ಕೇಳಿರೇ ಸಖಿ ಕೇಳಿರೇ ದೂರ ಕೊಳಲಿನ ಕರೆಯನು !
ನಾನು ಹಾರುವೆನಲ್ಲಿಗೀಗಲೆ, ಕಾಯುತಿರುವನು ಕೃಷ್ಣನು
ನೀವು ಬರುವಿರೊ ಇಲ್ಲವೋ, ಸಖಿ ಹೇಳಿರೀಗಲೆ ನಡೆವೆನು.
ನಿಮ್ಮ ಪಾಲಿಗೆ ನನ್ನ ಕೃಷ್ಣನು ಬರಿಯ ಹೆಸರಾಗಿರುವನು,
ನನಗೊ ಆತನು ಹೃದಯದೊಲವಿನ ಉಸಿರಿನುಸುರಾಗಿರುವನು !
ನೀವು ಕಿವಿಯೊಳು ಕೇಳುತಿರುವಿರಿ ಅವನ ಕೊಳಲಿನ ರಾಗವ
ನಾನು ಕೇಳುವೆನಾತ್ಮದಾಳದಿ ಮಧುರ ಮುರಳೀನಾದವ !
“ನಿನ್ನ ಕಾಣದೆ ಕುಂಜ ಕಾನನ ಬರಿಯ ನೀರಸವಾಗಿದೆ
ಬಾರ ರಾಧೇ, ಬಾರ ಪ್ರಿಯಸಖಿ” -ಎಂದು ಕೊಳಲುಲಿ ಕರೆದಿದೆ !