ಅಂತ್ಯದ ಕಾಣದ ಮೇರೆಯನರಿಯದ
ಊರೊಂದಿರುವುದು ಸೋದರನೆ.
ಅಲ್ಲಿಹನೊಬ್ಬನು ಹೆಸರೇ ಇಲ್ಲದ
ಯಾರೂ ಅರಿಯದ ಮಾಯಾವಿ.
ಹೇಳಿದ ಕೇಳಿದವೊಂದೂ ಅಲ್ಲ
ಊರಿಗೆ ಹೋದವನೊಬ್ಬನೆ ಬಲ್ಲ.

ಉದ್ದವು ಅಗಲವು ಕಾಣುವುದಿಲ್ಲ,
ದೇಹಾಕಾರಗಳಲ್ಲಿಲ್ಲ.
ಅದು ಹೀಗಿರುವುದು ಎಂಬುದ ನಾನು
ನಿನಗೆಂತುಸುರಲಿ ಸೋದರನೆ?
ಬಾಯಿಂದಾಡಲು ಆಗುವುದಿಲ್ಲ.
ಬರೆಯಲು ಓಲೆಯೊಳಾಗುವುದಿಲ್ಲ.

ಸಿಹಿಯನು ತಿಂದಾ ಮೂಕನವೊಲು ಇದೆ,
ಗಹನವು ಅದರ ವಿಚಾರ!
ಮಾಯಾಲೋಕವ ಬಣ್ಣಿಪುದೆಂತೈ?
ಎಂಬನು ಭಕ್ತ ಕಬೀರ.

೨೬-೬-೧೯೨೭