ಕಳಚಿ ಬೀಳುವೆನಯ್ಯಾ ನಿನ್ನ ಸಿರಿಯಡಿಗೆ
ಕಳಚಿ ಬೀಳುವೆನಯ್ಯಾ.

ತಣ್ಣೆಲರು ಬೀಸಿಬರೆ ಕರ್ಮವನು ಕಳೆದಿರುವ
ಹಣ್ಣೆಲೆಯು ಹೆತ್ತ ತಾಯ್ಮರವನಗಲಿ,
ಮುಳಿಯದೆಯೆ, ಹಳಿಯದೆಯೆ, ಮೌನದಲಿ, ದೈನ್ಯದಲಿ,
ಕಳಚಿ ತೊಟ್ಟುಳಿದು ನೆಲಕುದುರುವಂತೆ!

ಜೀವನದ ತುದಿಯಲ್ಲಿ ಕೊಟ್ಟ ಕಾರ್ಯವನೆಸಗಿ
ದೇವನೊಲ್ಮೆಯ ನಂಬಿ ಶಾಂತಿಯಿಂದ,
ಹಂಬಲಿಸಿ ಸವಿಯೊಲ್ಮೆಗಳುವ ಹೆಣ್ಣಿನ ಕಣ್ಣ
ಕಂಬನಿಯು ಮಾತಿಲ್ಲದುರುಳುವಂತೆ

೧೨-೨-೧೯೨೯