ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆಯ ಚಿಕ್ಕ ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರಕ್ಕೆ ೨೬.೮ ಕಿ.ಮೀ ಗಳಷ್ಟು ದೂರದಲ್ಲಿದೆ. ರಾಜಧಾಇ ಬೆಂಗಳೂರಿನಿಂದ ೮೦ ಕಿ.ಮೀ.ಗಳ ಅಂತರವಿದ್ದು ಸಮುದ್ರಮಟ್ಟದಿಂದ ೨೪೫೦ ಅಡಿಗಳಷ್ಟು ಎತ್ತರದಲ್ಲಿದೆ. ರಾಜಧಾನಿಯಿಂದ ಕೊರಟಗೆರೆ ತಾಲ್ಲೂಕಿನ ಮೂಲಕ ಅಂತರರಾಜ್ಯ ಆಂಧ್ರಪ್ರದೇಶಕ್ಕೆ ಹಾದುಹೋಗುವ ಬಸ್ ಮಾರ್ಗಗಳಿವೆ. ೨೮೮೫ ಅಡಿ ಎತ್ತರವಿರುವ ಕೊರಟಗೆರೆ ಬೆಟ್ಟವು ತೆಂಗಿನ ಚಿಪ್ಪಿನೋಪಾದಿಯಲ್ಲಿರುವುದರಿಂದ ಕರಟಗಿರಿ ಎಂದು ಕರೆಯಲ್ಪಡುತ್ತಿತ್ತು. ಕಾಲಾನಂತರ ಕೊರಟಗೆರೆಯಾಗಿ ಮಾರ್ಪಾಟಾಯಿತು. ಸುವರ್ಣ ಮುಖಿ ನದಿ ದಡದಲ್ಲಿ ಈ ಪಟ್ಟಣವಿದೆ.

ಸಿದ್ದರಬೆಟ್ಟ (ಬೂದಗವಿ):

ದೂರ ಎಷ್ಟು?
ತಾಲ್ಲೂಕು : ಕೊರಟಗೆರೆ
ತಾಲ್ಲೂಕು ಕೇಂದ್ರದಿಂದ: ೧೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೩೫ ಕಿ.ಮೀ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯಲ್ಲಿ, ಶ್ರೀ ಶಿವಯೋಗಿ ಸಿದ್ದೇಶ್ವರರ ತಪೋಭೂಮಿಯಾದ ಸಿದ್ದರಬೆಟ್ಟವಿದ್ದು, ಗಿಡಮೂಲಿಕೆಗಳ ಸಂಜೀವಿನಿ ತಾಣ ಎಂದು ಪ್ರಸಿದ್ಧಿ ಪಡೆದಿದೆ.

ಹಿಂದೆ ತ್ರೇತಾಯುಗದಲ್ಲಿ ರಾಮಚಂದ್ರನ ಅಣತಿಯಂತೆ ಹನುಮಂತನು ಕೈಲಾಸ ಪರ್ವತಕ್ಕೆ ಹೋಗಿ ಸಂಜೀವಿನಿಯನ್ನು ತರುತ್ತಿರುವಾಗ, ಮಾರ್ಗಮಧ್ಯದಲ್ಲಿ ಸಂಜೀವಿನಿ ಸ್ವಲ್ಪ ಪ್ರಮಾಣದಲ್ಲಿ, ಈ ಸಿದ್ದೇಶ್ವರ ಪರ್ವತದ ಮೇಲೆ ಬಿದ್ದಿತೆಂಬ ಐತಿಹ್ಯವಿದೆ. ಈಗಲೂ ಈ ಬೆಟ್ಟಗಳಲ್ಲಿ ಔಷಧಿಯುಕ್ತ ಹಲವಾರು ಗಿಡಮೂಲಿಕೆಗಳು ಕಾಣಸಿಗುತ್ತವೆ. ಮತ್ತು ಈ ಗಿಡಮೂಲಿಕೆಗಳ ಬೇರುಗಳಿಂದ ಝರಿಯಾಗಿ ಹರಿಯುವ ನೀರು, ದೇವರ ಮುಂಭಾಗದಲ್ಲಿರುವ ಪುಷ್ಕರಣಿಯಲ್ಲಿ ಶೇಖರಣೆಯಾಗುತ್ತದೆ. ಯಾವುದೇ ಕಾಲದಲ್ಲಿ ನೀರು ಹಿಂಗುವುದಿಲ್ಲ. ಈ ನೀರನ್ನು ಸೇವಿಸಿದರೆ ಭವರೋಗ ನಿವಾರಣೆಯಾಗುತ್ತದೆಂದು ಭಕ್ತಾದಿಗಳಲ್ಲಿ ಅಪಾರ ನಂಬಿಕೆಯಿದೆ.

