ಎನಗಾಗಿ ಬೀಸುತಿಹುದಿನಿದು ತಂಗಾಳಿ
ಎನಗಾಗಿ ಮೊರೆಯುವುದು ಚದುರ ಭೃಂಗಾಳಿ
ಎನಗಾಗಿ ಶೋಭಿಪುದು ಹಸುರು ಶೃಂಗಾಳಿ
ಎನಗಾಗಿ ನಾ ರಚಿಪುದಿದು ಎನ್ನ ಕೇಳಿ!

ಎನಗಾಗಿ ಥಳಿಪರು ಸುಧಾಕರ ದಿನೇಶ
ಎನಗಾಗಿ ಪಸರಿಸಿದೆ ನೀಲಿಯಾಕಾಶ,
ಎನಗಾಗಿ ಇಹ ಜಗವು ಎನ್ನ ವಿಶ್ವಾಸ
ಎನಗಾಗಿ ನಾ ರಚಿಪುದೆನ್ನ ಸಂತೋಷ.

ಮಳೆಯಾಗಿ ಸುರಿಯುವುದು ಎನ್ನ ಆನಂದ
ಬೆಳೆಯಾಗಿ ಮೆರೆಯುವುದು ಎನ್ನ ಆನಂದ
ಹೊಳೆಯಾಗಿ ಹರಿಯುವುದು ಎನ್ನ ಆನಂದ
ಒಲುಮೆಯಿಂದಾಂ ರಚಿಪುದೆನ್ನ ಆನಂದ.

ರಮಣೀಯವಾದ ಹೂವೆನ್ನ ಆನಂದ
ಕಮನೀಯವಾದ ತಳಿರೆನ್ನ ಆನಂದ
ಕಮಲದಂತೆಸೆವುದೆನ್ನತುಳ ಆನಂದ
ಕಮಲಜಾಂಡವು ಎನ್ನ ಮಹಿಮೆಯಾನಂದ.

ಜಲವಾಗಿ ಹರಿಯುವುದು ಎನ್ನ ಆನಂದ
ಅಲರಾಗಿ ನಲಿಯುವುದು ಎನ್ನ ಆನಂದ
ಎಲರಾಗಿ ಸುಳಿಯುವುದು ಎನ್ನ ಆನಂದ
ಪ್ರಳಯ ಭೈರವನುರಿಯು ಎನ್ನ ಆನಂದ.

ವಿಶ್ವಮಂ ವ್ಯಾಪಿಸಿಹ ಆತ್ಮವಾನಂದ
ವಿಶ್ವಸೃಷ್ಟಿಯ ಮೂಲಕಾರಣಾನಂದ
ವಿಶ್ವದಳಿವುಳಿವು ತಳಹದಿಯು ಆನಂದ
ವಿಶ್ವಾತ್ಮನಾದೆನ್ನ ಆತ್ಮವಾನಂದ.

ಎನಗಾಗಿ ಸ್ಥಿತಿಲಯಗಳೆನಗಾಗಿ ಸೃಷ್ಟಿ
ಎನಗಾಗಿ ಸುಖದುಃಖಮಾ ಬ್ರಹ್ಮದೃಷ್ಟಿ
ಎನಗಾಗಿ ನಾಂ ರಚಿಪ ಬ್ರಹ್ಮವಾನಂದ
ಎನಗಾಗಿ, ಎನಗಾಗಿ ಎನ್ನ ಆನಂದ!