ಯಾರನು ಕೇಳಲಿ ನಾ, ಎಂತಿಹೆ ನೀನೆಂದು! ಯಾರನು ಕೇಳಿದರೊಂದನೆ ಪೇಳುವ- ರಾರೂ ಅರಿಯರು ನಿನ್ನ! ಕೋಮಲನೆಂದುವು ಕುಸುಮಗಳು ಶ್ಯಾಮಲನೆಂದುವು ಕಾಡುಗಳು. ಸುಂದರನೆಂದಳು ಧಾರಿಣಿಯು ಅಹುದೆಂದರು ಶಶಿ ಭಾಸ್ಕರರು. ಗಗನವ ಕೇಳಲು ನೀಲಾಂಗ ಮುಗಿಲನು ಕೇಳಲು ಕೃಷ್ಣಾಂಗ. ಸೃಷ್ಟಿಯ ಕೇಳಲು ಆನಂದ ಪ್ರಳಯವ ಕೇಳಲು ಭೈರವನು. ನಿಶೆ-ದಿನ ಕರಿ-ಬಿಳಿದೆಂಬುವರು. ರಾಗವು ವೇಗವು ಸರ್ವರಿಗೆ. ದೊಡ್ಡವನವನತಿ ಪರಮಾಣು ಏಕನನೇಕನು ಎಂಬುವರು. ನಿತ್ಯನನಂತನು ಬ್ರಹ್ಮಾಂಡ ಸತ್ಯನಚಿಂತ್ಯ ವಿರಾಟನು ತಾ- ನೆಂಬುವುವಾಗಮ ವೇದಾಂತ. ಹೃದಯವ ಕೇಳಲು ‘ಸುಮ್ಮನಿರು, ವರ್ಣನೆಗಸದಳನಾಗಿಹನು, ಭಕ್ತಿಯೆ ಶಕ್ತಿಯು’ ಎನುವುದು. ಯಾರನು ಕೇಳಲಿ ನಾ, ಎಂತಿಹೆ ನೀನೆಂದು! ಯಾರನು ಕೇಳಿದರೊಂದನೆ ಪೇಳುವ- ರಾರೂ ಅರಿಯರು ನಿನ್ನ!
ಕೊಳಲು : ಎಂತಿಹೆ?
By kanaja|2015-06-10T22:45:24+05:30June 10, 2015|ಕನ್ನಡ, ಕುವೆಂಪು, ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ, ರಾಷ್ಟ್ರಕವಿ ಕೃತಿ ಸಂಚಯ|0 Comments
Leave A Comment