ಯಾರನು ಕೇಳಲಿ ನಾ, ಎಲ್ಲಿಹೆ ನೀನೆಂದು! ಯಾರನು ಕೇಳಿದರರಿಯೆನು ಎಂಬರು; ಯಾರೂ ಅರಿಯರು ನಿನ್ನ! ಕೇಳಲು ನಾ ಭೂದೇವಿಯನು ನೀಲಾಕಾಶವ ತೋರಿದಳು. ಕೇಳಲು ದಿವ್ಯ ಸಮೀರಣನ ಕೇಳೆಂದನಲನ ತೋರಿದನು. ಕೇಳಲು ಚೈತ್ರದ ಹೂಗಳನು ‘ಕೇಳು ವಸಂತನ ನೀನರಿವೆ’ ಎನ್ನುತ ನಲಿನಲಿದಗಲಿದುವು; ಕೇಳೆ, ವಸಂತನು ತಾನರಿಯ. ತಾರಾಗಣಗಳ ನಾ ಕೇಳೆ ಚಂದ್ರನ ಕೇಳೆಂದಾಡಿದುವು. ರಾತ್ರಿಯ ಕೇಳಲು ತೋರಿದಳು ಹಗಲನು ಕೇಳೈ ನೀನೆಂದು. ಗಗನವ ಕೇಳಲು ಮಾತಿಲ್ಲ. ಶಿಖಿಯೋ ಮೂಕನು ನುಡಿಯಿಲ್ಲ. ಕೇಳೆ ಮಹಾಂಭೋಧಿಯ ನಾನು ಪೇಳವು ಮೊರೆವ ತರಂಗಾಳಿ. ಹೃದಯವ ಕೇಳಲು ‘ಸುಮ್ಮನಿರು, ಎಲ್ಲೆಲ್ಲಿಯು ಇಹ’ನೆನ್ನುವುದು. ಯಾರನು ಕೇಳಲಿ ನಾ; ಎಲ್ಲಿಹೆ ನೀನೆಂದು! ಯಾರನು ಕೇಳಿದರರಿಯೆನು ಎಂಬರು; ಯಾರೂ ಅರಿಯರು ನಿನ್ನ!