ಪಾತಾಳಕಿಳಿದಿಹೆನು,
ಕೈಹಿಡಿದು ಎತ್ತೆನ್ನ
ಕರುಣದಿಂದೆಲೆ ತಾಯೆ, ತಾಯೆ!
ನಿನ್ನ ಮೊಗದಾ ಕ್ಷಣಿಕ
ದರ್ಶನವ ನೋಡುತಿಹೆ-
ನಾದರೂ ನಾನಲ್ಲಿಗೇರಲಾರೆ!

ನಿನ್ನ ನಯನದ ಮಿಂಚು
ನಿನ್ನ ಮುಕುಟದ ಕಾಂತಿ,
‘ಬಾ’ಯೆಂದು ಕರೆಯುತಿಹವೆನ್ನ!
ಎನ್ನ ಸಾಧನೆಯೆಲ್ಲ
ವಿಫಲಮಾದುದು ದೇವಿ;
ಬಿದ್ದೇಳುವುದರಲ್ಲೆ ಕಾಲ ಕಳೆದೆ!

ನಿನ್ನ ಕರಗಳನಿಳಿಸ
ಲೆನ್ನ ಯತ್ನಗಳೆಲ್ಲ;
ನಿನ್ನೆದೆಗೆ ನಾನಡರಲಲ್ಲ!
ನೀನೆ ಕೈನೀಡೆನ್ನ
ಮೇಲೆತ್ತಿ ಚುಂಬಿಸೌ;
ನಿನ್ನುರದಿ ನಲಿವೆನಾನಂದದಿಂದ!

೨೬-೯-೧೯೨೬