ರಾಮನ ನೆನೆ ಕಂಡ್ಯಾ ಮನವೆ ಜಟ್ಟಂಗಿಯ
ರಾಮನ ನೆನೆ ಕಂಡ್ಯಾ ತನುವೆ |
ರಾಮರಾಮಾ ಎಂಬ ನಾಮವ ನೆನೆದರೆ
ಕಾಮಿತ ಫಲವೀವ ರಾಮ || ೧ ||

ನಂದಿವಾಹನರೂಢ ನಾಗಭೂಷಣ [ಹ]ರ
ಕಂದುಗೊರಳ ಸದಾಶಿವನೆ |
ಇಂದುಧರನೆ ಈಶ ಪರಮೇಶ ಉಮೆಯರಸ
ಚಂದ್ರಮೌಳೀಶ ಕೊಡು ಮತಿಯ || ೨ ||

ಉದಯಕಾಲದೊಳೆದ್ದು ಸದರಿಗೆ ಬಂದು ಕಂಪಿಲ
ಮುದದಿಂದ ಮಂತ್ರಿಯ ಕೂಡ |
ಹದನೇನೊ ಮುಂದೆ ಕಾರ್ಯಂಗಳು ಬೈಚಪ್ಪ
ಒದಗೀತು ಮುಂದೆ ಕಾಳಗವು || ೩ ||

ಡಿಳ್ಳಿಯ ಖಾನ ವಜೀರರು ಬಂದಿನ್ನು
ತಳ್ಳಿಯ ಮಾಡಿ ಪೋದುದನು |
ಒಳಿತಾಗಿ ನೀನು ಕಣ್ಣೆಲಿ ಕಂಡೆಲ್ಲ [ವೆ]
ಕಳಬಂಟರ ನೀನು ಕಳುಹೋ || ೪ ||

ಒಳಹೊಕ್ಕು ಹೋಗಿ ಪಟ್ಟಣದೊಳು ಸುದ್ದಿಯ
ಒಳಿತಾಗಿ ತಿಳಿದು ತಾ ಬರಲು |
ಇಳೆಗೆ ಪಾಚ್ಛಾವ ಸುರಿತಾಳನ ಮನಸನು
ತಿಳಿಯಬೇಕೆಂದನು ರಾಯ || ೫ ||

ಇತ್ತ ಮಂತ್ರಿಯ ಕೂಡ ಮಾತಾಡುತಿರಲಾಗ
ಗುತ್ತಿಯ ರಾಯನ ಚರರು |
ಮತ್ತೋಡಿ ಬಂದು ಬಾಗಿಲ ಗೊಲ್ಲರ ಕೂಡೊಂದು
ಅರ್ತಿಯ ಸುದ್ದಿಯ ಪೇಳೆ || ೬ ||

ಬಾಗಿಲ ಗೊಲ್ಲರು ಬಂದಡ್ಡ ಬಿದ್ದರು
ಈಗ ಬಂದರು ಗುತ್ತಿ ಚರರು |
ಸೋಗೆಗಣ್ಣರಸ ರಾಮಯ್ಯನ ಮದುವೆಗೆ
ಸಾಗಿ ಬರುತಾರಂತೆ ರಾಯ || ೭ ||

[ಬಂದಿಹ ಚರರ] ಕರೆಸಿಕೊಂಡನು ರಾಯ
ಇಂದ್ಯಾಕೆ ಬಂದಿರೆಂದೆನುತ |
ಚೆಂದಾಗೆ ಜಗದಪ್ಪ[ನಿಂ]ದ ಸುದ್ದಿಗಳೇನು
ವೊಂದಿಲಿ ಪೇಳಿ ನೀವೆನಲು || ೮ ||

ಮಗಳು ರಾಮಕ್ಕನ ಕೊಡತಕ್ಕ ಮಾತಿಗೆ
ಜಗದೊಳು ತಪ್ಪುವರುಂಟೆ |
ಸೊಗಸಿಂದ ನಾಳೆ ಕೇಳು[ವ] ಸುದ್ದಿಯ [ಇಂದು]
ಜಗದಪ್ಪ ಕಳುಹಿದನರಸೆ || ೯ ||

ಸಂತೋಷದ ಸುದ್ದಿಯ ಕೇಳುತ ರಾಮನ
ಪಂಥವ ನೋಡೊ ಬೈಚಪ್ಪ |
ಬಂದವರಿಗೆ ಉಡುಗೊರೆಯನು ಕೊಡಿಸಿದ
ಅಂದವರನು ಕಳುಹಿದನು || ೧೦ ||

ಹಿಂದಕ್ಕೆ ಚರರೋಡಿ ಬಂದು ಜಗದಪ್ಪಗೆ
ವಂದಿಸಿ ಕರಗಳ ಮುಗಿದು |
ಹೊಂದಿಕಾಯಿತು ನಿಮ್ಮ ಅವರಂತರಂಗವು
ಕುಂದಿಲ್ಲ ಅವರಲ್ಲಿ ಅರಸೆ || ೧೧ ||

ಸಕ್ಕರೆ ಸವಿದಂಥ ಸುದ್ದಿಯ ಕೇಳುತ
ಹೊಕ್ಕನು ಹರುಷ ಸಾಗರವ |
ಅಕ್ಕರೆ ಕುವರ ಉತ್ತುಂಗರಾಯನ ಕರೆದು
ಅಕ್ಕನ ಕೂಡೆ ಹೋಗೆಂದ || ೧೨ ||

ಮಗಳಿಗೆ ಕೊಟ್ಟನು ಮುತ್ತು ಬಂಗಾರವ
ಬಗೆಬಗೆ ಆಭರಣಗಳ |
ಅಗಣಿತವಾದ ಐದೂರು ಉಮ್ಮಳಿಯನು
ಮಗಳ ಮೈದೊಡಿಗೆ ವಸ್ತುಗಳ || ೧೩ ||

ಅಳಿಯಗೆ ಕೊಟ್ಟನು ಮಿಗೆ ಐದು ತೇಜಿಯ
ಬಳುವುಲಿ ಕೊಟ್ಟಾಕಳ ಹಿಂಡ |
ಸೆಳೆಮಂಚ ಕರೆವೆಮ್ಮೆ ಹಿಂಡನೆ ಹೊಡೆಸಿದ
ಒಳಿತಾಗಿ ಕೊಟ್ಟ ಜಗದಪ್ಪ || ೧೪ ||

ಮಗನು ಮಂತ್ರಿಯು ತಿಮ್ಮರಸನ ಕೂಡಿಸಿ
ಜಗದೊಳು ಅತಿ ಪ್ರೀತಿಯಿಂದ |
ಸೊಗಸಾಗಿ ನಿಬ್ಬಣ ಸೋಬನವ ಪಾಡುವ
ಮೃಗನೇತ್ರೆ ನಡೆದ[ಳ]ರ್ತಿಯಲಿ || ೧೫ ||

ತಂದೆಯ ಪಾದಕ್ಕೆ ತಾಯಿ ಪಾದಕೆ ಬಿದ್ದು
ಚಂದಿಸಿ ಕರಗಳ ಮಗಿ[ಯೆ] |
ಸಂದೇಹವ್ಯಾಕಮ್ಮ ತಮ್ಮನು ಬರುತಾನೆ
ಎಂದನು ಜಗದಪ್ಪರಾಯ || ೧೬ ||

ಊಳಿಗದ ಹೆಂಗಳು ನಾಲ್ವತ್ತು ಮಂದಿಯು
ಕಳಸ ಚೌರಿಗಳು ಕನ್ನಡಿಯು |
ಮೇಳವಿಸಿದ ಗಿಂಡಿ [ಹಡಪದ] ಸ್ರ್ರೀಯರ
ಕಳೆಯನಾನೆಂತು ಪೇಳುವೆನು || ೧೭ ||

ಮಂತ್ರಿ ಮನ್ನೆಯರು ಅರಸುಮಕ್ಕಳು ಸಹ
ತಂತ್ರ ವೇದಾಂತ ಪಾಠಕರು |
ಅಂತು ಜೋಯಿಸರು ಸಕಲ ವಿದ್ವಾಂಸರು ಅ
ನಂತ ಕಾಲದ ಹಿರಿಯರುಗಳು || ೧೮ ||

