ನೋಡು ತಳಿತ ತಳಿರ ನಡುವೆ ಅರುಣ ಕಿರಣ ಸರಿಯ ಸುರಿಸಿ ಉದಯ ರವಿಯು ಮೆರೆವನು; ಕವಿಯ ಮನವ ಮೋಹಿಸುತ್ತ ಮೌನವಾಗಿ ಕರೆವನು! ಬಿಳಿಯ ಮುಗಿಲ ಬಳವಾಗತ- ನರುಣ ಪೆಂಪ ಪಡೆಯ ಬಯಸಿ ಸುತ್ತಮುತ್ತಲಿರುವುವು; ಮೂಡುದೆಸೆಯ ಹೆಣ್ಣುಮಗಳು ನಗೆಯ ತೋರುತಿರುವಳು! ಮನೆಗೆ ಬಂದ ಗೆಳೆಯರಂತೆ ರವಿಯ ಕಿರಣಗಳನು ಧರೆಯು ಉಪಚರಿಸುತಲಿರುವಳು; ವಿಹಗಕೋಟಿಯುಲಿಯ ಬೀರಿ ಮುಗುದತನವ ತರುವುವು! ಪಸರಿಸಿರುವ ಪಸಲೆಯಿಂದ ತಳಿತು ನಲಿವ ಬನಗಳಿಂದ ತೆರಳದಿರೆಲೆ ಉದಯವೆ! ಇಹಕೆ ಬರುವ ಪರದ ಸೊಬಗ ತೊರೆಯದಿರೆಲೆ ಹೃದಯವೆ! ೧೩-೧೨-೧೯೨೬