಯಿಟ್ಟು
ಮಿಗೆ ದುಃಖಮಾಡಿ ಕಂಪಿಲನು |
ಒಗುವ ಕಂಬನಿದುಂಬೆ ರಾಮನ ಮೋಹದ
ಬಗೆಯ ನಾನೇನ ಪೇಳುವೆನು || ೧೦೦ ||

ತಂದೆ ಕಂಪಿಲನ ದುಃಖವ ನೋಡಿ ರಾಮಯ್ಯ
ಇಂದೊಂದ ನುಡಿದ ಮೇಲ್ಮಾತ
ಸಂದೇಹವ್ಯಾಕೆನ್ನ ಮನಸನು ಕಾಣದೆ
ಕೊಂದೆಯೊ ಚಿಕ್ಕಮ್ಮಗಾಗಿ || ೧೦೧ ||

ರಕ್ತ ಕಾಯವ ತೊಳೆಸಿ ಕಂಪಿಲರಾಯ
ಉತ್ತುಮ ವಜ್ರಾಂಗಿ ತೊಡಿಸಿ |
ಹತ್ತು ಸಾವಿರ ಹೊನ್ನ ದಾನಧರ್ಮವ ಮಾಡಿ
ಮುತ್ತ ನಿವಾಳಿಯ ಚೆಲ್ಲಿ || ೧೦೨ ||

ಎನಲೇಳುತ ಬೀಳುತ ಹರಿಯಮ್ಮ ಆ
ಮನುಜನಿಗೆ ಹಿಡಿಹೊನ್ನ |
ಕಂದನ ನೋಡಬೇಕೆನುತಲಿ ಹರಿಯಮ್ಮ
ಬಂದಳು ಅಂದಣವೇರಿ || ೧೦೩ ||

ಏಳು ತಿಂಗಳು ನಿನ್ನ ಮುಖವ ಕಾಣೆನೊ ರಾಮ
ಬಾಳುವ ಕಾಲವ ಮರೆದೆ |
ಹೇಳುವುದೇನು ವಿಧಿಯಿಂದ ಹರಿಯಮ್ಮ
ಗೋಳಿಟ್ಟು ಮರುಗಿ [ನುಡಿದಳು] || ೧೦೪ ||

ಅಕ್ಕ ಮಾರಮ್ಮನು ಕರ ಮಿಗೆ ಕಂಬನಿ
ಒಕ್ಕಳು ದುಃಖದೊಳಾಗ |
ತಂಗಿ ಸಿಂಗಮ್ಮ ಅಳಲುವ ಸಮಯಕ್ಕೆ
[ಬಿ]ನ್ನನೆ ರಾಮಲದೇವಿ || ೧೦೫ ||

ಸಂಗಡ ನಾಲ್ಕೈದು ಸವತೇರು ಸಹವಾಗಿ
ಪಾದಂಘ್ರಿಗಳಿಗೆ ಎರಗಿದರು |
ಎರಗಲೆಬ್ಬಿಸಿ ಸತಿಯರ ರಾಮನಾಥನು
ಕರ ಮೋಹಿಸಿದನಾಕ್ಷಣದಿ || ೧೦೬ ||

ಎತ್ತಿ ಸಾರುವ ಕಹಳೆಗಳ ಬಿರಿದುಗಳನು
ಇತ್ತ ಕೇಳಿದಳು ರತ್ನಾಜಿ |
ಎತ್ತಳ ಕಹಳೆಯು ನೋಡಿ ಬಾ ಎನುತಲಿ
ತೊತ್ತು ಸಂಗಿಯ ಕಳುಹಿದಳು || ೧೦೭ ||

ತೊತ್ತು ಹರಿದು ಬಂದು ಮೃತ್ಯು ಬಂದಿತು ಎಂದು
ಸತ್ತ ರಾಮುಗ ಬಂದೆನೆನಲು |
ಕಿತ್ತಲಗಿನ ಮೊನೆ ಎದೆಯ ಕೊಳ್ಗೊಂಡಂತೆ
ಚಿತ್ತ ಬೆರಗಾದಳು ರತ್ನಿ || ೧೦೮ ||

ನೋಡು ಸಂಗಾಯಿ ಕಂಪಿಲರಾಯ ಮರೆಮಾಡಿ
ಮಾಡಿದ ಮಾಟವನೆಂದು |
ಹೂಡಿದಳಾಗ ಕೊರಳಿಗೆ ನೇಣುಗಳನು
ಈಡಾಡಿದಳು ಪ್ರಾಣವನು || ೧೦೯ ||

ಕಂಪಿಲನರಸಿ ಭಾವೆ ರತ್ನಾಜಿಯು
ಕೋಪಿಸಿ ಪ್ರಾಣವ ಬಿಡಲು || ೧೧೦ ||

ಒಡತಿ ಸತ್ತುದ ಕಂಡು ಹಡಪದ ಸಂಗಿಯು
ಒಡಲನಿನ್ನೇನ ಹೊರೆವೆನು |
ಕಡಿದುಕೊಂಡಳು ತಾನು ಕಠಾರಿಯ ತೆಕ್ಕೊಂಡು
ಮಡಿದು ಬಿದ್ದುಳು ಸಂಗಿಯತ್ತ || ೧೧೧ ||