ಸಂಗಾರ ಸಾವಿರ ಕುದುರೆ ಮಂದಿಯ ಕೊಟ್ಟು
ತ್ತುಂಗ[ದ] ತೇಜಿಯ ಕೊಟ್ಟ |
ಶೃಂಗಾರವ ಮಾಡಿ ಕಳುಹಿ ಕೊಟ್ಟನು ಬೇಗ
ಮಂಗಳ ಶುಭಕರವೆನುತ || ೧೯ ||

ಸಾಗಿ ಕಳುಹಿಸಿದನು ಗಾವುದ ದಾರಿಯನು
ಝಾಗಿಸಿ ಹಿಂದಕ್ಕೆ ತಿರುಗಿ |
ಸಾಗಿತು ಪ್ರಯಾಣ ಉತ್ತುಂಗರಾಯನು
ಬೇಗದಿ ನಡೆದ ಕುಮ್ಮಟಕೆ || ೨೦ ||

ಮುಂದಾಗಿ ಚರರನು ಕಳುಹಿಸಿ ಕೊಟ್ಟನು
ಹಿಂದಾಗಿ ಬರುತೆವೆಂದೆನುತ |
ಸಂಧಿಸಿ ಸುದ್ದಿಯ ಪೇಳಿರಿ ನೀವೆಂದು
ಮುಂದಾಗಿ ಆಳ ಕಳುಹಿದನು || ೨೧ ||

ಬಂದ ಸುದ್ದಿಯ ಕೇಳಿ ಕಂಪಿಲ ಕಾಟಣ್ಣ
ಬಂದನು ಹೊಸ ಚಾವಡಿಗೆ |
ಮಂದಿ ಮನ್ನೆಯರು ಕುದುರೆಯ ಪೌಜ ಕರೆಸಿದ
ವೊಂದಿಲಿ ಅರಸುಮಕ್ಕಳನು || ೨೨ ||

ಹಂಪರಾಜನು ಕಂಪರಾಜ ಸಂಗಮದೇವ
ಇಂಪಾದ ದೊರೆಯ ಮಕ್ಕಳನು |
ಸಂಪಿಲಿ ವಂದಿಸಿ ಕರಕೊಂಡು ಕಾಟಣ್ಣ
ಹೊಂಪುಳಿಯಿಂದ ತಾ ಹೊರಟ || ೨೩ ||

ಅರಸುಮಕ್ಕಳು ತಾನು ಆನೆಯನೇರಿ[ಯೆ]
ಪರಿಪರಿ ವಾದ್ಯಗಳಿಂದ |
ಕರಕೊಂಡು ಬರುವ ಸಂಭ್ರಮದಲ್ಲಿ ಕಾಟಣ್ಣ
ಹರುಷದಿ ಹರಿದಾರಿಗಿದಿರ || ೨೪ ||

ಗುತ್ತಿಯ ಉತ್ತುಂಗರಾಯನ ಭೇಟಿಯ
ಅರ್ತಿಲಿ ತೆಕ್ಕೊಂಡ ಕಾಟ |
ಮತ್ತುಡುಗೊರೆ ಮಾಡಿ ಆನೆಯನೇರಿಸಿ
ಒತ್ತಿಲಿ ಕರೆತಂದನವರ || ೨೫ ||

ಸತ್ತಿಗೆ ಸತ್ತಿಗೆ ಸಾಲಿಟ್ಟು ಬರುವಾಗ
ಮುತ್ತಿನ ಸತ್ತಿಗೆ ಕೆಳಗೆ |
ಉತ್ತುಂಗರಾಯನು ಬರುವಂಥ ಸಂಭ್ರಮ
ಅರ್ತಿಯ ನೋಡುತ ಜನರು || ೨೬ ||

ಕನ್ನೆ ನಗಾರಿಯು ಚಿನ್ಗಾಳೆ ವಾದ್ಯದ
ಉನ್ನತ ರಭಸಗಳಿಂದ |
ಮನ್ನೆಯರು ಮಂದಿ ಕುದುರೆ ಎಡಬಲದಲ್ಲಿ
ಚೆನ್ನಾಗಿ ನೋಡುತ ಜನರು || ೨೭ ||

ಪಲ್ಲಕ್ಕಿ ಪಲ್ಲಕ್ಕಿ ಸಾಲಿಟ್ಟು ಬರುವಾಗ
ಎಲ್ಲ ಹೆಂಗಳು ಕೂಡಿಕೊಂಡು |
ನಿಲ್ಲದೆ ರಾಮಲದೇವಿ ತಾ ಬರುವಂಥ
ಉಲ್ಲಾಸವನು ಕಂಡ ಜನರು || ೨೮ ||

ಬಂದನು ಕಾಟಣ್ಣ ಕರಕೊಂಡು ರಾಮಯ್ಯನ
ಮುಂದಣ ಶೃಂಗಾರವನಕೆ |
ಬಗೆಬಗೆ ರತ್ನಪೀಠಂಗಳ ಕಾಟಣ್ಣ ತಂದು
ಇಳುಹಿದನು ಕೋಟೆಗಳ || ೨೯ ||

ಎಂದ ಮಾತನು ಕೇಳಿ ಎದ್ದನು ಕಂಪಿಲ
ಬಂದವರಿಗೆ ಇದಿರ ತಾನು |
ಮಂದಿ ಮಕ್ಕಳ ಕೂಡಿಕೊಂಡು ತಾ ನಡೆದನು
ಬಂದನುತ್ತುಂಗನ ಬಳಿಗೆ || ೩೦ ||

ಎತ್ತ ಉತ್ತುಂಗರಾಯನ ತಬ್ಬಿಕೊಂಡನು
[ಮುದ್ದಾಡಿ]ಮೋಹದಿ ಕುಳಿತು |
ಇದ್ದಂತ ಕ್ಷೇಮ ವಾತೆಗಳನೆಲ್ಲವ ಕೇಳಿ
ಎದ್ದನು ಬೇಗ ಕಂಪಿಲನು || ೩೧ ||

ಉಡುಗೊರೆಯನು ಕೊಟ್ಟ ಉತ್ತುಂಗರಾಯಗೆ
ಒಡನೆದ್ದು ಗಂಧ ಪರಿಮಳವ |
ಕೊಡುವಂತೆ ಮಾಡಿ ಎಬ್ಬಿಸಿಕೊಂಡು ಬಂದನು
ಬಿಡಿದಿಯ ಮನೆಗಾಗಿ ಸಾಗಿ || ೩೧ ||

ಬಂದರು ಬಿಡಿದಿಯ ಮನೆಗಾಗಿ ಕರಕೊಂಡು
ನಿಂದೆರಡು ಕುರಿಯ ಬಾಗಿಲಿಗೆ |
ಬಂಧಿಸಿ ಕಡಿಸಿ ನಿವಾಳಿಯ ತೆಗೆಸಿದ
ಹಿಂದೆ ಹೊಕ್ಕರು ಬಿಡದಿ ಮನೆಯ || ೩೩ ||

ಅಲ್ಲಿ ಕುಳಿತು ಸಮೆದನು ರಾಯರಾಯನು
ಎಲ್ಲ ಉಲುಪೆಗಳ ತರಿಸಿದನು |
ಬಲ್ಲಿದ ಕಂಪಿಲರಾಯಗೆ ಉಡುಗೊರೆ
ವೀಳ್ಯದ ಕೊಟ್ಟ ಉತ್ತುಂಗ || ೩೪ ||

ಬಂದಳು ರಾಮಕ್ಕ ತಂದಳು ಬಳುವುಲಿಯ
ಒಂದಾನೆ ವಾಜಿಗಳೈದು |
ಮುಂದೊಂದು ಹಿಡಿ ತೇಜಿ ಬಲ್ಲೆಯವಂ ಕೂಡಿ
ತಂದೆವು ರಾಮಯ್ಯನೆನಲು || ೩೫ ||

