ಇನ್ನೇನು ಬೇಕೆನಗೆ ದೇವ,
ಎನ್ನೆದೆಯೊಳಿರೆ ನೀನೆ ಎನ್ನ ಜೀವದ ಜೀವ?
ರವಿಯು ಮೇಲೆಸೆವುದನು ನೋಡಿ ನೋಡಿ
ಬುವಿಯ ಕೊಡು ಎನಲು ಬಗೆ ಬಾರದೆನಗೆ;
ತಳಿಪ ಕೋಟ್ಯನುಕೋಟಿ ತಾರೆಗಳಿರೆ
ಮನವಿಲ್ಲವೊರ್ವ ಹಿಮಕರನ ಪಡೆಯೆ;
ಮನ ನಿಲುಕದಸಮವಹ ವಿಶ್ವವಿರಲು
ಪಸರಿಸಿಹ ನಭವೊಂದನೊಲ್ಲೆ ನಾನು;
ನುಡಿಗೆ ಬಂದುದ ಕೇಳೆ ಬೆದರುತಿಹೆನು
ಇರುತಿರಲು ನುಡಿಗೆ ನಿಲುಕದಿಹ ಮೈಮೆ;
ಮನವಾಸೆಪಡುವುದನು ಕೇಳಲೊಲ್ಲೆ;
ಬಡಮನವು ಕಡವರವ ಕಂಡರಿಯದು.
ಇಹುದ ಕೊಡು ಎನಲು ಮನಬಾರದೆನಗೆ;
ಇರದಿಹುದು ಬೇಕೆಂಬುವಾಸೆಯುಂಟು.
ಹೇ ದೇವ, ಕೇಳೆ ನಾನೇನ ನಿನ್ನ;
ಕೇಳವ್ತಹುದನು ಕೊಡುವ ಮಹಿಮ ನೀನು.
ಎನ್ನ ಹೃದಯವೆ ನಿನ್ನ ಪೀಠವೆಂಬ
ಸನ್ಮತಿಯನೀಯಲೆನಗದುವೆ ಸಾಕು!
ಎನ್ನೆದೆಯೊಳಿರೆ ನೀನೆ, ಎನ್ನ ಜೀವದ ಜೀವ
ಇನ್ನೇನು ಬೇಕೆನಗೆ ದೇವ!