ಏನಿದೇಕಿದು ಹರಿಯೆ?
ನಾನಿದರ ಗುರಿಯರಿಯೆನರಿಯೆ!

ಹುಟ್ಟು ಕಟ್ಟುಗಳೇಕೆ? ನೋವು ಸಾವುಗಳೇಕೆ?
ಇದರರ್ಥಗಳ ನಾವು ತಿಳಿಯಲೆಳಸುವುದೇಕೆ?
ನಿನ್ನಿಂದ ಬಂದವರು, ನಿನ್ನೊಳೇ ನಿಂದವರು
ನಿನ್ನ ಸಾಧಿಪುದೇಕೆ? ಮತ್ತೆ ಹೊಂದುವುದೇಕೆ?

ಬೀಳುವಾಟವಿದೇನು? ಮರಳಿ ಏಳುವುದೇನು?
ಕಡಲ ಹನಿಗಳ ಕದ್ದು ಸಂಪಾದಿಸುವುದೇನು?
ಮೊರೆಯಿಡುವ ಮುನ್ನೀರಿನಂಚಿನಲಿ ಮೈಮರೆತು
ಮರಳುಕಣಗಳ ಗುಣಿಸಿ ಕೂಡಿ ಗಣಿಸುವುದೇನು?

ನಿನ್ನ ಬೇಡುವುದೇಕೆ? ನಾವು ಮಾಡುವುದೇಕೆ?
ನಿನ್ನ ಕೃಪೆಗೆನ್ನ ಬಲ ನೆರವಪ್ಪುದೇಕೆ?
ಬಂದು ಕಲಿಯುವುದೇಕೆ? ಸಂದು ಮರೆಯುವುದೇಕೆ?
ಮನವ ಕೆರಳಿಪ ನಿನ್ನ ಇಂದ್ರಜಾಲವಿದೇಕೆ?

ಬಂದು ಕಾಣದ ಬನಕೆ, ತಿಂದು ತಿಳಿಯದ ಹಣ್ಣ,
ಗೊತ್ತುಗುರಿಯಿಲ್ಲದೀ ದಾರಿ ನಡೆಯುವುದೇಕೆ?
ನಿನ್ನಿರವಿನರಿವೇಕೆ? ಮರಳಿ ಸಂದೆಯವೇಕೆ?
ಮನಮುಳಿದು ನಾ ಹಳಿಯೆ ಚೋರನಂತಿಹೆಯೇಕೆ?

೨೨-೩-೧೯೨೯