ಆಕಳ ಹಿಂಡು ಎಮ್ಮೆಯ ಹಿಂಡು ಸೆಳೆಮಂದ-
ಗೋಕುಲವಾದುವೈದೂರು |
ಏಕಾತ [ಸೆ]ಳೆಮಂಚ ಲೇಪು ಸುಪ್ಪತ್ತಿಗೆ
ಶ್ರೀಕಾಂತೆ ರಾಮಕ್ಕ ಸಹಿತ || ೩೬ ||

ತಂದೆವು ನಿಮ್ಮ ಬಳಿಗೆ ನಾವು ಮಾವಾಜಿ
ತಂದೆ ಜಗದಪ್ಪ ಕಳುಹಿದನು |
ಹಿಂದುವರಾಯ ರಾಮಯ್ಯನ ಮದುವೆಗೆ
ಬಂದೆವು ಕಂಪಿಲ ಮಾವಾ || ೩೭ ||

ಸೊಸೆಯು ರಾಮಕ್ಕನು ವಂದಿಸಿ ಮಾವಗೆ
ಮುಸುಕ ತೆಗೆದು ಅಡಡಬೀಳೆ |
ಸೊಸೆಯಳ ಮಂಡೆಯೊಳ್ ಕೈಯಿಟ್ಟು ಹರಸಿದ
ಹಸುಮಕ್ಕಳನು ಪಡೆಯೆನುತ || ೩೮ ||

ಕರೆಸಿದನಾಗ ವಿದ್ವಾಂಸ ಜೋಯಿಸರ
ಕರೆಸಿದ ವೇದ ಪಾಠಕರ |
ಕರೆಸಿದ ಶಾಸ್ತ್ರ ಪುರಾಣ ಅವಧಾನಿಗಳ
ಕರೆಸಿದ ಮಾನ್ಯ ಹಿರಿಯರ || ೩೯ ||

ಬಂದ ಶಾಸ್ತ್ರಿಗಳು [ಪಾಠಕರು] ನೀವೆಲ್ಲರು
ಒಂದು ಲಗ್ನವನು ನಿಶ್ಚೈಸಿ |
ಕಂದ ರಾಮಯ್ಯಗೆ ಶುಭ ಮುಹೂರ್ತದೊಳ್ನೀವು
ನಿಂದುಧಾರೆಯನೆರೆಯಿರೆಂದ || ೪೦ ||

ಎಲ್ಲರು ಗುಣಿಸಿಕೊಂಡರು ಲಗ್ನವ ತಾವು
ಒಳ್ಳೆಯ ಬಲುಮೆಯ ದಿನದಿ |
ಎಲ್ಲ ದೋಷಂಗಳ ಕಳೆದು ಉಳಿದದೊಂದು
ಬಲ್ಲಿದ ಲಗ್ನವನಿಟ್ಟು || ೪೧ ||

ಮಾಘ ಶುದ್ಧ ತದಿಗೆಯ ಗುರುವಾರವು
ಯೋಗ ಅಮೃತಸಿದ್ಧಿ ದಿನವು |
ಯೋಗ ಭಾಸ್ಕರ ಉದಿಸಿದ ಹತ್ತು ಗಳಿಗೆಯ
ಸಾಗಿಸೊ ರಾಯ ನೀನೆನಲು || ೪೨ ||

ಇಂದಿಗೈದು ದಿನ ಬಂದಿತು ಲಗ್ನವು
ಚೆಂದದಿ ಮದ[ಲ]ಗಿತ್ತಿಯನು |
ಮುಂದಾಗಿ ಮಾಡಿಸಿ ಎನುತ ಜೋಯಿಸರಿಗೆ
ನಿಂದು ಪೇಳಿದನಾಗ ರಾಯ || ೪೩ ||

ಎಲ್ಲರ ಮನ್ನಿಸಿ ಎದ್ದನಾ ಕಂಪಿಲ
ತನ್ನರ ಮನೆಗಾಗ ನಡೆದ |
ಬಲ್ಲಿದ ಮಂತ್ರಿ ಬೈಚಪ್ಪನ ಕರಕೊಂಡು
ಉಲ್ಲಾಸದಿಂದಿಬ್ಬರು ಕೂಡಿ || ೪೪ ||

ಮದಲಿಂಗನಾಗಲಿ ರಾಮಯ್ಯನೆನುತಲಿ
ಮದುವೆ ಇಂದಿಗೆ ಐದು ದಿನವು |
ಒದಗಾಗಿ ಏಳೆಂದು ಹರಿಯಲದೇವಿಗೆ ಹೇಳಿ
ಕದಲಿದರು ಮಂಚಣ್ಣನ ಮನೆಗೆ || ೪೫ ||

ಬಂದ ರಾಯನ ಕಂಡು ವಂದಿಸಿ ಮಂಚಣ್ಣ
ಇಂದೇನು ಪ್ರಸ್ತವೆಂದೆನಲು |
ಬಂದೆವು ನಿನ್ನ ಮಗಳು ಕಾಮಕ್ಕನ
ಕಂದ ರಾಮಗೆ ಕೊಡಬೇಕು || ೪೬ ||

ಎಂದ ಮಾತನು ಕೇಳಿ ಬಡವರ ಮಕ್ಕಳ
ತಂದುಕೊಂಬುವರೆ ದೊರೆಗಳು |
ಇಂದೈದು ಹೆಣ್ಣು ಮಾಡಲಿಬೇಕು ರಾಮಯ್ಯಗೆ
ಸಂದೇಹವ್ಯಾಕೊ ಮಂಚಣ್ಣ || ೪೭ ||

ಆಗಲಿ ರಾಯ ಒಳಿತಾಯಿತು ನಿಮ್ಮ
ಯೋಗವಿದ್ದಂತೆ ಮಾಡೆನಲು |
ಹಾಗಲ್ಲವೆಂದರೆ ಬಿಡುವನೆ ರಾಮಯ್ಯ
ಸಾಗಿಸಿ ಪ್ರಸ್ತವನೆಂದ || ೪೮ ||

ಅಲ್ಲಿಂದ ವೀಳ್ಯವ ಕೊಟ್ಟು ತಾವು ನಡೆದರು
ಮೆಲ್ಲನೆ ಆರೆಯ ದೊರೆಯ |
ಬಲ್ಲಿದ ಚಾರಮರಾಯನ ಅರಮನೆಗೆ
ನಿಲ್ಲದೆ ಬಂದರು ಆಗ || ೪೯ ||

ರಾಯ ಬಂದುದ ಕಂಡು ಆಲಯ ಬಾಲಯ
ಆಯತದಲಿ ಅಪ್ಪಿಕೊಂಡು |
ಬಾಯೆಂದು ಕರೆದು ಸಾದರಮಾಡಿ ಕುಳಿತಾಗ
ರಾಯರೆ ಬಂದಿರಿಂದ್ಯಾಕೆ || ೫೦ ||

ಹೇಳಯ್ಯ ಮಂತ್ರಿ ನಾವ್ಬಂದಂಥ ಕಾರ್ಯವ
ಕೇಳಲಿ ಚಾರಮರಾಯ |
ಭಾಳ ಪಂಥದಲಿರ್ದ ಜಗದಪ್ಪರಾಯನು
ಮಗಳನು ಕಳುಹಿದನವನು || ೫೧ ||

ಮಗಳು ರಾಮಕ್ಕನ ಮಿಗೆ ಐದು ಕುದುರೆಯ
ಜಗದಪ್ಪರಾಯ ಕಳುಹಿದನು |
ಜಗದೊಳಗೈದು ಹೆಣ್ಣುಗಳ ರಾಮಯ್ಯಗೆ
ಸೊಗಸಿಂದ ನಾವ್ಮಾಡಬೇಕು || ೫೨ ||

ನಿಮ್ಮ ಹೆಮ್ಮಕ್ಕಳ ಇಬ್ಬರ ರಾಮಗೆ
ಮನ್ನಿಸಿ ನೀವ್ಕೊಡಬೇಕು |
ಉನ್ನತ ಹರುಷದಿ ವಿವಾಹ ಮಾಡಲಿಬೇಕು
ಮುನ್ನಿನ ಹಿರಿಯರು ನೀವು || ೫೩ ||