ಆ ಬೆಟ್ಟದ ಮೇಲೆ ಪುರಾಣ ಪ್ರಸಿದ್ಧ ಕೋಟೆಯಿದ್ದು, ಕುರಂಕೋಟೆ ಪ್ರಾಂತ್ಯವನ್ನು ಆಳುತ್ತಿದ್ದ ಪಾಳೇಯಗಾರನಾದ ಕುರಂಗರಾಯನು ಶತ್ರು ಸೈನ್ಯದ ಆನೆಯೊಂದು ತಪ್ಪಿಸಿಕೊಂಡು ಆ ಬೆಟ್ಟಕ್ಕೆ ಬಂದಾಗ, ಅದರ ಕಾಲಿಗೆ ಕಟ್ಟಿದ್ದ ಸರಪಳಿಯೂ ಬಂಗಾರವರ್ಣವನ್ನು ಪಡೆದಿತ್ತೆಂದು, ಈ ಬೆಟ್ಟದಲ್ಲಿ ಸುವರ್ಣವನ್ನು ತಯಾರಿಸುವ ಯಾವುದೊ ಅಂಶವಿರುವುದು ದಾಖಲಾಗಿದೆ.

ಯತಿಗಳು, ಸಿದ್ದರು, ಋಷಿಗಳೂ ಪ್ರಶಾಂತವಾದ ವಾತಾವರಣದಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದಿರುತ್ತಾರೆ. ಆ ಸಂದರ್ಭದಲ್ಲಿ ಕಾಕಾಸುರನೆಂಬ ರಾಕ್ಷಸನೂ ತಪಸ್ಸುಗಳಿಗೆ ಭಂಗ ತರುತ್ತಿದ್ದನು. ತಪಸ್ವಿಗಳ ಶಾಪದಿಂದಾಗಿ ಇಂದಿಗೂ ಆ ಸ್ಥಳದಲ್ಲಿ ಕಾಗೆಗಳು ಕಂಡುಬರುವುದಿಲ್ಲ.

ಈ ಬೆಟ್ಟದಲ್ಲಿ ಚಂದ್ರಕಾಂತ ಶಿಲೆಯಿದ್ದು, ರಾತ್ರಿಯೆಲ್ಲ ಚಂದ್ರನ ಕಾಂತಿಯಿಂದ ಬೆಳೆಯುವ ಶಿಲೆ, ಕರಗಿ ನೀರಾಗಿ ಸದಾಕಾಲ ಶ್ರೀಕ್ಷೇತ್ರದ ಸಿದ್ದೇಶ್ವರ ಸ್ವಾಮಿಯವರ ಮುಂದಿರುವ ಕೊಳದಲ್ಲಿ ಸಂಗ್ರಹವಾಗುತ್ತದೆ.

 

ಚನ್ನರಾಯನದುರ್ಗ (ಏಳುಸುತ್ತಿನ ಕೋಟೆ):

ದೂರ ಎಷ್ಟು?
ತಾಲ್ಲೂಕು : ಕೊರಟಗೆರೆ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೩೬ ಕಿ.ಮೀ

ಈ ಬೆಟ್ಟದ ಮೇಲಿರುವ ಕೋಟೆಯಿಂದ ಗ್ರಾಮಕ್ಕೆ ಚನ್ನರಾಯನದುರ್ಗವೆಂಬ ಹೆಸರು ಬಂದಿದೆ.

