ಇರುಳ ಕರುಳನು ಹೊಕ್ಕು ನೋಡಿದೊಡೆ ನೀನಲ್ಲಿ
ಬಿಳಿದಾಗಿ ತೋರುತಿರುವೆ!
ಹಗಲಿನೆದೆಯನು ಬಗೆಯುತಿಣಿಕಿದೊಡೆ ನೀನಲ್ಲಿ
ಕರಿದಾಗಿ ತೋರುತಿರುವೆ!
ಕಗ್ಗಲ್ಲಿನೆದೆಯಲ್ಲಿ ನುಗ್ಗಿ ನೋಡಿದೊಡಲ್ಲಿ
ಹೂವಾಗಿ ತೋರುತಿರುವೆ!
ಹೂವುಗಳ ಹೃದಯದಲಿ ಹುಡುಕಿ ನೋಡಿದೊಡಲ್ಲಿ
ಕಲ್ಲಾಗಿ ತೋರುತಿರುವೆ!
ಭೂತಳದ ರೂಪಗಳ ಸಿಗಿಸಿಗಿದು ನೋಡಿದರೆ
ನಾಕಾರನಾಗಿ ನೀ ತೋರುತಿರುವೆ!
ನಾಕಾರ ತತ್ತ್ವವನು ಅನುಭವಿಸಿ ನೋಡಿದರೆ
ಸಾಕಾರನಾಗಿ ನೀ ತೋರುತಿರುವೆ!
“ಅದು ಅಲ್ಲ! ಇದು ಅಲ್ಲ!” ಎಂದೆಲ್ಲರೊರೆಯೆ,
“ಅದು ನಾನು! ಇದು ನಾನು” ಎಂದು ನೀ ಮೊರೆವೆ!
೧೦-೧-೧೯೨೯
Leave A Comment