ಜಾತಿ ಭೇದಗಳುಂಟು ನಮಗು ನಿಮಗು ಮಂತ್ರಿ
ಯಾತರ ಮಾತುಗಳಯ್ಯ |
ನೀತಿದಪ್ಪುವರೆ ನೀವು ದೊರೆಗಳು ಬೈಚಪ್ಪ
ಕಾತರ ಮಾತುಗಳ್ಯಾಕೆ || ೫೪ ||

ನಿಮ್ಮ ಬೆಳಸು ನಿಮ್ಮ ಮಗಳ ಮಗ ರಾಮ
ಸುಮ್ಮನಲ್ಲವೊ ಸೋದರಿಕೆ |
ಕಮ್ಮಗೋಲನ ರೂಪ ದೊರೆ ರಾಮಯ್ಯಗೆ
ಒಮ್ಮನದಲಿ ಕೊಡಬೇಕು || ೫೫ ||

ಮಕ್ಕಳ [ಕರೆ]ದನು ಚಾರಮರಾಯನು
ನಕ್ಕನು ಮುಗುಳುನಗೆಯನು |
ಮಿಕ್ಕ ಮಾತುಗಳೇನು ಚೆಲುವ ರಾಮಯ್ಯನು
ಮಕ್ಕಳ ಕೊಡಬೇಕು ನೀವು || ೫೬ ||

ಹಿರಿಯರ ಮಾತಿಗೆ ಕಿರಿದು ಮಾಡುವರುಂಟೆ
ಹಿರಿ ಮಗ ವೆಂಕಟರಾಯ |
ಕಿರಿಯ ಮಗನು ಮಧುಸೂದನರಾಯನು
ಧರೆಯನಾಳುವ ರಾಮಯಗೆ || ೫೭ ||

[ಹಿಂ]ದುವ ರಾಮಗೆ ಒಂದೆ ಮನಸಿನೊಳು
ತಂದೆಯ ಮಾತನು ಕೇಳಿ |
ಬಂದ ಮಾತಿಗೆ ಮಾತ ಕೊಟ್ಟೆವು ಬೈಚಪ್ಪ
ಇಂದು ಪ್ರಸ್ತವ ಮಾಡಿಕೊಳ್ಳಿ || ೫೮ ||

ವೀಳ್ಯವ ಕೊಟ್ಟು ಒಳ್ಳೆಯ ಮಾತ ಕೈಕೊಂಡು
ನಿಲ್ಲದೆ ಬಂದರು ಮನೆಗೆ |
ಮೆಲ್ಲನೆ ಮದ[ಲ]ಗಿತ್ತಿಯ ಮಾಡುವುದಕ್ಕೆ
ಎಲ್ಲರ ಕಳುಹಿದ ರಾಯ || ೫೯ ||

ಮಕ್ಕಳ ಕರಕೊಂಡು ಬರಹೇಳಿ ರಾಯನು
ಪಲ್ಲಕ್ಕಿಯ ಕಳುಹಿದ ಬೇಗ |
ಅಕ್ಕ ಮಾರಮ್ಮ ಸಿಂಗಮ್ಮನವರು ತಾವು
ಗಕ್ಕನೆ ರಾಮಯ್ಯನೆಡೆಗೆ || ೬೦ ||

ಬಂದ ಮಕ್ಕಳ ತಬ್ಬಿಕೊಂಡಳು ಹರಿಯಮ್ಮ
ವಂದನೆ ಮಾಡಿದರವರು |
ಕಂದ ರಾಮಯ್ಯನ ಅರಿಷಿಣ ಎಣ್ಣೆ ಶ್ರೀ
ಗಂಧ ಜಾಜಿಯ ಪೂಮಾಲೆಗಳು || ೬೧ ||

ಅಣ್ಣ ರಾಮಯ್ಯನ ಕರೆದು ಅಕ್ಕರದಿಂದ ಕ
ಮ್ಮೆಣ್ಣೆ ಮಜ್ಜನಗಳ ಮಾಡಿ |
ಬಣ್ಣ ಶೃಂಗಾರದುಡುಗೊರೆ ಕೊಟ್ಟು ರಾಮಗೆ
ಎಣ್ಣೆ ಅರಿಷಿಣವ ಪೂಸಿದರು || ೬೨ ||

ಕರ್ಪೂರದಾರತಿ ಬೆಳಗಿಸಿ ಹರಿಯಮ್ಮ
ಒಪ್ಪದಿ ಶಾಶೆಯನಿಡಿಸಿ |
ಕಪ್ಪುಗೊರಳಸ್ವಾಮಿ ಕರುಣಿಸೊ ರಾಮಗೆ
ಒಪ್ಪಾದ ಹರಕೆಯನಿತ್ತು || ೬೩ ||

ಪಲ್ಲಕ್ಕಿಯನೇರಿ ನಡೆದಳು ಹರಿಯಮ್ಮ
ಮೆಲ್ಲನೆ ಮಂತ್ರಿಯ ಮನೆಗೆ |
ಎಲ್ಲರು ಎದ್ದು ವಂದಿಸಿ ಹರಿಯಮ್ಮಗೆ
ಕುಳ್ಳಿರಿ ನೀವು ಎಂದೆನುತ || ೬೪ ||

ಬಂದ ಪ್ರಸ್ತಗಳೇನು ಇಂದೆಮ್ಮ ತಾಯಿ ಮನೆಗೆ
ಕಂದ ರಾಮಯ್ಯಗೆ ಮಗಳ |
ಒಂದೆ ನೀತಿಯಲಿ ಕೊಡಬೇಕು ತಿಮ್ಮಾಯಿ
ಎಂದು ಕೇಳಿದಳು ಹರಿಯಮ್ಮ || ೬೫ ||

ನಿನ್ನ ಮಾತಿಗೆ ನಾವು ಬದಲುಂಟೆ ಹರಿಯಮ್ಮ
ಕನ್ನೆಯ ಮನದ ನೀತಿಯನು |
ಇನ್ನು ನೀ ಮಾಡಿಕೊ ಹೋಗೆಂದು ಬೈಚಪ್ಪ
ಚೆನ್ನಾಗಿ ಪೇಳಿದನಾಗ || ೬೬ ||

ಮದಲಗಿತ್ತಿಯ ಮಾಡಿ ವೀಳ್ಯ ಉಡುಗೊರೆ ಇತ್ತು
ಕದಲಿ ಮಂಚಣ್ಣನ ಮನೆಗೆ |
ಸುದತಿಗರಿಷಿಣ ಎಣ್ಣೆ ತೀಡಿ ಉಡುಗೊರೆ ಕೊಟ್ಟು
ಒದಗಿ ಬಂದಳು ಚಾರಮನೆಡೆಗೆ || ೬೭ ||

ತಂದೆಯ ಪಾದಕ್ಕೆ ವಂದಿಸಿ ಹರಿಯಮ್ಮ
ನಿಂದಳು ಅತಿ ಹರುಷದಲಿ |
ಕಂದ ರಾಮಯ್ಯಗೆ ಕೊಡು ಮೊಮ್ಮಕ್ಕಳ
ನೆಂದು ಕೇಳಿದಳು ಹರಿಯಮ್ಮ || ೬೮ ||

ಕರೆದನು ಮಮಕಾರದಲಿ ಮೊಮ್ಮಕ್ಕಳ
ಪರನಾರಿ ಸೋದರನೆಂಬ |
ಬಿರಿದು ಧರಿಸಿದ ರಾಮ ಸೋಮಾಯಿ ಭಿಮಾಯಿ
ಇರಬೇಕ ಸತಿ[ಯ]ರೊಂದಾಗಿ || ೬೯ ||

ಕನ್ನೆರೈವರು ನೀವು ಚೆನ್ನಾಗಿ ಇರಬೇಕು
ಮುನ್ನ ಮಾಡಿದ ಫಲವೈಸೆ |
ಉನ್ನತ ಸೇವೆಯ ಮಾಡಿ ಮೆಚ್ಚಿಸಬೇಕು
ಚೆನ್ನಿಗ ರಾಮಯ್ಯನೊಡನೆ || ೭೦ ||