ಬಿಜ್ಜವರಾಯ ಮಧುಗಿರಿಯನ್ನು ಆಳುತ್ತಿದ್ದ ಮಹಾನಾಡು ಪ್ರಭು. ಈ ಪ್ರಭುಗಳ ವಂಶದ ಅರಸ ಇಮ್ಮಡಿ ಚಿಕ್ಕಭೂಪಾಲನು ಅಕಾಲಿಕ ಮರಣ ಹೊಂದಿದ ತನ್ನ ದ್ವಿತೀಯ ಪುತ್ರ ನಾಡ ಚನ್ನಪ್ಪಗೌಡನ ನೆನಪಿಗಾಗಿ, ಕ್ರಿ.ಶ. ೧೬೧೩ ರಲ್ಲಿ ಈ ಕೋಟೆಯನ್ನು ಕಟ್ಟಿಸಿ, ಕೋಟೆಯೊಳಗೆ ಚನ್ನಕೇಶವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿಸಿದನು. ಮಹಾನಾಡ ಪ್ರಭು ಕಾಳಚಿಕ್ಕಪ್ಪಗೌಡನಿಗೆ ರಾಮಪ್ಪಗೌಡ ಮತ್ತು ತಿಮ್ಮಪ್ಪಗೌಡರೆಂಬ ಇಬ್ಬರು ಮಕ್ಕಳಿದ್ದರು. ರಾಮಪ್ಪಗೌಡ ಚನ್ನರಾಯನದುರ್ಗದಲ್ಲಿ ಮತ್ತು ತಿಮ್ಮಪ್ಪಗೌಡ ಮಧುಗಿರಿಯಲ್ಲಿ ಆಳುತ್ತಿದ್ದರು. ಕ್ರಿ.ಶ. ೧೬೭೯ ರಲ್ಲಿ ಮೈಸೂರಿನ ಚಿಕ್ಕದೇವರಾಯ ಒಡೆಯರ್ ರವರು ಚನ್ನರಾಯನ ದುರ್ಗ ಮತ್ತು ಮಧುಗಿರಿಯನ್ನು ವಶಪಡಿಸಿಕೊಂದು, ರಾಮಪ್ಪಗೌಡ ಮತ್ತು ತಿಮ್ಮಪ್ಪಗೌಡರನ್ನು ಶ್ರೀ ರಂಗಪಟ್ಟಣದಲ್ಲಿ ಸೆರೆಯಲ್ಲಿಟ್ಟನು. ಕ್ರಿ.ಶ. ೧೭೭೬ ರಲ್ಲಿ ಚನ್ನರಾಯನ ದುರ್ಗವು ಮರಾಠ ಸರ್ದಾರ ಮಾಧವರಾಯನ ಆಳ್ವಿಕೆಗೆ ಒಳಪಟ್ಟಿತ್ತೆಂದು ಅಲ್ಲಿರುವ ಶಾಸನಗಳು  ತಿಳಿಸುತ್ತವೆ.

ಈ ದುರ್ಗದಲ್ಲಿ ಹಲವಾರು ಸುತ್ತಿನ ಕೋಟೆಗಳಿದ್ದು, ಬತೇರಿಗಳನ್ನು ಕಾಣಬಹುದು.

 

ವಿವಿಧ ನೈಸರ್ಗಿಕ ಪ್ರಯೋಗಗಳ ನಂದಿಹಳ್ಳಿ ಒದೇಕಾರ್ ಫಾರಂ

ದೂರ ಎಷ್ಟು?
ತಾಲ್ಲೂಕು : ಕೊರಟಗೆರೆ
ತಾಲ್ಲೂಕು ಕೇಂದ್ರದಿಂದ: ೧೮ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೨೬ ಕಿ.ಮೀ

ತೋವಿನಕೆರೆ ಬಳಿಯ ನಂದಿಹಳ್ಳಿಯ ಓದೇಕಾರ್ ಫಾರಂ ಹಲವು ಹೊಸ ಹೊಸ ಪ್ರಯೋಗಗಳ ಕೇಂದ್ರ ತೆಂಗು, ಅಡಿಕೆ ಮತ್ತು ಔಷಧಿಯುಕ್ತ ಸಸ್ಯಗಳು ಬೆಳೆಯುವ ಈ ಫಾರಂನಲ್ಲಿ, ಕೆ.ಆರ್. ನೀಲಕಂಠಮೂರ್ತಿ ಮತ್ತವರ ಪತ್ನಿ ಅನಿತಾ, ಒಂದಲ್ಲ ಒಂದು ನೂತನ ಪ್ರಯೋಗ ಮಾಡುತ್ತಲೇ ಇರುತ್ತಾರೆ.

ಇದರೊಂದಿಗೆ ಅನಿತಾ ಓದೇಕಾರ್ ಮಹಿಳೆಯರನ್ನು ಸಂಘಟಿಸಿ ಗಿಡಮೂಲಿಕೆಗಳನ್ನು ಬಳಸಿಕೊಂಡು ಔಷಧಿ ತಯಾರಿಸುವ, ತರಬೇತಿ ನೀಡುವ ಮೂಲಕ ಉದ್ಯೋಗಗಳನ್ನು ಸೃಷ್ಠಿಸಿ, ಸ್ವ-ಸಹಾಯದ ನಿಜವಾದ ಅರ್ಥ ತುಂಬುವಲ್ಲಿ ಹಳ್ಳಿಗಳಲ್ಲಿನ ಮಹಿಳೆಯರು ಸ್ವಾವಲಂಬನೆಯತ್ತ ಸಾಗುವುದಕ್ಕೆ ದಾರಿಯಾಗಿರುವರು.