ನೆರದಿರ್ದ ಸತಿಯರು ಪರಿದೋಡಿಬಂದರು
ಇರದೆ ಹೇಳಿದರು ಕಂಪಿಲಗೆ |
ಆಗಲೆ ಸತ್ತಳೆಂಬುದ ಕೇಳಿ ಕಂಪಿಲ
ಹೋಗಲಿ ಅವಳು ಪಾತಕಿಯು || ೧೧೨ ||

ಆನೆಯ ಕಾಲಿಗೆ ಕಟ್ಟಿ ಎಳೆಸು ಎಂದು
ನುಡಿದನು ಮಂತ್ರೀಶನೊಡನೆ |
ಯಾತಕೆ ಸತ್ತಳು ಚಿಕ್ಕಮ್ಮನೆನುತಲಿ
ಭೀತಿಗೊಳ್ಳುತ ರಾಮ ಕೇಳಿ || ೧೧೩ ||

ಮನ್ನೆಯ ಮಗುಟವರ್ಧನ ಖಾನಖಾನರು
ಕನ್ನೋಜಿ ಶ್ಯಾನೆ ಮಾರ್ಬಲವು |
ಚೆನ್ನಾಗಿ ತುರುಕರ ಬಲವೆಲ್ಲ ಕಳುಹಿಸಿ
ತನ್ನರಮನೆಯನು ಹೊಕ್ಕ || ೧೧೪ ||

ನೇಮಿ ಬಂದುದ ಕೇಳಿ ಸುರಿತಾಳ ಕಳುಹಿದ
ಸೀಮೆಯೊಳಗಾದ ಕಾರ್ಯವನು |
ಪ್ರೇಮದಿ ಬಂದು ಹೇಳಿದ ತನ್ನ ಸುದ್ದಿಯ
ರಾಮ ಬಂದೆನ್ನ ರಣದೊಳು || ೧೧೫ ||

ಸತ್ತ ರಾಮನು ಎಂತು ನೇಮಿಯ ದಂಡನು
ಮುತ್ತಿಕೊಂಡನು ಎಂಬ ಸುದ್ದಿ |
ಮತ್ತೆ ಕೇಳುತಲಾ ಸುರಿತಾಳ ನೇಮಿಯ
ಒತ್ತಿಗೆ ಕರೆದು ಹೇಳಿದನು || ೧೧೬ ||

ಹೇಗಾಯಿತು ನೀನು ಹೋದ ಸುದ್ದಿಯು ಈಗ
ಬೇಗವೆಮ್ಮೊಡನೆ ಪೇಳೆನಲು |
ಕೂಗಿ ಜಡಿದು ಕುಮ್ಮಟವನು ಮುತ್ತಲು
ಆಗ ವೇಗದಿ ರಾಮ ಬಂದು || ೧೧೭ ||

ಮುತ್ತಿಗೆ ತೆಗೆಸಿ ತತ್ತರ ತರಿದೊಟ್ಟಿದ
ಮೃತ್ಯು ತಾ ಮುರಿದು ಹೊಕ್ಕಂತೆ |
ತಾಳಿದ ಕೋಪದಿ ಪೇಳ್ದ ರತ್ನಾಜಿಯ
ಹಾಳು ಹೆಣನ ತೆಗಸೇಳು || ೧೧೮ ||

ತನ್ನ ಪರಾಣಕೆ ತಾನು ಮುನಿದಳ ಎಳೆತಂದು
ಭಿನ್ನವಿಲ್ಲದೆ ಅಗುಳೊಳಗೆ |
ಅನ್ಯಾಯಕಾತಿಯು ಹೋಗಲೆನುತ ಮಂತ್ರಿ
ಚೆನ್ನಾಗಿ ಎಳೆದು ಹಾಕಿಸಿದ || ೧೧೯ ||

ನೆರದ ಜನರು ಎಲ್ಲ ಪರಿದೋಡಿ ಬಂದಾಗ
ವಿರಸದವಳ ಎಳೆದೊಯ್ದು |
ತಿರುಗಿ ಎಲ್ಲರು ಯಮದೂತರ ಕೈಯೊಳು
ಗುರಿಮಾಡಿ ಪುರಜನರೆಲ್ಲ || ೧೨೦ ||

ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ವಿದಿತ ವಿಶ್ವಾಸದಿ ದೆಶೆ ಅಷ್ಟ ಶೂನ್ಯದ
ಸುದತಿ ಅಳಿದ ಸಂಧಿ ಮುಗಿಯೆ || ೧೨೧ ||

ಅಂತು ಸಂಧಿ ೨೧ಕ್ಕಂ ಪದನು ೨೩೧೭ಕ್ಕಂ ಮಂಗಳ ಮಹಾಶ್ರೀ