ಇಷ್ಟು ಪ್ರಕಾರದಿ ನಗೆಗಳ ಮಾಡುತ
ಕೊಟ್ಟನು ತನುಜೆಯ ಕೈಗೆ |
ಇಟ್ಟನು ಒಡವೆ ವಸ್ತುಗಳಾಭರಣವ
ಪೆಟ್ಟಿಗೆ ಜವಳಿ ಪೆಂಡಿಗಳ || ೭೧ ||

ಮದಲಗಿತ್ತಿಯ ಮಾಡಿ ಹೊರಟಳು ಅಪ್ಪಗೆ
ಚದುರೆ ಕೈಮುಗಿದಳಾಕ್ಷಣದಿ |
ಒದಗಿಂದ ಹಿರಿಯ ಸೊಸೆ ರಾಮಕ್ಕನ ಕಂಡು
ಮದ[ಲ]ಗಿತ್ತಿಯನು ಮಾಡಿ[ದಳು] || ೭೨ ||

ಕೊಟ್ಟ ಪಟ್ಟೆಗಳಾಭರಣ ಮುತ್ತುಗಳನು
ಇಟ್ಟಳು ಗಂಧ ಪರಿಮಳವ |
ನೆಟ್ಟನೆ ಉಡುಗೊರೆ [ತೊ]ಟ್ಟು ಬಂದಳು ಬೇಗ
ಸೃಷ್ಟೀಶ ಕಂಪಿಲನೊಡನೆ || ೭೩ ||

ಹಂದರ ಹಾಲಗಂಬಗಳ ಹಾಕಿದರಾಗ
ಚೆಂದಚೆಂದದಲಿ ಶೃಂಗರಿಸಿ |
ಬಂದು ಕುಳಿತು ಕಂಪಿಲರಾಯ ಕರೆಸಿದ
ಅಂದು ಲಗ್ನಕ್ಕೆ ಎಲ್ಲರನು || ೭೪ ||

ಬಂದರು ಜೋಯಿಸ ಬ್ರಾಹ್ಮರು ಆಗಲೆ
ಬಂದವಧಾನಿ ಶಾಸ್ತ್ರಿಗಳು |
ಬಂದರು ವೇದಪಾರಾಣಾಯತರೆಲ್ಲ
ನಿಂದರು ರಾಯನ ಹುಜುರ || ೭೫ ||

ಬಂದಿತು ಅಮೃತದ ಸಿದ್ಧಿಯೋಗಂಗಳು
ಬಂದವು ಶುಭಮುಹೂರ್ತಗಳು |
ಎಂದು ರಾಮಯ್ಯನ ಕೊಡೆ ಪೇಳಿದರಾಗ
ವಂದಿಸಿ ಜೋಯಿಸರು ತಾವು || ೭೬ ||

ಕರೆಸಿದ ಊರೊಳಗಣ ಮಂತ್ರಿಗಳನು
ಕರೆಸಿದ ಅರಸುಮಕ್ಕಳು |
ಕರೆಸಿದ ಮನ್ನೆಯ ಮಾಂಡಲಿಕರನು
ಬಿರಿದಂಕ ಕಂಪಿಲರಾಯ || ೭೭ ||

ಪಟ್ಟಣದೊಳಗುಳ್ಳ ಶೆಟ್ಟಿ ವರ್ತಕರೆಲ್ಲ
ಪಟ್ಟಣವೆಲ್ಲ ಶೃಂಗರಿಸಿ |
ಹಟ್ಟಿಕಾರರು ಹಳ್ಳಿಕಾರರು ಕರಣಿಕರು
ನೆಟ್ಟನೆ ತಾವೆಲ್ಲ ಬಂದು || ೭೮ ||

ನಾನಾ ವಾದ್ಯಗಳು ನೌಬತ್ತು ನಗಾರಿಯು
ಸಾನಾಯಿ ಮೃದಂಗ ಡಿಂಡಿಮವು |
ಆನಂದದಿಂದ ಭೋರಿಡುವ ಚಿನ್ಗಳೆಯು
ಏನ ಹೇಳಲಿ ಅರ್ತಿಯನು || ೭೯ ||

ರಾಹುತ ರಾಣೆಯ ಗುರಿಕಾರರೆಕ್ಕಟಿಗರು ಭಾವ
ದಿ ಹರುಚದೊಳ್ಬಂದು |
ಕೋವಿನ ರಾಮನ ಮದುವೆ ಸಂಭ್ರಮಗಳ
ತಾವು ನೋಡಲಿ ಬಂದರೈಸೆ || ೮೦ ||

ಸಕಲರು ನೆರೆದು ಸದರಾಗಿ ಕುಳಿತು ರಾಯ
ಸುಕುಮಾರ ಕಾಟನ ಕರೆದು |
ಸಕಲರೊಳಗೆ ನಮಗೆ ಹಿರಿಯ ಚಾರಮರಾಯ
ಭಕುತಿ ಕರಕೊಂಡು ಬಾರೊ || ೮೧ ||

ಪಲ್ಲಕ್ಕಿ ವಾಜಿಯನೆಲ್ಲವ ಕಳುಹಿದ
ಬಲ್ಲಿದ ಚಾರಮರಾಯ |
ನಿಲ್ಲದೆ ಮಕ್ಕಳು ಮೊಮ್ಮಕ್ಕಳ ಕರಕೊಂಡು
ಮೆಲ್ಲನೆ ಮದುವೆಗೆ ಬಂದ || ೮೨ ||

ಹೋಗೊ ನೀ ಕಾಟಣ್ಣ ಬೇಗದಿ ಮಂಚಣ್ಣ
ಸಾಗಿ ಬರಲು ಕರೆದುಕೊಂಡು |
ಹಾಗೆ ಬೈಚಪ್ಪನ ಮಕ್ಕಳು ಕುಟುಂಬ
ಬೇಗದಿ ಕರೆತಾರೊ ನೀನು || ೮೩ ||

ಬಂದರು ಮಂತ್ರಿಯ ಹೆಂಡಿರು ಮಕ್ಕಳು
ನಿಂದರು ಕನ್ನಿಕೆ ಸಹಿತ |
ಒಂದಾಗಿ ಮಂಚಣ್ಣ ಮಗಳ ಕರೆದುಕೊಂಡು
[ಹಿಂ]ದೂವ ರಾಮನ ಬಳಿಗೆ || ೮೪ ||

ಮತ್ತೆ ಬೈಚಪ್ಪನ ಕಾಟಣ್ಣ ಕರಕೊಂಡು
ಗುತ್ತಿಯ ಜಗದಪ್ಪ ಮಗಳ |
ಉತ್ತುಂಗರಾಯ ಬಂದ ನಿಬ್ಬಣವನು
ಮೊತ್ತದಿ ಕರಕೊಂಡು ಬಾರೋ || ೮೫ ||

ಮುತ್ತಿನಂದಣವು ಪಲ್ಲಕ್ಕಿ ಕರಿಯ ವಾಜಿ
ಸತ್ತಿಗೆ ಸಕಲ ವಾದ್ಯಗಳು |
ಒತ್ತರಿಸುವ ಮಂದಿ ಮಕ್ಕಳು ಸಹವಾಗಿ
ಒತ್ತಿ ಬಂದರು ಬಿಡದಿ ಮನೆಗೆ || ೮೬ ||

ಬಂದ ರಾಮಕ್ಕನ ಅಂದಣವೇರಿಸಿ
ಮಂದಗಮನೆಯರು ಸಹಿತ |
ಚೆಂದದಿಂದಲಿ ಸೊಬನವ ಪಾಡುತ ಬಂದು
ನಿಂದರು ರಾಮಯ್ಯನೆಡೆಗೆ || ೮೭ ||

ಬಂದ ಉತ್ತುಂಗರಾಯನನಾಗ ತಬ್ಬಿಸೆ
ಚೆಂದದಿಂದಲಿ ಕಂಪಿಲನು |
ಅಂದಲ್ಲಿ ಮದುವೆ ಸಂಭ್ರಮದಲ್ಲಿ ಉತ್ತುಂಗ
ವೊಂದಿಲಿ ಕುಳಿತನಾಕ್ಷಣದಿ || ೮೮ ||