ಈ ದಂಪತಿಗಳು ಗಿಡಮೂಲಿಕೆಗಳಿಂದ ಹರ್ಬಲ್ ಹೇರ್ ಆಯಿಲ್, ಚರ್ಮ ರಕ್ಷಣೆಯ ಲೋಶನ್, ಹಲ್ಲುಪುಡಿ, ನೋವು ನಿವಾರಕ ಬಾಮ್, ಹರ್ಬಲ್ ಶಾಂಪೂನೊಂದಿಗೆ ತಮ್ಮ ತೋಟದಲ್ಲಿ ಬೆಳೆಯುವ ತೆಂಗಿನ ಗಿಡಗಳ ತೆಂಗಿನ ಎಣ್ಣೆಯನ್ನು ಉಪಯೋಗಿಸಿ ಅದಕ್ಕೆ ಪರಿಮಳ ಸೇರಿಸಿ ನೈಸರ್ಗಿಕ ಸಾಬೂನು ತಯಾರು ಮಾಡಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಿತರಿಸುತ್ತಿದ್ದಾರೆ. ಮುಂದೆ ಕಿತ್ತಲೇಸಿಪ್ಪೆ, ನಿಂಬೆಸಿಪ್ಪೆ, ಮಲ್ಲಿಗೆ, ಸಂಪಿಗೆ ಹೀಗೆ ತಮ್ಮಲ್ಲಿ ದೊರೆಯುವುದನ್ನು ಉಪಯೋಗಿಸಿ ಸಾಬೂನು ತಯಾರು ಮಾಡುವ ಯೋಜನೆಯಲ್ಲಿ ತೊಡಗಿದ್ದಾರೆ.

ಸುಮಾರು ೩೦೦ಕ್ಕೂ ಹೆಚ್ಚಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ. ಅದರಲ್ಲಿ ಹುತ್ತದ ಮಣ್ಣಿನ ಸಾಬೂನು ಒಂದು. ಮೈಗೆ ಹಚ್ಚುವ ಔಷಧಿಯುಕ್ತ ಹುತ್ತದ ಸಾಬೂನಿಗೆ ಹಳ್ಳಿಗಳಲ್ಲಿ ಬೇಡಿಕೆ ಹೆಚ್ಚು. ಈ ಸಾಬೂನು ನಿಗದಿತ ಅಂಗಡಿ ಮಳಿಗೆಗಳಲ್ಲಿ ಮಾತ್ರ ಲಭ್ಯ. ಹುತ್ತದ ಒಳಮಣ್ಣು ಸಾಬೂನಿನ ಮುಖ್ಯ ಕಚ್ಚಾ ವಸ್ತು. ಅದನ್ನು ಕಲ್ಲಿನಲ್ಲಿ ಅರೆದು ಜರಡಿ ಮಾಡಿದ ಬಳಿಕ ಬೇವಿನ ಎಲೆ, ಮಜ್ಜಿಗೆ, ನಿಂಬೆರಸ, ಅರಿಶಿನ, ಪರಿಮಳ ಸೇರಿಸಿ ತಯಾರಿಸಿದ ಈ ಸಾಬೂನು ಚರ್ಮಕ್ಕೆ ಉತ್ತಮ.

ಇದರೊಂದಿಗೆ ಲೋಳೆಸರ, ಪಾನಕ, ಡಿಟರ್ಜೆಂಟ್ ಸೋಪು ಬಟ್ಟೆ ಒಗೆಯುವ ಸಾಬೂನು ಪುಡಿ, ನೋವು ನಿವಾರಕ ತೈಲ, ಗಾಯದ ಮುಲಾಮು, ಚರ್ಮರಕ್ಷಣೆ ಲೋಶನ್, ಸೌಂದರ್ಯವರ್ಧಕ ಲೋಶನ್, ಬಾದಾಮಿ ಕ್ರೀಮ್, ಸುಗಂಧ ಚೂರ್ಣ, ಹೀಗೆ ಹಲವು, ಮನೆ ಬಳಕೆ ವಸ್ತುಗಳನ್ನು ಈ ದಂಪತಿಗಳು ತಯಾರಿಸುತ್ತಾರೆ.

