ನಿನ್ನ ನೋಡಲೆನ್ನ ಎದೆಯು
ಕಾತರಿಸುವುದು.
ಎನ್ನ ಎದೆಯೊಳಾಗ ಆಗ
ನಿನ್ನ ಮೊರೆವ ದನಿಯ ತಂದು,
ಮಹಾ ಕಡಲೆ, ನಿನ್ನ ನೆಳಲು
ಬಂದು ಸುಳಿವುದು.
ಎನ್ನ ಜೀವ ಉಬ್ಬಿಯುಬ್ಬಿ
ತಳಮಳಿಸುವುದು!

ನಿನ್ನ ತೆರದಿ ಒಡಲೊಳೊಂದು
ಕಡಲು ನಲಿವುದು.
ನಿನ್ನ ತೆರೆಗಳಾಟದಂತೆ
ಎನ್ನ ಭಾವದಲೆಗಳೆದ್ದು
ಹೃದಯ ಮನಗಳಲ್ಲಿ ಕುಣಿದು
ಹರುಷವೀವುವು!
ಎದೆಯು ನಿನ್ನ ಮೇರೆ ಮೀರಿ
ಹಿಗ್ಗಿ ನಲಿವುದು!

ಬಹಳ ವೇಳೆ ಮನದಿ ನಿನ್ನ
ಚಿತ್ರಿಸಿರುವೆನು:
ನಿನ್ನ ದೂರವಿರದ ದೂರ,
ಎಲ್ಲೆ ಇಲ್ಲದಿರುವ ತೀರ,
ತೆರೆಯು ನೊರೆಯು ಮೊರೆಯನೆಲ್ಲ
ಕಲ್ಪಿಸಿರುವೆನು!
ಆದರೇನು? ಎನ್ನ ಎದೆಯು
ತಣಿಯಲೊಲ್ಲದು!

ನಿನ್ನನಪ್ಪಿ ನೋಡುವಾಸೆ
ಮನವ ಕೊರೆವುದು.
ಒಲಿದ ರಮಣಿ ದೂರವಿರಲು
ಅವಳ ಚಿತ್ರಿಪಟವ ಕಂಡು
ಅವಳ ದನಿಯ ನೆನಸಿಕೊಂಡು
ಎದೆಯು ತಣಿವುದೆ?
ಅವಳ ನೆನಪು ತರುವ ಕುರುಹು
ಮನವ ಕೆಣಕದೆ?

ದೇವನೊಲಿದ ಎದೆಗೆ ಸಾಕೆ
ಬರಿಯ ಬಣ್ಣನೆ?
ವೇದವೇನು ಹೇಳಲೇನು?
ಉಪನಿಷತ್ತು ಹಾಡಲೇನು?
ಯೋಗಿಸಿದ್ಧರೊರೆಯಲೇನು
ಆಸೆ ಮಣಿವುದೆ?
ಅವನ ಕಂಡು ಒಲವನುಂಡ
ಹೊರತು ತಣಿವುದೆ?

ಕವಿಗಳೆಲ್ಲ ಬಣ್ಣಿಸಿಹುದ
ನೋಡುತಿರುವೆನು.
ಕಪ್ಪೆ, ಮೀನು, ಮೊಸಳೆ, ರತ್ನ,
ಹರಿಗೆ ಶಿವಗೆ ಹೋಲಿಪಂತೆ
ಶ್ಲೇಷೆಯಿಂದ ಬರೆವ ಯತ್ನ;
ಬೇರೆ ಕಾಣೆನು.
ನಿನ್ನ ಹೊಟ್ಟೆಯೊಂದನಲ್ಲ
ದೆದೆಯ ಕಾಣರು!

ಕಂಡ ಕೆಲರು ನುಡಿದರೆನಗೆ
ನಿನ್ನ ಸಿರಿಯನು.
ಅವರ ಕಣ್ಣುಗಳಲಿ ನಿನ್ನ
ಅಲೆಯ ಮಿಂಚ ನೋಡಲಿಲ್ಲ;
ಅವರ ಕೊರಳಿನಲ್ಲಿ ನಿನ್ನ
ಘೋಷವಿಲ್ಲವು;
ಅವರ ಎದೆಯ ಭಾವಗಳಲಿ
ನಿನ್ನ ಕಾಣೆನು!

ನಿನ್ನ ನೋಡದಿಂತು ಬಯಸಿ
ಹಾಡುತಿರುವೆನು.
ದೂರದೇಶದಲ್ಲಿ ಇರುವ
ಹಿರಿಯ ಕವಿಯ ಕತೆಯ ಕೇಳಿ,
ಅವನ ಕವಿತೆಯೋದಿ, ಅವನ
ನೋಡೆ ಬಯಸುವ
ಕಿರಿಯ ಕವಿಯ ತೆರದಿ ನಿನ್ನ
ಕೂಡಲೆಳಸುವೆ!

ಕಡಲೆ, ನಿನ್ನ ಮೈಮೆ ಎನ್ನ
ಬಾಳಿಗಾಗಲಿ!
ನಿನ್ನ ಬಿತ್ತರೆನಗೆ ಬರಲಿ!
ನಿನ್ನ ಚಿತ್ತವೆನ್ನೊಳಿರಲಿ!
ಕಾಣದಿರದ ಕಡಲಿಗಿಂತು
ಹಾಡುತಿರುವೆನು!
ಕಂಡ ಕಡಲಿಗೆಂತುಟುಲಿವೆ
ಎಂಬುದರಿಯೆನು!

೨೫-೧೧-೧೯೨೭