ಸಕಲ ಹೆಮ್ಮಕ್ಕಳ ಹರಿಯಮ್ಮ ಮನ್ನಿಸಿ
ಯುಕುತಿಲಿ ಕುಳ್ಳಿರಿಸಿದಳು |
ಮುಕುರವದನೆಯರು ಮುತ್ತಿನಾರತಿಗಳ
ಭಕುತಿಲಿ ಪಿಡಿದು ನಿಂದಿಹರು || ೮೯ ||

ಎಲ್ಲ ಸೋಪಸ್ಕಾರಂಗಳ ತಂದರು
ನಿಲ್ಲದೆ ಚೆಂದದಿ ಮಂತ್ರಿ ಬೈಚಪ್ಪ |
ಉಲ್ಲಾಸದಿಂದ ಸಾಗಲಿ ಲಗ್ನವೆಂದನು
ಮೆಲ್ಲನೆ ಜೋಯಿಸರಿಗೆ ಪೇಳ್ದ || ೯೦ ||

ಮಂತ್ರಾಕ್ಷತೆಯನು ಕೈಲಿ ಪಿಡಿದುಕೊಂಡು
ತಂತ್ರದ ಬ್ರಾಹ್ಮರು ತಾವು |
ನಿಂತು ಧಾರೆಯ ನೆರೆ ಪಿಡಿಕೊಂಡು ಬ್ರಾಹ್ಮರು
ಪಂಥಗಾರನೆ ರಾಮ ಬಾರೊ || ೯೧ ||

ಹಿರಿಯಾಕೆ ರಾಮಕ್ಕೆ [ಕಡೆಯ] ನಾಲ್ವರ ಕೈಗೆ
ಸೆರೆಯಕ್ಕಿಗಳನು ತಾವು ಕೊಟ್ಟು |
ಮರೆಯದೆ ರಾಮನ ಕೈಗೆ ಬೊಗಸಕ್ಕಿಯ
ಪರಿತಂದು ಕೊಟ್ಟರಾಕ್ಷಣದಿ || ೯೨ ||

ವೇದಘೋಷಣೆಯನು ಓದುತ್ತ ಬ್ರಾಹ್ಮರು
ಸಾಗಿಸಿ ಲಗ್ನವ ಮಾಡಿ |
ಮೇದುನಿಯಾಳ್ವ ರಾಮಯ್ಯನ ಮಂಡೆಯೊಳು ವಿ
ನೋದದಿ ಅಕ್ಕಿಯ ತಳಿದು || ೯೩ ||

ಐವರ ಮಂಡೆಯೊಳು ಅಕ್ಕಿಯ ತಳೆದನು
ಸಯ್ಮಾಡಿಕೊಂಡು ಹೆಣ್ಣುಗಳ |
ಜಯವಂತನಾಗೆಂದು ಬ್ರಾಹ್ಮರಕ್ಷತೆಗಳ
ಜಯ್‌ಸಿರಿಗಳನೆಂದು ತಳೆದು || ೯೪ ||

ಗಂಧರ್ವ ವಿವಾಹ ಮಾಡಿಕೊಂಡೊಯ್ದಾರ
ಒಂದೆ ಸಮುಹೂರ್ತದಲವರು |
ಸಂದರುಶನ ಮಾಡಿ ಸ[ವೆ]ದ ಮುಹೂರ್ತಂಗಳ
ಗಂಧ ಪೂಮಾಲೆ ಹಾಕಿದರು || ೯೫ ||

ಮುತ್ತುಗಳಿಂದ ಶಾಸ್ವೆಯನಿಟ್ಟು ಐವರು
ಅರ್ತಿಲಿ ಗಂಧ ಪರಿಮಳವ |
ಪೃಥ್ವೀಶ ರಾಮಗೆ ವಂದಿಸಿ ಐವರು
ಮುತ್ತಿನಾರತಿಯನೆತ್ತಿದರು || ೯೬ ||

ಐವರು ಸೊಸೆಗಳಿಗೆಲ್ಲ ಕಂಪಿಲರಾಯ
ವೈಭೋಗದೊಡವೆಯ ಕೊಟ್ಟ |
ಐದೈದು ತೊಡಿಗೆ ಬಂಗಾರವ ಕೊಟ್ಟನು
ಐದು ಮೈದೊಡಿಗೆ ವಸ್ತ್ರವನು || ೯೭ ||

ಮಗನಿಗೆ ಕೊಟ್ಟನು ಮುತ್ತಿನ ಹಾರ ರಾ
ಮೈಗೆ ಬಳೆ ಮುರುಡಿ ಸರಪಳಿಯ
ಹಗದೊಳು ಎತ್ತಿದ ಬಿರಿದಿಗೆ ಒಂದೊಂದು
ಅಗಣಿತವಾದ ಭೂಷಣವ || ೯೮ ||

ಬಂದ ಬೀಗರಿಗೆಲ್ಲ ಉಡುಗೊರೆಗಳ ಕೊಟ್ಟು
ಗಂಧ ಪರಿಮಳ ವೀಳ್ಯಗಳನು |
ವೊಂದಿದ ಹಿರಿಯರು ಮಂದಿ ಮಕ್ಕಳಿಗೆಲ್ಲ
ಚೆಂದದಿ ವೀಳ್ಯವ ನಡೆಸಿ || ೯೯ ||

ಮನೆಯ ತುಂಬಿಸುವಂಥ ಪ್ರಸ್ತಕೆ ಕಂಪಿ
ಜನಕನ ಅರಮನೆಗೈದು |
ಮನಬಂದಂತೆ ಸಂಭ್ರಮಮಾಡಿ ಎಲ್ಲರು
ಮನೆದುಂಬಿಸಿದರು ಅರ್ತಿಯಲಿ || ೧೦೦ ||

ಮನ್ನೆಯರೆಲ್ಲರು ಒಂದುಡುಗೊರೆಗಳ
ಹೊನ್ನ ಕಾಣಿಕೆಗಳನಿಟ್ಟು |
ಚೆನ್ನಿಗ ರಾಮೈಗೆ ಬಂದಡ್ಡ ಬಿದ್ದರು
ಮನ್ನಿಸಿದರು ರಾಮನವರ || ೧೦೧ ||

ಖಾನ ಹೇಜಿಬರು ತಂದು ಉಡುಗೊರೆಯ
ನಾನಾ ದಿನಿಸಿ ಪರಿಮಳವ |
ಆನಂದ ಹರುಷ ಕೈಕೊಂಡು ರಾಮಯ್ಯ
ಮಾನನಿಧಿಯವರ ಮನ್ನಿಸಿದ || ೧೦೨ ||

ಸೆಟ್ಟಿ ಮಹನಾಡುಗಳು ತಂದರುಡುಗೊರೆಯ
ಪಟ್ಟೆಪಟ್ಟಾವಳಿ ಸಹಿತ |
ಕೊಟ್ಟು ಕೈಮುಗಿಯೆ ರಾಮಯ್ಯನದ ಕೈಕೊಂಡು
ಕೊಟ್ಟುಕೊಂಡವರ ಮನ್ನಿಸಿದ || ೧೦೩ ||

ಗುತ್ತಿಯ ಉತ್ತುಂಗರಾಯನು [ರಾ]ಮಗೆ
ಮುತ್ತಿನ ತುರಾಯ ಉಡುಗೊರೆಯ |
ಅತ್ಯಂತ ಹರುಷದಿ ಕೊಟ್ಟು ತಬ್ಬಿಕೊಂಡು
ಮತ್ತೆ ರಾಯನ ರಾಮನಪ್ಪಿ || ೧೦೪ ||

ಚಾರಮರಾಯ[ನು] ಮೊಮ್ಮಗ ರಾಮಗೆ
ಸಾರವಳಿಯು ಸರಪಣಿಯು |
ಆರು ರತ್ನದ ಹಾರ ಕೊರಳಿಗೆ ಹಾಕಿದ
ಮಾರಸನ್ನಿಭ ರಾಮ[ನು]ರದಿ || ೧೦೫ ||

