ತಡವುತಿದ್ದರು ನಾನು, ಎಡವಿ ಬಿದ್ದರು ನಾನು, ಬಲ್ಲೆನದು ನಿನ್ನಂಕಪೀಠದಾ ಮೇಲೆಯೆಂದು! ಎಷ್ಟು ಕುಣಿದರು ಮರೆತು, ಎಷ್ಟು ಅಲೆದರು ಬರಿದೆ, ಬಲ್ಲೆ ನಾನಿನ್ನ ಕೈಯೊಳು ಸದಾ ಭದ್ರವೆಂದು! ಕನಸ ಕಂಡೆನು ನಾನು ನಿನ್ನಂಕದಿಂ ಜಾರಿ ಘೋರ ವಿಪಿನದ ಮಸಣ ಮೋನದಲಿ ಚಲಿಸುವಂತೆ; ಚೀರಿ ಕೂಗಲು, ತಾಯೆ, ನೀನೆನ್ನನೆಬ್ಬಿಸಿದೆ! ಕನಸ ಕಾನನವಳಿದು ನಿನ್ನಂಕಪೀಠಮಾಯ್ತು! ಎದ್ದರೂ ನಿನ್ನಂಕ! ಬಿದ್ದರೂ ನಿನ್ನಂಕ! ಪ್ರೇಮಕರಬದ್ಧನಾದೆನಗೆ ಭಯಮೆಂದರೇನು? ಒಂದಂಕದಿಂ ನೆಗೆಯೆ ಮತ್ತೊಂದಕಿಳಿವೆನೌ! ಭಯಮೆಂಬುದಾಧಾರಮಿಲ್ಲದಿಹ ಮಾಯೆ, ತಾಯೆ! ೨೬-೯-೧೯೨೬