 

ಗೊರವನಹಳ್ಳಿ ಶ್ರೀಕ್ಷೇತ್ರ

ದೂರ ಎಷ್ಟು?
ತಾಲ್ಲೂಕು : ಕೊರಟಗೆರೆ
ತಾಲ್ಲೂಕು ಕೇಂದ್ರದಿಂದ: ೧೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೨೫ ಕಿ.ಮೀ

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ನಂಬಿದ ಭಕ್ತಾದಿಗಳ ಹರಕೆಗಳನ್ನು ಹರಸುವುದರ ಜತೆಗೆ ಶೈಕ್ಷಣಿಕ ಕ್ಷೇತ್ರದತ್ತಲೂ ದಾಪುಗಾಲು ಹಾಕುತ್ತಿದೆ. ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಉಚಿತ ಪಠ್ಯಪುಸ್ತಕ, ನೋಟ್ ಪುಸ್ತಕ, ಸಮವಸ್ತ್ರಗಳನ್ನು ವಿತರಿಸಲಾಗುತ್ತಿದೆ.

ಪ್ರಸ್ತುತ ದೇವಾಲಯದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯುತ್ತಿದ್ದು, ನೂತನ ವಧೂವರರಿಗೆ ತಾಳಿ ಮತ್ತು ವಸ್ತ್ರವನ್ನು ನೀಡುವ ಪದ್ಧತಿ ರೂಢಿಯಲ್ಲಿದೆ. ಪ್ರತಿನಿತ್ಯ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ನಿತ್ಯದಾಸೋಹ ನಿರಂತರವಾಗಿ ನಡೆಯುತ್ತಿದೆ. ರಾಜ್ಯದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿದೆ.

 

ತೀತಾ ಜಲಾಶಯ:

ಕೊರಟಗೆರೆ ತಾಲ್ಲೂಕು ಗೊರವನಹಳ್ಳಿ ಗ್ರಾಮದ ಶ್ರೀಲಕ್ಷ್ಮಿ ದೇವಸ್ಥಾನದ ಬಲಭಾಗದಲ್ಲಿ, ಒಂದು ಜಲಾಶಯವನ್ನು ಜಯಮಂಗಲಿ ನದಿಗೆ ನಿರ್ಮಿಸಲಾಗಿದೆ. ಇದು ನೋಡಲು ಮನೋಹರವಾಗಿದೆ. ಹಾಗೂ ನೂರಾರು ಎಕರೆ ಜಮೀನಿಗೆ ಇದರಿಂದ ನೀರನ್ನು ಪೂರೈಸಲಾಗುತ್ತಿದೆ.

 

ಉರುವಲು ಆಧಾರಿತ ವಿದ್ಯುತ್ ಘಟಕ : ತೋವಿನಕೆರೆ

ದೂರ ಎಷ್ಟು?
ತಾಲ್ಲೂಕ್ : ಕೊರಟಗೆರೆ
ತಾಲ್ಲೂಕು ಕೇಂದ್ರದಿಂದ : ೧೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ : ೩೫ ಕಿ.ಮೀ.

ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಪಕ್ಕದ ಕಬ್ಬಿಗೆರೆ ಗ್ರಾಮದಲ್ಲಿ, ಕಟ್ಟಿಗೆ ಬಳಸಿ ವಿದ್ಯುತ್ ಉತ್ಪಾದಿಸುವ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಕಳೆದ ೫ ವರ್ಷದ ಹಿಂದೆ ಯೋಜನೆಯನ್ನು ರೂಪಿಸಿ ಕಬ್ಬಿಗೆರೆ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಇಲ್ಲಿನ ಬಡ ಕೃಷಿ ಕಾರ್ಮಿಕರ ಬಾಳು ಹಸನಾಗಿಸಲು ಕೃಷಿ ಚಟುವಟಿಕೆ ಅಭಿವೃದ್ಧಿಗಾಗಿ ಉರುವಲು ವಿದ್ಯುತ್ ಉತ್ಪಾದನಾ ಘಟಕವನ್ನು  ಪ್ರಾರಂಭಿಸಲಾಗಿದೆ. ಅದೇ ಗ್ರಾಮದಲ್ಲಿ ಬಯೋಮಾಸ್ ಗ್ಯಾಸ್, ಪೈರ‍್ ಪವರ‍್ ಪ್ಲಾಂಟ್, ಒಂದು ಗಂಟೆಗೆ ೨೦೦ ಕೆ.ವಿ.ಯ ಒಂದು ಘಟಕ ೧೦೦ ಕೆ.ವಿ.ಯ ೩ ಘಟಕಗಳಿಂದ ಒಟ್ಟು ೫೦೦ ಕೆ.ವಿ. ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಸುತ್ತಮುತ್ತಲ ೫ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.