ತಿರುಕನಂತೆ ತಿರುಪೆ ಬೇಡಿ
ತಿರುಗುತಿದ್ದೆನು.
ಉರಿವ ಮರುಳುಗಾಡಿನಲ್ಲಿ
ಗಂಗೆ ಹುಟ್ಟಿ ಹರಿಯುವಂತೆ,
ಕಣ್ಣನಿರಿವ ಕತ್ತಲಲ್ಲಿ
ಮಿಂಚು ಮೂಡಿ ನಿಲ್ಲುವಂತೆ,
ಬಿಸಿಲಿನಿಂದ ಬೆಂದ ಎದೆಗೆ
ತಂಪುಗಾಳಿ ಬೀಸುವಂತೆ
ಬಂದೆ, ರಮಣೆಯೆ!
ನಿನ್ನ ಸಂಗದಿಂದ ತಿರುಕ
ರಾಜನಾದನು!


ಮಲೆಯನಾಡ ಬನಗಳಲ್ಲಿ
ಮುಗುದ ಬಾಲನಲೆಯುತಿರಲು
ಅರಿಯದಂತೆ ಹೆಜ್ಜೆಯಿಟ್ಟು
ಬೆನ್ನ ಹಿಂದೆ ನೀನು ಬಂದೆ
ಕಬ್ಬದಂಗನೆ!
ಹೂವುಗಳಲಿ ಅಡಗಿ ನೀನು
ಕರೆದೆ ಎನ್ನನು.
ತುಂಗೆಯಲ್ಲಿ ಮೀಯುತಿರಲು
ಅಲೆಗಳಲ್ಲಿ ಹುದುಗಿ ನೀನು
ಮುತ್ತುಕೊಟ್ಟೆ ಕೆನ್ನೆಗಳಿಗೆ,
ಚೆನ್ನೆ ಕವಿತೆಯೆ!


ಸಿರಿಯತನದೊಳೆನ್ನ ಮೀರಿ
ದವರು ಇದ್ದರು;
ಬಿಜ್ಜೆಯಲ್ಲಿ ಎನ್ನ ಮೀರಿ
ಹಿರಿಯರಿದ್ದರು;
ಪದವಿಯಲ್ಲಿ ಎನ್ನ ದಾಂಟಿ
ದಿತರರಿದ್ದರು;
ಅವರನೆಲ್ಲ ಬಿಟ್ಟುಬಂದೆ
ಎನ್ನ ಎದೆಯ ಮೆಚ್ಚಿ ನಿಂದೆ;
ಗಾಳಿಯಂತೆ ಎನ್ನ ಕುರುಳಿ
ನೋಳಿಯಲ್ಲಿ ಸರಸವಾಡಿ,
ಎನ್ನ ಎದೆಯ ಬಿಟ್ಟ ಬನಕೆ
ನೀನೆ ಚೈತ್ರವಾದೆ, ರಮಣಿ,
ಕಬ್ಬದಂಗನೆ!


ನಿನ್ನ ಪುಣ್ಯಸಂಗ ಲಭಿಸೆ
ಧನ್ಯನಾದೆನು!
ನಿನ್ನ ಕೂಡೆ ಜನರಿಗೆಲ್ಲ
ಗಣ್ಯನಾದೆನು!
ಅಲ್ಲಗಳೆಯುತಿದ್ದ ಜನಕೆ
ಮಾನ್ಯನಾದೆನು;
ನಿನ್ನ ಜೊತೆಯೊಳೆನ್ನ ಕಂಡು
ದೂರದರಿಯದಿರುವ ಮಂದಿ
ಗೆಳೆಯರಾದರು.


ಪತಿಯನುಳಿದು ತವರುಮನೆಗೆ
ತರಳೆ ಹೋಗುವಂತೆ, ನೀನು
ಕೆಲವು ಸಾರಿ ಎನ್ನ ಬಿಟ್ಟೆ
ಕಬ್ಬದಂಗನೆ!
ಹೋದರೇನು? ಮತ್ತೆ ಬಂದೆ!
ಎರೆಯ ಬಡವನೆಂದು ತಿಳಿದು
ತವರುಮನೆಯ ಸಿರಿಯ ತಂದೆ;
ಹಿಂದೆ ಇರದ ಒಲವ ತಂದೆ,
ದೇವಿ, ರಮಣಿ, ಕಬ್ಬವೆಣ್ಣೆ
ಮಂಗಳಾಂಗಿಯೇ!


