ಎನ್ನನತಿ ಕಿರಿದು ಮಾಡಲು, ದೇವ, ನೀನು
ಉನ್ನತಾಕಾಶವನು ಸೃಷ್ಟಿಸಿರುವೆ.
ಎನ್ನಹಂಕಾರವನು ಹಂಗಿಸಲು ನೀನು
ನಿನ್ನಹಂಕಾರವನು ತೋರುತಿರುವೆ.

ಅತಿಜಾಣನೆಂದು ನಾ ಗರ್ವಿಸದ ತೆರದಿ
ಮತಿಗೆ ಮೀರಿಹ ಕಾರ್ಯವೆಸಗುತಿರುವೆ;
ಹಿತಕಾರಿ ನಾನೆಂಬ ಹೆಮ್ಮೆಯನು ಮುರಿಯೆ
ಪತಿತಪಾವನನಾದೆ ಲೋಕವರಿಯೆ.

ಎನ್ನಹಂಕಾರವದು ತೊಲಗಿದಂತೆಲ್ಲ
ನಿನ್ನಹಂಕಾರವೂ ಜಾರುತಿಹುದು;
ಎನ್ನಹಂಕಾರ ಸಂಪೂರ್ಣಮಾಗಳಿಯೆ
ನಿನ್ನೊಳಾನಿಳಿವೆನೈ ನೀನೆಯಾಗಿ.

೭-೭-೧೯೨೬