ಬೈಚಪ್ಪ ಕೊಟ್ಟನು ಮಗಳಿಗೆ ಆಕ್ಷಣ
ಸಂಚಿಯ ತುಂಬ ಹೊನ್ನುಗಳ |
ಪಂಚವಣ್ಣಿಗೆ ಐಸಾಲೆ ಉಡುಗೊರೆಯ
ಕೈಬಳೆ ಮುರಡಿ ಸರಪಳಿಯ
ಮೈಜೋಡಿನಂಗಿಯು ಶಿಲೆಯ ಭಕ್ತಗಳ
ಬೈಷಪ್ಪ ಕೊಟ್ಟನರ್ತಿಯಲಿ || ೧೦೬ ||

ಮಂಚಣ್ಣ ಕೊಟ್ಟನು ಮಗಳಿಗೆ ಆಕ್ಷಣ
ಸಂಚಿಯ ತುಂಬ ಹೊನ್ನುಗಳ
ಪಂಚವಣ್ಣಿಗೆ ಉಡುಗೊರೆಗೊಟ್ಟು ಅಳಿಯಗೆ
ಮಂಚಣ್ಣ ಕರೆವೆಮ್ಮೆ ಉಂಗುರವ || ೧೦೭ ||

ಎಲ್ಲ ಉಡುಗೊರೆಗಳ ಕೈಕೊಂಡು ರಾಮಯ್ಯ
ಉಲ್ಲಾಸದೊಳು ಮನದೊಳಗೆ |
ನಿಲ್ಲದೆ ಎದ್ದು ಕೈಮುಗಿದು ವಂದಿಸಿದನು
ಎಲ್ಲರ ಹರಕೆಯನಾಂತು || ೧೦೮ ||

ಸಣ್ಣಗಂಬಳಿ ಹಾಸಿ ಮುತ್ತಿನ ಹಸೆಗಳ
ಬಣ್ಣವ ಬರೆದಂತೆ ರಚಿಸಿ |
ಅಣ್ಣನ ಕರೆದು ಮಾರಮ್ಮ ಸಿಂಗಮ್ಮನು
ನುಣ್ಣಿಸಿ ಅರಿಷಿನೆಣ್ಣೆಯನು || ೧೦೯ ||

ಎಲ್ಲರು ಕೂಡಿ ಒಂದರ್ತಿಲಿ ರಾಮನ
ನಲ್ಲೆಯರೈದು ಮಂದಿಯನು |
ಉಲ್ಲಾಸದಲಿ ರಾಮಗೆ ಹರಕೆಯ ಕೊಟ್ಟರು
ನಿಲ್ಲದೈದರು ಅರಮನೆಗೆ || ೧೧೦ ||

ಅಲ್ಲಿದ್ದ ಸ್ತ್ರೀಯರು ಪನ್ನೀರಂಗಳ ಕೊಟ್ಟು
ಎಲ್ಲರು ಪಂಕ್ತಿಲಿ ಕುಳಿತರು || ೧೧೧ ||

ಅರಸುಮಕ್ಕಳು ಎಲ್ಲ ಸರಸದಿ ಹರಿಯಮ್ಮ
ದೊರೆದೊರೆಗಳ ಪಂಕ್ತಿ ಬೇರೆ |
ಅರಿತು ಕುಳಿತರಾಗ ಸಾಲುಸಾಲನೆ ಹಿಡಿದು
ಸರಸವನೇನ ಬಣ್ಣಿಸುವೆ || ೧೧೨ ||

ಬಾಲೆವೆಣ್ಣುಗಳು ತಂದರು ಕಾಯಿ ಸೊಪ್ಪುಗಳ
ಸಾಲುಸಾಲನೆ ಹಿಡಿದುಕೊಂಡು |
ಹಾಲುಗುಂಬಳಕಾಯಿ ಸಕ್ಕರೆಗುಂಬಳಕಾಯಿ

ಮೇಲೊಂದ ಚಿಣ್ಣಿಯಕಾಯಿ || ೧೧೩ ||

ಹಾಗಲ ಹೀರೆಯ ಕೋಗುಲೆ ಸೆಂಬೆಯ
ತೂಗುವ ಪಡವಲಕಾಯಿ |
ಬೀಗಿ ಬೆಳೆದ ಬದನೆಯಕಾಯಿ ತಾಳಿಲ
ಸೋಗೆಗಂಗಳೆರು ತಂದರಾಗ || ೧೧೪ ||

ಬಿಳಿಯ ಚೆಳ್ಳವರೆಯಕಾಯಿ ಬಾಳೆಯಕಾಯಿ
ದಳವುಳ್ಳ ಹಲಸಿನಕಾಯಿ |
ಒಳಿತಾಗಿ ಬೆಳೆದ ಸುಲಿಗೆಣಸಿನ ತಾಳಿಲ
ನಳಿನಾಕ್ಷಿಯರು ತಂದು ನೀಡಿದರು || ೧೧೫ ||

ಚೊಕ್ಕಟ ಹರಿವೆಯಸೊಪ್ಪು ಗೋಣಿಯಸೊಪ್ಪು
ಚಕವಂತ ಬಸಲೆಯಸೊಪ್ಪು |
ಚಿಕ್ಕ ಚಿಲಿತೆಯ ಮೆಂತೆಯ ಸೊಪ್ಪುಗಳನು
ಲೆಕ್ಕವಿಲ್ಲದೆ ತಂದರೆಡೆಯ || ೧೧೬ ||

ಪರಮಾನ್ನ ಮಾಲದಿ ಶಾವಿಗೆ ಬಟ್ಟುವೆ
ಪರಡಿ ತಾಲಿಯು ಪರಮಾನ್ನ |
ಪರೊಪರೊ ಹಾಲಿನ ಪರಮಾನ್ನವ ಬೇಗ
ಹರದೇರು ತಂದು ನೀಡಿದರು || ೧೧೭ ||

ಹೊರಿಗೆ ಗಾರಿಗೆ ಹೋಳಿಗೆ ಒಡೆಗಳ
ಹೂರಣಗಡಬು ಕಜ್ಜಾಯ |
ಮಾರನ ರೂಪಿನ ಅಬಲೆಯರು ತಂದು
ವಾರಣದಲ್ಲಿ ನೀಡಿದರು || ೧೧೮ ||

ಅಪ್ಪಾಲು ಅತಿರಸ ಒಪ್ಪಾದ ಕಜ್ಜಾಯ
ತುಪ್ಪದ ಮನೋಹರಗಳನು |
ಕಪ್ಪಾದ ಕರಜಿಯಕಾಯಿ ಎಣ್ಹೂರಿಗೆ
ಒಪ್ಪವನೇನ ಬಣ್ಣಿಸುವೆ || ೧೧೯ ||

ಬೀಸುಹೂರಿಗೆ ತೊವೆ ಅಲಸಂದೆಯ ತೊವೆಗಾಳು
ಅಗಣಿತ ಕಡಲೆಯ ತೊವೆಯ |
ಸೊಗಸುವೆಣ್ಣುಗಳು ತಂದು ಸಾಲಲಿ ನೀಡಿ
ಬಗೆಬಗೆಯಲಿ ಬಡಿಸಿದರು || ೧೨೧ ||

ಸಣ್ಣಗೆಂಬತ್ತಿಗ ಸರಮುತ್ತಿನಕ್ಕಿಯ
ಚಿನ್ನದಾರಿಯ ಚೊಕ್ಕಟಿಯ |
ಬಣ್ಣವರಿದ ಅರಸರದಾನಿ ರಾಜಾನ್ನವ
ಹೆಣ್ಣುಗಳ್ ತಂದು ನೀಡಿದರು || ೧೨೨ ||

