ಎಷ್ಟೆಂದು ನಗಲೋ, ದೇವ,
ನಿನ್ನೀ ಲೀಲೆಯ ನೋಡಿ!

‘ತಂದೇ’ ಎನ್ನುವನಿಂದು
‘ಮಗನೇ’ ಎಂಬನು ನಾಳೆ.
‘ತಾಯೇ’ ಎಂಬುವನಿಂದು
‘ಸತಿಯೇ’ ಎಂಬನು ನಾಳೆ.

ಹುಟ್ಟಿದನೆಂಬುವನಿಂದು
ಸತ್ತವನಾಗುವ ನಾಳೆ.
ಹಣಗಾರನೆಂಬುವನಿಂದು
ಋಣಗಾರನಾಗುವ ನಾಳೆ.

ನಾಟಕವಾಡುವೆನೆಂದು
ಆಟವನಾಡುವನಿಂದು;
ನಾಟಕವರ್ಧವೆ ಸಂದು
ಮೂಟೆಯ ಕಟ್ಟುವನೆಂದೂ!

ಆಸೆಗಳರಳುವ ಮುನ್ನ
ಯಮ ಮಾರಾಯನು ತನ್ನ
ಜವಗಂಟೆಯ ‘ಝೇ’ ಎಂದು
ಎಳೆವನು “ಬಾ! ಬಾ!” ಎಂದು!