ದೊರೆಯು ಬಂದನತಿಥಿಯಾಗಿ ತೆರೆಯಲಿಲ್ಲ ಬಾಗಿಲ; ಮರೆತು ಮಲಗಿದೆ! ಚರರ ಕಳುಹಲಿಲ್ಲವವನು ಕರೆದು ಕೂಗಲಿಲ್ಲವು; ಬರಿದೆ ಕಾದನು! ದೊರೆಯತನವನುಳಿದು ತಾನು ಪರಮ ಗೆಳೆಯನಂದದಿ ದೊರೆಯು ಬಂದನು; ಇರಿಸಿ ತನ್ನ ಭಟರ ದೂರ ತೊರೆದು ತನ್ನ ದರ್ಪವ ದೊರೆಯು ಬಂದನು! ರಾಜಭಟರ ಕಳುಹಲಿಲ್ಲ, ರಾಜನಾಜ್ಞೆಯಿಲ್ಲವು; ಬರಿದೆ ಕಾದನು! ಅರಸನಾಗಿ ಬಂದು ತಾನು ಚರರ ಕಳುಹಿಸಿರ್ದೊಡೆ ತೆರೆಯುತಿರ್ದರು! ಬಾಗಿಲನ್ನು ತೆರೆದು ನೋಡ- ಲಾಗ ದೊರೆಯ ಕಂಡೆನು! ಬಳಿಗೆ ನಡೆದೆನು. ಮುನ್ನವೇಕೆ ಬಾರಲಿಲ್ಲ ತನ್ನ ಬಳಿಗೆ ಎನ್ನದೆ ಎನ್ನನಪ್ಪಿದ! ರಾಜನೆನ್ನ ಮನೆಗೆ ಬರಲು ರಾಜನಿಲಯವಾದುದು ಎನ್ನ ಬಡಮನೆ! ರಾಜದೂತರೆಲ್ಲ ತಮ್ಮ ರಾಜಭಟರ ವೇಷವ ಬಿಸುಟು ಬಂದರು! ಅಹಹ! ನಾನು ರಾಜನೆಂದು ಬಹಳ ಬರಿದೆ ಬೆದರಿದೆ ಅವನನರಿಯದೆ! ರಾಜಭಟರ ದರ್ಪ ಹೊರಗೆ: ರಾಜನೊಲುಮೆಯಾಗಲು ದರ್ಪ ಹೀನರು! ೧೮-೭-೧೯೨೬