ತೊಗರಿಯ ಕಟ್ಟು ಕಡಲೆಯ ಕಟ್ಟು ಹುರುಳಿಯ
ಬಗೆ ಬಗೆ ಕಟ್ಟಿನಾಂಬ್ರಗಳ |
ಸೊಗಸಾದ ಮಜ್ಜಿಗೆಸಾರು ಹುಳಿಸಾರುಗಳ
ಸೊಗಸಿಂದ ತಂದು ನೀಡಿದರು || ೧೨೩ ||

ಆಕುಳತುಪ್ಪ ಎಮ್ಮೆಯತುಪ್ಪ ಕುರಿತುಪ್ಪ
ಮೇಕೆಯತುಪ್ಪ ಜೇನುತುಪ್ಪ |
ಬೇಕೆಂಬಷ್ಟು ತಂದು ನೀಡಿದರು ಬೇಗದಿ
ಏಕಚಿತ್ತದಲಿ ನಾರಿಯರು || ೧೨೪ ||

ಕಚ್ಚಡಿ ಹಿಂಡಿಯು ಮೆಚ್ಚಿನ ಹುಳಿಗಾಳು
ಹೆಚ್ಚಿನ ಉಪ್ಪಿನಕಾಯಿ |
ಬಚ್ಚಿಟ್ಟ ಮಾವಿನಹಿಂಡಿ ನೆಲ್ಲಿಯಕಟ್ಟು
ಅಚ್ಚಾಳು ತಂದು ನೀಡಿದರು || ೧೨೫ ||

ಹಲಸಿನಹಣ್ಣು ಮಾವಿನಹಣ್ಣು ರಸದಾಳಿ
ಸುಲಿದ ಬಾಳೆಯಹಣ್ಣುಗಳನು |
ಒಳಿತಾಗಿ ತಂದು ನೀಡಿದರು ಬಾಲೆಯರೆಲ್ಲ
ಕಲೆತು ಪಂಕ್ತಿಗೆ ನೀಡಿದರು || ೧೨೭ ||

ಉಂಡರು ಚೊಕ್ಕ ಭೋಜನಗಳ ಬೀಗರು
ಉಂಡು ಕೈದೊಳೆದು ಬೇಗದೊಳು |
ಚಂಡವಿಕ್ರಮ ಕಾಟ ವೀಳ್ಯವ ನಡೆಸಿದ
ಉಂಡಂಥ ಬೀಗರಿಗೆಲ್ಲ || ೧೨೭ ||

ಸಣ್ಣಗಂಬಳಿ ಹಾಸಿ ಮುತ್ತಿನ ಹಸೆಗಳ
ಬಣ್ಣವ ಬರೆದಂತೆ ರಚಿಸಿ |
ಅಣ್ಣನ ಕರೆದು ಮಾರಮ್ಮ ಸಿಂಗಮ್ಮನು
ನುಣ್ಣಿಸಿ ಅರಿಷಿನೆಣ್ಣೆಯನು || ೧೨೮ ||

ಎಲ್ಲರು ಕೂಡಿ ಒಂದರ್ತಿಲಿ ರಾಮನ
ನಲ್ಲೆಯರೈದು ಮಂದಿಯನು |
ಉಲ್ಲಾಸದಲಿ ಹಸೆ ಮೇಳೆ ಕುಳಿತರು ತಾವು
ಮಲ್ಲಿಗೆಯ ಹೂವ ಸೂಡಿದರು || ೧೨೯ ||

ಪರಿಪರಿ ವಿಧದಲ್ಲಿ ಅರಿಷಿನೆಣ್ಣೆಯ ಮಾಡಿ
ಸರಸದಿ ಗಂಡಹೆಂಡರಿಗೆ |
ಪರಿಮಳ ವೀಳ್ಯವ ಕೊಟ್ಟು ಕೈಮುಗಿಸಿದರು
ಬಿರಿದಂಕ ರಾಮಯ್ಯನೆಂದು || ೧೩೦ ||

ನಾರೆರೆಲ್ಲರು ಕೂಡಿ ಅರಿಷಿಣ ಕಸ್ತೂರಿಯ
ಸಾರ ಪರಿಮಳವ ಪೂಸಿದರು |
ವೀರ ರಾಮಯ್ಯ ಪೂಮಾಲೆ ಸರಗಳ ಹಾಕಿ
ಧೀರ ಮುಡಿಸಿದನವರ ಮುಡಿಗೆ || ೧೩೧ ||

ಅರಿಷಿನೆಣ್ಣೆಯ ಮಾಡಿ ಅರ್ತಿಲಿ ಬೀಗರು
ಸರಸದಿ ರಾಮಯ್ಯನೆಡೆಗೆ |
ಹರುಷದಿ ಹಾಡುವ ಹಾಕ್ಯಡ್ಡ ಬಿದ್ದರು
ಸರಸಿಜಮುಖಿಯರೊಂದಾಗಿ || ೧೩೨ ||

ಎರಡು ನಾಲ್ಕು ದಿನ ಸವಿದುಂಡು ಬೀಗರು
ಮರುದಿವಸ ನಾಗೋಲೆ ಮಾಡಿ |
ಕರೆಸಿ ಮಾಮನೆಗೆ ಕಂಪಿಲರಾಯನವರಿಗೆ
ಸರಿ ಊಟಗಳನುಣಿಸಿದರು || ೧೩೩ ||

ಓಕುಳಿ ಅರ್ತಿಯ ಮಾಡಿ ರಾಮಯ್ಯನು ಅ
ನೇಕ ಹರುಷದಿಂದ ತಾನು |
ಸಾಕು ಕಾಟಣ್ಣ ನೀ ಹೋಗು ಬೀಗರ ಕೊಡೆ
ಜೋಕೆಲಿ ಕಳುಹಿಸಿ ಬಾರೊ || ೧೩೪ ||

ಮಂದಿ ಮನ್ನೆಯರ ತಾ ತರಕೊಂಡು
ಅಂದವರನು ಕಳುಹುತಲಿ |
ಸಂದುದು ಗಾವುದ ದಾರಿಯಾಗಿ ಕಳುಹಿ
ಹಿಂದಕ್ಕೆ [ತಿ]ರುಗಯ್ಯ ಕಾಟ || ೧೩೫ ||

ಬಂದಡ್ಡ ಬಿದ್ದು ಕಂಪಿಲರಾಯಗೊಂದಿಸಿ
ಅಂದಾಗಿ ಸುದ್ದಿಯ ಪೇಳಿ |
ಇಂದುವ ರಾಮಗೆ ಅರಿಕೆ ಮಾಡಿಸಿ ತನ್ನ
ಮಂದಿರವನು ಒಳಪೊಕ್ಕ || ೧೩೬ ||

ಇತ್ತ ತನ್ನರಮನೆಯೊಳು ರಾಮ ಸುಖವಿದೆ
ಅರ್ತಿಯ ನೋಡುತ ರಾಯ |
ಹೆತ್ತ ತಾಯಿ ಹರಿಯಮ್ಮ ಸಂತಸದೊಳು
ಅರ್ತಿಯೊಳಿದುರಿರ್ದರವರು || ೧೩೭ ||

ಕನ್ನೆಗಾಳಗವ ಜಗದಪ್ಪನೊಳ್ ಮಾಡಿ ತಾ
ಮಾನ್ಯ ಮಾನ್ಯೆಯರನು ಗೆಲಿದು |
ಭಿನ್ನವಿಲ್ಲದೆ ಐದು ಕನ್ನೆವೆಂಗಳ ಗೆದ್ದ ಪ್ರ
ಸನ್ನ ಕಾಳಗ ಸಂಧಿ ಮುಗಿಯೆ || ೧೩೮ ||

ಇದು ಪರನಾರಿ ಸೋದರನೆಂಬ ರಾಮನ
ಪದಕೃತಿಯೊಳಗೊಂದು ಕಥೆಯ |
ಚದುರ ರಾಮಯ್ಯನು ಮದಿವ್ಯಾದ ಸುದ್ದಿಯ
ಪದಗಳು ಮುಗಿದು ಪೂರಾಯ್ತು || ೧೩೯ ||

ಅಂತು ಸಂಧಿ ಕ್ಕಂ ಪದನು ೫೦೯ಕ್ಕಂ ಮಂಗಳ ಮಹಾಶ್ರೀ