ನೀನೆ ಎನ್ನ ಬಾಳ ಮುಕ್ತಿ,
ನೀನೆ ಎನ್ನ ಆತ್ಮಶಕ್ತಿ,
ನೀನೆ ಸೊಗವು, ನೀನೆ ಹರುಷ
ಕಬ್ಬದಂಗನೆ.
ಸಗ್ಗಬೇಡ, ಮುಕ್ತಿ ಬೇಡ,
ಸಿರಿಯನೊಲ್ಲೆ, ನೆಲವನೊಲ್ಲೆ
ನೀನೆ ಎನಗೆ ಸಾಕು, ಸಾಕು
ಮುದ್ದು ಮೋಹಿನಿ!


ನಿನ್ನ ತೋಳ ಬಂಧ ಮುಕ್ತಿ,
ನಿನ್ನ ಮೋಹವೆನಗೆ ಶಕ್ತಿ,
ನಿನ್ನ ಕಣ್ಣ ಬೆಳಕೆ ಸಿರಿಯು,
ವಾಣಿ ಸಗ್ಗವು!
ನಿನ್ನ ತೊಡೆಯೆ ಸಿಂಹಪೀಠ,
ನಿನ್ನ ಮುಗುಳುನಗೆ ಕಿರೀಟ,
ಬೇರೆಯರಸುತನವದೇಕೆ
ರಾಣಿ ನೀನಿರೆ?


ತಿರುಕನಿವನ ಬಿಡಲು ಬೇಡ,
ದೇವಿ ಕವಿತೆಯೆ!
ತವರುಮನೆಗೆ ನೀನು ಹೋಗೆ,
ಬಿಟ್ಟೆ ಏನೊ ಎಂದು ಎದೆಯು
ತಲ್ಲಣಿಸುವುದು;
ದಿನವು ಹೊಸಲ ಮೇಲೆ ಕುಳಿತು
ನಟ್ಟನೋಟದಿಂದ, ನೀನು
ಬರುವ ಹಾದಿಯನ್ನೆ ನೋಡಿ
ಹಂಬಲಿಸುವೆನು!
ದೂರದಲ್ಲಿ ನಿನ್ನ ಕಂಡು
ಹಾರಿ ಹಾರಿ ಓಡಿಬಂದು
ಸೊಗದ ಕಣ್ಣನೀರ ಕರೆದು
ಮುತ್ತು ಕೊಟ್ಟು ಬಿಗಿದು ಅಪ್ಪಿ
“ಎದೆಯ ಮನೆಗೆ ಬಿಜಯಮಾಡು”
ಎಂದು ಹಿಗ್ಗಿ ಕರೆದು ತರುವೆ,
ನನ್ನ ಕವಿತೆಯೆ?


ಎದೆಯ ಮನೆಗೆ ನೀನು ಬರಲು
ಮುದವು ಉಕ್ಕಿ ಉಕ್ಕಿ ಹರಿದು
ಸುಗ್ಗಿ ಮಳೆಯ ಹನಿಗಳಂತೆ
ಗಾನ ಸುರಿವುದು!
ಪದಗಳೆಂಬ ಮಣಿಗಳೆಲ್ಲ
ಭಾವವೆಂಬ ದಾರದಲ್ಲಿ
ತಮಗೆ ತಾವೆ ಕೋದುಕೊಂಡು
ಕಬ್ಬಮಾಲೆಯಾಗಿ ಮೆರೆಯೆ,
ತೊಡಿಸಿಯದನು, ಮೊಗವ ನೋಡಿ
ಮುತ್ತನೊಂದ ಸೆಳೆದುಕೊಂಡು,
ನಿನ್ನ ಕೊರಳ ತಬ್ಬಿ ತಬ್ಬಿ
ಮೈಯ ಮರೆವೆನು!

