ಎಲ್ಲೆಲ್ಲಿಯು ನೀನಿಹೆಯಂತೆ
ಎಲ್ಲವು ನೀನಂತೆ.

ಎಲ್ಲದರಾದಿಯು ನೀನಂತೆ
ಎಲ್ಲದರಂತವು ನೀನಂತೆ
ಚಿಂತೆಗೆ ತಿಳಿಯದೆ
ಮಾತಿಗೆ ಸಿಲುಕದೆ
ಅಂತರಾತ್ಮನಾಗಿಹೆಯಂತೆ.

ವೇದಗಳರಿಯದ ವಿಭುವಂತೆ
ಯೋಗಿಗಳರಿಯದ ಪ್ರಭುವಂತೆ
ಭಕ್ತರ ಹೃದಯದಿ
ನೆಲೆಸುತ ಮುದದಿ
ಭಕ್ತವತ್ಸಲನಾಗಿಹೆಯಂತೆ.

ಮಾಯಾತೀತನು ನೀನಂತೆ
ಮಾಯಾರೂಪಿಯು ನೀನಂತೆ
ಪಾಪ ಪುಣ್ಯಗಳ
ಜನನ ಮರಣಗಳ
ಮೀರಿಹ ಪುರುಷನು ನೀನಂತೆ.

ಲೋಕವ ರಕ್ಷಿಸೆ ಬಹೆಯಂತೆ
ಶೋಕಿಪರಿಗೆ ನೀ ದಯೆಯಂತೆ
ರಾಮನು ನೀನಂತೆ
ಕೃಷ್ಣನು ನೀನಂತೆ
ಶ್ರೀ ನರಸಿಂಹನು ನೀನಂತೆ.

ಅದ್ವಿತೀಯನಾಗಿಹೆಯಂತೆ
ಹೃದ್ವನವಾಸಿಯು ನೀನಂತೆ
ಭಕ್ತಿಯು ನೀನಂತೆ
ಶಕ್ತಿಯು ನೀನಂತೆ
ಸಿದ್ಧರ ಮುಕ್ತಿಯು ನೀನಂತೆ.

ಅಂತೇ? ಅಂತೇ? ಯಾಕಂತೆ?
ತತ್ವವೆಂಬುದಂತೆಯ ಸಂತೆ!
ಅಂತೇ? ಕಂತೇ?
ಯಾಕೀ ಚಿಂತೆ?
ಕಟ್ಟಕಡೆಗೆ ನೀ ಬರಿಯಂತೆ!

೧೬-೭-೧೯೨೮