ಅಂದು ನೀ ವನಗಳಲಿ ನುಡಿದ ಪಿಸುಮಾತು
ಇಂದಿಗೂ ಮೊರೆಯುತಿದೆ ಕರ್ಣಗಳಲಿ.
ಅಂದು ನೀನಡವಿಗಳಲಿತ್ತ ದರ್ಶನವೆ
ಇಂದಿಗೂ ತುಂಬಿಹುದು ನಯನಗಳನು.
ಬಿರುಸಾದ ನುಡಿಗಳನು ಕೇಳಿದೆನು ನಾನು,
ಆದರವು ಪಿಸುಮಾತ ಮೀರಲಿಲ್ಲ;
ವೈಭವದ ವೇಷಗಳ ನೋಡಿದೆನು ನಾನು,
ಆದರವು ದರ್ಶನವ ಜಯಿಸಲಿಲ್ಲ!
ಜಗದಿ ಕೇಳಿದುದೊಂದೆ – ನಿನ್ನ ಪಿಸುಮಾತು!
ಜಗದಿ ನೋಡಿದುದೊಂದೆ – ನಿನ್ನ ದರ್ಶನವು!
ಉಳಿದವರ ಮಾತು: ಬಾಯಿಲ್ಲದರ ಮಾತು!
ಉಳಿದಿತರ ನೋಟ: ಕಣ್ಣಿಲ್ಲದರ ನೋಟ!
೨೧-೭-೧೯೨೬
Leave A Comment