೧೦
ತಿರುಕ ನಾನು, ಬಿಡಲು ಬೇಡ;
ಬಿಟ್ಟರಳಿವೆನು.
ಹುಟ್ಟು ಕುರುಡನಾದ ನರಗೆ
ದಿಟ್ಟಿ ಮೈಮೆ ಅರಿಯದಿಹುದು;
ಕೊಟ್ಟ ಕಣ್ಣ ಕಳೆಯುವವನು
ಕೆಟ್ಟುಹೋದ ಬೆಳಕಿಗತ್ತು
ಸುಟ್ಟು ಸಿಡಿವನು.
ತರಳೆ, ಒಲಿಯದಿದ್ದರೆನ್ನ,

ಸರಸವೆಂಬುದರಿಯದಂತೆ
ತಿರಿಯುತಿದ್ದೆನು!
ಒಲುಮೆಯಿಂಪನೆನಗೆ ತೋರಿ
ಬಿಟ್ಟುಹೋದರೀಗ ನೀನು
ಹೂವಿನಂತ ಕವಿಯ ಎದೆಗೆ
ಸಿಡಿಲು ಬಡಿಯದೆ?

ರಮಣಿ, ನಿನ್ನ ಪ್ರೇಮವೊಂದೆ
ತಿರೆಗೆ ಎನ್ನ ಬಂಧಿಸಿಹುದು;
ಸಿರಿಯ ಆಸೆ, ಪದವಿಯಾಸೆ,

ಹೆಸರಿನಾಸೆಯೊಂದುಮಿಲ್ಲ;
ನಿನ್ನ ಸಂಗದಾಸೆ ಎನ್ನ
ಬದುಕಿಸಿರುವುದು!

೧೧
ನಿನ್ನ ಸಂಗ ನಿಚ್ಚವಾಗ
ಲೆನಗೆ, ಕವಿತೆಯೆ;
ಯೋಗಿಯಾಗಲಾಸೆ ಇಲ್ಲ,
ಚಾಗಿಯಾಗಲಾಸೆ ಇಲ್ಲ,
ಸಿದ್ಧನಾಗಲಾಸೆ ಇಲ್ಲ,
ಬುದ್ಧನಾಗಲಾಸೆ ಇಲ್ಲ;
ನಿನ್ನ ಸಂಗದೊಂದು ಹುಚ್ಚೆ
ಆಸೆ ತಿರುಕಗೆ!
ಬದುಕಿನಲ್ಲಿ, ಸಾವಿನಲ್ಲಿ,
ಜನುಮ ಜನುಮಗಳಲಿ ನಿನ್ನ

ಸಂಗ ತಪ್ಪದಿರಲಿ ಎನಗೆ,
ಕಬ್ಬದಂಗನೆ!

೧೨
ಕಾಲವೆಂಬುದಿರುವ ತನಕ
ಸೃಷ್ಟಿಯೆಂಬುದಿರುವ ತನಕ
ದೇವನೊಬ್ಬನಿರುವ ತನಕ
ಸರಸವಾಡುವ!
ಕವಿಯ ಕೆಳದಿ, ಒಂದು ವೇಳೆ
ಲೋಕವೆಲ್ಲ ಸೊನ್ನೆಯಾಗೆ,
ನಮ್ಮ ಪ್ರೇಮಭಾವದಿಂದ
ಮಧುರತರದ ಜಗವ ಮಾಡಿ
ನೋಡಿ ನಲಿಯುವ!
ಅಲ್ಲಿ ನಾವು ಒಂದುಗೂಡಿ
ಮಾತನಾಡಿ, ಹಾಡ ಹಾಡಿ
ಮರಳಿಯೊಲಿಯುವ!
ತಾರೆಗಳನು ಅಣಕಿಸುತ್ತ
ರವಿಶಶಿಗಳನೇಳಿಸುತ್ತ
ಮಾಯೆಯನ್ನೆ ಚಾಳಿಸುತ್ತ
ಬ್ರಹ್ಮವೆಂಬ ದಿವ್ಯವನದೊ
ಳಾಡಿ ಕುಣಿಯುವ!
ದೇವಿ, ಬಾರೆ, ಕಬ್ಬವೆಣ್ಣೆ,
ಹಾಡಿ ತಣಿಯುವ!

೨೬-೧೧-೧೯೨೭